ಅಧ್ಯಾಯ 108
ದಮಸ್ಕಕ್ಕೆ ಹೋಗುವ ದಾರಿಯಲ್ಲಿ
ಲದ ಮೇಲೆ ಬಿದ್ದಿರುವವನು ಯಾರೆಂದು ನಿಮಗೆ ಗೊತ್ತೋ? ಅವನೇ ಸೌಲನು. ಸ್ತೆಫನನಿಗೆ ಕಲ್ಲೆಸೆದ ಜನರ ಮೇಲಂಗಿಗಳನ್ನು ಈ ಸೌಲನೇ ನೋಡಿಕೊಂಡನು ಎಂಬುದು ನಿಮಗೆ ನೆನಪಿರಬಹುದು. ಪ್ರಕಾಶವಾಗಿ ಹೊಳೆಯುವ ಆ ಬೆಳಕನ್ನು ನೋಡಿರಿ! ಏನು ಸಂಭವಿಸುತ್ತಾ ಇದೆ?
ಸ್ತೆಫನನು ಕೊಲ್ಲಲ್ಪಟ್ಟ ನಂತರ, ಯೇಸುವಿನ ಹಿಂಬಾಲಕರಿಗೆ ಹಿಂಸೆಕೊಡಲು ಸೌಲನು ಅವರನ್ನು ಹುಡುಕುವುದರಲ್ಲಿ ನಾಯಕತ್ವ ವಹಿಸುತ್ತಾನೆ. ಮನೆಮನೆಗಳೊಳಗೆ ನುಗ್ಗಿ ಅವರನ್ನು ಹೊರಗೆಳೆದು ಸೆರೆಮನೆಗೆ ಹಾಕುತ್ತಾನೆ. ಶಿಷ್ಯರಲ್ಲಿ ಅನೇಕರು ಬೇರೆ ನಗರಗಳಿಗೆ ಪಲಾಯನಗೈದು, ಅಲ್ಲಿ ‘ಸುವಾರ್ತೆಯನ್ನು’ ಸಾರಲಾರಂಭಿಸುತ್ತಾರೆ. ಆದರೆ ಸೌಲನು ಯೇಸುವಿನ ಶಿಷ್ಯರನ್ನು ಕಂಡುಹಿಡಿಯಲು ಬೇರೆ ನಗರಗಳಿಗೂ ಹೋಗುತ್ತಾನೆ. ಹೀಗೆ, ಅವನು ಈಗ ದಮಸ್ಕದ ದಾರಿಯಲ್ಲಿದ್ದಾನೆ. ಆದರೆ ದಾರಿಯಲ್ಲಿ ಒಂದು ಆಶ್ಚರ್ಯಕರ ಸಂಗತಿ ನಡೆಯುತ್ತದೆ.
ಫಕ್ಕನೆ ಆಕಾಶದೊಳಗಿಂದ ಒಂದು ಬೆಳಕು ಸೌಲನ ಸುತ್ತಲು ಮಿಂಚುತ್ತದೆ. ಈ ಚಿತ್ರದಲ್ಲಿ ನಾವು ನೋಡುವಂತೆ, ಅವನು ನೆಲಕ್ಕೆ ಬೀಳುತ್ತಾನೆ. ಆಗ ಒಂದು ವಾಣಿಯು ‘ಸೌಲನೇ, ಸೌಲನೇ! ನನ್ನನ್ನು ಯಾಕೆ ಹಿಂಸೆಪಡಿಸುತ್ತೀ?’ ಎಂದು ಪ್ರಶ್ನಿಸುತ್ತದೆ. ಸೌಲನೊಂದಿಗಿರುವ ಮನುಷ್ಯರು ಸಹ ಆ ಬೆಳಕನ್ನು ಕಾಣುತ್ತಾರೆ. ಮಾತ್ರವಲ್ಲ, ಆ ವಾಣಿಯ ಶಬ್ದವನ್ನು ಕೇಳುತ್ತಾರೆ. ಆದರೆ ಅದು ಹೇಳಿದ ವಿಷಯವು ಅವರಿಗೆ ಅರ್ಥವಾಗುವುದಿಲ್ಲ.
‘ಕರ್ತನೇ, ನೀನಾರು’ ಎಂದು ಕೇಳುತ್ತಾನೆ ಸೌಲ.
‘ನೀನು ಬಾಧಿಸುತ್ತಿರುವ ಯೇಸುವೇ ನಾನು’ ಎಂದನ್ನುತ್ತದೆ ಆ ವಾಣಿ. ಯೇಸು ಹೀಗೇಕೆ ಹೇಳುತ್ತಾನೆ ಗೊತ್ತಾ? ಯಾಕೆಂದರೆ ಯೇಸುವಿನ ಶಿಷ್ಯರನ್ನು ಸೌಲನು ಹಿಂಸೆಪಡಿಸುವಾಗ, ಸ್ವತಃ ತನ್ನನ್ನೇ ಹಿಂಸಿಸಿದಂತೆ ಯೇಸುವಿಗೆ ಅನಿಸುತ್ತದೆ.
ಸೌಲನು ಈಗ ಕೇಳುತ್ತಾನೆ: ‘ನಾನು ಮಾಡಬೇಕಾದದ್ದೇನು ಕರ್ತನೇ?’
‘ನೀನೆದ್ದು ದಮಸ್ಕಕ್ಕೆ ಹೋಗು. ನೀನು ಮಾಡಬೇಕಾದದ್ದು ಅಲ್ಲಿ ನಿನಗೆ ತಿಳಿಸಲ್ಪಡುವುದು’ ಎಂದು ಯೇಸು ತಿಳಿಸುತ್ತಾನೆ. ಸೌಲನು ಎದ್ದು ನಿಂತು ಕಣ್ಣು ತೆರೆಯುವಾಗ ಅವನಿಗೆ ಏನೂ ಕಾಣಿಸುವುದಿಲ್ಲ. ಅವನು ಕುರುಡನಾಗಿದ್ದಾನೆ! ಆದುದರಿಂದ ಅವನೊಂದಿಗೆ ಇದ್ದವರು ಕೈಹಿಡಿದು ಅವನನ್ನು ದಮಸ್ಕಕ್ಕೆ ಕರೆದುಕೊಂಡು ಬರುತ್ತಾರೆ.
ಯೇಸು ಈಗ ದಮಸ್ಕದಲ್ಲಿ ತನ್ನ ಶಿಷ್ಯರಲ್ಲೊಬ್ಬನಿಗೆ, ‘ಅನನೀಯನೇ, ಏಳು. ನೆಟ್ಟನೇಬೀದಿ ಎಂಬ ಬೀದಿಗೆ ಹೋಗು. ಅಲ್ಲಿ ಯೂದನ ಮನೆಗೆ ಹೋಗಿ ಸೌಲನನ್ನು ನೋಡಬೇಕೆಂದು ತಿಳಿಸು. ನನ್ನ ವಿಶೇಷ ಸೇವಕನಾಗಿ ನಾನು ಅವನನ್ನು ಆರಿಸಿಕೊಂಡಿದ್ದೇನೆ’ ಎಂದು ತಿಳಿಸುತ್ತಾನೆ.
ಯೇಸು ಹೇಳಿದಂತೆಯೇ ಅನನೀಯನು ಮಾಡುತ್ತಾನೆ. ಸೌಲನನ್ನು ಅವನು ಭೇಟಿಯಾಗಿ ಅವನ ಮೇಲೆ ಕೈಗಳನ್ನಿಟ್ಟು ‘ನಿನಗೆ ಕಣ್ಣು ಕಾಣುವಂತೆಯೂ ನೀನು ಪವಿತ್ರಾತ್ಮಭರಿತನಾಗುವಂತೆಯೂ ಕರ್ತನು ನನ್ನನ್ನು ಕಳುಹಿಸಿದ್ದಾನೆ’ ಎಂದು ಹೇಳುತ್ತಾನೆ. ಆ ಕೂಡಲೆ ಸೌಲನ ಕಣ್ಣುಗಳಿಂದ ಪರೆಗಳಂತಹ ಏನೋ ಕಳಚಿ ಬೀಳುತ್ತವೆ. ಅವನಿಗೆ ಕಣ್ಣು ಪುನಃ ಕಾಣಿಸುತ್ತದೆ.
ಅನೇಕ ದೇಶಗಳ ಜನರಿಗೆ ಸಾರುವುದಕ್ಕಾಗಿ ಸೌಲನು ಮಹತ್ತಾದ ರೀತಿಯಲ್ಲಿ ಉಪಯೋಗಿಸಲ್ಪಡುತ್ತಾನೆ. ಅವನು ನಂತರ ಅಪೊಸ್ತಲ ಪೌಲನಾಗಿ ಖ್ಯಾತನಾಗುತ್ತಾನೆ. ಅವನ ಕುರಿತು ಬಹಳ ಹೆಚ್ಚನ್ನು ನಾವು ಕಲಿಯಲಿದ್ದೇವೆ. ಆದರೆ ಅದಕ್ಕೆ ಮೊದಲು ದೇವರು ಪೇತ್ರನನ್ನು ಏನು ಮಾಡಲು ಕಳುಹಿಸುತ್ತಾನೆಂದು ನೋಡೋಣ.