ಆಡಳಿತ ಮಂಡಲಿಯಿಂದ ಒಂದು ಪತ್ರ
ನಮ್ಮ ಪ್ರೀತಿಯ ಪ್ರಚಾರಕರೇ,
ಆಲೀವ್ ಮರಗಳ ಗುಡ್ಡದ ಮೇಲೆ ಅಪೊಸ್ತಲರು ನಿಂತಿದ್ದಾರೆ. ಅವ್ರೆಲ್ಲರ ಮುಂದೆ ಯೇಸು ಕಾಣಿಸ್ಕೊಳ್ತಾನೆ. ಆತನು ಇನ್ನು ಸ್ವಲ್ಪ ಸಮಯದಲ್ಲೇ ಸ್ವರ್ಗಕ್ಕೆ ಏರಿ ಹೋಗ್ತಾನೆ. ಅದಕ್ಕೂ ಮುಂಚೆ ತನ್ನ ಶಿಷ್ಯರಿಗೆ ಹೀಗೆ ಹೇಳ್ತಾನೆ: “ಪವಿತ್ರಶಕ್ತಿ ನಿಮ್ಮ ಮೇಲೆ ಬಂದಾಗ ನಿಮಗೆ ಬಲ ಸಿಗುತ್ತೆ. ಆಗ ನೀವು ಯೆರೂಸಲೇಮ್, ಯೂದಾಯ, ಸಮಾರ್ಯ ಮತ್ತು ಇಡೀ ಭೂಮಿಯಲ್ಲಿ ನನ್ನ ಬಗ್ಗೆ ಸಾಕ್ಷಿ ಕೊಡ್ತೀರ.” (ಅ. ಕಾ. 1:8) ಇದೆಲ್ಲ ನಡೀತಾ ಇರುವಾಗ ನೀವು ಅಲ್ಲಿದ್ದೀರ ಅಂದ್ಕೊಳ್ಳಿ. ಯೇಸು ಹೇಳಿದ ಮಾತನ್ನ ಕೇಳಿದಾಗ ನಿಮಗೆ ಹೇಗನಿಸಿರುತ್ತೆ?
ಇಷ್ಟೊಂದು ದೊಡ್ಡ ಕೆಲಸನ ಹೇಗಪ್ಪಾ ಮಾಡೋದು ಅಂತ ಅನಿಸ್ತಿತ್ತೋ ಏನೋ. ‘ನಾವು ಇರೋದೇ ಸ್ವಲ್ಪ ಜನ, ಇಷ್ಟು ಕಮ್ಮಿ ಶಿಷ್ಯರು “ಇಡೀ ಭೂಮಿಯಲ್ಲಿ” ಸಾಕ್ಷಿ ಕೊಡೋದಾದ್ರೂ ಹೇಗೆ?’ ಅಂತ ನೀವು ಯೋಚ್ನೆ ಮಾಡಿರಬಹುದು. ಯೇಸು ಸಾಯೋ ಹಿಂದಿನ ರಾತ್ರಿ ಕೊಟ್ಟ ಈ ಎಚ್ಚರಿಕೆನೂ ನಿಮ್ಮ ಮನಸ್ಸಿಗೆ ಬಂದಿರಬಹುದು: “ಒಬ್ಬ ಸೇವಕ ತನ್ನ ಯಜಮಾನನಿಗಿಂತ ದೊಡ್ಡವನಲ್ಲ . . . ಜನ ನನಗೇ ಹಿಂಸೆ ಕೊಟ್ಟಿರುವಾಗ ನಿಮಗೂ ಹಿಂಸೆ ಕೊಡ್ತಾರೆ. ಜನ ನನ್ನ ಮಾತು ಕೇಳಿದ್ರೆ ನಿಮ್ಮ ಮಾತೂ ಕೇಳ್ತಾರೆ. ಆದ್ರೆ ನೀವು ನನ್ನ ಶಿಷ್ಯರಾಗಿರೋ ಕಾರಣ ಅವರು ಹೀಗೆಲ್ಲ ಮಾಡ್ತಾರೆ. ಯಾಕಂದ್ರೆ ನನ್ನನ್ನ ಕಳಿಸಿದ ದೇವರ ಬಗ್ಗೆ ಅವ್ರಿಗೆ ಗೊತ್ತಿಲ್ಲ.” (ಯೋಹಾ. 15:20, 21) ಇದ್ರ ಬಗ್ಗೆ ಯೋಚ್ನೆ ಮಾಡಿದಾಗ ‘ವಿರೋಧ, ಹಿಂಸೆ ಬಂದ್ರೆ ನಾನು ಹೇಗೆ ದೇವರ ಆಳ್ವಿಕೆ ಬಗ್ಗೆ ಚೆನ್ನಾಗಿ ಸಾಕ್ಷಿ ಕೊಡಕ್ಕಾಗುತ್ತೆ?’ ಅಂತಾನೂ ಅನಿಸಬಹುದು.
ಇವತ್ತು ನಾವೂ ಅದೇ ತರದ ಸನ್ನಿವೇಶದಲ್ಲಿ ಇದ್ದೀವಿ. ಯೆಹೋವನ ಸಾಕ್ಷಿಗಳಾದ ನಮಗೆ “ಇಡೀ ಭೂಮಿಯಲ್ಲಿ,” “ಎಲ್ಲಾ ದೇಶದ ಜನ್ರಿಗೆ” ಚೆನ್ನಾಗಿ ಸಾಕ್ಷಿ ಕೊಡೋ ಕೆಲಸ ಇದೆ. (ಮತ್ತಾ. 28:19, 20) ಈ ಕೆಲಸವನ್ನ ಮಾಡಿ ಮುಗಿಸೋದು ಹೇಗೆ? ವಿರೋಧ ಬಂದ್ರೆ ಈ ಕೆಲಸನ ಮಾಡೋದು ಹೇಗೆ?
ಒಂದನೇ ಶತಮಾನದಲ್ಲಿದ್ದ ಅಪೊಸ್ತಲರು ಮತ್ತು ಅವ್ರ ಜೊತೆ ಇದ್ದ ಕ್ರೈಸ್ತರು ಈ ಕೆಲಸವನ್ನ ಯೆಹೋವನ ಸಹಾಯದಿಂದ ಮಾಡಿ ಮುಗಿಸಿದ್ರು. ಇದ್ರ ಬಗ್ಗೆ ಅಪೊಸ್ತಲರ ಕಾರ್ಯ ಪುಸ್ತಕದಲ್ಲಿದೆ. ಅದನ್ನ ಓದುವಾಗ ಮೈಜುಮ್ ಅನಿಸುತ್ತೆ. ನೀವು ಓದ್ತಿರೋ ಈ ಪುಸ್ತಕದಲ್ಲಿ, ಒಂದನೇ ಶತಮಾನದ ಕ್ರೈಸ್ತರು ಏನೆಲ್ಲ ಮಾಡಿದ್ರು, ಅವ್ರಿಗೆ ಏನೆಲ್ಲ ಆಯ್ತು, ತುಂಬ ವೇಗವಾಗಿ ಸಾರೋ ಕೆಲಸ ನಡೀತಾ ಇದ್ದಿದ್ದನ್ನ ನೋಡಿದಾಗ ಅವ್ರಿಗೆ ಹೇಗನಿಸ್ತು ಅಂತ ಇದೆ. ಆಗಿನ ಮತ್ತು ಈಗಿನ ದೇವಸೇವಕರ ಮಧ್ಯ ತುಂಬ ಹೋಲಿಕೆಗಳಿವೆ. ನಾವು ಮಾಡೋ ಕೆಲಸ ಅಷ್ಟೇ ಅಲ್ಲ, ಈ ಕೆಲಸನ ಹೇಗೆ ಮಾಡ್ತೀವಿ ಅನ್ನೋ ವಿಷ್ಯದಲ್ಲೂ ಹೋಲಿಕೆಗಳಿವೆ. ಅದ್ರ ಬಗ್ಗೆ ತಿಳ್ಕೊಂಡಾಗ ನಿಮಗೇ ಆಶ್ಚರ್ಯ ಆಗುತ್ತೆ. ಈ ಪುಸ್ತಕದಲ್ಲಿ ನೀವು ಓದಿದ ವಿಷ್ಯದ ಬಗ್ಗೆ ಧ್ಯಾನಿಸಿದಾಗ, ಯೆಹೋವ ದೇವರು ಭೂಮಿ ಮೇಲಿರೋ ತನ್ನ ಸಂಘಟನೆಯನ್ನ ಅವತ್ತಿಂದ ಇವತ್ತಿನ ತನಕ ಚೆನ್ನಾಗಿ ನಡೆಸ್ತಾ ಬಂದಿದ್ದಾನೆ ಅನ್ನೋ ನಂಬಿಕೆನೂ ಜಾಸ್ತಿ ಆಗುತ್ತೆ.
ಅಪೊಸ್ತಲರ ಕಾರ್ಯ ಪುಸ್ತಕದ ಬಗ್ಗೆ ಅಧ್ಯಯನ ಮಾಡೋದ್ರಿಂದ ಯೆಹೋವ ನಿಮಗೆ ಸಹಾಯ ಮಾಡ್ತಾನೆ ಮತ್ತು ಸಹಿಸ್ಕೊಳ್ಳೋಕೆ ಆತನು ಪವಿತ್ರಶಕ್ತಿ ಕೊಡ್ತಾನೆ ಅನ್ನೋ ನಿಮ್ಮ ನಂಬಿಕೆ ಇನ್ನೂ ಜಾಸ್ತಿ ಆಗಲಿ ಅನ್ನೋದೇ ನಮ್ಮ ಪ್ರಾರ್ಥನೆ. ಖಂಡಿತ ನಿಮ್ಮ ನಂಬಿಕೆ ಜಾಸ್ತಿ ಆಗೇ ಆಗುತ್ತೆ. ಈ ಪುಸ್ತಕ ದೇವರ ಆಳ್ವಿಕೆ ಬಗ್ಗೆ ಜನ್ರಿಗೆ ‘ಚೆನ್ನಾಗಿ ಸಾಕ್ಷಿ ಕೊಡ್ತಾ’ ಇರೋಕೆ ನಿಮಗೆ ಸಹಾಯ ಮಾಡಲಿ. ಹೀಗೆ ನೀವೂ ಮತ್ತೆ ಅವರೂ ರಕ್ಷಣೆಯ ದಾರೀಲಿ ನಡೀತಾ ಇರಿ ಅಂತ ನಾವು ಹಾರೈಸ್ತೀವಿ!—ಅ. ಕಾ. 28:23; 1 ತಿಮೊ. 4:16.
ನಿಮ್ಮ ಸಹೋದರರು,
ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿ