ಅಧ್ಯಾಯ 5
‘ವಿವೇಕದ ನಿಕ್ಷೇಪಗಳು’
1-3. ಇಸವಿ ಕ್ರಿ. ಶ. 31ರ ವಸಂತಕಾಲದ ದಿನದಂದು ಯೇಸು ಪ್ರಸಂಗ ಕೊಟ್ಟಾಗ ಅಲ್ಲಿನ ಸನ್ನಿವೇಶ ಹೇಗಿತ್ತು? ಅವನ ಕೇಳುಗರು ಅತ್ಯಾಶ್ಚರ್ಯಪಟ್ಟದ್ದೇಕೆ?
ಇಸವಿ ಕ್ರಿ. ಶ. 31ರ ವಸಂತಕಾಲದ ಒಂದು ದಿನ. ಯೇಸು, ಗಲಿಲಾಯ ಸಮುದ್ರದ ವಾಯುವ್ಯ ಕಿನಾರೆಯಲ್ಲಿನ ಸದಾ ಬಣಬಣಿಸುತ್ತಿರುವ ನಗರವಾದ ಕಪೆರ್ನೌಮಿನ ಸಮೀಪದಲ್ಲಿದ್ದಾನೆ. ಅವನು ಹಿಂದಿನ ಇಡೀ ರಾತ್ರಿಯನ್ನು, ಪಕ್ಕದಲ್ಲಿದ್ದ ಒಂದು ಬೆಟ್ಟದ ಮೇಲೆ ಹೋಗಿ ಏಕಾಂತವಾಗಿ ಪ್ರಾರ್ಥನೆ ಮಾಡುತ್ತಾ ಕಳೆದಿದ್ದಾನೆ. ಬೆಳಗಾಗುತ್ತಿದ್ದಂತೆ ಅವನು ತನ್ನ ಶಿಷ್ಯರನ್ನು ಕರೆದು ಅವರೊಳಗಿಂದ 12 ಮಂದಿಯನ್ನು ಆರಿಸಿಕೊಳ್ಳುತ್ತಾನೆ. ಅವರನ್ನು ಅಪೊಸ್ತಲರೆಂದು ಕರೆಯುತ್ತಾನೆ. ಆ ಸಮಯದಷ್ಟಕ್ಕೆ ಯೇಸುವನ್ನು ಹಿಂಬಾಲಿಸುತ್ತಾ ಬಂದ ಜನರ ದೊಡ್ಡ ಗುಂಪು ಬೆಟ್ಟದ ಕೆಳಗಿನ ಸಮತಟ್ಟಾದ ಪ್ರದೇಶದಲ್ಲಿ ಒಟ್ಟುಸೇರಿತ್ತು. ಅವರಲ್ಲಿ ಕೆಲವರು ಬಹುದೂರದ ಪ್ರದೇಶಗಳಿಂದ ಬಂದಿದ್ದರು. ಅವರೆಲ್ಲರೂ ಅವನ ಮಾತುಗಳನ್ನು ಕೇಳಿಸಿಕೊಳ್ಳುವುದಕ್ಕೂ ರೋಗಗಳನ್ನು ಗುಣಪಡಿಸಿಕೊಳ್ಳುವುದಕ್ಕೂ ಬಂದಿದ್ದರು. ಅವರ ನಿರೀಕ್ಷಣೆಗಳನ್ನು ಯೇಸು ಹುಸಿಮಾಡಲಿಲ್ಲ.—ಲೂಕ 6:12-19.
2 ಅವನು ಗುಂಪಿನ ಬಳಿ ಬಂದು ಅಸ್ವಸ್ಥರೆಲ್ಲರನ್ನು ಗುಣಪಡಿಸುತ್ತಾನೆ. ಕಡೆಗೆ, ಅಲ್ಲಿ ಯಾರೊಬ್ಬರೂ ಗಂಭೀರ ಅಸ್ವಸ್ಥತೆಯ ನೋವನ್ನು ಅನುಭವಿಸುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ, ಕುಳಿತು ಬೋಧಿಸಲಾರಂಭಿಸುತ್ತಾನೆ. * ವಸಂತ ಋತುವಿನ ಆ ಪ್ರಶಾಂತ ದಿನದಲ್ಲಿ ಯೇಸುವಾಡಿದ ಮಾತುಗಳನ್ನು ಕೇಳಿ ಅವರೆಲ್ಲರೂ ವಿಸ್ಮಯಗೊಂಡರು. ನಿಜಹೇಳಬೇಕೆಂದರೆ, ಅವನಂತೆ ಯಾರಾದರೂ ಬೋಧಿಸಿದ್ದನ್ನು ಅವರು ಈವರೆಗೆ ಕೇಳಿಸಿಕೊಂಡಿರಲಿಲ್ಲ. ತನ್ನ ಬೋಧನೆಗಳಿಗೆ ಮಹತ್ವ ನೀಡಲಿಕ್ಕಾಗಿ ಅವನು ಮೌಖಿಕ ಸಂಪ್ರದಾಯಗಳನ್ನು ಇಲ್ಲವೇ ಯೆಹೂದಿ ರಬ್ಬಿಗಳ ಮಾತುಗಳನ್ನು ಉಲ್ಲೇಖಿಸುತ್ತಿರಲಿಲ್ಲ. ಅದಕ್ಕೆ ಬದಲಾಗಿ ಅವನು ಪುನಃ ಪುನಃ ದೇವಪ್ರೇರಿತ ಹೀಬ್ರು ಶಾಸ್ತ್ರವಚನಗಳನ್ನು ಉಲ್ಲೇಖಿಸಿದನು. ಅವನಾಡುವ ಮಾತುಗಳು ನೇರವೂ ಪದಗಳು ಸರಳವೂ ಅರ್ಥವು ಸ್ಪಷ್ಟವೂ ಆಗಿತ್ತು. ಅವನು ಮಾತು ಮುಗಿಸಿದಾಗ ಜನರ ಗುಂಪುಗಳು ಅತ್ಯಾಶ್ಚರ್ಯಪಟ್ಟವು. ಖಂಡಿತವಾಗಿಯೂ ಹಾಗಾಗಲೇ ಬೇಕಿತ್ತು. ಏಕೆಂದರೆ ಜೀವಿಸಿರುವವರಲ್ಲೇ ಅತ್ಯಂತ ವಿವೇಕಿಯಾದ ವ್ಯಕ್ತಿಯ ಮಾತುಗಳನ್ನು ಅವರು ಕೇಳಿಸಿಕೊಂಡಿದ್ದರು.—ಮತ್ತಾಯ 7:28, 29.
3 ಆ ಪ್ರಸಂಗ ಮತ್ತು ಯೇಸು ಹೇಳಿದ ಹಾಗೂ ಮಾಡಿದ ಇತರ ಅನೇಕ ವಿಷಯಗಳು ದೇವರ ವಾಕ್ಯದಲ್ಲಿ ದಾಖಲಿಸಿಡಲ್ಪಟ್ಟಿವೆ. ದೇವಪ್ರೇರಿತವಾದ ಆ ದಾಖಲೆಯು ಯೇಸುವಿನ ಕುರಿತು ಏನು ಹೇಳುತ್ತದೆ ಎಂಬುದನ್ನು ನಾವು ಪರಿಶೋಧಿಸುವುದು ಅಗತ್ಯ. ಏಕೆಂದರೆ ಅವನಲ್ಲೇ ‘ವಿವೇಕದ ಎಲ್ಲ ನಿಕ್ಷೇಪಗಳು’ ಅಡಗಿವೆ. (ಕೊಲೊಸ್ಸೆ 2:3) ಅಂಥ ವಿವೇಕವನ್ನು, ಅಂದರೆ ಜ್ಞಾನ ಹಾಗೂ ತಿಳಿವಳಿಕೆಯನ್ನು ಅನ್ವಯಿಸಿಕೊಳ್ಳುವ ಸಾಮರ್ಥ್ಯವನ್ನು ಅವನು ಎಲ್ಲಿಂದ ಪಡೆದುಕೊಂಡನು? ಅವನು ವಿವೇಕವನ್ನು ಹೇಗೆ ತೋರಿಸಿದನು ಮತ್ತು ಅವನ ಮಾದರಿಯನ್ನು ನಾವು ಹೇಗೆ ಅನುಸರಿಸಬಹುದು?
‘ಇವನು ಈ ವಿವೇಕವನ್ನು ಎಲ್ಲಿಂದ ಪಡೆದುಕೊಂಡನು?’
4. ನಜರೇತಿನಲ್ಲಿನ ಯೇಸುವಿನ ಕೇಳುಗರಲ್ಲಿ ಯಾವ ಪ್ರಶ್ನೆ ಎದ್ದಿತು? ಯಾಕೆ?
4 ತನ್ನ ಸಾರುವ ಪ್ರಯಾಣಗಳಲ್ಲೊಂದರಲ್ಲಿ ಯೇಸು ತಾನು ಬೆಳೆದ ಊರಾದ ನಜರೇತಿಗೆ ಭೇಟಿಕೊಟ್ಟನು. ಅಲ್ಲಿ ಸಭಾಮಂದಿರದಲ್ಲಿ ಬೋಧಿಸಲಾರಂಭಿಸಿದನು. ಅದನ್ನು ಕೇಳಿದ ಅನೇಕರು ಬೆರಗಾಗಿ: ‘ಇವನು ಈ ವಿವೇಕವನ್ನು ಎಲ್ಲಿಂದ ಪಡೆದುಕೊಂಡನು?’ ಎಂದು ಮಾತಾಡಿಕೊಳ್ಳತೊಡಗಿದರು. ಅವರಿಗೆ ಅವನ ಕುಟುಂಬದವರೆಲ್ಲರ ಅಂದರೆ ಅವನ ಹೆತ್ತವರ, ಒಡಹುಟ್ಟಿದವರ ಪರಿಚಯವಿತ್ತು. ಅವನು ಬಡಕುಟುಂಬದಿಂದ ಬಂದವನು ಎಂಬುದೂ ಗೊತ್ತಿತ್ತು. (ಮತ್ತಾಯ 13:54-56; ಮಾರ್ಕ 6:1-3) ನಿರರ್ಗಳವಾಗಿ ಮಾತಾಡುತ್ತಿದ್ದ ಈ ಬಡಗಿ, ರಬ್ಬಿಗಳ ಯಾವುದೇ ಪ್ರಸಿದ್ಧ ಶಾಲೆಗೆ ಹೋಗಿರಲಿಲ್ಲ ಎಂಬುದು ಅವರಿಗೆ ಚೆನ್ನಾಗಿ ತಿಳಿದಿತ್ತು. (ಯೋಹಾನ 7:15) ಆದ್ದರಿಂದಲೇ ಅವರ ಮನಸ್ಸಲ್ಲಿ ಆ ಪ್ರಶ್ನೆ ಬಂದಿದ್ದರಲ್ಲಿ ತಪ್ಪಿಲ್ಲ.
5. ಯೇಸು ಪ್ರಕಟಿಸಿದಂತೆ, ಅವನ ವಿವೇಕದ ಮೂಲ ಯಾವುದು?
5 ಯೇಸು ತೋರಿಸಿದ ವಿವೇಕ ಕೇವಲ ಅವನ ಪರಿಪೂರ್ಣ ಆಲೋಚನಾರೀತಿಯ ಫಲವಾಗಿರಲಿಲ್ಲ. ಸಮಯಾನಂತರ ದೇವಾಲಯದಲ್ಲಿ ಬಹಿರಂಗವಾಗಿ ಬೋಧಿಸುತ್ತಿದ್ದಾಗ ಯೇಸು ತನ್ನ ವಿವೇಕವು ಸರ್ವೋನ್ನತ ಮೂಲದ್ದು ಎಂಬುದನ್ನು ಪ್ರಕಟಪಡಿಸಿದನು. ಅವನು ಹೇಳಿದ್ದು: “ನಾನು ಏನನ್ನು ಬೋಧಿಸುತ್ತೇನೋ ಅದು ನನ್ನದಲ್ಲ, ನನ್ನನ್ನು ಕಳುಹಿಸಿದಾತನಿಗೆ ಸೇರಿದ್ದು.” (ಯೋಹಾನ 7:16) ಹೌದು ಅವನನ್ನು ಕಳುಹಿಸಿದ ತಂದೆಯೇ ಅವನ ವಿವೇಕದ ನಿಜಮೂಲನಾಗಿದ್ದನು. (ಯೋಹಾನ 12:49) ಹಾಗಾದರೆ ಯೇಸು ಯೆಹೋವನಿಂದ ವಿವೇಕವನ್ನು ಹೇಗೆ ಪಡೆದನು?
6, 7. ಯೇಸು ತನ್ನ ತಂದೆಯಿಂದ ವಿವೇಕವನ್ನು ಯಾವ ವಿಧಗಳಲ್ಲಿ ಪಡೆದನು?
6 ಯೇಸುವಿನ ಹೃದಮನಗಳಲ್ಲಿ ಯೆಹೋವನ ಪವಿತ್ರಾತ್ಮ ಕೆಲಸಮಾಡುತ್ತಿತ್ತು. ಯೆಶಾಯ 11:2) ಯೆಹೋವನ ಆತ್ಮವೇ ಯೇಸುವಿನ ಮೇಲೆ ಇದ್ದು ಅವನ ಯೋಚನೆ ಮತ್ತು ನಿರ್ಣಯಗಳನ್ನು ಮಾರ್ಗದರ್ಶಿಸುತ್ತಿದ್ದುದರಿಂದ, ಅವನ ಮಾತು ಹಾಗೂ ಕ್ರಿಯೆಗಳು ಸರ್ವೋತ್ಕೃಷ್ಟ ವಿವೇಕವನ್ನು ಪ್ರತಿಬಿಂಬಿಸಿದ್ದರಲ್ಲಿ ಆಶ್ಚರ್ಯವಿಲ್ಲ.
ವಾಗ್ದಾನಿಸಲ್ಪಟ್ಟ ಮೆಸ್ಸೀಯನಾದ ಯೇಸುವಿನ ಬಗ್ಗೆ ಯೆಶಾಯನು ಮುಂತಿಳಿಸಿದ್ದು: “ಆ ಅಂಕುರದ ಮೇಲೆ ಜ್ಞಾನವಿವೇಕದಾಯಕ ಆತ್ಮ, ಆಲೋಚನಪರಾಕ್ರಮಗಳನ್ನು ಹುಟ್ಟಿಸುವ ಆತ್ಮ, ತಿಳುವಳಿಕೆಯನ್ನೂ ಯೆಹೋವನ ಭಯವನ್ನೂ ಉಂಟುಮಾಡುವ ಆತ್ಮ, ಅಂತು ಯೆಹೋವನ ಆತ್ಮವೇ ನೆಲೆಗೊಂಡಿರುವದು.” (7 ಯೇಸು ಇನ್ನೊಂದು ಮಹತ್ತಾದ ವಿಧದಲ್ಲೂ ತನ್ನ ತಂದೆಯಿಂದ ವಿವೇಕ ಪಡಕೊಂಡನು. ನಾವು 2ನೇ ಅಧ್ಯಾಯದಲ್ಲಿ ನೋಡಿದಂತೆ, ಯೇಸು ಮಾನವನಾಗಿ ಭೂಮಿಗೆ ಬರುವ ಮುಂಚೆ ಯೆಹೋವನೊಂದಿಗಿದ್ದನು. ಆ ಯುಗಯುಗಾಂತರ ವರ್ಷಗಳಲ್ಲಿ ಯೆಹೋವನ ಯೋಚನಾರೀತಿಯನ್ನು ತನ್ನದಾಗಿಸಿಕೊಳ್ಳುವ ಅಭೂತಪೂರ್ವ ಅವಕಾಶ ಯೇಸುವಿಗಿತ್ತು. ದೇವರು ಜೀವ ಹಾಗೂ ನಿರ್ಜೀವ ವಸ್ತುಗಳೆಲ್ಲವನ್ನು ಸೃಷ್ಟಿಸುವಾಗ ಯೇಸು ಕುಶಲ ‘ಶಿಲ್ಪಿಯೋಪಾದಿ’ ಆತನೊಂದಿಗಿದ್ದನು. ಹೀಗೆ ತಂದೆಯೊಂದಿಗೆ ಕೆಲಸಮಾಡುವಾಗ ಮಗನು ಪಡೆದ ಅಗಾಧ ವಿವೇಕವನ್ನು ನಾವು ಊಹಿಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ. ಸಕಾರಣಗಳಿಂದಲೇ ಮಾನವಪೂರ್ವ ಅಸ್ತಿತ್ವದಲ್ಲಿ ಮಗನನ್ನು ವಿವೇಕದ ವ್ಯಕ್ತೀಕರಣವಾಗಿ ಚಿತ್ರಿಸಲಾಗಿದೆ. (ಜ್ಞಾನೋಕ್ತಿ 8:22-31; ಕೊಲೊಸ್ಸೆ 1:15, 16) ಯೇಸು ಸ್ವರ್ಗದಲ್ಲಿ ತನ್ನ ತಂದೆಯೊಂದಿಗಿದ್ದಾಗ ಪಡೆದುಕೊಂಡ ವಿವೇಕವನ್ನು ತನ್ನ ಶುಶ್ರೂಷೆಯಾದ್ಯಂತ ಬಳಸಿದನು. * (ಯೋಹಾನ 8:26, 28, 38) ಆದ್ದರಿಂದ ಯೇಸುವಿನ ಮಾತುಗಳಲ್ಲಿ ತೋರಿಬರುತ್ತಿದ್ದ ಜ್ಞಾನದ ವೈಶಾಲ್ಯತೆ ಮತ್ತು ತಿಳುವಳಿಕೆಯ ಆಳವನ್ನು ನೋಡುವಾಗ ಅಥವಾ ಅವನ ಪ್ರತಿಯೊಂದು ಕಾರ್ಯಗಳಲ್ಲಿ ತೋರಿಬರುತ್ತಿದ್ದ ಸರಿಯಾಗಿ ನಿರ್ಣಯಮಾಡುವ ಸಾಮರ್ಥ್ಯವನ್ನು ನೋಡುವಾಗ ನಾವು ಬೆರಗಾಗುವುದಿಲ್ಲ.
8. ಯೇಸುವಿನ ಹಿಂಬಾಲಕರೋಪಾದಿ ನಾವು ವಿವೇಕವನ್ನು ಹೇಗೆ ಪಡೆದುಕೊಳ್ಳಬಹುದು?
8 ಯೇಸುವಿನ ಹಿಂಬಾಲಕರೋಪಾದಿ ನಾವು ಕೂಡ ವಿವೇಕಕ್ಕಾಗಿ ಅದರ ಮೂಲನಾಗಿರುವ ಯೆಹೋವನನ್ನೇ ಅವಲಂಬಿಸಬೇಕು. (ಜ್ಞಾನೋಕ್ತಿ 2:6) ಯೆಹೋವನು ನಮಗೆ ಅದ್ಭುತಕರವಾಗಿ ವಿವೇಕ ದಯಪಾಲಿಸುವುದಿಲ್ಲ ಎಂಬುದಂತೂ ಸತ್ಯ. ಆದಾಗ್ಯೂ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಯಶಸ್ವಿಯಾಗಿ ನಿಭಾಯಿಸಲು ಬೇಕಾದ ವಿವೇಕಕ್ಕಾಗಿ ಶ್ರದ್ಧೆಯಿಂದ ಪ್ರಾರ್ಥಿಸುವಲ್ಲಿ ಆತನು ಖಂಡಿತ ಉತ್ತರಿಸುವನು. (ಯಾಕೋಬ 1:5) ಆ ವಿವೇಕವನ್ನು ಪಡೆಯಲು ಬಹಳ ಪ್ರಯತ್ನ ಅಗತ್ಯ. ನಾವದನ್ನು “ನಿಕ್ಷೇಪದಂತೆ” ಹುಡುಕಬೇಕಾಗಿದೆ. (ಜ್ಞಾನೋಕ್ತಿ 2:1-6) ಹೌದು, ದೇವರ ವಿವೇಕ ಅಡಕವಾಗಿರುವ ಆತನ ವಾಕ್ಯವನ್ನು ನಾವು ಆಳವಾಗಿ ಅಗೆಯುತ್ತಾ ಇರಬೇಕು. ಮತ್ತು ನಾವು ಕಲಿಯುವ ವಿಷಯಗಳಿಗೆ ತಕ್ಕಂತೆ ಜೀವನ ನಡೆಸಬೇಕು. ವಿವೇಕವನ್ನು ಪಡೆಯಲು ಯೆಹೋವನ ಮಗನ ಮಾದರಿಯು ನಮಗೆ ಬಹಳ ಸಹಾಯ ಮಾಡುವುದು. ಯೇಸು ವಿವೇಕವನ್ನು ತೋರಿಸಿದ ಹಲವು ಕ್ಷೇತ್ರಗಳನ್ನು ಮತ್ತು ಅವನನ್ನು ಹೇಗೆ ಅನುಕರಿಸಬಹುದು ಎಂಬುದನ್ನು ನಾವೀಗ ತಿಳಿಯೋಣ.
ವಿವೇಕಯುತ ಮಾತುಗಳು
9. ಯೇಸುವಿನ ಬೋಧನೆಗಳು ಅಷ್ಟು ವಿವೇಕಯುತವಾಗಿರಲು ಕಾರಣವೇನು?
9 ಯೇಸುವಿನ ಮಾತುಗಳನ್ನು ಕೇಳಿಸಿಕೊಳ್ಳಲೆಂದೇ ಜನರು ದೊಡ್ಡ ಗುಂಪಾಗಿ ಕೂಡಿಬರುತ್ತಿದ್ದರು. (ಮಾರ್ಕ 6:31-34; ಲೂಕ 5:1-3) ಅದಕ್ಕೇನೂ ಆಶ್ಚರ್ಯಪಡಬೇಕಾಗಿಲ್ಲ, ಏಕೆಂದರೆ, ಯೇಸು ಮಾತನಾಡಲು ಆರಂಭಿಸಿದಾಗ ಅವನ ಬಾಯಿಂದ ವಿವೇಕದ ಸರ್ವೋತ್ಕೃಷ್ಟ ನುಡಿಗಳು ಸರಾಗವಾಗಿ ಹೊರಹೊಮ್ಮುತ್ತಿದ್ದವು! ಅವನ ಬೋಧನೆಗಳು ಅವನಿಗೆ ದೇವರ ವಾಕ್ಯದ ಆಳವಾದ ಜ್ಞಾನವಿತ್ತೆಂಬುದನ್ನು ಮತ್ತು ಸಮಸ್ಯೆಗಳ ಮೂಲಕಾರಣವನ್ನು ಗ್ರಹಿಸುವ ಅಪೂರ್ವ ಸಾಮರ್ಥ್ಯವಿತ್ತೆಂಬುದನ್ನು ತೋರಿಸಿಕೊಟ್ಟವು. ಅವನ ಬೋಧನೆಗಳು ಪ್ರತಿಯೊಬ್ಬರನ್ನೂ ಆಕರ್ಷಿಸುತ್ತವೆ ಮತ್ತು ಯಾವಾಗಲೂ ಬೆಲೆಬಾಳುತ್ತವೆ. ‘ಆಲೋಚನಾಕರ್ತನೆಂದು’ ಮುಂತಿಳಿಸಲ್ಪಟ್ಟ ಯೇಸುವಿನ ಮಾತುಗಳಲ್ಲಿ ಕಂಡುಬರುವ ವಿವೇಕದ ಕೆಲವು ಉದಾಹರಣೆಗಳನ್ನು ಪರಿಗಣಿಸಿ.—ಯೆಶಾಯ 9:6.
10. ಯಾವ ಒಳ್ಳೇ ಗುಣಗಳನ್ನು ಬೆಳೆಸಿಕೊಳ್ಳುವಂತೆ ಯೇಸು ನಮ್ಮನ್ನು ಪ್ರೋತ್ಸಾಹಿಸುತ್ತಾನೆ? ಏಕೆ?
10 ಈ ಅಧ್ಯಾಯದ ಆರಂಭದಲ್ಲಿ ಹೇಳಲಾದ ಪರ್ವತ ಪ್ರಸಂಗವು ಯೇಸುವಿನ ಬೋಧನೆಗಳಲ್ಲೇ ದೊಡ್ಡದಾದ ಸಂಗ್ರಹವಾಗಿದೆ. ಅದರಲ್ಲಿ ಇತರರ ವಿವರಣೆಗಳಾಗಲಿ ಮಾತುಗಳಾಗಲಿ ಇಲ್ಲ. ಆ ಪ್ರಸಂಗದಲ್ಲಿ ಯೇಸು ನಮ್ಮ ಮಾತು ಮತ್ತು ನಡತೆ ಉತ್ತಮವಾಗಿರಬೇಕು ಎಂದಷ್ಟೇ ಹೇಳಲಿಲ್ಲ. ಅದಕ್ಕಿಂತ ಹೆಚ್ಚಿನದ್ದನ್ನು ತಿಳಿಸಿದನು. ಮತ್ತಾಯ 5:5-9, 43-48) ನಾವು ಈ ಗುಣಗಳನ್ನು ಹೃದಮನಗಳಲ್ಲಿ ಬೆಳೆಸಿಕೊಂಡಂತೆ ನಮ್ಮ ಮಾತು ಮತ್ತು ನಡತೆ ಹಿತಕರವಾಗಿರುವುದು. ಇದು ಯೆಹೋವನನ್ನು ಮೆಚ್ಚಿಸುವುದು ಮಾತ್ರವಲ್ಲ ಜೊತೆ ಮಾನವರೊಂದಿಗಿನ ಸಂಬಂಧವನ್ನೂ ಉತ್ತಮಪಡಿಸುವುದು.—ಮತ್ತಾಯ 5:16.
ನಮ್ಮ ಯೋಚನೆಗಳು ಮತ್ತು ಭಾವನೆಗಳಿಗನುಸಾರ ನಮ್ಮ ಮಾತು ಹಾಗೂ ಕೃತ್ಯಗಳಿರುತ್ತವೆ ಎಂಬುದು ಯೇಸುವಿಗೆ ಚೆನ್ನಾಗಿ ಗೊತ್ತಿತ್ತು. ಆದ್ದರಿಂದಲೇ ನಮ್ಮ ಹೃದಮನಗಳಲ್ಲಿ ಸೌಮ್ಯಭಾವ, ನೀತಿಗಾಗಿ ಹಸಿವು, ಕರುಣೆ, ಶಾಂತಿಶೀಲತೆ ಮತ್ತು ಇತರರಿಗೆ ಪ್ರೀತಿ ತೋರಿಸುವುದರಂಥ ಒಳ್ಳೇ ಗುಣಗಳನ್ನು ಬೆಳೆಸಿಕೊಳ್ಳುವಂತೆ ಯೇಸು ನಮ್ಮನ್ನು ಪ್ರೋತ್ಸಾಹಿಸುತ್ತಾನೆ. (11. ಪಾಪಕೃತ್ಯದ ಬಗ್ಗೆ ಸಲಹೆಕೊಡುವಾಗ ಯೇಸು ಹೇಗೆ ಅದರ ಮೂಲಕಾರಣದೆಡೆಗೆ ಗಮನಸೆಳೆದನು?
11 ಪಾಪಕೃತ್ಯದ ಬಗ್ಗೆ ಸಲಹೆ ಕೊಡುವಾಗ ಯೇಸು ಅದರ ಮೂಲಕಾರಣ ಯಾವುದೆಂದು ತಿಳಿಸುತ್ತಾನೆ. ಹಿಂಸಾಕೃತ್ಯಗಳಿಂದ ಕೇವಲ ದೂರವಿರಿ ಎಂದಷ್ಟೇ ಅವನು ಹೇಳುವುದಿಲ್ಲ. ಬದಲಾಗಿ ಹೃದಯದಲ್ಲಿ ಕೋಪ ಹೊಗೆಯಾಡಲು ಬಿಡಬೇಡಿ ಎಂಬುದಾಗಿ ಎಚ್ಚರಿಸುತ್ತಾನೆ. (ಮತ್ತಾಯ 5:21, 22; 1 ಯೋಹಾನ 3:15) ಅವನು ವ್ಯಭಿಚಾರವನ್ನು ಕೇವಲ ನಿಷೇಧಿಸಿದ್ದು ಮಾತ್ರವಲ್ಲ, ಅಂಥ ಕೃತ್ಯಕ್ಕೆ ನಡೆಸುವ ಕಾಮೋದ್ರೇಕಭಾವವು ಹೃದಯದಲ್ಲಿ ಹುಟ್ಟಲೂ ಬಾರದೆಂದು ಎಚ್ಚರಿಸುತ್ತಾನೆ. ಕಾಮುಕತೆಯನ್ನು ಪ್ರಚೋದಿಸುವ ಅಯೋಗ್ಯ ಬಯಕೆಗಳನ್ನು ಹುಟ್ಟುಹಾಕಲು ಕಣ್ಣುಗಳಿಗೆ ಅವಕಾಶಕೊಡದಂತೆಯೂ ನಮಗೆ ಬುದ್ಧಿಹೇಳುತ್ತಾನೆ. (ಮತ್ತಾಯ 5:27-30) ಯೇಸು ಸಮಸ್ಯೆಗಳನ್ನು ತಿಳಿಸಿದ್ದು ಮಾತ್ರವಲ್ಲ ಅವುಗಳ ಮೂಲಕಾರಣದೆಡೆಗೂ ಗಮನ ಸೆಳೆದನು. ಪಾಪಕೃತ್ಯಗಳಿಗೆ ಕಾರಣವಾಗಿರುವ ವರ್ತನೆ ಮತ್ತು ಬಯಕೆಗಳ ಕುರಿತು ಅವನು ತಿಳಿಸಿದನು.—ಕೀರ್ತನೆ 7:14.
12. ಯೇಸುವಿನ ಸಲಹೆಯನ್ನು ಅವನ ಹಿಂಬಾಲಕರು ಹೇಗೆ ತೆಗೆದುಕೊಳ್ಳುತ್ತಾರೆ? ಏಕೆ?
12 ಅಬ್ಬಾ! ಯೇಸುವಿನ ಮಾತುಗಳಲ್ಲಿ ಎಷ್ಟೊಂದು ವಿವೇಕವಿದೆ! ‘ಜನರ ಗುಂಪುಗಳು ಅವನು ಬೋಧಿಸುವ ರೀತಿಯನ್ನು ಕಂಡು ಅತ್ಯಾಶ್ಚರ್ಯಪಟ್ಟದ್ದರಲ್ಲಿ’ ಸಂಶಯವಿಲ್ಲ. (ಮತ್ತಾಯ 7:28) ಅವನ ಹಿಂಬಾಲಕರಾದ ನಾವು ಅವನ ವಿವೇಕಯುತ ಸಲಹೆಗಳನ್ನು ಜೀವನದ ಮಾರ್ಗದರ್ಶಿಯೋಪಾದಿ ಪರಿಗಣಿಸುತ್ತೇವೆ. ಯೇಸು ಶಿಫಾರಸು ಮಾಡಿದ ಕರುಣೆ, ಶಾಂತಿಶೀಲತೆ, ಪ್ರೀತಿ ಮುಂತಾದ ಒಳ್ಳೇ ಗುಣಗಳನ್ನು ಬೆಳೆಸಿಕೊಳ್ಳಲು ನಾವು ಪ್ರಯತ್ನಿಸುತ್ತೇವೆ. ನಮ್ಮ ಈ ನಡತೆ ಯೆಹೋವನನ್ನು ಪ್ರಸನ್ನಗೊಳಿಸುತ್ತದೆಂಬ ತಿಳಿವಳಿಕೆ ನಮಗಿದೆ. ಯೇಸು ಯಾವುದರ ವಿರುದ್ಧ ಎಚ್ಚರಿಸಿದನೋ ಆ ಕ್ರೋಧ ಮತ್ತು ಅನೈತಿಕ ಅಭಿಲಾಷೆಗಳಂಥ ಅಯೋಗ್ಯ ಭಾವನೆ ಮತ್ತು ಆಶೆಗಳನ್ನು ನಮ್ಮ ಹೃದಯದಿಂದ ಕಿತ್ತೆಸೆಯಲು ನಾವು ಶ್ರಮಿಸುತ್ತೇವೆ. ಏಕೆಂದರೆ, ಹೀಗೆ ಮಾಡುವಲ್ಲಿ ಪಾಪಕೃತ್ಯಗಳಿಂದ ನಾವು ದೂರವಿರಸಾಧ್ಯವಿದೆ ಎಂಬುದು ನಮಗೆ ತಿಳಿದಿದೆ.—ಯಾಕೋಬ 1:14, 15.
ವಿವೇಕಯುತ ಜೀವನರೀತಿ
13, 14. ಯೇಸು ತನ್ನ ಜೀವನರೀತಿಯನ್ನು ಆರಿಸಿಕೊಳ್ಳುವಾಗ ಯೋಗ್ಯ ನಿರ್ಣಯ ಮಾಡಿದನೆಂದು ಹೇಗೆ ಗೊತ್ತಾಗುತ್ತದೆ?
13 ಯೇಸು ನುಡಿಯಲ್ಲಿ ಮಾತ್ರವಲ್ಲ ತನ್ನ ನಡೆಯಲ್ಲೂ ವಿವೇಕ ತೋರಿಸಿದನು. ಅವನ ನಿರ್ಣಯಗಳು, ಸ್ವತಃ ತನ್ನ ಕುರಿತು ಅವನಿಗಿದ್ದ ನೋಟ ಮತ್ತು ಇತರರೊಂದಿಗಿನ ಅವನ ವ್ಯವಹಾರ ಹೀಗೆ ಅವನ ಇಡೀ ಜೀವನರೀತಿಯಲ್ಲಿ ವಿವೇಕದ ವಿಭಿನ್ನ ಚಹರೆಗಳು ತೋರಿಬಂದವು. ಯೇಸು, “ಪ್ರಾಯೋಗಿಕ ವಿವೇಕ ಮತ್ತು ಯೋಚನಾ ಸಾಮರ್ಥ್ಯ”ದಿಂದ ಮಾರ್ಗದರ್ಶಿಸಲ್ಪಟ್ಟಿದ್ದನು ಎಂಬುದನ್ನು ತೋರಿಸುವ ಕೆಲವು ಉದಾಹರಣೆಗಳನ್ನು ಪರಿಗಣಿಸಿ.—ಜ್ಞಾನೋಕ್ತಿ 3:21, NW.
14 ವಿವೇಕಿಗಳು ಯೋಗ್ಯ ನಿರ್ಣಯಗಳನ್ನು ಮಾಡುತ್ತಾರೆ. ತನ್ನ ಜೀವನರೀತಿಯನ್ನು ಆರಿಸಿಕೊಳ್ಳುವಾಗ ಯೇಸು ಯೋಗ್ಯ ನಿರ್ಣಯ ಮಾಡಿದನು. ಅವನು ಮನಸ್ಸು ಮಾಡಿದ್ದರೆ ಯಾವ ರೀತಿಯ ಜೀವನ ನಡೆಸಬಹುದಿತ್ತು ಎಂಬುದನ್ನು ಸ್ವಲ್ಪ ಯೋಚಿಸಿ ನೋಡಿ. ಅವನು ಕಟ್ಟಿರಬಹುದಾದ ಮನೆ, ಮಾಡಿರಬಹುದಾದ ವ್ಯಾಪಾರ, ಗಳಿಸಿರಬಹುದಾದ ಲೌಕಿಕ ಪ್ರಖ್ಯಾತಿ ಇವೆಲ್ಲವನ್ನು ಊಹಿಸಿಕೊಳ್ಳಬಲ್ಲಿರಾ? ಜೀವನದಲ್ಲಿ ಅಂಥ ವಿಷಯಗಳನ್ನು ಬೆನ್ನಟ್ಟುವುದು “ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥ” ಎಂದು ಯೇಸುವಿಗೆ ಗೊತ್ತಿತ್ತು. (ಪ್ರಸಂಗಿ 4:4; 5:10) ಅಂಥ ಮಾರ್ಗವು ಮೂರ್ಖತನವಾಗಿದ್ದು, ವಿವೇಕಕ್ಕೆ ತದ್ವಿರುದ್ಧವಾದದ್ದಾಗಿದೆ. ಯೇಸು ಸರಳ ಜೀವನ ನಡೆಸಲು ನಿಶ್ಚಯಿಸಿದನು. ಹಣಮಾಡುವುದರಲ್ಲಿ ಇಲ್ಲವೇ ಭೌತಿಕ ಸಂಪತ್ತನ್ನು ಶೇಖರಿಸಿಡುವುದರಲ್ಲಿ ಅವನಿಗೆ ಸ್ವಲ್ಪವೂ ಆಸಕ್ತಿ ಇರಲಿಲ್ಲ. (ಮತ್ತಾಯ 8:20) ಅವನೇನನ್ನು ಬೋಧಿಸಿದನೋ ಅದಕ್ಕೆ ಹೊಂದಿಕೆಯಲ್ಲಿ ದೇವರ ಚಿತ್ತವನ್ನು ಮಾಡುವ ಒಂದೇ ಒಂದು ಉದ್ದೇಶದ ಮೇಲೆ ತನ್ನ ಕಣ್ಣುಗಳನ್ನು ನೆಟ್ಟನು. (ಮತ್ತಾಯ 6:22) ಯೇಸು, ದೇವರ ರಾಜ್ಯದ ಏಳಿಗೆಗಾಗಿ ತನ್ನೆಲ್ಲಾ ಸಮಯ ಶಕ್ತಿಯನ್ನು ಮುಡಿಪಾಗಿಟ್ಟನು. ಅದು ಭೌತಿಕ ವಸ್ತುಗಳಿಗಿಂತ ಎಷ್ಟೋ ಹೆಚ್ಚು ಮಹತ್ವವುಳ್ಳದ್ದೂ ಆಶೀರ್ವಾದದಾಯಕವೂ ಆಗಿದೆ. (ಮತ್ತಾಯ 6:19-21) ಹೀಗೆ ಯೇಸು ಅನುಕರಣಯೋಗ್ಯ ಮಾದರಿಯನ್ನಿಟ್ಟನು.
15. ಯೇಸುವಿನ ಹಿಂಬಾಲಕರು ತಮ್ಮ ಕಣ್ಣನ್ನು ಸರಳವಾಗಿ ಇಟ್ಟಿದ್ದಾರೆಂದು ಹೇಗೆ ತೋರಿಸಬಲ್ಲರು? ಇದು ವಿವೇಕಯುತ ಮಾರ್ಗವಾಗಿದೆಯೇಕೆ?
15 ಇಂದು, ಯೇಸುವಿನ ಹಿಂಬಾಲಕರು ಕೂಡ ಕಣ್ಣನ್ನು ಸರಳವಾಗಿ ಇಟ್ಟುಕೊಳ್ಳುವುದು ವಿವೇಕಯುತ ಎಂಬುದನ್ನು ಗ್ರಹಿಸುತ್ತಾರೆ. ಆದ್ದರಿಂದಲೇ, ಅವರು ತಮಗೆ ಹೊರೆಯಾಗುವ ಅನಾವಶ್ಯಕ ಸಾಲಗಳನ್ನು ತೆಗೆದುಕೊಳ್ಳುವುದಿಲ್ಲ ಮತ್ತು ತಮ್ಮೆಲ್ಲಾ ಗಮನ ಹಾಗೂ ಶಕ್ತಿಯನ್ನು ಹೀರಿಕೊಳ್ಳುವ ಪ್ರಾಪಂಚಿಕ ಗುರಿಗಳನ್ನು ಇಡುವುದಿಲ್ಲ. (1 ತಿಮೊಥೆಯ 6:9, 10) ಅನೇಕರು ಕ್ರೈಸ್ತ ಶುಶ್ರೂಷೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯಲಿಕ್ಕಾಗಿ ತಮ್ಮ ಜೀವನಶೈಲಿಯನ್ನು ಸರಳಗೊಳಿಸಲು ಕ್ರಮ ತೆಗೆದುಕೊಂಡಿದ್ದಾರೆ. ಫಲಿತಾಂಶವಾಗಿ ಕೆಲವರು ಪೂರ್ಣ ಸಮಯದ ರಾಜ್ಯ ಘೋಷಕರಾಗಿಯೂ ಸೇವೆಸಲ್ಲಿಸುತ್ತಿದ್ದಾರೆ. ಬೆನ್ನಟ್ಟಲು ಇದಕ್ಕಿಂತ ವಿವೇಕಯುತ ಮಾರ್ಗ ಮತ್ತೊಂದಿಲ್ಲ. ಏಕೆಂದರೆ, ದೇವರ ರಾಜ್ಯಕ್ಕೆ ಸಂಬಂಧಪಟ್ಟ ವಿಷಯಗಳನ್ನು ತಕ್ಕ ಸ್ಥಾನದಲ್ಲಿಡುವುದರಿಂದ ಅತಿ ಹೆಚ್ಚಿನ ಸಂತೋಷ ಮತ್ತು ಸಂತೃಪ್ತಿ ಲಭಿಸುತ್ತದೆ.—ಮತ್ತಾಯ 6:33.
16, 17. (ಎ) ಯೇಸು ತಾನು ವಿನಯಶೀಲನೂ ಸ್ವತಃ ತನ್ನ ಬಗ್ಗೆ ವಾಸ್ತವಿಕ ನಿರೀಕ್ಷಣೆಗಳನ್ನು ಇಟ್ಟುಕೊಂಡವನೂ ಎಂಬುದನ್ನು ಯಾವ ವಿಧಗಳಲ್ಲಿ ತೋರಿಸಿದನು? (ಬಿ) ನಾವು ಕೂಡ ವಿನಯಶೀಲರೂ ಸ್ವತಃ ನಮ್ಮ ಬಗ್ಗೆ ವಾಸ್ತವಿಕ ನಿರೀಕ್ಷಣೆಗಳನ್ನು ಇಟ್ಟುಕೊಂಡವರೂ ಆಗಿದ್ದೇವೆಂಬುದನ್ನು ಹೇಗೆ ತೋರಿಸಬಲ್ಲೆವು?
16 ದೀನರಲ್ಲಿ ಅಥವಾ ವಿನಯಶೀಲರಲ್ಲಿ ವಿವೇಕವಿದೆ ಎಂಬುದಾಗಿ ಬೈಬಲ್ ತಿಳಿಸುತ್ತದೆ; ವಿನಯಶೀಲತೆಯಲ್ಲಿ ನಮ್ಮ ಇತಿಮಿತಿಗಳ ಕುರಿತ ಅರಿವನ್ನು ಹೊಂದಿರುವುದು ಸಹ ಸೇರಿದೆ. (ಜ್ಞಾನೋಕ್ತಿ 11:2) ಯೇಸು ವಿನಯಶೀಲನಾಗಿದ್ದನು ಮತ್ತು ಸ್ವತಃ ತನ್ನ ಬಗ್ಗೆ ವಾಸ್ತವಿಕ ನಿರೀಕ್ಷಣೆಗಳನ್ನು ಇಟ್ಟುಕೊಂಡಿದ್ದನು. ತನ್ನ ಸಂದೇಶಕ್ಕೆ ಕಿವಿಗೊಡುವ ಪ್ರತಿಯೊಬ್ಬರನ್ನು ತಾನು ಬದಲಾಯಿಸಲಾರೆನು ಎಂಬುದು ಅವನಿಗೆ ಗೊತ್ತಿತ್ತು. (ಮತ್ತಾಯ 10:32-39) ಹಾಗೂ ತಾನೇ ಖುದ್ದಾಗಿ ಎಲ್ಲಾ ಜನರನ್ನು ಭೇಟಿಮಾಡಿ ಸುವಾರ್ತೆ ತಿಳಿಸಸಾಧ್ಯವಿಲ್ಲ ಎಂಬುದನ್ನು ಅರಿತುಕೊಂಡಿದ್ದನು. ಆದ್ದರಿಂದ ಶಿಷ್ಯರನ್ನಾಗಿ ಮಾಡುವ ಕೆಲಸವನ್ನು ತನ್ನ ಹಿಂಬಾಲಕರಿಗೆ ವಹಿಸುವ ಮೂಲಕ ವಿವೇಕವನ್ನು ತೋರಿಸಿದನು. (ಮತ್ತಾಯ 28:18-20) ತಾನೇನು ಮಾಡಿದನೋ “ಅವುಗಳಿಗಿಂತಲೂ ಮಹತ್ತಾದ ಕ್ರಿಯೆಗಳನ್ನು” ಅವರು ಮಾಡಲಿದ್ದಾರೆ ಎಂಬುದನ್ನು ಅವನು ವಿನಯಶೀಲತೆಯಿಂದ ಒಪ್ಪಿಕೊಂಡನು. ಅವರು ಹೆಚ್ಚಿನ ಕ್ಷೇತ್ರವನ್ನು ಆವರಿಸಿ ಅವನಿಗಿಂತ ದೀರ್ಘಾವಧಿಯ ತನಕ ಹೆಚ್ಚಿನ ಜನರಿಗೆ ಸಾರಲಿದ್ದರು. (ಯೋಹಾನ 14:12) ತನಗೆ ಸಹ ಸಹಾಯದ ಅಗತ್ಯವಿದೆ ಎಂಬುದನ್ನು ಅವನು ಮನಗಂಡನು. ಅರಣ್ಯದಲ್ಲಿ ಅವನನ್ನು ಉಪಚರಿಸಲು ದೇವದೂತರು ಬಂದಾಗ ಮತ್ತು ಗೆತ್ಸೇಮನೆ ಎಂಬ ಸ್ಥಳದಲ್ಲಿ ಅವನನ್ನು ಬಲಪಡಿಸಲು ದೇವದೂತನು ಬಂದಾಗ ಅವರ ಸಹಾಯವನ್ನು ಸ್ವೀಕರಿಸಿದನು. ಅತೀವ ಸಂಕಷ್ಟದ ಸಮಯದಲ್ಲಿ ಸಹಾಯಕ್ಕಾಗಿ ಬಲವಾಗಿ ಕೂಗುತ್ತಾ ಕಣ್ಣೀರು ಸುರಿಸಿದನು.—ಮತ್ತಾಯ 4:11; ಲೂಕ 22:43; ಇಬ್ರಿಯ 5:7.
17 ನಾವು ಕೂಡ ವಿನಯಶೀಲರಾಗಿದ್ದು ಸ್ವತಃ ನಮ್ಮ ಬಗ್ಗೆ ವಾಸ್ತವಿಕ ನಿರೀಕ್ಷಣೆಗಳನ್ನು ಹೊಂದಿರಬೇಕು. ಪೂರ್ಣ ಪ್ರಾಣ ಮತ್ತು ಹುರುಪಿನಿಂದ ಸಾರುವ ಹಾಗೂ ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಪಾಲ್ಗೊಳ್ಳಲು ನಾವು ಖಂಡಿತ ಬಯಸುತ್ತೇವೆ. (ಲೂಕ 13:24; ಕೊಲೊಸ್ಸೆ 3:23) ಆದರೆ ಅದೇ ಸಮಯದಲ್ಲಿ, ಯೆಹೋವನು ನಮ್ಮನ್ನು ಇತರರೊಂದಿಗೆ ಹೋಲಿಸಿನೋಡುವುದಿಲ್ಲ ನಾವೂ ಹಾಗೆ ಹೋಲಿಸಿನೋಡಬಾರದು ಎಂಬುದನ್ನು ಮನದಲ್ಲಿ ಇಟ್ಟುಕೊಂಡಿರಬೇಕು. (ಗಲಾತ್ಯ 6:4) ನಮ್ಮ ಸಾಮರ್ಥ್ಯಗಳು ಮತ್ತು ಸನ್ನಿವೇಶಗಳನ್ನು ತೂಗಿನೋಡುತ್ತಾ ವಾಸ್ತವಿಕ ಗುರಿಗಳನ್ನಿಡುವಂತೆ ಪ್ರಾಯೋಗಿಕ ವಿವೇಕವು ಸಹಾಯ ಮಾಡುವುದು. ಇದಕ್ಕೆ ಕೂಡಿಸಿ, ಜವಾಬ್ದಾರಿಯುತ ಸ್ಥಾನಗಳಲ್ಲಿರುವವರು ತಮಗೂ ಇತಿಮಿತಿಗಳಿವೆ ಮತ್ತು ಕಾಲಕಾಲಕ್ಕೆ ಸಹಾಯ ಹಾಗೂ ಬೆಂಬಲದ ಅಗತ್ಯವಿದೆ ಎಂಬುದನ್ನು ಮನಗಾಣುವಂತೆ ವಿವೇಕ ಮಾರ್ಗದರ್ಶಿಸುತ್ತದೆ. ಜೊತೆ ವಿಶ್ವಾಸಿಯೊಬ್ಬನನ್ನು ಬಳಸಿ ಯೆಹೋವನು ತಮಗೆ “ಬಲವರ್ಧಕ ಸಹಾಯ” ಕೊಡಶಕ್ತನು ಎಂಬುದನ್ನು ಅಂಗೀಕರಿಸುತ್ತಾ, ಕೊಡಲ್ಪಟ್ಟ ಸಹಾಯವನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸುವಂತೆ ವಿನಯಶೀಲತೆಯು ನೆರವಾಗುವುದು.—ಕೊಲೊಸ್ಸೆ 4:11.
18, 19. (ಎ) ಯೇಸು ಶಿಷ್ಯರೊಂದಿಗೆ ನ್ಯಾಯಸಮ್ಮತವಾಗಿ ಮತ್ತು ಸಕಾರಾತ್ಮಕವಾಗಿ ವ್ಯವಹರಿಸಿದನೆಂಬುದನ್ನು ಯಾವುದು ತೋರಿಸುತ್ತದೆ? (ಬಿ) ಇತರರೊಂದಿಗೆ ವ್ಯವಹರಿಸುವಾಗ ಸಕಾರಾತ್ಮಕ ಮನೋಭಾವ ಹೊಂದಿರಲು ಮತ್ತು ನ್ಯಾಯಸಮ್ಮತರಾಗಿರಲು ನಮಗೆ ಯಾವ ಸಕಾರಣಗಳಿವೆ? ನಾವದನ್ನು ಹೇಗೆ ಮಾಡಬಲ್ಲೆವು?
18 “ಮೇಲಣಿಂದ ಬರುವ ವಿವೇಕವು . . . ನ್ಯಾಯಸಮ್ಮತವಾದದ್ದು” ಎಂದು ಯಾಕೋಬ 3:17 ಹೇಳುತ್ತದೆ. ಯೇಸು ತನ್ನ ಶಿಷ್ಯರೊಂದಿಗೆ ನ್ಯಾಯಸಮ್ಮತವಾಗಿ ಮತ್ತು ಸಕಾರಾತ್ಮಕವಾಗಿ ವ್ಯವಹರಿಸಿದನು. ಅವರ ದೋಷಗಳು ಅವನಿಗೆ ಚೆನ್ನಾಗಿ ಗೊತ್ತಿತ್ತಾದರೂ ಅವರಲ್ಲಿ ಒಳ್ಳೇದನ್ನೇ ಹುಡುಕಿದನು. (ಯೋಹಾನ 1:47) ತಾನು ಬಂಧನಕ್ಕೊಳಗಾಗಲಿರುವ ರಾತ್ರಿಯಂದು ಅವರು ತನ್ನನ್ನು ಬಿಟ್ಟು ಓಡಿಹೋಗಲಿರುವರು ಎಂದು ಗೊತ್ತಿತ್ತಾದರೂ ಅವರ ನಿಷ್ಠೆಯ ಬಗ್ಗೆ ಅವನೆಂದೂ ಸಂಶಯಪಡಲಿಲ್ಲ. (ಮತ್ತಾಯ 26:31-35; ಲೂಕ 22:28-30) ಯೇಸುವಿನ ಒಳ್ಳೇ ಪರಿಚಯವಿದ್ದರೂ ಅವನನ್ನು ಅರಿಯೆನೆಂದು ಪೇತ್ರನು ಮೂರು ಬಾರಿ ಹೇಳಿದನು. ಆದಾಗ್ಯೂ ಯೇಸು ಪೇತ್ರನಿಗಾಗಿ ಪ್ರಾರ್ಥಿಸಿದನು ಮತ್ತು ಅವನ ನಂಬಿಗಸ್ತಿಕೆಯಲ್ಲಿ ಭರವಸೆ ವ್ಯಕ್ತಪಡಿಸಿದನು. (ಲೂಕ 22:31-34) ತನ್ನ ಭೂಜೀವನದ ಕೊನೇ ರಾತ್ರಿಯಂದು ಯೇಸು ತನ್ನ ತಂದೆಗೆ ಪ್ರಾರ್ಥಿಸಿದಾಗ ತನ್ನ ಶಿಷ್ಯರ ತಪ್ಪುಗಳನ್ನು ಹೇಳಲಿಲ್ಲ. ಬದಲಾಗಿ “ಇವರು ನಿನ್ನ ವಾಕ್ಯವನ್ನು ಕೈಕೊಂಡು ನಡೆದಿದ್ದಾರೆ” ಎನ್ನುವ ಮೂಲಕ ಈ ತನಕ ಅವರು ನಡೆದುಕೊಂಡಿರುವ ರೀತಿಯ ಬಗ್ಗೆ ಸಕಾರಾತ್ಮಕವಾಗಿ ಮಾತಾಡಿದನು. (ಯೋಹಾನ 17:6) ಅವರ ಅಪರಿಪೂರ್ಣತೆಗಳ ಹೊರತೂ ಭೂಮಿಯಲ್ಲಿ ತನ್ನ ರಾಜ್ಯಕ್ಕೆ ಸಂಬಂಧಪಟ್ಟ ವಿಷಯಗಳೆಲ್ಲವನ್ನು ಅವರ ಕೈಗೆ ವಹಿಸಿಕೊಟ್ಟನು. (ಮತ್ತಾಯ 25:14, 15; ಲೂಕ 12:42-44) ಅವರ ಮೇಲೆ ಅವನಿಟ್ಟಿದ್ದ ಈ ನಂಬಿಕೆ ಮತ್ತು ಭರವಸೆ, ಅವನು ಆಜ್ಞಾಪಿಸಿದ ಕೆಲಸವನ್ನು ಮಾಡುವಂತೆ ಅವರನ್ನು ಬಲಪಡಿಸಿದ್ದರಲ್ಲಿ ಸಂಶಯವಿಲ್ಲ.
19 ಈ ವಿಷಯದಲ್ಲಿ ಯೇಸುವನ್ನು ಅನುಕರಿಸಲು ಅವನ ಹಿಂಬಾಲಕರಿಗೆ ಸಕಾರಣಗಳಿವೆ. ದೇವರ ಪರಿಪೂರ್ಣ ಮಗನೇ ತನ್ನ ಅಪರಿಪೂರ್ಣ ಶಿಷ್ಯರೊಂದಿಗೆ ವ್ಯವಹರಿಸುವಾಗ ತಾಳ್ಮೆಯನ್ನು ತೋರಿಸಿರುವುದಾದರೆ, ಪಾಪಿಗಳಾದ ನಾವು ಪರಸ್ಪರ ವ್ಯವಹರಿಸುವಾಗ ಎಷ್ಟೋ ಹೆಚ್ಚು ನ್ಯಾಯಸಮ್ಮತರಾಗಿರಬೇಕಲ್ಲವೇ? (ಫಿಲಿಪ್ಪಿ 4:5) ಜೊತೆ ಆರಾಧಕರ ತಪ್ಪುಗಳ ಮೇಲೆ ಗಮನಕೇಂದ್ರೀಕರಿಸುವ ಬದಲು ಅವರಲ್ಲಿ ಒಳ್ಳೇದನ್ನು ಹುಡುಕಲು ನಾವು ಪ್ರಯತ್ನಿಸಬೇಕು. ಯೆಹೋವನೇ ಅವರನ್ನು ಸೆಳೆದಿದ್ದಾನೆ ಎಂಬುದನ್ನು ವಿವೇಕಿಗಳಾದ ನಾವು ನೆನಪಿನಲ್ಲಿಡಬೇಕು. (ಯೋಹಾನ 6:44) ಖಂಡಿತವಾಗಿ ಅವರಲ್ಲಿ ಏನೋ ಒಳ್ಳೇದನ್ನು ಅವನು ನೋಡಿರಬೇಕು. ಆದ್ದರಿಂದ ನಮ್ಮಲ್ಲೂ ಅಂಥ ಮನೋಭಾವ ಇರಬೇಕು. ಸಕಾರಾತ್ಮಕ ಮನೋಭಾವವು ‘ದೋಷವನ್ನು ಲಕ್ಷಿಸದಿರಲು’ ಮಾತ್ರವಲ್ಲ ಇತರರನ್ನು ಶ್ಲಾಘಿಸಬಹುದಾದ ವಿಷಯಗಳನ್ನು ಹುಡುಕಲೂ ಸಹಾಯ ಮಾಡುತ್ತದೆ. (ಜ್ಞಾನೋಕ್ತಿ 19:11) ನಾವು ನಮ್ಮ ಕ್ರೈಸ್ತ ಸಹೋದರ ಸಹೋದರಿಯರಲ್ಲಿ ಭರವಸೆ ವ್ಯಕ್ತಪಡಿಸುವಲ್ಲಿ, ಯೆಹೋವನ ಸೇವೆಯಲ್ಲಿ ತಮ್ಮಿಂದಾದದ್ದೆಲ್ಲವನ್ನು ಮಾಡುವಂತೆ ಮತ್ತು ಆ ಸೇವೆಯಲ್ಲಿ ಆನಂದ ಕಂಡುಕೊಳ್ಳುವಂತೆ ನಾವು ಅವರಿಗೆ ಸಹಾಯ ಮಾಡಿದಂತಿರುವುದು.—1 ಥೆಸಲೊನೀಕ 5:11.
20. ಸುವಾರ್ತಾ ವೃತ್ತಾಂತಗಳಲ್ಲಿರುವ ನಿಕ್ಷೇಪಗಳನ್ನು ನಾವೇನು ಮಾಡಬೇಕು? ಏಕೆ?
20 ಯೇಸುವಿನ ಜೀವನ ಮತ್ತು ಶುಶ್ರೂಷೆಯ ಕುರಿತ ಸುವಾರ್ತಾ ವೃತ್ತಾಂತಗಳು ನಿಜಕ್ಕೂ ವಿವೇಕದ ನಿಕ್ಷೇಪಗಳಾಗಿವೆ! ಈ ಬೆಲೆಕಟ್ಟಲಾಗದ ಉಡುಗೊರೆಯನ್ನು ನಾವೇನು ಮಾಡಬೇಕು? ಪರ್ವತ ಪ್ರಸಂಗದ ಸಮಾಪ್ತಿಯಲ್ಲಿ ಯೇಸು ತನ್ನ ಕೇಳುಗರಿಗೆ ತನ್ನ ವಿವೇಕಯುತ ಮಾತುಗಳನ್ನು ಕೇಳಿಸಿಕೊಳ್ಳುವಂತೆ ಮಾತ್ರವಲ್ಲ ಅವುಗಳಂತೆ ಮಾಡುವಂತೆ ಅಥವಾ ನಡೆಯುವಂತೆ ಉತ್ತೇಜಿಸಿದನು. (ಮತ್ತಾಯ 7:24-27) ನಮ್ಮ ಯೋಚನೆಗಳು, ಇರಾದೆಗಳು ಮತ್ತು ಕ್ರಿಯೆಗಳನ್ನು ಯೇಸುವಿನ ವಿವೇಕಯುತ ಮಾತು ಮತ್ತು ಕ್ರಿಯೆಗಳಿಗೆ ತಕ್ಕಂತೆ ಹೊಂದಿಸಿಕೊಳ್ಳುವಲ್ಲಿ ಈಗ ಸಾಧ್ಯವಿರುವುದರಲ್ಲೇ ಅತ್ಯುತ್ತಮ ಜೀವನವನ್ನು ನಾವು ನಡೆಸಬಲ್ಲೆವು. ಅಷ್ಟೇ ಅಲ್ಲ, ನಿತ್ಯಜೀವದ ಮಾರ್ಗದಲ್ಲೇ ಉಳಿಯಲು ಸಾಧ್ಯವಾಗುವುದು. (ಮತ್ತಾಯ 7:13, 14) ಖಂಡಿತವಾಗಿಯೂ ಇದಕ್ಕಿಂತ ವಿವೇಕಯುತವಾದ ಮಾರ್ಗ ಬೇರೊಂದಿಲ್ಲ!
^ ಪ್ಯಾರ. 2 ಯೇಸು ಆ ದಿನ ಕೊಟ್ಟ ಉಪದೇಶವನ್ನು ಪರ್ವತ ಪ್ರಸಂಗವೆಂದು ಕರೆಯಲಾಗುತ್ತದೆ. ಮತ್ತಾಯ 5:3–7:27ರಲ್ಲಿ ಅದು ದಾಖಲಾಗಿದೆ. ಅದರಲ್ಲಿ 107 ವಚನಗಳು ಅಡಕವಾಗಿವೆ ಮತ್ತು ಅದನ್ನು ಕೊಡಲು ಬರೀ 20 ನಿಮಿಷಗಳು ಸಾಕು.
^ ಪ್ಯಾರ. 7 ದೀಕ್ಷಾಸ್ನಾನದ ಸಂದರ್ಭದಲ್ಲಿ ‘ಆಕಾಶವು ತೆರೆಯಲ್ಪಟ್ಟಾಗ’ ನಿಶ್ಚಯವಾಗಿಯೂ ತನ್ನ ಮಾನವಪೂರ್ವ ಅಸ್ತಿತ್ವದ ನೆನಪು ಯೇಸುವಿಗೆ ಬಂದಿರಬೇಕು.—ಮತ್ತಾಯ 3:13-17.