ಅಧ್ಯಾಯ 2
‘ನೀವು ನನ್ನ ಬಗ್ಗೆ ಸಾಕ್ಷಿ ಕೊಡ್ತೀರ’
ಸಾರೋ ಕೆಲಸವನ್ನ ಮುಂದುವರಿಸೋಕೆ ಯೇಸು ತನ್ನ ಅಪೊಸ್ತಲರನ್ನ ರೆಡಿಮಾಡಿದನು
ಆಧಾರ: ಅಪೊಸ್ತಲರ ಕಾರ್ಯ 1:1-26
1-3. (ಎ) ಯೇಸು ತನ್ನ ಅಪೊಸ್ತಲರನ್ನ ಬಿಟ್ಟು ಹೋಗೋವಾಗ ಏನೆಲ್ಲಾ ಆಯ್ತು ವಿವರಿಸಿ. (ಬಿ) ಯಾವ ಪ್ರಶ್ನೆಗಳು ಬರುತ್ತೆ?
ಕೆಲವು ವಾರಗಳಿಂದ ಯೇಸುವಿನ ಅಪೊಸ್ತಲರು ತುಂಬ ಸಂಭ್ರಮದಿಂದ ಇದ್ರು. ದುಃಖ ನಿರಾಶೆಯ ಕೂಪದಲ್ಲಿ ಬಿದ್ದಿದ್ದ ಅವರು ಯೇಸು ಮತ್ತೆ ಜೀವಂತವಾಗಿ ಎದ್ದು ಬಂದಿದ್ದನ್ನ ನೋಡಿ ಖುಷಿಯಲ್ಲಿ ತೇಲ್ತಿದ್ರು! 40 ದಿನಗಳಿಂದ ಯೇಸು ತುಂಬಾ ಸಲ ಅವರಿಗೆ ಕಾಣಿಸ್ಕೊಂಡಿದ್ದನು. ಅವ್ರಿಗೆ ಇನ್ನಷ್ಟು ವಿಷ್ಯ ಬೋಧಿಸಿ, ಪ್ರೋತ್ಸಾಹ ಕೊಟ್ಟಿದ್ದನು. ಇದೆಲ್ಲಾ ಹೀಗೇ ಮುಂದುವರಿಬೇಕು, ಕೊನೆ ಆಗಲೇಬಾರದು ಅನ್ನೋದು ಅವರ ಆಸೆ ಆಗಿತ್ತು. ಆದ್ರೆ ಯೇಸು ಅವರ ಮುಂದೆ ಇನ್ನೊಂದೇ ಒಂದು ಸಲ ಕಾಣಿಸಿಕೊಳ್ಳೋದಕ್ಕಿದ್ದ. ಅದೇ ಕೊನೆ ಬಾರಿ ಆಗಿತ್ತು!
2 ಅಪೊಸ್ತಲರೆಲ್ಲರೂ ಆಲೀವ್ ಮರಗಳ ಗುಡ್ಡದ ಮೇಲೆ ಸೇರಿ ಬಂದಿದ್ರು. ಯೇಸು ಹೇಳ್ತಿರೋ ಒಂದೊಂದು ಮಾತನ್ನೂ ಮೈಯೆಲ್ಲ ಕಿವಿಯನ್ನಾಗಿಸಿಕೊಂಡು ಕೇಳ್ತಿದ್ರು. ಯೇಸು ಇದೇ ತರ ಮಾತಾಡ್ತಾ ಇದ್ರೆ ಎಷ್ಟು ಚೆನ್ನಾಗಿರುತ್ತೆ ಅಂತ ಅಪೊಸ್ತಲರಿಗೆ ಅನಿಸ್ತಿತ್ತು. ಅಷ್ಟರಲ್ಲಿ ಯೇಸು ಮಾತು ಮುಗಿಸಿ ತನ್ನ ಕೈಗಳನ್ನೆತ್ತಿ ಅವ್ರನ್ನ ಆಶೀರ್ವದಿಸಿದನು. ಆಮೇಲೆ, ನೆಲದಿಂದ ಮೇಲಕ್ಕೆ ಏರಿಹೋಗೋಕೆ ಆರಂಭಿಸಿದನು! ಆತನು ಏರುತ್ತಾ ಏರುತ್ತಾ ಆಕಾಶದ ಕಡೆಗೆ ಹೋಗೋದನ್ನ ಆತನ ಶಿಷ್ಯರೆಲ್ಲಾ ನೋಡ್ತಾ ನಿಂತ್ರು. ಕೊನೆಗೆ ಒಂದು ಮೋಡ ಬಂದು ಆತನನ್ನ ಮರೆಮಾಡಿದ್ರಿಂದ ಆತನು ಅವರ ಕಣ್ಣಿಗೆ ಕಾಣಿಸಲಿಲ್ಲ. ಆತನು ಸ್ವರ್ಗಕ್ಕೆ ಹೋಗಿದ್ದನು! ಆದ್ರೂ ಅವರು ಮಾತ್ರ ಆಕಾಶದ ಕಡೆಗೆ ನೋಡ್ತಾ ನಿಂತಿದ್ರು.—ಲೂಕ 24:50; ಅ. ಕಾ. 1:9, 10.
3 ಈ ಘಟನೆಯಿಂದ ಅಪೊಸ್ತಲರ ಜೀವನದಲ್ಲಿ ಒಂದು ದೊಡ್ಡ ಬದಲಾವಣೆ ಆಯ್ತು. ಇಲ್ಲಿ ತನಕ ಅವರ ಜೊತೆ ಇದ್ದ ಅವರ ಗುರು ಯೇಸು ಕ್ರಿಸ್ತ ಸ್ವರ್ಗಕ್ಕೆ ಏರಿ ಹೋದನು. ಆದ್ರೆ, ತಾನು ಶುರು ಮಾಡಿದ್ದ ಪ್ರಾಮುಖ್ಯ ಕೆಲಸನ ಮುಂದುವರೆಸ್ಕೊಂಡು ಹೋಗೋಕೆ ಅವರನ್ನ ರೆಡಿ ಮಾಡಿದನು. ಇದನ್ನ ಆತನು ಹೇಗೆ ಮಾಡಿದನು? ಅವರು ಹೇಗೆ ಪ್ರತಿಕ್ರಿಯಿಸಿದ್ರು? ಈ ಘಟನೆಗಳಿಂದ ನಾವೇನು ಕಲೀಬಹುದು? ಈ ಪ್ರಶ್ನೆಗಳಿಗೆ ಅಪೊಸ್ತಲರ ಕಾರ್ಯ ಪುಸ್ತಕದ ಮೊದಲನೇ ಅಧ್ಯಾಯದಲ್ಲಿ ಉತ್ರ ಇದೆ.
“ಶಿಷ್ಯರು ನಂಬಬೇಕು ಅನ್ನೋದು ಆತನ ಆಸೆ” (ಅ. ಕಾ. 1:1-5)
4. ಅಪೊಸ್ತಲರ ಕಾರ್ಯ ಪುಸ್ತಕವನ್ನ ಲೂಕ ಹೇಗೆ ಆರಂಭಿಸಿದ್ದಾನೆ?
4 ಹಿಂದೆ ಲೂಕ ಪುಸ್ತಕವನ್ನ ಲೂಕ ಬರೆದಾಗ ಥೆಯೊಫಿಲನಿಗೆ ಬರೆದಿದ್ದ. ಅಪೊಸ್ತಲರ ಕಾರ್ಯ ಪುಸ್ತಕನ ಕೂಡ ಅದೇ ವ್ಯಕ್ತಿಗೆ ಬರೆದಿದ್ದಾನೆ. a ಲೂಕ ಪುಸ್ತಕದ ಕೊನೆಯಲ್ಲಿ ದಾಖಲಿಸಿದ ಘಟನೆಗಳ ಸಾರಾಂಶವನ್ನ ಅಪೊಸ್ತಲರ ಕಾರ್ಯ ಪುಸ್ತಕದ ಆರಂಭದಲ್ಲಿ ಕೊಟ್ಟಿದ್ದಾನೆ. ಆದ್ರೆ ಸ್ವಲ್ಪ ಭಿನ್ನವಾದ ಪದಗಳನ್ನ ಬಳಸಿದ್ದಾನೆ ಮತ್ತು ಹೆಚ್ಚಿನ ವಿವರಗಳನ್ನ ಸೇರಿಸಿದ್ದಾನೆ. ಹೀಗೆ ಅಪೊಸ್ತಲರ ಕಾರ್ಯ ಪುಸ್ತಕ ಲೂಕ ಪುಸ್ತಕದ ಮುಂದುವರಿದ ಭಾಗ ಅಂತ ಅವನು ಸ್ಪಷ್ಟಪಡಿಸಿದ್ದಾನೆ.
5, 6. (ಎ) ಯೇಸುವಿನ ಶಿಷ್ಯರಿಗೆ ತಮ್ಮ ನಂಬಿಕೆಯನ್ನ ಜಾಸ್ತಿ ಮಾಡ್ಕೊಳ್ಳೋಕೆ ಯಾವುದು ಸಹಾಯ ಮಾಡ್ತು? (ಬಿ) ಇವತ್ತೂ ಕೂಡ ಸತ್ಯ ಕ್ರೈಸ್ತರ ನಂಬಿಕೆಗೂ ಆಧಾರ ಇದೆ ಅಂತ ಹೇಗೆ ಹೇಳಬಹುದು?
5 ಯೇಸುವಿನ ಶಿಷ್ಯರಿಗೆ ತಮ್ಮ ನಂಬಿಕೆಯನ್ನ ಜಾಸ್ತಿ ಮಾಡ್ಕೊಳ್ಳೋಕೆ ಯಾವುದು ಸಹಾಯ ಮಾಡ್ತು? ಅಪೊಸ್ತಲರ ಕಾರ್ಯ 1:3ರಲ್ಲಿ “ತಾನು ನಿಜವಾಗ್ಲೂ ಬದುಕಿದ್ದೀನಿ ಅಂತ ಶಿಷ್ಯರು ನಂಬಬೇಕು ಅನ್ನೋದು [ಯೇಸುವಿನ] ಆಸೆ ಆಗಿತ್ತು” ಅಂತ ಹೇಳುತ್ತೆ. ಅದಕ್ಕೇ ಯೇಸು ಅಪೊಸ್ತಲರಲ್ಲಿ ಕೆಲವರಿಗೆ ಅವರೊಬ್ಬರೇ ಇರುವಾಗ ಅಥವಾ ಇಬ್ಬರು ಇರುವಾಗ ಕಾಣಿಸ್ಕೊಂಡನು. ಇನ್ನು ಕೆಲವು ಸಲ ಎಲ್ಲಾ ಅಪೊಸ್ತಲರೂ ಒಟ್ಟಾಗಿರೋವಾಗ ಕಾಣಿಸ್ಕೊಂಡನು. ಒಂದು ಸಂದರ್ಭದಲ್ಲಂತೂ 500ಕ್ಕೂ ಹೆಚ್ಚು ಶಿಷ್ಯರಿಗೆ ಕಾಣಿಸ್ಕೊಂಡನು. (1 ಕೊರಿಂ. 15:3-6) ಇದ್ರಿಂದ ಯೇಸು ಜೀವಂತವಾಗಿ ಬದುಕಿ ಬಂದಿದ್ದಾನೆ ಅನ್ನೋದಕ್ಕೆ ಅವ್ರಿಗೆ ಆಧಾರ ಸಿಕ್ತು.
6 ಅದೇ ತರ ಇವತ್ತೂ ಸತ್ಯ ಕ್ರೈಸ್ತರ ನಂಬಿಕೆಗೂ ಆಧಾರ ಇದೆ. ಯೇಸು ಈ ಭೂಮಿ ಮೇಲೆ ಬದುಕಿದ್ದನು, ನಮ್ಮ ಪಾಪಗಳಿಗಾಗಿ ಸತ್ತನು, ಆತನು ಮತ್ತೆ ಎದ್ದು ಬಂದನು ಅನ್ನೋದಕ್ಕೆ ಏನಾದ್ರೂ ಆಧಾರ ಇದ್ಯಾ? ಖಂಡಿತ ಇದೆ! ಈ ಘಟನೆಗಳನ್ನ ಕಣ್ಣಾರೆ ನೋಡಿದವರ ಎಷ್ಟೋ ಉದಾಹರಣೆಗಳು ಬೈಬಲಲ್ಲಿ ಇದೆ. ಇದಕ್ಕಿಂತ ದೊಡ್ಡ ಆಧಾರ ಬೇಕಾ? ಇವುಗಳ ಬಗ್ಗೆ ಅಧ್ಯಯನ ಮಾಡಿ, ಅದನ್ನ ಅರ್ಥ ಮಾಡ್ಕೊಳ್ಳೋಕೆ ಯೆಹೋವನ ಹತ್ರ ಸಹಾಯ ಕೇಳೋದ್ರಿಂದ ನಮ್ಮ ನಂಬಿಕೆ ಜಾಸ್ತಿ ಆಗುತ್ತೆ. ನೆನಪಿಡಿ, ನಮ್ಮ ನಂಬಿಕೆ ಬಲವಾಗಿರಬೇಕಾದ್ರೆ ಬಲವಾದ ಆಧಾರಗಳೂ ಬೇಕು. ಶಾಶ್ವತ ಜೀವ ಸಿಗಬೇಕಾದ್ರೆ ಇಂಥ ಬಲವಾದ ನಂಬಿಕೆ ಬೇಕೇಬೇಕು.—ಯೋಹಾ. 3:16.
7. ಸಾರೋ ಮತ್ತು ಕಲಿಸೋ ವಿಷ್ಯದಲ್ಲಿ ಯೇಸು ತನ್ನ ಶಿಷ್ಯರಿಗೆ ಯಾವ ಮಾದರಿ ಇಟ್ಟನು?
7 ಅಷ್ಟೇ ಅಲ್ಲ ಯೇಸು ಶಿಷ್ಯರಿಗೆ, “ದೇವರ ಆಳ್ವಿಕೆ ಬಗ್ಗೆ” ಹೇಳಿದನು. ಉದಾಹರಣೆಗೆ, ಯೇಸು ಅವ್ರಿಗೆ ಮೆಸ್ಸೀಯ ಚಿತ್ರಹಿಂಸೆ ಅನುಭವಿಸಿ ಸಾಯ್ತಾನೆ ಅನ್ನೋ ಭವಿಷ್ಯವಾಣಿಗಳನ್ನ ವಿವರಿಸಿದನು. (ಲೂಕ 24:13-32, 46, 47) ಈ ತರ ವಿವರಿಸೋವಾಗ ಮೇಸ್ಸಿಯನಾಗಿ ತನಗಿರೋ ಪಾತ್ರದ ಬಗ್ಗೆ ಹೇಳ್ತಾ ದೇವರ ಆಳ್ವಿಕೆಯಲ್ಲಿ ನಾನು ರಾಜನಾಗಿರ್ತೀನಿ ಅಂತ ಅವ್ರಿಗೆ ಸ್ಪಷ್ಟಪಡಿಸಿದನು. ಇದ್ರಿಂದ ಏನು ಗೊತ್ತಾಗುತ್ತೆ? ಯೇಸು ಕೊನೇ ತನಕ ದೇವರ ಆಳ್ವಿಕೆ ಬಗ್ಗೆನೇ ಹೇಳ್ತಿದ್ರು. ಅದೇ ಆತನಿಗೆ ಮುಖ್ಯ ಆಗಿತ್ತು. ಇವತ್ತು ಆತನ ಶಿಷ್ಯರು ಕೂಡ ಅದೇ ಮುಖ್ಯ ವಿಷ್ಯವನ್ನ ಸಾರ್ತಾರೆ.—ಮತ್ತಾ. 24:14; ಲೂಕ 4:43.
“ಇಡೀ ಭೂಮಿಯಲ್ಲಿ” (ಅ. ಕಾ. 1:6-12)
8, 9. (ಎ) ಅಪೊಸ್ತಲರಿಗೆ ಯಾವ ಎರಡು ತಪ್ಪಾದ ಭಾವನೆಗಳಿತ್ತು? (ಬಿ) ಅಪೊಸ್ತಲರ ತಪ್ಪಾದ ಯೋಚ್ನೆಯನ್ನ ಯೇಸು ಹೇಗೆ ಸರಿಮಾಡಿಸಿದನು? (ಸಿ) ಇದ್ರಿಂದ ಇವತ್ತು ಕ್ರೈಸ್ತರಿಗೆ ಯಾವ ಪಾಠ ಇದೆ?
8 ಅಪೊಸ್ತಲರು ಆಲೀವ್ ಮರಗಳ ಗುಡ್ಡದ ಮೇಲೆ ಸೇರಿದಾಗ ಯೇಸುನ ಭೂಮಿಯಲ್ಲಿ ಕೊನೇ ಸಲ ಭೇಟಿಯಾದ್ರು. ತುಂಬ ಕಾತರದಿಂದ ಅವರು ಆತನಿಗೆ, “ಪ್ರಭು, ದೇವರ ಸರ್ಕಾರ ಇಸ್ರಾಯೇಲನ್ನ ಆಳೋ ತರ ಈಗಲೇ ಮಾಡ್ತೀಯಾ?” ಅಂತ ಕೇಳಿದ್ರು. (ಅ. ಕಾ. 1:6) ಈ ಒಂದು ಪ್ರಶ್ನೆಯಲ್ಲೇ ಅಪೊಸ್ತಲರಿಗಿದ್ದ ಎರಡು ತಪ್ಪು ವಿಚಾರಗಳು ಗೊತ್ತಾಗುತ್ತೆ. ಒಂದನೇದಾಗಿ, ದೇವರ ಸರ್ಕಾರ ಇಸ್ರಾಯೇಲ್ ಜನಾಂಗವನ್ನ ಮತ್ತೆ ಆಳುತ್ತೆ ಅಂತ ಅವರು ಭಾವಿಸಿದ್ರು. ಎರಡನೇದಾಗಿ, ದೇವರ ಸರ್ಕಾರ “ಈಗಲೇ” ಅಂದ್ರೆ ತಕ್ಷಣ ಆಳೋಕೆ ಆರಂಭಿಸುತ್ತೆ ಅಂತ ನಿರೀಕ್ಷೆ ಇಟ್ಕೊಂಡಿದ್ರು. ಅವರ ಈ ವಿಚಾರಗಳನ್ನ ತಿದ್ದಿಕೊಳ್ಳೋಕೆ ಯೇಸು ಹೇಗೆ ಸಹಾಯ ಮಾಡಿದನು?
9 ತನ್ನ ಶಿಷ್ಯರಿಗಿದ್ದ ಮೊದಲನೇ ತಪ್ಪಾದ ಭಾವನೆ ಸ್ವಲ್ಪ ಸಮಯದಲ್ಲೇ ಸರಿಹೋಗುತ್ತೆ ಅಂತ ಯೇಸುಗೆ ಗೊತ್ತಿದ್ದಿರಬೇಕು. ಯಾಕಂದ್ರೆ ಹತ್ತು ದಿನದಲ್ಲೇ, ಆಧ್ಯಾತ್ಮಿಕ ಇಸ್ರಾಯೇಲ್ ಅನ್ನೋ ಹೊಸ ಜನಾಂಗ ಹುಟ್ಟೋದನ್ನ ಅವರು ಕಣ್ಣಾರೆ ನೋಡಲಿದ್ದರು. ಹೀಗೆ, ಇಸ್ರಾಯೇಲ್ ಜನಾಂಗದ ಜೊತೆ ದೇವರಿಗಿದ್ದ ವಿಶೇಷ ಸಂಬಂಧ ಕೊನೆ ಆಗ್ತಿತ್ತು. ಆದ್ರೆ ಅಪೊಸ್ತಲರ ಎರಡನೇ ತಪ್ಪಾದ ಭಾವನೆಯನ್ನ ಸರಿಮಾಡಿದನು. ಅವ್ರಿಗೆ ಯೇಸು ದಯೆಯಿಂದ ಈ ವಿಷ್ಯನ ನೆನಪಿಸಿದನು: “ಯಾವಾಗ ಏನಾಗಬೇಕು ಅಂತ ನಿರ್ಧಾರ ಮಾಡೋ ಅಧಿಕಾರ ಸ್ವರ್ಗದಲ್ಲಿರೋ ನನ್ನ ತಂದೆಗೆ ಮಾತ್ರ ಇದೆ. ನೀವು ಅದ್ರ ಬಗ್ಗೆ ಚಿಂತೆ ಮಾಡಬೇಡಿ.” (ಅ. ಕಾ. 1:7) ಯಾವ ಸಮಯದಲ್ಲಿ ಏನಾಗಬೇಕಂತ ನಿರ್ಧಾರ ಮಾಡುವವನು ಯೆಹೋವನೇ. ಹಾಗಾಗಿ, ಅಂತ್ಯ ಬರೋ “ದಿನ ಮತ್ತು ಸಮಯ” ಮಗನಿಗೂ ಗೊತ್ತಿಲ್ಲ, “ತಂದೆಗೆ ಮಾತ್ರ ಗೊತ್ತು” ಅಂತ ಯೇಸು ಸಾಯೋದಕ್ಕಿಂತ ಮುಂಚೆನೇ ಹೇಳಿದ್ದನು. (ಮತ್ತಾ. 24:36) ಇವತ್ತು ಕೂಡ ಒಂದುವೇಳೆ ಕ್ರೈಸ್ತರು ಈ ಲೋಕದ ಅಂತ್ಯ ಯಾವಾಗ ಬರುತ್ತೆ ಅಂತ ಜಾಸ್ತಿ ಯೋಚಿಸ್ತಿದ್ರೆ, ಒಂದರ್ಥದಲ್ಲಿ ಅವರು ತಮಗೆ ಅಧಿಕಾರ ಇಲ್ಲದ ವಿಷ್ಯಗಳ ಬಗ್ಗೆ ಚಿಂತೆ ಮಾಡ್ತಿದ್ದಾರೆ ಅಂತಾಗುತ್ತೆ.
10. ಅಪೊಸ್ತಲರಿಗಿದ್ದ ಯಾವ ಮನೋಭಾವವನ್ನ ನಾವು ಬೆಳೆಸ್ಕೊಬೇಕು? ಯಾಕೆ?
10 ಯೇಸುವಿನ ಅಪೊಸ್ತಲರು ಕೇಳಿದ ಆ ಪ್ರಶ್ನೆಯಿಂದಾಗಿ ನಮಗೆ ಅವರ ಬಗ್ಗೆ ಇರೋ ಗೌರವ ಕಡಿಮೆ ಆಗಬಾರದು. ಯಾಕಂದ್ರೆ ಅವರು ನಿಜವಾಗ್ಲೂ ತುಂಬ ನಂಬಿಕೆಯಿದ್ದ ವ್ಯಕ್ತಿಗಳಾಗಿದ್ರು. ಅವ್ರಿಗೆ ಸಿಕ್ಕಿದ ಶಿಸ್ತನ್ನ ದೀನತೆಯಿಂದ ಸ್ವೀಕರಿಸಿದ್ರು. ಇನ್ನೊಂದು ವಿಷ್ಯ ಏನಂದ್ರೆ, ಆ ಪ್ರಶ್ನೆ ಅವರಿಗಿದ್ದ ತಪ್ಪಾದ ವಿಚಾರಗಳನ್ನ ಬಯಲು ಮಾಡಿದ್ರೂ, ಅದು ಅವರಿಗಿದ್ದ ಒಳ್ಳೇ ಮನೋಭಾವವನ್ನೂ ತೋರಿಸ್ಕೊಡ್ತು. ಅದೇನಂದ್ರೆ, ಅವರು ಯೇಸು ಹೇಳಿದ ತರ ಯಾವಾಗ್ಲೂ ‘ಎಚ್ಚರವಾಗಿದ್ರು.’ (ಮತ್ತಾ. 24:42; 25:13; 26:41) ಯೆಹೋವ ತಕ್ಷಣ ಕ್ರಮ ತಗೊಳ್ತಾನೆ ಅನ್ನೋದಕ್ಕೆ ಏನಾದ್ರೂ ರುಜುವಾತು ಇದೆಯಾ ಅಂತ ಗಮನಿಸ್ತಾ ಇದ್ರು. ನಾವೂ ಅದೇ ರೀತಿಯ ಮನೋಭಾವವನ್ನ ಬೆಳೆಸ್ಕೊಬೇಕು. ಇದನ್ನ ಮಾಡೋದು ಈಗ ತುಂಬ ಮುಖ್ಯ. ಯಾಕಂದ್ರೆ ನಾವು “ಕೊನೇ ದಿನಗಳ” ಕೊನೇ ಭಾಗದಲ್ಲಿ ಇದ್ದೀವಿ.—2 ತಿಮೊ. 3:1-5.
11, 12. ಯೇಸು ತನ್ನ ಹಿಂಬಾಲಕರಿಗೆ ಯಾವ ಕೆಲಸ ಕೊಟ್ಟನು? (ಬಿ) ಸಾರೋ ಕೆಲಸ ಮಾಡೋಕೆ ಪವಿತ್ರಶಕ್ತಿ ಕೊಡ್ತೀನಿ ಅಂತ ಯಾಕೆ ಮಾತು ಕೊಟ್ಟನು?
11 ಅಪೊಸ್ತಲರು ಯಾವುದರ ಬಗ್ಗೆ ಜಾಸ್ತಿ ಯೋಚ್ನೆ ಮಾಡಬೇಕು ಅಂತ ನೆನಪಿಸ್ತಾ ಯೇಸು ಹೇಳಿದ್ದು: “ಪವಿತ್ರಶಕ್ತಿ ನಿಮ್ಮ ಮೇಲೆ ಬಂದಾಗ ನಿಮಗೆ ಬಲ ಸಿಗುತ್ತೆ. ಆಗ ನೀವು ಯೆರೂಸಲೇಮ್, ಯೂದಾಯ, ಸಮಾರ್ಯ ಮತ್ತು ಇಡೀ ಭೂಮಿಯಲ್ಲಿ ನನ್ನ ಬಗ್ಗೆ ಸಾಕ್ಷಿ ಕೊಡ್ತೀರ.” (ಅ. ಕಾ. 1:8) ಅಪೊಸ್ತಲರು ಯೇಸು ಮತ್ತೆ ಜೀವಂತವಾಗಿ ಎದ್ದು ಬಂದಿದ್ದಾನೆ ಅಂತ ಆತನನ್ನ ಎಲ್ಲಿ ಕೊಂದಿದ್ರೋ ಆ ಯೆರೂಸಲೇಮಲ್ಲಿ ಮೊದಲು ಸಾರಬೇಕಿತ್ತು. ಆಮೇಲೆ ಆ ಸಂದೇಶವನ್ನ ಇಡೀ ಯೂದಾಯದಲ್ಲಿ, ನಂತರ ಸಮಾರ್ಯ ಮತ್ತು ಇನ್ನೂ ದೂರದ ಸ್ಥಳಗಳಿಗೆಹಬ್ಬಿಸಬೇಕಿತ್ತು.
12 ಯೇಸು ತನ್ನ ಶಿಷ್ಯರನ್ನ ಸಾರೋಕೆ ಕಳಿಸೋದಕ್ಕಿಂತ ಮುಂಚೆ ನಿಮಗೆ ಪವಿತ್ರಶಕ್ತಿಯನ್ನ ಸಹಾಯಕ್ಕಾಗಿ ಕಳಿಸ್ತೀನಿ ಅಂತ ಮಾತು ಕೊಟ್ಟನು. ಯಾಕಂದ್ರೆ ಆ ಕೆಲ್ಸ ಮಾಡೋಕೆ ಪವಿತ್ರಶಕ್ತಿಯ ಸಹಾಯ ಬೇಕೇಬೇಕು ಅಂತ ಆತನಿಗೆ ಗೊತ್ತಿತ್ತು. ಅಪೊಸ್ತಲರ ಕಾರ್ಯ ಪುಸ್ತಕದಲ್ಲಿ “ಪವಿತ್ರಶಕ್ತಿ” ಅನ್ನೋ ಪದ 40ಕ್ಕಿಂತ ಜಾಸ್ತಿ ಸಲ ಇದೆ. ಇದ್ರಿಂದ ಏನ್ ಗೊತ್ತಾಗುತ್ತೆ ಅಂದ್ರೆ ಪವಿತ್ರಶಕ್ತಿಯ ಸಹಾಯ ಇಲ್ಲದೆ ನಾವು ಯೆಹೋವನ ಇಷ್ಟವನ್ನ ಪೂರೈಸೋಕಾಗಲ್ಲ. ಹಾಗಾಗಿ ಪವಿತ್ರಶಕ್ತಿಗಾಗಿ ತಪ್ಪದೇ ನಾವು ಪ್ರಾರ್ಥನೆ ಮಾಡೋದು ತುಂಬಾ ಪ್ರಾಮುಖ್ಯ ಅಲ್ವಾ? (ಲೂಕ 11:13) ಯಾಕಂದ್ರೆ ಮುಂಚೆಗಿಂತ ಈಗ ನಮಗೆ ಪವಿತ್ರಶಕ್ತಿಯ ಸಹಾಯ ಜಾಸ್ತಿ ಬೇಕು.
13. (ಎ) ಇವತ್ತು ದೇವಜನರಿಗೆ ಕೊಡಲಾಗಿರೋ ಸಾರುವ ಕೆಲಸ ಎಷ್ಟು ವಿಸ್ತಾರವಾಗಿದೆ? (ಬಿ) ನಾವು ಈ ಕೆಲಸವನ್ನ ಯಾಕೆ ಉತ್ಸಾಹದಿಂದ ಮಾಡಬೇಕು?
13 ಅಪೊಸ್ತಲರಿಗೆ “ಇಡೀ ಭೂಮಿಯಲ್ಲಿ” ಅಂದಾಗ ಭೂಮಿಯ ಕೆಲವು ಭಾಗಗಳನ್ನ ಮಾತ್ರ ಸೂಚಿಸ್ತು. ಆದ್ರೆ ಇವತ್ತು ನಾವು ಇಡೀ ಭೂಮಿಗೆ ಸಾರ್ತಿದ್ದೀವಿ. ಹಿಂದಿನ ಅಧ್ಯಾಯದಲ್ಲಿ ನೋಡಿದ ತರ ಯೆಹೋವನ ಸಾಕ್ಷಿಗಳು ಯೇಸು ಕೊಟ್ಟ ಈ ಕೆಲಸವನ್ನ ಮನಸಾರೆ ಮಾಡ್ತಿದ್ದಾರೆ. ಯಾಕಂದ್ರೆ ಎಲ್ಲ ತರದ ಜನರು ಸಿಹಿಸುದ್ದಿ ಕೇಳಬೇಕು ಅನ್ನೋದು ದೇವರ ಆಸೆ ಅಂತ ಅವ್ರಿಗೆ ಗೊತ್ತು. (1 ತಿಮೊ. 2:3, 4) ಈ ಜೀವರಕ್ಷಕ ಕೆಲಸ ನಿಮ್ಮ ಜೀವನದಲ್ಲಿ ಮುಖ್ಯವಾಗಿದ್ಯಾ? ಇದಕ್ಕಿಂತಲೂ ಹೆಚ್ಚು ಸಂತೋಷ, ತೃಪ್ತಿ ಕೊಡುವಂಥ ಕೆಲಸ ಇನ್ನೊಂದಿಲ್ಲ! ಅದನ್ನ ಮಾಡೋಕೆ ಬೇಕಾದ ಬಲವನ್ನ ಯೆಹೋವ ಕೊಡ್ತಾನೆ. ಈ ಕೆಲಸ ಚೆನ್ನಾಗಿ ಮಾಡಬೇಕಾದ್ರೆ ಸರಿಯಾದ ವಿಧಾನಗಳನ್ನ ಬಳಸಬೇಕು, ಸರಿಯಾದ ಮನೋಭಾವನೂ ಬೆಳೆಸ್ಕೊಬೇಕು. ಇದ್ರ ಬಗ್ಗೆ ಅಪೊಸ್ತಲರ ಕಾರ್ಯ ಪುಸ್ತಕದಿಂದ ತುಂಬಾ ವಿಷ್ಯಗಳನ್ನ ಕಲಿಬಹುದು.
14, 15. (ಎ) ಕ್ರಿಸ್ತ ಮತ್ತೆ ಬರೋದ್ರ ಬಗ್ಗೆ ದೇವದೂತರು ಏನು ಹೇಳಿದ್ರು? (ಬಿ) ಅವರ ಮಾತಿನ ಅರ್ಥ ಏನಾಗಿತ್ತು? (ಪಾದಟಿಪ್ಪಣಿನೂ ನೋಡಿ.) (ಸಿ) ಕ್ರಿಸ್ತ ‘ಏರಿ ಹೋದ ಹಾಗೇ’ ಮತ್ತೆ ಬರ್ತಾನೆ ಅಂತ ನಾವು ಯಾಕೆ ಹೇಳಬಹುದು?
14 ಈ ಅಧ್ಯಾಯದ ಆರಂಭದಲ್ಲಿ ಹೇಳಿದ ತರ, ಯೇಸು ಭೂಮಿಯಿಂದ ಏರಿಹೋಗಿ, ತನ್ನ ಶಿಷ್ಯರಿಗೆ ಮರೆಯಾದನು. ಆದ್ರೂ 11 ಅಪೊಸ್ತಲರು ಆಕಾಶದ ಕಡೆಗೆ ನೋಡ್ತಾ ಅಲ್ಲೇ ನಿಂತಿದ್ರು. ಆಗ ಇಬ್ರು ದೇವದೂತರು ಕಾಣಿಸ್ಕೊಂಡು ಅವರನ್ನ ಸೌಮ್ಯವಾಗಿ ಹೀಗೆ ಗದರಿಸಿದ್ರು: “ಗಲಿಲಾಯದವರೇ, ಯಾಕೆ ಆಕಾಶ ನೋಡ್ತಾ ನಿಂತಿದ್ದೀರಾ? ನೀವು ನೋಡಿದ ಹಾಗೆ ಇಲ್ಲಿಂದ ಯೇಸು ಹೇಗೆ ಆಕಾಶಕ್ಕೆ ಏರಿ ಹೋದನೋ ಹಾಗೇ ಆತನು ಬರ್ತಾನೆ.” (ಅ. ಕಾ. 1:11) ದೇವದೂತರ ಈ ಮಾತಿನ ಅರ್ಥ ಏನಾಗಿತ್ತು? ಕೆಲವು ಧರ್ಮದವರು ಹೇಳೋ ತರ ಯೇಸು ಅದೇ ದೇಹದಲ್ಲಿ ವಾಪಸ್ ಬರ್ತಾನೆ ಅಂತಾನಾ? ಖಂಡಿತ ಅಲ್ಲ! ಇದು ನಮಗೆ ಹೇಗೆ ಗೊತ್ತು?
15 ಯೇಸು ಅದೇ ರೂಪದಲ್ಲಲ್ಲ, ‘ಹೇಗೆ ಏರಿ ಹೋದನೋ ಹಾಗೇ ಬರ್ತಾನೆ’ ಅಂತ ಆ ದೇವದೂತರು ಹೇಳಿದ್ರು. b ಹಾಗಾದ್ರೆ ಆತನು ಹೇಗೆ ಹೋದನು? ದೇವದೂತರು ಬಂದು ಮಾತಾಡೋವಾಗ ಆತನು ಈಗಾಗ್ಲೇ ಅಪೊಸ್ತಲರ ಕಣ್ಣಿಗೆ ಮರೆಯಾಗಿದ್ದನು. ಕ್ರಿಸ್ತ ಮತ್ತೆ ಬರೋ ರೀತಿನೂ ಇದೇ ತರ ಇರ್ತಿತ್ತು. ಯೇಸು ಭೂಮಿ ಬಿಟ್ಟು ಸ್ವರ್ಗದಲ್ಲಿರೋ ತನ್ನ ತಂದೆ ಹತ್ರ ಹೋಗ್ತಾ ಇದ್ದಾನೆ ಅಂತ ಅಪೊಸ್ತಲರು ಮಾತ್ರ ಅರ್ಥ ಮಾಡ್ಕೊಂಡ್ರು. ಅದೇ ತರ ಇವತ್ತು ಕೂಡ ಸ್ವಲ್ಪ ಜನ ಮಾತ್ರ ಅಂದ್ರೆ ಬೈಬಲನ್ನ ಚೆನ್ನಾಗಿ ಅಧ್ಯಯನ ಮಾಡಿ ನಾವಿರೋ ಕಾಲ ಯಾವುದು ಅಂತ ಅರ್ಥ ಮಾಡ್ಕೊಂಡವರು ಮಾತ್ರ ಯೇಸು ರಾಜನಾಗಿ ಅಧಿಕಾರ ಪಡ್ಕೊಂಡು ಮತ್ತೆ ಬಂದಿದ್ದಾನೆ ಅಂತ ತಿಳ್ಕೊಂಡಿದ್ದಾರೆ. (ಲೂಕ 17:20) ಅದಕ್ಕೆ ನಾವು ಯೇಸು ರಾಜನಾಗಿ ಆಳ್ತಿದ್ದಾನೆ ಅನ್ನೋದಕ್ಕಿರೋ ಆಧಾರಗಳನ್ನ ತಿಳ್ಕೊಂಡು ಜನ್ರಿಗೂ ಅದನ್ನ ತಿಳಿಸಬೇಕು. ಆಗಲೇ ಅವ್ರಿಗೆ ಅಂತ್ಯ ಎಷ್ಟು ಹತ್ರ ಇದೆ ಅಂತ ಗೊತ್ತಾಗುತ್ತೆ.
ಅ. ಕಾ. 1:13-26)
“ನೀನು ಯಾರನ್ನ ಆರಿಸಿದ್ದೀಯ ಅಂತ ನಮಗೆ ತೋರಿಸ್ಕೊಡು” (16-18. (ಎ) ಅಪೊಸ್ತಲರ ಕಾರ್ಯ 1:13, 14ರಿಂದ ಕ್ರೈಸ್ತರು ಆರಾಧನೆಗಾಗಿ ಒಟ್ಟು ಸೇರೋದ್ರ ಬಗ್ಗೆ ನಾವೇನು ಕಲಿತೀವಿ? (ಬಿ) ಯೇಸುವಿನ ತಾಯಿಯಾದ ಮರಿಯಳ ಮಾದರಿಯಿಂದ ನಾವೇನು ಕಲೀಬಹುದು? (ಸಿ) ಇವತ್ತು ಕ್ರೈಸ್ತ ಕೂಟಗಳು ಯಾಕೆ ತುಂಬ ಪ್ರಾಮುಖ್ಯ?
16 ಅಪೊಸ್ತಲರು “ತುಂಬ ಸಂತೋಷದಿಂದ ಯೆರೂಸಲೇಮಿಗೆ ವಾಪಸ್ ಬಂದ್ರು.” (ಲೂಕ 24:52) ಆದ್ರೆ ಕ್ರಿಸ್ತ ಕೊಟ್ಟ ಮಾರ್ಗದರ್ಶನ ಹಾಗೂ ಸೂಚನೆಗೆ ತಕ್ಕ ಹಾಗೆ ಅವರು ನಡ್ಕೊಂಡ್ರಾ? ಅಪೊಸ್ತಲರ ಕಾರ್ಯ 1ನೇ ಅಧ್ಯಾಯದ 13, 14ನೇ ವಚನಗಳಲ್ಲಿ, ಅವರೆಲ್ಲರೂ ‘ಮೇಲಂತಸ್ತಿನ ಕೋಣೆಯಲ್ಲಿ’ ಸೇರಿಬಂದಿದ್ರು ಅಂತಿದೆ. ಈ ರೀತಿ ಸೇರಿ ಬರೋದರ ಬಗ್ಗೆ ಕೆಲವೊಂದು ಆಸಕ್ತಿಕರ ವಿಷ್ಯಗಳನ್ನ ಗಮನಿಸಿ. ಆ ಕಾಲದ ಪ್ಯಾಲೆಸ್ತೀನ್‌ನ ಮನೆಗಳಿಗೆ ಹೆಚ್ಚಾಗಿ ಮೇಲಂತಸ್ತಿನಲ್ಲಿ ಒಂದು ಕೋಣೆ ಇರ್ತಿತ್ತು. ಅಲ್ಲಿಗೆ ಹೋಗೋಕೆ ಮನೆ ಹೊರಗಿನಿಂದ ಮೆಟ್ಟಿಲು ಇರ್ತಿತ್ತು. ಅಪೊಸ್ತಲರ ಕಾರ್ಯ 12:12ರಲ್ಲಿ ಮಾರ್ಕನ ತಾಯಿಯ ಮನೆ ಬಗ್ಗೆ ಇದೆ. ಹಾಗಾದ್ರೆ, ಶಿಷ್ಯರು ಸೇರಿಬಂದ “ಮೇಲಂತಸ್ತಿನ ಕೋಣೆ” ಅವಳ ಮನೆಯ ಮಹಡಿ ಆಗಿತ್ತಾ? ನಮಗೆ ಅದು ಸರಿಯಾಗಿ ಗೊತ್ತಿಲ್ಲ, ಆದ್ರೂ ಅದು ಕ್ರಿಸ್ತನ ಶಿಷ್ಯರಿಗೆ ಸೇರಿಬರೋಕೆ ಸೂಕ್ತವಾದ ಜಾಗವಾಗಿತ್ತು, ಸರಳವಾಗಿತ್ತು. ಆದ್ರೆ ಅಲ್ಲಿ ಯಾರೆಲ್ಲ ಬಂದಿದ್ರು? ಏನು ಮಾಡಿದ್ರು?
17 ಇಲ್ಲಿ ಅಪೊಸ್ತಲರು ಅಥವಾ ಗಂಡಸರು ಮಾತ್ರ ಅಲ್ಲ, “ಕೆಲವು ಸ್ತ್ರೀಯರು” ಕೂಡ ಇದ್ರು. ಇವ್ರಲ್ಲಿ ಯೇಸುವಿನ ತಾಯಿ ಮರಿಯಳೂ ಇದ್ದಳು. ಬೈಬಲಿನಲ್ಲಿ ಅವಳ ಬಗ್ಗೆ ನೇರವಾಗಿ ತಿಳಿಸಿರೋದು ಇದೇ ಕೊನೆ ಸಲ. ಅಲ್ಲಿ ಬಂದಾಗ ಅವಳು ಹೇಗೆ ನಡ್ಕೊಂಡಳು? ಎಲ್ಲರಿಗಿಂತ ತಾನೇ ಶ್ರೇಷ್ಠ ಅನ್ನೋ ಹಾಗೆ ನಡ್ಕೊಂಡಿಲ್ಲ, ಬದಲಿಗೆ ದೀನತೆಯಿಂದ ತನ್ನ ಸಹೋದರ ಸಹೋದರಿಯರ ಜೊತೆ ಆರಾಧನೆ ಮಾಡೋಕೆ ಬಂದಿದ್ದಳು. ಆಕೆಯ ಉಳಿದ ನಾಲ್ಕು ಗಂಡುಮಕ್ಕಳು ಯೇಸು ಭೂಮಿ ಮೇಲಿದ್ದಾಗ ಆತನಲ್ಲಿ ನಂಬಿಕೆ ಇಟ್ಟಿರ್ಲಿಲ್ಲ. ಆದ್ರೆ ಈಗ ಅವರು ಯೇಸು ಮೇಲೆ ನಂಬಿಕೆ ಇಟ್ಟಿದ್ದನ್ನ ನೋಡಿದಾಗ ಮರಿಯಳಿಗೆ ಕಣ್ತುಂಬಿ ಬಂದಿರಬೇಕು. (ಮತ್ತಾ. 13:55; ಯೋಹಾ. 7:5) ಅವರ ಅಣ್ಣ ಸತ್ತು ಮತ್ತೆ ಜೀವಂತವಾಗಿ ಎದ್ದು ಬಂದ ಮೇಲೆ ಅವರು ಬದಲಾಗಿದ್ರು.—1 ಕೊರಿಂ. 15:7.
18 ಈ ಶಿಷ್ಯರೆಲ್ಲ ಅಲ್ಲಿಗೆ ಯಾಕೆ ಬಂದಿದ್ರು? ಬೈಬಲ್ ಹೇಳೋದು, “ಇವ್ರೆಲ್ಲ ಸೇರಿ ಒಂದೇ ಮನಸ್ಸಿಂದ ಪ್ರಾರ್ಥನೆ ಮಾಡ್ತಾ ಇದ್ರು.” (ಅ. ಕಾ. 1:14) ಒಟ್ಟು ಸೇರಿಬರೋದು ಕ್ರೈಸ್ತರಿಗೆ ಆರಾಧನೆಯ ಮುಖ್ಯ ಭಾಗ. ಅದನ್ನ ಹಿಂದಿನ ಕಾಲದಿಂದಲೂ ಮಾಡ್ತಾ ಬರ್ತಿದ್ದೀವಿ. ಒಬ್ರನ್ನೊಬ್ರು ಪ್ರೋತ್ಸಾಹಿಸೋಕೆ, ಸಲಹೆ-ಸೂಚನೆ ಪಡೆಯೋಕೆ ಮತ್ತು ಮುಖ್ಯವಾಗಿ ಸ್ವರ್ಗದಲ್ಲಿರೋ ಯೆಹೋವ ಅಪ್ಪನನ್ನ ಒಟ್ಟಾಗಿ ಆರಾಧಿಸೋಕೆ ಹೀಗೆ ಸೇರಿ ಬರ್ತೀವಿ. ಇಂಥಾ ಸಂದರ್ಭಗಳಲ್ಲಿ ನಾವು ಮಾಡೋ ಪ್ರಾರ್ಥನೆಗಳು, ಹಾಡೋ ಸ್ತುತಿಗೀತೆಗಳು ಆತನಿಗೆ ತುಂಬ ಸಂತೋಷ ತರುತ್ತೆ. ಈ ರೀತಿ ಮಾಡೋದು ತುಂಬಾ ಪ್ರಾಮುಖ್ಯ. ಹಾಗಾಗಿ ಭಕ್ತಿಯನ್ನ ಜಾಸ್ತಿ ಮಾಡೋ ಇಂಥಾ ಪವಿತ್ರ ಕೂಟಗಳನ್ನ ಯಾವತ್ತೂ ತಪ್ಪಿಸಬಾರದು!—ಇಬ್ರಿ. 10:24, 25.
19-21. (ಎ) ಪೇತ್ರ ಸಭೆಗೆ ಎದುರಾದ ಒಂದು ಸನ್ನಿವೇಶ ನಿಭಾಯಿಸೋಕೆ ಮುಂದೆ ಬಂದಿದ್ರಿಂದ ನಮಗೇನು ಗೊತ್ತಾಗುತ್ತೆ? (ಬಿ) ಯೂದನ ಬದಲಿಗೆ ಇನ್ನೊಬ್ಬನನ್ನ ಯಾಕೆ ನೇಮಿಸಬೇಕಿತ್ತು? (ಸಿ) ಈ ಸನ್ನಿವೇಶವನ್ನ ನಿಭಾಯಿಸಿದ ರೀತಿಯಿಂದ ಏನು ಗೊತ್ತಾಗುತ್ತೆ?
19 ಈ ತರ ಒಟ್ಟು ಸೇರಿದಾಗ ಕ್ರಿಸ್ತನ ಹಿಂಬಾಲಕರ ಮುಂದೆ ಈಗ ಒಂದು ಸನ್ನಿವೇಶ ಎದುರಾಯ್ತು. ಇದನ್ನ ನಿಭಾಯಿಸೋಕೆ ಅಪೊಸ್ತಲ ಪೇತ್ರ ಮುಂದೆ ಬಂದ. (ವಚನಗಳು 15-26) ಕೆಲವೇ ವಾರಗಳ ಹಿಂದಷ್ಟೇ ಇವನು ಯೇಸು ಯಾರಂತ ಗೊತ್ತಿಲ್ಲ ಅಂತ ಮೂರು ಸಲ ಹೇಳಿದ್ದ. ಆದ್ರೆ ಅವನು ಬದಲಾಗಿದ್ದ. ಅದಕ್ಕೆ ಯೆಹೋವ ಈ ಸನ್ನಿವೇಶವನ್ನ ನಿಭಾಯಿಸೋಕೆ ಪೇತ್ರನನ್ನ ಆರಿಸ್ಕೊಂಡನು. (ಮಾರ್ಕ 14:72) ಇದನ್ನ ನೋಡೋವಾಗ ಎಷ್ಟು ಪ್ರೋತ್ಸಾಹ ಸಿಗುತ್ತಲ್ವಾ! ಯಾಕಂದ್ರೆ, ನಾವೆಲ್ಲರೂ ಪಾಪಮಾಡ್ತೀವಿ. ಆದ್ರೆ ಯೆಹೋವ “ಒಳ್ಳೆಯವನು,” ಮನಸಾರೆ ಪಶ್ಚಾತ್ತಾಪ ಪಡೋರನ್ನ “ಕ್ಷಮಿಸೋಕೆ ಯಾವಾಗ್ಲೂ ಸಿದ್ಧನಾಗಿ” ಇರ್ತಾನೆ.—ಕೀರ್ತ. 86:5.
20 ಯೇಸುಗೆ ದ್ರೋಹಬಗೆದಿದ್ದ ಅಪೊಸ್ತಲ ಯೂದನ ಬದಲಿಗೆ ಇನ್ನೊಬ್ಬನನ್ನ ನೇಮಿಸಬೇಕು ಅಂತ ಪೇತ್ರ ಗ್ರಹಿಸಿದ. ಆದ್ರೆ ಯಾರನ್ನು? ಯಾರು ಯೇಸುನ ಕೊನೆ ತನಕ ಹಿಂಬಾಲಿಸಿದ್ರೋ ಮತ್ತು ಯಾರು ಆತನು ಮತ್ತೆ ಜೀವಂತ ಎದ್ದು ಬಂದಿದ್ದಕ್ಕೆ ಸಾಕ್ಷಿ ಆಗಿದ್ರೋ ಅಂಥ ವ್ಯಕ್ತಿಯನ್ನ ಆರಿಸಬೇಕಿತ್ತು. (ಅ. ಕಾ. 1:21, 22) ಅದನ್ನೇ ಯೇಸು ಕೂಡ ಹೇಳಿದ್ದನು: “ನನ್ನನ್ನ ಹಿಂಬಾಲಿಸಿದ ನೀವು ಸಹ 12 ಸಿಂಹಾಸನಗಳಲ್ಲಿ ಕೂತು ಇಸ್ರಾಯೇಲಿನ 12 ಕುಲಗಳಿಗೆ ತೀರ್ಪು ಮಾಡ್ತೀರ.” (ಮತ್ತಾ. 19:28) ಯೇಸು ಭೂಮಿಯಲ್ಲಿ ಸೇವೆಮಾಡಿದ ಸಮಯದಲ್ಲಿ ಆತನನ್ನ ಹಿಂಬಾಲಿಸಿದ 12 ಅಪೊಸ್ತಲರು ಭವಿಷ್ಯದಲ್ಲಿ ಹೊಸ ಯೆರೂಸಲೇಮಿನ “12 ಅಡಿಪಾಯ ಕಲ್ಲುಗಳು” ಆಗಿರಬೇಕು ಅನ್ನೋದು ಯೆಹೋವನ ಉದ್ದೇಶ ಆಗಿತ್ತು. (ಪ್ರಕ. 21:2, 14) ಹಾಗಾಗಿ “ಅವನ ಸ್ಥಾನವನ್ನ ಇನ್ನೊಬ್ಬ ಕಿತ್ಕೊಳ್ಳಲಿ” ಅನ್ನೋ ಭವಿಷ್ಯವಾಣಿ ಯೂದನಿಗೆ ಅನ್ವಯವಾಗುತ್ತೆ ಅಂತ ಪೇತ್ರ ಅರ್ಥ ಮಾಡ್ಕೊಳ್ಳೋಕೆ ದೇವರು ಸಹಾಯ ಮಾಡಿದನು.—ಕೀರ್ತ. 109:8.
21 ಹೊಸ ಅಪೊಸ್ತಲನನ್ನ ಹೇಗೆ ಆಯ್ಕೆ ಮಾಡಿದ್ರು? ಚೀಟು ಹಾಕಿ ಆಯ್ಕೆ ಮಾಡಿದ್ರು. ಬೈಬಲ್ ಕಾಲಗಳಲ್ಲಿ ಇದೊಂದು ಸಾಮಾನ್ಯ ಪದ್ಧತಿಯಾಗಿತ್ತು. (ಜ್ಞಾನೋ. 16:33) ಆದ್ರೆ ಈ ಪದ್ಧತಿಯನ್ನ ಬಳಸಿದ್ದರ ಬಗ್ಗೆ ಬೈಬಲಲ್ಲಿ ಹೇಳಿರೋದು ಇದೇ ಕೊನೆ ಸಲ. ಆಮೇಲೆ ಪವಿತ್ರಶಕ್ತಿಯನ್ನ ಸುರಿಸಲಾದ ಕಾರಣ ಚೀಟು ಹಾಕೋ ಪದ್ಧತಿಯನ್ನ ನಿಲ್ಲಿಸಲಾಯ್ತು. ಹೊಸ ಅಪೊಸ್ತಲನನ್ನ ಆಯ್ಕೆ ಮಾಡೋವಾಗ ಈ ಪದ್ಧತಿಯನ್ನೇ ಯಾಕೆ ಬಳಸಿದ್ರು? ಕಾರಣ ಅಪೊಸ್ತಲರು ಮಾಡಿದ ಪ್ರಾರ್ಥನೆಯಿಂದ ಗೊತ್ತಾಗುತ್ತೆ. ಅವರು ಹೇಳಿದ್ದು: “ಯೆಹೋವನೇ, ನಿನಗೆ ಎಲ್ರ ಹೃದಯದಲ್ಲಿ ಏನಿದೆ ಅಂತ ಗೊತ್ತು. ಈ ಇಬ್ರಲ್ಲಿ ನೀನು ಯಾರನ್ನ ಆರಿಸಿದ್ದೀಯ ಅಂತ ನಮಗೆ ತೋರಿಸ್ಕೊಡು.” (ಅ. ಕಾ. 1:23, 24) ಯೆಹೋವನೇ ಆಯ್ಕೆ ಮಾಡಬೇಕು ಅನ್ನೋದು ಅವರ ಇಷ್ಟವಾಗಿತ್ತು. ಕೊನೆಗೆ, ಯೇಸು ಸಾರಲು ಕಳಿಸಿದ್ದ 70 ಶಿಷ್ಯರಲ್ಲಿ ಬಹುಶಃ ಒಬ್ಬನಾಗಿದ್ದ ಮತ್ತೀಯನನ್ನ ಆಯ್ಕೆ ಮಾಡಿದ್ರು. ಹೀಗೆ, ಅವನು ‘12 ಅಪೊಸ್ತಲರಲ್ಲಿ’ ಒಬ್ಬನಾದ. c—ಅ. ಕಾ. 6:2.
22, 23. ಸಭೆಯಲ್ಲಿ ಮೇಲ್ವಿಚಾರಣೆ ಮಾಡೋರಿಗೆ ನಾವು ಯಾಕೆ ಅಧೀನತೆ, ವಿಧೇಯತೆ ತೋರಿಸಬೇಕು?
22 ಈ ಘಟನೆ, ದೇವಜನರ ಮಧ್ಯೆ ಎಲ್ಲವೂ ಸುವ್ಯವಸ್ಥಿತವಾಗಿ ನಡೆಯೋದು ಎಷ್ಟು ಮುಖ್ಯ ಅಂತ ನೆನಪಿಸುತ್ತೆ. ಇವತ್ತಿಗೂ, ಜವಾಬ್ದಾರಿ ಇರೋ ಸಹೋದರರನ್ನೇ ಸಭೆಯ ಮೇಲ್ವಿಚಾರಕರಾಗಿ ಆಯ್ಕೆ ಮಾಡಲಾಗುತ್ತೆ. ಹೀಗೆ ಆಯ್ಕೆ ಮಾಡೋ ಮುಂಚೆ ಅಂಥವರಲ್ಲಿ ಬೈಬಲಾಧರಿತ ಅರ್ಹತೆಗಳು ಇವೆಯಾ ಅಂತ ಹಿರಿಯರು ಜಾಗರೂಕತೆಯಿಂದ ಪರಿಶೀಲಿಸಿ ಪವಿತ್ರಶಕ್ತಿಯ ಮಾರ್ಗದರ್ಶನಕ್ಕಾಗಿ ಪ್ರಾರ್ಥಿಸ್ತಾರೆ. ಹಾಗಾಗಿ ಸಭೆ, ಇಂಥ ಸಹೋದರರನ್ನ ಪವಿತ್ರಶಕ್ತಿಯಿಂದ ನೇಮಕ ಪಡ್ಕೊಂಡವರು ಅಂತ ಪರಿಗಣಿಸುತ್ತೆ. ಇಂಥವರಿಗೆ ಅಧೀನತೆ, ವಿಧೇಯತೆ ತೋರಿಸಿ ಸಹಕಾರ ಕೊಡೋಣ.—ಇಬ್ರಿ. 13:17.
23 ಯೇಸು ಮತ್ತೆ ಜೀವಂತವಾಗಿ ಎದ್ದು ಬಂದಿದ್ದನ್ನ ನೋಡಿ ಶಿಷ್ಯರಿಗೆ ಬಲ ಸಿಕ್ತು, ಅಲ್ಲದೇ ಮೇಲ್ವಿಚಾರಣೆಯ ವಿಚಾರದಲ್ಲೂ ತುಂಬಾ ಸುಧಾರಣೆಗಳಾಗಿತ್ತು. ಇದ್ರಿಂದ ಅವರು ಮುಂದೆ ನಡಿಯೋ ಒಂದು ವಿಶೇಷ ಘಟನೆಗಾಗಿ ಪೂರ್ತಿ ತಯಾರಾಗಿದ್ರು. ಆ ಘಟನೆ ಬಗ್ಗೆ ಮುಂದಿನ ಅಧ್ಯಾಯದಲ್ಲಿ ಚರ್ಚಿಸೋಣ.
a ಲೂಕ ಪುಸ್ತಕದಲ್ಲಿ ಈ ವ್ಯಕ್ತಿಯನ್ನ “ಮಾನ್ಯ ಥೆಯೊಫಿಲನೇ” ಅಂತ ಲೂಕ ಕರೆದಿದ್ದಾನೆ. (ಲೂಕ 1:1) ಥೆಯೊಫಿಲ ಒಬ್ಬ ಗಣ್ಯ ವ್ಯಕ್ತಿಯಾಗಿದ್ದ, ಆದ್ರೆ ಇನ್ನೂ ಒಬ್ಬ ಕ್ರೈಸ್ತನಾಗಿರಲಿಲ್ಲ ಅನ್ನೋ ಕಾರಣಕ್ಕೆ ಹೀಗೆ ಕರೆದಿರಬಹುದು ಅಂತ ಕೆಲವರು ಹೇಳ್ತಾರೆ. ಆದ್ರೆ ಅಪೊಸ್ತಲರ ಕಾರ್ಯ ಪುಸ್ತಕದಲ್ಲಿ ಲೂಕ ಬರೀ “ಪ್ರೀತಿಯ ಥೆಯೊಫಿಲ” ಅಂತ ಕರೆದಿದ್ದಾನೆ. ಲೂಕ ಪುಸ್ತಕ ಓದಿದ ಮೇಲೆ ಥೆಯೊಫಿಲ ಕ್ರೈಸ್ತನಾಗಿರಬೇಕು, ಹಾಗಾಗಿ ಆ ಗೌರವಸೂಚಕ ಶೈಲಿ ಬಿಟ್ಟು, ಥೆಯೊಫಿಲನನ್ನ ಒಬ್ಬ ಸಹೋದರ ಅನ್ನೋ ಭಾವನೆಯಿಂದ ಕರೆದಿದ್ದಾನೆ ಅನ್ನೋದು ಕೆಲವು ವಿದ್ವಾಂಸರ ಅಭಿಪ್ರಾಯ.
b ಬೈಬಲಿನ ಈ ವಚನದಲ್ಲಿ “ಹಾಗೇ” ಅಥವಾ “ರೀತಿ” ಅಂತ ಅರ್ಥ ಇರೋ ಟ್ರೊಪೊಸ್ ಅನ್ನೋ ಗ್ರೀಕ್ ಪದವನ್ನ ಬಳಸಲಾಗಿದೆ, “ರೂಪ” ಅಂತ ಅರ್ಥ ಇರೋ ಮೊರ್ಫಿ ಅನ್ನೋ ಪದವನ್ನಲ್ಲ.
c ಪೌಲನನ್ನ “ಬೇರೆ ಜನಾಂಗಗಳವರಿಗೆ ಅಪೊಸ್ತಲನಾಗಿ” ನೇಮಿಸಲಾಯ್ತು. ಆದ್ರೆ ಆ 12 ಅಪೊಸ್ತಲರಲ್ಲಿ ಇವನು ಒಬ್ಬನಾಗಿರಲಿಲ್ಲ. (ರೋಮ. 11:13; 1 ಕೊರಿಂ. 15:4-8) ಅವನು ಈ ವಿಶೇಷ ಸುಯೋಗಕ್ಕೆ ಅರ್ಹನಾಗಲಿಲ್ಲ. ಯಾಕಂದ್ರೆ ಯೇಸು ಸೇವೆ ಮಾಡಿದ ಸಮಯದಲ್ಲಿ ಆತನನ್ನ ಪೌಲ ಹಿಂಬಾಲಿಸಿರಲಿಲ್ಲ.