ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 13

ಜೀವವನ್ನು ಅಮೂಲ್ಯವಾಗಿ ಕಾಣಿರಿ

ಜೀವವನ್ನು ಅಮೂಲ್ಯವಾಗಿ ಕಾಣಿರಿ

1. ನಮಗೆ ಜೀವ ಕೊಟ್ಟವನು ಯಾರು?

 ಯೆಹೋವನು ‘ಜೀವಸ್ವರೂಪನಾದ ದೇವರು.’ (ಯೆರೆಮೀಯ 10:10, ಪವಿತ್ರ ಗ್ರಂಥ ಬೈಬಲ್‌) ಆತನು ನಮ್ಮ ಸೃಷ್ಟಿಕರ್ತನು ಅಂದರೆ ನಮಗೆ ಜೀವ ಕೊಟ್ಟವನು. ಆದುದರಿಂದಲೇ ಬೈಬಲಿನಲ್ಲಿ, “ಎಲ್ಲವನ್ನೂ ನೀನೇ ಸೃಷ್ಟಿಸಿದಿ ಮತ್ತು ನಿನ್ನ ಚಿತ್ತದಿಂದಲೇ ಅವು ಅಸ್ತಿತ್ವಕ್ಕೆ ಬಂದವು ಹಾಗೂ ಸೃಷ್ಟಿಸಲ್ಪಟ್ಟವು” ಎಂದು ಹೇಳಲಾಗಿದೆ. (ಪ್ರಕಟನೆ 4:11) ದೇವರು ನಮಗೆ ಜೀವವೆಂಬ ಅಮೂಲ್ಯ ಉಡುಗೊರೆಯನ್ನು ಕೊಟ್ಟಿದ್ದಾನೆ. ನಾವು ಜೀವಿಸಬೇಕೆಂಬುದು ಆತನ ಆಸೆ.ಕೀರ್ತನೆ 36:9 ಓದಿ.

2. ನಾವು ಸಂತೋಷದಿಂದ ಬದುಕಬೇಕಾದರೆ ಏನು ಮಾಡಬೇಕು?

2 ದೇವರು ನಮಗೆ ಜೀವವನ್ನಷ್ಟೇ ಅಲ್ಲ, ಆಹಾರವನ್ನು, ನೀರನ್ನು ಮತ್ತು ನಾವು ಜೀವಂತವಾಗಿರಲು ಬೇಕಾದ ಎಲ್ಲವನ್ನೂ ಕೊಟ್ಟಿದ್ದಾನೆ. (ಅಪೊಸ್ತಲರ ಕಾರ್ಯಗಳು 17:28) ನಾವು ಸಂತೋಷದಿಂದ ಬದುಕಬೇಕು ಎನ್ನುವುದು ಆತನ ಆಸೆ. (ಅಪೊಸ್ತಲರ ಕಾರ್ಯಗಳು 14:15-17) ಹಾಗೆ ಸಂತೋಷದಿಂದ ಬದುಕಬೇಕಾದರೆ ನಾವು ದೇವರು ಹೇಳುವ ಪ್ರಕಾರ ನಡೆಯಬೇಕು.—ಯೆಶಾಯ 48:17, 18.

ದೇವರು ನಮ್ಮ ಜೀವಕ್ಕೆ ಬೆಲೆ ಕೊಡುತ್ತಾನಾ?

3. ಹೇಬೆಲನನ್ನು ಕೊಂದ ಕಾಯಿನನಿಗೆ ದೇವರು ಏನು ಮಾಡಿದನು?

3 ನಮ್ಮೆಲ್ಲರ ಜೀವವನ್ನು ದೇವರು ತುಂಬ ಅಮೂಲ್ಯವಾಗಿ ಕಾಣುತ್ತಾನೆ. ಬೈಬಲಿನಲ್ಲಿರುವ ಈ ಘಟನೆಯಿಂದ ಇದು ನಮಗೆ ಗೊತ್ತಾಗುತ್ತದೆ. ಒಮ್ಮೆ ಆದಾಮ ಮತ್ತು ಹವ್ವಳ ಮಗ ಕಾಯಿನನಿಗೆ ತನ್ನ ತಮ್ಮನಾದ ಹೇಬೆಲನ ಮೇಲೆ ತುಂಬ ಕೋಪ ಬಂತು. ಆಗ ದೇವರು ಕಾಯಿನನಿಗೆ ಕೋಪಕ್ಕೆ ಕಡಿವಾಣ ಹಾಕುವಂತೆ ಬುದ್ಧಿಹೇಳಿದನು. ಆದರೆ ಕಾಯಿನನು ದೇವರ ಮಾತನ್ನು ಕೇಳಲಿಲ್ಲ. ತಮ್ಮನ ಮೇಲೆ ಎಷ್ಟು ಕೋಪಗೊಂಡನೆಂದರೆ ‘ಅವನನ್ನು ಕೊಂದೇ ಬಿಟ್ಟನು.’ (ಆದಿಕಾಂಡ 4:3-8) ಇದನ್ನು ನೋಡಿ ಯೆಹೋವ ದೇವರು ಸುಮ್ಮನಿರಲಿಲ್ಲ. ಹೇಬೆಲನ ಜೀವ ತೆಗೆದದ್ದಕ್ಕಾಗಿ ಕಾಯಿನನಿಗೆ ಶಿಕ್ಷೆ ಕೊಟ್ಟನು. (ಆದಿಕಾಂಡ 4:9-11) ಈ ಕೋಪ, ದ್ವೇಷ ತುಂಬ ಅಪಾಯಕಾರಿ. ಅವು ನಮ್ಮನ್ನು ಕ್ರೂರಿಗಳನ್ನಾಗಿ ಮಾಡುತ್ತವೆ. ನಾವು ಕ್ರೂರಿಗಳಾದರೆ ಸಾವಿಲ್ಲದೆ ಜೀವಿಸುವ ಅವಕಾಶ ನಮ್ಮ ಕೈತಪ್ಪಿ ಹೋಗುತ್ತದೆ. (1 ಯೋಹಾನ 3:15 ಓದಿ.) ನಾವು ದೇವರನ್ನು ಮೆಚ್ಚಿಸಬೇಕಾದರೆ ಎಲ್ಲಾ ಜನರನ್ನು ಪ್ರೀತಿಸಬೇಕು.—1 ಯೋಹಾನ 3:11, 12.

4. “ನರಹತ್ಯಮಾಡಬಾರದು” ಎಂಬ ಆಜ್ಞೆಯಿಂದ ದೇವರ ಬಗ್ಗೆ ನಮಗೆ ಏನು ಗೊತ್ತಾಗುತ್ತದೆ?

4 ಕಾಯಿನನಿಗೆ ಶಿಕ್ಷೆ ಕೊಟ್ಟು ಸಾವಿರಾರು ವರ್ಷಗಳಾದ ಮೇಲೂ ಯೆಹೋವ ದೇವರು ಜೀವವನ್ನು ಅಮೂಲ್ಯವಾಗಿಯೇ ಕಾಣುತ್ತಿದ್ದನು. ಆತನು ಮೋಶೆಗೆ ಕೊಟ್ಟ ಹತ್ತು ಆಜ್ಞೆಗಳಿಂದ ಇದು ಗೊತ್ತಾಗುತ್ತದೆ. ಅದರಲ್ಲಿ ಒಂದು ಆಜ್ಞೆ “ನರಹತ್ಯಮಾಡಬಾರದು” ಎಂದಾಗಿತ್ತು. (ಧರ್ಮೋಪದೇಶಕಾಂಡ 5:17) ಯಾರಾದರೂ ಬೇಕುಬೇಕೆಂದೇ ಇನ್ನೊಬ್ಬನನ್ನು ಕೊಂದರೆ ಆ ಕೊಲೆಗಾರನನ್ನು ಕೊಲ್ಲಬೇಕು ಎನ್ನುವುದು ದೇವರ ಆಜ್ಞೆಯಾಗಿತ್ತು.

5. ಭ್ರೂಣಹತ್ಯೆಯ ಬಗ್ಗೆ ದೇವರಿಗೆ ಹೇಗನಿಸುತ್ತದೆ?

5 ಭ್ರೂಣಹತ್ಯೆಯ ಬಗ್ಗೆ ದೇವರಿಗೆ ಹೇಗನಿಸುತ್ತದೆ? ಗರ್ಭದಲ್ಲಿರುವ ಮಗುವಿನ ಜೀವ ಸಹ ಯೆಹೋವ ದೇವರಿಗೆ ತುಂಬ ಅಮೂಲ್ಯ. ಆದ್ದರಿಂದಲೇ ದೇವರು ಇಸ್ರಾಯೇಲ್ಯರಿಗೆ ಈ ಆಜ್ಞೆ ಕೊಟ್ಟನು: “ಇಬ್ಬರು ಜಗಳವಾಡುತ್ತಿರುವಾಗ ಗರ್ಭಿಣಿ ಹೆಂಗಸಿಗೆ ಏಟು ಬಿದ್ದು ದಿನಗಳು ತುಂಬುವ ಮೊದಲೇ ಮಗುವಿನ ಜನನವಾದರೆ ಮತ್ತು ಬೇರೆ ಯಾವ ಹಾನಿಯೂ ಆಗದಿದ್ದರೆ ಹೆಂಗಸಿನ ಗಂಡನು . . . ಎಷ್ಟು ಹಣವನ್ನು ಗೊತ್ತುಮಾಡುತ್ತಾನೋ ಹೊಡೆದವನು ಅಷ್ಟನ್ನು ಕೊಡಬೇಕು. ಮಗುವಿನ ಪ್ರಾಣಕ್ಕೆ ಹಾನಿಯಾದರೆ ಪ್ರಾಣಕ್ಕೆ ಪ್ರತಿಯಾಗಿ ಪ್ರಾಣವನ್ನು ಕೊಡಬೇಕು.” (ವಿಮೋಚನಕಾಂಡ 21:22, 23NW; ಕೀರ್ತನೆ 127:3) ಭ್ರೂಣಹತ್ಯೆ ತಪ್ಪು ಎಂದು ಈ ಆಜ್ಞೆಯಿಂದ ನಮಗೆ ಗೊತ್ತಾಗುತ್ತದೆ.—ಟಿಪ್ಪಣಿ 27⁠ನ್ನು ನೋಡಿ.

6, 7. ನಾವು ಜೀವವನ್ನು ಅಮೂಲ್ಯವಾಗಿ ಕಾಣುತ್ತೇವೆಂದು ಹೇಗೆ ತೋರಿಸಿಕೊಡುತ್ತೇವೆ?

6 ನಾವು ನಮ್ಮ ಜೀವವನ್ನು ಹಾಗೂ ಬೇರೆಯವರ ಜೀವವನ್ನು ಅಮೂಲ್ಯವಾಗಿ ಕಾಣುತ್ತೇವೆ ಎಂದು ಹೇಗೆ ತೋರಿಸಬಹುದು? ನಮ್ಮ ಜೀವಕ್ಕೆ ಹಾಗೂ ಬೇರೆಯವರ ಜೀವಕ್ಕೆ ಹಾನಿಯಾಗುವ ಯಾವುದೇ ಕೆಲಸವನ್ನು ಮಾಡದಿರುವ ಮೂಲಕ. ಹಾಗಾಗಿ ನಾವು ಅಡಿಕೆಯನ್ನು, ತಂಬಾಕನ್ನು ತಿನ್ನುವುದಿಲ್ಲ. ಬೇರೆ ಯಾವುದೇ ಅಮಲೌಷಧವನ್ನು ತೆಗೆದುಕೊಳ್ಳುವುದಿಲ್ಲ. ಇವು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತವೆ, ಅಷ್ಟೇ ಅಲ್ಲ ಜೀವವನ್ನೂ ತೆಗೆಯುತ್ತವೆ.

7 ನಮಗೆ ಜೀವವನ್ನು, ದೇಹವನ್ನು ಕೊಟ್ಟವನು ದೇವರೇ. ಹಾಗಾಗಿ ಆತನು ಹೇಗೆ ಇಷ್ಟಪಡುತ್ತಾನೋ ಹಾಗೆಯೇ ಅವನ್ನು ಬಳಸಬೇಕು. ನಮ್ಮ ಬಗ್ಗೆ ನಮಗೆ ಕಾಳಜಿ ಇರಬೇಕು, ನಮ್ಮ ಆರೋಗ್ಯವನ್ನು ನಾವು ಚೆನ್ನಾಗಿ ನೋಡಿಕೊಳ್ಳಬೇಕು. ಹಾಗೆ ಮಾಡದಿದ್ದರೆ ಯೆಹೋವ ದೇವರ ದೃಷ್ಟಿಯಲ್ಲಿ ನಾವು ಅಶುದ್ಧರಾಗುತ್ತೇವೆ. (ರೋಮನ್ನರಿಗೆ 6:19; 12:1; 2 ಕೊರಿಂಥ 7:1) ಆತನನ್ನು ಆರಾಧಿಸುವ ಯೋಗ್ಯತೆಯನ್ನು ಕಳೆದುಕೊಳ್ಳುತ್ತೇವೆ. ನಮ್ಮಲ್ಲಿ ಯಾವುದಾದರೂ ಕೆಟ್ಟ ಚಟಗಳು ಇರುವುದಾದರೆ ಅವನ್ನು ಬಿಟ್ಟುಬಿಡಬೇಕು. ನಿಜ, ಅದು ಅಷ್ಟು ಸುಲಭವಲ್ಲ. ಆದರೆ ಅವುಗಳನ್ನು ಬಿಟ್ಟುಬಿಡಲು ನಾವು ಪ್ರಯತ್ನ ಮಾಡುವಾಗ ಯೆಹೋವ ದೇವರು ನಮಗೆ ಸಹಾಯ ಮಾಡುತ್ತಾನೆ. ಹಾಗೆ ಮಾಡುವ ಮೂಲಕ ನಾವು ಜೀವವನ್ನು ಅಮೂಲ್ಯವಾಗಿ ಕಾಣುತ್ತೇವೆಂದು ತೋರಿಸಿಕೊಡುತ್ತೇವೆ.

8. ನಾವು ನಮ್ಮ ಜೀವವನ್ನು ಹಾಗೂ ಬೇರೆಯವರ ಜೀವವನ್ನು ಅಪಾಯಕ್ಕೊಡ್ಡದಿರಲು ಏನು ಮಾಡಬೇಕು?

8 ನಾವು ಈಗಾಗಲೇ ಕಲಿತಂತೆ, ಜೀವವು ನಮಗೆ ದೇವರು ಕೊಟ್ಟಿರುವ ಅಮೂಲ್ಯ ಉಡುಗೊರೆ. ನಾವು ನಮ್ಮ ಜೀವವನ್ನು ಹಾಗೂ ಬೇರೆಯವರ ಜೀವವನ್ನು ಯಾವತ್ತೂ ಅಪಾಯಕ್ಕೊಡ್ಡುವುದಿಲ್ಲ ಎಂಬ ಭರವಸೆ ಯೆಹೋವ ದೇವರಿಗಿದೆ. ಅದನ್ನು ನಾವು ಉಳಿಸಿಕೊಳ್ಳಬೇಕು. ಹಾಗಾಗಿ ಕಾರು, ಬೈಕ್‌ ಅಥವಾ ಬೇರೆ ಯಾವುದೇ ವಾಹನವನ್ನು ಚಲಾಯಿಸುವಾಗ ಜಾಗರೂಕರಾಗಿರಬೇಕು. ಅಪಾಯಕಾರಿ ಮತ್ತು ಹಿಂಸೆಯಿರುವ ಆಟಗಳಲ್ಲಿ ಭಾಗವಹಿಸಬಾರದು. (ಕೀರ್ತನೆ 11:5) ನಮ್ಮ ಮನೆಯಿಂದಲೂ ಮತ್ತು ಮನೆಯಲ್ಲಿರುವ ಯಾವುದರಿಂದಲೂ ತೊಂದರೆಯಾಗಬಾರದು. ಈ ವಿಷಯದಲ್ಲಿ ದೇವರು ಇಸ್ರಾಯೇಲ್ಯರಿಗೆ ಕೊಟ್ಟ ಆಜ್ಞೆ ಹೀಗಿತ್ತು: “ಹೊಸ ಮನೆಯನ್ನು ಕಟ್ಟಿಸಿಕೊಳ್ಳುವಾಗ ಯಾವನಾದರೂ ಅದರ ಮಾಳಿಗೆಯಿಂದ ಬಿದ್ದು ನಿಮಗೆ ಜೀವಹತ್ಯದೋಷವುಂಟಾಗದಂತೆ ಮಾಳಿಗೆಯ ಮೇಲೆ ಸುತ್ತಲೂ ಸಣ್ಣ ಗೋಡೆಯನ್ನು ಕಟ್ಟಿಸಬೇಕು.”—ಧರ್ಮೋಪದೇಶಕಾಂಡ 22:8.

9. ನಾವು ಪ್ರಾಣಿಗಳ ಜೀವವನ್ನು ಸಹ ಅಮೂಲ್ಯವಾಗಿ ಕಾಣುತ್ತೇವೆಂದು ಹೇಗೆ ತೋರಿಸಿಕೊಡುತ್ತೇವೆ?

9 ಪ್ರಾಣಿಗಳ ಜೀವವನ್ನು ಸಹ ದೇವರು ಅಮೂಲ್ಯವಾಗಿ ಕಾಣುತ್ತಾನೆ. ನಾವು ಅವುಗಳನ್ನು ಹಿಂಸಿಸಿದರೆ ದೇವರಿಗೆ ಇಷ್ಟವಾಗುವುದಿಲ್ಲ. ಆದರೆ ಆಹಾರಕ್ಕಾಗಿ, ಬಟ್ಟೆಗಳನ್ನು ತಯಾರಿಸಲಿಕ್ಕಾಗಿ ಅವುಗಳನ್ನು ಕೊಲ್ಲಲು ದೇವರು ಅನುಮತಿ ಕೊಟ್ಟಿದ್ದಾನೆ. ಯಾವುದಾದರೂ ಪ್ರಾಣಿಯಿಂದಾಗಿ ನಮ್ಮ ಜೀವ ಹೋಗುವಂಥ ಸನ್ನಿವೇಶವಿದ್ದಾಗಲೂ ಅದನ್ನು ಕೊಲ್ಲಬಹುದು. (ಆದಿಕಾಂಡ 3:21; 9:3; ವಿಮೋಚನಕಾಂಡ 21:28) ಆದರೆ ಪ್ರಾಣಿಗಳಿಗೆ ಹಿಂಸೆ ಕೊಡುವುದನ್ನು, ಆಟಕ್ಕಾಗಿ ಅವುಗಳನ್ನು ಹಿಂಸಿಸಿ ಸಾಯಿಸುವುದನ್ನು ದೇವರು ಇಷ್ಟಪಡುವುದಿಲ್ಲ.—ಜ್ಞಾನೋಕ್ತಿ 12:10.

ಜೀವವು ಪವಿತ್ರವಾಗಿರುವುದರಿಂದ ಅದನ್ನು ಗೌರವಿಸಿ

10. ರಕ್ತವು ಜೀವಕ್ಕೆ ಸಮ ಎಂದು ನಮಗೆ ಹೇಗೆ ಗೊತ್ತು?

10 ರಕ್ತವು ಜೀವಕ್ಕೆ ಸಮ. ಹಾಗಾಗಿ ಯೆಹೋವ ದೇವರು ರಕ್ತವನ್ನು ಪವಿತ್ರವಾಗಿ ಕಾಣುತ್ತಾನೆ. ಕಾಯಿನನು ಹೇಬೆಲನನ್ನು ಕೊಂದಾಗ ಯೆಹೋವನು ಕಾಯಿನನಿಗೆ: “ನಿನ್ನ ತಮ್ಮನ ರಕ್ತವು ಭೂಮಿಯ ಕಡೆಯಿಂದ ನನ್ನನ್ನು ಕೂಗುತ್ತದೆ” ಎಂದು ಹೇಳಿದನು. (ಆದಿಕಾಂಡ 4:10) ಹೇಬೆಲನ ರಕ್ತವು ಅವನ ಜೀವಕ್ಕೆ ಸಮವಾಗಿದ್ದರಿಂದ ದೇವರು ಹಾಗೆ ಹೇಳಿದನು. ಮಾತ್ರವಲ್ಲ ಹೇಬೆಲನನ್ನು ಕೊಂದ ಕಾಯಿನನಿಗೆ ಶಿಕ್ಷೆ ಕೊಟ್ಟನು. ರಕ್ತವು ಜೀವಕ್ಕೆ ಸಮವಾಗಿದೆ ಎಂದು ದೇವರು ನೋಹನ ಸಮಯದಲ್ಲೂ ತೋರಿಸಿಕೊಟ್ಟನು. ಜಲಪ್ರಳಯದ ನಂತರ ದೇವರು ನೋಹನಿಗೆ ಮತ್ತು ಅವನ ಕುಟುಂಬಕ್ಕೆ ಪ್ರಾಣಿಗಳನ್ನು ತಿನ್ನಲು ಅನುಮತಿ ಕೊಟ್ಟನು. ಹಾಗಾಗಿ “ಭೂಮಿಯ ಮೇಲೆ ತಿರುಗುವ ಎಲ್ಲಾ ಜೀವಜಂತುಗಳೂ ನಿಮಗೆ ಆಹಾರವಾಗಿರುವವು. ನಾನು ನಿಮ್ಮ ಆಹಾರಕ್ಕೆ ಪೈರುಗಳನ್ನು ಕೊಟ್ಟಂತೆ ಇವುಗಳನ್ನೂ ಕೊಟ್ಟಿದ್ದೇನೆ” ಎಂದು ದೇವರು ಹೇಳಿದನು. ಆದರೆ “ರಕ್ತದಿಂದ ಕೂಡಿರುವ ಮಾಂಸವನ್ನು ನೀವು ತಿನ್ನಬಾರದು; ರಕ್ತವು ಜೀವವಷ್ಟೆ” ಎಂದು ಎಚ್ಚರಿಸಿದನು.—ಆದಿಕಾಂಡ 1:29; 9:3, 4.

11. ರಕ್ತದ ಬಗ್ಗೆ ದೇವರು ಇಸ್ರಾಯೇಲ್ಯರಿಗೆ ಯಾವ ಆಜ್ಞೆ ಕೊಟ್ಟನು?

11 ರಕ್ತವನ್ನು ತಿನ್ನಬಾರದೆಂದು ನೋಹನ ಕುಟುಂಬಕ್ಕೆ ಆಜ್ಞೆ ಕೊಟ್ಟು ಸುಮಾರು 800 ವರ್ಷಗಳಾದ ನಂತರ ಯೆಹೋವನು ತನ್ನ ಜನರಾದ ಇಸ್ರಾಯೇಲ್ಯರಿಗೆ ಇದೇ ವಿಷಯವನ್ನು ಪುನಃ ಹೇಳಿದನು. ‘ಇಸ್ರಾಯೇಲ್ಯರಲ್ಲಿಯಾಗಲಿ ಅವರ ನಡುವೆ ಇಳುಕೊಂಡಿರುವ ಅನ್ಯದೇಶದವರಲ್ಲಿಯಾಗಲಿ ಯಾವನಾದರೂ ಬೇಟೆಯಾಡಿ ತಿನ್ನತಕ್ಕ ಮೃಗವನ್ನು ಇಲ್ಲವೆ ಪಕ್ಷಿಯನ್ನು ಹಿಡಿದರೆ ಅವನು ಅದರ ರಕ್ತವನ್ನು ಸುರಿಸಿ ಮಣ್ಣಿನಿಂದ ಮುಚ್ಚಿಬಿಡಬೇಕು. ನೀವು ರಕ್ತವನ್ನು ಉಣ್ಣಬಾರದು’ ಎಂದು ದೇವರು ಹೇಳಿದನು. (ಯಾಜಕಕಾಂಡ 17:13, 14) ಇಸ್ರಾಯೇಲ್ಯರ ಸಮಯದಲ್ಲೂ ದೇವರು ರಕ್ತವನ್ನು ಪವಿತ್ರವಾಗಿ ಕಾಣುತ್ತಿದ್ದನು. ಹಾಗಾಗಿ ಅವರು ಸಹ ರಕ್ತವನ್ನು ಪವಿತ್ರವಾಗಿ ಕಾಣಬೇಕೆಂದು ಆತನು ಇಷ್ಟಪಟ್ಟನು. ಅವರು ಮಾಂಸವನ್ನು ತಿನ್ನಬಹುದಿತ್ತು, ಆದರೆ ರಕ್ತವನ್ನು ತಿನ್ನಬಾರದಿತ್ತು. ಹಾಗಾಗಿ ಆಹಾರಕ್ಕಾಗಿ ಅವರು ಯಾವುದಾದರೂ ಪ್ರಾಣಿಯನ್ನು ಕೊಂದರೆ ಅದರ ರಕ್ತವನ್ನು ಭೂಮಿಗೆ ಸುರಿದುಬಿಡಬೇಕಿತ್ತು.

12. ರಕ್ತದ ಬಗ್ಗೆ ಕ್ರೈಸ್ತರು ಯಾವ ನಿರ್ಣಯ ಮಾಡುವಂತೆ ಯೆಹೋವನು ಸಹಾಯಮಾಡಿದನು?

12 ಯೇಸು ಸತ್ತು ಕೆಲವು ವರ್ಷಗಳಾದ ಮೇಲೆ ಅಪೊಸ್ತಲರು ಮತ್ತು ಯೆರೂಸಲೇಮ್‌ ಸಭೆಯ ಹಿರಿಯರು ಕೂಡಿಬಂದು, ಹಿಂದೆ ಇಸ್ರಾಯೇಲ್ಯರಿಗೆ ಕೊಟ್ಟ ಆಜ್ಞೆಗಳಲ್ಲಿ ಯಾವುದನ್ನು ಕ್ರೈಸ್ತರು ಪಾಲಿಸಬೇಕೆಂದು ಚರ್ಚಿಸಿದರು. (ಅಪೊಸ್ತಲರ ಕಾರ್ಯಗಳು 21:25; 15:28, 29 ಓದಿ.) ಯೆಹೋವನು ರಕ್ತವನ್ನು ಆಗಲೂ ಪವಿತ್ರವಾಗಿ ಕಾಣುತ್ತಿದ್ದದರಿಂದ ಕ್ರೈಸ್ತರು ಸಹ ರಕ್ತವನ್ನು ಪವಿತ್ರವಾಗಿ ಕಾಣಬೇಕೆಂದು ನಿರ್ಣಯಿಸುವಂತೆ ಯೆಹೋವನು ಅವರಿಗೆ ಸಹಾಯ ಮಾಡಿದನು. ಹಾಗಾಗಿ ಕ್ರೈಸ್ತರು ರಕ್ತವನ್ನು ತಿನ್ನಬಾರದಿತ್ತು, ಕುಡಿಯಬಾರದಿತ್ತು. ಅಷ್ಟೇ ಅಲ್ಲ, ರಕ್ತವನ್ನು ಸರಿಯಾಗಿ ತೆಗೆಯದ ಮಾಂಸವನ್ನು ಸಹ ತಿನ್ನಬಾರದಿತ್ತು. ತಿಂದರೆ, ಅದು ಮೂರ್ತಿಗಳನ್ನು ಪೂಜಿಸಿದಷ್ಟು ಮತ್ತು ಲೈಂಗಿಕ ಅನೈತಿಕತೆ ಮಾಡಿದಷ್ಟು ದೊಡ್ಡ ತಪ್ಪಾಗುತ್ತಿತ್ತು. ಈಗಲೂ ಯೆಹೋವ ದೇವರು ರಕ್ತವನ್ನು ಪವಿತ್ರವಾಗಿಯೇ ನೋಡುವುದರಿಂದ ನಾವು ಸಹ ಅದನ್ನು ಪವಿತ್ರವಾಗಿಯೇ ಕಾಣಬೇಕು.

13. ಕ್ರೈಸ್ತರು ರಕ್ತವನ್ನು ಯಾಕೆ ತೆಗೆದುಕೊಳ್ಳುವುದಿಲ್ಲ?

13 ರಕ್ತವನ್ನು ತಿನ್ನುವುದಿಲ್ಲ ಅಂದಮೇಲೆ ನಾವು ರಕ್ತವನ್ನು ತೆಗೆದುಕೊಳ್ಳಬಹುದಾ? ಯೋಚಿಸಿ, ವೈದ್ಯರು ನಮಗೆ ಮದ್ಯವನ್ನು ಕುಡಿಯಬಾರದು ಎಂದು ಹೇಳಿದರೆ, ಇಂಜಕ್ಷನ್‌ ಮೂಲಕ ನಾವು ಮದ್ಯವನ್ನು ತೆಗೆದುಕೊಳ್ಳುತ್ತೇವಾ? ಇಲ್ಲ ಅಲ್ವಾ? ಹಾಗೆಯೇ, ದೇವರು ನಮಗೆ ರಕ್ತವನ್ನು ತಿನ್ನಬಾರದು, ಕುಡಿಯಬಾರದು ಎಂದು ಹೇಳಿದ ಮೇಲೆ ಅದನ್ನು ರಕ್ತಪೂರಣದ ಮೂಲಕವಾಗಲಿ, ಬೇರೆ ವಿಧಾನದ ಮೂಲಕವಾಗಲಿ ನಾವು ತೆಗೆದುಕೊಳ್ಳಬಾರದು.—ಟಿಪ್ಪಣಿ 28⁠ನ್ನು ನೋಡಿ.

14, 15. ಯೆಹೋವನ ಜನರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲಿಕ್ಕಾಗಿ ಆತನ ಆಜ್ಞೆಯನ್ನು ಮೀರುತ್ತಾರಾ? ವಿವರಿಸಿ.

14 ವೈದ್ಯರು ನಮಗೆ, ‘ನೀವು ರಕ್ತ ತೆಗೆದುಕೊಳ್ಳದಿದ್ದರೆ ಸಾಯುತ್ತೀರಿ’ ಎಂದು ಹೇಳಿದರೆ ಆಗೇನು ಮಾಡುವುದು? ದೇವರ ಆಜ್ಞೆಯ ಪ್ರಕಾರ ನಡೆಯಬೇಕಾ ಬೇಡವಾ ಎಂದು ನಿರ್ಣಯ ಮಾಡುವುದು ನಮ್ಮ ಸ್ವಂತ ಜವಾಬ್ದಾರಿ. ಯೆಹೋವ ದೇವರು ಕೊಟ್ಟ ಜೀವವೆಂಬ ಉಡುಗೊರೆಯನ್ನು ಆತನ ಜನರು ತುಂಬ ಅಮೂಲ್ಯವಾಗಿ ಕಾಣುತ್ತಾರೆ. ಹಾಗಾಗಿ ರಕ್ತ ತೆಗೆದುಕೊಳ್ಳುವುದಕ್ಕೆ ಬದಲು ಬೇರೆ ಚಿಕಿತ್ಸೆಗಳಿದ್ದರೆ ಅದನ್ನು ಮಾಡಿಸಿಕೊಳ್ಳುತ್ತಾರೆ, ಆದರೆ ರಕ್ತವನ್ನಂತೂ ತೆಗೆದುಕೊಳ್ಳುವುದಿಲ್ಲ.

15 ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಮ್ಮಿಂದ ಆಗುವುದೆಲ್ಲವನ್ನು ಮಾಡುತ್ತೇವೆ. ಆದರೆ ದೇವರು ಜೀವವನ್ನು ಅಮೂಲ್ಯವಾಗಿ ಕಾಣುವುದರಿಂದ ನಾವು ರಕ್ತವನ್ನು ತೆಗೆದುಕೊಳ್ಳುವುದಿಲ್ಲ. ದೇವರ ಮಾತನ್ನು ಮೀರಿ ನಾವು ನಮ್ಮ ಜೀವ ಉಳಿಸಿಕೊಳ್ಳಲು ಬಯಸುವುದಿಲ್ಲ. ಆತನ ಮಾತನ್ನು ಕೇಳುವುದೇ ನಮಗೆ ಮುಖ್ಯ. ಯೇಸು ಹೀಗೆ ಹೇಳಿದನು: “ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಬಯಸುವವನು ಅದನ್ನು ಕಳೆದುಕೊಳ್ಳುವನು; ಆದರೆ ನನ್ನ ನಿಮಿತ್ತವಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಉಳಿಸಿಕೊಳ್ಳುವನು.” (ಮತ್ತಾಯ 16:25) ನಾವು ಯೆಹೋವ ದೇವರನ್ನು ಪ್ರೀತಿಸುತ್ತೇವೆ, ಹಾಗಾಗಿ ಆತನು ಹೇಳುವ ಪ್ರಕಾರ ನಡೆಯಲು ಬಯಸುತ್ತೇವೆ. ನಮಗೆ ಏನು ಒಳ್ಳೆಯದು, ಏನು ಕೆಟ್ಟದ್ದು ಎಂದು ಆತನಿಗೆ ಚೆನ್ನಾಗಿ ಗೊತ್ತು. ಹಾಗಾಗಿಯೇ ಆತನಂತೆ ನಾವು ಸಹ ಜೀವವನ್ನು ಅಮೂಲ್ಯವಾಗಿ ಮತ್ತು ಪವಿತ್ರವಾಗಿ ಕಾಣುತ್ತೇವೆ.—ಇಬ್ರಿಯ 11:6.

16. ದೇವರ ಜನರು ಆತನ ಆಜ್ಞೆಯನ್ನು ಯಾಕೆ ಪಾಲಿಸುತ್ತಾರೆ?

16 ರಕ್ತದ ಕುರಿತು ಯೆಹೋವನು ಕೊಟ್ಟಿರುವ ಆಜ್ಞೆಯನ್ನು ಪಾಲಿಸಲು ಆತನ ನಂಬಿಗಸ್ತ ಜನರು ದೃಢ ನಿರ್ಧಾರ ಮಾಡಿದ್ದಾರೆ. ಹಾಗಾಗಿ ಅವರು ರಕ್ತವನ್ನು ತಿನ್ನುವುದೂ ಇಲ್ಲ, ಕುಡಿಯುವುದೂ ಇಲ್ಲ. ವೈದ್ಯಕೀಯ ಕಾರಣಕ್ಕಾಗಿಯೂ ರಕ್ತವನ್ನು ತೆಗೆದುಕೊಳ್ಳುವುದಿಲ್ಲ. a ತಮ್ಮ ಜೀವವನ್ನು ಉಳಿಸಿಕೊಳ್ಳಲಿಕ್ಕಾಗಿ ಬೇರೆ ಚಿಕಿತ್ಸೆಗಳನ್ನು ಅವರು ತೆಗೆದುಕೊಳ್ಳುತ್ತಾರೆ. ಏಕೆಂದರೆ ತಮಗೇನು ಒಳ್ಳೇದು, ಏನು ಕೆಟ್ಟದ್ದು ಎಂದು ಜೀವ ಮತ್ತು ರಕ್ತವನ್ನು ಸೃಷ್ಟಿಸಿದ ಯೆಹೋವನಿಗೆ ಚೆನ್ನಾಗಿ ಗೊತ್ತು ಎಂಬ ದೃಢ ಭರವಸೆ ಅವರಿಗಿದೆ. ನಿಮಗೂ ಆ ಭರವಸೆ ಇದೆಯಾ?

ರಕ್ತದ ಒಂದೇ ಒಂದು ಉಪಯೋಗ

17. ಯಾವುದಕ್ಕಾಗಿ ಮಾತ್ರ ರಕ್ತವನ್ನು ಉಪಯೋಗಿಸುವಂತೆ ಯೆಹೋವನು ಇಸ್ರಾಯೇಲ್ಯರಿಗೆ ಆಜ್ಞೆ ಕೊಟ್ಟಿದ್ದನು?

17 ಯೆಹೋವ ದೇವರು ಇಸ್ರಾಯೇಲ್ಯರಿಗೆ ಹೀಗೆ ಆಜ್ಞೆ ಕೊಟ್ಟಿದ್ದನು: “ಪ್ರತಿದೇಹಿಗೂ ರಕ್ತವೇ ಪ್ರಾಣಾಧಾರ. ಅಂಥ ರಕ್ತವನ್ನು ನೀವು ಯಜ್ಞವೇದಿಗೆ ಎರಚಿ ನಿಮಗೋಸ್ಕರ ದೋಷಪರಿಹಾರಮಾಡಿಕೊಳ್ಳಬೇಕೆಂದು [ಅಥವಾ, ನಿಮ್ಮ ಪಾಪಗಳಿಗೆ ಕ್ಷಮೆ ಕೇಳಬೇಕೆಂದು] ನಿಮಗೆ ಅನುಗ್ರಹ ಮಾಡಿದ್ದೇನೆ. ರಕ್ತವು ಪ್ರಾಣಾಧಾರವಾಗಿರುವ ಕಾರಣ ಅದರಿಂದ ದೋಷಪರಿಹಾರವಾಗುತ್ತದಷ್ಟೆ.” (ಯಾಜಕಕಾಂಡ 17:11) ಆ ಸಮಯದಲ್ಲಿ ಒಬ್ಬ ಇಸ್ರಾಯೇಲ್ಯನು ಪಾಪ ಮಾಡಿದರೆ ಆ ಪಾಪದ ಕ್ಷಮೆಗಾಗಿ ಅವನು ಒಂದು ಪ್ರಾಣಿಯನ್ನು ತಂದು ಯಾಜಕನಿಗೆ ಕೊಡಬೇಕಿತ್ತು. ಯಾಜಕನು ಅದನ್ನು ಯಜ್ಞವಾಗಿ ಅರ್ಪಿಸಿ ಅದರ ರಕ್ತದಲ್ಲಿ ಸ್ವಲ್ಪವನ್ನು ಯಜ್ಞವೇದಿಯ ಮೇಲೆ ಸುರಿಯುತ್ತಿದ್ದನು. ಇದಕ್ಕಾಗಿ ಮಾತ್ರ ರಕ್ತವನ್ನು ಉಪಯೋಗಿಸಬೇಕೆಂದು ಯೆಹೋವನು ಇಸ್ರಾಯೇಲ್ಯರಿಗೆ ಆಜ್ಞೆ ಕೊಟ್ಟಿದ್ದನು.

18. ಯೇಸು ತನ್ನ ಜೀವವನ್ನು ಅರ್ಪಿಸಿದ್ದರಿಂದ ನಮಗೆ ಯಾವ ಅವಕಾಶ ಸಿಕ್ಕಿದೆ?

18 ಯೇಸು ಭೂಮಿಗೆ ಬಂದಾಗ ಪ್ರಾಣಿಗಳ ಯಜ್ಞಗಳಿಗೆ ಬದಲಾಗಿ ತನ್ನ ರಕ್ತವನ್ನೇ ಅಂದರೆ ತನ್ನ ಜೀವವನ್ನೇ ಅರ್ಪಿಸಿದನು. ನಮ್ಮೆಲ್ಲರ ಪಾಪಗಳಿಗೆ ಕ್ಷಮೆ ಸಿಗಲಿಕ್ಕಾಗಿ ಆತನು ಹೀಗೆ ಮಾಡಿದನು. (ಮತ್ತಾಯ 20:28; ಇಬ್ರಿಯ 10:1) ಯೇಸುವಿನ ಜೀವಕ್ಕೆ ಅಥವಾ ರಕ್ತಕ್ಕೆ ಎಷ್ಟು ಬೆಲೆಯಿತ್ತೆಂದರೆ ಅದರ ಮೂಲಕ ಯೆಹೋವ ದೇವರು ಎಲ್ಲಾ ಮನುಷ್ಯರಿಗೆ ಸಾವಿಲ್ಲದೆ ಜೀವಿಸುವ ಅವಕಾಶವನ್ನು ಕೊಡಲು ಸಾಧ್ಯವಾಯಿತು.—ಯೋಹಾನ 3:16; ಇಬ್ರಿಯ 9:11, 12; 1 ಪೇತ್ರ 1:18, 19.

ಜೀವ ಮತ್ತು ರಕ್ತವನ್ನು ಅಮೂಲ್ಯವಾಗಿ ಕಾಣುತ್ತೀರೆಂದು ಹೇಗೆ ತೋರಿಸಿಕೊಡುತ್ತೀರಿ?

19. ‘ನಾವು ಎಲ್ಲ ಮನುಷ್ಯರ ರಕ್ತದ ಹೊಣೆಯಿಂದ ಶುದ್ಧರಾಗಬೇಕಾದರೆ’ ಏನು ಮಾಡಬೇಕು?

19 ಸಾವಿಲ್ಲದೆ ಜೀವಿಸುವ ಅತ್ಯಮೂಲ್ಯ ಅವಕಾಶವನ್ನು ದೇವರು ನಮಗೆ ಕೊಟ್ಟಿರುವುದಕ್ಕಾಗಿ ನಾವು ಆತನಿಗೆ ಋಣಿಗಳಾಗಿದ್ದೇವೆ. ಮಾತ್ರವಲ್ಲ, ಈ ಅವಕಾಶ ಬೇರೆಯವರಿಗೂ ಸಿಗಬೇಕೆಂದು ನಾವು ಬಯಸುತ್ತೇವೆ. ಹಾಗಾಗಿ ಯೇಸುವಿನಲ್ಲಿ ನಂಬಿಕೆಯಿಡುವಂತೆ ನಾವು ಅವರಿಗೆ ಕಲಿಸುತ್ತೇವೆ. ನಮಗೆ ಜನರ ಮೇಲೆ ಪ್ರೀತಿ ಇರುವುದರಿಂದ ಇದನ್ನು ಅವರಿಗೆ ಕಲಿಸಲು ನಮ್ಮಿಂದಾದ ಎಲ್ಲವನ್ನು ಮಾಡುತ್ತೇವೆ. (ಯೆಹೆಜ್ಕೇಲ 3:17-21) ಹಾಗೆ ಮಾಡಿದರೆ, ನಾವು ಸಹ ಅಪೊಸ್ತಲ ಪೌಲನಂತೆ, “ನಾನು ಎಲ್ಲ ಮನುಷ್ಯರ ರಕ್ತದ ಹೊಣೆಯಿಂದ ಶುದ್ಧನಾಗಿದ್ದೇನೆ . . . ಏಕೆಂದರೆ ನಾನು ದೇವರ ಸಂಕಲ್ಪವನ್ನೆಲ್ಲ [ಜನರಿಗೆ] ತಿಳಿಯಪಡಿಸಲು ಸ್ವಲ್ಪವೂ ಹಿಂಜರಿಯಲಿಲ್ಲ” ಎಂದು ಹೇಳಬಹುದು. (ಅಪೊಸ್ತಲರ ಕಾರ್ಯಗಳು 20:26, 27) ಯೆಹೋವನ ಬಗ್ಗೆ ಮತ್ತು ಆತನಿಗೆ ಜೀವವು ಎಷ್ಟು ಅಮೂಲ್ಯವಾಗಿದೆ ಎನ್ನುವುದರ ಬಗ್ಗೆ ಎಲ್ಲರಿಗೆ ಹೇಳುವ ಮೂಲಕ ನಾವು ಜೀವವನ್ನು ಮತ್ತು ರಕ್ತವನ್ನು ತುಂಬ ಅಮೂಲ್ಯವಾಗಿ ಕಾಣುತ್ತೇವೆಂದು ತೋರಿಸಿಕೊಡುತ್ತೇವೆ.

a ರಕ್ತಪೂರಣದ ಬಗ್ಗೆ ತಿಳಿದುಕೊಳ್ಳಲು ಯೆಹೋವನ ಸಾಕ್ಷಿಗಳು ಪ್ರಕಾಶಿಸಿರುವ ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ” ಎಂಬ ಪುಸ್ತಕದ ಪುಟ 86⁠ರಿಂದ 89⁠ನ್ನು ನೋಡಿ.