ಪರಿಶಿಷ್ಟ
ವ್ಯಾಪಾರ-ವ್ಯವಹಾರದ ವಿಷಯಗಳಲ್ಲಿ ವ್ಯಾಜ್ಯಗಳನ್ನು ಬಗೆಹರಿಸುವುದು
ಒಂದನೇ ಕೊರಿಂಥ 6:1-8ರಲ್ಲಿ ದಾಖಲಿಸಲ್ಪಟ್ಟಿರುವಂತೆ, ಅಪೊಸ್ತಲ ಪೌಲನು ಜೊತೆ ವಿಶ್ವಾಸಿಗಳ ನಡುವಣ ಮೊಕದ್ದಮೆಗಳ ಕುರಿತು ಚರ್ಚಿಸಿದನು. ಕೊರಿಂಥದಲ್ಲಿದ್ದ ಕೆಲವು ಕ್ರೈಸ್ತರು ‘ಅನೀತಿವಂತರ ಮುಂದೆ ನ್ಯಾಯಾಲಯಕ್ಕೆ ಹೋಗಲು ಧೈರ್ಯಮಾಡುತ್ತಿದ್ದುದರ’ ಬಗ್ಗೆ ಅವನು ಹತಾಶೆಯನ್ನು ವ್ಯಕ್ತಪಡಿಸಿದನು. (ವಚನ 1) ಕ್ರೈಸ್ತರು ಲೌಕಿಕ ನ್ಯಾಯಾಲಯಗಳಲ್ಲಿ ಪರಸ್ಪರರ ವಿರುದ್ಧ ಮೊಕದ್ದಮೆ ಹೂಡುವುದರ ಬದಲು ಸಭೆಯ ಏರ್ಪಾಡಿನೊಳಗೇ ವ್ಯಾಜ್ಯಗಳನ್ನು ಏಕೆ ಬಗೆಹರಿಸಿಕೊಳ್ಳಬೇಕು ಎಂಬುದಕ್ಕೆ ಪೌಲನು ಬಲವಾದ ಕಾರಣಗಳನ್ನು ಕೊಟ್ಟನು. ಈ ಪ್ರೇರಿತ ಸಲಹೆಯ ಹಿಂದಿರುವ ಕಾರಣಗಳಲ್ಲಿ ಕೆಲವನ್ನು ನಾವೀಗ ಪರಿಗಣಿಸೋಣ ಮತ್ತು ಅನಂತರ ಈ ನಿರ್ದೇಶನವು ಅಷ್ಟಾಗಿ ಅನ್ವಯವಾಗದಂಥ ಕೆಲವು ಸನ್ನಿವೇಶಗಳನ್ನು ಪರಿಗಣಿಸೋಣ.
ನಮಗೆ ಒಬ್ಬ ಜೊತೆ ವಿಶ್ವಾಸಿಯೊಂದಿಗೆ ವ್ಯಾಪಾರ-ವ್ಯವಹಾರದ ವಿಷಯದಲ್ಲಿ ಒಂದು ವ್ಯಾಜ್ಯವಿರುವುದಾದರೆ ನಾವು ಮೊದಲಾಗಿ ವಿಷಯಗಳನ್ನು ನಮ್ಮ ವಿಧದಲ್ಲಿ ಅಲ್ಲ, ಯೆಹೋವನ ವಿಧಕ್ಕನುಸಾರ ನಿರ್ವಹಿಸಲು ಪ್ರಯತ್ನಿಸಬೇಕು. (ಜ್ಞಾನೋಕ್ತಿ 14:12) ಯೇಸು ತೋರಿಸಿದಂತೆ, ಒಂದು ಭಿನ್ನಾಭಿಪ್ರಾಯವು ದೊಡ್ಡ ವಿವಾದಾಂಶವಾಗಿ ಪರಿಣಮಿಸುವುದಕ್ಕಿಂತ ಮುಂಚೆಯೇ ಅದನ್ನು ಬಗೆಹರಿಸುವುದು ಉತ್ತಮ. (ಮತ್ತಾಯ 5:23-26) ಆದರೆ ಕೆಲವು ಕ್ರೈಸ್ತರು ತುಂಬ ಕಲಹಶೀಲರಾಗಿ ಪರಿಣಮಿಸಿ ವ್ಯಾಜ್ಯಗಳನ್ನು ಲೌಕಿಕ ನ್ಯಾಯಾಲಯಗಳ ತನಕವೂ ಕೊಂಡೊಯ್ಯುವುದು ದುಃಖಕರ ಸಂಗತಿಯಾಗಿದೆ. “ನೀವು ಪರಸ್ಪರ ಮೊಕದ್ದಮೆ ಹೂಡುವುದು ನಿಮ್ಮ ಸಂಪೂರ್ಣ ಸೋಲನ್ನು ಸೂಚಿಸುತ್ತದೆ” ಎಂದು ಪೌಲನು ಹೇಳಿದನು. ಏಕೆ? ಒಂದು ಮುಖ್ಯ ಕಾರಣವೇನೆಂದರೆ, ಇಂಥ ಕಾಯಿದೆ ಕ್ರಮಗಳು ಸಭೆಯ ಸತ್ಕೀರ್ತಿಗೆ ಮತ್ತು ನಾವು ಆರಾಧಿಸುವ ದೇವರಿಗೆ ಕೆಟ್ಟ ಹೆಸರನ್ನು ತರಬಹುದು. ಆದುದರಿಂದ ನಾವು, “ಅದಕ್ಕಿಂತ ನೀವೇ ಏಕೆ ಅನ್ಯಾಯವನ್ನು ಸಹಿಸಬಾರದು?” ಎಂಬ ಪೌಲನ ಪ್ರಶ್ನೆಯನ್ನು ಮನಸ್ಸಿಗೆ ತೆಗೆದುಕೊಳ್ಳುತ್ತೇವೆ.—ವಚನ 7.
ಅನೇಕ ವ್ಯಾಜ್ಯಗಳನ್ನು ಬಗೆಹರಿಸಲು ದೇವರು ಸಭೆಗೆ ಒಂದು ಒಳ್ಳೇ ಏರ್ಪಾಡನ್ನು ಕೊಟ್ಟಿದ್ದಾನೆ ಎಂದು ಸಹ ಪೌಲನು ತರ್ಕಿಸಿದನು. ಹಿರಿಯರು ಶಾಸ್ತ್ರಾಧಾರಿತ ಸತ್ಯಗಳಿಂದ ಜ್ಞಾನವನ್ನು ಪಡೆದುಕೊಂಡು ವಿವೇಕಿಗಳಾಗಿರುವ ಕ್ರೈಸ್ತ ಪುರುಷರಾಗಿದ್ದಾರೆ ಮತ್ತು ‘ಈ ಜೀವನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ’ ಅವರು ‘ಸಹೋದರರ ಮಧ್ಯೆ ತೀರ್ಪನ್ನು ಮಾಡಶಕ್ತರಾಗಿದ್ದಾರೆ’ ಎಂದು ಪೌಲನು ಹೇಳಿದನು. (ವಚನಗಳು 3-5) ಮಿಥ್ಯಾಪವಾದ ಮತ್ತು ವಂಚನೆಯಂಥ ಗಂಭೀರವಾದ ತಪ್ಪುಗಳನ್ನು ಒಳಗೊಂಡ ವ್ಯಾಜ್ಯಗಳನ್ನು, ಮೂರು-ಹೆಜ್ಜೆಯ ಕಾರ್ಯವಿಧಾನಕ್ಕನುಸಾರ ಬಗೆಹರಿಸಬೇಕು ಎಂದು ಯೇಸು ತೋರಿಸಿದನು: ಮೊದಲನೆಯದಾಗಿ, ಒಳಗೂಡಿರುವ ವ್ಯಕ್ತಿಗಳ ಮಧ್ಯೆ ಸಮಸ್ಯೆಯನ್ನು ಖಾಸಗಿಯಾಗಿ ಬಗೆಹರಿಸಲು ಪ್ರಯತ್ನಿಸುವುದು; ಮೊದಲ ಹೆಜ್ಜೆ ವಿಫಲವಾಗುವಲ್ಲಿ, ಎರಡನೆಯದಾಗಿ ಒಬ್ಬರು ಅಥವಾ ಇಬ್ಬರು ಸಾಕ್ಷಿಗಳನ್ನು ಜೊತೆಯಲ್ಲಿ ಕರೆದೊಯ್ಯುವುದು; ಮತ್ತು ಈ ಹೆಜ್ಜೆಯೂ ವಿಫಲವಾಗುವಲ್ಲಿ, ಮೂರನೆಯದಾಗಿ ಸಭೆಗೆ, ಅಂದರೆ ಸಭೆಯನ್ನು ಪ್ರತಿನಿಧಿಸುವ ಹಿರಿಯರಿಗೆ ವಿಷಯವನ್ನು ತಿಳಿಸುವುದು.—ಮತ್ತಾಯ 18:15-17.
ವಾಸ್ತವದಲ್ಲಿ ಕ್ರೈಸ್ತ ಹಿರಿಯರು ವಕೀಲರೋ ವ್ಯಾಪಾರಸ್ಥರೋ ಆಗಿರಲಿಕ್ಕಿಲ್ಲ ಮತ್ತು ಕಾನೂನು ಅಥವಾ ವ್ಯಾಪಾರಕ್ಕೆ ಸಂಬಂಧಪಟ್ಟ ಸಲಹೆಯನ್ನು ಕೊಡುವುದೂ ಅವರ ಕೆಲಸವಲ್ಲ. ಸಹೋದರರ ಮಧ್ಯೆ ಏಳುವ ವ್ಯಾಪಾರಕ್ಕೆ ಸಂಬಂಧಪಟ್ಟ ವ್ಯಾಜ್ಯಗಳನ್ನು ಬಗೆಹರಿಸಲು ಬೇಕಾದ ಕರಾರುಗಳನ್ನು ಅವರು ಸ್ಥಾಪಿಸುವುದಿಲ್ಲ. ಬದಲಿಗೆ ಒಳಗೂಡಿರುವ ಎಲ್ಲರೂ ಶಾಸ್ತ್ರವಚನಗಳನ್ನು ಅನ್ವಯಿಸುವಂತೆ ಮತ್ತು ಸ್ನೇಹಭಾವದ ಒಪ್ಪಂದಕ್ಕೆ ಬರುವಂತೆ ಸಹಾಯಮಾಡಲು ಅವರು ಪ್ರಯತ್ನಿಸುತ್ತಾರೆ. ಜಟಿಲವಾದ ವಿದ್ಯಮಾನಗಳಲ್ಲಿ ಅವರು ಸರ್ಕಿಟ್ ಮೇಲ್ವಿಚಾರಕರನ್ನು ಅಥವಾ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸನ್ನು ಸಂಪರ್ಕಿಸಲು ಬಯಸಬಹುದು. ಆದರೆ ಪೌಲನ ಸಲಹೆಯು ಆವರಿಸದಂಥ ಕೆಲವು ಸನ್ನಿವೇಶಗಳಿವೆ. ಇವುಗಳಲ್ಲಿ ಕೆಲವು ಯಾವುವು?
ಕೆಲವು ವಿದ್ಯಮಾನಗಳಲ್ಲಿ, ನಿಸ್ವಾರ್ಥವಾದ ಮತ್ತು ಶಾಂತಿದಾಯಕ ಫಲಿತಾಂಶಗಳನ್ನು ಪಡೆದುಕೊಳ್ಳುವ ಪ್ರಯತ್ನದಲ್ಲಿ ಒಂದು ಮೊಕದ್ದಮೆಯನ್ನು ಹೂಡುವುದು, ಬರಿಯ ಒಂದು ನಿಯಮಾನುಸರಣೆಯಾಗಿರಬಹುದು ಅಥವಾ ಕಾನೂನುಬದ್ಧ ಆವಶ್ಯಕತೆಯಾಗಿರಬಹುದು. ಉದಾಹರಣೆಗೆ, ವಿವಾಹ ವಿಚ್ಛೇದದ ತೀರ್ಪನ್ನು ಪಡೆಯಲು, ಮಗುವಿನ ಕಸ್ಟಡಿಯನ್ನು ಪಡೆಯಲು, ಜೀವನಾಂಶ ಪಾವತಿಗಳನ್ನು ನಿರ್ಧರಿಸಲು, ವಿಮೆಯ ನಷ್ಟಭರ್ತಿಯನ್ನು ಪಡೆಯಲು, ದಿವಾಳಿತನದ ವ್ಯವಹರಣೆಯಲ್ಲಿ ಸಾಲಗಾರರ ಪಟ್ಟಿಯಲ್ಲಿ ಸೇರಿಸಲ್ಪಡಲು ಮತ್ತು ಉಯಿಲುಗಳನ್ನು ಪ್ರಮಾಣೀಕರಿಸಲು ಲಭ್ಯವಿರುವ ಏಕಮಾತ್ರ ಕಾರ್ಯವಿಧಾನವು ಒಂದು ಮೊಕದ್ದಮೆಯನ್ನು ಹೂಡುವುದೇ ಆಗಿರಬಹುದು. ಕೆಲವೊಮ್ಮೆ ಒಂದು ಮೊಕದ್ದಮೆಯಲ್ಲಿ ಸ್ವತಃ ತನ್ನನ್ನು ಕಾಪಾಡಿಕೊಳ್ಳಲಿಕ್ಕಾಗಿ ಪ್ರತಿಮೊಕದ್ದಮೆಯನ್ನು ಹೂಡುವುದು ಅಗತ್ಯವೆಂದು ಒಬ್ಬ ಸಹೋದರನು ನೆನಸಬಹುದಾದ ಸಂದರ್ಭಗಳೂ ಉಂಟು. a
ಇಂಥ ಮೊಕದ್ದಮೆಗಳನ್ನು ಕಲಹಶೀಲ ಮನೋಭಾವವಿಲ್ಲದೆ ಬೆನ್ನಟ್ಟುವುದಾದರೆ ಅವು ಪೌಲನ ಪ್ರೇರಿತ ಸಲಹೆಯು ಏನನ್ನು ಸೂಚಿಸಿತೋ ಅದನ್ನು ಉಲ್ಲಂಘಿಸದಿರಬಹುದು. b ಆದರೂ ಯೆಹೋವನ ನಾಮದ ಪವಿತ್ರೀಕರಣ ಮತ್ತು ಸಭೆಯ ಶಾಂತಿ ಹಾಗೂ ಐಕ್ಯವು ಒಬ್ಬ ಕ್ರೈಸ್ತನ ಆದ್ಯತೆಯಾಗಿರಬೇಕು. ಕ್ರಿಸ್ತನ ಹಿಂಬಾಲಕರ ವೈಶಿಷ್ಟ್ಯವು ಅವರ ಪ್ರೀತಿಯೇ ಆಗಿದೆ ಮತ್ತು “ಪ್ರೀತಿಯು . . . ಸ್ವಹಿತವನ್ನು ಹುಡುಕುವುದಿಲ್ಲ.”—1 ಕೊರಿಂಥ 13:4, 5; ಯೋಹಾನ 13:34, 35.
a ಅಪರೂಪಕ್ಕೊಮ್ಮೆ ಒಬ್ಬ ಕ್ರೈಸ್ತನು ಮತ್ತೊಬ್ಬರ ವಿರುದ್ಧ ಬಲಾತ್ಕಾರ ಸಂಭೋಗ, ಹಲ್ಲೆ, ಕೊಲೆ ಅಥವಾ ದೊಡ್ಡ ಕಳ್ಳತನದಂಥ ಗಂಭೀರವಾದ ಅಪರಾಧವನ್ನು ಗೈಯಬಹುದು. ಇಂಥ ಸನ್ನಿವೇಶಗಳಲ್ಲಿ ಈ ವಿಷಯವನ್ನು ಅಧಿಕಾರಿಗಳಿಗೆ ವರದಿಮಾಡುವುದಾದರೂ ಮತ್ತು ಹೀಗೆ ಮಾಡುವುದರಿಂದ ಕೋರ್ಟ್ ಕೇಸ್ ಅಥವಾ ಕ್ರಿಮಿನಲ್ ವಿಚಾರಣೆ ಆಗಬಹುದಾದರೂ ಇದು ಅಕ್ರೈಸ್ತ ವರ್ತನೆಯಾಗಿರುವುದಿಲ್ಲ.
b ಹೆಚ್ಚಿನ ಮಾಹಿತಿಗಾಗಿ 1997, ಮಾರ್ಚ್ 15ರ ಕಾವಲಿನಬುರುಜು ಪತ್ರಿಕೆಯ ಪುಟಗಳು 17-22ನ್ನು ಮತ್ತು 1992, ಜನವರ 15ರ ಪತ್ರಿಕೆಯ ಪುಟಗಳು 29-32ನ್ನು ನೋಡಿ.