ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ ಇಪ್ಪತ್ತಮೂರು

ಕ್ಷಮೆಯ ಪಾಠವನ್ನು ಕರ್ತನಿಂದ ಕಲಿತವನು

ಕ್ಷಮೆಯ ಪಾಠವನ್ನು ಕರ್ತನಿಂದ ಕಲಿತವನು

1. ಪೇತ್ರನ ಜೀವನದ ಅತೀ ಕರಾಳ ಕ್ಷಣ ಯಾವುದಾಗಿರಬಹುದು?

ಪೇತ್ರನಿಗೆ ತನ್ನ ಹಾಗೂ ಕರ್ತನ ನೋಟ ಪರಸ್ಪರ ಸಂಧಿಸಿದ ಆ ಕ್ಷಣವನ್ನು ಮರೆಯಲಿಕ್ಕೇ ಆಗಲಿಲ್ಲ. ಕರ್ತನ ಆ ನೋಟದಲ್ಲಿ ನಿರಾಶೆಯ ಛಾಯೆಯಿತ್ತೇ? ಖಂಡನೆಯಿತ್ತೇ? ಅದನ್ನು ಖಚಿತವಾಗಿ ಹೇಳಲಾರೆವು. “ಕರ್ತನು ತಿರುಗಿ ಪೇತ್ರನನ್ನು ದೃಷ್ಟಿಸಿ ನೋಡಿದನು” ಎಂದಷ್ಟೇ ಹೇಳುತ್ತದೆ ದೇವಪ್ರೇರಿತ ದಾಖಲೆ. (ಲೂಕ 22:61) ಆದರೆ ಕರ್ತನ ಆ ಕ್ಷಣಮಾತ್ರದ ನೋಟದಿಂದ ಪೇತ್ರನಿಗೆ ತಾನೆಂಥ ಗಂಭೀರ ತಪ್ಪು ಮಾಡಿದೆನೆಂದು ತಿಳಿಯಿತು. ಯೇಸು ಮುಂತಿಳಿಸಿದ್ದನ್ನೇ ಮತ್ತು ಮಾಡುವುದೇ ಇಲ್ಲವೆಂದು ತಾನು ಘಂಟಾಘೋಷವಾಗಿ ಹೇಳಿದ್ದನ್ನೇ ಈಗ ಮಾಡಿದೆನೆಂದು ಪೇತ್ರನಿಗೆ ಅರಿವಾಯಿತು. ಅವನು ತನ್ನ ಪ್ರೀತಿಯ ಕರ್ತನನ್ನೇ ಅರಿಯೆನೆಂದು ಎಲ್ಲರ ಮುಂದೆ ಹೇಳಿಬಿಟ್ಟಿದ್ದನು. ಅವನಿಗೆ ಅವನ ಮೇಲೆಯೇ ಜಿಗುಪ್ಸೆ ಹುಟ್ಟಿತು. ಪ್ರಾಯಶಃ ಅದು ಅವನ ಜೀವನದ ಅತ್ಯಂತ ಕೆಟ್ಟ ದಿನ, ಅತೀ ಕರಾಳ ಕ್ಷಣ.

2. (1) ಪೇತ್ರ ಯಾವ ಪಾಠ ಕಲಿಯುವ ಅಗತ್ಯವಿತ್ತು? (2) ಅವನ ವೃತ್ತಾಂತದಿಂದ ನಾವು ಹೇಗೆ ಪ್ರಯೋಜನ ಪಡೆಯುವೆವು?

2 ಆದರೆ ಅವನ ಸ್ಥಿತಿ ನಿರೀಕ್ಷಾಹೀನವಾಗಿರಲಿಲ್ಲ. ನಂಬಿಕೆಯ ವ್ಯಕ್ತಿಯಾಗಿದ್ದ ಪೇತ್ರನಿಗೆ ತನ್ನ ತಪ್ಪನ್ನು ತಿದ್ದಿಕೊಳ್ಳಲು ಇನ್ನೂ ಅವಕಾಶವಿತ್ತು. ಯೇಸು ಕಲಿಸಿದಂಥ ಅತ್ಯುತ್ತಮ ಪಾಠಗಳಲ್ಲೊಂದಾದ ಕ್ಷಮೆಯ ಪಾಠವನ್ನು ಕಲಿಯಲು ಅವನಿಗೆ ಸಂದರ್ಭವಿತ್ತು. ಆ ಪಾಠವನ್ನು ಪೇತ್ರನಷ್ಟೇ ಅಲ್ಲ ನಮ್ಮಲ್ಲಿ ಪ್ರತಿಯೊಬ್ಬರೂ ಕಲಿಯಬೇಕು. ಹಾಗಾಗಿ ನಾವೀಗ ಅವನು ಆ ಪಾಠ ಕಲಿತದ್ದು ಹೇಗೆಂದು ನೋಡೋಣ.

ಅನೇಕ ಪಾಠಗಳನ್ನು ಕಲಿಯಬೇಕಿದ್ದವನು

3, 4. (1) ಪೇತ್ರ ಯೇಸುವಿಗೆ ಯಾವ ಪ್ರಶ್ನೆ ಕೇಳಿದನು? (2) ಪೇತ್ರ ಏನು ನೆನಸಿರಬೇಕು? (3) ಪೇತ್ರ ತನ್ನ ಸುತ್ತಲಿದ್ದ ಜನರನ್ನು ಅನುಕರಿಸುತ್ತಿದ್ದಾನೆಂದು ಯೇಸು ಹೇಗೆ ತೋರಿಸಿದನು?

3 ಸುಮಾರು ಆರು ತಿಂಗಳ ಹಿಂದೆ ಪೇತ್ರ ತನ್ನ ಊರಾದ ಕಪೆರ್ನೌಮಿನಲ್ಲಿ ಯೇಸುವನ್ನು “ಕರ್ತನೇ, ನನ್ನ ಸಹೋದರನು ನನ್ನ ವಿರುದ್ಧ ಪಾಪಮಾಡುವುದಾದರೆ ನಾನು ಎಷ್ಟು ಸಾರಿ ಅವನನ್ನು ಕ್ಷಮಿಸಬೇಕು? ಏಳು ಸಾರಿಯೊ?” ಎಂದು ಕೇಳಿದ್ದನು. ಆ ಕಾಲದ ಧರ್ಮಗುರುಗಳು ಒಬ್ಬರನ್ನು 3 ಬಾರಿ ಮಾತ್ರ ಕ್ಷಮಿಸಬೇಕೆಂದು ಕಲಿಸುತ್ತಿದ್ದರು. ಹಾಗಾಗಿ 7 ಬಾರಿ ಕ್ಷಮಿಸಬೇಕೊ ಎಂದು ಪೇತ್ರ ಕೇಳಿದಾಗ ತಾನು ತುಂಬ ಉದಾರಿ ಎಂದವನು ನೆನಸಿರಬೇಕು. ಆಗ ಯೇಸು ಅವನಿಗೆ “ಏಳು ಸಾರಿಯಲ್ಲ, ಎಪ್ಪತ್ತೇಳು ಸಾರಿ” ಕ್ಷಮಿಸಬೇಕು ಎಂದುತ್ತರಿಸಿದನು.—ಮತ್ತಾ. 18:21, 22.

4 ನಮ್ಮ ವಿರುದ್ಧ ಯಾರ್ಯಾರು ಎಷ್ಟೆಷ್ಟು ತಪ್ಪುಮಾಡಿದ್ದಾರೆಂಬ ಲೆಕ್ಕ ಬರೆದಿಡಬೇಕೆಂದು ಯೇಸು ಹೇಳುತ್ತಿದ್ದನೇ? ಖಂಡಿತ ಇಲ್ಲ. ಯೇಸು 7ಕ್ಕೆ ಇನ್ನೊಂದು 7ನ್ನು ಜೋಡಿಸಿ 77 ಎಂದು ಹೇಳುವ ಮೂಲಕ ನಮ್ಮಲ್ಲಿ ಪ್ರೀತಿಯಿದ್ದರೆ ಇಂತಿಷ್ಟೇ ಬಾರಿ ಕ್ಷಮಿಸಬೇಕೆಂಬ ಮಿತಿ ಇಡುವುದಿಲ್ಲವೆಂದು ಕಲಿಸಿದನು. (1 ಕೊರಿಂ. 13:4, 5) ಕ್ಷಮೆದೋರುವ ವಿಷಯದಲ್ಲೂ ಲೆಕ್ಕವಿಡುತ್ತಿದ್ದ ಆ ಕಾಲದ ಕಠಿನಮನಸ್ಸಿನ ಜನರನ್ನು ಪೇತ್ರ ಅನುಕರಿಸುತ್ತಿದ್ದಾನೆಂದು ಯೇಸುವಿನ ಆ ಮಾತುಗಳು ತೋರಿಸಿದವು. ದೇವರನ್ನು ಅನುಕರಿಸುವವರಾದರೊ ಪದೇಪದೇ ಕ್ಷಮಿಸುವ ಮನಸ್ಸುಳ್ಳವರಾಗಿರಬೇಕು.—1 ಯೋಹಾನ 1:7-9 ಓದಿ.

5. ಕ್ಷಮೆಯ ಮಹತ್ವವನ್ನು ನಾವು ಕೆಲವೊಮ್ಮೆ ಚೆನ್ನಾಗಿ ಕಲಿಯುವುದು ಯಾವಾಗ?

5 ಪೇತ್ರ ಯೇಸುವಿನೊಂದಿಗೆ ವಾದಕ್ಕಿಳಿಯಲಿಲ್ಲ. ಆದರೆ ಯೇಸು ಕಲಿಸಿದ ಪಾಠ ಅವನ ಹೃದಯಕ್ಕೆ ಇಳಿಯಿತೇ? ಕೆಲವೊಮ್ಮೆ ಕ್ಷಮಾಭಾವದ ಮಹತ್ವ ಅರಿವಾಗುವುದು ಸ್ವತಃ ನಮಗೆ ಕ್ಷಮೆಯ ಅಗತ್ಯ ಬಿದ್ದಾಗಲೇ. ಪೇತ್ರನಿಗೂ ಅನೇಕ ಸಲ ತನ್ನ ಕರ್ತನ ಕ್ಷಮೆಯ ಅಗತ್ಯಬಿತ್ತು. ವಿಶೇಷವಾಗಿ ಯೇಸುವಿನ ಮರಣಕ್ಕೆ ಸ್ವಲ್ಪ ಮುಂಚೆ ನಡೆದ ಘಟನೆಗಳ ಸಮಯದಲ್ಲಿ. ಆದ್ದರಿಂದ ನಾವೀಗ ಆ ಕಷ್ಟಕರ ಸಮಯದಲ್ಲಾದ ಘಟನೆಗಳಿಗೆ ತೆರಳೋಣ.

ಅನೇಕ ಸಲ ಕ್ಷಮೆ ಬೇಕಾಗಿತ್ತು

6. (1) ಯೇಸು ಅಪೊಸ್ತಲರಿಗೆ ದೀನತೆಯ ಪಾಠ ಕಲಿಸುತ್ತಿದ್ದಾಗ ಪೇತ್ರನ ಪ್ರತಿಕ್ರಿಯೆ ಏನಾಗಿತ್ತು? (2) ಆದರೂ ಯೇಸು ಅವನ ಜೊತೆ ಹೇಗೆ ನಡೆದುಕೊಂಡನು?

6 ಅದೊಂದು ಮಹತ್ವಪೂರ್ಣ ಸಂಜೆ. ಯೇಸುವಿನ ಭೂಜೀವಿತದ ಕೊನೆ ರಾತ್ರಿ. ಆತನು ತನ್ನ ಅಪೊಸ್ತಲರಿಗೆ ಇನ್ನೂ ಅನೇಕ ವಿಷಯಗಳನ್ನು ಕಲಿಸಲಿಕ್ಕಿತ್ತು. ಅವುಗಳಲ್ಲೊಂದು ದೀನತೆಯ ಪಾಠ. ತಾನೇ ಮಾದರಿಯಿಡುವ ಮೂಲಕ ಅದನ್ನು ಕಲಿಸಿದನು. ಸಾಮಾನ್ಯವಾಗಿ ಕೆಳದರ್ಜೆಯ ಸೇವಕರಿಗೆ ಅತಿಥಿಗಳ ಪಾದ ತೊಳೆಯುವ ಕೆಲಸ ಕೊಡಲಾಗುತ್ತಿತ್ತು. ಆದರೆ ಈ ಸಂದರ್ಭದಲ್ಲಿ ಸ್ವತಃ ಯೇಸುವೇ ಅಪೊಸ್ತಲರ ಪಾದ ತೊಳೆಯಲು ಮುಂದಾದನು. ಪೇತ್ರನ ಬಳಿ ಬಂದಾಗ ಅವನು ಮೊದಲು ಯೇಸುವಿಗೆ ‘ನೀನು ನನ್ನ ಪಾದಗಳನ್ನು ತೊಳೆಯುತ್ತೀಯೊ’ ಎಂದು ಕೇಳಿದನು. ಅನಂತರ ಬೇಡವೆಂದನು. ಬಳಿಕ ಪಾದಗಳನ್ನು ಮಾತ್ರವಲ್ಲ ತನ್ನ ಕೈಗಳನ್ನು, ತಲೆಯನ್ನು ಕೂಡ ತೊಳೆಯಬೇಕೆಂದು ಒತ್ತಾಯಿಸಿದನು. ಆದರೆ ಯೇಸು ತಾಳ್ಮೆ ಕಳಕೊಳ್ಳದೆ ತಾನು ಮಾಡುತ್ತಿದ್ದ ಈ ಕೆಲಸದ ಮಹತ್ವವನ್ನು, ಅರ್ಥವನ್ನು ಶಾಂತವಾಗಿ ವಿವರಿಸಿದನು.—ಯೋಹಾ. 13:1-17.

7, 8. (1) ಪೇತ್ರನು ಯೇಸುವಿನ ತಾಳ್ಮೆಯನ್ನು ಇನ್ನಷ್ಟು ಪರೀಕ್ಷಿಸಿದ್ದು ಹೇಗೆ? (2) ಯೇಸು ದಯೆ ಮತ್ತು ಕ್ಷಮಾಭಾವ ತೋರಿಸುವುದನ್ನು ಮುಂದುವರಿಸಿದ್ದು ಹೇಗೆ?

7 ಇದಾದ ಸ್ವಲ್ಪದರಲ್ಲೇ ಪೇತ್ರ ಪುನಃ ಯೇಸುವಿನ ತಾಳ್ಮೆ ಪರೀಕ್ಷಿಸಿದ. ಅಪೊಸ್ತಲರ ಮಧ್ಯೆ ತಮ್ಮಲ್ಲಿ ಯಾರು ಶ್ರೇಷ್ಠರೆಂಬ ವಾಗ್ವಾದ ಶುರುವಾಯಿತು. ಖಂಡಿತ ಪೇತ್ರ ಅದರಲ್ಲಿ ಒಳಗೂಡಿದ್ದ. ಅಪೊಸ್ತಲರ ಆ ವಾಗ್ವಾದ ಅಹಂಕಾರದ ಪ್ರದರ್ಶನದಂತಿದ್ದು, ನಾಚಿಕೆಗೇಡು ಕೃತ್ಯವಾಗಿದ್ದರೂ ಯೇಸು ದಯೆಯಿಂದ ಅವರನ್ನು ತಿದ್ದಿದನು. ಅವರು ಇದುವರೆಗೆ ಏನನ್ನು ಮಾಡಿದ್ದರೊ ಅದಕ್ಕಾಗಿ ಅಂದರೆ ನಿಷ್ಠೆಯಿಂದ ತನಗೆ ಅಂಟಿಕೊಂಡದ್ದಕ್ಕಾಗಿ ಶ್ಲಾಘಿಸಿದನು ಸಹ. ಆದರೆ ಸ್ವಲ್ಪದರಲ್ಲೇ ಅವರೆಲ್ಲರೂ ತನ್ನನ್ನು ಬಿಟ್ಟು ಓಡಿಹೋಗುವರೆಂದು ಮುಂತಿಳಿಸಿದನು. ಅದಕ್ಕೆ ಪೇತ್ರನು ತಾನು ಸಾಯಬೇಕಾಗಿ ಬಂದರೂ ಜೊತೆಯಲ್ಲೇ ಇರುತ್ತೇನೆಂದು ಯೇಸುವಿಗೆ ಹೇಳಿದನು. ಆಗ ಯೇಸು ಅದೇ ರಾತ್ರಿ ಹುಂಜವು 2 ಬಾರಿ ಕೂಗುವುದರೊಳಗೆ ಪೇತ್ರ ತನ್ನನ್ನು ಅರಿಯೆನೆಂದು 3 ಬಾರಿ ಹೇಳುವನೆಂದು ಪ್ರವಾದನೆ ನುಡಿದನು. ತಕ್ಷಣ ಪೇತ್ರ ತಾನು ಹಾಗೆಂದೂ ಮಾಡುವುದಿಲ್ಲವೆಂದು ಹೇಳಿದ. ಅಷ್ಟಕ್ಕೆ ಸುಮ್ಮನಾಗದೆ ತಾನು ಇತರ ಅಪೊಸ್ತಲರಿಗಿಂತ ಹೆಚ್ಚು ನಂಬಿಗಸ್ತನಾಗಿ ಇರುವೆನೆಂದೂ ಕೊಚ್ಚಿಕೊಂಡ!—ಮತ್ತಾ. 26:31-35; ಮಾರ್ಕ 14:27-31; ಲೂಕ 22:24-28; ಯೋಹಾ. 13:36-38.

8 ಪೇತ್ರನ ಮಾತುಗಳನ್ನು ಕೇಳಿ ಯೇಸುವಿನ ತಾಳ್ಮೆಯ ಕಟ್ಟೆಯೊಡೆಯಿತೇ? ಈ ಕಷ್ಟಕರ ಸಮಯಾದ್ಯಂತ ಯೇಸು ತನ್ನ ಅಪರಿಪೂರ್ಣ ಅಪೊಸ್ತಲರಲ್ಲಿರುವ ಒಳ್ಳೇ ಅಂಶಗಳ ಮೇಲೆ ಗಮನಹರಿಸಿದನು. ಪೇತ್ರ ಖಂಡಿತ ತನ್ನನ್ನು ಅಲ್ಲಗಳೆಯುವನೆಂದು ಆತನಿಗೆ ಗೊತ್ತಿದ್ದರೂ “ನಿನ್ನ ನಂಬಿಕೆಯು ಮುರಿದುಬೀಳದಂತೆ ನಾನು ನಿನಗೋಸ್ಕರ ಯಾಚಿಸಿದ್ದೇನೆ; ನೀನು ತಿರುಗಿ ಬಂದ ಮೇಲೆ ನಿನ್ನ ಸಹೋದರರನ್ನು ಬಲಪಡಿಸು” ಎಂದು ಹೇಳಿದನು. (ಲೂಕ 22:32) ಹೀಗೆ, ಪೇತ್ರ ತನ್ನ ತಪ್ಪಿಗಾಗಿ ಪಶ್ಚಾತ್ತಾಪಪಟ್ಟು ದೇವರ ಸೇವೆಯನ್ನು ನಂಬಿಗಸ್ತಿಕೆಯಿಂದ ಮುಂದುವರಿಸುವನೆಂಬ ಭರವಸೆಯನ್ನು ಯೇಸು ವ್ಯಕ್ತಪಡಿಸಿದನು. ಎಂಥ ದಯೆ! ಎಂಥ ಕ್ಷಮಾಭಾವ!

9, 10. (1) ಗೆತ್ಸೇಮನೆ ತೋಟದಲ್ಲಿ ಪೇತ್ರನಿಗೆ ಯಾವ ತಿದ್ದುಪಾಟಿನ ಅಗತ್ಯಬಿತ್ತು? (2) ಪೇತ್ರನ ತಪ್ಪುಗಳು ನಮಗೇನನ್ನು ನೆನಪಿಗೆ ತರುತ್ತವೆ?

9 ಮುಂದೆ ಗೆತ್ಸೇಮನೆ ತೋಟದಲ್ಲಿ ಕೂಡ ಯೇಸು ಪೇತ್ರನನ್ನು ಒಂದಕ್ಕಿಂತ ಹೆಚ್ಚು ಸಲ ತಿದ್ದಬೇಕಾಗಿ ಬಂತು. ಯೇಸು ಅಲ್ಲಿ ಪ್ರಾರ್ಥನೆಮಾಡಲು ಹೋಗುವ ಮುಂಚೆ ಅವನಿಗೂ ಯಾಕೋಬ ಯೋಹಾನರಿಗೂ ಎಚ್ಚರವಾಗಿರುವಂತೆ ಹೇಳಿದ್ದನು. ಆ ಸಮಯದಲ್ಲಿ ಭಾವನಾತ್ಮಕ ಸಂಕಟದಲ್ಲಿದ್ದ ಯೇಸುವಿಗೆ ಬೆಂಬಲದ ಅಗತ್ಯವಿತ್ತು. ಆದರೆ ಪೇತ್ರ ಮತ್ತು ಉಳಿದಿಬ್ಬರು ನಿದ್ದೆಮಾಡಿದರು. ಯೇಸು ಪದೇಪದೇ ಬಂದು ಎಚ್ಚರಿಸಿದರೂ ಅವರು ಮತ್ತೆಮತ್ತೆ ನಿದ್ರೆಗೆ ಜಾರಿದರು. ಆಗ ಯೇಸು ಅವರನ್ನು ಅರ್ಥಮಾಡಿಕೊಂಡು ಕ್ಷಮಿಸಿದನು. “ಹೃದಯವು ಸಿದ್ಧವಾಗಿದೆ ನಿಜ, ಆದರೆ ದೇಹಕ್ಕೆ ಬಲ ಸಾಲದು” ಎಂದು ಹೇಳಿದ್ದು ಅದಕ್ಕಾಗಿಯೇ.—ಮಾರ್ಕ 14:32-41.

10 ಸ್ವಲ್ಪ ಸಮಯದಲ್ಲೇ ಜನರ ಗುಂಪೊಂದು ಪಂಜುಗಳನ್ನು, ಕತ್ತಿದೊಣ್ಣೆಗಳನ್ನು ಹಿಡಿದುಕೊಂಡು ಬಂತು. ಶಿಷ್ಯರು ಎಚ್ಚರಿಕೆ, ವಿವೇಚನೆಯಿಂದ ವರ್ತಿಸುವ ಸಮಯ ಅದಾಗಿತ್ತು. ಆದರೆ ಪೇತ್ರ ಹಿಂದೆಮುಂದೆ ನೋಡದೆ ಕತ್ತಿಯನ್ನು ತೆಗೆದು ಮಹಾ ಯಾಜಕನ ಆಳಾದ ಮಲ್ಕನ ತಲೆಯತ್ತ ಬೀಸಿ, ಅವನ ಕಿವಿ ಕತ್ತರಿಸಿಯೇ ಬಿಟ್ಟ. ಆಗಲೂ ಯೇಸು ಶಾಂತವಾಗಿ ಪೇತ್ರನನ್ನು ತಿದ್ದಿದನು. ಮಲ್ಕನ ಕಿವಿ ಮುಟ್ಟಿ ಗುಣಪಡಿಸಿದನು. ಅನಂತರ ಅಹಿಂಸಾ ತತ್ತ್ವವೊಂದನ್ನು ತಿಳಿಸಿದನು. ಅದು ಇವತ್ತಿಗೂ ಆತನ ಅನುಯಾಯಿಗಳಿಗೆ ದಾರಿದೀಪ. (ಮತ್ತಾ. 26:47-55; ಲೂಕ 22:47-51; ಯೋಹಾ. 18:10, 11) ತನ್ನ ಕರ್ತನಿಂದ ಕ್ಷಮೆಯ ಅಗತ್ಯಬಿದ್ದ ಅನೇಕ ತಪ್ಪುಗಳನ್ನು ಪೇತ್ರ ಈಗಾಗಲೇ ಮಾಡಿದ್ದನು. ಇದು ನಾವು ಕೂಡ ಅನೇಕ ಬಾರಿ ಪಾಪಮಾಡುತ್ತೇವೆ ಎನ್ನುವುದನ್ನು ನೆನಪಿಗೆ ತರುತ್ತದೆ. (ಯಾಕೋಬ 3:2 ಓದಿ.) ಪ್ರತಿದಿನವೂ ದೇವರ ಕ್ಷಮೆಯ ಅಗತ್ಯವಿಲ್ಲದವರು ನಮ್ಮಲ್ಲಿ ಯಾರಿದ್ದಾರೆ ಹೇಳಿ? ಪೇತ್ರನ ವಿಷಯಕ್ಕೆ ಬರುವುದಾದರೆ ಅವನ ತಪ್ಪುಗಳ ಸರಮಾಲೆ ಅಲ್ಲಿಗೆ ಕೊನೆಗೊಳ್ಳಲಿಲ್ಲ. ಅದೇ ರಾತ್ರಿ ಅತೀ ಗಂಭೀರ ತಪ್ಪೊಂದನ್ನು ಮಾಡಲಿದ್ದನು.

ಪೇತ್ರ ಮಾಡಿದ ಅತ್ಯಂತ ದೊಡ್ಡ ತಪ್ಪು

11, 12. (1) ಯೇಸುವಿನ ದಸ್ತಗಿರಿಯಾದ ನಂತರ ಪೇತ್ರ ಹೇಗೆ ತುಂಬ ಧೈರ್ಯ ತೋರಿಸಿದ? (2) ಪೇತ್ರ ತಾನು ಹೇಳಿದ ಮಾತಿಗೆ ತಪ್ಪಿದ್ದು ಹೇಗೆ?

11 ಕತ್ತಿದೊಣ್ಣೆಗಳನ್ನು ಹಿಡಿದುಕೊಂಡು ಬಂದಿದ್ದ ಜನರಿಗೆ ಯೇಸು, ಅವರು ತನಗಾಗಿ ಹುಡುಕುತ್ತಿರುವಲ್ಲಿ ತನ್ನ ಅಪೊಸ್ತಲರನ್ನು ಹೋಗಲು ಬಿಡುವಂತೆ ಹೇಳಿದನು. ಆ ಜನರು ಯೇಸುವನ್ನು ಬಂಧಿಸಿದಾಗ ಪೇತ್ರ ನಿಸ್ಸಹಾಯಕನಾಗಿ ನೋಡುತ್ತಾ ನಿಂತ. ಬಳಿಕ ತನ್ನ ಜೊತೆಗಿದ್ದ ಇತರ ಅಪೊಸ್ತಲರಂತೆ ಅವನೂ ಯೇಸುವನ್ನು ಬಿಟ್ಟು ಓಡಿಹೋದ.

12 ಓಡಿಹೋಗುತ್ತಿದ್ದ ಪೇತ್ರ ಯೋಹಾನರು ಒಂದು ಮನೆಯ ಬಳಿ ನಿಂತುಬಿಟ್ಟರು. ಅದು ಮಾಜಿ ಮಹಾ ಯಾಜಕ ಅನ್ನನ ಮನೆಯಾಗಿದ್ದಿರಬಹುದು. ಆ ಗುಂಪು ಯೇಸುವನ್ನು ವಿಚಾರಣೆಗೆಂದು ಮೊದಲು ಕರೆತಂದದ್ದು ಅಲ್ಲಿಗೆ. ಅಲ್ಲಿಂದ ಆತನನ್ನು ಬೇರೆಡೆ ಕರಕೊಂಡು ಹೋಗುವಾಗ ಪೇತ್ರ ಯೋಹಾನರು “ದೂರದಿಂದ ಅವನನ್ನು ಹಿಂಬಾಲಿಸುತ್ತಾ” ಇದ್ದರು. (ಮತ್ತಾ. 26:58; ಯೋಹಾ. 18:12, 13) ಪೇತ್ರ ಹೇಡಿಯಾಗಿರಲಿಲ್ಲ. ಯೇಸುವನ್ನು ಕರೆದುಕೊಂಡು ಹೋದಲ್ಲೆಲ್ಲ ಹೀಗೆ ಹಿಂಬಾಲಿಸಿಕೊಂಡು ಹೋಗಲು ಖಂಡಿತ ತುಂಬ ಧೈರ್ಯ ಬೇಕಿತ್ತು. ಏಕೆಂದರೆ ಆ ಜನರ ಗುಂಪು ಶಸ್ತ್ರಸಜ್ಜಿತವಾಗಿತ್ತು. ಆ ಗುಂಪಿನಲ್ಲಿದ್ದ ಒಬ್ಬನನ್ನು ಅವನು ಈಗಾಗಲೇ ಗಾಯಗೊಳಿಸಿದ್ದನು ಬೇರೆ. ಆದರೆ ಹೀಗೆಲ್ಲ ಧೈರ್ಯ ತೋರಿಸಿದ ಪೇತ್ರ, ಕರ್ತನ ಜೊತೆಗಿದ್ದು ಅಗತ್ಯಬಿದ್ದರೆ ಜೀವಕೊಡಲೂ ಸಿದ್ಧನೆಂದು ತಾನೇ ಹೇಳಿದಂತೆ ಈ ಸಂದರ್ಭದಲ್ಲಿ ನಡೆಯಲಿಲ್ಲ. ನಿಷ್ಠಾವಂತ ಪ್ರೀತಿ ತೋರಿಸಲಿಲ್ಲ.—ಮಾರ್ಕ 14:31.

13. ಕ್ರಿಸ್ತನನ್ನು ಸರಿಯಾಗಿ ಹಿಂಬಾಲಿಸುವ ಏಕೈಕ ಮಾರ್ಗ ಯಾವುದು?

13 ಪೇತ್ರನಂತೆ ಇಂದು ಸಹ ಅನೇಕರು ಯೇಸುವನ್ನು “ದೂರದಿಂದ” ಅಂದರೆ ಯಾರ ಗಮನಕ್ಕೂ ಬಾರದ ರೀತಿಯಲ್ಲಿ ಹಿಂಬಾಲಿಸುತ್ತಾರೆ. ಆದರೆ ಕ್ರಿಸ್ತನಿಗೆ ಆದಷ್ಟು ನಿಕಟವಾಗಿ ಅಂಟಿಕೊಂಡು ನಡೆಯುವುದೇ ಆತನನ್ನು ಸರಿಯಾಗಿ ಹಿಂಬಾಲಿಸುವ ಏಕೈಕ ಮಾರ್ಗವೆಂದು ಪೇತ್ರನೇ ಸಮಯಾನಂತರ ಬರೆದನು. ಅದರರ್ಥ ಕಷ್ಟ-ನಷ್ಟವಾದರೂ ಎಲ್ಲ ವಿಷಯಗಳಲ್ಲಿ ಯೇಸುವಿನ ಮಾದರಿಯನ್ನು ಅನುಕರಿಸಬೇಕು ಎಂದಾಗಿದೆ.—1 ಪೇತ್ರ 2:21 ಓದಿ.

14. ಯೇಸುವಿನ ವಿಚಾರಣೆ ನಡೆಯುತ್ತಿದ್ದ ಆ ರಾತ್ರಿಯಂದು ಪೇತ್ರ ಹೇಗೆ ಸಮಯ ಕಳೆದನು?

14 ಪೇತ್ರ ಎಚ್ಚರಿಕೆ ವಹಿಸಿ ಯೇಸುವನ್ನು ಹಿಂಬಾಲಿಸುತ್ತಾ ಯೆರೂಸಲೇಮಿನ ಅತಿ ಭವ್ಯ ಕಟ್ಟಡಗಳಲ್ಲೊಂದರ ಹೆಬ್ಬಾಗಿಲ ತನಕ ಬಂದನು. ತುಂಬ ಧನ, ವರ್ಚಸ್ಸು ಇದ್ದ ಮಹಾ ಯಾಜಕ ಕಾಯಫನ ಮನೆ ಅದು. ಇಂಥ ಮನೆಗಳಲ್ಲಿ ಮಧ್ಯೆ ಒಂದು ದೊಡ್ಡ ಅಂಗಳ, ಮುಂಭಾಗದಲ್ಲಿ ಒಂದು ಹೆಬ್ಬಾಗಿಲು ಇರುತ್ತಿತ್ತು. ಹೆಬ್ಬಾಗಿಲ ಬಳಿ ಬಂದ ಪೇತ್ರನನ್ನು ಬಾಗಿಲುಕಾಯುವವಳು ಒಳಗೆ ಬಿಡಲಿಲ್ಲ. ಆದರೆ ಮಹಾ ಯಾಜಕನ ಪರಿಚಯವಿದ್ದು ಈಗಾಗಲೇ ಒಳಗಿದ್ದ ಯೋಹಾನ ಅಲ್ಲಿಗೆ ಬಂದು ಪೇತ್ರನನ್ನು ಬಿಡುವಂತೆ ಅವಳಿಗೆ ಹೇಳಿದನು. ಒಳಬಂದ ಮೇಲೆ ಪೇತ್ರ ಇತ್ತ ಯೋಹಾನನ ಜೊತೆಯಲ್ಲೂ ಇರಲಿಲ್ಲ, ಅತ್ತ ಮನೆಯೊಳಗಿದ್ದ ತನ್ನ ಕರ್ತನ ಪಕ್ಕದಲ್ಲಿರಲು ಸಹ ಪ್ರಯತ್ನಿಸಲಿಲ್ಲವೆಂದು ತೋರುತ್ತದೆ. ಬದಲಾಗಿ ಆ ರಾತ್ರಿ ಬೆಂಕಿ ಮುಂದೆ ಚಳಿಕಾಯಿಸಿಕೊಳ್ಳುತ್ತಿದ್ದ ಆಳುಕಾಳುಗಳ ಜೊತೆ ಅಂಗಳದಲ್ಲೇ ನಿಂತುಕೊಂಡ. ಯೇಸುವಿನ ವಿರುದ್ಧ ಸುಳ್ಳು ಸಾಕ್ಷಿಹೇಳುವವರು ವಿಚಾರಣೆಗೆಂದು ಮನೆಯ ಒಳಗೆ ಹೊರಗೆ ಹೋಗುತ್ತಾ ಬರುತ್ತಾ ಇರುವುದನ್ನು ಅಲ್ಲಿಂದ ನೋಡುತ್ತಾ ಇದ್ದ.—ಮಾರ್ಕ 14:54-57; ಯೋಹಾ. 18:15, 16, 18.

15, 16. ಪೇತ್ರ ಮೂರು ಬಾರಿ ತನ್ನನ್ನು ಅಲ್ಲಗಳೆಯುವನೆಂದು ಯೇಸು ನುಡಿದ ಪ್ರವಾದನೆ ಹೇಗೆ ನೆರವೇರಿತೆಂದು ವಿವರಿಸಿ.

15 ಪೇತ್ರನನ್ನು ಒಳಗೆ ಬಿಟ್ಟ ಸೇವಕಿಗೆ ಈಗ ಬೆಂಕಿಯ ಬೆಳಕಿನಲ್ಲಿ ಅವನ ಮುಖ ಸ್ಪಷ್ಟವಾಗಿ ಕಾಣುತ್ತಿತ್ತು. ಅವನ ಗುರುತುಹಿಡಿದು “ನೀನು ಸಹ ಗಲಿಲಾಯದವನಾದ ಯೇಸುವಿನೊಂದಿಗೆ ಇದ್ದವನು” ಎಂದು ದೂಷಿಸಿದಳು. ಇದನ್ನು ಸ್ವಲ್ಪವೂ ನಿರೀಕ್ಷಿಸದಿದ್ದ ಪೇತ್ರ ಬೆಚ್ಚಿಬಿದ್ದು, ಯೇಸು ಯಾರೆಂದು ತನಗೆ ಗೊತ್ತೇ ಇಲ್ಲ ಎಂದು ಹೇಳಿದ. ಅವಳೇನು ಹೇಳುತ್ತಿದ್ದಾಳೊ ತನಗೆ ಅರ್ಥವಾಗುತ್ತಿಲ್ಲ ಎಂದೂ ಒದರಿದ. ಬಳಿಕ ಜನರ ಕಣ್ತಪ್ಪಿಸಲು ಅಲ್ಲಿಂದ ಜಾಗ ಖಾಲಿಮಾಡಿ ಹೆಬ್ಬಾಗಿಲ ಬಳಿ ಬಂದು ನಿಂತ. ಅಷ್ಟರಲ್ಲಿ ಇನ್ನೊಬ್ಬಳು ಅವನನ್ನು ನೋಡಿ, “ಇವನು ನಜರೇತಿನವನಾದ ಯೇಸುವಿನೊಂದಿಗೆ ಇದ್ದನು” ಎಂದು ಅದೇ ಮಾತು ಹೇಳಿದಳು. ಆಗ ಪೇತ್ರ “ಆ ಮನುಷ್ಯನನ್ನು ನಾನರಿಯೆ” ಎಂದು ಆಣೆಯಿಟ್ಟು ಹೇಳಿದನು. (ಮತ್ತಾ. 26:69-72; ಮಾರ್ಕ 14:66-68) ಅವನು ಹೀಗೆ ಎರಡು ಬಾರಿ ಯೇಸುವನ್ನು ಅಲ್ಲಗಳೆದ ನಂತರವೊ ಏನೊ ಹುಂಜ ಕೂಗಿತು. ಇದು ಅವನ ಕಿವಿಗೆ ಬಿದ್ದರೂ ಅವನೆಷ್ಟು ಗೊಂದಲದಲ್ಲಿದ್ದನೆಂದರೆ ಕೆಲವೇ ತಾಸುಗಳ ಹಿಂದೆ ಯೇಸು ನುಡಿದಿದ್ದ ಪ್ರವಾದನೆ ಅವನ ನೆನಪಿಗೆ ಬರಲಿಲ್ಲ.

16 ಇದಾದ ನಂತರವೂ ಪೇತ್ರ ಯಾರ ಕಣ್ಣಿಗೂ ಬೀಳದಿರಲು ಸಿಕ್ಕಾಪಟ್ಟೆ ಪ್ರಯತ್ನಿಸುತ್ತಾ ಇದ್ದ. ಆಗ ಅಂಗಳದಲ್ಲಿ ನಿಂತಿದ್ದ ಜನರ ಗುಂಪೊಂದು ಪೇತ್ರನ ಬಳಿ ಬಂತು. ಅವರಲ್ಲೊಬ್ಬನು ಪೇತ್ರ ಗಾಯಗೊಳಿಸಿದ್ದ ಮಲ್ಕನ ಸಂಬಂಧಿಕ. ಅವನು ಪೇತ್ರನಿಗೆ “ನಾನು ನಿನ್ನನ್ನು ತೋಟದಲ್ಲಿ ಅವನೊಂದಿಗೆ ನೋಡಿದೆನಲ್ಲವೆ?” ಎಂದನು. ಅವರು ತಪ್ಪು ತಿಳಿದಿದ್ದಾರೆಂದು ನಂಬಿಸಲು ಪೇತ್ರ ಶತಪ್ರಯತ್ನ ಮಾಡಿದನು. ಅದಕ್ಕಾಗಿ ಆಣೆಯನ್ನೂ ಇಟ್ಟನು. ತಾನು ಹೇಳಿದ್ದು ಸುಳ್ಳಾಗಿದ್ದರೆ ತನಗೆ ಶಾಪತಗಲಲಿ ಎಂದು ಹೇಳಿದ್ದಿರಬಹುದು. ಹೀಗೆ ಪೇತ್ರ ಯೇಸುವನ್ನು ಮೂರನೇ ಬಾರಿ ಅಲ್ಲಗಳೆದನು. ಆ ಮಾತು ಅವನ ಬಾಯಿಂದ ಹೊರಬಿದ್ದ ಕೂಡಲೇ ಹುಂಜ ಎರಡನೇ ಬಾರಿ ಕೂಗಿದ್ದು ಪೇತ್ರನ ಕಿವಿಗೆ ಬಿತ್ತು.—ಯೋಹಾ. 18:26, 27; ಮಾರ್ಕ 14:71, 72.

“ಕರ್ತನು ತಿರುಗಿ ಪೇತ್ರನನ್ನು ದೃಷ್ಟಿಸಿ ನೋಡಿದನು”

17, 18. (1) ತಾನೆಂಥ ದೊಡ್ಡ ತಪ್ಪುಮಾಡಿದ್ದೇನೆಂದು ಪೇತ್ರ ಅರಿತಾಗ ಅವನ ಪ್ರತಿಕ್ರಿಯೆ ಏನಾಗಿತ್ತು? (2) ಪೇತ್ರ ಏನು ಅಂದುಕೊಂಡಿರಬಹುದು?

17 ಅದೇ ವೇಳೆಗೆ ಮಹಡಿಯ ಮೊಗಸಾಲೆಗೆ ಬಂದಿದ್ದ ಯೇಸು ಕೆಳಗೆ ಅಂಗಳದಲ್ಲಿದ್ದ ಪೇತ್ರನನ್ನು ನೋಡಿದನು. ಲೇಖನದ ಆರಂಭದಲ್ಲಿ ತಿಳಿಸಲಾದ ಆ ಕ್ಷಣ ಇದೇ. ಅವರಿಬ್ಬರ ನೋಟ ಪರಸ್ಪರ ಸಂಧಿಸಿದ ಕೂಡಲೇ ಪೇತ್ರನಿಗೆ ತಾನೆಂಥ ದೊಡ್ಡ ತಪ್ಪುಮಾಡಿ ಕರ್ತನನ್ನು ನಿರಾಶೆಗೊಳಿಸಿದ್ದೇನೆ ಎಂಬ ಸಂಗತಿ ಹೊಳೆಯಿತು. ತಪ್ಪಿತಸ್ಥ ಭಾವನೆಯಿಂದ ಜಜ್ಜಿಹೋದ ಪೇತ್ರ ಆ ಅಂಗಳದಿಂದ ಹೊರನಡೆದನು. ಭಾರವಾದ ಹೆಜ್ಜೆಹಾಕುತ್ತಾ ಅವನು ನಡೆದುಬರುತ್ತಿದ್ದಾಗ ಬೀದಿಗಳಲ್ಲಿ ಪೂರ್ಣಚಂದ್ರ ಬೆಳಕು ಚೆಲ್ಲುತ್ತಿತ್ತು. ಇರುಳು ಕರಗಿ ಇನ್ನೇನು ಹಗಲು ಮೂಡಲಿತ್ತು. ಪೇತ್ರನ ಕಣ್ಣುಗಳು ತುಂಬಿಬಂದವು. ಅಂಗಳದಲ್ಲಿ ಅವನೇನು ಮಾಡಿದ್ದನೊ ಆ ದೃಶ್ಯಗಳು ಅವನ ಕಣ್ಮುಂದೆ ಬಂದವು. ದುಃಖದ ಕಟ್ಟೆಯೊಡೆದು ಬಿಕ್ಕಿಬಿಕ್ಕಿ ಅತ್ತನು.—ಮಾರ್ಕ 14:72; ಲೂಕ 22:61, 62.

18 ಒಬ್ಬ ವ್ಯಕ್ತಿ ತಾನೊಂದು ಗಂಭೀರ ತಪ್ಪು ಮಾಡಿದ್ದೇನೆಂದು ಮನಗಂಡಾಗ ದೇವರ ಕ್ಷಮೆ ತನಗೆ ಸಿಗಲು ಸಾಧ್ಯವೇ ಇಲ್ಲವೆಂದು ಅಂದುಕೊಳ್ಳುವುದು ಸಹಜ. ಪೇತ್ರನೂ ಹಾಗೆಯೇ ಅಂದುಕೊಂಡಿರಬಹುದು. ಅವನಿಗೆ ಕ್ಷಮೆ ಸಿಗುವುದು ಅಸಾಧ್ಯವಾಗಿತ್ತೇ?

ಪೇತ್ರನ ತಪ್ಪು ಅಕ್ಷಮ್ಯವೇ?

19. (1) ಪೇತ್ರನಿಗೆ ತನ್ನ ತಪ್ಪಿನ ಬಗ್ಗೆ ಹೇಗನಿಸಿರಬಹುದು? (2) ಅವನು ದುಃಖದಲ್ಲಿ ಕೊಚ್ಚಿಹೋಗಲಿಲ್ಲವೆಂದು ನಮಗೆ ಹೇಗೆ ಗೊತ್ತಾಗುತ್ತದೆ?

19 ಆ ದಿನ ಯೇಸುವಿಗೆ ಏನೆಲ್ಲ ಆಯಿತೊ ಅದನ್ನು ನೋಡಿದಾಗ ಪೇತ್ರನ ಹೃದಯ ದುಃಖದಿಂದ ಇನ್ನಷ್ಟು ಭಾರವಾಗಿರಬೇಕು. ಅನೇಕ ತಾಸು ನರಳಿ ನರಳಿ ಯೇಸು ಮಧ್ಯಾಹ್ನ ಪ್ರಾಣಬಿಟ್ಟಾಗಲಂತೂ ಪೇತ್ರ ತನ್ನನ್ನೇ ಎಷ್ಟೊಂದು ಹಳಿದುಕೊಂಡಿರಬೇಕು! ಯೇಸು ಮಾನವನಾಗಿ ಜೀವಿಸಿದ ಕೊನೆಯ ದಿನದಂದು ಅನುಭವಿಸಿದ ನೋವಿಗೆ ತಾನು ಇನ್ನಷ್ಟೂ ನೋವು ಕೂಡಿಸಿದೆನಲ್ಲ ಎಂದು ನೆನಸಿ ನೆನಸಿ ತುಂಬ ಕೊರಗಿರಬೇಕು. ಆದರೆ ಅವನು ಅತೀವ ದುಃಖದಲ್ಲಿ ಕೊಚ್ಚಿಹೋಗಲಿಲ್ಲ. ಇದು ನಮಗೆ ಹೇಗೆ ಗೊತ್ತು? ಸ್ವಲ್ಪದರಲ್ಲೇ ಅವನು ತನ್ನ ಆಧ್ಯಾತ್ಮಿಕ ಸಹೋದರರೊಂದಿಗೆ ಇದ್ದನೆಂದು ಬೈಬಲಲ್ಲಿ ಓದುತ್ತೇವೆ. (ಲೂಕ 24:33) ಆ ಕರಾಳ ರಾತ್ರಿಯಂದು ತಾವು ನಡೆದುಕೊಂಡ ರೀತಿಗಾಗಿ ಅಪೊಸ್ತಲರೆಲ್ಲರೂ ಖಂಡಿತ ವಿಷಾದಿಸಿರಬೇಕು. ತಮ್ಮ ಒಡನಾಟದಿಂದ ಅವರು ಪರಸ್ಪರರನ್ನು ಸಂತೈಸಿರಬೇಕು.

20. ಪೇತ್ರನ ವಿವೇಕಯುತ ನಿರ್ಣಯದಿಂದ ನಾವೇನು ಕಲಿಯಬಹುದು?

20 ಪೇತ್ರ ಮಾಡಿದ ವಿವೇಕಯುತ ನಿರ್ಣಯಗಳಲ್ಲಿ ಒಂದನ್ನು ನಾವಿಲ್ಲಿ ಕಾಣಬಹುದು. ದೇವರ ಸೇವಕನೊಬ್ಬನು ತಪ್ಪುಮಾಡುವಾಗ ಒಂದರ್ಥದಲ್ಲಿ ಬಿದ್ದ ಹಾಗೆ. ಮಾಡಿದ ತಪ್ಪು ಎಷ್ಟು ಗಂಭೀರವಾದದ್ದು ಎನ್ನುವುದಕ್ಕಿಂತ ಬಿದ್ದಲ್ಲಿಂದ ಎದ್ದು ತನ್ನ ತಪ್ಪನ್ನು ಸರಿಪಡಿಸಲು ಅವನಿಗೆ ದೃಢಮನಸ್ಸಿದೆಯೇ ಎನ್ನುವುದು ಮುಖ್ಯ. (ಜ್ಞಾನೋಕ್ತಿ 24:16 ಓದಿ.) ಪೇತ್ರ ತುಂಬ ನೊಂದಿದ್ದರೂ ತನ್ನ ಸಹೋದರರೊಂದಿಗೆ ಸೇರಿಬರುವ ಮೂಲಕ ನಿಜ ನಂಬಿಕೆ ತೋರಿಸಿದನು. ದುಃಖ ಅಥವಾ ಪಶ್ಚಾತ್ತಾಪದ ಬೇಗೆಯಲ್ಲಿ ಬೇಯುತ್ತಿರುವಾಗ ಒಬ್ಬ ವ್ಯಕ್ತಿಗೆ ಯಾರೊಟ್ಟಿಗೂ ಬೆರೆಯದೆ ಒಂಟಿಯಾಗಿರಲು ತುಂಬ ಮನಸ್ಸಾಗಬಹುದು. ಆದರೆ ಅದು ಅಪಾಯಕರ. (ಜ್ಞಾನೋ. 18:1) ಅಂಥ ಸಂದರ್ಭದಲ್ಲಿ ಜೊತೆವಿಶ್ವಾಸಿಗಳ ಒಟ್ಟಿಗಿದ್ದು, ಆಧ್ಯಾತ್ಮಿಕ ಬಲವನ್ನು ಪುನಃ ಪಡೆದುಕೊಳ್ಳುವುದೇ ವಿವೇಕ.—ಇಬ್ರಿ. 10:24, 25.

21. ಆಧ್ಯಾತ್ಮಿಕ ಸಹೋದರರೊಂದಿಗಿದ್ದ ಕಾರಣ ಪೇತ್ರನಿಗೆ ಯಾವ ಸುದ್ದಿ ಕೇಳಲು ಸಿಕ್ಕಿತು?

21 ಪೇತ್ರ ತನ್ನ ಆಧ್ಯಾತ್ಮಿಕ ಸಹೋದರರೊಂದಿಗೆ ಇದ್ದಿದ್ದರಿಂದಲೇ ಅವನಿಗೂ ಯೇಸುವಿನ ಮೃತದೇಹ ಸಮಾಧಿಯಲ್ಲಿಲ್ಲ ಎಂಬ ಆಘಾತಕಾರಿ ಸುದ್ದಿ ಗೊತ್ತಾಯಿತು. ಕೂಡಲೇ ಅವನೂ ಯೋಹಾನನೂ ಯೇಸುವಿನ ಸಮಾಧಿಯ ಬಳಿ ಓಡಿದರು. ಪ್ರಾಯದಲ್ಲಿ ಬಹುಶಃ ಪೇತ್ರನಿಗಿಂತ ಚಿಕ್ಕವನಾಗಿದ್ದ ಯೋಹಾನನು ಸಮಾಧಿ ಬಳಿ ಮೊದಲು ತಲಪಿದನು. ಸಮಾಧಿಯ ಬಾಯಿಗೆ ಭದ್ರವಾಗಿ ಮುಚ್ಚಲಾಗಿದ್ದ ಕಲ್ಲು ಉರುಳಿಸಲ್ಪಟ್ಟಿರುವುದನ್ನು ಕಂಡು ಒಳಹೋಗಲು ಸ್ವಲ್ಪ ಹಿಂಜರಿದನು. ಆದರೆ ಪೇತ್ರ ಹಿಂಜರಿಯಲಿಲ್ಲ. ಓಡೋಡಿ ಬಂದು ಏದುಸಿರು ಬಿಡುತ್ತಿದ್ದನಾದರೂ ನೇರವಾಗಿ ಒಳಗೆ ಹೋದನು. ಯೇಸುವಿನ ದೇಹ ಅಲ್ಲಿರಲಿಲ್ಲ!!—ಯೋಹಾ. 20:3-9.

22. ಪೇತ್ರನ ಹೃದಯದಲ್ಲಿದ್ದ ದುಃಖ, ಸಂಶಯವೆಲ್ಲ ಕರಗಿಹೋಗಲು ಕಾರಣವೇನು?

22 ಯೇಸುವಿನ ಪುನರುತ್ಥಾನ ಆಗಿದೆಯೆಂದು ಪೇತ್ರ ನಂಬಿದನೇ? ಯೇಸು ಜೀವಿತನಾಗಿ ಎದ್ದಿದ್ದಾನೆಂದು ದೇವದೂತರು ತಿಳಿಸಿದ್ದನ್ನು ನಂಬಿಗಸ್ತ ಸ್ತ್ರೀಯರು ಹೇಳಿದಾಗ ಅವನು ಮೊದಲು ನಂಬಲಿಲ್ಲ. (ಲೂಕ 23:55–24:11) ಆದರೆ ಪೇತ್ರನ ಹೃದಯದಲ್ಲಿದ್ದ ದುಃಖ, ಸಂಶಯವೆಲ್ಲ ಆ ದಿನದ ಕೊನೆಯಷ್ಟಕ್ಕೆ ಕರಗಿಹೋಯಿತು. ಕಾರಣ ಯೇಸು ಈಗ ಬದುಕಿದ್ದನು. ಆತನೀಗ ಒಬ್ಬ ಬಲಶಾಲಿ ಆತ್ಮಜೀವಿಯಾಗಿದ್ದನು! ತನ್ನೆಲ್ಲ ಅಪೊಸ್ತಲರಿಗೆ ಕಾಣಿಸಿಕೊಂಡನು. ಆದರೆ ಅದಕ್ಕೂ ಮುಂಚೆ ಅದೇ ದಿನ ಇನ್ನೂ ಒಂದು ವಿಷಯ ನಡೆದಿತ್ತು. ಅದೇನೆಂದರೆ ಯೇಸು ಪುನರುತ್ಥಾನಗೊಂಡ ದಿನವೇ ಎಲ್ಲ ಅಪೊಸ್ತಲರಿಗಿಂತ ಮುಂಚೆ ಪೇತ್ರನಿಗೆ ಕಾಣಿಸಿಕೊಂಡನು. ಹಾಗಾಗಿ ಅಪೊಸ್ತಲರು “ಕರ್ತನು ಎಬ್ಬಿಸಲ್ಪಟ್ಟಿದ್ದಾನೆ ಎಂಬುದು ನಿಜ, ಅವನು ಸೀಮೋನನಿಗೆ ಕಾಣಿಸಿಕೊಂಡನು” ಎಂದು ಹೇಳಿದರು. (ಲೂಕ 24:34) ಸಮಯಾನಂತರ ಅಪೊಸ್ತಲ ಪೌಲನು ಕೂಡ ಆ ಗಮನಾರ್ಹ ದಿನದ ಕುರಿತು ಬರೆಯುತ್ತಾ, ಯೇಸು “ಕೇಫನಿಗೂ ಬಳಿಕ ಹನ್ನೆರಡು ಮಂದಿಗೂ ಕಾಣಿಸಿಕೊಂಡನು” ಎಂದು ಹೇಳಿದನು. (1 ಕೊರಿಂ. 15:5) ಕೇಫ ಮತ್ತು ಸೀಮೋನ ಎಂಬುದು ಪೇತ್ರನಿಗಿದ್ದ ಇನ್ನೆರಡು ಹೆಸರುಗಳು. ಹೌದು, ಯೇಸು ಪೇತ್ರನೊಬ್ಬನಿಗೆ ಪ್ರತ್ಯೇಕವಾಗಿ ಕಾಣಿಸಿಕೊಂಡ!

ತನ್ನ ಕರ್ತನಿಂದ ಕ್ಷಮೆಯ ಅಗತ್ಯಬಿದ್ದ ಅನೇಕ ತಪ್ಪುಗಳನ್ನು ಪೇತ್ರ ಮಾಡಿದ್ದನು. ಪ್ರತಿದಿನವೂ ದೇವರ ಕ್ಷಮೆಯ ಅಗತ್ಯವಿಲ್ಲದವರು ನಮ್ಮಲ್ಲಿ ಯಾರಿದ್ದಾರೆ ಹೇಳಿ?

23. ಇಂದು ಗಂಭೀರ ಪಾಪಗೈಯುವ ಕ್ರೈಸ್ತರು ಪೇತ್ರನ ವಿಷಯವನ್ನು ಏಕೆ ನೆನಪಿನಲ್ಲಿಡಬೇಕು?

23 ಯೇಸು ಪೇತ್ರನನ್ನು ಭೇಟಿಯಾದ ಆ ಸಂದರ್ಭ ಎಷ್ಟು ಮನಸ್ಪರ್ಶಿಯಾಗಿದ್ದಿರಬೇಕು! ಆದರೆ ಅದರ ವಿವರಗಳನ್ನು ಬೈಬಲ್‌ ಕೊಡುವುದಿಲ್ಲ. ಅಲ್ಲಿ ನಡೆದ ಸಂಗತಿ ಅವರಿಬ್ಬರ ಮಧ್ಯೆಯೇ ಉಳಿಯಿತು. ತನ್ನ ಪ್ರೀತಿಯ ಕರ್ತನು ಪುನಃ ಜೀವಿತನಾಗಿರುವುದನ್ನು ನೋಡಲು ಮತ್ತು ತನ್ನ ತಪ್ಪಿಗಾಗಿ ದುಃಖ, ಪಶ್ಚಾತ್ತಾಪ ವ್ಯಕ್ತಪಡಿಸಲು ಸಿಕ್ಕಿದ ಈ ಸಂದರ್ಭದಲ್ಲಿ ಪೇತ್ರ ತುಂಬ ಭಾವುಕನಾಗಿದ್ದಿರಬಹುದೆಂದು ನಾವು ಕಲ್ಪಿಸಿಕೊಳ್ಳಬಹುದಷ್ಟೆ. ಪೇತ್ರನಿಗೆ ಈಗ ಬೇರೇನೂ ಬೇಕಾಗಿರಲಿಲ್ಲ. ಬೇಕಾಗಿದ್ದದ್ದು ಯೇಸುವಿನಿಂದ ಕ್ಷಮೆಯೊಂದೇ. ಯೇಸು ಪೇತ್ರನನ್ನು ಸಂಪೂರ್ಣವಾಗಿ ಕ್ಷಮಿಸಿದನೆಂಬದರಲ್ಲಿ ಸಂಶಯವೇ ಇಲ್ಲ. ಇಂದು ಗಂಭೀರ ಪಾಪಗೈಯುವ ಕ್ರೈಸ್ತರು ಪೇತ್ರನ ವಿಷಯವನ್ನು ನೆನಪಿನಲ್ಲಿಡತಕ್ಕದ್ದು. ದೇವರು ನಮ್ಮನ್ನು ಕ್ಷಮಿಸಲು ಸಾಧ್ಯವೇ ಇಲ್ಲವೆಂದು ಎಂದಿಗೂ ನೆನಸಬಾರದು. ಯೇಸು ಯಾರನ್ನು ಪರಿಪೂರ್ಣವಾಗಿ ಪ್ರತಿಬಿಂಬಿಸಿದನೊ ಆ ತಂದೆ “ಮಹಾಕೃಪೆಯಿಂದ ಕ್ಷಮಿಸುವ”ವನು ಆಗಿದ್ದಾನೆ.—ಯೆಶಾ. 55:7.

ಪೇತ್ರನಿಗೆ ಕ್ಷಮೆ ಸಿಕ್ಕಿತೆನ್ನುವುದಕ್ಕೆ ಇನ್ನಷ್ಟು ಪುರಾವೆ

24, 25. (1) ಪೇತ್ರ ಗಲಿಲಾಯದ ಸಮುದ್ರದಲ್ಲಿ ರಾತ್ರಿ ಮೀನು ಹಿಡಿಯಲು ಹೋದಾಗ ಏನಾಯಿತೆಂದು ವರ್ಣಿಸಿ. (2) ಮರುದಿನ ಬೆಳಗ್ಗೆ ಯೇಸು ನಡಿಸಿದ ಅದ್ಭುತಕ್ಕೆ ಪೇತ್ರನ ಪ್ರತಿಕ್ರಿಯೆ ಏನಾಗಿತ್ತು?

24 ಯೇಸು ಅಪೊಸ್ತಲರಿಗೆ ಗಲಿಲಾಯಕ್ಕೆ ಹೋಗುವಂತೆ ಹೇಳಿದನು. ಅಲ್ಲಿ ಅವರು ಆತನನ್ನು ಪುನಃ ನೋಡಲಿದ್ದರು. ಅವರು ಅಲ್ಲಿಗೆ ತಲಪಿದಾಗ ಪೇತ್ರ ಗಲಿಲಾಯ ಸಮುದ್ರದಲ್ಲಿ ಮೀನುಹಿಡಿಯಲು ಹೋದನು. ಅಪೊಸ್ತಲರಲ್ಲಿ ಕೆಲವರು ಅವನ ಜೊತೆಗೂಡಿದರು. ಪೇತ್ರ ಈ ಹಿಂದೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದ ಸರೋವರದಲ್ಲೇ ಈಗ ಪುನಃ ಇದ್ದನು. ಕಿರ್ರೆನ್ನುತ್ತಿದ್ದ ದೋಣಿ, ಲಪಲಪ ಸದ್ದು ಮಾಡುತ್ತಿದ್ದ ಅಲೆಗಳು, ಕೈಯಲ್ಲಿ ಹಿಡಿದಿದ್ದ ಒರಟಾದ ಬಲೆಗಳು ಇವೆಲ್ಲ ಅವನಿಗೆ ಚಿರಪರಿಚಿತವಾಗಿತ್ತು. ಹಾಗಾಗಿ ಅವನಿಗೆ ತುಂಬ ಹಿತವೆನಿಸಿತು. ಆದರೆ ಆ ಇಡೀ ರಾತ್ರಿ ಮೀನು ಮಾತ್ರ ಸಿಗಲಿಲ್ಲ.—ಮತ್ತಾ. 26:32; ಯೋಹಾ. 21:1-3.

ಪೇತ್ರ ದೋಣಿಯಿಂದ ಧುಮುಕಿ ಈಜಿ ದಡ ಸೇರಿದನು

25 ಮುಂಜಾವಲ್ಲಿ ದಡದಿಂದ ಒಬ್ಬ ವ್ಯಕ್ತಿ ಅವರಿಗೆ ದೋಣಿಯ ಇನ್ನೊಂದು ಬದಿಯಲ್ಲಿ ಬಲೆಬೀಸುವಂತೆ ಕೂಗಿ ಹೇಳಿದನು. ಅವರು ಹಾಗೇ ಮಾಡಿದರು. ಆಗ 153 ಮೀನುಗಳು ಸಿಕ್ಕಿದವು! ಆ ವ್ಯಕ್ತಿ ಯಾರೆಂದು ಪೇತ್ರನಿಗೆ ಕೂಡಲೇ ಗೊತ್ತಾಯಿತು. ದೋಣಿಯಿಂದ ಧುಮುಕಿ ಈಜಿ ದಡ ಸೇರಿದನು. ಅಲ್ಲಿ ಯೇಸು ತನ್ನ ಈ ನಂಬಿಗಸ್ತ ಮಿತ್ರರಿಗೋಸ್ಕರ ಮೀನುಗಳನ್ನು ಇದ್ದಲಿನ ಮೇಲೆ ಸುಟ್ಟು ಸಿದ್ಧವಾಗಿಟ್ಟಿದ್ದನು. ಅವರಿಗದನ್ನು ತಿನ್ನಲು ಕೊಟ್ಟ ನಂತರ ತನ್ನ ಗಮನವನ್ನು ಪೇತ್ರನ ಮೇಲೆ ನೆಟ್ಟನು.—ಯೋಹಾ. 21:4-14.

26, 27. (1) ಯೇಸು ಪೇತ್ರನಿಗೆ ಏನು ಮಾಡಲು ಮೂರು ಸಲ ಅವಕಾಶ ಕೊಟ್ಟನು? (2) ಪೇತ್ರನನ್ನು ಸಂಪೂರ್ಣವಾಗಿ ಕ್ಷಮಿಸಿದ್ದಾನೆಂಬುದಕ್ಕೆ ಯೇಸು ಯಾವ ಸಾಕ್ಷ್ಯ ಕೊಟ್ಟನು?

26 ಅವರು ಹಿಡಿದಿದ್ದ ಮೀನಿನ ರಾಶಿಗೆ ಬಹುಶಃ ಕೈತೋರಿಸುತ್ತಾ, “ಇವುಗಳಿಗಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸುತ್ತೀಯೊ?” ಎಂದು ಯೇಸು ಪೇತ್ರನಿಗೆ ಕೇಳಿದನು. ಅವನ ಹೃದಯದಲ್ಲಿ ಯೇಸುವಿಗಿಂತ ಮೀನು ಹಿಡಿಯುವ ಕಸುಬಿನ ಮೇಲೆ ಜಾಸ್ತಿ ಪ್ರೀತಿಯಿತ್ತೇ? ಪೇತ್ರನು ಯೇಸುವನ್ನು ಅಲ್ಲಗಳೆದದ್ದು ಮೂರು ಸಾರಿ. ಈಗ ಯೇಸು ತನ್ನ ಮೇಲೆ ಪೇತ್ರನಿಗಿರುವ ಪ್ರೀತಿಯನ್ನು ಮಿತ್ರರ ಮುಂದೆ ದೃಢೀಕರಿಸಲು ಅವನಿಗೆ ಅವಕಾಶ ಕೊಟ್ಟದ್ದು ಸಹ ಮೂರು ಸಾರಿ. ಪೇತ್ರನು ಒಂದೊಂದು ಸಲವೂ ತನ್ನ ಪ್ರೀತಿಯನ್ನು ದೃಢೀಕರಿಸಿದಂತೆ ಅದನ್ನು ವ್ಯಕ್ತಪಡಿಸುವ ವಿಧವನ್ನೂ ಯೇಸು ತಿಳಿಸಿದನು. ಪೇತ್ರ ಬೇರೆಲ್ಲದಕ್ಕಿಂತ ಪವಿತ್ರ ಸೇವೆಗೆ ಪ್ರಾಧಾನ್ಯತೆ ಕೊಡುತ್ತಾ ಕ್ರಿಸ್ತನ ಕುರಿಹಿಂಡಿಗೆ ಅಂದರೆ ನಿಷ್ಠಾವಂತ ಅನುಯಾಯಿಗಳಿಗೆ ಆಧ್ಯಾತ್ಮಿಕವಾಗಿ ಉಣಿಸುತ್ತಾ, ಬಲಪಡಿಸುತ್ತಾ, ಪಾಲಿಸುತ್ತಾ ಇರುವ ಮೂಲಕ ಆ ಪ್ರೀತಿಯನ್ನು ವ್ಯಕ್ತಪಡಿಸಬೇಕಿತ್ತು.—ಲೂಕ 22:32; ಯೋಹಾ. 21:15-17.

27 ಹೀಗೆ ಯೇಸು ತನಗೂ ತನ್ನ ತಂದೆಗೂ ಪೇತ್ರ ಈಗಲೂ ಉಪಯುಕ್ತನಾಗಿದ್ದಾನೆಂದು ಆಶ್ವಾಸನೆ ಕೊಟ್ಟನು. ಕ್ರಿಸ್ತನ ನಿರ್ದೇಶನದಡಿಯಿರುವ ಸಭೆಯಲ್ಲಿ ಪೇತ್ರನಿಗೊಂದು ಮಹತ್ವಪೂರ್ಣ ಪಾತ್ರವಿರಲಿತ್ತು. ಯೇಸು ಪೇತ್ರನನ್ನು ಸಂಪೂರ್ಣವಾಗಿ ಕ್ಷಮಿಸಿದ್ದನು ಎಂಬದಕ್ಕೆ ಇದಕ್ಕಿಂತ ಪ್ರಬಲ ಸಾಕ್ಷ್ಯ ಇನ್ನೇನು ಬೇಕು? ಯೇಸು ತೋರಿಸಿದ ಈ ಕರುಣೆ ನಿಜವಾಗಿಯೂ ಪೇತ್ರನ ಮನಸ್ಪರ್ಶಿಸಿತು. ತಾನು ಮಾಡಿದ ತಪ್ಪಿನಿಂದ ಪಾಠ ಕಲಿತನು.

28. ಪೇತ್ರನು ಹೇಗೆ ತನ್ನ ಹೆಸರಿಗೆ ತಕ್ಕಂತೆ ಜೀವಿಸಿದನು?

28 ತನಗೆ ನೀಡಲಾದ ನೇಮಕವನ್ನು ಪೇತ್ರ ಹಲವಾರು ವರ್ಷಗಳ ವರೆಗೆ ನಂಬಿಗಸ್ತಿಕೆಯಿಂದ ಪೂರೈಸಿದನು. ಯೇಸು ತನ್ನ ಮರಣದ ಮುಂಚಿನ ದಿನ ಆಜ್ಞೆಯಿತ್ತಂತೆ ಪೇತ್ರ ತನ್ನ ಸಹೋದರರನ್ನು ಬಲಪಡಿಸಿದನು. ಕ್ರಿಸ್ತನ ಅನುಯಾಯಿಗಳನ್ನು ದಯೆಯಿಂದ, ತಾಳ್ಮೆಯಿಂದ ಆಧ್ಯಾತ್ಮಿಕವಾಗಿ ಪಾಲಿಸಿದನು, ಉಣಿಸಿದನು. ಯೇಸು ಕೊಟ್ಟಿದ್ದ “ಬಂಡೆ” ಎಂಬರ್ಥವುಳ್ಳ ಹೆಸರಿಗೆ ತಕ್ಕಂತೆ ಸಭೆಯಲ್ಲಿ ಸತ್ಪ್ರಭಾವಬೀರುವ ಅಚಲ, ದೃಢ ಮತ್ತು ಭರವಸಾರ್ಹ ವ್ಯಕ್ತಿಯಾದನು. ಇದಕ್ಕೆ ಅವನು ಪ್ರೀತಿಯಿಂದ ಬರೆದ ಎರಡು ಪತ್ರಗಳೇ ಸಾಕ್ಷಿ. ಇವುಗಳಿಂದ ಅವನಿಗೆ ಒಬ್ಬೊಬ್ಬ ಕ್ರೈಸ್ತನಲ್ಲೂ ಇದ್ದ ವೈಯಕ್ತಿಕ ಆಸಕ್ತಿ ತೋರಿಬರುತ್ತದೆ. ಆ ಎರಡೂ ಪತ್ರಗಳು ಇಂದು ಬೈಬಲಿನಲ್ಲಿ ಅಮೂಲ್ಯ ಪುಸ್ತಕಗಳಾಗಿವೆ. ಪೇತ್ರನು ಯೇಸುವಿನಿಂದ ಕಲಿತಿದ್ದ ಕ್ಷಮೆಯ ಪಾಠವನ್ನು ಎಂದಿಗೂ ಮರೆಯಲಿಲ್ಲವೆಂದು ಸಹ ಆ ಪತ್ರಗಳು ತೋರಿಸುತ್ತವೆ.—1 ಪೇತ್ರ 3:8, 9; 4:8 ಓದಿ.

29. ನಾವು ಪೇತ್ರನ ನಂಬಿಕೆಯನ್ನು, ಆತನ ಕರ್ತನ ಕರುಣೆಯನ್ನು ಹೇಗೆ ಅನುಕರಿಸಬಲ್ಲೆವು?

29 ಆ ಪಾಠವನ್ನು ನಾವು ಕೂಡ ಕಲಿಯೋಣ. ನಾವು ಮಾಡುವ ಅನೇಕ ತಪ್ಪುಗಳಿಗಾಗಿ ಪ್ರತಿದಿನ ದೇವರ ಬಳಿ ಕ್ಷಮೆಯಾಚಿಸುತ್ತೇವೊ? ದೇವರು ನಮ್ಮನ್ನು ಕ್ಷಮಿಸಿದ್ದಾನೆಂದು ಅಂಗೀಕರಿಸಿ ಆತನ ಕ್ಷಮೆ ನಮ್ಮನ್ನು ಶುದ್ಧೀಕರಿಸಬಲ್ಲದೆಂದು ನಂಬುತ್ತೇವೊ? ಹಾಗೆಯೇ ನಾವೂ ಇತರರನ್ನು ಕ್ಷಮಿಸುತ್ತೇವೊ? ಹೀಗೆ ಮಾಡಿದರೆ ನಾವು ಪೇತ್ರನ ನಂಬಿಕೆಯನ್ನು, ಅವನ ಕರ್ತನ ಕರುಣೆಯನ್ನು ಅನುಕರಿಸುವವರಾಗುವೆವು.