ಪಾಠ 7
ಬಾಬೆಲಿನ ಗೋಪುರ
ಜಲಪ್ರಳಯ ಆದ ಮೇಲೆ ನೋಹನ ಪುತ್ರರಿಗೆ ಅನೇಕ ಮಕ್ಕಳು ಹುಟ್ಟಿದರು. ಅವರ ಕುಟುಂಬ ದೊಡ್ಡದಾಗುತ್ತಾ ಹೋದಂತೆ ಅವರು ಒಂದೊಂದು ದಿಕ್ಕಿಗೆ ಹೋದರು. ಹೀಗೆ ಯೆಹೋವನು ಹೇಳಿದಂತೆ ಭೂಮಿಯ ತುಂಬ ಜನರಾದರು.
ಆದರೆ ಕೆಲವು ಕುಟುಂಬಗಳು ಯೆಹೋವನ ಮಾತನ್ನು ಕೇಳಲಿಲ್ಲ. ಅವರು ‘ನಾವೆಲ್ಲ ಸೇರಿ ಒಂದು ಪಟ್ಟಣ ಕಟ್ಟೋಣ. ಆಕಾಶ ಮುಟ್ಟೊ ತರ ಎತ್ತರದ ಗೋಪುರ ಕಟ್ಟಿ ದೊಡ್ಡ ಹೆಸ್ರು ಮಾಡಿಕೊಳ್ಳೋಣ’ ಎಂದು ಹೇಳಿದರು.
ಜನರ ಈ ಯೋಚನೆ ಯೆಹೋವನಿಗೆ ಸ್ವಲ್ಪವೂ ಇಷ್ಟ ಆಗಲಿಲ್ಲ. ಆದ್ದರಿಂದ ಕಟ್ಟೋ ಕೆಲಸವನ್ನೇ ನಿಲ್ಲಿಸಿಬಿಟ್ಟನು. ಹೇಗೆ ಗೊತ್ತಾ? ಇದ್ದಕ್ಕಿದ್ದ ಹಾಗೆ ಜನರೆಲ್ಲ ಬೇರೆ ಬೇರೆ ಭಾಷೆ ಮಾತಾಡುವ ಹಾಗೆ ಯೆಹೋವನು ಮಾಡಿದನು. ಒಬ್ಬರು ಹೇಳಿದ್ದು ಇನ್ನೊಬ್ಬರಿಗೆ ಅರ್ಥ ಆಗುತ್ತಿರಲಿಲ್ಲ. ಆದ್ದರಿಂದ ಜನರು ಕೆಲಸವನ್ನು ನಿಲ್ಲಿಸಲೇಬೇಕಾಯಿತು. ಅವರು ಕಟ್ಟುತ್ತಿದ್ದ ಪಟ್ಟಣಕ್ಕೆ ಬಾಬೆಲ್ ಎಂಬ ಹೆಸರು ಬಂತು. ಬಾಬೆಲ್ ಅಂದರೆ “ಗಲಿಬಿಲಿ.” ಹೀಗೆ ಭಾಷೆಯ ಗಲಿಬಿಲಿಯಿಂದ ಬೇಸತ್ತ ಜನ ಗಂಟು ಮೂಟೆ ಕಟ್ಟಿಕೊಂಡು ಒಂದೊಂದು ದಿಕ್ಕಿಗೆ ಹೋಗಿ ವಾಸಿಸಲು ಶುರುಮಾಡಿದರು. ಆದರೆ ಇದರಿಂದ ಬುದ್ಧಿ ಕಲಿತರಾ? ಇಲ್ಲ. ‘ಹುಟ್ಟು ಗುಣ ಸುಟ್ಟರೂ ಹೋಗಲ್ಲ’ ಅನ್ನುವ ಹಾಗೆ ಅವರು ಕೆಟ್ಟದ್ದನ್ನು ಮಾಡುತ್ತಾ ಹೋದರು. ಇಂಥವರ ಮಧ್ಯೆ ಯೆಹೋವನನ್ನು ಪ್ರೀತಿಸುವವರು ಯಾರಾದರೂ ಇದ್ದರಾ? ಉತ್ತರ“ಹೆಚ್ಚಿಸ್ಕೊಳ್ಳೋ ವ್ಯಕ್ತಿಯನ್ನ ದೇವರು ತಗ್ಗಿಸ್ತಾನೆ. ತಗ್ಗಿಸ್ಕೊಳ್ಳೋ ವ್ಯಕ್ತಿಯನ್ನ ದೇವರು ಮೇಲೆ ಎತ್ತುತ್ತಾನೆ.”—ಲೂಕ 18:14