ಅಧ್ಯಾಯ 100
ತೋಟದಲ್ಲಿ ಯೇಸು
ಮಾಳಿಗೆಯ ಕೋಣೆಯಿಂದ ಹೊರಟು ಯೇಸು ಮತ್ತು ಅವನ ಅಪೊಸ್ತಲರು ಈ ಗೆತ್ಸೇಮನೆ ತೋಟಕ್ಕೆ ಬರುತ್ತಾರೆ. ಅವರು ಮುಂಚೆ ಅನೇಕ ಸಲ ಇಲ್ಲಿಗೆ ಬಂದಿದ್ದರು. ಈಗ ಯೇಸು ಅವರಿಗೆ ಎಚ್ಚರವಾಗಿದ್ದು ಪ್ರಾರ್ಥಿಸುವಂತೆ ಹೇಳುತ್ತಾನೆ. ಅನಂತರ ಅವನು ತುಸು ದೂರ ಹೋಗಿ ಬೋರಲ ಬಿದ್ದು ಪ್ರಾರ್ಥಿಸುತ್ತಾನೆ.
ತರುವಾಯ ಯೇಸು ತನ್ನ ಅಪೊಸ್ತಲರ ಬಳಿಗೆ ಬರುತ್ತಾನೆ. ಅವರು ಏನು ಮಾಡುತ್ತಿದ್ದಾರೆಂದು ನೀವೆಣಿಸುತ್ತೀರಿ? ನಿದ್ದೆ ಮಾಡುತ್ತಿದ್ದಾರೆ! ಎಚ್ಚರವಾಗಿರಬೇಕೆಂದು ಮೂರು ಸಲ ಯೇಸು ಅವರಿಗೆ ಹೇಳುತ್ತಾನೆ. ಆದರೆ ಒಂದೊಂದು ಸಲ ಪ್ರಾರ್ಥನೆ ಮಾಡಿ ಹಿಂದೆ ಬಂದು ನೋಡಿದಾಗಲೂಅವರು ನಿದ್ದೆ ಮಾಡುತ್ತಿರುತ್ತಾರೆ. ಕೊನೆಯ ಸಲ ಯೇಸು ಹಿಂದಿರುಗಿದಾಗ ಅನ್ನುವುದು: ‘ಇಂಥ ಒಂದು ಸಮಯದಲ್ಲಿ ನೀವು ಹೇಗೆ ನಿದ್ದೆಹೋಗಬಲ್ಲಿರಿ? ನಾನು ಶತ್ರುಗಳ ಕೈಗೆ ಒಪ್ಪಿಸಲ್ಪಡುವ ಗಳಿಗೆ ಬಂದಿದೆ.’
ಅದೇ ಕ್ಷಣದಲ್ಲಿ ಜನರ ದೊಡ್ಡ ಗುಂಪಿನ ಗದ್ದಲವು ಕೇಳಿಸುತ್ತದೆ. ನೋಡಿರಿ! ಜನರು ಕತ್ತಿ, ದೊಣ್ಣೆಗಳೊಂದಿಗೆ ಬರುತ್ತಿದ್ದಾರೆ! ಬೆಳಕಿಗಾಗಿ ಅವರು ಪಂಜುಗಳನ್ನು ಹಿಡಿದಿದ್ದಾರೆ. ಅವರು ಹತ್ತಿರಕ್ಕೆ ಬಂದಾಗ, ಯಾರೋ ಒಬ್ಬನು ಗುಂಪಿನೊಳಗಿಂದ ಯೇಸುವಿನ ಪಕ್ಕಕ್ಕೆ ಬರುತ್ತಾನೆ. ನೀವಿಲ್ಲಿ ನೋಡುವ ಹಾಗೆ ಅವನು ಯೇಸುವಿಗೆ ಮುದ್ದಿಡುತ್ತಾನೆ. ಅವನು ಇಸ್ಕರಿಯೋತ ಯೂದನೇ! ಅವನು ಯೇಸುವಿಗೆ ಮುದ್ದಿಡುವುದೇಕೆ?
ಯೇಸು ಕೇಳುವುದು: ‘ಯೂದನೇ, ಮುದ್ದಿಟ್ಟು ನನ್ನನ್ನು ಹಿಡಿದುಕೊಡುತ್ತಿಯಾ?’ ಹೌದು, ಮುದ್ದಿಟ್ಟದ್ದು ಯೇಸುವನ್ನು ಹಿಡುಕೊಡಲು ಒಂದು ಗುರುತಾಗಿತ್ತು. ಯೂದನೊಂದಿಗಿರುವ ಈ ಜನರ ಗುಂಪು ಯಾರನ್ನು ಹಿಡಿಯಲು ಬಂದಿದ್ದರೋ ಆ ಯೇಸು ಇವನೇ ಎಂದು ಅವರಿಗೆ ಅದರಿಂದ ತಿಳಿಯುತ್ತದೆ. ಆಗ ಯೇಸುವಿನ ಶತ್ರುಗಳು ಅವನನ್ನು ಹಿಡಿಯಲು ಮುಂದೆ ಬರುತ್ತಾರೆ. ಆದರೆ ಅದನ್ನು ತಡೆಯಲಿಕ್ಕಾಗಿ ಹೋರಾಡಲು ಪೇತ್ರನು ಸಿದ್ಧನಾಗಿದ್ದಾನೆ. ತಾನು ತಂದ ಕತ್ತಿಯಿಂದ ಅವನು ತನ್ನ ಹತ್ತಿರದಲ್ಲಿದ್ದ ಮನುಷ್ಯನನ್ನು ಹೊಡೆಯುತ್ತಾನೆ. ಕತ್ತಿಯು ಮನುಷ್ಯನ ತಲೆಯನ್ನು ತುಸು ತಪ್ಪಿ ಬಲಕಿವಿಯನ್ನು ಕತ್ತರಿಸಿಬಿಡುತ್ತದೆ. ಆದರೆ ಯೇಸು ಆ ಮನುಷ್ಯನ ಕಿವಿಯನ್ನು ಮುಟ್ಟಿ ಗುಣಪಡಿಸುತ್ತಾನೆ.
ಯೇಸು ಪೇತ್ರನಿಗೆ ‘ನಿನ್ನ ಕತ್ತಿಯನ್ನು ತಿರಿಗಿ ಒರೆಯಲ್ಲಿ ಸೇರಿಸು. ನನ್ನನ್ನು ರಕ್ಷಿಸಲು ಸಾವಿರಾರು ದೇವದೂತರನ್ನು ಕಳುಹಿಸಿಕೊಡುವಂತೆ ನನ್ನ ತಂದೆಯನ್ನು ನಾನು ಕೇಳಿಕೊಳ್ಳಸಾಧ್ಯವೆಂದು ನಿನಗೆ ಗೊತ್ತಿಲ್ಲವೇ?’ ಎಂದು ಹೇಳುತ್ತಾನೆ. ಹೌದು, ಅವನು ಹಾಗೆ ಕೇಳಿಕೊಳ್ಳಬಹುದಿತ್ತು. ಹಾಗಿದ್ದರೂ ದೇವದೂತರನ್ನು ಕಳುಹಿಸಿಕೊಡುವಂತೆ ಯೇಸು ದೇವರನ್ನು ಕೇಳುವುದಿಲ್ಲ. ಯಾಕೆಂದರೆ ಶತ್ರುಗಳು ಅವನನ್ನು ಹಿಡಿಯುವ ಸಮಯವು ಬಂದಿದೆಯೆಂದು ಅವನಿಗೆ ತಿಳಿದದೆ. ಆದುದರಿಂದ ಅವರು ತನ್ನನ್ನು ಹಿಡಿದುಕೊಂಡು ಹೋಗುವಂತೆ ಬಿಟ್ಟುಕೊಡುತ್ತಾನೆ. ಈಗ ಯೇಸುವಿಗೆ ಏನಾಗುತ್ತದೆಂದು ನಾವು ನೋಡೋಣ.