ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 15

ದೇವರನ್ನು ಆರಾಧಿಸುವ ಸರಿಯಾದ ರೀತಿ

ದೇವರನ್ನು ಆರಾಧಿಸುವ ಸರಿಯಾದ ರೀತಿ

1. ನಾವು ದೇವರನ್ನು ಯಾವ ರೀತಿಯಲ್ಲಿ ಆರಾಧಿಸಬೇಕು ಎಂದು ಯಾರು ಹೇಳಬೇಕು?

 ಹೆಚ್ಚಾಗಿ ಎಲ್ಲ ಧರ್ಮಗಳವರು ತಾವು ದೇವರ ಬಗ್ಗೆ ಸತ್ಯವನ್ನು ಕಲಿಸುತ್ತೇವೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅದು ಹೇಗೆ ಸಾಧ್ಯ? ಒಂದುವೇಳೆ ಎಲ್ಲರೂ ಸತ್ಯ ಕಲಿಸುತ್ತಿದ್ದರೆ ಎಲ್ಲರೂ ಒಂದೇ ವಿಷಯವನ್ನು ಕಲಿಸಬೇಕಿತ್ತು. ಆದರೆ ದೇವರು ಯಾರು, ನಾವು ದೇವರನ್ನು ಹೇಗೆ ಆರಾಧಿಸಬೇಕು ಎಂಬ ಬಗ್ಗೆ ಒಂದೊಂದು ಧರ್ಮದವರು ಒಂದೊಂದು ರೀತಿ ಕಲಿಸುತ್ತಾರೆ. ಅಂದಮೇಲೆ, ಸತ್ಯ ಏನೆಂದು ಕಂಡುಹಿಡಿಯುವುದು ಹೇಗೆ? ಅದಕ್ಕಾಗಿ ನಾವು ನಮ್ಮ ಸೃಷ್ಟಿಕರ್ತನಾದ ಯೆಹೋವ ದೇವರು ಏನು ಹೇಳುತ್ತಾನೋ ಅದನ್ನು ಕೇಳಬೇಕು. ನಾವು ಹೇಗೆ ಆರಾಧನೆ ಮಾಡಬೇಕೆಂದು ಹೇಳಲು ಆತನಿಗೆ ಮಾತ್ರ ಸಾಧ್ಯ.

2. ದೇವರನ್ನು ಆರಾಧಿಸುವ ಸರಿಯಾದ ರೀತಿ ಯಾವುದೆಂದು ನೀವು ಹೇಗೆ ಕಲಿಯಬಹುದು?

2 ಯೆಹೋವನು ನಮಗೆ ಬೈಬಲನ್ನು ಕೊಟ್ಟಿದ್ದಾನೆ. ದೇವರನ್ನು ಆರಾಧಿಸುವ ಸರಿಯಾದ ರೀತಿ ಯಾವುದೆಂದು ಅದರಲ್ಲಿ ಬರೆಸಿಟ್ಟಿದ್ದಾನೆ. ಹಾಗಾಗಿ ಬೈಬಲಿನಲ್ಲಿ ಏನಿದೆ ಎಂದು ಕಲಿಯಿರಿ. ಅದನ್ನು ಕಲಿಯಲು ಮತ್ತು ಅದರಿಂದ ಪ್ರಯೋಜನ ಪಡೆಯಲು ಯೆಹೋವ ದೇವರು ನಿಮಗೆ ಸಹಾಯ ಮಾಡುತ್ತಾನೆ. ಏಕೆಂದರೆ ಆತನಿಗೆ ನಿಮ್ಮ ಬಗ್ಗೆ ತುಂಬ ಕಾಳಜಿ ಇದೆ.—ಯೆಶಾಯ 48:17.

3. ನಾವೇನು ಮಾಡಬೇಕೆಂದು ದೇವರು ಇಷ್ಟಪಡುತ್ತಾನೆ?

3 ದೇವರು ಎಲ್ಲಾ ಧರ್ಮಗಳನ್ನು ಮೆಚ್ಚುತ್ತಾನೆ ಎಂದು ಕೆಲವರು ಹೇಳುತ್ತಾರೆ. ಆದರೆ ಅದು ನಿಜವಲ್ಲ ಎಂದು ಯೇಸುವಿನ ಮಾತುಗಳಿಂದ ಗೊತ್ತಾಗುತ್ತದೆ. ಆತನು ಹೇಳಿದ್ದು: “ನನ್ನನ್ನು ‘ಕರ್ತನೇ, ಕರ್ತನೇ’ ಎಂದು ಹೇಳುವ ಪ್ರತಿಯೊಬ್ಬನೂ ಸ್ವರ್ಗದ ರಾಜ್ಯವನ್ನು ಪ್ರವೇಶಿಸುವುದಿಲ್ಲ; ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತವನ್ನು ಮಾಡುವವನೇ ಪ್ರವೇಶಿಸುವನು.” ಹಾಗಾಗಿ ದೇವರ ಚಿತ್ತ ಅಂದರೆ ಇಷ್ಟ ಏನೆಂದು ನಾವು ಕಲಿಯಬೇಕು ಮತ್ತು ಅದರಂತೆ ನಡೆಯಬೇಕು. ಇದು ತುಂಬ ಗಂಭೀರವಾದ ವಿಷಯ. ಯಾಕೆಂದರೆ ದೇವರ ಇಷ್ಟದಂತೆ ಯಾರು ನಡೆಯುವುದಿಲ್ಲವೋ ಅವರನ್ನು ಯೇಸು ‘ಅನ್ಯಾಯದ ಕೆಲಸಗಾರರಿಗೆ’ ಅಂದರೆ ಅಪರಾಧಿಗಳಿಗೆ ಹೋಲಿಸಿದ್ದಾನೆ.

4. ದೇವರ ಇಷ್ಟದಂತೆ ನಡೆಯುವುದರ ಬಗ್ಗೆ ಯೇಸು ಏನು ಹೇಳಿದನು?

4 ದೇವರ ಇಷ್ಟದಂತೆ ನಡೆಯುವುದು ನಮಗೆ ಯಾವಾಗಲೂ ಸುಲಭವಾಗಿರುವುದಿಲ್ಲ ಎಂದು ಯೇಸುವಿಗೆ ಗೊತ್ತಿತ್ತು. ಹಾಗಾಗಿ ಆತನು, “ಇಕ್ಕಟ್ಟಾದ ಬಾಗಿಲಿನ ಮೂಲಕ ಒಳಗೆ ಹೋಗಿರಿ; ಏಕೆಂದರೆ ನಾಶನಕ್ಕೆ ನಡಿಸುವ ದಾರಿಯು ಅಗಲವಾಗಿಯೂ ವಿಶಾಲವಾಗಿಯೂ ಇದೆ ಮತ್ತು ಅದರ ಮೂಲಕ ಒಳಗೆ ಹೋಗುತ್ತಿರುವವರು ಅನೇಕರು; ಆದರೆ ಜೀವಕ್ಕೆ ನಡಿಸುವ ಬಾಗಿಲು ಇಕ್ಕಟ್ಟಾಗಿಯೂ ದಾರಿಯು ಬಿಕ್ಕಟ್ಟಾಗಿಯೂ ಇದೆ ಮತ್ತು ಅದನ್ನು ಕಂಡುಕೊಳ್ಳುವವರು ಕೊಂಚವೇ ಜನ” ಎಂದು ಹೇಳಿದನು. (ಮತ್ತಾಯ 7:13, 14) ಇಕ್ಕಟ್ಟಾದ ದಾರಿಯಲ್ಲಿ ಹೋಗುವವರು ದೇವರನ್ನು ಸರಿಯಾದ ರೀತಿಯಲ್ಲಿ ಆರಾಧಿಸುವವರು. ಅವರಿಗೆ ಸಾವಿಲ್ಲದ ಜೀವನ ಸಿಗುತ್ತದೆ. ಅಗಲವಾದ ದಾರಿಯಲ್ಲಿ ಹೋಗುವವರು ದೇವರನ್ನು ತಪ್ಪಾದ ರೀತಿಯಲ್ಲಿ ಆರಾಧಿಸುವವರು. ಅವರಿಗೆ ಮರಣ ಶಿಕ್ಷೆ ಆಗುತ್ತದೆ. ಆದರೆ ನಮ್ಮಲ್ಲಿ ಒಬ್ಬರು ಸಹ ಸಾಯುವುದು ದೇವರಿಗೆ ಇಷ್ಟವಿಲ್ಲ. ಹಾಗಾಗಿ ಆತನು ತನ್ನ ಬಗ್ಗೆ ಕಲಿಯುವ ಅವಕಾಶವನ್ನು ನಮ್ಮೆಲ್ಲರಿಗೆ ಕೊಟ್ಟಿದ್ದಾನೆ.—2 ಪೇತ್ರ 3:9.

ದೇವರನ್ನು ಆರಾಧಿಸುವ ಸರಿಯಾದ ರೀತಿ

5. ದೇವರನ್ನು ಸರಿಯಾದ ರೀತಿಯಲ್ಲಿ ಆರಾಧಿಸುವವರು ಯಾರೆಂದು ಕಂಡುಹಿಡಿಯುವುದು ಹೇಗೆ?

5 ದೇವರನ್ನು ಸರಿಯಾದ ರೀತಿಯಲ್ಲಿ ಆರಾಧಿಸುವವರನ್ನು ಕಂಡುಹಿಡಿಯಲು ಸಾಧ್ಯವಿದೆ ಎಂದು ಯೇಸು ಹೇಳಿದನು. ಆದರೆ ಹೇಗೆ? “ಪ್ರತಿಯೊಂದು ಒಳ್ಳೆಯ ಮರವು ಉತ್ತಮ ಫಲವನ್ನು ಕೊಡುತ್ತದೆ,” ಹಾಗಾಗಿ “ಅವರ ಫಲಗಳಿಂದಲೇ ನೀವು ಅವರನ್ನು ಗುರುತಿಸುವಿರಿ” ಎಂದು ಯೇಸು ಹೇಳಿದನು. (ಮತ್ತಾಯ 7:16, 17) ಅದರರ್ಥ, ಅವರು ಏನು ನಂಬುತ್ತಾರೆ ಮತ್ತು ಹೇಗೆ ನಡೆದುಕೊಳ್ಳುತ್ತಾರೆ ಎನ್ನುವುದನ್ನು ನೋಡುವ ಮೂಲಕ ನಾವು ಅವರನ್ನು ಕಂಡುಹಿಡಿಯಬಹುದು. ಆದರೆ ದೇವರನ್ನು ಸರಿಯಾದ ರೀತಿಯಲ್ಲಿ ಆರಾಧಿಸುವವರು ತಪ್ಪು ಮಾಡುವುದೇ ಇಲ್ಲ ಎನ್ನುವುದು ಯೇಸುವಿನ ಮಾತಿನ ಅರ್ಥವಾಗಿರಲಿಲ್ಲ. ಬದಲಿಗೆ ಏನು ಸರಿಯಾಗಿದೆಯೋ ಅದನ್ನು ಮಾಡಲು ಅವರು ತುಂಬ ಪ್ರಯತ್ನಿಸುತ್ತಾರೆ ಎಂದು ಆತನು ಹೇಳುತ್ತಿದ್ದನು. ಈಗ ನಾವು, ಅವರನ್ನು ಕಂಡುಹಿಡಿಯಲು ಸಹಾಯಮಾಡುವ ಕೆಲವು ಅಂಶಗಳನ್ನು ನೋಡೋಣ.

6, 7. (ಎ) ದೇವರನ್ನು ಸರಿಯಾದ ರೀತಿಯಲ್ಲಿ ಆರಾಧಿಸುವವರ ಬೋಧನೆಗೆ ಬೈಬಲೇ ಯಾಕೆ ಆಧಾರವಾಗಿರುತ್ತದೆ? (ಬಿ) ಯೇಸು ಕಲಿಸಿದ ವಿಧದಿಂದ ನಮಗೇನು ಗೊತ್ತಾಗುತ್ತದೆ?

6 ಅವರು ಕಲಿಸುವ ವಿಷಯಗಳಿಗೆ ಆಧಾರ ಬೈಬಲಾಗಿರುತ್ತದೆ. “ಇಡೀ ಶಾಸ್ತ್ರಗ್ರಂಥವು ದೇವರಿಂದ ಪ್ರೇರಿತವಾಗಿದೆ ಮತ್ತು ಬೋಧಿಸುವುದಕ್ಕೂ ಖಂಡಿಸುವುದಕ್ಕೂ ವಿಷಯಗಳನ್ನು ಸರಿಪಡಿಸುವುದಕ್ಕೂ ನೀತಿಯಲ್ಲಿ ಶಿಸ್ತುಗೊಳಿಸುವುದಕ್ಕೂ ಉಪಯುಕ್ತವಾಗಿದೆ. ಇದರಿಂದಾಗಿ ದೇವರ ಮನುಷ್ಯನು ಪೂರ್ಣ ಸಮರ್ಥನಾಗಿ ಸಕಲ ಸತ್ಕಾರ್ಯಗಳಿಗೆ ಸಂಪೂರ್ಣವಾಗಿ ಸನ್ನದ್ಧನಾಗುವನು” ಎಂದು ಬೈಬಲ್‌ ಹೇಳುತ್ತದೆ. (2 ತಿಮೊಥೆಯ 3:16, 17) ಅಪೊಸ್ತಲ ಪೌಲನು ಕೊರಿಂಥದವರಿಗೆ, ‘ನೀವು ದೇವರ ವಾಕ್ಯವನ್ನು ನಮ್ಮಿಂದ ಕೇಳಿಸಿಕೊಂಡಾಗ ಅದನ್ನು ಮನುಷ್ಯರ ವಾಕ್ಯವೆಂದು ಎಣಿಸದೆ, ದೇವರ ವಾಕ್ಯವೆಂದು ಎಣಿಸಿ ಅಂಗೀಕರಿಸಿದಿರಿ. ಅದು ನಿಜವಾಗಿಯೂ ದೇವರ ವಾಕ್ಯವೇ’ ಎಂದನು. (1 ಥೆಸಲೊನೀಕ 2:13) ಇದರಿಂದ ಗೊತ್ತಾಗುತ್ತದೆ, ದೇವರನ್ನು ಸರಿಯಾದ ರೀತಿಯಲ್ಲಿ ಆರಾಧಿಸುವವರ ಬೋಧನೆಗೆ ಆಧಾರ ಬೈಬಲೇ ಆಗಿರುತ್ತದೆ. ಮನುಷ್ಯರ ಆಲೋಚನೆಗಳಾಗಲಿ, ಪದ್ಧತಿಗಳಾಗಲಿ, ಬೇರೆ ಯಾವುದೇ ವಿಷಯಗಳಾಗಲಿ ಅಲ್ಲ.

7 ಯೇಸು ಕಲಿಸಿದ ಎಲ್ಲ ವಿಷಯಗಳಿಗೆ ಆಧಾರ ಬೈಬಲಾಗಿತ್ತು. (ಯೋಹಾನ 17:17 ಓದಿ.) ಆತನು ಜನರೊಂದಿಗೆ ಮಾತಾಡುವಾಗ ತುಂಬ ಸಲ ಬೈಬಲಿನ ವಚನಗಳನ್ನು ಉಪಯೋಗಿಸಿದನು. (ಮತ್ತಾಯ 4:4, 7, 10) ದೇವರನ್ನು ಸರಿಯಾದ ರೀತಿಯಲ್ಲಿ ಆರಾಧಿಸುವವರು ಯೇಸುವಿನ ಮಾದರಿಯನ್ನು ಅನುಕರಿಸುತ್ತಾರೆ. ಅವರು ಕಲಿಸುವ ಎಲ್ಲ ವಿಷಯಗಳಿಗೆ ಆಧಾರ ಬೈಬಲಾಗಿರುತ್ತದೆ.

8. ದೇವರನ್ನು ಆರಾಧಿಸುವುದರ ಬಗ್ಗೆ ಯೇಸು ನಮಗೆ ಏನು ಕಲಿಸಿದ್ದಾನೆ?

8 ಅವರು ಯೆಹೋವ ದೇವರನ್ನು ಮಾತ್ರ ಆರಾಧಿಸುತ್ತಾರೆ. ‘ಯೆಹೋವ ನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನು’ ಎಂದು ಕೀರ್ತನೆ 83:18 ಹೇಳುತ್ತದೆ. ನಿಜವಾದ ದೇವರು ಯಾರೆಂದು ಜನರು ತಿಳಿದುಕೊಳ್ಳಬೇಕು ಎಂದು ಯೇಸು ಬಯಸಿದನು. ಹಾಗಾಗಿಯೇ ಅವರಿಗೆ ದೇವರ ಹೆಸರನ್ನು ತಿಳಿಸಿದನು. (ಯೋಹಾನ 17:6 ಓದಿ.) “ನಿನ್ನ ದೇವರಾಗಿರುವ ಯೆಹೋವನನ್ನೇ ನೀನು ಆರಾಧಿಸಬೇಕು ಮತ್ತು ಆತನೊಬ್ಬನಿಗೇ ನೀನು ಪವಿತ್ರ ಸೇವೆಯನ್ನು ಸಲ್ಲಿಸಬೇಕು” ಎಂದು ಯೇಸು ಹೇಳಿದನು. (ಮತ್ತಾಯ 4:10) ದೇವರನ್ನು ಸರಿಯಾದ ರೀತಿಯಲ್ಲಿ ಆರಾಧಿಸುವವರು ಸಹ ಯೇಸುವಿನಂತೆಯೇ ಯೆಹೋವ ದೇವರನ್ನು ಮಾತ್ರ ಆರಾಧಿಸುತ್ತಾರೆ. ದೇವರ ಹೆಸರನ್ನು ಉಪಯೋಗಿಸುತ್ತಾರೆ, ಜನರಿಗೆ ಆ ಹೆಸರನ್ನು ಮತ್ತು ಆತನು ನಮಗಾಗಿ ಏನೆಲ್ಲ ಮಾಡಲಿದ್ದಾನೆ ಎನ್ನುವುದನ್ನು ಕಲಿಸುತ್ತಾರೆ.

9, 10. ದೇವರನ್ನು ಸರಿಯಾದ ರೀತಿಯಲ್ಲಿ ಆರಾಧಿಸುವವರು ಒಬ್ಬರಿಗೊಬ್ಬರು ಪ್ರೀತಿಯನ್ನು ಹೇಗೆ ತೋರಿಸುತ್ತಾರೆ?

9 ಒಬ್ಬರು ಇನ್ನೊಬ್ಬರನ್ನು ತುಂಬ ಪ್ರೀತಿಸುತ್ತಾರೆ. ತನ್ನ ಶಿಷ್ಯರು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂದು ಯೇಸು ಕಲಿಸಿದನು. (ಯೋಹಾನ 13:35 ಓದಿ.) ಹಾಗಾಗಿ ದೇವರನ್ನು ಸರಿಯಾದ ರೀತಿಯಲ್ಲಿ ಆರಾಧಿಸುವವರು ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ. ಅವರು ಯಾವುದೇ ದೇಶದವರಾಗಿರಲಿ, ಯಾವುದೇ ಸಂಸ್ಕೃತಿಯವರಾಗಿರಲಿ, ಶ್ರೀಮಂತರಾಗಿರಲಿ, ಬಡವರಾಗಿರಲಿ ಎಲ್ಲರೂ ಸಹೋದರ ಸಹೋದರಿಯರಂತೆ ಒಗ್ಗಟ್ಟಿನಿಂದ ಇರುತ್ತಾರೆ. (ಕೊಲೊಸ್ಸೆ 3:14) ಹಾಗಾಗಿ ಅವರು ಯುದ್ಧಗಳಲ್ಲಿ ಭಾಗವಹಿಸಿ ಬೇರೆಯವರನ್ನು ಕೊಲ್ಲುವುದಿಲ್ಲ. ಬೈಬಲ್‌ ಹೀಗೆ ಹೇಳುತ್ತದೆ: ‘ಯಾರು ದೇವರ ಮಕ್ಕಳು ಮತ್ತು ಯಾರು ಪಿಶಾಚನ ಮಕ್ಕಳು ಎನ್ನುವುದು ಈ ವಾಸ್ತವಾಂಶದಿಂದ ವ್ಯಕ್ತವಾಗುತ್ತದೆ: ನೀತಿಯನ್ನು ನಡಿಸುತ್ತಾ ಮುಂದುವರಿಯದವನು, ತನ್ನ ಸಹೋದರನನ್ನು ಪ್ರೀತಿಸದವನು ದೇವರಿಂದ ಹುಟ್ಟಿದವನಲ್ಲ. ನಮ್ಮಲ್ಲಿ ಒಬ್ಬರ ಮೇಲೊಬ್ಬರಿಗೆ ಪ್ರೀತಿ ಇರಬೇಕು. ಕೆಡುಕನಿಂದ ಹುಟ್ಟಿದವನಾಗಿದ್ದು ತನ್ನ ತಮ್ಮನನ್ನು ಕೊಂದುಹಾಕಿದ ಕಾಯಿನನಂತೆ ನಾವು ಇರಬಾರದು.’—1 ಯೋಹಾನ 3:10-12; 4:20, 21.

10 ದೇವರನ್ನು ಸರಿಯಾದ ರೀತಿಯಲ್ಲಿ ಆರಾಧಿಸುವವರು ಬೇರೆಯವರಿಗೆ ಸಹಾಯಮಾಡಲಿಕ್ಕಾಗಿ, ಪ್ರೋತ್ಸಾಹ ಕೊಡಲಿಕ್ಕಾಗಿ ತಮ್ಮ ಸಮಯ, ಶಕ್ತಿ, ಹಣ-ಸಂಪತ್ತನ್ನು ಬಳಸುತ್ತಾರೆ. (ಇಬ್ರಿಯ 10:24, 25) ಅವರು ‘ಎಲ್ಲರಿಗೂ ಒಳ್ಳೇದನ್ನು ಮಾಡುತ್ತಾರೆ.’—ಗಲಾತ್ಯ 6:10.

11. ದೇವರನ್ನು ಸರಿಯಾದ ರೀತಿಯಲ್ಲಿ ಆರಾಧಿಸುವವರು ಯೇಸುವಿನ ಮೂಲಕ ಮಾತ್ರ ರಕ್ಷಣೆ ಸಿಗುತ್ತದೆಂದು ಏಕೆ ನಂಬುತ್ತಾರೆ?

11 ಯೇಸು ಕ್ರಿಸ್ತನ ಮೂಲಕ ಮಾತ್ರ ರಕ್ಷಣೆ ಸಿಗುತ್ತದೆಂದು ಅವರು ನಂಬುತ್ತಾರೆ. “ಬೇರೆ ಯಾರಿಂದಲೂ ರಕ್ಷಣೆಯು ದೊರಕುವುದಿಲ್ಲ; ಆ ಹೆಸರಿನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರಲ್ಲಿ ಕೊಡಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಾವು ರಕ್ಷಣೆಯನ್ನು ಹೊಂದಸಾಧ್ಯವಿಲ್ಲ” ಎಂದು ಬೈಬಲ್‌ ಹೇಳುತ್ತದೆ. (ಅಪೊಸ್ತಲರ ಕಾರ್ಯಗಳು 4:12) ನಾವು 5⁠ನೇ ಅಧ್ಯಾಯದಲ್ಲಿ ಕಲಿತಂತೆ, ಯೆಹೋವನು ಯೇಸುವನ್ನು ಭೂಮಿಗೆ ಕಳುಹಿಸಿದನು ಮತ್ತು ಆತನ ಜೀವವನ್ನು ನಮಗಾಗಿ ವಿಮೋಚನಾ ಮೌಲ್ಯವಾಗಿ ಕೊಟ್ಟನು. (ಮತ್ತಾಯ 20:28) ಯೆಹೋವನು ಯೇಸುವನ್ನು ತನ್ನ ರಾಜ್ಯದ ರಾಜನಾಗಿ ಮಾಡಿದ್ದಾನೆ. ಬೇಗನೆ ಯೇಸು ಈ ಭೂಮಿಯನ್ನು ಆಳಲಿದ್ದಾನೆ. ಹಾಗಾಗಿ ಬೈಬಲ್‌ ಹೇಳುವಂತೆ, ನಮಗೆ ಸಾವಿಲ್ಲದ ಜೀವನ ಸಿಗಬೇಕಾದರೆ ನಾವು ಯೇಸುವಿನ ಮಾತಿಗೆ ಕಿವಿಗೊಡಬೇಕು.ಯೋಹಾನ 3:36 ಓದಿ.

12. ಯೇಸುವಿನ ಹಿಂಬಾಲಕರು ರಾಜಕೀಯ ವಿಷಯಗಳಲ್ಲಿ ಯಾಕೆ ಒಳಗೂಡುವುದಿಲ್ಲ?

12 ಅವರು ರಾಜಕೀಯ ವಿಷಯಗಳಲ್ಲಿ ಒಳಗೂಡುವುದಿಲ್ಲ. ಯೇಸು ಕೂಡ ರಾಜಕೀಯ ವಿಷಯಗಳಲ್ಲಿ ಒಳಗೂಡಲಿಲ್ಲ. ಆತನನ್ನು ವಿಚಾರಣೆ ಮಾಡುತ್ತಿದ್ದಾಗ ರೋಮನ್‌ ಅಧಿಕಾರಿಯಾದ ಪಿಲಾತನಿಗೆ ಆತನು ಹೀಗೆ ಹೇಳಿದನು: “ನನ್ನ ರಾಜ್ಯವು ಈ ಲೋಕದ ಭಾಗವಾಗಿಲ್ಲ.” (ಯೋಹಾನ 18:36 ಓದಿ.) ಯೇಸುವಿನಂತೆಯೇ ಆತನ ಹಿಂಬಾಲಕರು ಸಹ ತಮ್ಮ ಬೆಂಬಲ, ನಿಷ್ಠೆಯನ್ನು ಸ್ವರ್ಗದಲ್ಲಿರುವ ದೇವರ ಸರ್ಕಾರಕ್ಕೆ ಮಾತ್ರ ಕೊಡುತ್ತಾರೆ. ಹಾಗಾಗಿ ಅವರು ಎಲ್ಲೇ ಜೀವಿಸಿದರೂ ರಾಜಕೀಯ ವಿಷಯಗಳಲ್ಲಿ ಕೈಹಾಕುವುದಿಲ್ಲ. ಆದರೆ ಅವರು ಬೈಬಲ್‌ ಹೇಳುವಂತೆ “ಮೇಲಧಿಕಾರಿಗಳಿಗೆ” ಅಂದರೆ ಸರ್ಕಾರಗಳಿಗೆ ವಿಧೇಯತೆ ತೋರಿಸುತ್ತಾರೆ. (ರೋಮನ್ನರಿಗೆ 13:1) ಹಾಗಾಗಿ ತಾವು ವಾಸಿಸುವ ದೇಶದ ನಿಯಮಗಳನ್ನು ಅವರು ಪಾಲಿಸುತ್ತಾರೆ. ಒಂದುವೇಳೆ ಸರ್ಕಾರದ ನಿಯಮವು ದೇವರ ನಿಯಮಕ್ಕೆ ವಿರುದ್ಧವಾಗಿರುವಲ್ಲಿ ಯೇಸುವಿನ ಶಿಷ್ಯರಂತೆ ‘ಮನುಷ್ಯರಿಗಿಂತ ಹೆಚ್ಚಾಗಿ ಪ್ರಭುವಾಗಿರುವ ದೇವರಿಗೆ ವಿಧೇಯರಾಗುತ್ತಾರೆ.’—ಅಪೊಸ್ತಲರ ಕಾರ್ಯಗಳು 5:29; ಮಾರ್ಕ 12:17.

13. ದೇವರನ್ನು ಸರಿಯಾದ ರೀತಿಯಲ್ಲಿ ಆರಾಧಿಸುವವರು ಯಾವುದರ ಬಗ್ಗೆ ಸಾರುತ್ತಾರೆ?

13 ಈ ಪ್ರಪಂಚದಲ್ಲಿರುವ ಸಮಸ್ಯೆಗಳನ್ನು ತೆಗೆದುಹಾಕಲು ದೇವರ ರಾಜ್ಯಕ್ಕೆ ಮಾತ್ರ ಸಾಧ್ಯ ಎಂದು ಅವರು ನಂಬುತ್ತಾರೆ. ‘ದೇವರ ರಾಜ್ಯದ ಸುವಾರ್ತೆಯನ್ನು’ ಭೂಮಿಯಲ್ಲೆಲ್ಲ ಸಾರಲಾಗುವುದು ಎಂದು ಯೇಸು ಹೇಳಿದ್ದನು. (ಮತ್ತಾಯ 24:14 ಓದಿ.) ದೇವರ ರಾಜ್ಯವು ಮನುಷ್ಯರಿಗಾಗಿ ಏನು ಮಾಡಲಿದೆಯೋ ಅದನ್ನು ಮನುಷ್ಯನ ಯಾವ ಸರ್ಕಾರವು ಸಹ ಮಾಡಲು ಸಾಧ್ಯವಿಲ್ಲ. (ಕೀರ್ತನೆ 146:3) ಹಾಗಾಗಿಯೇ ಯೇಸು ತನ್ನ ಹಿಂಬಾಲಕರಿಗೆ ‘ದೇವರ ರಾಜ್ಯವು ಬರಲಿ. ದೇವರ ಚಿತ್ತವು ಸ್ವರ್ಗದಲ್ಲಿ ನೆರವೇರುವ ಪ್ರಕಾರ ಭೂಮಿಯಲ್ಲಿಯೂ ನೆರವೇರಲಿ’ ಎಂದು ಪ್ರಾರ್ಥಿಸಲು ಕಲಿಸಿದನು. (ಮತ್ತಾಯ 6:10) ದೇವರ ರಾಜ್ಯವು ಮನುಷ್ಯರ ಸರ್ಕಾರಗಳನ್ನೆಲ್ಲ ನಾಶಮಾಡಿ ಅದೊಂದೇ “ಶಾಶ್ವತವಾಗಿ ನಿಲ್ಲುವದು” ಎಂದು ಬೈಬಲ್‌ ಹೇಳುತ್ತದೆ.—ದಾನಿಯೇಲ 2:44.

14. ದೇವರನ್ನು ಸರಿಯಾದ ರೀತಿಯಲ್ಲಿ ಆರಾಧಿಸುತ್ತಿರುವವರು ಯಾರು ಎಂದು ನಿಮಗನಿಸುತ್ತದೆ?

14 ಈಗ ಹೇಳಿ, ಯಾರ ಬೋಧನೆಗಳಿಗೆ ಬೈಬಲೇ ಆಧಾರವಾಗಿದೆ? ಯಾರು ದೇವರ ಹೆಸರಿನ ಬಗ್ಗೆ ಬೇರೆಯವರಿಗೆ ತಿಳಿಸುತ್ತಾರೆ? ಯಾರು ಬೇರೆಯವರಿಗೆ ನಿಜವಾದ ಪ್ರೀತಿ ತೋರಿಸುತ್ತಾರೆ? ನಮ್ಮನ್ನು ರಕ್ಷಿಸಲಿಕ್ಕಾಗಿ ದೇವರು ಯೇಸುವನ್ನು ಭೂಮಿಗೆ ಕಳುಹಿಸಿದನೆಂದು ಯಾರು ನಂಬುತ್ತಾರೆ? ಯಾರು ರಾಜಕೀಯ ವಿಷಯಗಳಲ್ಲಿ ಒಳಗೂಡುವುದಿಲ್ಲ? ದೇವರ ರಾಜ್ಯ ಮಾತ್ರ ಮನುಷ್ಯರ ಸಮಸ್ಯೆಗಳನ್ನು ಪರಿಹಾರ ಮಾಡುತ್ತದೆಂದು ಯಾರು ಜನರಿಗೆ ಕಲಿಸುತ್ತಿದ್ದಾರೆ? ಯೆಹೋವನ ಸಾಕ್ಷಿಗಳು ಮಾತ್ರ.—ಯೆಶಾಯ 43:10-12.

ನೀವೇನು ಮಾಡುತ್ತೀರಿ?

15. ನಾವು ಮಾಡುವ ಆರಾಧನೆಯನ್ನು ದೇವರು ಮೆಚ್ಚಬೇಕಾದರೆ ಏನು ಮಾಡಬೇಕು?

15 ದೇವರಿದ್ದಾನೆ ಎಂದು ನಂಬಿದರಷ್ಟೇ ಸಾಲದು. ದೆವ್ವಗಳು ಸಹ ದೇವರಿದ್ದಾನೆಂದು ನಂಬುತ್ತವೆ. ಆದರೆ ಅವು ದೇವರ ಮಾತನ್ನು ಕೇಳುವುದಿಲ್ಲ. (ಯಾಕೋಬ 2:19) ನಾವು ಹಾಗಿರಬಾರದು. ನಾವು ಮಾಡುವ ಆರಾಧನೆಯನ್ನು ದೇವರು ಮೆಚ್ಚಬೇಕಾದರೆ ದೇವರಿದ್ದಾನೆ ಎಂದು ನಂಬುವುದರ ಜೊತೆಗೆ ಆತನು ಹೇಳುವ ಪ್ರಕಾರ ನಡೆಯಬೇಕು.

16. ನಾವೇಕೆ ತಪ್ಪಾದ ಆರಾಧನೆಯನ್ನು ಬಿಟ್ಟುಬಿಡಬೇಕು?

16 ನಾವು ಇನ್ನೊಂದು ವಿಷಯವನ್ನು ಸಹ ಮಾಡಬೇಕು. ತಪ್ಪಾದ ಆರಾಧನೆಯನ್ನು ಬಿಟ್ಟುಬಿಡಬೇಕು. ‘ಅದರ ಮಧ್ಯದೊಳಗಿಂದ ಹೊರಟು ಬನ್ನಿ, ಶುದ್ಧರಾಗಿರಿ!’ ಎಂದು ದೇವರು ಪ್ರವಾದಿ ಯೆಶಾಯನ ಮೂಲಕ ಹೇಳಿದನು. (ಯೆಶಾಯ 52:11; 2 ಕೊರಿಂಥ 6:17) ಹಾಗಾಗಿ ತಪ್ಪಾದ ಆರಾಧನೆಗೆ ಸಂಬಂಧಪಟ್ಟ ಎಲ್ಲಾ ವಿಷಯದಿಂದ ನಾವು ದೂರವಿರಬೇಕು.

17, 18. (ಎ) “ಮಹಾ ಬಾಬೆಲ್‌” ಎಂದರೇನು? (ಬಿ) ಅದನ್ನು ತಕ್ಷಣ ಬಿಟ್ಟು ಬರಬೇಕು ಏಕೆ?

17 ಯಾವುದು ತಪ್ಪಾದ ಆರಾಧನೆ? ಬೈಬಲಿನಲ್ಲಿ ಹೇಳಿರುವುದಕ್ಕೆ ವಿರುದ್ಧವಾದ ಎಲ್ಲ ಆರಾಧನೆಗಳು ತಪ್ಪಾದ ಆರಾಧನೆಗಳೇ. ಇಂಥ ಆರಾಧನೆಯನ್ನು ಮಾಡುವ ಎಲ್ಲ ಧರ್ಮಗಳನ್ನು ಬೈಬಲಿನಲ್ಲಿ “ಮಹಾ ಬಾಬೆಲ್‌” ಎಂದು ಕರೆಯಲಾಗಿದೆ. (ಪ್ರಕಟನೆ 17:5) ಯಾಕೆ? ಯಾಕೆಂದರೆ ನೋಹನ ಕಾಲದ ಜಲಪ್ರಳಯದ ನಂತರ ತಪ್ಪಾದ ಧಾರ್ಮಿಕ ಬೋಧನೆಗಳು ಶುರುವಾಗಿದ್ದೇ ಬಾಬೆಲ್‌ ಎಂಬ ಪಟ್ಟಣದಲ್ಲಿ. ಅಲ್ಲಿಂದ ಈ ಬೋಧನೆಗಳು ಇಡೀ ಪ್ರಪಂಚಕ್ಕೆ ಹರಡಿದವು. ಉದಾಹರಣೆಗೆ, ಬಾಬೆಲಿನಲ್ಲಿದ್ದ ಜನರು ತ್ರಿಯೇಕವನ್ನು ಅಂದರೆ ‘ಮೂವರು ಸೇರಿ ಒಬ್ಬ ದೇವರು’ ಎಂದು ನಂಬುತ್ತಿದ್ದರು. ಈಗಲೂ ತುಂಬ ಧರ್ಮಗಳಲ್ಲಿ ಇದನ್ನೇ ಕಲಿಸುತ್ತಾರೆ. ಆದರೆ ಬೈಬಲಿನಲ್ಲಿರುವುದೇ ಬೇರೆ. ದೇವರು ಒಬ್ಬನೇ. ಆತನ ಹೆಸರು ಯೆಹೋವ. ದೇವರ ಮಗ ಯೇಸು ಎಂದು ಬೈಬಲ್‌ ತಿಳಿಸುತ್ತದೆ. (ಯೋಹಾನ 17:3) ಬಾಬೆಲಿನ ಜನರಲ್ಲಿ ಇನ್ನೊಂದು ನಂಬಿಕೆ ಸಹ ಇತ್ತು. ಒಬ್ಬ ವ್ಯಕ್ತಿ ಸತ್ತ ಮೇಲೆ ಅವನ ಆತ್ಮ ಬದುಕಿ ಉಳಿಯುತ್ತದೆ ಮತ್ತು ಅದು ನರಕದಲ್ಲಿ ಯಾತನೆಯನ್ನು ಸಹ ಅನುಭವಿಸಬಹುದು ಎಂದು ನಂಬುತ್ತಿದ್ದರು. ಆದರೆ ಅದು ಸುಳ್ಳು.—ಟಿಪ್ಪಣಿ 14⁠ನ್ನು ಮತ್ತು ಟಿಪ್ಪಣಿ 17⁠ನ್ನು ನೋಡಿ.

18 ತಪ್ಪಾದ ಆರಾಧನೆ ಮಾಡುವ ಎಲ್ಲ ಧರ್ಮಗಳನ್ನು ನಾಶಮಾಡುತ್ತೇನೆಂದು ದೇವರು ಈಗಾಗಲೇ ಹೇಳಿದ್ದಾನೆ. (ಪ್ರಕಟನೆ 18:8) ಹಾಗಾಗಿ ತಕ್ಷಣ ನೀವು ಅವುಗಳನ್ನು ಬಿಟ್ಟು ಬರಬೇಕು. ಸಮಯ ಮೀರುವುದರೊಳಗೆ ನೀವು ಹಾಗೆ ಮಾಡಬೇಕು ಎನ್ನುವುದೇ ಯೆಹೋವ ದೇವರ ಇಷ್ಟ.—ಪ್ರಕಟನೆ 18:4.

ನೀವು ಯೆಹೋವನ ಆರಾಧಕರಾಗಲು ನಿರ್ಧರಿಸಿದಾಗ ಪ್ರಪಂಚದಾದ್ಯಂತ ನೆಲೆಸಿರುವ ಒಂದು ದೊಡ್ಡ ಕುಟುಂಬದ ಭಾಗವಾಗುತ್ತೀರಿ

19. ಯೆಹೋವನನ್ನು ಆರಾಧಿಸುವ ನಿರ್ಧಾರ ಮಾಡಿದರೆ ಆತನು ನಿಮ್ಮನ್ನು ಹೇಗೆ ಕಾಪಾಡುತ್ತಾನೆ?

19 ನೀವು ತಪ್ಪಾದ ಆರಾಧನೆಯನ್ನು ಬಿಟ್ಟು ಯೆಹೋವನನ್ನು ಆರಾಧಿಸುವ ನಿರ್ಧಾರ ಮಾಡಿದಾಗ ನಿಮ್ಮ ಕುಟುಂಬದಲ್ಲಿ ಅಥವಾ ನಿಮ್ಮ ಸ್ನೇಹಿತರಲ್ಲಿ ಕೆಲವರಿಗೆ ನೀವು ಯಾಕೆ ಹಾಗೆ ಮಾಡುತ್ತಿದ್ದೀರೆಂದು ಅರ್ಥವಾಗದೇ ಇರಬಹುದು. ಅವರು ನಿಮಗೆ ತೊಂದರೆಯನ್ನು ಸಹ ಕೊಡಬಹುದು. ಆದರೆ ಯೆಹೋವ ದೇವರು ನಿಮ್ಮೊಂದಿಗಿದ್ದಾನೆ. ಆತನು ಯಾವತ್ತೂ ನಿಮ್ಮ ಕೈಬಿಡುವುದಿಲ್ಲ. ಅಷ್ಟೇ ಅಲ್ಲ, ಪ್ರಪಂಚದಾದ್ಯಂತ ನೆಲೆಸಿರುವ ಒಂದು ದೊಡ್ಡ ಕುಟುಂಬದ ಭಾಗ ನೀವಾಗುತ್ತೀರಿ. ಅವರು ನಿಮ್ಮನ್ನು ತುಂಬ ಪ್ರೀತಿಸುತ್ತಾರೆ. ಮಾತ್ರವಲ್ಲ, ಮುಂದೆ ಸಾವಿಲ್ಲದೆ ಜೀವಿಸುವ ಅವಕಾಶ ನಿಮಗೆ ಸಿಗುತ್ತದೆ. (ಮಾರ್ಕ 10:28-30) ಯಾರಿಗೆ ಗೊತ್ತು, ಈಗ ನಿಮ್ಮನ್ನು ವಿರೋಧಿಸುತ್ತಿರುವವರೇ ಮುಂದೆ ಒಂದು ದಿನ ಬೈಬಲನ್ನು ಕಲಿಯಲು ಶುರು ಮಾಡಬಹುದು.

20. ಯೆಹೋವನನ್ನು ಸರಿಯಾದ ರೀತಿಯಲ್ಲಿ ಆರಾಧಿಸುವ ನಿರ್ಣಯವನ್ನು ನೀವು ಈಗಲೇ ಮಾಡಬೇಕು ಏಕೆ?

20 ದೇವರು ಬೇಗನೆ ಭೂಮಿಯಲ್ಲಿರುವ ಕೆಟ್ಟದ್ದನ್ನೆಲ್ಲ ತೆಗೆದುಹಾಕಿ ತನ್ನ ಸರ್ಕಾರವು ಈ ಭೂಮಿಯನ್ನು ಆಳುವಂತೆ ಮಾಡುತ್ತಾನೆ. (2 ಪೇತ್ರ 3:9, 13) ಆಗ ಪರಿಸ್ಥಿತಿ ಎಷ್ಟು ಚೆನ್ನಾಗಿರುತ್ತದೆಂದು ಊಹಿಸಿ ನೋಡಿ. ಎಲ್ಲರೂ ಯೆಹೋವ ದೇವರನ್ನೇ, ಆತನು ಬಯಸುವಂಥ ರೀತಿಯಲ್ಲೇ ಆರಾಧಿಸುತ್ತಾರೆ. ಹಾಗಾಗಿ ನೀವು ತಡ ಮಾಡಲೇಬೇಡಿ. ಯೆಹೋವ ದೇವರನ್ನು ಸರಿಯಾದ ರೀತಿಯಲ್ಲಿ ಆರಾಧಿಸುವ ನಿರ್ಣಯವನ್ನು ಈಗಲೇ ಮಾಡಿ!