ಅಧ್ಯಾಯ 94
ಅವನು ಚಿಕ್ಕ ಮಕ್ಕಳನ್ನು ಪ್ರೀತಿಸುತ್ತಾನೆ
ಯೇಸು ಇಲ್ಲಿ ಈ ಚಿಕ್ಕ ಹುಡುಗನನ್ನು ಅಪ್ಪಿಕೊಂಡಿರುವುದನ್ನು ನೋಡಿರಿ. ಚಿಕ್ಕ ಮಕ್ಕಳೆಂದರೆ ಯೇಸುವಿಗೆ ನಿಜವಾಗಿಯೂ ತುಂಬ ಇಷ್ಟವೆಂದು ಇದರಿಂದ ಹೇಳಬಹುದು. ಅದನ್ನು ನೋಡುತ್ತಾ ನಿಂತಿರುವವರು ಅವನ ಅಪೊಸ್ತಲರು. ಯೇಸು ಅವರಿಗೆ ಏನು ಹೇಳುತ್ತಿದ್ದಾನೆ? ಅದನ್ನು ನಾವು ನೋಡೋಣ.
ಯೇಸು ಮತ್ತು ಅವನ ಅಪೊಸ್ತಲರು ಈಗಷ್ಟೇ ಬಹು ದೂರ ಪ್ರಯಾಣಿಸಿ ಬಂದಿರುತ್ತಾರೆ. ದಾರಿಯಲ್ಲಿ ಅಪೊಸ್ತಲರೊಳಗೆ ಒಂದು ವಾಗ್ವಾದ ಶುರುವಾಗುತ್ತದೆ. ಆದುದರಿಂದ ಪ್ರಯಾಣದ ಬಳಿಕ ಯೇಸು ಅವರನ್ನು, ‘ನೀವು ದಾರಿಯಲ್ಲಿ ಏನು ವಾದಮಾಡುತ್ತಿದ್ದಿರಿ?’ ಎಂದು ಕೇಳುತ್ತಾನೆ. ನಿಜವೇನೆಂದರೆ, ಅವರು ಯಾವುದರ ಕುರಿತು ವಾಗ್ವಾದಮಾಡುತ್ತಿದ್ದರೆಂದು ಯೇಸುವಿಗೆ ತಿಳಿದಿತ್ತು. ಆದರೆ ಅಪೊಸ್ತಲರು ತನಗೆ ಅದನ್ನು ಹೇಳುವರೋ ಇಲ್ಲವೋ ಎಂದು ನೋಡಲು ಯೇಸು ಆ ಪ್ರಶ್ನೆ ಕೇಳುತ್ತಾನೆ.
ಆದರೆ, ಅಪೊಸ್ತಲರು ಏನೂ ಉತ್ತರ ಕೊಡುವುದಿಲ್ಲ. ಯಾಕೆಂದರೆ ದಾರಿಯಲ್ಲಿ ಅವರು ತಮ್ಮಲ್ಲಿ ಯಾರು ದೊಡ್ಡವರೆಂದು ವಾದಿಸುತ್ತಿದ್ದರು. ಕೆಲವು ಅಪೊಸ್ತಲರು ಇತರರಿಗಿಂತ ಹೆಚ್ಚು ಪ್ರಮುಖರಾಗಿರಲು ಬಯಸುತ್ತಾರೆ. ಇತರರಿಗಿಂತ ಹೆಚ್ಚಿನವರಾಗಿರಲು ಬಯಸುವುದು ಸರಿಯಲ್ಲವೆಂದು ಯೇಸು ಅವರಿಗೆ ಹೇಗೆ ಹೇಳುತ್ತಾನೆ?
ಅವನು ಆ ಚಿಕ್ಕ ಹುಡುಗನನ್ನು ಕರೆದು ಅವರೆಲ್ಲರ ಮುಂದೆ ನಿಲ್ಲಿಸಿ ಹೀಗನ್ನುತ್ತಾನೆ: ‘ಇದನ್ನು ನೀವು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ, ನೀವು ತಿರುಗಿಕೊಂಡು ಚಿಕ್ಕ ಮಕ್ಕಳಂತೆ ಆಗದೆಹೋದರೆ, ಪರಲೋಕರಾಜ್ಯದಲ್ಲಿ ಸೇರುವುದೇ ಇಲ್ಲ. ಈ ಮಗುವಿನಂತೆ ಇರುವವನೇ ದೇವರ ರಾಜ್ಯದಲ್ಲಿ ಹೆಚ್ಚಿನವನು.’ ಯೇಸು ಇದನ್ನು ಹೇಳಿದ್ದೇಕೆಂದು ನಿಮಗೆ ತಿಳಿದಿದೆಯೇ?
ಚಿಕ್ಕ ಮಕ್ಕಳು ತಾವು ಮೇಲು ಇತರರು ಕೀಳು ಅಥವಾ ತಾವು ಪ್ರಧಾನ ಇತರರು ಅಧೀನ ಎಂದು ನೆನಸುವುದಿಲ್ಲ. ಈ ರೀತಿಯಲ್ಲಿ ಅಪೊಸ್ತಲರು ಮಕ್ಕಳಂತಿರಲು ಕಲಿಯಬೇಕು. ಮತ್ತು ಹೆಚ್ಚಿನವರಾಗುವ ಇಲ್ಲವೆ ಪ್ರಧಾನರಾಗುವ ಕುರಿತು ಜಗಳ ಮಾಡಬಾರದು.
ಸಣ್ಣ ಮಕ್ಕಳೆಂದರೆ ತನಗೆಷ್ಟು ಇಷ್ಟವೆಂದು ಯೇಸು ಬೇರೆ ಸಂದರ್ಭಗಳಲ್ಲೂ ತೋರಿಸುತ್ತಾನೆ. ಹಲವು ತಿಂಗಳುಗಳಾದ ಮೇಲೆ ಯೇಸುವನ್ನು ನೋಡಲು ಕೆಲವರು ತಮ್ಮ ಮಕ್ಕಳನ್ನು ಕರೆತರುತ್ತಾರೆ. ಅಪೊಸ್ತಲರು ಅವರನ್ನು ಗದರಿಸಿ ಕಳುಹಿಸಿಬಿಡಲು ಪ್ರಯತ್ನಿಸುತ್ತಾರೆ. ಆದರೆ ಯೇಸು ತನ್ನ ಅಪೊಸ್ತಲರಿಗೆ, ‘ಮಕ್ಕಳನ್ನು ನನ್ನ ಹತ್ತಿರ ಬರಗೊಡಿಸಿರಿ, ಅವುಗಳಿಗೆ ಅಡ್ಡಿಮಾಡಬೇಡಿರಿ. ಯಾಕೆಂದರೆ ದೇವರ ರಾಜ್ಯವು ಇಂಥವರದ್ದೇ’ ಎಂದು ಅನ್ನುತ್ತಾನೆ. ಅನಂತರ ಯೇಸು ಮಕ್ಕಳನ್ನು ಅಪ್ಪಿಕೊಂಡು ಅವರನ್ನು ಆಶೀರ್ವದಿಸುತ್ತಾನೆ. ಯೇಸು ಚಿಕ್ಕ ಮಕ್ಕಳನ್ನು ಪ್ರೀತಿಸುತ್ತಾನೆಂದು ತಿಳಿಯುವುದರಿಂದ ನಮಗೆಷ್ಟು ಖಷಿಯಾಗುತ್ತದೆ ಅಲ್ಲವೇ?