ಅಧ್ಯಾಯ 2
“ನಾನೇ ಮಾರ್ಗವೂ ಸತ್ಯವೂ ಜೀವವೂ”
1, 2. ನಮ್ಮ ಸ್ವಪ್ರಯತ್ನದಿಂದ ಯೆಹೋವನನ್ನು ಸಮೀಪಿಸಲು ಸಾಧ್ಯವಿಲ್ಲವೇಕೆ? ಈ ವಿಷಯದಲ್ಲಿ ಯೇಸು ನಮಗೆ ಯಾವ ನೆರವು ನೀಡಿದ್ದಾನೆ?
ನಿಮಗೆಂದಾದರೂ ದಾರಿತಪ್ಪಿಹೋದ ಅನುಭವವಾಗಿದೆಯೋ? ಬಹುಶಃ ಸ್ನೇಹಿತನ ಮನೆಯನ್ನೋ ಬಂಧುವೊಬ್ಬನ ಮನೆಯನ್ನೋ ಹುಡುಕಿಕೊಂಡು ಹೋದ ನೆನಪು ನಿಮಗೆ ಬರಬಹುದು. ಹುಡುಕುತ್ತಾ ಹೋಗುತ್ತಿದ್ದಾಗ ದಾರಿಯಲ್ಲಿ ಎದುರಾದವರ ಬಳಿ ನೀವು ಖಂಡಿತ ವಿಚಾರಿಸಿರುತ್ತೀರಿ. ಹಾಗೆ ವಿಚಾರಿಸಿದಾಗ ಆ ದಯಾಪರ ವ್ಯಕ್ತಿ ದಾರಿ ತೋರಿಸುವುದು ಮಾತ್ರವಲ್ಲ, ‘ನನ್ನ ಹಿಂದೆ ಬನ್ನಿ ನಾನು ಕರೆದುಕೊಂಡು ಹೋಗ್ತಿನಿ’ ಎಂಬುದಾಗಿ ಹೇಳುತ್ತಾನೆ ಎಂದೆಣಿಸಿ. ಆಗ ನಿಮಗೆ ಹೇಗನಿಸುತ್ತದೆ? ನಿಮ್ಮ ಮನಸ್ಸು ಹಗುರವಾಗುವುದಿಲ್ಲವೇ?
2 ಒಂದರ್ಥದಲ್ಲಿ, ಇದೇ ರೀತಿಯ ನೆರವನ್ನು ಯೇಸು ಕ್ರಿಸ್ತನು ನಮಗೆ ನೀಡುತ್ತಾನೆ. ನಮ್ಮ ಸ್ವಪ್ರಯತ್ನದಿಂದ ದೇವರನ್ನು ಸಮೀಪಿಸುವುದು ಅಸಾಧ್ಯ. ಏಕೆಂದರೆ, ನಾವು ಮಾತ್ರವಲ್ಲ, ಬಾಧ್ಯತೆಯಾಗಿ ಪಡೆದಿರುವ ಪಾಪ ಮತ್ತು ಅಪರಿಪೂರ್ಣತೆಯಿಂದಾಗಿ ಇಡೀ ಮಾನವಕುಲವೇ ದಾರಿತಪ್ಪಿ, ‘ದೇವರಿಗೆ ಸೇರಿರುವ ಜೀವದಿಂದ ದೂರವಾಗಿದೆ.’ (ಎಫೆಸ 4:17, 18) ಆದ್ದರಿಂದಲೇ ಸರಿಯಾದ ದಾರಿಯಲ್ಲಿ ಸಾಗಲು ನಮಗೆ ನೆರವಿನ ಆವಶ್ಯಕತೆಯಿದೆ. ನಮಗೆ ಆದರ್ಶಪ್ರಾಯನಾಗಿರುವ ದಯಾಪರ ಯೇಸು ಕೇವಲ ಸಲಹೆ, ನಿರ್ದೇಶನಗಳನ್ನು ನೀಡುವುದಕ್ಕಿಂತಲೂ ಹೆಚ್ಚನ್ನು ಮಾಡುತ್ತಾನೆ. ಅಧ್ಯಾಯ 1ರಲ್ಲಿ ನಾವು ನೋಡಿದಂತೆ “ನನ್ನನ್ನು ಹಿಂಬಾಲಿಸಿರಿ” ಎಂದು ಆಮಂತ್ರಿಸುತ್ತಾನೆ. (ಮತ್ತಾಯ 4:19) ಮಾತ್ರವಲ್ಲ, ಆ ಆಮಂತ್ರಣಕ್ಕೆ ನಾವು ಯಾಕೆ ಓಗೊಡಬೇಕು ಎಂಬುದಕ್ಕೆ ಸಕಾರಣಗಳನ್ನೂ ಕೊಡುತ್ತಾನೆ. ಒಮ್ಮೆ ಅವನು, “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ. ನನ್ನ ಮೂಲಕವೇ ಹೊರತು ಯಾರೂ ತಂದೆಯ ಬಳಿಗೆ ಬರುವುದಿಲ್ಲ” ಎಂದು ಹೇಳಿದನು. (ಯೋಹಾನ 14:6) ಯಾಕೆ ಯೇಸುವಿನ ಮೂಲಕ ಮಾತ್ರವೇ ದೇವರನ್ನು ಸಮೀಪಿಸಸಾಧ್ಯ? ಕೆಲವು ಕಾರಣಗಳನ್ನು ನಾವೀಗ ನೋಡೋಣ. ಅನಂತರ, ಈ ಕಾರಣಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಯೇಸು ಯಾವ ರೀತಿಯಲ್ಲಿ “ಮಾರ್ಗವೂ ಸತ್ಯವೂ ಜೀವವೂ” ಆಗಿದ್ದಾನೆ ಎಂಬುದನ್ನು ಪರಿಗಣಿಸೋಣ.
ಯೆಹೋವನ ಉದ್ದೇಶದಲ್ಲಿ ಅದ್ವಿತೀಯ ಪಾತ್ರ
3. ಯೇಸುವಿನ ಮೂಲಕ ಮಾತ್ರವೇ ದೇವರನ್ನು ಸಮೀಪಿಸಸಾಧ್ಯವೇಕೆ?
3 ಯೇಸುವಿನ ಮೂಲಕ ಮಾತ್ರವೇ ಯೆಹೋವನನ್ನು ಸಮೀಪಿಸಸಾಧ್ಯ ಎಂದು ಹೇಳಲು ಪ್ರಪ್ರಥಮ ಕಾರಣ, ಒಂದು ವಿಶಿಷ್ಟ ಪಾತ್ರವಹಿಸುವಂತೆ ಯೆಹೋವನೇ ಯೇಸುವನ್ನು ನೇಮಿಸಿದ್ದಾನೆ. a ಯೆಹೋವನು ತನ್ನೆಲ್ಲ ಉದ್ದೇಶಗಳನ್ನು ನೆರವೇರಿಸುವುದರಲ್ಲಿ ಯೇಸುವಿಗೆ ಒಂದು ಪ್ರಧಾನ ಸ್ಥಾನ ನೀಡಿದ್ದಾನೆ. (2 ಕೊರಿಂಥ 1:20; ಕೊಲೊಸ್ಸೆ 1:18-20) ಯೇಸುವಿನ ಈ ಅದ್ವಿತೀಯ ಪಾತ್ರವನ್ನು ಅರ್ಥಮಾಡಿಕೊಳ್ಳಬೇಕಾದರೆ ಮೊದಲು ನಾವು ಏದೆನ್ ತೋಟದಲ್ಲಿ ನಡೆದ ದಂಗೆಯ ಕುರಿತು ತಿಳಿದುಕೊಳ್ಳಬೇಕು; ಅಲ್ಲಿ ಸೈತಾನನು ಯೆಹೋವನ ವಿರುದ್ಧ ದಂಗೆಯೆದ್ದಾಗ ಮೊದಲ ಮಾನವ ದಂಪತಿ ಸಹ ಅದರಲ್ಲಿ ಜೊತೆಸೇರಿದರು.—ಆದಿಕಾಂಡ 2:16, 17; 3:1-6.
4. ಏದೆನಿನಲ್ಲಿ ನಡೆದ ದಂಗೆಯು ಯಾವ ವಿವಾದವನ್ನು ಸೃಷ್ಟಿಸಿತು? ಆ ವಿವಾದವನ್ನು ಬಗೆಹರಿಸಲಿಕ್ಕಾಗಿ ಯೆಹೋವನು ಯಾವ ನಿರ್ಧಾರ ತೆಗೆದುಕೊಂಡನು?
4 ಏದೆನಿನಲ್ಲಿ ನಡೆದ ದಂಗೆಯು ಇಡೀ ವಿಶ್ವವನ್ನೇ ಒಳಗೊಂಡ ಒಂದು ವಿವಾದವನ್ನು ಸೃಷ್ಟಿಸಿತು. ಯೆಹೋವ ದೇವರು ತನ್ನ ಸೃಷ್ಟಿಜೀವಿಗಳನ್ನು ಒಳ್ಳೆಯ ರೀತಿಯಲ್ಲಿ ಆಳುತ್ತಾನೋ ಎಂಬುದೇ ಆ ವಿವಾದವಾಗಿತ್ತು. ಅದೊಂದು ಅತಿಮುಖ್ಯ ವಿವಾದವಾಗಿದ್ದು, ಅದನ್ನು ಬಗೆಹರಿಸುವುದಕ್ಕಾಗಿ ತನ್ನ ಒಬ್ಬ ಆತ್ಮ ಪುತ್ರನನ್ನು ಭೂಮಿಗೆ ಕಳುಹಿಸಲು ಯೆಹೋವನು ನಿರ್ಧರಿಸಿದನು. ಆ ಪುತ್ರನ ನೇಮಕವೇನೂ ಸಾಧಾರಣವಾಗಿರಲಿಲ್ಲ. ಅವನು ಯೆಹೋವನ ವಿಶ್ವಪರಮಾಧಿಕಾರವನ್ನು ನಿರ್ದೋಷೀಕರಿಸಲು ಹಾಗೂ ಮಾನವಕುಲವನ್ನು ರಕ್ಷಿಸಲು ವಿಮೋಚನಾ ಮೌಲ್ಯವಾಗಿ ತನ್ನ ಜೀವವನ್ನೇ ಅರ್ಪಿಸಬೇಕಿತ್ತು. ಆಯ್ಕೆಯಾಗುವ ಈ ಪುತ್ರನು ಮರಣದವರೆಗೂ ನಂಬಿಗಸ್ತನಾಗಿ ಉಳಿಯುವ ಮೂಲಕ ಸೈತಾನನ ದಂಗೆಯ ಫಲಿತಾಂಶವಾಗಿ ಉದ್ಭವಿಸಿದ ಎಲ್ಲ ಸಮಸ್ಯೆಗಳನ್ನು ಪರಿಹರಿಸಸಾಧ್ಯವಿತ್ತು. (ಇಬ್ರಿಯ 2:14, 15; 1 ಯೋಹಾನ 3:8) ಆದರೆ, ಕೋಟಿಗಟ್ಟಲೆ ಪರಿಪೂರ್ಣ ಆತ್ಮ ಪುತ್ರರು ಯೆಹೋವನಿಗಿದ್ದಾರೆ. (ದಾನಿಯೇಲ 7:9, 10) ಅವರಲ್ಲಿ ಯಾರನ್ನು ಈ ಪ್ರಮುಖ ನೇಮಕಕ್ಕಾಗಿ ಆತನು ಆರಿಸುವನು? “ತನ್ನ ಏಕೈಕಜಾತ ಪುತ್ರನನ್ನು” ಯೆಹೋವನು ಆರಿಸಿಕೊಂಡನು. ಈ ಪುತ್ರನೇ ತದನಂತರ ಯೇಸು ಕ್ರಿಸ್ತನೆಂದು ಚಿರಪರಿಚಿತನಾದನು.—ಯೋಹಾನ 3:16.
5, 6. ತನ್ನ ಪುತ್ರನ ಮೇಲಿರುವ ವಿಶ್ವಾಸವನ್ನು ಯೆಹೋವನು ಹೇಗೆ ತೋರಿಸಿಕೊಟ್ಟನು? ಅದಕ್ಕೆ ಆಧಾರವೇನಾಗಿತ್ತು?
5 ಯೆಹೋವನು ತನ್ನ ಏಕೈಕಜಾತ ಪುತ್ರನನ್ನೇ ಆರಿಸಿಕೊಂಡದ್ದಕ್ಕೆ ನಾವು ಆಶ್ಚರ್ಯಪಡಬೇಕೋ? ಇಲ್ಲ! ಈ ಪುತ್ರನ ಮೇಲೆ ದೇವರಿಗೆ ಅಪಾರ ವಿಶ್ವಾಸವಿತ್ತು. ಹಾಗಾಗಿಯೇ, ತನ್ನ ಈ ಪುತ್ರನು ಭೂಮಿಗೆ ಬರುವ ನೂರಾರು ವರ್ಷಗಳ ಮೊದಲೇ ಯೆಹೋವನು ಅವನ ಕುರಿತು ಮುಂತಿಳಿಸುತ್ತಾ ಎಲ್ಲ ಸಂಕಷ್ಟಗಳ ಸಮಯದಲ್ಲಿಯೂ ಅವನು ತನಗೆ ನಿಷ್ಠಾವಂತನಾಗಿರುವನು ಎಂದು ಹೇಳಿದನು. (ಯೆಶಾಯ 53:3-7, 10-12; ಅ. ಕಾರ್ಯಗಳು 8:32-35) ಅದರ ಕುರಿತು ತುಸು ಯೋಚಿಸಿ. ಇತರ ಬುದ್ಧಿಜೀವಿಗಳಂತೆ ಈ ಪುತ್ರನು ಸಹ ಇಚ್ಛಾಸ್ವಾತಂತ್ರ್ಯ ಹೊಂದಿದ್ದು ತನಗೆ ತೋಚಿದ್ದನ್ನು ಮಾಡಬಹುದಿತ್ತು. ಆದರೂ ಯೆಹೋವನು ತನ್ನ ಪುತ್ರನಲ್ಲಿ ಎಷ್ಟು ವಿಶ್ವಾಸವಿಟ್ಟಿದ್ದನೆಂದರೆ ಅವನು ನಂಬಿಗಸ್ತನಾಗಿರುವನು ಎಂದು ಮುಂತಿಳಿಸಿದನು. ಯಾವ ಆಧಾರದ ಮೇಲೆ ಈ ವಿಶ್ವಾಸವನ್ನಿಟ್ಟನು? ಜ್ಞಾನದ ಆಧಾರದ ಮೇಲೆಯೇ. ಯೆಹೋವನು ತನ್ನ ಈ ಪುತ್ರನನ್ನು ಅತಿ ಹತ್ತಿರದಿಂದ ಬಲ್ಲವನಾಗಿದ್ದನು. ತನ್ನನ್ನು ಮೆಚ್ಚಿಸಲು ಅವನೆಷ್ಟು ಹಂಬಲಿಸುತ್ತಾನೆಂಬುದನ್ನೂ ಚೆನ್ನಾಗಿ ತಿಳಿದಿದ್ದನು. (ಯೋಹಾನ 8:29; 14:31) ಆ ಪುತ್ರನು ತನ್ನ ತಂದೆಯನ್ನು ಬಹಳ ಪ್ರೀತಿಸುತ್ತಾನೆ ಮತ್ತು ಯೆಹೋವನಿಗೂ ಅವನ ಮೇಲೆ ಅಷ್ಟೇ ಪ್ರೀತಿಯಿದೆ. (ಯೋಹಾನ 3:35) ತಂದೆ ಮತ್ತು ಪುತ್ರನ ನಡುವೆ ಇದ್ದ ಈ ಪ್ರೀತಿಯೇ ಅವರಿಬ್ಬರ ಮಧ್ಯೆ ಮುರಿಯಲಾಗದ ಬಂಧವನ್ನು ಬೆಸೆದು ಭರವಸೆಯನ್ನು ಮೂಡಿಸಿದೆ.—ಕೊಲೊಸ್ಸೆ 3:14.
6 ಯೇಸುವಿನ ಅದ್ವಿತೀಯ ಪಾತ್ರ, ಯೆಹೋವನಿಗೆ ಆತನ ಮೇಲಿರುವ ವಿಶ್ವಾಸ ಮತ್ತು ತಂದೆ-ಮಗನನ್ನು ಬೆಸೆದಿರುವ ಪ್ರೀತಿ, ಇವುಗಳನ್ನೆಲ್ಲಾ ನೋಡುವಾಗ ದೇವರನ್ನು ಯೇಸುವಿನ ಮೂಲಕ ಮಾತ್ರ ಸಮೀಪಿಸಸಾಧ್ಯ ಎಂಬ ವಿಷಯದಲ್ಲೇನಾದರೂ ಶಂಕೆ ಮೂಡುತ್ತದೋ? ಯೇಸು ಮಾತ್ರವೇ ನಮ್ಮನ್ನು ದೇವರ ಸಮೀಪಕ್ಕೆ ನಡೆಸಬಲ್ಲನು ಎಂಬುದಕ್ಕಿರುವ ಇನ್ನೊಂದು ಕಾರಣವನ್ನು ನೋಡಿ.
ತಂದೆಯನ್ನು ಪೂರ್ಣವಾಗಿ ತಿಳಿದಿರುವುದು ಮಗನೊಬ್ಬನೇ
7, 8. “ಮಗನ ಹೊರತು” ಬೇರೆ ಯಾರೂ ದೇವರನ್ನು ಪೂರ್ಣವಾಗಿ ತಿಳಿದಿರುವುದಿಲ್ಲ ಎಂದು ಯೇಸು ಹೇಳಿದ್ದು ಏಕೆ ಸರಿಯಾಗಿಯೇ ಇದೆ?
7 ಯೆಹೋವನನ್ನು ಸಮೀಪಿಸಬೇಕಾದರೆ ನಾವು ಕೆಲವೊಂದು ಆವಶ್ಯಕತೆಗಳನ್ನು ಪೂರೈಸಬೇಕು. (ಕೀರ್ತನೆ 15:1-5) ದೇವರ ಮಟ್ಟಗಳನ್ನು ತಲಪಿ ಆತನ ಮೆಚ್ಚಿಗೆಯನ್ನು ಪಡೆಯಬೇಕಾದರೆ ಏನು ಮಾಡಬೇಕು ಎಂಬುದು ಯೇಸುವಿಗಿಂತಲೂ ಚೆನ್ನಾಗಿ ಬೇರೆ ಯಾರು ತಾನೇ ತಿಳಿದಿರಸಾಧ್ಯ? “ನನ್ನ ತಂದೆ ನನಗೆ ಎಲ್ಲ ವಿಷಯಗಳನ್ನು ಒಪ್ಪಿಸಿಕೊಟ್ಟಿದ್ದಾನೆ ಮತ್ತು ತಂದೆಯ ಹೊರತು ಮಗನನ್ನು ಯಾವನೂ ಪೂರ್ಣವಾಗಿ ತಿಳಿದಿರುವುದಿಲ್ಲ; ಅಂತೆಯೇ ಮಗನ ಹೊರತು ಮತ್ತು ಮಗನು ಯಾರಿಗೆ ಆತನನ್ನು ತಿಳಿಯಪಡಿಸಲು ಇಷ್ಟಪಡುತ್ತಾನೊ ಅವನ ಹೊರತು ಯಾರೂ ಆತನನ್ನು ತಿಳಿದಿರುವುದಿಲ್ಲ” ಎಂದು ಯೇಸುವೇ ಹೇಳಿದ್ದಾನೆ. (ಮತ್ತಾಯ 11:27) “ಮಗನ ಹೊರತು” ಬೇರೆ ಯಾರೂ ದೇವರನ್ನು ಪೂರ್ಣವಾಗಿ ತಿಳಿದಿರುವುದಿಲ್ಲ ಎಂದು ಯೇಸು ಸರಿಯಾಗಿಯೇ ಹೇಳಿದನು. ಅವನೇನು ಬಣ್ಣಹಚ್ಚಿ ಹೇಳಲಿಲ್ಲ. ಅದು ನಮಗೆ ಹೇಗೆ ಗೊತ್ತು? ನಾವೀಗ ನೋಡೋಣ.
8 ಯೇಸು “ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರನೂ” ಆಗಿರುವುದರಿಂದ ಯೆಹೋವನೊಂದಿಗೆ ಅತ್ಯಾಪ್ತ ಸಂಬಂಧ ಹೊಂದಿದ್ದಾನೆ. (ಕೊಲೊಸ್ಸೆ 1:15) ಆ ತಂದೆ-ಮಗನ ಸಂಬಂಧವನ್ನು ಸ್ವಲ್ಪ ಕಲ್ಪಿಸಿಕೊಳ್ಳಲು ಪ್ರಯತ್ನಿಸಿ. ಸೃಷ್ಟಿಕಾರ್ಯ ಪ್ರಾರಂಭವಾಗಿ ಇತರ ಆತ್ಮಜೀವಿಗಳು ಅಸ್ತಿತ್ವಕ್ಕೆ ಬರುವವರೆಗೆ ಕೇವಲ ಅವರಿಬ್ಬರೇ ಇದ್ದರು. ಆ ಅಗಣಿತ ಯುಗಗಳಲ್ಲಿ ಅವರಿಬ್ಬರ ಆಪ್ತತೆ ಬೆಳೆಯಿತು. (ಯೋಹಾನ 1:3; ಕೊಲೊಸ್ಸೆ 1:16, 17) ತಂದೆಯೊಂದಿಗೆ ಇದ್ದಾಗ ಮಗನಿಗಿದ್ದ ಅಪೂರ್ವ ಅವಕಾಶದ ಕುರಿತು ಸ್ವಲ್ಪ ಯೋಚಿಸಿ ನೋಡಿ. ತಂದೆಯ ಆಲೋಚನೆಗಳನ್ನು ತಿಳಿದುಕೊಳ್ಳುವ, ಆತನ ಚಿತ್ತ, ಮಟ್ಟ ಮತ್ತು ಕಾರ್ಯವೈಖರಿಯ ಕುರಿತು ಕಲಿಯುವ ಸುವರ್ಣಾವಕಾಶ ಅವನಿಗಿತ್ತು! ಹಾಗಾದರೆ, ತಂದೆಯನ್ನು ಇತರರಿಗಿಂತ ತಾನು ಚೆನ್ನಾಗಿ ತಿಳಿದಿದ್ದೇನೆಂದು ಅವನು ಹೇಳಿದಾಗ, ಖಂಡಿತ ಅದು ಅತಿಶಯೋಕ್ತಿಯಾಗಿರಲಿಲ್ಲ. ತನ್ನ ತಂದೆಯೊಂದಿಗೆ ಅಂಥ ಆಪ್ತತೆಯನ್ನು ಹೊಂದಿದ್ದರಿಂದಲೇ ಯೇಸು ಆತನ ಕುರಿತು ತಿಳಿಸಶಕ್ತನಾದನು. ಬೇರೆ ಯಾರಿಂದಲೂ ಇದು ಸಾಧ್ಯವಿಲ್ಲ.
9, 10. (ಎ) ಯೇಸು ತನ್ನ ತಂದೆಯನ್ನು ಯಾವೆಲ್ಲ ರೀತಿಯಲ್ಲಿ ತಿಳಿಯಪಡಿಸಿದ್ದಾನೆ? (ಬಿ) ಯೆಹೋವನನ್ನು ಮೆಚ್ಚಿಸಲು ನಾವು ಏನು ಮಾಡತಕ್ಕದ್ದು?
9 ಯೇಸುವಿನ ಬೋಧನೆಗಳು ಅವನೆಷ್ಟು ಚೆನ್ನಾಗಿ ಯೆಹೋವನ ಆಲೋಚನೆಗಳನ್ನು ಹಾಗೂ ಅನಿಸಿಕೆಗಳನ್ನು ತಿಳಿದುಕೊಂಡಿದ್ದಾನೆ ಎಂಬುದನ್ನು ತೋರಿಸಿಕೊಟ್ಟವು. ಮಾತ್ರವಲ್ಲ, ಯೆಹೋವನು ತನ್ನ ಆರಾಧಕರಿಂದ ಏನನ್ನು ಅಪೇಕ್ಷಿಸುತ್ತಾನೆ ಎಂಬುದನ್ನೂ ತೋರಿಸಿದವು. b ಇನ್ನೊಂದು ರೀತಿಯಲ್ಲೂ ಯೇಸು ತನ್ನ ತಂದೆಯನ್ನು ತಿಳಿಯಪಡಿಸಿದನು. “ನನ್ನನ್ನು ನೋಡಿದವನು ನನ್ನ ತಂದೆಯನ್ನೂ ನೋಡಿದ್ದಾನೆ” ಎಂದು ಅವನು ಹೇಳಿದನು. (ಯೋಹಾನ 14:9) ಯೇಸು ತನ್ನೆಲ್ಲ ನಡೆನುಡಿಗಳಲ್ಲಿ ತಂದೆಯನ್ನು ಪರಿಪೂರ್ಣವಾಗಿ ಅನುಕರಿಸಿದನು. ಯೇಸುವಿನ ಕುರಿತು ನಾವು ಬೈಬಲಿನಲ್ಲಿ ಓದುವಾಗ, ಅದರಲ್ಲೂ ಅವನು ತನ್ನ ಬೋಧನೆಯಲ್ಲಿ ಉಪಯೋಗಿಸಿದ ಮನಮುಟ್ಟುವ ಮಾತು, ಕರುಣೆಯಿಂದ ಪ್ರಚೋದಿತನಾಗಿ ಜನರನ್ನು ಗುಣಪಡಿಸಿದ ರೀತಿ, ಜನರ ನೋವಿಗೆ ಮಿಡಿದು ಸಹಾನುಭೂತಿಯಿಂದ ಕಣ್ಣೀರು ಸುರಿಸಿದ ಪರಿ, ಇವುಗಳನ್ನೆಲ್ಲಾ ಓದುವಾಗ ಸ್ವತಃ ಯೆಹೋವನೇ ಇವನ್ನೆಲ್ಲಾ ಮಾಡುತ್ತಿರುವ ಚಿತ್ರಣವನ್ನು ನಾವು ಪಡೆದುಕೊಳ್ಳಬಹುದು. (ಮತ್ತಾಯ 7:28, 29; ಮಾರ್ಕ 1:40-42; ಯೋಹಾನ 11:32-36) ಯೆಹೋವನ ಕಾರ್ಯವೈಖರಿ ಹಾಗೂ ಚಿತ್ತವು, ಯೇಸುವಿನ ಮಾತು ಹಾಗೂ ಕ್ರಿಯೆಗಳಲ್ಲಿ ಪರಿಪೂರ್ಣ ರೀತಿಯಲ್ಲಿ ತೋರಿಬಂದಿದೆ. (ಯೋಹಾನ 5:19; 8:28; 12:49, 50) ಆದ್ದರಿಂದ, ಯೆಹೋವನ ಮೆಚ್ಚುಗೆಯನ್ನು ಪಡೆಯಲಿಕ್ಕಾಗಿ ನಾವು ಯೇಸುವಿನ ಬೋಧನೆಗಳನ್ನು ಪಾಲಿಸಬೇಕು ಹಾಗೂ ಅವನ ಮಾದರಿಯನ್ನು ಅನುಸರಿಸಬೇಕು.—ಯೋಹಾನ 14:23.
10 ಯೇಸು ಯೆಹೋವನೊಂದಿಗೆ ಆಪ್ತ ಸಂಬಂಧ ಹೊಂದಿರುವುದರಿಂದ ಮತ್ತು ಆತನನ್ನು ಪರಿಪೂರ್ಣವಾಗಿ ಅನುಕರಿಸುವುದರಿಂದ, ಅವನ ಮೂಲಕವೇ ಎಲ್ಲರೂ ತನ್ನನ್ನು ಸಮೀಪಿಸಬೇಕೆಂದು ಯೆಹೋವನು ನಿರ್ಧರಿಸಿರುವುದರಲ್ಲಿ ಆಶ್ಚರ್ಯವಿಲ್ಲ. ನಾವು ಇಷ್ಟರವರೆಗೆ ನೋಡಿದ್ದು, ಯೇಸುವಿನ ಮೂಲಕ ಮಾತ್ರವೇ ಯೆಹೋವನನ್ನು ಸಮೀಪಿಸಸಾಧ್ಯ ಎಂಬುದಕ್ಕಿರುವ ಅಡಿಪಾಯವಷ್ಟೆ. ಈ ಅಡಿಪಾಯದೊಂದಿಗೆ “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ. ನನ್ನ ಮೂಲಕವೇ ಹೊರತು ಯಾರೂ ತಂದೆಯ ಬಳಿಗೆ ಬರುವುದಿಲ್ಲ” ಎಂದು ಯೇಸು ಹೇಳಿದ ಮಾತಿನ ಅರ್ಥವನ್ನು ನಾವೀಗ ಪರಿಗಣಿಸೋಣ.—ಯೋಹಾನ 14:6.
“ನಾನೇ ಮಾರ್ಗ”
11. ಯೇಸುವಿನ ಮೂಲಕ ಮಾತ್ರವೇ ಏಕೆ ನಾವು ಯೆಹೋವನ ಮೆಚ್ಚುಗೆಯನ್ನು ಪಡೆಯಸಾಧ್ಯ?
11 ಯೇಸುವಿನ ಮೂಲಕವಲ್ಲದೆ ನಾವು ದೇವರನ್ನು ಸಮೀಪಿಸಸಾಧ್ಯವಿಲ್ಲ ಎಂಬುದನ್ನು ನಾವು ಈಗಾಗಲೇ ಕಲಿತಿದ್ದೇವೆ. ಈಗ ಇನ್ನಷ್ಟು ಸೂಕ್ಷ್ಮವಾಗಿ ಇದು ನಮಗೆ ಯಾವ ಅರ್ಥದಲ್ಲಿದೆ ಎಂಬುದನ್ನು ಪರಿಗಣಿಸೋಣ. ಯೇಸು “ಮಾರ್ಗ” ಆಗಿರುವುದರಿಂದ, ನಾವು ಅವನ ಮೂಲಕ ಮಾತ್ರವೇ ದೇವರೊಂದಿಗೆ ಅಂಗೀಕೃತ ಸಂಬಂಧವನ್ನು ಹೊಂದಸಾಧ್ಯ. ಹಾಗೇಕೆ? ಮರಣದವರೆಗೂ ನಂಬಿಗಸ್ತನಾಗಿದ್ದ ಯೇಸು ತನ್ನ ಜೀವವನ್ನು ವಿಮೋಚನಾ ಮೌಲ್ಯದ ಯಜ್ಞವಾಗಿ ಕೊಟ್ಟನು. (ಮತ್ತಾಯ 20:28) ಈ ವಿಮೋಚನಾ ಮೌಲ್ಯ ಒದಗಿಸಲ್ಪಡದಿದ್ದಲ್ಲಿ ನಾವು ದೇವರನ್ನು ಸಮೀಪಿಸುವುದು ಅಸಾಧ್ಯವಾಗುತ್ತಿತ್ತು. ಏಕೆಂದರೆ, ಪಾಪವು ಮಾನವರ ಮತ್ತು ದೇವರ ನಡುವೆ ಅಡ್ಡಗೋಡೆಯಂತೆ ಇದೆ. ಪರಿಶುದ್ಧನಾಗಿರುವ ಯೆಹೋವನು ಪಾಪವನ್ನು ಎಂದಿಗೂ ಸಮ್ಮತಿಸುವುದಿಲ್ಲ. (ಯೆಶಾಯ 6:3; 59:2) ಆದರೆ ಯೇಸುವಿನ ಯಜ್ಞವು ಆ ಅಡ್ಡಗೋಡೆಯನ್ನು ಕೆಡವಿ ಪಾಪಕ್ಕೆ ಬೇಕಾದ ಪ್ರಾಯಶ್ಚಿತ್ತವನ್ನು ಒದಗಿಸಿದೆ. (ಇಬ್ರಿಯ 10:12; 1 ಯೋಹಾನ 1:7) ಕ್ರಿಸ್ತನ ಮೂಲಕ ದೇವರು ಮಾಡಿರುವ ಈ ಏರ್ಪಾಡನ್ನು ಅಂಗೀಕರಿಸಿ ಅದರಲ್ಲಿ ನಂಬಿಕೆಯಿಡುವುದಾದರೆ ನಾವು ಯೆಹೋವನ ಮೆಚ್ಚುಗೆಯನ್ನು ಪಡೆಯುವೆವು. “[ದೇವರೊಂದಿಗೆ] ಸಮಾಧಾನ ಸಂಬಂಧಕ್ಕೆ” ಬರಲು ನಮಗೆ ಬೇರಾವ ಮಾರ್ಗವೂ ಇಲ್ಲ.—ರೋಮನ್ನರಿಗೆ 5:6-11.
12. ಯಾವ ರೀತಿಯಲ್ಲಿ ಯೇಸು “ಮಾರ್ಗ” ಆಗಿದ್ದಾನೆ?
12 ಪ್ರಾರ್ಥನೆಯ ವಿಷಯದಲ್ಲೂ ಯೇಸು “ಮಾರ್ಗ” ಆಗಿದ್ದಾನೆ. ಕೇವಲ ಯೇಸುವಿನ ಮೂಲಕ ನಾವು ಯೆಹೋವನಿಗೆ ಪ್ರಾರ್ಥಿಸಬಹುದು ಮತ್ತು ಆತನು ನಮ್ಮ ಮನದಾಳದ ವಿಜ್ಞಾಪನೆಗಳನ್ನು ಆಲಿಸುತ್ತಾನೆಂಬ ಭರವಸೆಯಿಂದಿರಬಹುದು. (1 ಯೋಹಾನ 5:13, 14) “ನೀವು ತಂದೆಯನ್ನು ಏನೇ ಬೇಡಿಕೊಳ್ಳುವುದಾದರೂ ಅದನ್ನು ಆತನು ನನ್ನ ಹೆಸರಿನಲ್ಲಿ ನಿಮಗೆ ಕೊಡುವನು. . . . ಬೇಡಿಕೊಳ್ಳಿರಿ, ನಿಮಗೆ ಸಿಗುವುದು; ಆಗ ನಿಮ್ಮ ಸಂತೋಷವು ಪೂರ್ಣವಾಗುವುದು” ಎಂದು ಸ್ವತಃ ಯೇಸುವೇ ಹೇಳಿದ್ದಾನೆ. (ಯೋಹಾನ 16:23, 24) ಹಾಗಾದರೆ, ಯೇಸುವಿನ ಹೆಸರಿನಲ್ಲಿ ನಾವು ಯೆಹೋವನಿಗೆ ಪ್ರಾರ್ಥಿಸಸಾಧ್ಯವಿದೆ ಮತ್ತು ಆತನನ್ನು “ನಮ್ಮ ತಂದೆಯೇ” ಎಂದು ಕರೆಯಸಾಧ್ಯವಿದೆ. (ಮತ್ತಾಯ 6:9) ಯೇಸು ಇನ್ನೊಂದು ರೀತಿಯಲ್ಲೂ “ಮಾರ್ಗ” ಆಗಿದ್ದಾನೆ. ಅದು ಅವನ ಮಾದರಿಯ ಮೂಲಕವೇ. ನಾವು ಈ ಹಿಂದೆ ಗಮನಿಸಿರುವಂತೆ, ಯೇಸು ತನ್ನ ತಂದೆಯನ್ನು ಪರಿಪೂರ್ಣವಾಗಿ ಅನುಕರಿಸಿದ್ದಾನೆ. ಹೀಗೆ, ಅವನ ಮಾದರಿಯು ನಾವು ಯೆಹೋವನನ್ನು ಮೆಚ್ಚಿಸುವಂಥ ರೀತಿಯಲ್ಲಿ ಹೇಗೆ ಜೀವಿಸುವುದೆಂಬುದನ್ನು ತೋರಿಸುತ್ತದೆ. ಆದ್ದರಿಂದ, ಯೆಹೋವನನ್ನು ಸಮೀಪಿಸಲು ನಾವು ಯೇಸುವಿನ ಹೆಜ್ಜೆಜಾಡಿನಲ್ಲೇ ನಡೆಯಬೇಕು.—1 ಪೇತ್ರ 2:21.
“ನಾನೇ . . . ಸತ್ಯ”
13, 14. (ಎ) ಯೇಸು ತನ್ನ ನುಡಿಯಲ್ಲಿ ಸತ್ಯವಂತನಾಗಿದ್ದುದು ಹೇಗೆ? (ಬಿ) ತಾನು “ಸತ್ಯ” ಆಗಿದ್ದೇನೆ ಎಂದು ರುಜುಪಡಿಸಲು ಯೇಸು ಏನು ಮಾಡಬೇಕಿತ್ತು? ಏಕೆ?
13 ಯೇಸು ತನ್ನ ತಂದೆಯ ಪ್ರವಾದನಾ ವಾಕ್ಯದ ಕುರಿತು ಯಾವಾಗಲೂ ಸತ್ಯವನ್ನೇ ಆಡಿದನು. (ಯೋಹಾನ 8:40, 45, 46) ಯೇಸುವಿನ ಬಾಯಲ್ಲಿ ಯಾವ ವಂಚನೆಯೂ ಸಿಕ್ಕಲಿಲ್ಲ. (1 ಪೇತ್ರ 2:22) ಅವನ ಕಟುವಿರೋಧಿಗಳು ಸಹ ಅವನು “ದೇವರ ಮಾರ್ಗವನ್ನು ಸತ್ಯಕ್ಕೆ ಅನುಗುಣವಾಗಿ” ಬೋಧಿಸುತ್ತಾನೆಂದು ಒಪ್ಪಿಕೊಂಡರು. (ಮಾರ್ಕ 12:13, 14) ಆದರೂ “ನಾನೇ . . . ಸತ್ಯ” ಎಂದು ಯೇಸು ಹೇಳಿದಾಗ, ಕೇವಲ ಮಾತಿನಲ್ಲಿ, ಬೋಧನೆಯಲ್ಲಿ ಮತ್ತು ಸಾರುವಾಗ ಸತ್ಯವನ್ನಾಡಿದೆನೆಂದು ಅವನು ಸೂಚಿಸುತ್ತಿರಲಿಲ್ಲ. ಅವನ ಸತ್ಯದ ನುಡಿಗಳಿಗಿಂತಲೂ ಹೆಚ್ಚಿನ ವಿಷಯ ಅದರಲ್ಲಿತ್ತು.
14 ಮೆಸ್ಸೀಯ ಅಥವಾ ಕ್ರಿಸ್ತನು ಭೂಮಿಯಲ್ಲಿ ಹುಟ್ಟುವುದಕ್ಕಿಂತಲೂ ನೂರಾರು ವರ್ಷಗಳ ಮೊದಲೇ ಯೆಹೋವನು ಬೈಬಲ್ ಲೇಖಕರ ಮೂಲಕ ಅವನ ಬಗ್ಗೆ ಅನೇಕ ಪ್ರವಾದನೆಗಳನ್ನು ಮುಂತಿಳಿಸಿದ್ದನ್ನು ನೆನಪಿಗೆ ತಂದುಕೊಳ್ಳಿ. ಈ ಪ್ರವಾದನೆಗಳು ಅವನ ಜೀವನ, ಶುಶ್ರೂಷೆ ಹಾಗೂ ಮರಣದ ಕುರಿತ ವಿವರಗಳನ್ನು ಕೊಟ್ಟಿದ್ದವು. ಅಷ್ಟೇ ಅಲ್ಲ, ಮೋಶೆಯ ಧರ್ಮಶಾಸ್ತ್ರವು ಮೆಸ್ಸೀಯನಿಗೆ ಸೂಚಿಸುವ ಅನೇಕ ಮುನ್‌ಛಾಯೆಗಳನ್ನು ಹೊಂದಿತ್ತು. (ಇಬ್ರಿಯ 10:1) ಯೇಸು ಮರಣದವರೆಗೆ ನಂಬಿಗಸ್ತನಾಗಿರುತ್ತಾ ತನ್ನ ಕುರಿತ ಎಲ್ಲ ಪ್ರವಾದನೆಗಳನ್ನು ನೆರವೇರಿಸಲಿದ್ದನೋ? ನೆರವೇರಿಸಿದ್ದಲ್ಲಿ ಮಾತ್ರ ಯೆಹೋವನು ಸತ್ಯ ಪ್ರವಾದನೆಗಳ ದೇವರೆಂದು ರುಜುವಾಗಸಾಧ್ಯವಿತ್ತು. ಆ ಭಾರಿ ಹೊಣೆ ಯೇಸುವಿನ ಹೆಗಲ ಮೇಲೆ ಇತ್ತು. ತನ್ನ ಬದುಕಿನುದ್ದಕ್ಕೂ ತಾನು ಆಡಿದ, ಮಾಡಿದ ಪ್ರತಿಯೊಂದು ವಿಷಯದಲ್ಲೂ ಆ ಪ್ರವಾದನೆಗಳು ಸತ್ಯ ಎಂಬುದನ್ನು ಯೇಸು ರುಜುಪಡಿಸಿದನು. (2 ಕೊರಿಂಥ 1:20) ಯೆಹೋವನ ಪ್ರವಾದನಾ ವಾಕ್ಯದ ಸತ್ಯವು ಯೇಸು ಬಂದಾಗ ನಿಜವಾಯಿತು. ಆ ಅರ್ಥದಲ್ಲೂ ಅವನು “ಸತ್ಯ” ಆಗಿದ್ದನು.—ಯೋಹಾನ 1:17; ಕೊಲೊಸ್ಸೆ 2:16, 17.
“ನಾನೇ . . . ಜೀವ”
15. ದೇವರ ಮಗನಲ್ಲಿ ನಂಬಿಕೆಯಿಡುವುದರ ಅರ್ಥವೇನು? ಹಾಗೆ ಮಾಡುವುದರಿಂದ ನಮಗೆ ಏನು ಸಿಗುವುದು?
15 ಯೇಸು “ಜೀವವೂ” ಆಗಿದ್ದಾನೆ. ಏಕೆಂದರೆ, ನಾವು “ವಾಸ್ತವವಾದ ಜೀವನವನ್ನು” ಯೇಸುವಿನ ಮೂಲಕ ಮಾತ್ರ ಪಡೆಯಸಾಧ್ಯ. (1 ತಿಮೊಥೆಯ 6:19) ಬೈಬಲ್ ಹೇಳುವುದು: “ಮಗನಲ್ಲಿ ನಂಬಿಕೆಯಿಡುವವನಿಗೆ ನಿತ್ಯಜೀವ ಉಂಟು; ಮಗನಿಗೆ ಅವಿಧೇಯನಾಗುವವನು ಜೀವವನ್ನು ಕಾಣುವುದಿಲ್ಲ, ಆದರೆ ದೇವರ ಕ್ರೋಧವು ಅವನ ಮೇಲೆ ನೆಲೆಗೊಳ್ಳುತ್ತದೆ.” (ಯೋಹಾನ 3:36) ದೇವರ ಮಗನಲ್ಲಿ ನಂಬಿಕೆಯಿಡುವುದರ ಅರ್ಥವೇನು? ಅವನ ಹೊರತು ಬೇರೆ ಯಾರ ಮೂಲಕವೂ ನಾವು ಜೀವವನ್ನು ಪಡೆಯಲಾರೆವು ಎಂದು ಮನಗಾಣುವುದೇ ಅದರ ಅರ್ಥ. ಮಾತ್ರವಲ್ಲ, ಆ ನಮ್ಮ ನಂಬಿಕೆಯನ್ನು ಕ್ರಿಯೆಗಳಲ್ಲಿ ತೋರಿಸುವುದು, ಯೇಸುವಿನಿಂದ ಸದಾ ಕಲಿತುಕೊಳ್ಳುವುದು ಮತ್ತು ಅವನ ಬೋಧನೆ ಹಾಗೂ ಮಾದರಿಯನ್ನು ಅನುಸರಿಸಲು ಸರ್ವ ಪ್ರಯತ್ನ ಮಾಡುವುದು ಸಹ ಅದರಲ್ಲಿ ಸೇರಿದೆ. (ಯಾಕೋಬ 2:26) ಹೀಗೆ, ದೇವರ ಮಗನಲ್ಲಿ ನಂಬಿಕೆಯಿಡುವುದು ನಮ್ಮನ್ನು ನಿತ್ಯಜೀವಕ್ಕೆ ನಡೆಸುತ್ತದೆ. ‘ಚಿಕ್ಕ ಹಿಂಡಾದ’ ಆತ್ಮಾಭಿಷಿಕ್ತ ಕ್ರೈಸ್ತರಿಗೆ ಸ್ವರ್ಗದಲ್ಲಿ ಅಮರ ಜೀವನ ಸಿಗುತ್ತದೆ. ‘ಬೇರೆ ಕುರಿಗಳ’ ‘ಮಹಾ ಸಮೂಹಕ್ಕೆ’ ಭೂಪರದೈಸಿನಲ್ಲಿ ಪರಿಪೂರ್ಣ ಮಾನವ ಜೀವನ ಸಿಗುವುದು.—ಲೂಕ 12:32; 23:43; ಪ್ರಕಟನೆ 7:9-17; ಯೋಹಾನ 10:16.
16, 17. (ಎ) ಮರಣಪಟ್ಟಿರುವವರಿಗೂ ಯೇಸು ಹೇಗೆ “ಜೀವ” ಆಗಿದ್ದಾನೆ? (ಬಿ) ನಾವು ಯಾವ ಭರವಸೆಯನ್ನು ಇಟ್ಟುಕೊಳ್ಳಬಹುದು?
16 ಹಾಗಾದರೆ, ಈಗಾಗಲೇ ಮರಣಪಟ್ಟಿರುವವರ ಕುರಿತೇನು? ಯೇಸು ಅವರಿಗೂ “ಜೀವ” ಆಗಿದ್ದಾನೆ. ತನ್ನ ಸ್ನೇಹಿತ ಲಾಜರನನ್ನು ಪುನರುತ್ಥಾನಗೊಳಿಸುವ ಸ್ವಲ್ಪ ಮುಂಚೆ ಅವನ ಸಹೋದರಿ ಮಾರ್ಥಳಿಗೆ ಯೇಸು ಹೇಳಿದ್ದು: “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ. ನನ್ನಲ್ಲಿ ನಂಬಿಕೆಯಿಡುವವನು ಸತ್ತರೂ ಜೀವಿತನಾಗುವನು.” (ಯೋಹಾನ 11:25) ಯೆಹೋವನು ‘ಮರಣದ ಮತ್ತು ಹೇಡೀಸ್‌ನ ಬೀಗದ ಕೈಗಳನ್ನು’ ಯೇಸುವಿಗೆ ಒಪ್ಪಿಸಿ ಪುನರುತ್ಥಾನಗೊಳಿಸುವ ಅಧಿಕಾರವನ್ನು ಅವನಿಗೆ ವಹಿಸಿಕೊಟ್ಟಿದ್ದಾನೆ. (ಪ್ರಕಟನೆ 1:17, 18) ಮಹಿಮಾನ್ವಿತ ಯೇಸು ಆ ಬೀಗದ ಕೈಗಳಿಂದ ಹೇಡೀಸ್‌ನ ಬಾಗಿಲನ್ನು ತೆರೆದು ಮಾನವಕುಲದ ಸಾಮಾನ್ಯ ಸಮಾಧಿಯ ಸೆರೆಯಲ್ಲಿರುವ ಎಲ್ಲರನ್ನೂ ಬಿಡುಗಡೆಗೊಳಿಸುವನು.—ಯೋಹಾನ 5:28, 29.
17 “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ” ಎಂಬ ಈ ಸರಳಮಾತಿನಲ್ಲಿ ಯೇಸು ತನ್ನ ಭೂಜೀವನ ಹಾಗೂ ಶುಶ್ರೂಷೆಯ ಉದ್ದೇಶವನ್ನು ಸಾರಾಂಶಿಸಿದನು. ಆ ಸರಳಮಾತು ಇಂದು ನಮಗೆ ಮಹತ್ವಾರ್ಥವನ್ನು ಹೊಂದಿದೆ. ಯೇಸು ಆ ಮಾತನ್ನಾಡಿದ ಬಳಿಕ, “ನನ್ನ ಮೂಲಕವೇ ಹೊರತು ಯಾರೂ ತಂದೆಯ ಬಳಿಗೆ ಬರುವುದಿಲ್ಲ” ಎಂದು ಹೇಳಿದ್ದನ್ನು ನೆನಪಿಸಿಕೊಳ್ಳಿ. (ಯೋಹಾನ 14:6) ಅವನ ಆ ಮಾತುಗಳು ಅಂದಿನಂತೆ ಇಂದು ಸಹ ಉಪಯುಕ್ತವಾಗಿವೆ. ಆದ್ದರಿಂದ, ಯೇಸುವನ್ನು ಹಿಂಬಾಲಿಸಿದರೆ ನಾವೆಂದಿಗೂ ದಾರಿ ತಪ್ಪೆವು ಎಂಬ ದೃಢ ಭರವಸೆಯನ್ನು ನಾವು ಹೊಂದಿರಸಾಧ್ಯವಿದೆ. ಕೇವಲ ಅವನೊಬ್ಬನೇ “ತಂದೆಯ ಬಳಿಗೆ” ಹೋಗುವ ಮಾರ್ಗವನ್ನು ತೋರಿಸಬಲ್ಲನು.
ನೀವೇನು ಮಾಡುವಿರಿ?
18. ಯೇಸುವಿನ ನಿಜ ಹಿಂಬಾಲಕರಾಗಲು ಏನು ಮಾಡಬೇಕು?
18 ಯೇಸುವಿನ ಅದ್ವಿತೀಯ ಪಾತ್ರ, ತಂದೆಯ ಕುರಿತು ಅವನಿಗಿರುವ ಪೂರ್ಣ ತಿಳಿವಳಿಕೆ, ಇವೆಲ್ಲ ಯೇಸುವನ್ನು ಹಿಂಬಾಲಿಸಲು ನಮಗೆ ಸಕಾರಣಗಳನ್ನು ಒದಗಿಸುತ್ತವೆ. ನಾವು ಹಿಂದಿನ ಅಧ್ಯಾಯದಲ್ಲಿ ಗಮನಿಸಿರುವಂತೆ, ಯೇಸುವಿನ ನಿಜ ಹಿಂಬಾಲಕರಾಗಲು ಕೇವಲ ಮಾತು ಮತ್ತು ಭಾವನೆಗಳು ಸಾಲವು, ಕ್ರಿಯೆಗಳಿರಬೇಕು. ಕ್ರಿಸ್ತನನ್ನು ಹಿಂಬಾಲಿಸುವುದೆಂದರೆ, ನಮ್ಮ ಜೀವನದಲ್ಲಿ ಅವನ ಬೋಧನೆ ಹಾಗೂ ಮಾದರಿಯನ್ನು ಅನುಕರಿಸುವುದಾಗಿದೆ. (ಯೋಹಾನ 13:15) ಈ ನಿಟ್ಟಿನಲ್ಲಿ ಈ ಪುಸ್ತಕ ನಿಮಗೆ ಸಹಾಯಮಾಡುವುದು.
19, 20. ಕ್ರಿಸ್ತನನ್ನು ಹಿಂಬಾಲಿಸುವಂತೆ ನಿಮಗೆ ನೆರವಾಗುವ ಯಾವ ವಿಷಯಗಳು ಈ ಪುಸ್ತಕದಲ್ಲಿವೆ?
19 ಮುಂದಿನ ಅಧ್ಯಾಯಗಳಲ್ಲಿ ನಾವು ಯೇಸುವಿನ ಜೀವನ ಹಾಗೂ ಶುಶ್ರೂಷೆಯ ಕುರಿತ ಅಮೂಲಾಗ್ರ ಅಧ್ಯಯನ ಮಾಡಲಿದ್ದೇವೆ. ಆ ಅಧ್ಯಾಯಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲ ವಿಭಾಗದಲ್ಲಿ ನಾವು ಯೇಸುವಿನ ಗುಣಗಳು ಹಾಗೂ ಕಾರ್ಯವೈಖರಿಯ ಕುರಿತ ಮೇಲ್ನೋಟವನ್ನು ಪಡೆಯುತ್ತೇವೆ. ಎರಡನೇ ವಿಭಾಗದಲ್ಲಿ ಸಾರುವ ಹಾಗೂ ಬೋಧಿಸುವ ವಿಷಯದಲ್ಲಿ ಅವನಿಟ್ಟ ಹುರುಪಿನ ಮಾದರಿಯನ್ನು ಗಮನಿಸಲಿದ್ದೇವೆ. ಮೂರನೇದರಲ್ಲಿ, ಅವನು ತೋರಿಸಿದ ಪ್ರೀತಿಯ ಕುರಿತು ಕಲಿಯಲಿದ್ದೇವೆ. 3ನೇ ಅಧ್ಯಾಯದಿಂದ ಆರಂಭಗೊಂಡು “ಯೇಸುವನ್ನು ಹೇಗೆ ಹಿಂಬಾಲಿಸಬಲ್ಲಿರಿ?” ಎಂಬ ಬೋಧನಾ ಚೌಕವನ್ನು ಕಾಣುವಿರಿ. ಅದರಲ್ಲಿ ವಚನ ಹಾಗೂ ಪ್ರಶ್ನೆಗಳಿದ್ದು, ನಮ್ಮ ನಡೆನುಡಿಗಳಲ್ಲಿ ಹೇಗೆ ಯೇಸುವನ್ನು ಅನುಕರಿಸಸಾಧ್ಯವಿದೆ ಎಂಬುದರ ಕುರಿತು ಧ್ಯಾನಿಸಲು ಅವು ನೆರವಾಗುತ್ತವೆ.
20 ಯೆಹೋವನಿಗೆ ನಾವು ಎಷ್ಟು ಋಣಿಗಳಾಗಿದ್ದರೂ ಸಾಲದು. ಬಾಧ್ಯತೆಯಾಗಿ ಪಾಪವನ್ನು ಪಡೆದು ದೇವರಿಂದ ವಿಮುಖರಾಗಿದ್ದರೂ, ದಾರಿ ತಪ್ಪಿಹೋಗದಂತೆ ಯೆಹೋವನು ನಮಗೆ ಸಹಾಯಮಾಡಿದ್ದಾನೆ. ತನಗೆ ಭಾರಿ ನಷ್ಟವಾದರೂ ಯೆಹೋವನು ಪ್ರೀತಿಯಿಂದ ತನ್ನ ಪುತ್ರನನ್ನು ನಮಗೋಸ್ಕರ ಕಳುಹಿಸಿಕೊಟ್ಟಿದ್ದಾನೆ. ಹೀಗೆ, ತನ್ನೊಂದಿಗೆ ಅಂಗೀಕೃತ ಸಂಬಂಧವನ್ನು ಬೆಳೆಸಿಕೊಳ್ಳುವಂತೆ ದಾರಿ ತೋರಿಸಿದ್ದಾನೆ. (1 ಯೋಹಾನ 4:9, 10) “ನನ್ನ ಹಿಂಬಾಲಕನಾಗು” ಎಂದು ಯೇಸು ನೀಡಿರುವ ಆಮಂತ್ರಣಕ್ಕೆ ಓಗೊಟ್ಟು ಅದಕ್ಕನುಸಾರ ಕ್ರಿಯೆಗೈಯಿರಿ. ಹೀಗೆ ಯೆಹೋವನು ತೋರಿಸಿದ ಆ ಮಹಾನ್ ಪ್ರೀತಿಗೆ ಪ್ರತಿಸ್ಪಂದಿಸಿರಿ.—ಯೋಹಾನ 1:43.
a ಯೇಸುವಿನ ಈ ಪಾತ್ರ ಎಷ್ಟು ಮಹತ್ವದ್ದಾಗಿದೆಯೆಂದರೆ ಬೈಬಲ್ ಪ್ರವಾದನೆಗಳು ಅವನಿಗೆ ಅನೇಕ ಹೆಸರು ಹಾಗೂ ಬಿರುದುಗಳನ್ನು ನೀಡಿವೆ.— ಪುಟ 23ರಲ್ಲಿರುವ ಚೌಕವನ್ನು ನೋಡಿ.
b ಉದಾಹರಣೆಗೆ, ಮತ್ತಾಯ 10:29-31; 18:12-14, 21-35; 22:36-40ರಲ್ಲಿ ದಾಖಲಾಗಿರುವ ಯೇಸುವಿನ ಮಾತುಗಳನ್ನು ನೋಡಿರಿ.