ಅಧ್ಯಾಯ 69
ಪರಾಕ್ರಮಶಾಲಿಗೆ ಚಿಕ್ಕ ಹುಡುಗಿ ಸಹಾಯಮಾಡುತ್ತಾಳೆ
ಈ ಚಿಕ್ಕ ಹುಡುಗಿ ಏನು ಹೇಳುತ್ತಿದ್ದಾಳೆಂದು ನಿಮಗೆ ಗೊತ್ತೋ? ಅವಳು ಆ ಸ್ತ್ರೀಗೆ ಪ್ರವಾದಿ ಎಲೀಷನ ಕುರಿತು ಮತ್ತು ಅದ್ಭುತಕರ ವಿಷಯಗಳನ್ನು ಮಾಡಲು ಯೆಹೋವನು ಅವನಿಗೆ ನೆರವು ನೀಡುವ ಕುರಿತು ತಿಳಿಸುತ್ತಿದ್ದಾಳೆ. ಆ ಸ್ತ್ರಿಗೆ ಯೆಹೋವನ ಕುರಿತು ತಿಳಿದಿಲ್ಲ. ಯಾಕೆಂದರೆ ಅವಳು ಇಸ್ರಾಯೇಲ್ಯಳಲ್ಲ. ಹಾಗಾದರೆ ಆ ಹುಡುಗಿ ಆ ಸ್ತ್ರೀಯ ಮನೆಯಲ್ಲಿ ಏಕಿದ್ದಾಳೆ? ಉತ್ತರವನ್ನು ನೋಡೋಣ.
ಆ ಸ್ತ್ರೀ ಸಿರಿಯ ದೇಶದವಳು. ಅವಳ ಗಂಡ ಸಿರಿಯದ ಸೇನಾಧಿಪತಿಯಾದ ನಾಮಾನ. ಸಿರಿಯದವರು ಈ ಚಿಕ್ಕ ಇಸ್ರಾಯೇಲ್ಯ ಹುಡುಗಿಯನ್ನು ಸೆರೆಹಿಡಿದಿದ್ದರು. ಅವಳು ನಾಮಾನನ ಪತ್ನಿಗೆ ದಾಸಿಯಾಗುತ್ತಾಳೆ.
ಕುಷ್ಠರೋಗವೆಂದು ಕರೆಯಲ್ಪಡುವ ಒಂದು ಕೆಟ್ಟ ರೋಗ ನಾಮಾನನಿಗಿದೆ. ಈ ರೋಗವು ಒಬ್ಬ ವ್ಯಕ್ತಿಯ ದೇಹದ ಭಾಗಗಳನ್ನು ಕೊಳೆಯುವಂತೆ ಮಾಡುತ್ತದೆ. ಆದುದರಿಂದಲೇ, ಚಿತ್ರದಲ್ಲಿ ಕಾಣುವಂತೆ, ಹುಡುಗಿಯು ನಾಮಾನನ ಪತ್ನಿಗೆ ‘ನನ್ನ ಧನಿಯು ಇಸ್ರಾಯೇಲಿನಲ್ಲಿರುವ ಯೆಹೋವನ ಪ್ರವಾದಿಯ ಬಳಿಗೆ ಹೋಗುತ್ತಿದ್ದರೆ ಎಷ್ಟೋ ಒಳ್ಳೇದಾಗುತ್ತಿತ್ತು. ಅವರು ಧನಿಯನ್ನು ಕುಷ್ಠರೋಗದಿಂದ ವಾಸಿಮಾಡುತ್ತಿದ್ದರು’ ಎಂದು ಹೇಳುತ್ತಿದ್ದಾಳೆ. ಹುಡುಗಿ ಹೇಳಿದ ವಿಷಯವನ್ನು ಆಕೆ ತನ್ನ ಗಂಡನಿಗೆ ತಿಳಿಸುತ್ತಾಳೆ.
ನಾಮಾನನಿಗೆ ವಾಸಿಯಾಗಲು ಬಹಳ ಮನಸ್ಸುಂಟು. ಆದುದರಿಂದ ಅವನು ಇಸ್ರಾಯೇಲಿಗೆ ಹೋಗಲು ನಿಶ್ಚಯಿಸುತ್ತಾನೆ. ಅವನು ಅಲ್ಲಿಗೆ ಬಂದಾಗ ಎಲೀಷನ ಮನೆಗೆ ಹೋಗುತ್ತಾನೆ. ಎಲೀಷನು ತನ್ನ ಸೇವಕನನ್ನು ಕಳುಹಿಸಿ, ನಾಮಾನನು ಯೊರ್ದನ್ ಹೊಳೆಗೆ ಹೋಗಿ ಏಳು ಸಾರಿ ಸ್ನಾನಮಾಡುವಂತೆ ತಿಳಿಸುತ್ತಾನೆ. ನಾಮಾನನು ಇದನ್ನು ಕೇಳಿ ಕೋಪಗೊಂಡು, ‘ಇದೇನು? ಇಸ್ರಾಯೇಲಿನ ಎಲ್ಲಾ ಹೊಳೆಗಿಂತ ನಮ್ಮ ದೇಶದ ಹೊಳೆಗಳು ಉತ್ತಮವಾಗಿವೆಯಲ್ಲವೇ!’ ಎಂದು ಹೇಳುತ್ತಾನೆ. ಹೀಗೆ ಹೇಳಿದ ಅನಂತರ ನಾಮಾನನು ಹೊರಟು ಹೋಗುತ್ತಾನೆ.
ಆದರೆ ಅವನ ಸೇವಕರು ಹೇಳುವುದು: ‘ಸ್ವಾಮೀ, ಎಲೀಷನು ನಿಮಗೆ ಒಂದು ಕಷ್ಟದ ಕೆಲಸವನ್ನು ಹೇಳಿದ್ದರೆ ನೀವದನ್ನು ಮಾಡುತ್ತಿದ್ದಿರಲ್ಲಾ. ಈಗ, ಅವನಂದಂತೆ ಹೋಗಿ ಯಾಕೆ ಸ್ನಾನಮಾಡಬಾರದು?’ ನಾಮಾನನು ತನ್ನ ಸೇವಕರ ಈ ಮಾತನ್ನು ಒಪ್ಪಿ ಯೊರ್ದನ್ ಹೊಳೆಗೆ ಹೋಗಿ ಏಳು ಸಾರಿ ಮುಳುಗಿ ಏಳುತ್ತಾನೆ. ಕೂಡಲೆ ಅವನ ಕುಷ್ಠರೋಗವು ವಾಸಿಯಾಗುತ್ತದೆ!
ನಾಮಾನನಿಗೆ ಆಗುವ ಸಂತೋಷ ಅಷ್ಟಿಷ್ಟಲ್ಲ. ಅವನು ಎಲೀಷನ ಬಳಿಗೆ ಹಿಂದಿರುಗಿ ಹೋಗಿ ‘ಇಸ್ರಾಯೇಲಿನ ದೇವರೊಬ್ಬನೇ ಸರ್ವಲೋಕದಲ್ಲಿ ಸತ್ಯ ದೇವರೆಂದು ನನಗೀಗ ನಿಶ್ಚಯವಾಗಿ ತಿಳಿದದೆ. ಆದುದರಿಂದ ದಯವಿಟ್ಟು ಈ ಕಾಣಿಕೆಯನ್ನು ನನ್ನಿಂದ ಸ್ವೀಕರಿಸು’ ಎಂದನ್ನುತ್ತಾನೆ. ಅದಕ್ಕೆ ಎಲೀಷನು, ‘ಇಲ್ಲ, ನಾನು ಅದನ್ನು ತೆಗೆದುಕೊಳ್ಳುವುದಿಲ್ಲ’ ಎಂದು ಉತ್ತರಿಸುತ್ತಾನೆ. ಆ ಕಾಣಿಕೆಯನ್ನು ತೆಗೆದುಕೊಳ್ಳುವುದು ತಪ್ಪೆಂದು ಎಲೀಷನಿಗೆ ತಿಳಿದಿದೆ. ಯಾಕೆಂದರೆ ನಾಮಾನನನ್ನು ವಾಸಿಮಾಡಿದವನು ಯೆಹೋವನೇ. ಆದರೆ ಎಲೀಷನ ಸೇವಕನಾದ ಗೇಹಜಿಗೆ ಆ ಕಾಣಿಕೆ ತೆಗೆದುಕೊಳ್ಳಲು ತುಂಬಾ ಆಶೆ.
ಅದಕ್ಕಾಗಿ ಗೇಹಜಿ ಏನು ಮಾಡುತ್ತಾನೆ ಗೊತ್ತೇ? ನಾಮಾನನು ಹೋದನಂತರ ಗೇಹಜಿ ಅವರ ಹಿಂದೆಯೇ ಓಡುತ್ತಾನೆ. ‘ಈಗ ತಾನೇ ಕೆಲವು ಮಿತ್ರರು ಎಲೀಷನಲ್ಲಿಗೆ ಬಂದರು. ಅವರಿಗಾಗಿ ನಿನ್ನಿಂದ ಕೆಲವು ಕಾಣಿಕೆಗಳನ್ನು ತೆಗೆದುಕೊಂಡು ಬರುವಂತೆ ಎಲೀಷನು ನನ್ನನ್ನು ನಿನ್ನ ಬಳಿಗೆ ಕಳುಹಿಸಿದನು’ ಎಂದು ಹೇಳುತ್ತಾನೆ. ಇದು ಖಂಡಿತವಾಗಿಯೂ ಸುಳ್ಳು. ಆದರೆ ಅದು ಸುಳ್ಳೆಂದು ನಾಮಾನನಿಗೆ ಗೊತ್ತಿಲ್ಲ. ಆದುದರಿಂದ ಅವನು ಗೇಹಜಿಗೆ ಕೆಲವು ವಸ್ತುಗಳನ್ನು ಕೊಡುತ್ತಾನೆ.
ಗೇಹಜಿ ಎಲೀಷನ ಬಳಿಗೆ ಹಿಂದಿರುಗಿದಾಗ, ಅವನು ಮಾಡಿದ ಸಂಗತಿ ಎಲೀಷನಿಗೆ ತಿಳಿಯುತ್ತದೆ. ಅದನ್ನು ಯೆಹೋವನು ಅವನಿಗೆ ತಿಳಿಸಿದ್ದಾನೆ. ಆದುದರಿಂದ ಅವನನ್ನುವುದು: ‘ನೀನು ಈ ಕೆಟ್ಟ ಕೆಲಸವನ್ನು ಮಾಡಿದರಿಂದ ನಾಮಾನನ ಕುಷ್ಠವು ನಿನ್ನ ಮೇಲೆ ಬರುತ್ತದೆ.’ ಹಾಗೆ ಹೇಳಿದ ಕೂಡಲೆ ಗೇಹಜಿಗೆ ಕುಷ್ಠ ಹಿಡಿಯುತ್ತದೆ!
ಈ ಎಲ್ಲದರಿಂದ ನಾವೇನು ಕಲಿಯಬಲ್ಲೆವು? ಮೊದಲನೆಯದಾಗಿ, ನಾವು ಆ ಚಿಕ್ಕ ಹುಡುಗಿಯಂತಿದ್ದು, ಯೆಹೋವನ ಕುರಿತು ಮಾತಾಡಬೇಕು. ಅದು ತುಂಬ ಒಳಿತನ್ನು ಮಾಡಬಲ್ಲದು. ಎರಡನೆಯದಾಗಿ, ನಾಮಾನನು ಮೊದಲಿದ್ದ ಹಾಗೆ ನಾವು ಅಹಂಕಾರಿಗಳಾಗಿರದೆ ದೇವರ ಸೇವಕರಿಗೆ ವಿಧೇಯರಾಗಿರಬೇಕು. ಮತ್ತು ಮೂರನೆಯದಾಗಿ, ಗೇಹಜಿಯಂತೆ ನಾವು ಸುಳ್ಳು ಹೇಳಬಾರದು. ಬೈಬಲನ್ನು ಓದುವುದರಿಂದ ನಾವು ಎಷ್ಟೊಂದು ಪಾಠಗಳನ್ನು ಕಲಿಯಬಲ್ಲೆವು ಅಲ್ಲವೇ?