ಅಧ್ಯಾಯ 5
ಲೋಕದಿಂದ ಪ್ರತ್ಯೇಕವಾಗಿರಿಸಿಕೊಳ್ಳುವ ವಿಧ
‘ನೀವು ಲೋಕದ ಭಾಗವಾಗಿಲ್ಲ.’ —ಯೋಹಾನ 15:19.
1. ಮಾನವನಾಗಿ ಭೂಮಿಯಲ್ಲಿ ಕಳೆದ ಕೊನೆಯ ರಾತ್ರಿಯಂದು ಯೇಸು ಏನನ್ನು ಒತ್ತಿಹೇಳಿದನು?
ಮಾನವನಾಗಿ ಭೂಮಿಯಲ್ಲಿ ಕಳೆದ ಕೊನೆಯ ರಾತ್ರಿಯಂದು ಯೇಸು ತನ್ನ ಹಿಂಬಾಲಕರ ಭಾವೀ ಹಿತಕ್ಷೇಮದ ಕುರಿತು ಆಳವಾದ ಚಿಂತೆಯನ್ನು ವ್ಯಕ್ತಪಡಿಸಿದನು. ಈ ವಿಷಯದ ಕುರಿತು ಅವನು ಪ್ರಾರ್ಥನೆಯನ್ನು ಸಹ ಮಾಡಿದನು. ಅವನು ತನ್ನ ತಂದೆಗೆ ಹೇಳಿದ್ದು: “ಇವರನ್ನು ಲೋಕದಿಂದ ತೆಗೆದುಬಿಡುವಂತೆ ನಾನು ಕೇಳಿಕೊಳ್ಳದೆ ಕೆಡುಕನಿಂದ ಕಾಪಾಡುವಂತೆ ಕೇಳಿಕೊಳ್ಳುತ್ತೇನೆ. ನಾನು ಲೋಕದ ಭಾಗವಾಗಿಲ್ಲದ ಪ್ರಕಾರ ಇವರೂ ಲೋಕದ ಭಾಗವಾಗಿಲ್ಲ.” (ಯೋಹಾನ 17:15, 16) ಹೃದಯದಾಳದಿಂದ ಬಂದ ಈ ವಿನಂತಿಯಲ್ಲಿ ಯೇಸು ತನ್ನ ಹಿಂಬಾಲಕರ ಮೇಲಿದ್ದ ಆಳವಾದ ಪ್ರೀತಿಯನ್ನೂ ಅದೇ ರಾತ್ರಿ ಸ್ವಲ್ಪ ಮುಂಚೆ ಅವನು ಅವರಲ್ಲಿ ಕೆಲವರಿಗೆ ‘ನೀವು ಲೋಕದ ಭಾಗವಾಗಿಲ್ಲ’ ಎಂದು ಹೇಳಿದ ಮಾತುಗಳ ಪ್ರಮುಖತೆಯನ್ನೂ ತೋರಿಸಿದನು. (ಯೋಹಾನ 15:19) ತನ್ನ ಹಿಂಬಾಲಕರು ತಮ್ಮನ್ನು ಲೋಕದಿಂದ ಪ್ರತ್ಯೇಕವಾಗಿರಿಸಿಕೊಳ್ಳುವುದು ಯೇಸುವಿಗೆ ತುಂಬ ಪ್ರಮುಖವಾದ ಸಂಗತಿಯಾಗಿತ್ತು ಎಂಬುದು ಸುಸ್ಪಷ್ಟ.
2. ಯೇಸು ಯಾವುದನ್ನು “ಲೋಕ” ಎಂದು ಕರೆದನೋ ಅದು ಯಾವುದಕ್ಕೆ ಸೂಚಿತವಾಗಿದೆ?
2 ಯೇಸು ಯಾವುದನ್ನು “ಲೋಕ” ಎಂದು ಕರೆದನೋ ಅದು ದೇವರಿಂದ ವಿಮುಖವಾಗಿರುವ ಸರ್ವ ಮಾನವಕುಲಕ್ಕೆ ಸೂಚಿತವಾಗಿದೆ. ಅಂಥವರು ಸೈತಾನನಿಂದ ಆಳಲ್ಪಡುತ್ತಿದ್ದು ಅವನಿಂದ ಹೊರಹೊಮ್ಮುವ ಸ್ವಾರ್ಥಭರಿತ, ಅಹಂಕಾರದ ಮನೋಭಾವಕ್ಕೆ ದಾಸರಾಗಿದ್ದಾರೆ. (ಯೋಹಾನ 14:30; ಎಫೆಸ 2:2; 1 ಯೋಹಾನ 5:19) ವಾಸ್ತವದಲ್ಲಿ “[ಆ] ಲೋಕದೊಂದಿಗೆ ಸ್ನೇಹವು ದೇವರೊಂದಿಗೆ ವೈರತ್ವವಾಗಿದೆ.” (ಯಾಕೋಬ 4:4) ಆದರೆ ದೇವರ ಪ್ರೀತಿಯಲ್ಲಿ ಉಳಿಯಲು ಬಯಸುವವರೆಲ್ಲರೂ ಲೋಕದಲ್ಲೇ ಇದ್ದು ಅದೇ ಸಮಯದಲ್ಲಿ ಅದರಿಂದ ಹೇಗೆ ಪ್ರತ್ಯೇಕವಾಗಿರಬಲ್ಲರು? ನಾವು ಐದು ವಿಧಗಳನ್ನು ಪರಿಗಣಿಸುವೆವು: ಕ್ರಿಸ್ತನ ಕೆಳಗಿರುವ ದೇವರ ರಾಜ್ಯಕ್ಕೆ ನಿಷ್ಠರಾಗಿದ್ದು ಲೋಕದ ರಾಜಕೀಯದಲ್ಲಿ ತಟಸ್ಥರಾಗಿರುವ ಮೂಲಕ, ಲೋಕದ ಮನೋಭಾವವನ್ನು ಪ್ರತಿರೋಧಿಸುವ ಮೂಲಕ, ನಮ್ಮ ಉಡುಪು ಮತ್ತು ಕೇಶಾಲಂಕಾರದಲ್ಲಿ ಸಭ್ಯರಾಗಿರುವ ಮೂಲಕ, ನಮ್ಮ ಜೀವನವನ್ನು ಸರಳವಾಗಿಡುವ ಮೂಲಕ ಮತ್ತು ನಮ್ಮ ಆಧ್ಯಾತ್ಮಿಕ ರಕ್ಷಾಕವಚವನ್ನು ಧರಿಸಿಕೊಳ್ಳುವ ಮೂಲಕವೇ.
ನಿಷ್ಠರಾಗಿ ಮತ್ತು ತಟಸ್ಥರಾಗಿ ಉಳಿಯುವುದು
3. (ಎ) ತನ್ನ ದಿನದ ರಾಜಕೀಯದ ಕುರಿತು ಯೇಸುವಿಗೆ ಯಾವ ನೋಟವಿತ್ತು? (ಬಿ) ಕ್ರಿಸ್ತನ ಅಭಿಷಿಕ್ತ ಹಿಂಬಾಲಕರು ರಾಯಭಾರಿಗಳಾಗಿ ಕಾರ್ಯನಡಿಸುತ್ತಾರೆ ಎಂದು ಹೇಳಸಾಧ್ಯವಿದೆ ಏಕೆ? (ಪಾದಟಿಪ್ಪಣಿಯನ್ನು ಒಳಗೂಡಿಸಿ.)
3 ಯೇಸು ತನ್ನ ದಿನದ ರಾಜಕೀಯದಲ್ಲಿ ಒಳಗೂಡುವುದಕ್ಕೆ ಬದಲಾಗಿ ದೇವರ ರಾಜ್ಯದ ಕುರಿತು ಸಾರುವುದರ ಮೇಲೆ ಮನಸ್ಸನ್ನು ಕೇಂದ್ರೀಕರಿಸಿದನು. ಈ ರಾಜ್ಯವು ಮುಂದೆ ಸ್ಥಾಪಿಸಲ್ಪಡಲಿಕ್ಕಿದ್ದ ಸ್ವರ್ಗೀಯ ಸರಕಾರವಾಗಿದ್ದು ಅವನೇ ಅದರ ಭಾವೀ ಅರಸನಾಗಿದ್ದನು. (ದಾನಿಯೇಲ 7:13, 14; ಲೂಕ 4:43; 17:20, 21) ಹೀಗೆ ರೋಮನ್ ರಾಜ್ಯಪಾಲನಾಗಿದ್ದ ಪೊಂತ್ಯ ಪಿಲಾತನ ಮುಂದೆ ಯೇಸು, “ನನ್ನ ರಾಜ್ಯವು ಈ ಲೋಕದ ಭಾಗವಾಗಿಲ್ಲ” ಎಂದು ಹೇಳಸಾಧ್ಯವಾಯಿತು. (ಯೋಹಾನ 18:36) ಕ್ರಿಸ್ತನ ನಂಬಿಗಸ್ತ ಹಿಂಬಾಲಕರು ಅವನಿಗೆ ಮತ್ತು ಅವನ ರಾಜ್ಯಕ್ಕೆ ನಿಷ್ಠೆಯನ್ನು ತೋರಿಸುವ ಮೂಲಕ ಮತ್ತು ಆ ರಾಜ್ಯದ ಕುರಿತು ಲೋಕಕ್ಕೆ ಪ್ರಕಟಪಡಿಸುವ ಮೂಲಕ ಅವನ ಮಾದರಿಯನ್ನು ಅನುಕರಿಸುತ್ತಾರೆ. (ಮತ್ತಾಯ 24:14) ಅಪೊಸ್ತಲ ಪೌಲನು ಬರೆದುದು: “ಆದುದರಿಂದ . . . ನಾವು ಕ್ರಿಸ್ತನ ಬದಲಿಯಾಗಿ ರಾಯಭಾರಿಗಳಾಗಿದ್ದೇವೆ. ಕ್ರಿಸ್ತನ ಬದಲಿಯಾಗಿರುವ ನಾವು, ‘ದೇವರೊಂದಿಗೆ ಸಮಾಧಾನ ಸಂಬಂಧಕ್ಕೆ ಬನ್ನಿರಿ’ ಎಂದು ಬೇಡಿಕೊಳ್ಳುತ್ತೇವೆ.” a—2 ಕೊರಿಂಥ 5:20.
4. ನಿಜ ಕ್ರೈಸ್ತರೆಲ್ಲರೂ ದೇವರ ರಾಜ್ಯಕ್ಕೆ ಹೇಗೆ ನಿಷ್ಠೆಯನ್ನು ತೋರಿಸಿದ್ದಾರೆ? (“ ಆದಿಕಾಲದ ಕ್ರೈಸ್ತ ತಟಸ್ಥರು” ಚೌಕವನ್ನು ನೋಡಿ.)
4 ರಾಯಭಾರಿಗಳು ಒಂದು ವಿದೇಶೀ ಪರಮಾಧಿಕಾರವನ್ನು ಅಥವಾ ರಾಜ್ಯವನ್ನು ಪ್ರತಿನಿಧಿಸುವುದರಿಂದ ಅವರು ಎಲ್ಲಿ ಕಾರ್ಯನಡಿಸುತ್ತಾರೋ ಆ ರಾಷ್ಟ್ರದ ಆಂತರಿಕ ಆಗುಹೋಗುಗಳಲ್ಲಿ ತಲೆಹಾಕುವುದಿಲ್ಲ, ತಟಸ್ಥರಾಗಿ ಉಳಿಯುತ್ತಾರೆ. ಆದರೆ ರಾಯಭಾರಿಗಳು ತಾವು ಪ್ರತಿನಿಧಿಸುವಂಥ ದೇಶದ ಸರಕಾರವನ್ನು ಸಮರ್ಥಿಸುತ್ತಾರೆ. ಕ್ರಿಸ್ತನ ಅಭಿಷಿಕ್ತ ಹಿಂಬಾಲಕರ ವಿಷಯದಲ್ಲಿಯೂ ಇದು ನಿಜವಾಗಿದ್ದು, ಅವರ “ಪೌರತ್ವವು ಸ್ವರ್ಗದಲ್ಲಿದೆ.” (ಫಿಲಿಪ್ಪಿ 3:20) ವಾಸ್ತವದಲ್ಲಿ, ಅವರು ಹುರುಪಿನಿಂದ ರಾಜ್ಯದ ಕುರಿತು ಸಾರುವ ಮೂಲಕ ಕ್ರಿಸ್ತನ ಲಕ್ಷಾಂತರ ಮಂದಿ ‘ಬೇರೆ ಕುರಿಗಳು’ ‘ದೇವರೊಂದಿಗೆ ಸಮಾಧಾನ ಸಂಬಂಧಕ್ಕೆ ಬರುವಂತೆ’ ಅವರಿಗೆ ಸಹಾಯಮಾಡಿದ್ದಾರೆ. (ಯೋಹಾನ 10:16; ಮತ್ತಾಯ 25:31-40) ಈ ಬೇರೆ ಕುರಿಗಳು ಯೇಸುವಿನ ಅಭಿಷಿಕ್ತ ಸಹೋದರರನ್ನು ಬೆಂಬಲಿಸುತ್ತಾ ಕ್ರಿಸ್ತನ ನಿಯೋಗಿಗಳಾಗಿ ಕಾರ್ಯನಡಿಸುತ್ತಾರೆ. ಮೆಸ್ಸೀಯ ರಾಜ್ಯವನ್ನು ಸಮರ್ಥಿಸುವ ಒಂದು ಐಕ್ಯ ಮಂದೆಯಾಗಿರುವ ಎರಡೂ ಗುಂಪುಗಳವರು ಲೋಕದ ರಾಜಕೀಯ ಆಗುಹೋಗುಗಳ ವಿಷಯದಲ್ಲಿ ಕಟ್ಟುನಿಟ್ಟಾದ ತಾಟಸ್ಥ್ಯವನ್ನು ಕಾಪಾಡಿಕೊಳ್ಳುತ್ತಾರೆ.—ಯೆಶಾಯ 2:2-4 ಓದಿ.
5. ಕ್ರೈಸ್ತ ಸಭೆಯು ಪುರಾತನ ಇಸ್ರಾಯೇಲಿಗಿಂತ ಹೇಗೆ ಭಿನ್ನವಾಗಿದೆ ಮತ್ತು ಯಾವ ವಿಧದಲ್ಲಿ ಕ್ರೈಸ್ತರು ಈ ಭಿನ್ನತೆಯನ್ನು ತೋರ್ಪಡಿಸುತ್ತಾರೆ?
5 ಕ್ರಿಸ್ತನಿಗೆ ನಿಷ್ಠೆ ತೋರಿಸುವ ಏಕಮಾತ್ರ ಕಾರಣಕ್ಕಾಗಿ ಕ್ರೈಸ್ತರು ತಟಸ್ಥರಾಗಿರುವುದಿಲ್ಲ. ಪ್ರಾಚೀನ ಕಾಲದ ದೇವಜನರು ಒಂದೇ ದೇಶದಲ್ಲಿ ವಾಸಿಸುತ್ತಿದ್ದರು, ನಾವಾದರೋ ಒಂದು ಅಂತಾರಾಷ್ಟ್ರೀಯ ಸಹೋದರತ್ವದ ಭಾಗವಾಗಿದ್ದೇವೆ. (ಮತ್ತಾಯ 28:19; 1 ಪೇತ್ರ 2:9) ಆದುದರಿಂದ ನಾವು ಸ್ಥಳಿಕ ರಾಜಕೀಯ ಪಕ್ಷಗಳನ್ನು ಬೆಂಬಲಿಸುವಲ್ಲಿ, ರಾಜ್ಯ ಸಂದೇಶದ ಕುರಿತಾದ ನಮ್ಮ ವಾಕ್ ಸರಳತೆ ಮತ್ತು ನಮ್ಮ ಕ್ರೈಸ್ತ ಐಕ್ಯಭಾವವನ್ನು ಗಂಭೀರವಾಗಿ ಅಪಾಯಕ್ಕೊಡ್ಡಿದಂತಾಗುತ್ತದೆ. (1 ಕೊರಿಂಥ 1:10) ಇದಲ್ಲದೆ ಯುದ್ಧದ ಸಮಯದಲ್ಲಿ, ಯಾರನ್ನು ಪ್ರೀತಿಸುವಂತೆ ನಮಗೆ ಆಜ್ಞೆಯನ್ನು ಕೊಡಲಾಗಿದೆಯೋ ಆ ಜೊತೆ ವಿಶ್ವಾಸಿಗಳ ವಿರುದ್ಧವೇ ನಾವು ಹೋರಾಡಬೇಕಾಗುತ್ತದೆ. (ಯೋಹಾನ 13:34, 35; 1 ಯೋಹಾನ 3:10-12) ಆದುದರಿಂದ ಸಕಾರಣದಿಂದಲೇ ಯೇಸು ತನ್ನ ಶಿಷ್ಯರಿಗೆ ಕಾದಾಟದಲ್ಲಿ ಒಳಗೂಡದಿರುವಂತೆ ಹೇಳಿದನು. ಅಷ್ಟುಮಾತ್ರವಲ್ಲ, ತಮ್ಮ ವೈರಿಗಳನ್ನು ಪ್ರೀತಿಸುವಂತೆಯೂ ಅವರಿಗೆ ಹೇಳಿದನು.—ಮತ್ತಾಯ 5:44; 26:52; “ ನಾನು ತಟಸ್ಥನಾಗಿದ್ದೇನೋ?” ಎಂಬ ಚೌಕವನ್ನು ನೋಡಿ.
6. ದೇವರಿಗೆ ನೀವು ಮಾಡಿಕೊಂಡಿರುವ ಸಮರ್ಪಣೆಯು ಕೈಸರನೊಂದಿಗಿನ ನಿಮ್ಮ ಸಂಬಂಧದ ಮೇಲೆ ಹೇಗೆ ಪ್ರಭಾವ ಬೀರುತ್ತದೆ?
6 ನಿಜ ಕ್ರೈಸ್ತರಾಗಿರುವ ನಾವು ದೇವರಿಗೆ ನಮ್ಮ ಜೀವಿತವನ್ನು ಸಮರ್ಪಿಸಿಕೊಂಡಿದ್ದೇವೆ, ಯಾವನೇ ಮನುಷ್ಯನಿಗೆ, ಮಾನವ ಸಂಸ್ಥೆಗೆ ಅಥವಾ ದೇಶಕ್ಕಲ್ಲ. 1 ಕೊರಿಂಥ 6:19, 20 ಹೇಳುವುದು: “ನೀವು ನಿಮಗೆ ಸೇರಿದವರಲ್ಲ; ನೀವು ಕ್ರಯಕ್ಕೆ ಕೊಳ್ಳಲ್ಪಟ್ಟವರಾಗಿದ್ದೀರಿ.” ಹೀಗೆ “ಕೈಸರನಿಗೆ” ಸಲ್ಲಬೇಕಾದದ್ದನ್ನು ಗೌರವ, ತೆರಿಗೆಗಳು ಮತ್ತು ಸಂಬಂಧಿತ ಅಧೀನತೆಯ ರೂಪದಲ್ಲಿ ಅವನಿಗೆ ಸಲ್ಲಿಸುವಾಗ ಯೇಸುವಿನ ಹಿಂಬಾಲಕರು ‘ದೇವರದನ್ನು ದೇವರಿಗೆ ಕೊಡುತ್ತಾರೆ.’ (ಮಾರ್ಕ 12:17; ರೋಮನ್ನರಿಗೆ 13:1-7) ಇದು ಅವರ ಆರಾಧನೆ, ಪೂರ್ಣ ಪ್ರಾಣದ ಪ್ರೀತಿ ಮತ್ತು ನಿಷ್ಠೆಯಿಂದ ಕೂಡಿದ ವಿಧೇಯತೆಯನ್ನು ಒಳಗೂಡಿದೆ. ಅಗತ್ಯವಿದ್ದಲ್ಲಿ ಅವರು ದೇವರಿಗಾಗಿ ತಮ್ಮ ಜೀವವನ್ನು ಕೊಡುವುದಕ್ಕೂ ಸಿದ್ಧರಾಗಿರುತ್ತಾರೆ.—ಲೂಕ 4:8; 10:27; ಅಪೊಸ್ತಲರ ಕಾರ್ಯಗಳು 5:29; ರೋಮನ್ನರಿಗೆ 14:8 ಓದಿ.
‘ಲೋಕದ ಮನೋಭಾವವನ್ನು’ ಪ್ರತಿರೋಧಿಸುವುದು
7, 8. ‘ಲೋಕದ ಮನೋಭಾವವು’ ಏನಾಗಿದೆ ಮತ್ತು ಆ ಮನೋಭಾವವು ಅವಿಧೇಯ ಮನುಷ್ಯರಲ್ಲಿ ಹೇಗೆ ‘ಕಾರ್ಯನಡೆಸುತ್ತದೆ?’
7 ಕ್ರೈಸ್ತರು ಲೋಕದಿಂದ ತಮ್ಮನ್ನು ಪ್ರತ್ಯೇಕವಾಗಿರಿಸಿಕೊಳ್ಳುವ ಇನ್ನೊಂದು ವಿಧವು ಅದರ ಕೆಟ್ಟ ಮನೋಭಾವವನ್ನು ಪ್ರತಿರೋಧಿಸುವ ಮೂಲಕವೇ ಆಗಿದೆ. “ನಾವು ಲೋಕದ ಮನೋಭಾವವನ್ನಲ್ಲ, ದೇವರಿಂದ ಬರುವ ಆತ್ಮವನ್ನು ಪಡೆದುಕೊಂಡಿದ್ದೇವೆ” ಎಂದು ಪೌಲನು ಬರೆದನು. (1 ಕೊರಿಂಥ 2:12) ಎಫೆಸದವರಿಗೆ ಅವನು ಹೇಳಿದ್ದು: ‘ನೀವು ಪೂರ್ವದಲ್ಲಿ ಈ ಲೋಕಕ್ಕನುಸಾರವಾಗಿ ನಡೆದಿರಿ, ಅವಿಧೇಯತೆಯ ಪುತ್ರರಲ್ಲಿ ಈಗ ಕಾರ್ಯನಡೆಸುತ್ತಿರುವ ಮಾನಸಿಕ ಪ್ರವೃತ್ತಿಗೆ, ಅಂದರೆ ವಾಯುಮಂಡಲದಲ್ಲಿ ಅಧಿಕಾರ ನಡೆಸುವ ಅಧಿಪತಿಗೆ ಅನುಸಾರವಾಗಿ ನಡೆದಿರಿ.’—ಎಫೆಸ 2:2, 3.
8 ಲೋಕದ “ವಾಯು” ಅಥವಾ ಅದರ ಮನೋಭಾವವು ಅದೃಶ್ಯವಾದ ಪ್ರಚೋದಕ ಶಕ್ತಿಯಾಗಿದ್ದು, ದೇವರಿಗೆ ಅವಿಧೇಯತೆ ತೋರಿಸುವಂತೆ ಹುರಿದುಂಬಿಸುತ್ತದೆ ಮತ್ತು ‘ಶರೀರದಾಶೆಯನ್ನೂ ಕಣ್ಣಿನಾಶೆಯನ್ನೂ’ ಉತ್ತೇಜಿಸುತ್ತದೆ. (1 ಯೋಹಾನ 2:16; 1 ತಿಮೊಥೆಯ 6:9, 10) ಲೋಕದ ಮನೋಭಾವಕ್ಕಿರುವ ‘ಅಧಿಕಾರವು,’ ಪಾಪಪೂರ್ಣ ಶರೀರವನ್ನು ಆಕರ್ಷಿಸುವುದರಲ್ಲಿ, ಅದರ ಕೃತ್ರಿಮತೆಯಲ್ಲಿ, ಅದರ ಪಟ್ಟುಬಿಡದಿರುವಿಕೆಯಲ್ಲಿ ಮತ್ತು ವಾಯುವಿನ ಹಾಗೆ ಅದಕ್ಕಿರುವ ವ್ಯಾಪಕತೆಯಲ್ಲಿ ತೋರಿಬರುತ್ತದೆ. ಅಷ್ಟುಮಾತ್ರವಲ್ಲ, ಅದು ಅವಿಧೇಯ ಮನುಷ್ಯರಲ್ಲಿ ಕ್ರಮೇಣವಾಗಿ ಸ್ವಾರ್ಥಭಾವ, ಅಹಂಭಾವ, ಲೋಭದಿಂದ ಕೂಡಿದ ಮಹತ್ವಾಕಾಂಕ್ಷೆ ಮತ್ತು ನೈತಿಕ ಸ್ವಾತಂತ್ರ್ಯ ಹಾಗೂ ದಂಗೆಕೋರ ಮನೋಭಾವಗಳಂಥ ಕೆಟ್ಟ ಗುಣಗಳನ್ನು ಬೆಳೆಸುವ ಮೂಲಕ ‘ಕಾರ್ಯನಡೆಸುತ್ತದೆ.’ b ಸರಳವಾಗಿ ಹೇಳುವುದಾದರೆ, ಈ ಲೋಕದ ಮನೋಭಾವವು ಮನುಷ್ಯರ ಹೃದಯಗಳಲ್ಲಿ ಪಿಶಾಚನ ಗುಣಗಳು ಸ್ವಲ್ಪಸ್ವಲ್ಪವಾಗಿ ಬೆಳೆಯುತ್ತಾಹೋಗುವಂತೆ ಮಾಡುತ್ತದೆ.—ಯೋಹಾನ 8:44; ಅಪೊಸ್ತಲರ ಕಾರ್ಯಗಳು 13:10; 1 ಯೋಹಾನ 3:8, 10.
9. ಯಾವ ವಿಧಗಳಲ್ಲಿ ಲೋಕದ ಮನೋಭಾವವು ನಮ್ಮ ಹೃದಮನಗಳನ್ನು ಪ್ರವೇಶಿಸಸಾಧ್ಯವಿದೆ?
9 ಲೋಕದ ಮನೋಭಾವವು ನಿಮ್ಮ ಹೃದಮನಗಳಲ್ಲಿ ಬೇರೂರುವ ಸಾಧ್ಯತೆಯಿದೆಯೊ? ಹೌದು, ಅಜಾಗ್ರತೆಯಿಂದಿರುವ ಮೂಲಕ ಅದು ನಿಮ್ಮ ಹೃದಮನಗಳನ್ನು ಪ್ರವೇಶಿಸುವಂತೆ ಬಿಡುವಲ್ಲಿ ಮಾತ್ರ. (ಜ್ಞಾನೋಕ್ತಿ 4:23 ಓದಿ.) ಅನೇಕವೇಳೆ ಅದರ ಪ್ರಭಾವವು ನವಿರಾದ ರೀತಿಯಲ್ಲಿ ಆರಂಭವಾಗುತ್ತದೆ; ಹೊರತೋರಿಕೆಯಲ್ಲಿ ಒಳ್ಳೇ ಜನರಾಗಿ ತೋರುವಂಥ ಆದರೆ ವಾಸ್ತವದಲ್ಲಿ ಯೆಹೋವನ ಕಡೆಗೆ ಪ್ರೀತಿಯೇ ಇಲ್ಲದಿರುವಂಥ ಸಹವಾಸಿಗಳ ಮೂಲಕ ಅದು ಆರಂಭವಾಗಬಹುದು. (ಜ್ಞಾನೋಕ್ತಿ 13:20; 1 ಕೊರಿಂಥ 15:33) ನೀವು ಸಹ ಈ ಕೆಟ್ಟ ಮನೋಭಾವವನ್ನು ಆಕ್ಷೇಪಣೀಯವಾದ ಪುಸ್ತಕಗಳು, ಅಶ್ಲೀಲ ಸಾಹಿತ್ಯ ಅಥವಾ ಧರ್ಮಭ್ರಷ್ಟ ಇಂಟರ್‌ನೆಟ್ ಸೈಟ್‌ಗಳು, ಅಹಿತಕರವಾದ ಮನೋರಂಜನೆ ಮತ್ತು ಅತ್ಯಧಿಕ ಸ್ಪರ್ಧಾತ್ಮಕವಾದ ಕ್ರೀಡೆಗಳ ಮೂಲಕ, ವಾಸ್ತವದಲ್ಲಿ ಸೈತಾನನ ಇಲ್ಲವೆ ಅವನ ವ್ಯವಸ್ಥೆಯ ಆಲೋಚನೆಯನ್ನು ಸಾದರಪಡಿಸುವಂಥ ಯಾರ ಮೂಲಕವೇ ಆಗಲಿ ಅಥವಾ ಯಾವುದರ ಮೂಲಕವೇ ಆಗಲಿ ಹೀರಿಕೊಳ್ಳಸಾಧ್ಯವಿದೆ.
10. ನಾವು ಲೋಕದ ಮನೋಭಾವವನ್ನು ಹೇಗೆ ಪ್ರತಿರೋಧಿಸಬಲ್ಲೆವು?
10 ನಾವು ಲೋಕದ ಅಪಾಯಕರವಾದ ಮನೋಭಾವವನ್ನು ಹೇಗೆ ಪ್ರತಿರೋಧಿಸಬಲ್ಲೆವು ಮತ್ತು ನಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಬಲ್ಲೆವು? ಯೆಹೋವನ ಆಧ್ಯಾತ್ಮಿಕ ಒದಗಿಸುವಿಕೆಗಳನ್ನು ಪೂರ್ಣ ರೀತಿಯಲ್ಲಿ ಸದುಪಯೋಗಿಸುವ ಮೂಲಕ ಮತ್ತು ಪವಿತ್ರಾತ್ಮಕ್ಕಾಗಿ ನಿರಂತರವಾಗಿ ಪ್ರಾರ್ಥಿಸುವ ಮೂಲಕವೇ. ಯೆಹೋವನು ಪಿಶಾಚನಿಗಿಂತ ಅಥವಾ ಸೈತಾನನ ಹಿಡಿತದಲ್ಲಿರುವ ಈ ದುಷ್ಟ ಲೋಕಕ್ಕಿಂತ ಎಷ್ಟೋ ಹೆಚ್ಚು ಶ್ರೇಷ್ಠನಾಗಿದ್ದಾನೆ. (1 ಯೋಹಾನ 4:4) ಹಾಗಾದರೆ ಪ್ರಾರ್ಥನೆಯಲ್ಲಿ ನಾವು ಯೆಹೋವನಿಗೆ ನಿಕಟವಾಗಿ ಉಳಿಯುವುದು ಎಷ್ಟು ಮಹತ್ವದ್ದು!
ನಮ್ಮ ಉಡುಪು ಮತ್ತು ಕೇಶಾಲಂಕಾರದಲ್ಲಿ ಸಭ್ಯರಾಗಿರುವುದು
11. ಲೋಕದ ಮನೋಭಾವವು ಉಡುಪಿನ ಗುಣಮಟ್ಟದ ಮೇಲೆ ಹೇಗೆ ಪ್ರಭಾವ ಬೀರಿದೆ?
11 ಒಬ್ಬ ವ್ಯಕ್ತಿಯನ್ನು ಪ್ರಚೋದಿಸುವಂಥ ಮನೋಭಾವದ ಬಾಹ್ಯ ಸೂಚನೆಯು ಅವನ ಉಡುಪು, ಕೇಶಾಲಂಕಾರ ಮತ್ತು ಶುದ್ಧತೆಯೇ ಆಗಿದೆ. ಅನೇಕ ದೇಶಗಳಲ್ಲಿ ಉಡುಪಿನ ಮಟ್ಟವು ಎಷ್ಟು ಕೀಳ್ಮಟ್ಟಕ್ಕೆ ಇಳಿದಿದೆಯೆಂದರೆ, ಸ್ವಲ್ಪದರಲ್ಲೇ ವೇಶ್ಯೆಯರನ್ನು ಪ್ರತ್ಯೇಕವಾಗಿ ಗುರುತಿಸಲು ಏನೂ ಉಳಿಯುವುದಿಲ್ಲ ಎಂದು ದೂರದರ್ಶನದ ವಿಮರ್ಶಕನೊಬ್ಬನು ಸೂಚಿಸಿದನು. ಇನ್ನೂ ಹದಿಪ್ರಾಯವನ್ನು ತಲಪಿರದ ಹುಡುಗಿಯರು ಸಹ “ಚರ್ಮ ಪ್ರದರ್ಶನ ಬಹಳ, ಮರ್ಯಾದೆ ಅಲ್ಪ” ಎಂಬ ಫ್ಯಾಷನನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಒಂದು ವಾರ್ತಾಪತ್ರಿಕೆಯ ವರದಿಯು ತಿಳಿಸಿತು. ಇನ್ನೊಂದು ಫ್ಯಾಷನ್ ಏನೆಂದರೆ, ದಂಗೆಕೋರ ಮನೋಭಾವವನ್ನು ಹಾಗೂ ಮರ್ಯಾದೆ ಮತ್ತು ಸ್ವಗೌರವದ ಕೊರತೆಯನ್ನು ಪ್ರತಿಬಿಂಬಿಸುವಂಥ ಒಪ್ಪಓರಣವಿಲ್ಲದ ಬಟ್ಟೆಗಳನ್ನು ಧರಿಸುವುದೇ ಆಗಿದೆ.
12, 13. ಯಾವ ಮೂಲತತ್ತ್ವಗಳು ನಮ್ಮ ಉಡುಪು ಮತ್ತು ಕೇಶಾಲಂಕಾರಕ್ಕೆ ಅನ್ವಯವಾಗುತ್ತವೆ?
12 ಯೆಹೋವನ ಸೇವಕರಾಗಿರುವ ನಾವು ಅತ್ಯುತ್ತಮ ತೋರಿಕೆಯುಳ್ಳವರಾಗಿ ಕಂಡುಬರಲು ಬಯಸುವುದು ಸೂಕ್ತವೇ. ಇದರ ಅರ್ಥ ನೀಟಾಗಿ, ಶುದ್ಧವಾಗಿ, ಹಿಡಿಸುವಂತೆ ಮತ್ತು ಸಂದರ್ಭಕ್ಕೆ ಸೂಕ್ತವಾಗಿ ಉಡುಪನ್ನು ಧರಿಸುವುದಾಗಿದೆ. ಎಲ್ಲ ಸಮಯಗಳಲ್ಲಿ ನಮ್ಮ ಹೊರತೋರಿಕೆಯು ‘ಸಭ್ಯತೆ ಮತ್ತು ಸ್ವಸ್ಥಬುದ್ದಿಯನ್ನು’ ಪ್ರತಿಬಿಂಬಿಸುವಂಥದ್ದಾಗಿರಬೇಕು ಮತ್ತು ಇದರೊಂದಿಗೆ ‘ಸತ್ಕ್ರಿಯೆ’ ಉಳ್ಳವರಾಗಿರುವುದು ‘ದೇವಭಕ್ತರೆನಿಸಿಕೊಳ್ಳುವ’ ಪ್ರತಿಯೊಬ್ಬ ಸ್ತ್ರೀಪುರುಷರಿಗೆ ಸೂಕ್ತವಾದದ್ದಾಗಿದೆ. ನಮ್ಮ ಮುಖ್ಯ ಚಿಂತೆಯು ನಮ್ಮ ಕಡೆಗೆ ಗಮನ ಸೆಳೆಯುವುದಲ್ಲ ಬದಲಾಗಿ ‘ದೇವರ ಪ್ರೀತಿಯಲ್ಲಿ [ನಮ್ಮನ್ನು] ಕಾಪಾಡಿಕೊಳ್ಳುವುದಾಗಿದೆ’ ಎಂಬುದಂತೂ ನಿಶ್ಚಯ. (1 ತಿಮೊಥೆಯ 2: 9, 10; ಯೂದ 21) ಹೌದು ನಮ್ಮ ಅತ್ಯುತ್ತಮ ಅಲಂಕಾರವು, ‘ದೇವರ ದೃಷ್ಟಿಯಲ್ಲಿ ಅತಿ ಬೆಲೆಯುಳ್ಳ ಹೃದಯದ ಗುಪ್ತ ವ್ಯಕ್ತಿಯಾಗಿರಬೇಕು’ ಎಂಬುದೇ ನಮ್ಮ ಬಯಕೆಯಾಗಿದೆ.—1 ಪೇತ್ರ 3:3, 4.
13 ನಮ್ಮ ಉಡುಪಿನ ಶೈಲಿಗಳು ಮತ್ತು ಕೇಶಾಲಂಕಾರವು ಇತರರು ಸತ್ಯಾರಾಧನೆಯನ್ನು ಹೇಗೆ ವೀಕ್ಷಿಸುತ್ತಾರೆ ಎಂಬುದರ ಮೇಲೆ ಪ್ರಭಾವ ಬೀರಸಾಧ್ಯವಿದೆ ಎಂಬುದನ್ನೂ ಮನಸ್ಸಿನಲ್ಲಿಡಿರಿ. ‘ಸಭ್ಯತೆ’ ಎಂದು ಅನುವಾದಿಸಲ್ಪಟ್ಟಿರುವ ಗ್ರೀಕ್ ಪದವನ್ನು ನೈತಿಕ ಅರ್ಥದಲ್ಲಿ ಉಪಯೋಗಿಸುವಾಗ ಅದು ಭಯಭಕ್ತಿ, ಪೂಜ್ಯಭಾವ ಮತ್ತು ಇತರರ ಭಾವನೆಗಳಿಗೆ ಅಥವಾ ಅಭಿಪ್ರಾಯಕ್ಕೆ ಗೌರವ ತೋರಿಸುವಂಥ ವಿಚಾರವನ್ನು ವ್ಯಕ್ತಪಡಿಸುತ್ತದೆ. ಆದುದರಿಂದ ನಾವು ಯಾವ ರೀತಿಯ ಉಡುಪನ್ನು ಧರಿಸಬೇಕು ಎಂಬ ವಿಷಯದಲ್ಲಿ ನಮಗಿವೆ ಎಂದು ನಾವು ಭಾವಿಸಬಹುದಾದ ಹಕ್ಕುಗಳಿಗಿಂತಲೂ ಬೇರೆಯವರ ಮನಸ್ಸಾಕ್ಷಿಗೆ ಪ್ರಮುಖತೆ ನೀಡುವುದು ನಮ್ಮ ಗುರಿಯಾಗಿರಬೇಕು. ಎಲ್ಲಕ್ಕಿಂತಲೂ ಮಿಗಿಲಾಗಿ, “ಎಲ್ಲವನ್ನು ದೇವರ ಮಹಿಮೆಗಾಗಿ” ಮಾಡುತ್ತಾ ನಾವು ಯೆಹೋವನಿಗೆ ಮತ್ತು ಆತನ ಜನರಿಗೆ ಘನತೆಯನ್ನು ತರಲು ಹಾಗೂ ದೇವರ ಶುಶ್ರೂಷಕರಾಗಿ ನಮ್ಮನ್ನು ಶಿಫಾರಸ್ಸು ಮಾಡಿಕೊಳ್ಳಲು ಬಯಸುತ್ತೇವೆ.—1 ಕೊರಿಂಥ 4:9; 10:31; 2 ಕೊರಿಂಥ 6:3, 4; 7:1.
14. ನಮ್ಮ ಹೊರತೋರಿಕೆ ಮತ್ತು ಶುದ್ಧತೆಯ ವಿಷಯದಲ್ಲಿ ನಾವು ಯಾವ ಪ್ರಶ್ನೆಗಳನ್ನು ಸ್ವತಃ ಕೇಳಿಕೊಳ್ಳಬೇಕು?
14 ನಾವು ಕ್ಷೇತ್ರ ಸೇವೆಯಲ್ಲಿ ಒಳಗೂಡುವಾಗ ಅಥವಾ ಕ್ರೈಸ್ತ ಕೂಟಕ್ಕೆ ಹಾಜರಾಗುವಾಗ ನಮ್ಮ ಉಡುಪು, ಕೇಶಾಲಂಕಾರ ಮತ್ತು ಶುದ್ಧತೆಯು ಇನ್ನೂ ಹೆಚ್ಚು ಪ್ರಮುಖವಾಗಿರುತ್ತದೆ. ಸ್ವತಃ ಹೀಗೆ ಕೇಳಿಕೊಳ್ಳಿ: ‘ನನ್ನ ಹೊರತೋರಿಕೆ ಮತ್ತು ವೈಯಕ್ತಿಕ ಶುದ್ಧತೆಯು ನನ್ನ ಕಡೆಗೆ ಅನುಚಿತ ಗಮನವನ್ನು ಸೆಳೆಯುತ್ತದೊ? ಇದು ಇತರರಿಗೆ ಮುಜುಗರವನ್ನು ಉಂಟುಮಾಡುತ್ತದೊ? ಸಭೆಯಲ್ಲಿ ಸೇವಾ ಸುಯೋಗಗಳಿಗೆ ಅರ್ಹನಾಗುವುದಕ್ಕಿಂತಲೂ ಈ ಕ್ಷೇತ್ರಗಳಲ್ಲಿ ನನಗಿರುವ ಹಕ್ಕುಗಳನ್ನು ನಾನು ಹೆಚ್ಚು ಪ್ರಾಮುಖ್ಯವಾಗಿ ಪರಿಗಣಿಸುತ್ತೇನೊ?’—ಕೀರ್ತನೆ 68:6; ಫಿಲಿಪ್ಪಿ 4:5; 1 ಪೇತ್ರ 5:6.
15. ದೇವರ ವಾಕ್ಯವು ಉಡುಪು, ಕೇಶಾಲಂಕಾರ ಮತ್ತು ಶುದ್ಧತೆಯ ವಿಷಯದಲ್ಲಿ ನಿಯಮಗಳ ಒಂದು ಪಟ್ಟಿಯನ್ನು ಕೊಡುವುದಿಲ್ಲವೇಕೆ?
15 ಬೈಬಲು ಕ್ರೈಸ್ತರಿಗೆ ಉಡುಪು, ಕೇಶಾಲಂಕಾರ ಮತ್ತು ಶುದ್ಧತೆಯ ವಿಷಯದಲ್ಲಿ ನಿಯಮಗಳ ಒಂದು ಪಟ್ಟಿಯನ್ನು ಕೊಡುವುದಿಲ್ಲ. ನಮ್ಮ ಆಯ್ಕೆಯ ಸ್ವಾತಂತ್ರ್ಯವನ್ನು ಅಥವಾ ನಮ್ಮ ಆಲೋಚನಾ ಸಾಮರ್ಥ್ಯದ ಉಪಯೋಗವನ್ನು ನಮ್ಮಿಂದ ಕಸಿದುಕೊಳ್ಳಲು ಯೆಹೋವನು ಬಯಸುವುದಿಲ್ಲ. ಬದಲಾಗಿ ನಾವು ಬೈಬಲ್ ಮೂಲತತ್ತ್ವಗಳ ಕುರಿತು ವಿವೇಚಿಸುವ ಹಾಗೂ ‘ಸರಿ ಮತ್ತು ತಪ್ಪಿನ ಭೇದವನ್ನು ತಿಳಿಯಲಿಕ್ಕಾಗಿ ಉಪಯೋಗದ ಮೂಲಕ ತಮ್ಮ ಗ್ರಹಣ ಶಕ್ತಿಗಳನ್ನು ತರಬೇತುಗೊಳಿಸಿಕೊಂಡವರಾಗಿರುವ’ ಪ್ರೌಢ ಜನರಾಗುವಂತೆ ಆತನು ಬಯಸುತ್ತಾನೆ. (ಇಬ್ರಿಯ 5:14) ಎಲ್ಲಕ್ಕಿಂತಲೂ ಮಿಗಿಲಾಗಿ, ನಾವು ಪ್ರೀತಿಯಿಂದ ಅಂದರೆ ದೇವರಿಗಾಗಿ ಮತ್ತು ನೆರೆಯವರಿಗಾಗಿರುವ ಪ್ರೀತಿಯಿಂದ ನಿರ್ದೇಶಿಸಲ್ಪಡಬೇಕೆಂದು ಆತನು ಬಯಸುತ್ತಾನೆ. (ಮಾರ್ಕ 12:30, 31 ಓದಿ.) ಈ ಇತಿಮಿತಿಯೊಳಗೇ, ವೈವಿಧ್ಯಮಯವಾದ ಉಡುಪು ಮತ್ತು ಕೇಶಾಲಂಕಾರವನ್ನು ಆಯ್ಕೆಮಾಡುವ ಸಾಧ್ಯತೆಯಿದೆ. ಇದಕ್ಕೆ ಪುರಾವೆಯನ್ನು ವರ್ಣರಂಜಿತವಾಗಿ ಉಡುಪುಗಳನ್ನು ಧರಿಸಿರುವ ಯೆಹೋವನ ಜನರ ಹರ್ಷಭರಿತ ಸಮೂಹಗಳು ಭೂಮಿಯಲ್ಲಿ ಎಲ್ಲಿಯೇ ಕೂಡಿಬರಲಿ ಅವರ ಮಧ್ಯೆ ಕಂಡುಕೊಳ್ಳಸಾಧ್ಯವಿದೆ.
ನಮ್ಮ ಜೀವನವನ್ನು ಸರಳವಾಗಿಟ್ಟುಕೊಳ್ಳುವುದು
16. ಲೋಕದ ಮನೋಭಾವವು ಯೇಸುವಿನ ಬೋಧನೆಗೆ ಹೇಗೆ ವಿರುದ್ಧವಾಗಿದೆ ಮತ್ತು ನಾವು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು?
16 ಈ ಲೋಕದ ಮನೋಭಾವವು ವಂಚನಾತ್ಮಕವಾಗಿದೆ ಮತ್ತು ಸಂತೋಷಕ್ಕಾಗಿ ಹಣವನ್ನು ಹಾಗೂ ಭೌತಿಕ ವಸ್ತುಗಳನ್ನು ಅವಲಂಬಿಸುವಂತೆ ಅದು ಲಕ್ಷಾಂತರ ಮಂದಿಯನ್ನು ಪ್ರಚೋದಿಸುತ್ತದೆ. ಆದರೆ ಯೇಸು, “ಒಬ್ಬನಿಗೆ ಹೇರಳವಾಗಿ ಆಸ್ತಿಯಿರುವುದಾದರೂ ಅವನು ಹೊಂದಿರುವ ಆಸ್ತಿಯಿಂದ ಅವನಿಗೆ ಜೀವವು ದೊರಕಲಾರದು” ಎಂದು ಹೇಳಿದನು. (ಲೂಕ 12:15) ಯೇಸು ವೈರಾಗ್ಯ ಅಥವಾ ವಿಪರೀತ ಸ್ವತ್ಯಾಗವನ್ನು ಅನುಮೋದಿಸಲಿಲ್ಲವಾದರೂ, ‘ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರಿಗೆ’ ಮತ್ತು ಆಧ್ಯಾತ್ಮಿಕ ವಿಷಯಗಳ ಮೇಲೆ ಕೇಂದ್ರಿತವಾದ ಸರಳ ಜೀವನವನ್ನು ನಡೆಸಿಕೊಂಡು ಹೋಗುವವರಿಗೆ ಜೀವ ಹಾಗೂ ನಿಜವಾದ ಸಂತೋಷವು ಲಭಿಸುತ್ತದೆ ಎಂದು ಕಲಿಸಿದನು. (ಮತ್ತಾಯ 5:3; 6:22) ಸ್ವತಃ ಹೀಗೆ ಕೇಳಿಕೊಳ್ಳಿ: ‘ಯೇಸು ಏನನ್ನು ಕಲಿಸಿದನೋ ಅದನ್ನು ನಾನು ನಿಜವಾಗಿಯೂ ನಂಬುತ್ತೇನೊ ಅಥವಾ ನಾನು “ಸುಳ್ಳಿಗೆ ತಂದೆ” ಆಗಿರುವವನಿಂದ ಪ್ರಭಾವಿಸಲ್ಪಡುತ್ತಿದ್ದೇನೊ? (ಯೋಹಾನ 8:44) ನನ್ನ ಮಾತುಗಳು, ಗುರಿಗಳು, ಆದ್ಯತೆಗಳು ಮತ್ತು ನನ್ನ ಜೀವನ ರೀತಿಯು ಏನನ್ನು ಬಯಲುಪಡಿಸುತ್ತದೆ?’—ಲೂಕ 6:45; 21:34-36; 2 ಯೋಹಾನ 6.
17. ಸರಳ ಜೀವನವನ್ನು ನಡೆಸಿಕೊಂಡು ಹೋಗುವವರು ಆನಂದಿಸುವಂಥ ಪ್ರಯೋಜನಗಳಲ್ಲಿ ಕೆಲವನ್ನು ಹೆಸರಿಸಿರಿ.
17 “ವಿವೇಕವು ತನ್ನ ಕ್ರಿಯೆಗಳ ಮೂಲಕ ಸಾಬೀತಾಗುತ್ತದೆ” ಎಂದು ಯೇಸು ಹೇಳಿದನು. (ಮತ್ತಾಯ 11:19) ಸರಳ ಜೀವನವನ್ನು ನಡೆಸಿಕೊಂಡು ಹೋಗುವವರು ಆನಂದಿಸುವಂಥ ಪ್ರಯೋಜನಗಳಲ್ಲಿ ಕೆಲವನ್ನು ಮಾತ್ರ ಪರಿಗಣಿಸಿರಿ. ರಾಜ್ಯ ಸೇವೆಯಲ್ಲಿ ಅವರು ನಿಜವಾದ ಚೈತನ್ಯವನ್ನು ಕಂಡುಕೊಳ್ಳುತ್ತಾರೆ. (ಮತ್ತಾಯ 11:29, 30) ಅವರು ಅನಗತ್ಯ ಚಿಂತೆಗಳಿಂದ ದೂರವಿರುತ್ತಾರೆ ಮತ್ತು ಹೀಗೆ ಹೆಚ್ಚಿನ ಮಾನಸಿಕ ಹಾಗೂ ಭಾವನಾತ್ಮಕ ನೋವಿನಿಂದ ತಮ್ಮನ್ನು ಕಾಪಾಡಿಕೊಳ್ಳುತ್ತಾರೆ. (1 ತಿಮೊಥೆಯ 6:9, 10 ಓದಿ.) ಜೀವನದ ಆವಶ್ಯಕ ವಿಷಯಗಳನ್ನು ಹೊಂದಿರುವುದರಲ್ಲೇ ತೃಪ್ತರಾಗಿರುವುದರಿಂದ, ತಮ್ಮ ಕುಟುಂಬಕ್ಕಾಗಿ ಮತ್ತು ಕ್ರೈಸ್ತ ಒಡನಾಡಿಗಳಿಗಾಗಿ ಅವರ ಬಳಿ ಹೆಚ್ಚು ಸಮಯವಿರುತ್ತದೆ. ಇದರ ಪರಿಣಾಮವಾಗಿ ಅವರು ಹಾಯಾಗಿ ನಿದ್ರಿಸಬಹುದು. (ಪ್ರಸಂಗಿ 5:12) ತಮ್ಮಿಂದ ಸಾಧ್ಯವಿರುವ ಯಾವುದೇ ವಿಧದಲ್ಲಿ ಕೊಡುವ ಮೂಲಕ ಕೊಡುವುದರಿಂದ ಸಿಗುವ ಮಹತ್ತರವಾದ ಸಂತೋಷವನ್ನು ಅವರು ಅನುಭವಿಸುತ್ತಾರೆ. (ಅಪೊಸ್ತಲರ ಕಾರ್ಯಗಳು 20:35) ಅವರು ‘ನಿರೀಕ್ಷೆಯಲ್ಲಿ ಸಮೃದ್ಧರಾಗಿದ್ದಾರೆ’ ಮತ್ತು ಆಂತರಿಕ ಶಾಂತಿ ಹಾಗೂ ಸಂತೃಪ್ತಿಯುಳ್ಳವರಾಗಿದ್ದಾರೆ. (ರೋಮನ್ನರಿಗೆ 15:13; ಮತ್ತಾಯ 6:31, 32) ಈ ಆಶೀರ್ವಾದಗಳು ನಿಜವಾಗಿಯೂ ಅತ್ಯಮೂಲ್ಯವಾಗಿವೆ!
“ಸಂಪೂರ್ಣ ರಕ್ಷಾಕವಚವನ್ನು” ಉಪಯೋಗಿಸುವುದು
18. ನಮ್ಮ ವೈರಿ, ಅವನ ವಿಧಾನಗಳು ಮತ್ತು ನಾವು ಹೋರಾಡುವಂಥ ರೀತಿಯನ್ನು ಬೈಬಲು ಹೇಗೆ ವರ್ಣಿಸುತ್ತದೆ?
18 ದೇವರ ಪ್ರೀತಿಯಲ್ಲಿ ತಮ್ಮನ್ನು ಕಾಪಾಡಿಕೊಳ್ಳುವವರು, ಕ್ರೈಸ್ತರಿಗೆ ಸಂತೋಷ ಮಾತ್ರವೇ ಅಲ್ಲ ನಿತ್ಯಜೀವವು ಸಹ ಸಿಗದಂತೆ ಮಾಡಲು ಬಯಸುವಂಥ ಸೈತಾನನಿಂದ ಆಧ್ಯಾತ್ಮಿಕ ಸಂರಕ್ಷಣೆಯನ್ನು ಸಹ ಪಡೆದುಕೊಳ್ಳುತ್ತಾರೆ. (1 ಪೇತ್ರ 5:8) “ನಮಗಿರುವ ಹೋರಾಟವು ರಕ್ತಮಾಂಸಗಳ ವಿರುದ್ಧವಾಗಿ ಅಲ್ಲ; ಸರಕಾರಗಳ ವಿರುದ್ಧವಾಗಿಯೂ ಅಧಿಕಾರಗಳ ವಿರುದ್ಧವಾಗಿಯೂ ಈ ಅಂಧಕಾರದ ಲೋಕಾಧಿಪತಿಗಳ ವಿರುದ್ಧವಾಗಿಯೂ ಸ್ವರ್ಗೀಯ ಸ್ಥಳಗಳಲ್ಲಿ ಇರುವ ದುಷ್ಟಾತ್ಮ ಸೇನೆಗಳ ವಿರುದ್ಧವಾಗಿಯೂ ಇದೆ” ಎಂದು ಪೌಲನು ಹೇಳಿದನು. (ಎಫೆಸ 6:12) “ಹೋರಾಟ” ಎಂದು ಭಾಷಾಂತರಿಸಲಾಗಿರುವ ಗ್ರೀಕ್ ಪದವು, ನಾವು ಕಾದಾಡುವುದು ಬಹಳ ದೂರದಿಂದ ಅಂದರೆ ಮರೆಯಾಗಿರುವ ಒಂದು ಬಂಕರ್‌ನ ಸುರಕ್ಷಿತ ಸ್ಥಳದಿಂದಲ್ಲ ಬದಲಾಗಿ ಕೈಕೈಮಿಲಾಯಿಸಿ ಕಾದಾಡುವುದನ್ನು ಸೂಚಿಸುತ್ತದೆ. ಇದಲ್ಲದೆ, ‘ಸರಕಾರಗಳು,’ ‘ಅಧಿಕಾರಗಳು’ ಮತ್ತು ‘ಲೋಕಾಧಿಪತಿಗಳು’ ಎಂಬ ಪದಗಳು, ಆತ್ಮಜೀವಿಗಳ ಕ್ಷೇತ್ರದಿಂದ ಮಾಡಲ್ಪಡುವ ಆಕ್ರಮಣಗಳು ತುಂಬ ಸುವ್ಯವಸ್ಥಿತವೂ ಉದ್ದೇಶಪೂರ್ವಕವೂ ಆಗಿರುತ್ತವೆ ಎಂಬುದನ್ನು ಸೂಚಿಸುತ್ತವೆ.
19. ಕ್ರೈಸ್ತರ ಆಧ್ಯಾತ್ಮಿಕ ರಕ್ಷಾಕವಚವನ್ನು ವರ್ಣಿಸಿರಿ.
19 ಆದರೆ ಮಾನವ ದೌರ್ಬಲ್ಯಗಳು ಮತ್ತು ಇತಿಮತಿಗಳ ಹೊರತೂ ನಾವು ಜಯವನ್ನು ಪಡೆಯಬಲ್ಲೆವು. ಹೇಗೆ? “ದೇವರು ದಯಪಾಲಿಸುವ ಸಂಪೂರ್ಣ ರಕ್ಷಾಕವಚವನ್ನು” ಉಪಯೋಗಿಸುವ ಮೂಲಕವೇ. (ಎಫೆಸ 6:13) ಆ ರಕ್ಷಾಕವಚವನ್ನು ವರ್ಣಿಸುತ್ತಾ ಎಫೆಸ 6:14-18 ಹೀಗೆ ತಿಳಿಸುತ್ತದೆ: “ಆದುದರಿಂದ, ನಿಮ್ಮ ಸೊಂಟವನ್ನು ಸತ್ಯದಿಂದ ಬಿಗಿದು, ನೀತಿಯ ಎದೆಕವಚವನ್ನು ಧರಿಸಿ, ನಿಮ್ಮ ಪಾದಗಳಿಗೆ ಶಾಂತಿಯ ಸುವಾರ್ತೆಯ ಸಲಕರಣೆಯನ್ನು ತೊಡಿಸಿ ಸ್ಥಿರವಾಗಿ ನಿಲ್ಲಿರಿ. ಎಲ್ಲಕ್ಕಿಂತಲೂ ಮಿಗಿಲಾಗಿ, ನಂಬಿಕೆಯೆಂಬ ದೊಡ್ಡ ಗುರಾಣಿಯನ್ನು ಹಿಡಿದುಕೊಳ್ಳಿರಿ; ಅದರಿಂದ ನೀವು ಕೆಡುಕನ ಅಗ್ನಿಬಾಣಗಳನ್ನೆಲ್ಲಾ ಆರಿಸಲು ಶಕ್ತರಾಗುವಿರಿ. ಇದಲ್ಲದೆ, ರಕ್ಷಣೆಯ ಶಿರಸ್ತ್ರಾಣವನ್ನು [ಅಥವಾ ನಿರೀಕ್ಷೆಯನ್ನು] ಮತ್ತು ಪವಿತ್ರಾತ್ಮದ ಕತ್ತಿಯನ್ನು ಅಂದರೆ ದೇವರ ವಾಕ್ಯವನ್ನು ಸ್ವೀಕರಿಸಿರಿ. ಪ್ರಾರ್ಥನೆ ಮತ್ತು ಯಾಚನೆಯ ಪ್ರತಿಯೊಂದು ರೂಪದಲ್ಲಿ, ಪ್ರತಿಯೊಂದು ಸನ್ನಿವೇಶದಲ್ಲಿ ಪವಿತ್ರಾತ್ಮ ಪ್ರೇರಿತರಾಗಿ ಪ್ರಾರ್ಥಿಸುತ್ತಾ ಇರಿ.”
20. ಒಬ್ಬ ಅಕ್ಷರಾರ್ಥ ಸೈನಿಕನಿಗಿಂತ ನಮ್ಮ ಸನ್ನಿವೇಶವು ಹೇಗೆ ಭಿನ್ನವಾಗಿದೆ?
20 ಆಧ್ಯಾತ್ಮಿಕ ರಕ್ಷಾಕವಚವು ದೇವರ ಒದಗಿಸುವಿಕೆಯಾಗಿರುವುದರಿಂದ ನಾವು ಅದನ್ನು ಎಲ್ಲ ಸಮಯಗಳಲ್ಲಿ ಧರಿಸಿಕೊಂಡಿರುವಲ್ಲಿ ಅದು ನಮ್ಮನ್ನು ಖಂಡಿತವಾಗಿಯೂ ಸಂರಕ್ಷಿಸುವುದು. ಸೈನಿಕರಿಗಾದರೋ ಕಾದಾಟದ ಅವಧಿಗಳ ಮಧ್ಯೆ ದೀರ್ಘವಾದ ಬಿಡುವಿರಬಹುದು, ಆದರೆ ಕ್ರೈಸ್ತರಿಗೆ ನಿರಂತರವಾಗಿ ಜೀವನ್ಮರಣಗಳ ಹೋರಾಟವಿರುತ್ತದೆ ಮತ್ತು ಇದು ದೇವರು ಸೈತಾನನ ಲೋಕವನ್ನು ನಾಶಮಾಡಿ ಎಲ್ಲ ದುಷ್ಟಾತ್ಮ ಜೀವಿಗಳನ್ನು ಅಗಾಧ ಸ್ಥಳದಲ್ಲಿ ಬಂಧಿಸುವ ತನಕ ನಿಲ್ಲುವುದಿಲ್ಲ. (ಪ್ರಕಟನೆ 12:17; 20:1-3) ಆದುದರಿಂದ ನೀವು ದೌರ್ಬಲ್ಯಗಳೊಂದಿಗೆ ಅಥವಾ ಕೆಟ್ಟ ಬಯಕೆಗಳೊಂದಿಗೆ ಹೋರಾಟ ನಡೆಸುತ್ತಿರುವಲ್ಲಿ ಪ್ರಯತ್ನವನ್ನು ಬಿಡಬೇಡಿ, ಏಕೆಂದರೆ ಯೆಹೋವನಿಗೆ ನಂಬಿಗಸ್ತರಾಗಿ ಉಳಿಯಬೇಕಾದರೆ ನಾವೆಲ್ಲರೂ ನಮ್ಮ ದೇಹವನ್ನು “ಜಜ್ಜಿ” ಸ್ವಾಧೀನಪಡಿಸಿಕೊಳ್ಳಬೇಕಾಗಿದೆ. (1 ಕೊರಿಂಥ 9:27) ವಾಸ್ತವದಲ್ಲಿ ನಾವು ಯಾವಾಗ ಹೋರಾಟವನ್ನು ಮಾಡುತ್ತಿರುವುದಿಲ್ಲವೋ ಆಗಲೇ ಹೆಚ್ಚು ಜಾಗ್ರತೆವಹಿಸಬೇಕಾಗಿದೆ.
21. ನಮ್ಮ ಆಧ್ಯಾತ್ಮಿಕ ಯುದ್ಧದಲ್ಲಿ ನಾವು ಹೇಗೆ ಮಾತ್ರ ಜಯಶೀಲರಾಗಬಲ್ಲೆವು?
21 ಅಷ್ಟುಮಾತ್ರವಲ್ಲ, ನಮ್ಮ ಸ್ವಂತ ಬಲದಲ್ಲಿ ನಾವು ಈ ಹೋರಾಟವನ್ನು ಜಯಿಸಲು ಸಾಧ್ಯವಿಲ್ಲ. ಆದುದರಿಂದ, “ಪ್ರತಿಯೊಂದು ಸನ್ನಿವೇಶದಲ್ಲಿ ಪವಿತ್ರಾತ್ಮ ಪ್ರೇರಿತರಾಗಿ” ಯೆಹೋವನಿಗೆ ಪ್ರಾರ್ಥಿಸುವ ಅಗತ್ಯವಿದೆಯೆಂದು ಪೌಲನು ನಮಗೆ ನೆನಪುಹುಟ್ಟಿಸುತ್ತಾನೆ. ಅದೇ ಸಮಯದಲ್ಲಿ ಯೆಹೋವನ ವಾಕ್ಯವನ್ನು ಅಧ್ಯಯನಮಾಡುವ ಮೂಲಕ ಮತ್ತು ಪ್ರತಿಯೊಂದು ಸಂದರ್ಭದಲ್ಲಿ ಜೊತೆ ‘ಸೈನಿಕರೊಂದಿಗೆ’ ಸಹವಾಸಮಾಡುವ ಮೂಲಕ ನಾವು ಯೆಹೋವನಿಗೆ ಕಿವಿಗೊಡಬೇಕು, ಏಕೆಂದರೆ ಈ ಹೋರಾಟದಲ್ಲಿ ಕಾದಾಡುತ್ತಿರುವವರು ನಾವೊಬ್ಬರೇ ಅಲ್ಲ! (ಫಿಲೆಮೋನ 2; ಇಬ್ರಿಯ 10:24, 25) ಈ ಎಲ್ಲ ಕ್ಷೇತ್ರಗಳಲ್ಲಿ ನಂಬಿಗಸ್ತರಾಗಿರುವವರು ಜಯಶೀಲರಾಗುವರು ಮಾತ್ರವಲ್ಲ ತಮ್ಮ ನಂಬಿಕೆಯ ಕುರಿತಾದ ಸವಾಲನ್ನೆದುರಿಸುವಾಗ ಅದನ್ನು ಬಲವಾಗಿ ಸಮರ್ಥಿಸಲು ಸಹ ಶಕ್ತರಾಗಿರುವರು.
ನಿಮ್ಮ ನಂಬಿಕೆಯನ್ನು ಸಮರ್ಥಿಸಲು ಸಿದ್ಧರಾಗಿರಿ
22, 23. (ಎ) ನಮ್ಮ ನಂಬಿಕೆಯನ್ನು ಸಮರ್ಥಿಸಲು ನಾವು ಏಕೆ ಸದಾ ಸಿದ್ಧರಾಗಿರಬೇಕು ಮತ್ತು ನಾವು ಸ್ವತಃ ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು? (ಬಿ) ಮುಂದಿನ ಅಧ್ಯಾಯದಲ್ಲಿ ಯಾವ ವಿಷಯವನ್ನು ಪರಿಗಣಿಸಲಾಗುವುದು?
22 “ನೀವು ಲೋಕದ ಭಾಗವಾಗಿರದ ಕಾರಣ . . . ಲೋಕವು ನಿಮ್ಮನ್ನು ದ್ವೇಷಿಸುತ್ತದೆ” ಎಂದು ಯೇಸು ಹೇಳಿದನು. (ಯೋಹಾನ 15:19) ಆದುದರಿಂದ ಕ್ರೈಸ್ತರು ಯಾವಾಗಲೂ ತಮ್ಮ ನಂಬಿಕೆಯನ್ನು ಸಮರ್ಥಿಸಲು ಸಿದ್ಧರಾಗಿರಬೇಕು ಮತ್ತು ಇದನ್ನು ಗೌರವದಿಂದಲೂ ಸೌಮ್ಯಭಾವದಿಂದಲೂ ಮಾಡಬೇಕು. (1 ಪೇತ್ರ 3:15 ಓದಿ.) ಸ್ವತಃ ಹೀಗೆ ಕೇಳಿಕೊಳ್ಳಿ: ‘ಯೆಹೋವನ ಸಾಕ್ಷಿಗಳು ಕೆಲವೊಮ್ಮೆ ಜನಪ್ರಿಯ ಅಭಿಪ್ರಾಯಕ್ಕೆ ವಿರುದ್ಧವಾದ ನಿಲುವನ್ನು ಏಕೆ ತೆಗೆದುಕೊಳ್ಳುತ್ತಾರೆ ಎಂಬುದು ನನಗೆ ಅರ್ಥವಾಗುತ್ತದೊ? ಇಂಥ ನಿಲುವನ್ನು ತೆಗೆದುಕೊಳ್ಳುವ ಸವಾಲನ್ನು ಎದುರಿಸುವಾಗ, ಬೈಬಲು ಹಾಗೂ ನಂಬಿಗಸ್ತ ಆಳು ಏನು ಹೇಳುತ್ತದೋ ಅದು ಸರಿಯಾಗಿದೆ ಎಂಬ ಪೂರ್ಣ ಮನವರಿಕೆ ನನಗಿದೆಯೊ? (ಮತ್ತಾಯ 24:45; ಯೋಹಾನ 17:17) ಯೆಹೋವನ ದೃಷ್ಟಿಯಲ್ಲಿ ಸರಿಯಾದುದನ್ನು ಮಾಡಬೇಕಾಗಿರುವಾಗ, ನಾನು ಭಿನ್ನವಾಗಿರಲು ಸಿದ್ಧನಾಗಿರುವುದು ಮಾತ್ರವಲ್ಲ ಭಿನ್ನವಾಗಿ ಕಂಡುಬರಲು ಸಂತೋಷಪಡುವವನೂ ಆಗಿದ್ದೇನೊ?’—ಕೀರ್ತನೆ 34:2; ಮತ್ತಾಯ 10:32, 33.
23 ಆದರೂ ಲೋಕದಿಂದ ನಮ್ಮನ್ನು ಪ್ರತ್ಯೇಕವಾಗಿರಿಸಿಕೊಳ್ಳುವ ನಮ್ಮ ಬಯಕೆಯು ಅನೇಕವೇಳೆ ಹೆಚ್ಚು ನವಿರಾದ ವಿಧಗಳಲ್ಲಿ ಪರೀಕ್ಷೆಗೆ ಒಡ್ಡಲ್ಪಡುತ್ತದೆ. ಉದಾಹರಣೆಗೆ, ಈ ಮುಂಚೆ ತಿಳಿಸಿದಂತೆ ಲೌಕಿಕ ಮನೋರಂಜನೆಯ ಮೂಲಕ ಪಿಶಾಚನು ಯೆಹೋವನ ಸೇವಕರನ್ನು ಲೋಕದೊಳಕ್ಕೆ ಸೆಳೆಯಲು ಪ್ರಯತ್ನಿಸುತ್ತಾನೆ. ನಮ್ಮನ್ನು ಚೈತನ್ಯಗೊಳಿಸುವ ಮತ್ತು ನಮಗೆ ಶುದ್ಧ ಮನಸ್ಸಾಕ್ಷಿಯನ್ನು ಕೊಡುವ ಹಿತಕರವಾದ ಮನೋರಂಜನೆಯನ್ನು ನಾವು ಹೇಗೆ ಆಯ್ಕೆಮಾಡಬಲ್ಲೆವು? ಈ ವಿಷಯವನ್ನು ಮುಂದಿನ ಅಧ್ಯಾಯದಲ್ಲಿ ಪರಿಗಣಿಸಲಾಗುವುದು.
a ಸಾ.ಶ. 33ರ ಪಂಚಾಶತ್ತಮದಿಂದ ಕ್ರಿಸ್ತನು ಭೂಮಿಯಲ್ಲಿರುವ ಅಭಿಷಿಕ್ತ ಹಿಂಬಾಲಕರ ಸಭೆಯ ಮೇಲೆ ರಾಜನಾಗಿ ಸೇವೆಮಾಡುತ್ತಿದ್ದಾನೆ. (ಕೊಲೊಸ್ಸೆ 1:13) 1914ರಲ್ಲಿ ಕ್ರಿಸ್ತನು ‘ಲೋಕದ ರಾಜ್ಯದ’ ಮೇಲೆ ರಾಜನಾಗಿ ಅಧಿಕಾರಪಡೆದುಕೊಂಡನು. ಆದುದರಿಂದ ಈಗಲೂ ಅಭಿಷಿಕ್ತ ಕ್ರೈಸ್ತರು ಮೆಸ್ಸೀಯ ರಾಜ್ಯದ ರಾಯಭಾರಿಗಳಾಗಿ ಕಾರ್ಯನಡಿಸುತ್ತಾರೆ.—ಪ್ರಕಟನೆ 11:15.
b ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ ಶಾಸ್ತ್ರಗ್ರಂಥದಿಂದ ತರ್ಕಿಸುವುದು (ಇಂಗ್ಲಿಷ್) ಪುಸ್ತಕದ ಪುಟಗಳು 389-393ನ್ನು ನೋಡಿ.
c “ಧ್ವಜ ವಂದನೆ, ಮತಚಲಾವಣೆ ಮತ್ತು ನಾಗರಿಕ ಸೇವೆ” ಎಂಬ ಪರಿಶಿಷ್ಟವನ್ನು ನೋಡಿ.