ಅಧ್ಯಾಯ ಹನ್ನೆರಡು
ದೇವರನ್ನು ಸಂತೋಷಪಡಿಸುವ ರೀತಿಯಲ್ಲಿ ಜೀವಿಸುವುದು
-
ನೀವು ಹೇಗೆ ದೇವರ ಸ್ನೇಹಿತರಾಗಬಲ್ಲಿರಿ?
-
ಸೈತಾನನು ಎಬ್ಬಿಸಿದ ವಿವಾದಾಂಶದಲ್ಲಿ ನೀವು ಯಾವ ರೀತಿಯಲ್ಲಿ ಒಳಗೂಡಿದ್ದೀರಿ?
-
ಯಾವ ನಡತೆ ಯೆಹೋವನನ್ನು ಅಸಂತೋಷಪಡಿಸುತ್ತದೆ?
-
ದೇವರನ್ನು ಸಂತೋಷಪಡಿಸುವ ರೀತಿಯಲ್ಲಿ ನೀವು ಹೇಗೆ ಜೀವಿಸಬಲ್ಲಿರಿ?
1, 2. ಯೆಹೋವನು ತನ್ನ ಆಪ್ತ ಸ್ನೇಹಿತರನ್ನಾಗಿ ಪರಿಗಣಿಸಿದ ಕೆಲವು ಮಾನವರ ಉದಾಹರಣೆಗಳನ್ನು ಕೊಡಿ.
ನೀವು ಯಾವ ರೀತಿಯ ವ್ಯಕ್ತಿಯನ್ನು ಸ್ನೇಹಿತನಾಗಿ ಆರಿಸಿಕೊಳ್ಳುವಿರಿ? ನಿಮಗಿರುವಂಥದ್ದೇ ರೀತಿಯ ಅಭಿಪ್ರಾಯಗಳು, ಅಭಿರುಚಿಗಳು ಮತ್ತು ಮೌಲ್ಯಗಳಿರುವ ವ್ಯಕ್ತಿಯ ಒಡನಾಟವನ್ನು ನೀವು ಬಯಸುವುದು ಹೆಚ್ಚು ಸಂಭವನೀಯ. ಮತ್ತು, ಪ್ರಾಮಾಣಿಕತೆ ಹಾಗೂ ದಯೆಯಂತಹ ಉತ್ಕೃಷ್ಟ ಗುಣಗಳಿರುವ ವ್ಯಕ್ತಿಯ ಕಡೆಗೆ ನೀವು ಆಕರ್ಷಿಸಲ್ಪಡುವಿರಿ.
2 ದೇವರು ಇತಿಹಾಸದಾದ್ಯಂತ ಕೆಲವು ಮಂದಿ ಮಾನವರನ್ನು ತನ್ನ ಆಪ್ತ ಸ್ನೇಹಿತರಾಗಿ ಆರಿಸಿಕೊಂಡಿದ್ದಾನೆ. ಉದಾಹರಣೆಗೆ, ಯೆಹೋವನು ಅಬ್ರಹಾಮನನ್ನು ತನ್ನ ಸ್ನೇಹಿತನೆಂದು ಕರೆದನು. (ಯೆಶಾಯ 41:8; ಯಾಕೋಬ 2:23) ಯೆಹೋವನು ದಾವೀದನನ್ನು “ನನಗೆ ಒಪ್ಪುವ ಮನುಷ್ಯನು” ಎಂದು ಸೂಚಿಸಿ ಮಾತಾಡಿದನು, ಏಕೆಂದರೆ ಯೆಹೋವನು ಯಾವ ರೀತಿಯ ವ್ಯಕ್ತಿಗಳನ್ನು ಪ್ರೀತಿಸುತ್ತಾನೊ ಅಂಥ ವ್ಯಕ್ತಿ ಅವನಾಗಿದ್ದನು. (ಅ. ಕೃತ್ಯಗಳು 13:22) ಮತ್ತು ಯೆಹೋವನು ಪ್ರವಾದಿಯಾದ ದಾನಿಯೇಲನನ್ನು “ಅತಿಪ್ರಿಯ”ನಾಗಿ ಪರಿಗಣಿಸಿದನು.—ದಾನಿಯೇಲ 9:23.
3. ಕೆಲವು ಮಂದಿ ಮಾನವರನ್ನು ಯೆಹೋವನು ತನ್ನ ಸ್ನೇಹಿತರನ್ನಾಗಿ ಆರಿಸಿಕೊಳ್ಳುವುದೇಕೆ?
3 ಯೆಹೋವನು ಅಬ್ರಹಾಮ, ದಾವೀದ ಮತ್ತು ದಾನಿಯೇಲರನ್ನು ತನ್ನ ಸ್ನೇಹಿತರೆಂದು ಪರಿಗಣಿಸಿದ್ದೇಕೆ? ‘ನೀನು ನನ್ನ ಮಾತನ್ನು ಕೇಳಿದ್ದರಿಂದಲೇ’ ಎಂದು ಆತನು ಅಬ್ರಹಾಮನಿಗೆ ಹೇಳಿದನು. (ಆದಿಕಾಂಡ 22:18) ಹೀಗೆ ತಾನು ಹೇಳಿದ್ದನ್ನು ಯಾರು ದೀನಭಾವದಿಂದ ಮಾಡುತ್ತಾರೊ ಅಂಥವರ ಸಮೀಪಕ್ಕೆ ದೇವರು ಬರುತ್ತಾನೆ. ಆತನು ಇಸ್ರಾಯೇಲ್ಯರಿಗೆ ಹೇಳಿದ್ದು: “ನನ್ನ ಧ್ವನಿಗೆ ಕಿವಿಗೊಡಿರಿ, ನಾನು ನಿಮ್ಮ ದೇವರಾಗಿರುವೆನು, ನೀವು ನನ್ನ ಪ್ರಜೆಯಾಗಿರುವಿರಿ.” (ಯೆರೆಮೀಯ 7:23) ನೀವು ಯೆಹೋವನಿಗೆ ವಿಧೇಯರಾಗುವಲ್ಲಿ ನೀವೂ ಆತನ ಸ್ನೇಹಿತರಾಗಬಲ್ಲಿರಿ!
ಯೆಹೋವನು ತನ್ನ ಸ್ನೇಹಿತರನ್ನು ಬಲಪಡಿಸುತ್ತಾನೆ
4, 5. ಯೆಹೋವನು ತನ್ನ ಜನರ ಪರವಾಗಿ ತನ್ನ ಬಲವನ್ನು ಹೇಗೆ ತೋರ್ಪಡಿಸುತ್ತಾನೆ?
4 ದೇವರೊಂದಿಗಿನ ಸ್ನೇಹದಿಂದ ಸಿಗುವ ಪ್ರಯೋಜನಗಳ ಕುರಿತು ಯೋಚಿಸಿರಿ. ಯೆಹೋವನು “ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು” ಇಲ್ಲವೆ ಬಲವನ್ನು ತೋರ್ಪಡಿಸಲು ಅವಕಾಶಗಳಿಗಾಗಿ ಹುಡುಕುತ್ತಾ ಇರುತ್ತಾನೆಂದು ಬೈಬಲು ಹೇಳುತ್ತದೆ. (2 ಪೂರ್ವಕಾಲವೃತ್ತಾಂತ 16:9) ಯೆಹೋವನು ನಿಮ್ಮ ಕಡೆಗೆ ಹೇಗೆ ತನ್ನ ಬಲವನ್ನು ತೋರ್ಪಡಿಸಬಲ್ಲನು? ಒಂದು ವಿಧವು ಕೀರ್ತನೆ 32:8 ರಲ್ಲಿ ತೋರಿಸಲ್ಪಟ್ಟಿದೆ. ಅಲ್ಲಿ ನಾವು ಹೀಗೆ ಓದುತ್ತೇವೆ: ‘[ಯೆಹೋವನು] ನಿನ್ನನ್ನು ಉಪದೇಶಿಸಿ ನಡೆಯಬೇಕಾದ ಮಾರ್ಗವನ್ನು ತಿಳಿಸುವನು; ನಿನ್ನನ್ನು ಕಟಾಕ್ಷಿಸಿ ಆಲೋಚನೆಹೇಳುವನು.’
5 ಯೆಹೋವನ ಪರಾಮರಿಕೆಯ ಕುರಿತು ಎಂತಹ ಮನಮುಟ್ಟುವ ಹೇಳಿಕೆಯಿದು! ಆತನು ನಿಮಗೆ ಅಗತ್ಯವಿರುವ ನಿರ್ದೇಶನವನ್ನು ಕೊಟ್ಟು, ನೀವು ಅದನ್ನು ಅನ್ವಯಿಸಿಕೊಳ್ಳುವಾಗ ನಿಮ್ಮನ್ನು ಕಾಪಾಡುತ್ತಾನೆ. ದೇವರು ನಿಮ್ಮ ಕಷ್ಟಪರೀಕ್ಷೆಗಳಲ್ಲಿ ನಿಮಗೆ ಸಹಾಯ ನೀಡಲು ಬಯಸುತ್ತಾನೆ. (ಕೀರ್ತನೆ 55:22) ಆದುದರಿಂದ, ನೀವು ಯೆಹೋವನನ್ನು ಪೂರ್ಣಹೃದಯದಿಂದ ಸೇವಿಸುವಲ್ಲಿ ಕೀರ್ತನೆಗಾರನಷ್ಟೇ ಭರವಸೆಯಿಂದ ಇರಬಲ್ಲಿರಿ. ಅವನಂದದ್ದು: “ನಾನು ಯೆಹೋವನನ್ನು ಯಾವಾಗಲೂ ನನ್ನೆದುರಿಗೇ ಇಟ್ಟುಕೊಂಡಿದ್ದೇನೆ; ಆತನು ನನ್ನ ಬಲಗಡೆಯಲ್ಲಿ ಇರುವದರಿಂದ ನಾನು ಎಂದಿಗೂ ಕದಲುವದಿಲ್ಲ.” (ಕೀರ್ತನೆ 16:8; 63:8) ಹೌದು, ಯೆಹೋವನನ್ನು ಸಂತೋಷಪಡಿಸುವಂಥ ರೀತಿಯಲ್ಲಿ ನೀವು ಜೀವಿಸುವಂತೆ ಆತನು ನಿಮಗೆ ಸಹಾಯಮಾಡಬಲ್ಲನು. ಆದರೆ ನಿಮಗೆ ಗೊತ್ತಿರುವಂತೆ, ನೀವಿದನ್ನು ಮಾಡುವುದನ್ನು ತಡೆಯಲು ಇಷ್ಟಪಡುವ ದೇವರ ವೈರಿಯೊಬ್ಬನು ಇದ್ದಾನೆ.
ಸೈತಾನನ ಸವಾಲು
6. ಮಾನವರ ಬಗ್ಗೆ ಸೈತಾನನ ಆರೋಪವೇನಾಗಿತ್ತು?
6 ಪಿಶಾಚನಾದ ಸೈತಾನನು ದೇವರ ಪರಮಾಧಿಕಾರಕ್ಕೆ ಹೇಗೆ ಸವಾಲೊಡ್ಡಿದನೆಂಬುದನ್ನು ಈ ಪುಸ್ತಕದ ಹನ್ನೊಂದನೆಯ ಅಧ್ಯಾಯವು ವಿವರಿಸಿತು. ಸೈತಾನನು, ಯೆಹೋವನು ಸುಳ್ಳಾಡುತ್ತಿದ್ದಾನೆಂದು ಅಪವಾದ ಹೊರಿಸಿ, ಆದಾಮಹವ್ವರು ಯಾವುದು ಸರಿ ಮತ್ತು ಯಾವುದು ತಪ್ಪೆಂಬುದನ್ನು ತಾವಾಗಿಯೇ ನಿರ್ಣಯಿಸುವಂತೆ ಅನುಮತಿಸದಿರುವ ಮೂಲಕ ಆತನು ಅನ್ಯಾಯವನ್ನು ಮಾಡುತ್ತಿದ್ದಾನೆಂದು ಪರೋಕ್ಷವಾಗಿ ಸೂಚಿಸಿದನು. ಆದಾಮಹವ್ವರು ಪಾಪಮಾಡಿದ ಬಳಿಕ ಮತ್ತು ಭೂಮಿಯು ಅವರ ಸಂತಾನದಿಂದ ತುಂಬಲಾರಂಭಿಸಿದಾಗ, ಸೈತಾನನು ಸಕಲ ಮಾನವರ ಹೇತುವಿನ ಬಗ್ಗೆ ಸವಾಲೆಬ್ಬಿಸಿದನು. ಸೈತಾನನು ಆರೋಪಿಸಿದ್ದೇನೆಂದರೆ, “ಜನರು ದೇವರನ್ನು ಸೇವಿಸುವುದು ಆತನ ಮೇಲಿರುವ ಪ್ರೀತಿಯಿಂದಲ್ಲ. ನನಗೆ ಒಂದು ಅವಕಾಶವನ್ನು ಕೊಡುವಲ್ಲಿ ನಾನು ಯಾರನ್ನೇ ಆಗಲಿ ದೇವರಿಗೆ ತಿರುಗಿ ಬೀಳುವಂತೆ ಮಾಡಬಲ್ಲೆ.” ಇದು ಸೈತಾನನ ಅಭಿಪ್ರಾಯವಾಗಿತ್ತೆಂದು ಯೋಬನೆಂಬ ವ್ಯಕ್ತಿಯ ವೃತ್ತಾಂತವು ತಿಳಿಯಪಡಿಸುತ್ತದೆ. ಈ ಯೋಬನು ಯಾರು, ಮತ್ತು ಸೈತಾನನು ಎಬ್ಬಿಸಿದ ಸವಾಲಿನಲ್ಲಿ ಅವನು ಹೇಗೆ ಒಳಗೂಡಿದ್ದನು?
7, 8. (ಎ) ಆ ಕಾಲದ ಜನರ ಮಧ್ಯದಲ್ಲಿ ಯೋಬನನ್ನು ಯಾವುದು ಎದ್ದುಕಾಣುವಂತೆ ಮಾಡಿತು? (ಬಿ) ಯೋಬನ ಹೇತುವನ್ನು ಸೈತಾನನು ಸಂಶಯಕ್ಕೊಳಪಡಿಸಿದ್ದು ಹೇಗೆ?
7 ಯೋಬನು ಸುಮಾರು 3,600 ವರುಷಗಳ ಹಿಂದೆ ಜೀವಿಸಿದ್ದನು. ಅವನೊಬ್ಬ ಒಳ್ಳೆಯ ಮನುಷ್ಯನಾಗಿದ್ದನು, ಏಕೆಂದರೆ ಯೆಹೋವನು ಅವನ ಕುರಿತು, “ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ ಯಥಾರ್ಥಚಿತ್ತನೂ ಆಗಿದ್ದಾನೆ” ಎಂದು ಹೇಳಿದನು. (ಯೋಬ 1:8) ಯೋಬನು ದೇವರನ್ನು ಸಂತೋಷಪಡಿಸಿದನು.
8 ದೇವರ ಸೇವೆಮಾಡುವುದರಲ್ಲಿ ಯೋಬನಿಗಿದ್ದ ಹೇತುವನ್ನು ಸೈತಾನನು ಸಂಶಯಕ್ಕೊಳಪಡಿಸಿದನು. ಪಿಶಾಚನು ಯೆಹೋವನಿಗೆ ಹೇಳಿದ್ದು: “ನೀನು ಅವನಿಗೂ [ಯೋಬನಿಗೂ] ಅವನ ಮನೆಗೂ ಅವನ ಎಲ್ಲಾ ಸ್ವಾಸ್ತ್ಯಕ್ಕೂ ಸುತ್ತುಮುತ್ತಲು ಬೇಲಿಯನ್ನು ಹಾಕಿದ್ದೀಯಲ್ಲಾ. ಅವನು ಕೈಹಾಕಿದ ಕೆಲಸವನ್ನು ನೀನು ಸಫಲಪಡಿಸುತ್ತಿರುವದರಿಂದ ಅವನ ಸಂಪತ್ತು ದೇಶದಲ್ಲಿ ವೃದ್ಧಿಯಾಗುತ್ತಾ ಬಂದಿದೆ. ಆದರೆ ನಿನ್ನ ಕೈನೀಡಿ ಅವನ ಸೊತ್ತನ್ನೆಲ್ಲಾ ಅಳಿಸಿಬಿಡು. ಆಗ ಅವನು ನಿನ್ನ ಎದುರಿಗೆ ನಿನ್ನನ್ನು ದೂಷಿಸಲೇ ದೂಷಿಸುವನು.”—ಯೋಬ 1:10, 11.
9. ಯೆಹೋವನು ಸೈತಾನನ ಪಂಥಾಹ್ವಾನಕ್ಕೆ ಹೇಗೆ ಪ್ರತಿಕ್ರಿಯಿಸಿದನು, ಮತ್ತು ಏಕೆ?
9 ಹೀಗೆ ಸೈತಾನನು, ಯೋಬನು ದೇವರಿಂದ ಪಡೆಯುತ್ತಿರುವ ಲಾಭಕ್ಕಾಗಿ ಮಾತ್ರ ಆತನನ್ನು ಸೇವಿಸುತ್ತಿದ್ದಾನೆಂದು ವಾದಿಸಿದನು. ಮತ್ತು ಯೋಬನನ್ನು ಪರೀಕ್ಷೆಗೊಳಪಡಿಸುವಲ್ಲಿ ಅವನು ದೇವರಿಗೆ ತಿರುಗಿ ಬೀಳುವನೆಂದೂ ಪಿಶಾಚನು ಆರೋಪ ಹೊರಿಸಿದನು. ಸೈತಾನನ ಈ ಸವಾಲಿಗೆ ಯೆಹೋವನು ಹೇಗೆ ಪ್ರತಿಕ್ರಿಯಿಸಿದನು? ಈ ವಿವಾದಾಂಶದಲ್ಲಿ ಯೋಬನ ಹೇತು ಒಳಗೂಡಿದ್ದರಿಂದ, ಸೈತಾನನು ಯೋಬನನ್ನು ಪರೀಕ್ಷಿಸುವಂತೆ ಯೆಹೋವನು ಅನುಮತಿಸಿದನು. ಈ ರೀತಿಯಲ್ಲಿ, ದೇವರ ಕಡೆಗೆ ಯೋಬನಿಗೆ ಪ್ರೀತಿ ಇದೆಯೊ ಇಲ್ಲವೊ ಎಂಬುದು ಸ್ಪಷ್ಟವಾಗಿ ತೋರಿಬರಲಿತ್ತು.
ಯೋಬನನ್ನು ಪರೀಕ್ಷಿಸಲಾದದ್ದು
10. ಯೋಬನ ಮೇಲೆ ಯಾವ ಪರೀಕ್ಷೆಗಳು ಬಂದವು, ಮತ್ತು ಅವನ ಪ್ರತಿಕ್ರಿಯೆ ಏನಾಗಿತ್ತು?
10 ಸೈತಾನನು ಶೀಘ್ರದಲ್ಲೇ ಯೋಬನನ್ನು ಅನೇಕ ರೀತಿಗಳಲ್ಲಿ ಪರೀಕ್ಷಿಸಿದನು. ಯೋಬನ ಕೆಲವೊಂದು ಪಶುಗಳು ಕದಿಯಲ್ಪಟ್ಟವು, ಉಳಿದವು ಕೊಲ್ಲಲ್ಪಟ್ಟವು. ಅವನ ಸೇವಕರಲ್ಲಿ ಹೆಚ್ಚಿನವರು ಹತಿಸಲ್ಪಟ್ಟರು. ಇದು ಆರ್ಥಿಕ ಕಷ್ಟವನ್ನು ತಂದೊಡ್ಡಿತು. ಒಂದು ಬಿರುಗಾಳಿಯಲ್ಲಿ ಯೋಬನ ಹತ್ತು ಮಂದಿ ಮಕ್ಕಳು ಸತ್ತಾಗ ಇನ್ನೂ ಹೆಚ್ಚಿನ ದುರಂತವು ಯೋಬ 1:22.
ಬಂದೆರಗಿತು. ಈ ಭಯಂಕರ ಘಟನೆಗಳ ಹೊರತೂ, “ಯೋಬನು ಪಾಪಮಾಡಲಿಲ್ಲ, ದೇವರ ಮೇಲೆ ತಪ್ಪುಹೊರಿಸಲೂ ಇಲ್ಲ.”—11. (ಎ) ಯೋಬನ ಸಂಬಂಧದಲ್ಲಿ ಸೈತಾನನು ಯಾವ ದ್ವಿತೀಯ ಆರೋಪವನ್ನು ಹೊರಿಸಿದನು, ಮತ್ತು ಯೆಹೋವನು ಹೇಗೆ ಪ್ರತಿಕ್ರಿಯಿಸಿದನು? (ಬಿ) ತನ್ನ ವೇದನಾಮಯ ರೋಗಕ್ಕೆ ಯೋಬನು ಯಾವ ರೀತಿಯ ಪ್ರತಿವರ್ತನೆ ತೋರಿಸಿದನು?
11 ಆದರೆ ಸೈತಾನನು ತನ್ನ ಪ್ರಯತ್ನಗಳನ್ನು ನಿಲ್ಲಿಸಲಿಲ್ಲ. ಯೋಬನು ತನ್ನ ಸ್ವತ್ತು, ಸೇವಕರು ಮತ್ತು ಮಕ್ಕಳು—ಇವೆಲ್ಲವುಗಳ ನಷ್ಟವನ್ನು ತಾಳಿಕೊಳ್ಳಲು ಶಕ್ತನಾಗಿದ್ದರೂ, ಸ್ವತಃ ಅವನೇ ಅಸ್ವಸ್ಥನಾಗುವಲ್ಲಿ ಖಂಡಿತವಾಗಿ ದೇವರಿಗೆ ತಿರುಗಿ ಬೀಳುವನೆಂದು ಸೈತಾನನು ನೆನಸಿದ್ದಿರಬೇಕು. ಸೈತಾನನು ಯೋಬನನ್ನು ಅಸಹ್ಯವಾದ, ವೇದನಾಮಯ ರೋಗದಿಂದ ಪೀಡಿಸುವಂತೆ ಯೆಹೋವನು ಬಿಟ್ಟನು. ಆದರೆ ಇದು ಕೂಡ ಯೋಬನು ದೇವರಲ್ಲಿ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡಲಿಲ್ಲ. ಇದಕ್ಕೆ ಬದಲಾಗಿ, ಅವನು ಧೃಢವಾಗಿ ಹೇಳಿದ್ದು: “ಸಾಯುವ ತನಕ ನನ್ನ ಯಥಾರ್ಥತ್ವದ ಹೆಸರನ್ನು ಕಳಕೊಳ್ಳೆನು.”—ಯೋಬ 27:5.
12. ಪಿಶಾಚನ ಸವಾಲಿಗೆ ಯೋಬನು ಹೇಗೆ ಉತ್ತರ ಕೊಟ್ಟನು?
12 ತನ್ನ ತೊಂದರೆಗಳಿಗೆ ಸೈತಾನನೇ ಕಾರಣನೆಂದು ಯೋಬನಿಗೆ ತಿಳಿದಿರಲಿಲ್ಲ. ಯೆಹೋವನ ಪರಮಾಧಿಕಾರದ ಸಂಬಂಧದಲ್ಲಿ ಪಿಶಾಚನು ಎಬ್ಬಿಸಿರುವ ಸವಾಲಿನ ಕುರಿತಾದ ವಿವರಗಳನ್ನು ಅರಿಯದಿದ್ದ ಯೋಬನು, ತನಗೆ ದೇವರೇ ಸಮಸ್ಯೆಗಳನ್ನು ಬರಮಾಡುತ್ತಿದ್ದಾನೆಂದು ಭಯಪಟ್ಟನು. (ಯೋಬ 6:4; 16:11-14) ಆದರೂ ಅವನು ಯೆಹೋವನ ಕಡೆಗಿನ ತನ್ನ ಯಥಾರ್ಥತ್ವವನ್ನು ಅಥವಾ ಸಮಗ್ರತೆಯನ್ನು ಕಾಪಾಡಿಕೊಂಡನು. ಮತ್ತು ಹೀಗೆ ಯೋಬನ ನಂಬಿಗಸ್ತಿಕೆಯಿಂದಾಗಿ, ಅವನು ಸ್ವಾರ್ಥ ಕಾರಣಗಳಿಗಾಗಿ ದೇವರನ್ನು ಸೇವಿಸುತ್ತಿದ್ದನೆಂಬ ಸೈತಾನನ ವಾದವು ಸುಳ್ಳೆಂದು ರುಜುವಾಯಿತು.
13. ಯೋಬನು ದೇವರಿಗೆ ನಂಬಿಗಸ್ತನಾಗಿ ಇದ್ದುದರಿಂದ ಏನಾಯಿತು?
13 ಯೋಬನ ನಂಬಿಗಸ್ತಿಕೆಯು ಸೈತಾನನ ತುಚ್ಛೀಕಾರಕ ಸವಾಲಿಗೆ ಯೆಹೋವನು ಪರಿಣಾಮಕಾರಿಯಾದ ಉತ್ತರವನ್ನು ಕೊಡುವಂತೆ ಅವಕಾಶವನ್ನು ಕೊಟ್ಟಿತು. ಯೋಬನು ನಿಜವಾಗಿಯೂ ಯೆಹೋವನ ಸ್ನೇಹಿತನಾಗಿದ್ದನು ಮತ್ತು ಅವನ ನಂಬಿಗಸ್ತ ಮಾರ್ಗಕ್ರಮಕ್ಕಾಗಿ ದೇವರು ಅವನಿಗೆ ಪ್ರತಿಫಲವನ್ನು ಕೊಟ್ಟನು.—ಯೋಬ 42:12-17.
ನೀವು ಇದರಲ್ಲಿ ಒಳಗೂಡಿರುವ ವಿಧ
14, 15. ಯೋಬನನ್ನು ಒಳಗೂಡಿದ್ದ ಸೈತಾನನ ಸವಾಲು ಎಲ್ಲ ಮಾನವರಿಗೆ ಅನ್ವಯಿಸುತ್ತದೆಂದು ನಾವು ಹೇಗೆ ಹೇಳಬಲ್ಲೆವು?
14 ದೇವರ ಕಡೆಗಿನ ಸಮಗ್ರತೆಯ ಬಗ್ಗೆ ಸೈತಾನನು ಎಬ್ಬಿಸಿದ ವಿವಾದಾಂಶವು ಕೇವಲ ಯೋಬನ ವಿರುದ್ಧವಾಗಿ ನಿರ್ದೇಶಿಸಲ್ಪಟ್ಟಿರಲಿಲ್ಲ. ನೀವೂ ಅದರಲ್ಲಿ ಒಳಗೂಡಿದ್ದೀರಿ. ಜ್ಞಾನೋಕ್ತಿ 27:11 ರಲ್ಲಿ ಇದು ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಅಲ್ಲಿ ಯೆಹೋವನ ವಾಕ್ಯವು ಹೇಳುವುದು: “ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು; ಹಾಗಾದರೆ, ನನ್ನನ್ನು ದೂರುವವನಿಗೆ [“ಮೂದಲಿಸುವವನಿಗೆ,” NW] ನಾನು ಉತ್ತರಕೊಡಲಾಗುವದು.” ಯೋಬನ ಮರಣಾನಂತರ ನೂರಾರು ವರುಷಗಳ ಬಳಿಕ ಬರೆಯಲ್ಪಟ್ಟ ಈ ಮಾತುಗಳು, ಸೈತಾನನು ದೇವರನ್ನು ಆಗಲೂ ಮೂದಲಿಸುತ್ತಿದ್ದನು ಮತ್ತು ದೇವರ ಸೇವಕರ ಮೇಲೆ ಅಪವಾದ ಹೊರಿಸುತ್ತಿದ್ದನೆಂದು ತೋರಿಸುತ್ತವೆ. ನಾವು ಯೆಹೋವನಿಗೆ ಮೆಚ್ಚಿಕೆಯಾಗುವ ವಿಧದಲ್ಲಿ ಜೀವಿಸುವಾಗ ವಾಸ್ತವದಲ್ಲಿ ಸೈತಾನನ ಸುಳ್ಳಾರೋಪಗಳಿಗೆ ಉತ್ತರ ಕೊಡಲು ಸಹಾಯ ನೀಡುತ್ತಿರುವುದರಿಂದ, ಈ ವಿಧದಲ್ಲಿ ದೇವರ ಹೃದಯವನ್ನು ಸಂತೋಷಪಡಿಸುತ್ತೇವೆ. ಇದರ ಬಗ್ಗೆ ನಿಮಗೆ ಹೇಗನಿಸುತ್ತದೆ? ನಿಮ್ಮ ಜೀವನದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವಂತೆ ಇದು ಅಗತ್ಯಪಡಿಸುವುದಾದರೂ, ಪಿಶಾಚನ ಸುಳ್ಳಪವಾದಗಳಿಗೆ ಉತ್ತರ ಕೊಡುವುದರಲ್ಲಿ ನಿಮಗೂ ಒಂದು ಪಾತ್ರವಿರುವುದು ಅದ್ಭುತಕರವಲ್ಲವೆ?
15 “ಒಬ್ಬ ಮನುಷ್ಯನು ಪ್ರಾಣವನ್ನು ಉಳಿಸಿಕೊಳ್ಳುವದಕ್ಕೋಸ್ಕರ ತನ್ನ ಸರ್ವಸ್ವವನ್ನೂ ಕೊಡುವನು” ಎಂದು ಸೈತಾನನು ಹೇಳಿದ್ದನ್ನು ಗಮನಿಸಿ. (ಯೋಬ 2:4) “ಒಬ್ಬ ಮನುಷ್ಯನು” ಎಂದು ಹೇಳುವ ಮೂಲಕ ಸೈತಾನನು ತನ್ನ ಆರೋಪವು ಯೋಬನಿಗೆ ಮಾತ್ರವಲ್ಲ, ಎಲ್ಲ ಮಾನವರಿಗೆ ಅನ್ವಯಿಸುತ್ತದೆಂದು ಸ್ಪಷ್ಟಪಡಿಸಿದನು. ಇದೊಂದು ಅತಿ ಪ್ರಾಮುಖ್ಯ ವಿಷಯ. ಸೈತಾನನು ದೇವರ ಕಡೆಗಿನ ನಿಮ್ಮ ಸಮಗ್ರತೆಯನ್ನು ಸಂಶಯಕ್ಕೊಳಪಡಿಸಿದ್ದಾನೆ. ಕಷ್ಟಗಳು ಬರುವಾಗ ನೀವು ದೇವರಿಗೆ ಅವಿಧೇಯರಾಗಿ ನೀತಿಪಥವನ್ನು ಬಿಟ್ಟುಹೋಗುವುದನ್ನು ನೋಡುವ ಮನಸ್ಸು ಪಿಶಾಚನಿಗಿದೆ. ಇದನ್ನು ಸಾಧಿಸಲು ಸೈತಾನನು ಹೇಗೆ ಪ್ರಯತ್ನಿಸಿಯಾನು?
16. (ಎ) ಸೈತಾನನು ಯಾವ ವಿಧಾನಗಳ ಮೂಲಕ ಜನರನ್ನು ದೇವರಿಂದ ತಿರುಗಿಸಲು ಪ್ರಯತ್ನಿಸುತ್ತಾನೆ? (ಬಿ) ಪಿಶಾಚನು ನಿಮಗೆದುರಾಗಿ ಈ ವಿಧಾನಗಳನ್ನು ಹೇಗೆ ಬಳಸಬಹುದು?
16 ಅಧ್ಯಾಯ 10ರಲ್ಲಿ ಚರ್ಚಿಸಿರುವಂತೆ, ಜನರನ್ನು ದೇವರಿಂದ ತಿರುಗಿಸುವ ಪ್ರಯತ್ನದಲ್ಲಿ ಸೈತಾನನು ಬೇರೆ ಬೇರೆ ವಿಧಾನಗಳನ್ನು ಉಪಯೋಗಿಸುತ್ತಾನೆ. ಒಂದು ಕಡೆ, “ಯಾರನ್ನು ನುಂಗಲಿ” ಎಂದು ಹುಡುಕುತ್ತಾ ಅವನು “ಗರ್ಜಿಸುವ ಸಿಂಹದೋಪಾದಿ” ಆಕ್ರಮಣ ಮಾಡುತ್ತಾನೆ. (1 ಪೇತ್ರ 5:8) ಹೀಗಿರುವುದರಿಂದ ಸ್ನೇಹಿತರು, ಸಂಬಂಧಿಕರು ಇಲ್ಲವೆ ಇತರರು ನೀವು ಬೈಬಲ್ ಅಧ್ಯಯನಮಾಡಲು ಮತ್ತು ಕಲಿತಿರುವ ವಿಷಯಗಳನ್ನು ಅನ್ವಯಿಸಿಕೊಳ್ಳಲು ಮಾಡುವ ಪ್ರಯತ್ನಗಳನ್ನು ವಿರೋಧಿಸುವಾಗ ಸೈತಾನನ ಪ್ರಭಾವವು ಕಂಡುಬರಬಹುದು. * (ಯೋಹಾನ 15:19, 20) ಇನ್ನೊಂದು ಕಡೆ, ‘ಸೈತಾನನು ಪ್ರಕಾಶರೂಪವುಳ್ಳ ದೇವದೂತನ ವೇಷವನ್ನು’ ಹಾಕಿಕೊಳ್ಳುತ್ತಾನೆ. (2 ಕೊರಿಂಥ 11:14) ನಿಮ್ಮನ್ನು ದಾರಿತಪ್ಪಿಸಿ ದೇವಭಕ್ತಿಯ ಜೀವನರೀತಿಯಿಂದ ದೂರ ಸೆಳೆಯಲು ಪಿಶಾಚನು ಕುಯುಕ್ತಿಯ ವಿಧಾನಗಳನ್ನು ಉಪಯೋಗಿಸಬಲ್ಲನು. ಅವನು ನಿರುತ್ತೇಜನವನ್ನೂ ಉಪಯೋಗಿಸುತ್ತ, ದೇವರನ್ನು ಸಂತೋಷಪಡಿಸುವ ಅರ್ಹತೆ ನಿಮ್ಮಲ್ಲಿಲ್ಲ ಎಂಬ ಅನಿಸಿಕೆ ನಿಮ್ಮಲ್ಲಿ ಹುಟ್ಟುವಂತೆಯೂ ಮಾಡಬಲ್ಲನು. (ಜ್ಞಾನೋಕ್ತಿ 24:10) ಸೈತಾನನು “ಗರ್ಜಿಸುವ ಸಿಂಹದೋಪಾದಿ” ವರ್ತಿಸಲಿ ಇಲ್ಲವೆ “ಪ್ರಕಾಶರೂಪವುಳ್ಳ ದೇವದೂತ”ನಂತೆ ವರ್ತಿಸಲಿ, ಅವನೊಡ್ಡಿರುವ ಸವಾಲಿನಲ್ಲಿ ಬದಲಾವಣೆಯಿರುವುದಿಲ್ಲ; ಅವನು ಹೇಳುವುದೇನೆಂದರೆ, ನಿಮಗೆ ಪರೀಕ್ಷೆಗಳು ಅಥವಾ ಪ್ರಲೋಭನೆಗಳು ಎದುರಾಗುವಾಗ, ನೀವು ದೇವರಿಗೆ ಸೇವೆಸಲ್ಲಿಸುವುದನ್ನು ನಿಲ್ಲಿಸಿ ಬಿಡುವಿರೆಂದೇ. ಹೀಗಿರುವುದರಿಂದ, ಅವನ ಸವಾಲಿಗೆ ಉತ್ತರಕೊಟ್ಟು, ಯೋಬನ ಹಾಗೆ ದೇವರ ಕಡೆಗಿನ ನಿಮ್ಮ ಸಮಗ್ರತೆಯನ್ನು ನೀವು ಹೇಗೆ ರುಜುಪಡಿಸುವಿರಿ?
ಯೆಹೋವನ ಆಜ್ಞೆಗಳಿಗೆ ವಿಧೇಯರಾಗುವುದು
17. ಯೆಹೋವನ ಆಜ್ಞೆಗಳಿಗೆ ವಿಧೇಯರಾಗುವುದಕ್ಕೆ ಮುಖ್ಯ ಕಾರಣವೇನು?
17 ದೇವರನ್ನು ಸಂತೋಷಪಡಿಸುವಂಥ ರೀತಿಯಲ್ಲಿ ನಿಮ್ಮ ಜೀವನವನ್ನು ನಡೆಸುತ್ತ ನೀವು ಸೈತಾನನ ಸವಾಲಿಗೆ ಉತ್ತರ ಕೊಡಬಲ್ಲಿರಿ. ಇದರಲ್ಲಿ ಏನು ಒಳಗೂಡಿದೆ? ಬೈಬಲ್ ಉತ್ತರ ಕೊಡುವುದು: “ನೀವು ನಿಮ್ಮ ದೇವರಾದ ಯೆಹೋವನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು.” (ಧರ್ಮೋಪದೇಶಕಾಂಡ 6:5) ದೇವರ ಮೇಲಣ ನಿಮ್ಮ ಪ್ರೀತಿಯು ಬೆಳೆಯುವಾಗ, ಆತನು ನಿಮ್ಮಿಂದ ಏನನ್ನು ಅಪೇಕ್ಷಿಸುತ್ತಾನೊ ಅದನ್ನು ಮಾಡುವ ಬಯಕೆಯು ನಿಮ್ಮಲ್ಲಿ ತುಂಬುವುದು. ಅಪೊಸ್ತಲ ಯೋಹಾನನು ಬರೆದುದು: “ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ.” ನೀವು ಯೆಹೋವನನ್ನು ನಿಮ್ಮ ಪೂರ್ಣಹೃದಯದಿಂದ ಪ್ರೀತಿಸುವುದಾದರೆ “ಆತನ ಆಜ್ಞೆಗಳು ಭಾರವಾದವುಗಳಲ್ಲ”ವೆಂದು ನಿಮಗನಿಸುವುದು.—1 ಯೋಹಾನ 5:3.
18, 19. (ಎ) ಯೆಹೋವನ ಆಜ್ಞೆಗಳಲ್ಲಿ ಕೆಲವು ಯಾವುವು? (122ನೇ ಪುಟದಲ್ಲಿರುವ ಚೌಕವನ್ನು ನೋಡಿ.) (ಬಿ) ದೇವರು ನಮ್ಮಿಂದ ಅತಿಯಾದದ್ದನ್ನು ಅಪೇಕ್ಷಿಸುವುದಿಲ್ಲವೆಂಬುದು ನಮಗೆ ಹೇಗೆ ಗೊತ್ತು?
18 ಯೆಹೋವನ ಆಜ್ಞೆಗಳು ಯಾವುವು? ಅವುಗಳಲ್ಲಿ ಕೆಲವೊಂದು ಆಜ್ಞೆಗಳು ನಾವು ತ್ಯಜಿಸಿ ದೂರವಿರಬೇಕಾದ ನಡತೆಯ ಕುರಿತಾಗಿವೆ. ಉದಾಹರಣೆಗೆ, 122ನೇ ಪುಟದಲ್ಲಿರುವ, “ಯೆಹೋವನು ದ್ವೇಷಿಸುವ ವಿಷಯಗಳನ್ನು ತೊರೆಯಿರಿ” ಎಂಬ ಚೌಕವನ್ನು ನೋಡಿ. ಅಲ್ಲಿ, ಬೈಬಲು ಸ್ಪಷ್ಟವಾಗಿ ಖಂಡಿಸುವಂಥ ನಡತೆಯನ್ನು ಪಟ್ಟಿಮಾಡಲಾಗಿರುವುದನ್ನು ಕಂಡುಕೊಳ್ಳುವಿರಿ. ಪ್ರಥಮ ಬಾರಿ ಕಣ್ಣು ಹಾಯಿಸುವಾಗ ಪಟ್ಟಿಮಾಡಲ್ಪಟ್ಟಿರುವ ಕೆಲವು ಆಚಾರಗಳು ಅಷ್ಟೇನೂ ಕೆಟ್ಟವುಗಳಲ್ಲವೆಂಬಂತೆ ಕಾಣಬಹುದು. ಆದರೆ ಕೊಡಲ್ಪಟ್ಟಿರುವ ಶಾಸ್ತ್ರವಚನಗಳ ಕುರಿತು ಧ್ಯಾನಿಸಿದ ಬಳಿಕ, ನೀವು ಯೆಹೋವನ ನಿಯಮಗಳ ಹಿಂದಿರುವ ವಿವೇಕವನ್ನು ಮನಗಾಣುವುದು ಸಂಭಾವ್ಯ. ನಿಮ್ಮ ನಡತೆಯಲ್ಲಿ ಬದಲಾವಣೆಗಳನ್ನು ಮಾಡುವ ಸಂಗತಿಯು ನೀವು ಈ ವರೆಗೆ ಎದುರಿಸಿರುವವುಗಳಲ್ಲೇ ಅತಿ ಕಠಿನ ಪಂಥಾಹ್ವಾನ ಆಗಿರಬಹುದು. ಆದರೂ, ದೇವರನ್ನು ಸಂತೋಷಪಡಿಸುವ ವಿಧದಲ್ಲಿ ಜೀವನ ನಡೆಸುವುದು ಭಾರೀ ತೃಪ್ತಿ ಮತ್ತು ಆನಂದವನ್ನು ತರುತ್ತದೆ. (ಯೆಶಾಯ 48:17, 18) ಮತ್ತು ಅದು ನೀವು ಸಾಧಿಸಲು ಸಾಧ್ಯವಿರುವ ಸಂಗತಿಯಾಗಿದೆ. ಅದು ನಮಗೆ ಹೇಗೆ ಗೊತ್ತು?
ಧರ್ಮೋಪದೇಶಕಾಂಡ 30:11-14) ನಮ್ಮ ಸಾಮರ್ಥ್ಯ ಮತ್ತು ಇತಿಮಿತಿಗಳನ್ನು ಆತನು ನಮಗಿಂತ ಹೆಚ್ಚು ಚೆನ್ನಾಗಿ ಬಲ್ಲನು. (ಕೀರ್ತನೆ 103:14) ಅಲ್ಲದೆ, ನಾವಾತನಿಗೆ ವಿಧೇಯರಾಗುವಂತೆ ಯೆಹೋವನು ನಮಗೆ ಬಲವನ್ನು ಕೊಡಬಲ್ಲನು. ಅಪೊಸ್ತಲ ಪೌಲನು ಬರೆದುದು: “ದೇವರು ನಂಬಿಗಸ್ಥನು; ನಿಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸದೆ ನೀವು ಅದನ್ನು ಸಹಿಸುವದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ ತಪ್ಪಿಸಿ ಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು.” (1 ಕೊರಿಂಥ 10:13) ನೀವು ತಾಳಿಕೊಳ್ಳುವಂತೆ ಸಹಾಯಮಾಡಲು ಯೆಹೋವನು ನಿಮಗೆ “ಬಲಾಧಿಕ್ಯ”ವನ್ನು ಸಹ ಒದಗಿಸಬಲ್ಲನು. (2 ಕೊರಿಂಥ 4:7) ಅನೇಕ ಪರೀಕ್ಷೆಗಳನ್ನು ತಾಳಿಕೊಂಡ ಬಳಿಕ ಪೌಲನು, “ನನ್ನನ್ನು ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ” ಎಂದು ಹೇಳಸಾಧ್ಯವಾಯಿತು.—ಫಿಲಿಪ್ಪಿ 4:13.
19 ನಾವು ಮಾಡಸಾಧ್ಯವಿರುವುದಕ್ಕಿಂತ ಹೆಚ್ಚಿನದ್ದನ್ನು ಯೆಹೋವನು ಎಂದಿಗೂ ಕೇಳುವುದಿಲ್ಲ. (ದೇವರು ಪ್ರೀತಿಸುವಂಥ ಗುಣಗಳನ್ನು ಬೆಳೆಸಿಕೊಳ್ಳುವುದು
20. ದೇವರಿಗೆ ಇಷ್ಟವಾಗುವಂಥ ಯಾವ ಗುಣಗಳನ್ನು ನೀವು ಬೆಳೆಸಿಕೊಳ್ಳಬೇಕು, ಮತ್ತು ಇವು ಏಕೆ ಪ್ರಾಮುಖ್ಯ?
20 ಯೆಹೋವನನ್ನು ಸಂತೋಷಪಡಿಸುವುದರಲ್ಲಿ, ಆತನು ದ್ವೇಷಿಸುವ ವಿಷಯಗಳನ್ನು ಮಾಡದೆ ಇರುವುದಕ್ಕಿಂತಲೂ ಹೆಚ್ಚಿನದ್ದು ಸೇರಿದೆ ಎಂಬುದಂತೂ ನಿಶ್ಚಯ. ಆತನೇನು ಪ್ರೀತಿಸುತ್ತಾನೊ ಅದನ್ನು ನಾವು ಪ್ರೀತಿಸುವುದೂ ಆವಶ್ಯಕ. (ರೋಮಾಪುರ 12:9) ನಿಮಗಿರುವಂಥದ್ದೇ ರೀತಿಯ ಅಭಿಪ್ರಾಯಗಳು, ಅಭಿರುಚಿಗಳು ಮತ್ತು ಮೌಲ್ಯಗಳು ಇರುವವರ ಕಡೆಗೆ ನೀವು ಆಕರ್ಷಿತರಾಗುವುದಿಲ್ಲವೆ? ಯೆಹೋವನು ಸಹ ಹಾಗೆಯೇ. ಆದಕಾರಣ ಯೆಹೋವನು ಇಷ್ಟಪಡುವ ವಿಷಯಗಳನ್ನು ನೀವೂ ಪ್ರೀತಿಸಲು ಕಲಿಯಿರಿ. ಇವುಗಳಲ್ಲಿ ಕೆಲವು ಕೀರ್ತನೆ 15:1-5 ರಲ್ಲಿ ವರ್ಣಿಸಲ್ಪಟ್ಟಿವೆ. ದೇವರು ಯಾರನ್ನು ತನ್ನ ಸ್ನೇಹಿತರೆಂದು ಎಣಿಸುತ್ತಾನೊ ಅಂಥವರ ಕುರಿತು ನಾವು ಅಲ್ಲಿ ಓದುತ್ತೇವೆ. ಯೆಹೋವನ ಸ್ನೇಹಿತರು, ಬೈಬಲು ಯಾವುದನ್ನು “ಆತ್ಮದ ಫಲ”ವೆಂದು ಕರೆಯುತ್ತದೊ ಅದನ್ನು ತೋರಿಸುತ್ತಾರೆ. ಇದರಲ್ಲಿ “ಪ್ರೀತಿ, ಆನಂದ, ಸಮಾಧಾನ, ಸಹನೆ, ದಯೆ, ಸದ್ಗುಣ, ನಂಬಿಗಸ್ತಿಕೆ, ಸಾತ್ವಿಕತೆ, ಸಂಯಮ”ದಂತಹ ಗುಣಗಳು ಸೇರಿವೆ.—ಗಲಾತ್ಯ 5:22, 23, NIBV.
21. ಯೆಹೋವನಿಗೆ ಇಷ್ಟವಾಗುವಂಥ ಗುಣಗಳನ್ನು ಬೆಳೆಸಿಕೊಳ್ಳಲು ನಿಮಗೆ ಯಾವುದು ಸಹಾಯಮಾಡುವುದು?
21 ಬೈಬಲನ್ನು ಕ್ರಮವಾಗಿ ಓದುತ್ತಿರುವುದು ಮತ್ತು ಅಧ್ಯಯನ ಮಾಡುತ್ತಿರುವುದು ಯೆಹೋವನಿಗೆ ಇಷ್ಟವಾಗುವಂಥ ಗುಣಗಳನ್ನು ಬೆಳೆಸಿಕೊಳ್ಳಲು ನಿಮಗೆ ಸಹಾಯಮಾಡುವುದು. ಮತ್ತು ದೇವರು ಏನನ್ನು ಅಪೇಕ್ಷಿಸುತ್ತಾನೆಂಬುದನ್ನು ಕಲಿಯುತ್ತಿರುವುದು, ನಿಮ್ಮ ಆಲೋಚನೆಗಳನ್ನು ದೇವರ ಆಲೋಚನೆಗಳೊಂದಿಗೆ ಹೊಂದಿಕೆಗೆ ತರಲು ನಿಮಗೆ ಸಹಾಯಮಾಡುವುದು. (ಯೆಶಾಯ 30:20, 21) ಯೆಹೋವ ದೇವರ ಮೇಲೆ ನಿಮಗಿರುವ ಪ್ರೀತಿಯನ್ನು ನೀವು ಹೆಚ್ಚೆಚ್ಚು ಬಲಪಡಿಸುತ್ತಾ ಹೋದಂತೆ, ಆತನನ್ನು ಸಂತೋಷಪಡಿಸುವ ರೀತಿಯಲ್ಲಿ ಬದುಕುವ ನಿಮ್ಮ ಬಯಕೆಯೂ ಅಷ್ಟೇ ಬಲವಾಗುತ್ತಾ ಹೋಗುವುದು.
22. ದೇವರನ್ನು ಸಂತೋಷಪಡಿಸುವ ರೀತಿಯಲ್ಲಿ ಜೀವಿಸುವುದರಿಂದ ನೀವೇನನ್ನು ಸಾಧಿಸುವಿರಿ?
22 ಯೆಹೋವನನ್ನು ಸಂತೋಷಪಡಿಸುವಂಥ ರೀತಿಯಲ್ಲಿ ಜೀವಿಸಲು ಪ್ರಯತ್ನವು ಅಗತ್ಯ. ನಿಮ್ಮ ಜೀವನದಲ್ಲಿ ಮಾಡಬೇಕಾದ ಬದಲಾವಣೆಯನ್ನು ಬೈಬಲು, ಹಳೆಯ ವ್ಯಕ್ತಿತ್ವವನ್ನು ಕಳಚಿಹಾಕಿ ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳುವುದಕ್ಕೆ ಹೋಲಿಸುತ್ತದೆ. (ಕೊಲೊಸ್ಸೆ 3:9, 10) ಆದರೆ ಯೆಹೋವನ ಆಜ್ಞೆಗಳ ಸಂಬಂಧದಲ್ಲಿ ಕೀರ್ತನೆಗಾರನು ಬರೆದುದು: “ಅವುಗಳನ್ನು ಕೈಕೊಳ್ಳುವದರಿಂದ ಬಹಳ ಫಲ ಉಂಟಾಗುತ್ತದೆ.” (ಕೀರ್ತನೆ 19:11) ದೇವರನ್ನು ಸಂತೋಷಪಡಿಸುವ ರೀತಿಯಲ್ಲಿ ಜೀವಿಸುವುದು ಬಹಳ ಫಲದಾಯಕವೆಂಬುದನ್ನು ನೀವೂ ಕಂಡುಕೊಳ್ಳುವಿರಿ. ಹಾಗೆ ಮಾಡುವ ಮೂಲಕ ನೀವು ಸೈತಾನನ ಸವಾಲಿಗೆ ಸರಿಯಾದ ಉತ್ತರವನ್ನು ಕೊಟ್ಟು ಯೆಹೋವನ ಹೃದಯವನ್ನು ಸಂತೋಷಪಡಿಸುವಿರಿ!
^ ಪ್ಯಾರ. 16 ನಿಮ್ಮನ್ನು ವಿರೋಧಿಸುವ ಒಬ್ಬೊಬ್ಬರನ್ನೂ ಸೈತಾನನು ತಾನೇ ನಿಯಂತ್ರಿಸುತ್ತಾನೆಂದು ಇದರ ಅರ್ಥವಲ್ಲ. ಆದರೆ ಸೈತಾನನು ಈ ಪ್ರಪಂಚದ ದೇವರಾಗಿರುವುದರಿಂದ ಲೋಕವೆಲ್ಲವು ಅವನ ವಶದಲ್ಲಿದೆ. (2 ಕೊರಿಂಥ 4:4; 1 ಯೋಹಾನ 5:19) ಆದುದರಿಂದ ದೇವಭಕ್ತಿಯ ಜೀವನವನ್ನು ನಡೆಸುವುದು ಜನರು ಮೆಚ್ಚದಂಥ ಮಾರ್ಗಕ್ರಮವಾಗಿದೆ ಮತ್ತು ಕೆಲವರು ನಿಮ್ಮನ್ನು ವಿರೋಧಿಸುವರೆಂಬುದನ್ನು ನಿರೀಕ್ಷಿಸಬಹುದು.