ಪಾಠ 91
ಯೇಸು ಮತ್ತೆ ಜೀವ ಪಡ್ಕೊಂಡನು
ಯೇಸು ಸತ್ತ ನಂತರ, ಯೋಸೇಫನೆಂಬ ಶ್ರೀಮಂತ ವ್ಯಕ್ತಿ ಯೇಸುವಿನ ದೇಹವನ್ನು ಕಂಬದಿಂದ ಇಳಿಸಲು ಪಿಲಾತನಿಂದ ಅನುಮತಿ ಪಡೆದುಕೊಂಡನು. ಯೋಸೇಫನು ಯೇಸುವಿನ ದೇಹವನ್ನು ಉತ್ತಮ ಗುಣಮಟ್ಟದ ನಾರಿನ ಬಟ್ಟೆಯಿಂದ ಸುತ್ತಿ ಸುಗಂಧ ದ್ರವ್ಯಗಳೊಂದಿಗೆ ಹೊಸ ಸಮಾಧಿಯಲ್ಲಿ ಇಟ್ಟನು. ಸಮಾಧಿಯನ್ನು ದೊಡ್ಡ ಕಲ್ಲಿನಿಂದ ಮುಚ್ಚಿದರು. ಆಗ ಮುಖ್ಯ ಪುರೋಹಿತರು ಪಿಲಾತನಿಗೆ, ‘ಯೇಸುವಿನ ಶಿಷ್ಯರು ಬಂದು ಅವನ ದೇಹ ಕದ್ದುಕೊಂಡು ಹೋಗಿ ‘ಅವನು ಜೀವಂತ ಎದ್ದು ಬಂದಿದ್ದಾನೆ’ ಎಂದು ಹೇಳುತ್ತಾರೇನೋ ಅಂತ ನಮಗೆ ಭಯ ಆಗುತ್ತಿದೆ’ ಅಂದರು. ಆಗ ಪಿಲಾತನು ಅವರಿಗೆ, ‘ಒಂದಷ್ಟು ಸೈನಿಕರನ್ನ ಕಳಿಸಿ ಸಮಾಧಿಗೆ ಕಾವಲಿಡಿ’ ಎಂದನು.
ಮೂರು ದಿನಗಳ ನಂತರ, ಮುಂಜಾನೆ ಕೆಲವು ಸ್ತ್ರೀಯರು ಸಮಾಧಿಯ ಹತ್ತಿರ ಹೋದರು. ಆಗ ಯಾರೋ ಕಲ್ಲನ್ನು ಉರುಳಿಸಿರುವುದನ್ನು ಅವರು ನೋಡಿದರು. ಆ ಸ್ತ್ರೀಯರಿಗೆ ಸಮಾಧಿ ಒಳಗಿನಿಂದ ಒಬ್ಬ ದೇವದೂತನು, ‘ಹೆದರಬೇಡಿ. ಯೇಸುವಿಗೆ ಮತ್ತೆ ಜೀವ ಬಂದಿದೆ, ನೀವು ಹೋಗಿ ಆತನ ಶಿಷ್ಯರಿಗೆ ಗಲಿಲಾಯದಲ್ಲಿ ಆತನನ್ನ ಭೇಟಿ ಮಾಡೋಕೆ ಹೇಳಿ’ ಎಂದನು.
ತಕ್ಷಣ ಮಗ್ದಲದ ಮರಿಯಳು ಪೇತ್ರ ಮತ್ತು ಯೋಹಾನನಿಗೆ ಈ ವಿಷಯ ತಿಳಿಸಲು ಓಡಿದಳು. ಅವಳು ಅವರಿಗೆ, ‘ಯೇಸುವಿನ ದೇಹನ ಯಾರೋ ಸಮಾಧಿಯಿಂದ ತಗೊಂಡು ಹೋಗಿದ್ದಾರೆ’ ಎಂದಳು. ಪೇತ್ರ ಮತ್ತು ಯೋಹಾನ ಸಮಾಧಿಯ ಹತ್ತಿರ ಓಡಿಹೋದರು. ಸಮಾಧಿ ಖಾಲಿಯಾಗಿರುವುದನ್ನು ನೋಡಿ ಅವರು ಮನೆಗೆ ಹಿಂತಿರುಗಿ ಹೋದರು.
ಮರಿಯಳು ಪುನಃ ಸಮಾಧಿಯ ಹತ್ತಿರ ಹೋದಾಗ ಸಮಾಧಿಯೊಳಗೆ ಇಬ್ಬರು ದೇವದೂತರನ್ನು ನೋಡಿದಳು. ಅವಳು ಅವರಿಗೆ, ‘ನನ್ನ ಪ್ರಭುನ ಎಲ್ಲಿಟ್ಟಿದ್ದಾರೋ ಗೊತ್ತಿಲ್ಲ’ ಎಂದಳು. ಮರಿಯಳು ಅಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ನೋಡಿದಾಗ ಅವನನ್ನು ತೋಟಗಾರನೆಂದು ನೆನಸಿದಳು. ಅವನಿಗೆ, ‘ಅಯ್ಯಾ ನೀನು ಆತನನ್ನ ತಗೊಂಡು ಹೋಗಿದ್ರೆ ಆತನನ್ನ ಎಲ್ಲಿ ಇಟ್ಟಿದ್ಯಾ ಅಂತ ದಯವಿಟ್ಟು ಹೇಳು’ ಎಂದಳು. ಆ ವ್ಯಕ್ತಿ, “ಮರಿಯ!” ಎಂದಾಗ ಅವನು ಯೇಸು ಎಂದು ಅವಳಿಗೆ ಗೊತ್ತಾಯಿತು. ಅವಳು “ಗುರು!” ಎಂದು ಕೂಗುತ್ತಾ ಅವನನ್ನು ಅಪ್ಪಿಕೊಂಡಳು. ಯೇಸು ಮರಿಯಳಿಗೆ, ‘ನೀನು ನನ್ನ ಸಹೋದರರ ಬಳಿ ಹೋಗಿ ನನ್ನನ್ನು ನೋಡಿದೆ ಎಂದು ಹೇಳು’ ಅಂದನು. ತಕ್ಷಣ ಮರಿಯಳು ಶಿಷ್ಯರ ಹತ್ತಿರ ಓಡಿಹೋಗಿ ‘ನಾನು ಪ್ರಭುನ ನೋಡಿದೆ’ ಎಂದಳು.
ಅದೇ ದಿನ ಶಿಷ್ಯರಲ್ಲಿ ಇಬ್ಬರು ಯೆರೂಸಲೇಮಿನಿಂದ ಎಮ್ಮಾಹುವಿಗೆ ನಡೆದುಕೊಂಡು ಹೋಗುತ್ತಿದ್ದರು. ದಾರಿಯಲ್ಲಿ ಒಬ್ಬ ವ್ಯಕ್ತಿ ಅವರೊಂದಿಗೆ ಜೊತೆಗೂಡಿ ಅವರು ಯಾವ ವಿಷಯದ ಬಗ್ಗೆ ಮಾತಾಡುತ್ತಿದ್ದಾರೆಂದು ಕೇಳಿದನು. ಅವರು, ‘ಏನಾಯ್ತು ಅಂತ ನೀನು ಕೇಳಿಸ್ಕೊಂಡಿಲ್ವಾ? ಆದ್ರೆ ಮೂರು ದಿನದ ಹಿಂದೆ ಮುಖ್ಯ ಪುರೋಹಿತರು, ನಾಯಕರು ಯೇಸುಗೆ ಮರಣದಂಡನೆ ಕೊಡಿಸಿದ್ರು. ಆದರೆ ಈಗ ಕೆಲವು ಸ್ತ್ರೀಯರು ಯೇಸು ಜೀವದಿಂದ ಇದ್ದಾನೆ ಅಂತ ಹೇಳುತ್ತಿದ್ದಾರೆ’
ಅಂದರು. ಆಗ ಆ ವ್ಯಕ್ತಿ, ‘ನೀವು ಪ್ರವಾದಿಗಳನ್ನು ನಂಬುವುದಿಲ್ಲವಾ? ಕ್ರಿಸ್ತನು ಸತ್ತು ಮತ್ತೆ ಎದ್ದು ಬರ್ತಾನೆ ಎಂದು ಅವರು ಹೇಳಿದ್ದಾರಲ್ಲಾ?’ ಎಂದನು. ಅಲ್ಲದೇ ಅವನು ಅವರಿಗೆ ವಚನಗಳನ್ನು ವಿವರಿಸಿದನು. ಶಿಷ್ಯರು ಎಮ್ಮಾಹುವಿಗೆ ತಲುಪಿದಾಗ ತಮ್ಮ ಜೊತೆ ಬರುವಂತೆ ಆ ವ್ಯಕ್ತಿಗೆ ಹೇಳಿದರು. ಊಟದ ಸಮಯದಲ್ಲಿ ಆ ವ್ಯಕ್ತಿ ಪ್ರಾರ್ಥಿಸಿದಾಗ ಅದು ಯೇಸುವೇ ಎಂದು ಶಿಷ್ಯರಿಗೆ ಗೊತ್ತಾಯಿತು. ಬಳಿಕ ಯೇಸು ಅವರಿಂದ ಮರೆಯಾದನು.ತಕ್ಷಣ ಆ ಇಬ್ಬರು ಶಿಷ್ಯರು ಯೆರೂಸಲೇಮಿಗೆ ಹೋದರು. ಅಪೊಸ್ತಲರಿದ್ದ ಮನೆಗೆ ಹೋಗಿ ನಡೆದ ಸಂಗತಿಯನ್ನು ಹೇಳಿದರು. ಅವರು ಮನೆಯೊಳಗೆ ಇದ್ದಾಗ ಅಲ್ಲಿದ್ದ ಎಲ್ಲರಿಗೂ ಯೇಸು ಕಾಣಿಸಿಕೊಂಡನು. ಆರಂಭದಲ್ಲಿ ಅವರು ಅದು ಯೇಸು ಎಂದು ನಂಬಲಿಲ್ಲ. ಆಗ ಯೇಸು ಅವರಿಗೆ ‘ನನ್ನ ಕೈಕಾಲು ನೋಡಿ, ಇದು ನಾನೇ. ನನ್ನನ್ನ ಮುಟ್ಟಿನೋಡಿ. ಕ್ರಿಸ್ತನು ಸತ್ತು ಎದ್ದು ಬರ್ತಾನೆ ಎಂದು ಬರೆದಿದೆಯಲ್ಲಾ’ ಎಂದನು.
“ನಾನೇ ಆ ದಾರಿ, ಸತ್ಯ, ಜೀವ ಆಗಿದ್ದೀನಿ. ನನ್ನ ಮೂಲಕ ಅಲ್ಲದೆ ಯಾರೂ ತಂದೆ ಹತ್ರ ಬರೋಕಾಗಲ್ಲ.”—ಯೋಹಾನ 14:6