ಪಾಠ 20
ಮುಂದಿನ ಆರು ಶಿಕ್ಷೆಗಳು
ಮೋಶೆ ಆರೋನರು ಫರೋಹನ ಹತ್ತಿರ ಹೋಗಿ, ಯೆಹೋವ ಹೀಗೆ ಹೇಳ್ತಾನೆ: ‘ನೀನು ನನ್ನ ಜನರನ್ನು ಬಿಡದಿದ್ದರೆ ನಾನು ದೇಶದಲ್ಲಿ ರಕ್ತಹೀರೋ ನೊಣಗಳನ್ನ ಬರುವಂತೆ ಮಾಡುವನು’ ಎಂದು ತಿಳಿಸಿದರು. ಈ ರಕ್ತಹೀರೋ ನೊಣಗಳನ್ನ ಬಡವರು ಶ್ರೀಮಂತರು ಎನ್ನದೇ ಈಜಿಪ್ಟಿನ ಎಲ್ಲರ ಮನೆಯಲ್ಲಿ ತುಂಬಿಕೊಂಡವು. ಇಡೀ ದೇಶ ರಕ್ತಹೀರೋ ನೊಣಗಗಳಿಂದ ತುಂಬಿತು. ಆದರೆ ಇಸ್ರಾಯೇಲ್ಯರಿದ್ದ ಗೋಷೆನ್ ಎಂಬ ಸ್ಥಳದಲ್ಲಿ ನೊಣಗಳ ಸುಳಿವೂ ಇರಲಿಲ್ಲ. ಈ ನಾಲ್ಕನೇ ಶಿಕ್ಷೆಯಿಂದ ಹಿಡಿದು ನಂತರ ಬಂದ ಎಲ್ಲಾ ಶಿಕ್ಷೆಗಳು ಈಜಿಪ್ಟಿನವರಿಗೆ ಮಾತ್ರ ಹಾನಿಮಾಡಿತು. ಆಗ ಫರೋಹ ಮೋಶೆಗೆ ‘ನೊಣಗಳ ಕಾಟವನ್ನು ನಿಲ್ಲಿಸುವಂತೆ ಯೆಹೋವನಿಗೆ ಪ್ರಾರ್ಥಿಸು. ನಿಮ್ಮ ಜನರನ್ನು ಬಿಡುತ್ತೇನೆ’ ಎಂದು ಬೇಡಿಕೊಂಡ. ಆದರೆ ಯೆಹೋವನು ಶಿಕ್ಷೆಯನ್ನು ನಿಲ್ಲಿಸಿದಾಗ ಫರೋಹ ಮನಸ್ಸನ್ನು ಬದಲಾಯಿಸಿದ. ಇಂಥ ಫರೋಹ ಯಾವಾತ್ತಾದರೂ ಬುದ್ಧಿ ಕಲಿತನಾ?
‘ಫರೋಹನು ನನ್ನ ಜನರನ್ನು ಬಿಡದಿದ್ದರೆ ಈಜಿಪ್ಟಿನವರ ಪ್ರಾಣಿಗಳು ಕಾಯಿಲೆಯಿಂದ ಸಾಯುತ್ತೆ’ ಎಂದು ಯೆಹೋವನು ಹೇಳಿದನು. ಮಾರನೇ ದಿನದಿಂದಲೇ ಪ್ರಾಣಿಗಳು ಸಾಯುತ್ತಾ ಬಂದವು. ಆದರೆ ಇಸ್ರಾಯೇಲ್ಯರ ಪ್ರಾಣಿಗಳು ಸಾಯಲಿಲ್ಲ. ಆದರೂ ಫರೋಹ ಮೊಂಡುತನದಿಂದ ಇಸ್ರಾಯೇಲ್ಯರನ್ನು ಬಿಡಲಿಲ್ಲ.
ಆಮೇಲೆ ಯೆಹೋವನು ಮೋಶೆಗೆ ‘ನೀನು ಫರೋಹನ ಮುಂದೆ ನಿಂತು ಬೂದಿಯನ್ನು ಗಾಳಿಗೆ ತೂರು’ ಅಂದನು. ಹಾಗೆ ಮಾಡಿದಾಗ ಬೂದಿ ಗಾಳಿಯಲ್ಲಿ ಸೇರಿ ಈಜಿಪ್ಟಿನವರ ಮೈ ಮೇಲೆ ಹಾಗೂ ಅವರ ಪ್ರಾಣಿಗಳ ಮೇಲೆ ಕೀವುಗಟ್ಟಿದ ಹುಣ್ಣಾಗುವಂತೆ ಮಾಡಿತು. ಅದರಿಂದ ತುಂಬ ನೋವಾಗುತ್ತಿತ್ತು. ಇದನ್ನೆಲ್ಲಾ ನೋಡಿದರೂ ಫರೋಹ ಇಸ್ರಾಯೇಲ್ಯರನ್ನು ಬಿಡಲೇ ಇಲ್ಲ.
ಯೆಹೋವನು ಪುನಃ ಮೋಶೆಯನ್ನು ಫರೋಹನ ಹತ್ತಿರ ಕಳಿಸಿ ‘ನೀನು ಇನ್ನೂ ನನ್ನ ಜನರನ್ನು ಬಿಡಲು ಒಪ್ಪುತ್ತಾ ಇಲ್ಲವಾ? ನಾಳೆ ದೇಶದಲ್ಲಿ ಆಲಿಕಲ್ಲು ಬೀಳೋ ಹಾಗೆ ಮಾಡ್ತೀನಿ’ ಎಂದು ಹೇಳಿಸಿದನು. ಮಾರನೇ
ದಿನ ಯೆಹೋವನು ಆಲಿಕಲ್ಲು, ಗುಡುಗು ಮತ್ತು ಬೆಂಕಿಯಿಂದ ಕೂಡಿದ ಭಯಂಕರ ಮಳೆ ಬೀಳುವಂತೆ ಮಾಡಿದನು. ಇಂಥ ಮಳೆಯನ್ನು ಈಜಿಪ್ಟಿನವರು ತಮ್ಮ ಜೀವಮಾನದಲ್ಲೇ ನೋಡಿರಲಿಲ್ಲ. ಗಿಡ, ಮರ, ಬೆಳೆ ಎಲ್ಲಾ ನಾಶವಾಯಿತು. ಆದರೆ ಗೋಷೆನ್‌ನಲ್ಲಿ ಮಾತ್ರ ಏನೂ ಆಗಲಿಲ್ಲ. ಆಗ ಫರೋಹ ‘ಇದನ್ನು ನಿಲ್ಲಿಸುವಂತೆ ಯೆಹೋವನನ್ನು ಬೇಡಿಕೋ! ಆಮೇಲೆ ನೀವೆಲ್ಲರೂ ಇಲ್ಲಿಂದ ಹೋಗಬಹುದು’ ಎಂದನು. ಆದರೆ ಮಳೆ ನಿಂತ ತಕ್ಷಣ ಫರೋಹನು ತನ್ನ ಮಾತಿನಂತೆ ನಡೆಯಲಿಲ್ಲ.ನಂತರ ಮೋಶೆ ‘ಆಲಿಕಲ್ಲಿನ ಮಳೆಯಿಂದ ನಾಶವಾಗದೇ ಇರುವ ಗಿಡ-ಮರ ಎಲ್ಲವನ್ನೂ ಮಿಡತೆಗಳು ತಿನ್ನುವದು’ ಎಂದನು. ಆಗ ಸಾವಿರಾರು ಮಿಡತೆಗಳು ಗುಂಪು ಗುಂಪಾಗಿ ಬಂದು ಹೊಲಗದ್ದೆಗಳಲ್ಲಿ ಉಳಿದಿದ್ದ ಬೆಳೆಯನ್ನು ಮತ್ತು ಮರ-ಗಿಡಗಳನ್ನೆಲ್ಲಾ ತಿಂದುಬಿಟ್ಟವು. ಆಗ ಫರೋಹ ‘ಮಿಡತೆಯ ಕಾಟವನ್ನು ನಿಲ್ಲಿಸಲು ಯೆಹೋವನನ್ನು ಬೇಡಿಕೊ’ ಅಂದನು. ಯೆಹೋವನು ಶಿಕ್ಷೆಯನ್ನು ನಿಲ್ಲಿಸಿದಾಗ ಪುನಃ ಅವನ ಮನಸ್ಸು ಕಲ್ಲಾಯಿತು.
ಆಮೇಲೆ ಯೆಹೋವನು ಮೋಶೆಗೆ ‘ನಿನ್ನ ಕೈಯನ್ನ ಆಕಾಶದ ಕಡೆಗೆ ಚಾಚು’ ಎಂದನು. ಆ ಕ್ಷಣವೇ ಆಕಾಶ ಕಪ್ಪಗಾಗಿ ದೇಶದಲ್ಲೆಲ್ಲಾ ಕತ್ತಲು ಕವಿಯಿತು. ಮೂರು ದಿನ ಈಜಿಪ್ಟಿನವರಿಗೆ ಯಾರನ್ನೂ ನೋಡಲು ಆಗಲಿಲ್ಲ, ಏನೂ ಕಾಣುತ್ತಿರಲಿಲ್ಲ. ಆದರೆ ಇಸ್ರಾಯೇಲ್ಯರು ಇದ್ದ ಜಾಗದಲ್ಲಿ ಮಾತ್ರ ಬೆಳಕಿತ್ತು.
ಇದರ ನಂತರ ಫರೋಹ ಮೋಶೆಗೆ ‘ನೀನು ಮತ್ತು ನಿನ್ನ ಜನರು ಇಲ್ಲಿಂದ ಹೋಗಬಹುದು. ಆದರೆ ನಿಮ್ಮ ಪ್ರಾಣಿಗಳನ್ನು ಇಲ್ಲೇ ಬಿಟ್ಟು ಹೋಗಬೇಕು’ ಅಂದನು. ಅದಕ್ಕೆ ಮೋಶೆ ‘ನಾವು ದೇವರಿಗೆ ಬಲಿ ಕೊಡಬೇಕಾಗಿ ಇರುವುದರಿಂದ ಪ್ರಾಣಿಗಳನ್ನೂ ತೆಗೆದುಕೊಂಡು ಹೋಗಬೇಕು’ ಎಂದನು. ಫರೋಹನ ಕೋಪ ನೆತ್ತಿಗೇರಿತು. ‘ನನ್ನ ಕಣ್ಮುಂದೆ ನಿಲ್ಲಬೇಡ. ಹೋಗಾಚೆ! ಇನ್ನು ಮುಂದೆ ಇಲ್ಲಿಗೆ ಬಂದರೆ ನಿನ್ನನ್ನು ಸಾಯಿಸಿಬಿಡ್ತೀನಿ’ ಎಂದ.
“ನೀವು ನೀತಿವಂತನಿಗೂ ಕೆಟ್ಟವನಿಗೂ ಮತ್ತು ದೇವರನ್ನ ಆರಾಧಿಸುವವನಿಗೂ ಆರಾಧಿಸದವನಿಗೂ ಇರೋ ವ್ಯತ್ಯಾಸವನ್ನ ಮತ್ತೊಮ್ಮೆ ನೋಡ್ತೀರ.”—ಮಲಾಕಿಯ 3:18