ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 2

ನೀವು ಒಳ್ಳೇ ಮನಸ್ಸಾಕ್ಷಿಯನ್ನು ಹೇಗೆ ಕಾಪಾಡಿಕೊಳ್ಳಬಲ್ಲಿರಿ?

ನೀವು ಒಳ್ಳೇ ಮನಸ್ಸಾಕ್ಷಿಯನ್ನು ಹೇಗೆ ಕಾಪಾಡಿಕೊಳ್ಳಬಲ್ಲಿರಿ?

“ಒಳ್ಳೇ ಮನಸ್ಸಾಕ್ಷಿಯುಳ್ಳವರಾಗಿರಿ.” —1 ಪೇತ್ರ 3:16.

1, 2. ದಿಕ್ಸೂಚಿಯು ಅತ್ಯಗತ್ಯ ಉಪಕರಣವಾಗಿದೆ ಏಕೆ ಮತ್ತು ಅದನ್ನು ಮನಸ್ಸಾಕ್ಷಿಗೆ ಹೇಗೆ ಹೋಲಿಸಬಹುದು?

ಒಬ್ಬ ನಾವಿಕನು ವಿಶಾಲವಾದ ಸಾಗರದ ಅಲೆಗಳ ಮಧ್ಯೆ ತನ್ನ ಹಡಗನ್ನು ನಡಿಸುತ್ತಾನೆ; ಒಬ್ಬ ಪಾದಯಾತ್ರಿಯು ನಿರ್ಜನ ಅರಣ್ಯವನ್ನು ಕಾಲುನಡಿಗೆಯಲ್ಲಿ ದಾಟುತ್ತಾನೆ; ಒಬ್ಬ ವಿಮಾನ ಚಾಲಕನು ತನ್ನ ವಿಮಾನವು ದಿಗಂತದಲ್ಲಿ ಒಂದು ಮೂಲೆಯಿಂದ ಇನ್ನೊಂದು ಮೂಲೆಯ ವರೆಗೂ ವ್ಯಾಪಿಸಿರುವ ಮೇಘಗಳ ಪದರಗಳ ಮೇಲೆ ಹಾರುವಾಗ ಅದನ್ನು ಮಾರ್ಗದರ್ಶಿಸುತ್ತಾನೆ. ಈ ಮೂವರ ಬಳಿಯೂ ಇರುವಂಥ ಒಂದು ಉಪಕರಣ ಯಾವುದೆಂದು ನಿಮಗೆ ಗೊತ್ತೊ? ಅದು ದಿಕ್ಸೂಚಿಯೇ. ವಿಶೇಷವಾಗಿ ಇತರ ಆಧುನಿಕ ತಂತ್ರಜ್ಞಾನದ ಸಹಾಯ ದೊರೆಯದಿದ್ದಾಗ ದಿಕ್ಸೂಚಿಯೂ ಇಲ್ಲದಿದ್ದಲ್ಲಿ ಅವರಲ್ಲಿ ಪ್ರತಿಯೊಬ್ಬನು ತನ್ನದೇ ಆದ ರೀತಿಯಲ್ಲಿ ದೊಡ್ಡ ತೊಂದರೆಗೆ ಒಳಗಾಗಬಹುದು.

2 ದಿಕ್ಸೂಚಿಯು ಒಂದು ಸರಳವಾದ ಉಪಕರಣ; ಸಾಮಾನ್ಯವಾಗಿ ಉತ್ತರ ದಿಕ್ಕಿಗೆ ನಿಲ್ಲುವ ಕಾಂತಸೂಜಿಯನ್ನು ಹೊಂದಿರುವಂಥ ಒಂದು ಸೂಚೀಫಲಕವಾಗಿದೆ. ಅದು ಸರಿಯಾಗಿ ಕೆಲಸಮಾಡುತ್ತಿರುವಾಗ ಮತ್ತು ವಿಶೇಷವಾಗಿ ನಿಷ್ಕೃಷ್ಟವಾದ ಒಂದು ನಕ್ಷೆಯೊಂದಿಗೆ ಉಪಯೋಗಿಸಲ್ಪಡುವಾಗ ಅದು ಜೀವರಕ್ಷಕವಾಗಿರಬಲ್ಲದು. ಕೆಲವು ವಿಧಗಳಲ್ಲಿ ಅದನ್ನು ಯೆಹೋವನು ನಮಗೆ ಕೊಟ್ಟಿರುವ ಅಮೂಲ್ಯ ಉಡುಗೊರೆಯಾದ ಮನಸ್ಸಾಕ್ಷಿಗೆ ಹೋಲಿಸಬಹುದು. (ಯಾಕೋಬ 1:17) ಮನಸ್ಸಾಕ್ಷಿ ಇಲ್ಲದಿರುವಲ್ಲಿ ನಾವು ಸಂಪೂರ್ಣವಾಗಿ ದಿಕ್ಕುಗಾಣದವರಾಗುವೆವು. ಅದನ್ನು ಸರಿಯಾಗಿ ಉಪಯೋಗಿಸುವಾಗ ಜೀವನದಲ್ಲಿ ನಾವು ಸಾಗಬೇಕಾದ ದಾರಿಯನ್ನು ಕಂಡುಕೊಳ್ಳಲು ಮತ್ತು ಸರಿಯಾದ ಮಾರ್ಗದಲ್ಲಿ ಉಳಿಯಲು ಅದು ನಮಗೆ ಸಹಾಯಮಾಡಬಲ್ಲದು. ಆದುದರಿಂದ ಮನಸ್ಸಾಕ್ಷಿ ಏನಾಗಿದೆ ಮತ್ತು ಅದು ಹೇಗೆ ಕಾರ್ಯನಡಿಸುತ್ತದೆ ಎಂಬುದನ್ನು ನಾವು ಪರಿಗಣಿಸೋಣ. ಅನಂತರ ನಾವು, (1) ಮನಸ್ಸಾಕ್ಷಿಯನ್ನು ಹೇಗೆ ತರಬೇತುಗೊಳಿಸಬಹುದು, (2) ನಾವು ಇತರರ ಮನಸ್ಸಾಕ್ಷಿಗಳನ್ನು ಏಕೆ ಪರಿಗಣಿಸಬೇಕು ಮತ್ತು (3) ಒಳ್ಳೇ ಮನಸ್ಸಾಕ್ಷಿ ಹೇಗೆ ಆಶೀರ್ವಾದಗಳನ್ನು ತರುತ್ತದೆ ಎಂಬ ಅಂಶಗಳನ್ನು ಚರ್ಚಿಸಬಲ್ಲೆವು.

ಮನಸ್ಸಾಕ್ಷಿ ಏನಾಗಿದೆ ಮತ್ತು ಅದು ಹೇಗೆ ಕಾರ್ಯನಡಿಸುತ್ತದೆ?

3. “ಮನಸ್ಸಾಕ್ಷಿ” ಎಂಬುದಕ್ಕಿರುವ ಗ್ರೀಕ್‌ ಪದದ ಅಕ್ಷರಾರ್ಥವೇನು ಮತ್ತು ಮನುಷ್ಯರಲ್ಲಿರುವ ಯಾವ ಅದ್ವಿತೀಯ ಸಾಮರ್ಥ್ಯವನ್ನು ಅದು ವರ್ಣಿಸುತ್ತದೆ?

3 ಬೈಬಲ್‌ನಲ್ಲಿ “ಮನಸ್ಸಾಕ್ಷಿ” ಎಂಬುದಕ್ಕಿರುವ ಗ್ರೀಕ್‌ ಪದದ ಅಕ್ಷರಾರ್ಥವು “ಸಹಜ್ಞಾನ ಅಥವಾ ತನ್ನಲ್ಲೇ ಇರುವಂಥ ಜ್ಞಾನ” ಎಂದಾಗಿದೆ. ಇತರ ಎಲ್ಲ ಭೂಜೀವಿಗಳಿಗೆ ಹೋಲಿಸುವಾಗ ನಮ್ಮನ್ನು ನಾವೇ ತಿಳಿದುಕೊಳ್ಳುವ ದೇವದತ್ತ ಸಾಮರ್ಥ್ಯ ನಮಗೆ ಮಾತ್ರ ಇದೆ. ಒಂದರ್ಥದಲ್ಲಿ, ತುಸು ನಿಂತು ನಮ್ಮನ್ನೇ ಗಮನಿಸಿ ನಾವು ನೈತಿಕವಾಗಿ ಯಥಾರ್ಥರಾಗಿದ್ದೇವೋ ಎಂದು ಪರೀಕ್ಷಿಸಿಕೊಳ್ಳಬಲ್ಲೆವು. ನಮ್ಮ ಮನಸ್ಸಾಕ್ಷಿಯು ಒಬ್ಬ ಆಂತರಿಕ ಸಾಕ್ಷಿಗಾರ ಅಥವಾ ತೀರ್ಪುಗಾರನಂತೆ ಕಾರ್ಯವೆಸಗುತ್ತಾ ನಮ್ಮ ಕ್ರಿಯೆಗಳನ್ನೂ ಮನೋಭಾವಗಳನ್ನೂ ಆಯ್ಕೆಗಳನ್ನೂ ಪರಿಶೀಲಿಸಬಲ್ಲದು. ಅದು ನಮ್ಮನ್ನು ಒಳ್ಳೇ ನಿರ್ಣಯದ ಕಡೆಗೆ ಮಾರ್ಗದರ್ಶಿಸಬಹುದು ಅಥವಾ ಕೆಟ್ಟ ನಿರ್ಣಯದ ಕುರಿತು ಎಚ್ಚರಿಕೆಯನ್ನು ನೀಡಬಹುದು. ತದನಂತರ ನಾವು ಒಳ್ಳೇ ಆಯ್ಕೆಯನ್ನು ಮಾಡಿದ್ದಕ್ಕಾಗಿ ಒಂದೇ ನಮ್ಮನ್ನು ಸಂತೈಸಬಹುದು ಇಲ್ಲವೆ ತಪ್ಪಾದ ಆಯ್ಕೆಯನ್ನು ಮಾಡಿದ್ದಕ್ಕಾಗಿ ತೀಕ್ಷ್ಣವಾಗಿ ಚುಚ್ಚುವ ಮೂಲಕ ನಮ್ಮನ್ನು ಶಿಕ್ಷಿಸಬಹುದು.

4, 5. (ಎ) ಆದಾಮಹವ್ವರಿಬ್ಬರಿಗೂ ಮನಸ್ಸಾಕ್ಷಿಯಿತ್ತು ಎಂಬುದು ನಮಗೆ ಹೇಗೆ ಗೊತ್ತು ಮತ್ತು ಅವರು ದೇವರ ನಿಯಮವನ್ನು ಅಲಕ್ಷಿಸಿದ ಪರಿಣಾಮವಾಗಿ ಏನಾಯಿತು? (ಬಿ) ಕ್ರೈಸ್ತಪೂರ್ವದ ನಂಬಿಗಸ್ತ ಜನರಲ್ಲಿ ಮನಸ್ಸಾಕ್ಷಿ ಕಾರ್ಯನಡಿಸಿದ್ದನ್ನು ಯಾವ ಉದಾಹರಣೆಗಳು ತೋರಿಸುತ್ತವೆ?

4 ಈ ಸಾಮರ್ಥ್ಯದೊಂದಿಗೆ ಪುರುಷನೂ ಸ್ತ್ರೀಯೂ ಸೃಷ್ಟಿಸಲ್ಪಟ್ಟರು. ಆದಾಮಹವ್ವರು ತಮ್ಮಲ್ಲಿ ಮನಸ್ಸಾಕ್ಷಿಯಿದೆ ಎಂಬುದನ್ನು ತೋರಿಸಿಕೊಟ್ಟರು. ಅವರು ಪಾಪಮಾಡಿದ ಬಳಿಕ ಅವರಿಗೆ ನಾಚಿಕೆ ಉಂಟಾದದ್ದರಲ್ಲಿ ಇದರ ಪುರಾವೆಯನ್ನು ನಾವು ಕಂಡುಕೊಳ್ಳುತ್ತೇವೆ. (ಆದಿಕಾಂಡ 3:7, 8) ಆದರೆ ಈ ಹಂತದಲ್ಲಿ ಅವರ ಬಾಧಿತ ಮನಸ್ಸಾಕ್ಷಿಯು ಅವರಿಗೆ ಯಾವ ಒಳಿತನ್ನೂ ಮಾಡಸಾಧ್ಯವಿರಲಿಲ್ಲ ಎಂಬುದು ದುಃಖಕರ ಸಂಗತಿಯಾಗಿದೆ. ಅವರು ಬೇಕುಬೇಕೆಂದೇ ದೇವರ ನಿಯಮವನ್ನು ಅಲಕ್ಷಿಸಿದ್ದರು. ಹೀಗೆ ಅವರು ಗೊತ್ತಿದ್ದೂ ದಂಗೆಕೋರರಾಗಲು ಅಂದರೆ ಯೆಹೋವ ದೇವರ ವಿರೋಧಿಗಳಾಗಲು ಆರಿಸಿಕೊಂಡರು. ಪರಿಪೂರ್ಣ ಮಾನವರಾಗಿದ್ದ ಅವರಿಗೆ ತಾವು ಏನು ಮಾಡುತ್ತಿದ್ದೇವೆ ಎಂಬುದು ಗೊತ್ತಿದ್ದುದರಿಂದ ದೇವರ ಬಳಿಗೆ ಹಿಂದಿರುಗುವ ಅವಕಾಶವನ್ನು ಅವರು ಕಳೆದುಕೊಂಡಿದ್ದರು.

5 ಆದಾಮಹವ್ವರಿಗೆ ಅಸದೃಶವಾಗಿ ಅಪರಿಪೂರ್ಣ ಮಾನವರಲ್ಲಿ ಅನೇಕರು ತಮ್ಮ ಮನಸ್ಸಾಕ್ಷಿಗೆ ಕಿವಿಗೊಟ್ಟಿದ್ದಾರೆ. ಉದಾಹರಣೆಗೆ ನಂಬಿಗಸ್ತನಾದ ಯೋಬನು, “ನನ್ನ ನೀತಿಯನ್ನು ಎಂದಿಗೂ ಬಿಡದೆ ಭದ್ರವಾಗಿ ಹಿಡಿದುಕೊಳ್ಳುವೆನು. ನನ್ನ ಜೀವಮಾನದ ಯಾವ ದಿನಚರ್ಯದಲ್ಲಿಯೂ ಮನಸ್ಸಾಕ್ಷಿಯು ತಪ್ಪುತೋರಿಸುವದಿಲ್ಲ” ಎಂದು ಹೇಳಶಕ್ತನಾದನು. (ಯೋಬ 27:6) ಯೋಬನು ನಿಜವಾಗಿಯೂ ಆತ್ಮಸಾಕ್ಷಿಯಂತೆ ನಡೆಯುವವನಾಗಿದ್ದನು. ಅವನು ತನ್ನ ಮನಸ್ಸಾಕ್ಷಿಗೆ ಕಿವಿಗೊಡುವ ವಿಷಯದಲ್ಲಿ ಜಾಗ್ರತೆಯುಳ್ಳವನಾಗಿದ್ದು ಅದು ತನ್ನ ಕ್ರಿಯೆಗಳನ್ನೂ ನಿರ್ಣಯಗಳನ್ನೂ ಮಾರ್ಗದರ್ಶಿಸುವಂತೆ ಬಿಟ್ಟನು. ಆದುದರಿಂದ ತನ್ನ ಮನಸ್ಸಾಕ್ಷಿ ತನ್ನನ್ನು ಹಂಗಿಸಲಿಲ್ಲ ಅಥವಾ ನಾಚಿಕೆ ಮತ್ತು ದೋಷಿಭಾವದಿಂದ ತನ್ನನ್ನು ಪೀಡಿಸಲಿಲ್ಲ ಎಂದು ಅವನು ನಿಜವಾದ ಸಂತೃಪ್ತಿಯಿಂದ ಹೇಳಶಕ್ತನಾದನು. ಯೋಬ ಮತ್ತು ದಾವೀದನ ಮಧ್ಯೆ ಇರುವ ವ್ಯತ್ಯಾಸವನ್ನು ಗಮನಿಸಿರಿ. ದಾವೀದನು ಯೆಹೋವನ ಅಭಿಷಿಕ್ತ ರಾಜನಾದ ಸೌಲನಿಗೆ ಅಗೌರವವನ್ನು ತೋರಿಸಿದಾಗ “ಅನಂತರದಲ್ಲಿ . . . ಅವನ ಮನಸ್ಸಾಕ್ಷಿಯು ಅವನನ್ನು ಹಂಗಿಸತೊಡಗಿತು.” (1 ಸಮುವೇಲ 24:5) ಮನಸ್ಸಾಕ್ಷಿಯ ಈ ತೀಕ್ಷ್ಣವಾದ ಚುಚ್ಚುವಿಕೆಗಳು ಖಂಡಿತವಾಗಿಯೂ ದಾವೀದನಿಗೆ ಪ್ರಯೋಜನವನ್ನು ತಂದವು; ಅಂದಿನಿಂದ ಇಂತಹ ಅಗೌರವವನ್ನು ತೋರಿಸದಿರುವಂತೆ ಅವನಿಗೆ ಪಾಠ ಕಲಿಸಿದವು.

6. ಮನಸ್ಸಾಕ್ಷಿಯು ಇಡೀ ಮಾನವಕುಲಕ್ಕೆ ಕೊಡಲ್ಪಟ್ಟಿರುವ ಉಡುಗೊರೆಯಾಗಿದೆ ಎಂಬುದನ್ನು ಯಾವುದು ತೋರಿಸುತ್ತದೆ?

6 ಮನಸ್ಸಾಕ್ಷಿ ಎಂಬ ಈ ಉಡುಗೊರೆ ಯೆಹೋವನ ಸಾಕ್ಷಿಗಳಿಗೆ ಮಾತ್ರ ಕೊಡಲ್ಪಟ್ಟಿದೆಯೊ? ಅಪೊಸ್ತಲ ಪೌಲನ ಈ ಪ್ರೇರಿತ ಮಾತುಗಳನ್ನು ಪರಿಗಣಿಸಿರಿ: “ಧರ್ಮಶಾಸ್ತ್ರವಿಲ್ಲದ ಅನ್ಯಜನಾಂಗಗಳ ಜನರು ಸ್ವಾಭಾವಿಕವಾಗಿಯೇ ಧರ್ಮಶಾಸ್ತ್ರದಲ್ಲಿರುವ ವಿಷಯಗಳನ್ನು ಮಾಡುವಾಗೆಲ್ಲಾ ಅವರು ಧರ್ಮಶಾಸ್ತ್ರವಿಲ್ಲದವರಾದರೂ ತಮಗೆ ತಾವೇ ಧರ್ಮಶಾಸ್ತ್ರವಾಗಿದ್ದಾರೆ. ಅವರು ತಮ್ಮ ನಡತೆಯಿಂದಲೇ ಧರ್ಮಶಾಸ್ತ್ರವು ತಮ್ಮ ಹೃದಯದಲ್ಲಿ ಬರೆಯಲ್ಪಟ್ಟಿದೆ ಎಂಬುದನ್ನು ತೋರಿಸುತ್ತಾರೆ. ಇದಕ್ಕೆ ಅವರ ಮನಸ್ಸಾಕ್ಷಿಯೇ ಸಾಕ್ಷಿಕೊಡುತ್ತದೆ. ಅವರ ಆಲೋಚನೆಗಳು ಒಂದಕ್ಕೊಂದು ಅವರು ತಪ್ಪಿತಸ್ಥರು ಅಥವಾ ತಪ್ಪಿತಸ್ಥರಲ್ಲ ಎಂಬುದನ್ನು ಸೂಚಿಸುತ್ತವೆ.” (ರೋಮನ್ನರಿಗೆ 2:14, 15) ಯೆಹೋವನ ನಿಯಮಗಳ ಪರಿಚಯವೇ ಇಲ್ಲದವರು ಸಹ ಕೆಲವೊಮ್ಮೆ ದೈವಿಕ ಮೂಲತತ್ತ್ವಗಳಿಗೆ ಹೊಂದಿಕೆಯಲ್ಲಿ ಕ್ರಿಯೆಗೈಯುವಂತೆ ಈ ಆಂತರಿಕ ಸಾಕ್ಷಿಗಾರನಿಂದ ಪ್ರಚೋದಿಸಲ್ಪಡಬಹುದು.

7. ಮನಸ್ಸಾಕ್ಷಿ ಕೆಲವೊಮ್ಮೆ ಏಕೆ ತಪ್ಪು ನಿರ್ದೇಶನವನ್ನು ಕೊಡಬಹುದು?

7 ಆದರೂ ಮನಸ್ಸಾಕ್ಷಿ ಕೆಲವೊಮ್ಮೆ ತಪ್ಪು ನಿರ್ದೇಶನವನ್ನು ಕೊಡಬಹುದು. ಏಕೆ? ಒಂದು ದಿಕ್ಸೂಚಿಯನ್ನು ಲೋಹದ ವಸ್ತುವಿನ ಬಳಿ ಇಡುವುದಾದರೆ ಅದು ಉತ್ತರ ದಿಕ್ಕನ್ನು ಬಿಟ್ಟು ಬೇರೊಂದು ದಿಕ್ಕಿನ ಕಡೆಗೆ ತಿರುಗಿಕೊಳ್ಳುವಂತೆ ಪ್ರಭಾವಿಸಲ್ಪಡಬಹುದು. ಮತ್ತು ದಿಕ್ಸೂಚಿಯನ್ನು ಒಂದು ನಿಷ್ಕೃಷ್ಟ ನಕ್ಷೆಯಿಲ್ಲದೆ ಉಪಯೋಗಿಸುವಲ್ಲಿ ಅದರಿಂದ ಹೆಚ್ಚಿನ ಪ್ರಯೋಜನವೇನೂ ಸಿಗದಿರಬಹುದು. ತದ್ರೀತಿಯಲ್ಲಿ ನಮ್ಮ ಹೃದಯದ ಸ್ವಾರ್ಥಭರಿತ ಆಶೆಗಳು ನಮ್ಮ ಮೇಲೆ ಅನುಚಿತ ಪ್ರಭಾವವನ್ನು ಬೀರುವುದಾದರೆ ನಮ್ಮ ಮನಸ್ಸಾಕ್ಷಿ ನಮ್ಮನ್ನು ತಪ್ಪು ದಿಕ್ಕಿಗೆ ನಿರ್ದೇಶಿಸಬಹುದು. ಅದನ್ನು ದೇವರ ವಾಕ್ಯದ ಖಚಿತವಾದ ಮಾರ್ಗದರ್ಶನವಿಲ್ಲದೆ ಉಪಯೋಗಿಸುವಲ್ಲಿ ಪ್ರಾಮುಖ್ಯವಾದ ಅನೇಕ ವಿಷಯಗಳಲ್ಲಿ ಸರಿ ಮತ್ತು ತಪ್ಪಿನ ನಡುವಣ ವ್ಯತ್ಯಾಸವನ್ನು ನಾವು ಗ್ರಹಿಸಲು ಅಸಮರ್ಥರಾಗಬಹುದು. ವಾಸ್ತವದಲ್ಲಿ ನಮ್ಮ ಮನಸ್ಸಾಕ್ಷಿ ಸರಿಯಾಗಿ ಕಾರ್ಯನಡಿಸಬೇಕಾದರೆ ನಮಗೆ ಯೆಹೋವನ ಪವಿತ್ರಾತ್ಮದ ಮಾರ್ಗದರ್ಶನ ಬೇಕಾಗಿದೆ. ‘ಪವಿತ್ರಾತ್ಮಕ್ಕೆ ಸಹಮತದಲ್ಲಿ ನನ್ನ ಮನಸ್ಸಾಕ್ಷಿಯು ನನ್ನೊಂದಿಗೆ ಸಾಕ್ಷಿನೀಡುತ್ತದೆ’ ಎಂದು ಪೌಲನು ಬರೆದನು. (ರೋಮನ್ನರಿಗೆ 9:1) ಆದರೆ ನಮ್ಮ ಮನಸ್ಸಾಕ್ಷಿ ಯೆಹೋವನ ಪವಿತ್ರಾತ್ಮಕ್ಕೆ ಹೊಂದಿಕೆಯಲ್ಲಿದೆ ಎಂಬುದನ್ನು ನಾವು ಹೇಗೆ ಖಚಿತಪಡಿಸಿಕೊಳ್ಳಬಲ್ಲೆವು? ಇದು ತರಬೇತಿಗೆ ಸಂಬಂಧಪಟ್ಟ ವಿಷಯವಾಗಿದೆ.

ಮನಸ್ಸಾಕ್ಷಿಯನ್ನು ಹೇಗೆ ತರಬೇತುಗೊಳಿಸಬಹುದು?

8. (ಎ) ಹೃದಯವು ಮನಸ್ಸಾಕ್ಷಿಯನ್ನು ಹೇಗೆ ಪ್ರಭಾವಿಸಬಹುದು ಮತ್ತು ನಮ್ಮ ನಿರ್ಣಯಗಳಲ್ಲಿ ನಾವು ಯಾವುದಕ್ಕೆ ಪ್ರಮುಖತೆ ಕೊಡಬೇಕು? (ಬಿ) ಒಬ್ಬ ಕ್ರೈಸ್ತನಿಗೆ ಶುದ್ಧ ಮನಸ್ಸಾಕ್ಷಿ ಇರುವುದು ಮಾತ್ರವೇ ಯಾವಾಗಲೂ ಸಾಕಾಗುವುದಿಲ್ಲವೇಕೆ? (ಪಾದಟಿಪ್ಪಣಿ ನೋಡಿ.)

8 ಮನಸ್ಸಾಕ್ಷಿಯ ಮೇಲೆ ಆಧರಿತವಾದ ನಿರ್ಣಯವನ್ನು ನೀವು ಹೇಗೆ ಮಾಡುತ್ತೀರಿ? ಕೆಲವರು ಕೇವಲ ತಮ್ಮ ಆಂತರಿಕ ಆಲೋಚನೆಗಳನ್ನು ಮತ್ತು ಭಾವನೆಗಳನ್ನು ಪರಿಶೀಲಿಸಿ ಏನು ಮಾಡಬೇಕೆಂಬ ನಿರ್ಣಯಕ್ಕೆ ಬರುವಂತೆ ತೋರುತ್ತದೆ. ಬಳಿಕ ಅವರು, “ನನ್ನ ಮನಸ್ಸಾಕ್ಷಿಗೆ ಇದು ತಪ್ಪಾಗಿ ತೋರುವುದಿಲ್ಲ” ಎಂದು ಹೇಳಬಹುದು. ಹೃದಯದ ಇಚ್ಛೆಗಳು ಎಷ್ಟು ಬಲವಾಗಿರಬಹುದೆಂದರೆ ಅವು ಮನಸ್ಸಾಕ್ಷಿಯ ಮೇಲೂ ಪ್ರಭಾವಬೀರಬಲ್ಲವು. “ಹೃದಯವು ಎಲ್ಲಕ್ಕಿಂತಲೂ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿದೆ; ಅದನ್ನು ಯಾರು ತಿಳಿದಾರು?” ಎಂದು ಬೈಬಲ್‌ ಹೇಳುತ್ತದೆ. (ಯೆರೆಮೀಯ 17:9) ಆದುದರಿಂದ ನಮ್ಮ ಹೃದಯವು ಏನನ್ನು ಆಶಿಸುತ್ತದೆ ಎಂಬುದಕ್ಕೆ ಅತಿ ಹೆಚ್ಚು ಪರಿಗಣನೆಯನ್ನು ಕೊಡಬಾರದು. ಅದರ ಬದಲಿಗೆ, ಯೆಹೋವ ದೇವರನ್ನು ಯಾವುದು ಸಂತೋಷಪಡಿಸುತ್ತದೆ ಎಂಬುದನ್ನು ನಾವು ಮೊದಲು ಪರಿಗಣಿಸಲು ಬಯಸುತ್ತೇವೆ. *

9. ದೇವಭಯ ಎಂದರೇನು ಮತ್ತು ಅದು ನಮ್ಮ ಮನಸ್ಸಾಕ್ಷಿಯನ್ನು ಹೇಗೆ ಪ್ರಭಾವಿಸತಕ್ಕದ್ದು?

9 ಒಂದು ನಿರ್ಣಯವು ನಮ್ಮ ಶಿಕ್ಷಿತ ಮನಸ್ಸಾಕ್ಷಿಯ ಮೇಲೆ ಆಧರಿತವಾಗಿರುವಲ್ಲಿ ಅದು ನಮ್ಮ ವೈಯಕ್ತಿಕ ಆಶೆಗಳನ್ನಲ್ಲ ಬದಲಿಗೆ ನಮ್ಮ ದೇವಭಯವನ್ನು ಪ್ರತಿಬಿಂಬಿಸುವುದು. ಈ ಸಂಬಂಧದಲ್ಲಿ ಸೂಕ್ತವಾದ ಒಂದು ಉದಾಹರಣೆಯನ್ನು ಪರಿಗಣಿಸಿರಿ. ನಂಬಿಗಸ್ತ ರಾಜ್ಯಪಾಲನಾಗಿದ್ದ ನೆಹೆಮೀಯನು ಯೆರೂಸಲೇಮಿನ ಜನರಿಂದ ಪಾವತಿಗಳನ್ನೂ ತೆರಿಗೆಗಳನ್ನೂ ವಸೂಲುಮಾಡುವ ಹಕ್ಕನ್ನು ಹೊಂದಿದ್ದನು. ಆದರೆ ಅವನು ಹಾಗೆ ಮಾಡಲಿಲ್ಲ. ಏಕೆ? ದೇವಜನರ ಮೇಲೆ ದಬ್ಬಾಳಿಕೆ ನಡಿಸುವ ಮೂಲಕ ಯೆಹೋವನ ಅನುಗ್ರಹವನ್ನು ಕಳೆದುಕೊಳ್ಳುವ ಆಲೋಚನೆಯೇ ಅವನಿಗೆ ಅಪ್ರಿಯವಾಗಿತ್ತು. ‘ನಾನಾದರೋ ದೇವರಲ್ಲಿ ಭಯಭಕ್ತಿಯುಳ್ಳವನಾಗಿರುವದರಿಂದ ಹಾಗೆ ಮಾಡಲಿಲ್ಲ’ ಎಂದು ಅವನು ಹೇಳಿದನು. (ನೆಹೆಮೀಯ 5:15) ಯಥಾರ್ಥವಾದ ದೇವಭಯ ಅಂದರೆ ನಮ್ಮ ಸ್ವರ್ಗೀಯ ತಂದೆಯನ್ನು ಅಪ್ರಸನ್ನಗೊಳಿಸುವ ಪೂರ್ಣಹೃದಯದ ಭಯ ಅತ್ಯಗತ್ಯವಾಗಿದೆ. ನಾವು ನಿರ್ಣಯಗಳನ್ನು ಮಾಡಲಿಕ್ಕಿರುವಾಗ ಇಂತಹ ಪೂಜ್ಯಭಾವದ ಭಯವು ದೇವರ ವಾಕ್ಯದಿಂದ ಮಾರ್ಗದರ್ಶನವನ್ನು ಪಡೆದುಕೊಳ್ಳಲು ಪ್ರಯತ್ನಿಸುವಂತೆ ನಮ್ಮನ್ನು ಪ್ರಚೋದಿಸುವುದು.

10, 11. ಮದ್ಯಪಾನೀಯಗಳನ್ನು ಕುಡಿಯುವ ವಿಷಯದಲ್ಲಿ ಯಾವ ಬೈಬಲ್‌ ಮೂಲತತ್ತ್ವಗಳು ಅನ್ವಯಿಸುತ್ತವೆ ಮತ್ತು ಅವುಗಳನ್ನು ಅನ್ವಯಿಸಿಕೊಳ್ಳುವುದರಲ್ಲಿ ನಾವು ದೇವರ ಮಾರ್ಗದರ್ಶನವನ್ನು ಹೇಗೆ ಪಡೆಯಬಹುದು?

10 ಉದಾಹರಣೆಗಾಗಿ ಮದ್ಯಪಾನೀಯಗಳ ವಿಷಯವನ್ನು ತೆಗೆದುಕೊಳ್ಳಿ. ಸಾಮಾಜಿಕ ಗೋಷ್ಠಿಗಳಲ್ಲಿ ‘ನಾನು ಮದ್ಯವನ್ನು ಕುಡಿಯಲೊ ಬೇಡವೊ’ ಎಂಬ ನಿರ್ಣಯವನ್ನು ನಮ್ಮಲ್ಲಿ ಅನೇಕರು ಮಾಡಬೇಕಾಗುತ್ತದೆ. ಮೊದಲಾಗಿ ನಾವು ಕೆಲವು ವಿಷಯಗಳನ್ನು ತಿಳಿದುಕೊಳ್ಳಬೇಕಾಗಿದೆ. ಯಾವ ಬೈಬಲ್‌ ಮೂಲತತ್ತ್ವಗಳು ಈ ವಿಷಯಕ್ಕೆ ಅನ್ವಯವಾಗುತ್ತವೆ? ಮದ್ಯದ ಮಿತವಾದ ಬಳಕೆಯನ್ನು ಬೈಬಲ್‌ ಖಂಡಿಸುವುದಿಲ್ಲ. ದ್ರಾಕ್ಷಾಮದ್ಯವನ್ನು ಉಡುಗೊರೆಯಾಗಿ ಕೊಟ್ಟಿರುವುದಕ್ಕಾಗಿ ಅದು ಯೆಹೋವನನ್ನು ಕೊಂಡಾಡುತ್ತದೆ. (ಕೀರ್ತನೆ 104:14, 15) ಆದರೆ ವಿಪರೀತ ಕುಡಿಯುವುದನ್ನು ಮತ್ತು ಭಾರೀ ಮೋಜಿನ ಪಾನಗೋಷ್ಠಿಯನ್ನು ಬೈಬಲ್‌ ಖಂಡಿಸುತ್ತದೆ. (ಲೂಕ 21:34; ರೋಮನ್ನರಿಗೆ 13:13) ಮಾತ್ರವಲ್ಲದೆ ಅದು ಕುಡುಕತನವನ್ನು ಹಾದರ ಮತ್ತು ವ್ಯಭಿಚಾರದಂಥ ತುಂಬ ಗಂಭೀರವಾದ ಪಾಪಗಳೊಂದಿಗೆ ಪಟ್ಟಿಮಾಡುತ್ತದೆ. *1 ಕೊರಿಂಥ 6:9, 10.

11 ಒಬ್ಬ ಕ್ರೈಸ್ತನ ಮನಸ್ಸಾಕ್ಷಿಯು ಇಂತಹ ಮೂಲತತ್ತ್ವಗಳಿಂದ ಶಿಕ್ಷಿತವಾಗಿ ಸೂಕ್ಷ್ಮಸಂವೇದಿಯಾಗುವಂತೆ ಮಾಡಲ್ಪಡುತ್ತದೆ. ಹೀಗೆ ಒಂದು ಸಾಮಾಜಿಕ ಗೋಷ್ಠಿಯಲ್ಲಿ ಮದ್ಯವನ್ನು ಕುಡಿಯುವುದರ ಬಗ್ಗೆ ನಿರ್ಣಯವನ್ನು ಮಾಡಲಿಕ್ಕಿರುವಾಗ ನಾವು ಈ ಪ್ರಶ್ನೆಗಳನ್ನು ಸ್ವತಃ ಕೇಳಿಕೊಳ್ಳಬೇಕು: ‘ಯಾವ ರೀತಿಯ ಗೋಷ್ಠಿಯನ್ನು ಏರ್ಪಡಿಸಲಾಗಿದೆ? ಅದು ಮಿತಿಮೀರಿ ಹೋಗಿ ಭಾರೀ ಮೋಜಿನ ಪಾನಗೋಷ್ಠಿಯಾಗಿ ಪರಿಣಮಿಸುವ ಸಾಧ್ಯತೆಯಿದೆಯೊ? ನನ್ನ ಪ್ರವೃತ್ತಿ ಏನು? ನಾನು ಮದ್ಯಕ್ಕಾಗಿ ಹಾತೊರೆಯುತ್ತೇನೊ, ಅದರ ಮೇಲೆ ಅವಲಂಬಿಸಿದ್ದೇನೊ, ನನ್ನ ಮನಃಸ್ಥಿತಿ ಮತ್ತು ವರ್ತನೆಯನ್ನು ನಿಯಂತ್ರಿಸಲು ಅದನ್ನು ಉಪಯೋಗಿಸುತ್ತೇನೊ? ನನ್ನ ಕುಡಿತವನ್ನು ಮಿತವಾಗಿಡಲು ಬೇಕಾದ ಸ್ವನಿಯಂತ್ರಣ ನನ್ನಲ್ಲಿದೆಯೊ?’ ನಾವು ಬೈಬಲ್‌ ಮೂಲತತ್ತ್ವಗಳ ಕುರಿತು ಮತ್ತು ಅವು ಎಬ್ಬಿಸುವ ಪ್ರಶ್ನೆಗಳ ಕುರಿತು ಆಲೋಚಿಸುವಾಗ ಯೆಹೋವನ ಮಾರ್ಗದರ್ಶನಕ್ಕಾಗಿ ಪ್ರಾರ್ಥಿಸುವುದು ಒಳ್ಳೇದು. (ಕೀರ್ತನೆ 139:23, 24 ಓದಿ.) ಹೀಗೆ ಮಾಡುವಾಗ ಯೆಹೋವನು ನಮ್ಮನ್ನು ತನ್ನ ಪವಿತ್ರಾತ್ಮದಿಂದ ಮಾರ್ಗದರ್ಶಿಸುವಂತೆ ನಾವು ಕೇಳಿಕೊಳ್ಳುತ್ತೇವೆ. ಅಷ್ಟುಮಾತ್ರವಲ್ಲ, ನಮ್ಮ ಮನಸ್ಸಾಕ್ಷಿ ದೈವಿಕ ಮೂಲತತ್ತ್ವಗಳೊಂದಿಗೆ ಹೊಂದಿಕೆಯಲ್ಲಿರುವಂತೆಯೂ ನಾವು ಅದನ್ನು ತರಬೇತುಗೊಳಿಸುತ್ತೇವೆ. ಆದರೆ ನಾವು ನಿರ್ಣಯಗಳನ್ನು ಮಾಡಲಿಕ್ಕಿರುವಾಗ ಮತ್ತೊಂದು ವಿಷಯದ ಕುರಿತೂ ಗಂಭೀರವಾಗಿ ಆಲೋಚಿಸಬೇಕಾಗಿದೆ.

ಇತರರ ಮನಸ್ಸಾಕ್ಷಿಗಳನ್ನು ಏಕೆ ಪರಿಗಣಿಸಬೇಕು?

ನೀವು ಮದ್ಯಪಾನೀಯವನ್ನು ಸೇವಿಸಬೇಕೊ ಬಾರದೊ ಎಂದು ನಿರ್ಣಯಿಸಲು ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿ ನಿಮಗೆ ಸಹಾಯಮಾಡಬಲ್ಲದು

12, 13. ಕ್ರೈಸ್ತ ಮನಸ್ಸಾಕ್ಷಿಗಳಲ್ಲಿ ಭಿನ್ನತೆಗಳಿರಲು ಕೆಲವು ಕಾರಣಗಳೇನು ಮತ್ತು ಇಂತಹ ಭಿನ್ನತೆಗಳಿಗೆ ನಾವು ಹೇಗೆ ಪ್ರತಿಕ್ರಿಯೆ ತೋರಿಸಬೇಕು?

12 ಕ್ರೈಸ್ತರ ಮನಸ್ಸಾಕ್ಷಿಗಳು ಎಷ್ಟು ಭಿನ್ನವಾಗಿರಸಾಧ್ಯವಿದೆ ಎಂಬುದನ್ನು ನೋಡಿ ನಿಮಗೆ ಕೆಲವೊಮ್ಮೆ ಆಶ್ಚರ್ಯವಾಗಬಹುದು. ಒಬ್ಬನಿಗೆ ಒಂದು ರೂಢಿ ಅಥವಾ ಪದ್ಧತಿಯು ಆಕ್ಷೇಪಣೀಯವಾಗಿ ಕಂಡುಬರುತ್ತದೆ; ಆದರೆ ಮತ್ತೊಬ್ಬನಿಗೆ ಅದು ಇಷ್ಟವಾಗುತ್ತದೆ ಮತ್ತು ಅದನ್ನು ಖಂಡಿಸಲು ಯಾವುದೇ ಆಧಾರವನ್ನು ಅವನು ಕಾಣುವುದಿಲ್ಲ. ಉದಾಹರಣೆಗೆ, ಸಾಮಾಜಿಕ ಗೋಷ್ಠಿಯಲ್ಲಿ ಕುಡಿಯುವ ವಿಷಯದಲ್ಲಿ, ಒಂದು ಸಾಯಂಕಾಲ ಕೆಲವು ಸ್ನೇಹಿತರೊಂದಿಗೆ ಆರಾಮವಾಗಿ ಕುಳಿತು ಸ್ವಲ್ಪ ಮದ್ಯವನ್ನು ಸೇವಿಸುವುದರಲ್ಲಿ ಒಬ್ಬನು ಸಂತೋಷವನ್ನು ಕಂಡುಕೊಳ್ಳುತ್ತಾನೆ; ಆದರೆ ಮತ್ತೊಬ್ಬನಿಗೆ ಈ ರೂಢಿಯು ಆಕ್ಷೇಪಣೀಯವಾಗಿ ತೋರುತ್ತದೆ. ಇಂತಹ ವ್ಯತ್ಯಾಸಗಳು ಏಕಿವೆ ಮತ್ತು ಇವು ನಮ್ಮ ನಿರ್ಣಯಗಳನ್ನು ಹೇಗೆ ಪ್ರಭಾವಿಸಬೇಕು?

13 ಜನರು ಅನೇಕ ವಿಷಯಗಳಲ್ಲಿ ಭಿನ್ನರಾಗಿರುತ್ತಾರೆ. ಹಿನ್ನೆಲೆಗಳು ತುಂಬ ವ್ಯತ್ಯಾಸವುಳ್ಳದ್ದಾಗಿರುತ್ತವೆ. ಉದಾಹರಣೆಗೆ, ಕೆಲವರು ಈ ಹಿಂದೆ ಬಲವಾದ ಸಂಘರ್ಷವನ್ನು ಮಾಡಿರುವ ಆದರೆ ಪ್ರಾಯಶಃ ಯಾವಾಗಲೂ ಯಶಸ್ವಿಕರವಾಗಿ ನಿಭಾಯಿಸಿರದಂಥ ಒಂದು ಬಲಹೀನತೆಯ ಬಗ್ಗೆ ತೀವ್ರ ಪ್ರಜ್ಞೆಯುಳ್ಳವರಾಗಿದ್ದಾರೆ. (1 ಅರಸುಗಳು 8:38, 39) ವಿಶೇಷವಾಗಿ ಮದ್ಯಪಾನದ ವಿಷಯದಲ್ಲಿ ಇಂತಹ ವ್ಯಕ್ತಿಗಳು ಸೂಕ್ಷ್ಮಸಂವೇದಿಗಳಾಗಿರುವ ಸಾಧ್ಯತೆಯಿದೆ. ಇಂತಹ ಒಬ್ಬ ವ್ಯಕ್ತಿ ನಿಮ್ಮ ಮನೆಗೆ ಬಂದಾಗ ನೀವು ಮದ್ಯಪಾನವನ್ನು ನೀಡುವುದಾದರೆ ಅವನ ಮನಸ್ಸಾಕ್ಷಿಯು ಅದನ್ನು ನಿರಾಕರಿಸುವಂತೆ ಪ್ರಚೋದಿಸಬಹುದು. ಇದರಿಂದ ನಿಮಗೆ ಬೇಸರವಾಗುವುದೊ? ನೀವು ಅವನಿಗೆ ಒತ್ತಾಯಮಾಡುವಿರೊ? ಇಲ್ಲ. ಅವನು ಏಕೆ ನಿರಾಕರಿಸುತ್ತಿದ್ದಾನೆ ಎಂಬುದರ ಕಾರಣಗಳು ನಿಮಗೆ ತಿಳಿದಿರಲಿ ಇಲ್ಲದಿರಲಿ, ಈ ಸನ್ನಿವೇಶದಲ್ಲಿ ಅವನು ಆ ಕಾರಣಗಳನ್ನು ತಿಳಿಸದಿರಲು ಇಷ್ಟಪಡದಿರಬಹುದಾದ್ದರಿಂದ ಸಹೋದರ ಪ್ರೀತಿಯು ಪರಿಗಣನೆಯನ್ನು ತೋರಿಸುವಂತೆ ನಿಮ್ಮನ್ನು ಪ್ರಚೋದಿಸುವುದು.

14, 15. ಪ್ರಥಮ ಶತಮಾನದ ಸಭೆಯಲ್ಲಿದ್ದವರ ಮನಸ್ಸಾಕ್ಷಿಗಳು ಯಾವ ವಿವಾದಾಂಶದ ವಿಷಯದಲ್ಲಿ ಭಿನ್ನವಾಗಿದ್ದವು ಮತ್ತು ಪೌಲನು ಯಾವ ಶಿಫಾರಸ್ಸನ್ನು ಮಾಡಿದನು?

14 ಪ್ರಥಮ ಶತಮಾನದಲ್ಲಿದ್ದ ಕ್ರೈಸ್ತರಲ್ಲಿ ಮನಸ್ಸಾಕ್ಷಿಗಳು ಅನೇಕವೇಳೆ ತುಂಬ ಭಿನ್ನವಾಗಿದ್ದವು ಎಂಬುದನ್ನು ಅಪೊಸ್ತಲ ಪೌಲನು ಮನಗಂಡನು. ಆ ಸಮಯದಲ್ಲಿ, ವಿಗ್ರಹಗಳಿಗೆ ಅರ್ಪಿಸಲ್ಪಟ್ಟಿದ್ದ ನಿರ್ದಿಷ್ಟ ಆಹಾರ ಪದಾರ್ಥಗಳ ಬಗ್ಗೆ ಕೆಲವು ಕ್ರೈಸ್ತರಿಗೆ ಆಕ್ಷೇಪಣೆ ಇತ್ತು. (1 ಕೊರಿಂಥ 10:25) ಆದರೆ ಪೌಲನ ಮನಸ್ಸಾಕ್ಷಿಯಾದರೋ ವಿಗ್ರಹಗಳಿಗೆ ಅರ್ಪಿಸಿ ಆ ಬಳಿಕ ಮಾರುಕಟ್ಟೆಗಳಲ್ಲಿ ಮಾರಲಾಗುತ್ತಿದ್ದ ಇಂತಹ ಆಹಾರದ ವಿಷಯದಲ್ಲಿ ಆಕ್ಷೇಪವೆತ್ತಲಿಲ್ಲ. ಅವನ ದೃಷ್ಟಿಯಲ್ಲಿ ವಿಗ್ರಹಗಳು ನಿರ್ಜೀವ ವಸ್ತುಗಳಾಗಿದ್ದವು; ಯೆಹೋವನು ಉಂಟುಮಾಡಿದ ಮತ್ತು ಆತನಿಗೆ ಸೇರಿದ್ದಾಗಿರುವ ಆಹಾರವನ್ನು ವಿಗ್ರಹಗಳೆಂದೂ ತಮ್ಮದಾಗಿಸಿಕೊಳ್ಳಲು ಸಾಧ್ಯವಿರಲಿಲ್ಲ. ಆದರೆ ಈ ವಿಷಯದಲ್ಲಿ ಇತರರಿಗೆ ತನ್ನಂಥದ್ದೇ ದೃಷ್ಟಿಕೋನವಿಲ್ಲ ಎಂಬುದನ್ನು ಪೌಲನು ಅರ್ಥಮಾಡಿಕೊಂಡನು. ಕೆಲವರು ಕ್ರೈಸ್ತರಾಗುವುದಕ್ಕಿಂತ ಮುಂಚೆ ವಿಗ್ರಹಾರಾಧನೆಯಲ್ಲಿ ತುಂಬ ಒಳಗೂಡಿದ್ದ ವ್ಯಕ್ತಿಗಳಾಗಿದ್ದಿರಬಹುದು. ಇಂಥವರಿಗೆ ಈ ಮುಂಚೆ ವಿಗ್ರಹಾರಾಧನೆಗೆ ಸಂಬಂಧಿಸಿದ್ದ ಯಾವುದೇ ವಿಷಯವು ಅಸಹ್ಯಕರವಾಗಿತ್ತು. ಈ ವಿವಾದವನ್ನು ಪೌಲನು ಹೇಗೆ ಬಗೆಹರಿಸಿದನು?

15 ಪೌಲನು ಹೇಳಿದ್ದು: “ಬಲವುಳ್ಳವರಾದ ನಾವು ಬಲವಿಲ್ಲದವರ ಬಲಹೀನತೆಗಳನ್ನು ತಾಳಿಕೊಳ್ಳಬೇಕು; ನಮ್ಮನ್ನು ನಾವೇ ಸಂತೋಷಪಡಿಸಿಕೊಳ್ಳುವವರಾಗಿ ಇರಬಾರದು. ಕ್ರಿಸ್ತನು ಸಹ ತನ್ನನ್ನು ತಾನೇ ಮೆಚ್ಚಿಸಿಕೊಳ್ಳಲಿಲ್ಲ.” (ರೋಮನ್ನರಿಗೆ 15:1, 3) ಕ್ರಿಸ್ತನು ಮಾಡಿದಂತೆ ನಾವು ನಮ್ಮ ಆವಶ್ಯಕತೆಗಳಿಗಿಂತ ನಮ್ಮ ಸಹೋದರರ ಆವಶ್ಯಕತೆಗಳಿಗೆ ಆದ್ಯತೆ ನೀಡಬೇಕು ಎಂದು ಪೌಲನು ತರ್ಕಿಸಿದನು. ಇದಕ್ಕೆ ಸಂಬಂಧಿಸಿದ ಒಂದು ಚರ್ಚೆಯಲ್ಲಿ, ಕ್ರಿಸ್ತನು ಯಾವ ಅಮೂಲ್ಯ ಕುರಿಗಾಗಿ ತನ್ನ ಜೀವವನ್ನು ಕೊಟ್ಟನೋ ಆ ಕುರಿಯನ್ನು ಎಡವಿಸುವುದಕ್ಕೆ ಬದಲಾಗಿ ತಾನು ಮಾಂಸವನ್ನು ತಿನ್ನುವುದನ್ನೇ ಬಿಟ್ಟುಬಿಡುವೆನು ಎಂದು ಪೌಲನು ಹೇಳಿದನು.—1 ಕೊರಿಂಥ 8:13; 10:23, 24, 31-33 ಓದಿ.

16. ಯಾರ ಮನಸ್ಸಾಕ್ಷಿ ಕೆಲವು ವಿಷಯಗಳನ್ನು ಮಾಡದಂತೆ ಅವರನ್ನು ತಡೆಯುತ್ತದೋ ಅಂಥವರು ತಮಗಿಂತ ಭಿನ್ನವಾಗಿರುವ ಮನಸ್ಸಾಕ್ಷಿ ಇರುವವರಿಗೆ ತೀರ್ಪುಮಾಡುವುದರಿಂದ ಏಕೆ ದೂರವಿರಬೇಕು?

16 ಮತ್ತೊಂದು ಬದಿಯಲ್ಲಿ, ಯಾರ ಮನಸ್ಸಾಕ್ಷಿ ಕೆಲವು ವಿಷಯಗಳನ್ನು ಮಾಡದಂತೆ ಅವರನ್ನು ತಡೆಯುತ್ತದೋ ಅಂಥವರು ಮನಸ್ಸಾಕ್ಷಿಗೆ ಸಂಬಂಧಪಟ್ಟ ವಿಷಯಗಳನ್ನು ಎಲ್ಲರೂ ತಮ್ಮಂತೆಯೇ ವೀಕ್ಷಿಸಬೇಕೆಂದು ಒತ್ತಾಯಿಸುತ್ತಾ ಇತರರನ್ನು ಟೀಕಿಸಬಾರದು. (ರೋಮನ್ನರಿಗೆ 14:10 ಓದಿ.) ವಾಸ್ತವದಲ್ಲಿ ನಮ್ಮ ಮನಸ್ಸಾಕ್ಷಿಯನ್ನು ಆಂತರಿಕ ತೀರ್ಪುಗಾರನಾಗಿ ಉಪಯೋಗಿಸುವುದು ಅತ್ಯುತ್ತಮವಾಗಿದೆ ವಿನಾ ಇತರರನ್ನು ತೀರ್ಪುಮಾಡಲು ಅದನ್ನು ಲೈಸನ್ಸ್‌ ಆಗಿ ಉಪಯೋಗಿಸುವುದಲ್ಲ. “ತೀರ್ಪುಮಾಡುವುದನ್ನು ನಿಲ್ಲಿಸಿರಿ, ಆಗ ನಿಮಗೂ ತೀರ್ಪಾಗುವುದಿಲ್ಲ” ಎಂಬ ಯೇಸುವಿನ ಮಾತುಗಳನ್ನು ಜ್ಞಾಪಕದಲ್ಲಿಟ್ಟುಕೊಳ್ಳಿರಿ. (ಮತ್ತಾಯ 7:1) ಸಭೆಯಲ್ಲಿರುವ ಎಲ್ಲರೂ ಮನಸ್ಸಾಕ್ಷಿಗೆ ಸಂಬಂಧಪಟ್ಟ ವೈಯಕ್ತಿಕ ವಿಷಯಗಳ ಕುರಿತು ವಿವಾದವನ್ನು ಎಬ್ಬಿಸುವುದರಿಂದ ದೂರವಿರಲು ಬಯಸುತ್ತಾರೆ. ನಾವು ಪ್ರೀತಿ ಮತ್ತು ಐಕ್ಯವನ್ನು ಪ್ರವರ್ಧಿಸಲು, ಪರಸ್ಪರ ಭಕ್ತಿವೃದ್ಧಿಮಾಡಲು ಮಾರ್ಗಗಳನ್ನು ಹುಡುಕುತ್ತೇವೆಯೇ ಹೊರತು ಒಬ್ಬರನ್ನೊಬ್ಬರು ಕೆಡವಿಹಾಕಲಿಕ್ಕಲ್ಲ.—ರೋಮನ್ನರಿಗೆ 14:19.

ಒಳ್ಳೇ ಮನಸ್ಸಾಕ್ಷಿಯು ಹೇಗೆ ಆಶೀರ್ವಾದಗಳನ್ನು ತರುತ್ತದೆ?

ಒಳ್ಳೇ ಮನಸ್ಸಾಕ್ಷಿಯು ಜೀವನಯಾತ್ರೆಯಲ್ಲಿ ನಮ್ಮನ್ನು ಮಾರ್ಗದರ್ಶಿಸುತ್ತಾ ಆನಂದ ಮತ್ತು ಆಂತರಿಕ ಶಾಂತಿಯನ್ನು ತರಬಲ್ಲದು

17. ಇಂದು ಅನೇಕರ ಮನಸ್ಸಾಕ್ಷಿಗಳಿಗೆ ಏನಾಗಿದೆ?

17 “ಒಳ್ಳೇ ಮನಸ್ಸಾಕ್ಷಿಯುಳ್ಳವರಾಗಿರಿ” ಎಂದು ಅಪೊಸ್ತಲ ಪೇತ್ರನು ಬರೆದನು. (1 ಪೇತ್ರ 3:16) ಯೆಹೋವ ದೇವರ ದೃಷ್ಟಿಯಲ್ಲಿ ಶುದ್ಧವಾಗಿರುವ ಮನಸ್ಸಾಕ್ಷಿಯು ಅತಿ ದೊಡ್ಡ ಆಶೀರ್ವಾದವಾಗಿದೆ. ಅದು ಇಂದು ಇರುವ ಅನೇಕರ ಮನಸ್ಸಾಕ್ಷಿಗಳಂತೆ ಇರುವುದಿಲ್ಲ. “ತಮ್ಮ ಮನಸ್ಸಾಕ್ಷಿಯ ಮೇಲೆ ಬರೆಗೋಲಿನಿಂದಲೋ ಎಂಬಂತೆ ಬರೆಹಾಕಿಕೊಂಡಿರುವ” ವ್ಯಕ್ತಿಗಳ ಕುರಿತು ಪೌಲನು ವರ್ಣಿಸಿದನು. (1 ತಿಮೊಥೆಯ 4:2) ಒಂದು ಬರೆಗೋಲು ಮಾಂಸವನ್ನು ಸುಟ್ಟು ಅದನ್ನು ಮಚ್ಚೆಯುಳ್ಳದ್ದಾಗಿಯೂ ಸಂವೇದನಾಶಕ್ತಿ ಇಲ್ಲದ್ದಾಗಿಯೂ ಮಾಡಿಬಿಡುತ್ತದೆ. ಹೀಗೆ ಅನೇಕರ ಮನಸ್ಸಾಕ್ಷಿ ವಾಸ್ತವದಲ್ಲಿ ಸತ್ತುಹೋಗಿದೆ. ಅದು ಎಷ್ಟರ ಮಟ್ಟಿಗೆ ಮಚ್ಚೆಯುಳ್ಳದ್ದೂ ಸಂವೇದನಾಶಕ್ತಿರಹಿತವೂ ಆಗಿರುತ್ತದೆಯೆಂದರೆ ಅದು ಇನ್ನೆಂದಿಗೂ ಎಚ್ಚರಿಕೆಗಳನ್ನು ಕೊಡುವುದಿಲ್ಲ, ಪ್ರತಿಭಟಿಸುವುದಿಲ್ಲ ಅಥವಾ ತಪ್ಪುಮಾಡಿದಾಗ ನಾಚಿಕೆ ಇಲ್ಲವೆ ದೋಷಿಭಾವದಿಂದ ಮನೋವೇದನೆಯನ್ನು ಅನುಭವಿಸುವಂತೆ ಮಾಡುವುದಿಲ್ಲ. ಇಂದು ಅನೇಕರು ದೋಷಿಭಾವನೆಯಂಥ ಅನಿಸಿಕೆಗಳಿಗೆ “ಪೀಡೆ ತೊಲಗಿದ್ದು ಒಳ್ಳೆಯದಾಯಿತು” ಎಂದು ಹೇಳುವಂತೆ ತೋರುತ್ತದೆ.

18, 19. (ಎ) ದೋಷಿಭಾವನೆಗಳಿಂದ ಅಥವಾ ನಾಚಿಕೆಯ ಅನಿಸಿಕೆಯಿಂದ ಯಾವ ಪ್ರಯೋಜನ ಸಿಗಬಹುದು? (ಬಿ) ನಾವು ಈಗಾಗಲೇ ಪಶ್ಚಾತ್ತಾಪಪಟ್ಟಿರುವ ಗತಕಾಲದ ಪಾಪಗಳಿಗಾಗಿ ನಮ್ಮ ಮನಸ್ಸಾಕ್ಷಿ ನಮ್ಮನ್ನು ಇನ್ನೂ ಖಂಡಿಸುತ್ತಿರುವುದಾದರೆ ನಾವು ಏನು ಮಾಡಬಲ್ಲೆವು?

18 ವಾಸ್ತವದಲ್ಲಿ, ದೋಷಿಭಾವನೆಗಳು ನಾವು ತಪ್ಪುಮಾಡಿದ್ದೇವೆ ಎಂದು ನಮಗೆ ಮನಸ್ಸಾಕ್ಷಿಯು ತಿಳಿಸುತ್ತಿರುವಂಥ ಒಂದು ವಿಧವಾಗಿರಸಾಧ್ಯವಿದೆ. ಇಂಥ ಭಾವನೆಗಳು ಒಬ್ಬ ಪಾಪಿಯನ್ನು ಪಶ್ಚಾತ್ತಾಪಪಡುವಂತೆ ಪ್ರಚೋದಿಸುವಲ್ಲಿ ಅತಿ ಘೋರವಾದ ಪಾಪಗಳಿಗೂ ಕ್ಷಮಾಪಣೆ ಸಿಗಸಾಧ್ಯವಿದೆ. ಉದಾಹರಣೆಗೆ, ರಾಜ ದಾವೀದನು ಗುರುತರವಾದ ತಪ್ಪನ್ನು ಮಾಡಿ ದೋಷಿಯಾದರೂ ಮುಖ್ಯವಾಗಿ ಅವನು ಯಥಾರ್ಥ ಪಶ್ಚಾತ್ತಾಪ ತೋರಿಸಿದ್ದಕ್ಕಾಗಿ ಕ್ಷಮಿಸಲ್ಪಟ್ಟನು. ಅವನು ತನ್ನ ತಪ್ಪು ಮಾರ್ಗವನ್ನು ದ್ವೇಷಿಸಿದ್ದು ಮತ್ತು ಅಂದಿನಿಂದ ಯೆಹೋವನ ನಿಯಮಗಳಿಗೆ ವಿಧೇಯನಾಗುವ ದೃಢನಿಶ್ಚಯಮಾಡಿದ್ದು, ಯೆಹೋವನು “ಒಳ್ಳೆಯವನೂ ಕ್ಷಮಿಸುವುದಕ್ಕೆ ಸಿದ್ಧನೂ” ಆಗಿದ್ದಾನೆ ಎಂಬುದನ್ನು ಸ್ವತಃ ಅನುಭವಿಸಿ ನೋಡುವಂತೆ ಮಾಡಿತು. (ಕೀರ್ತನೆ 51:1-19; 86:5, NIBV) ಆದರೆ ನಾವು ಪಶ್ಚಾತ್ತಾಪಪಟ್ಟು ಕ್ಷಮಾಪಣೆಯನ್ನು ಹೊಂದಿದ ಬಳಿಕವೂ ತೀವ್ರವಾದ ದೋಷಿಭಾವನೆಗಳು ಮತ್ತು ನಾಚಿಕೆಯ ಅನಿಸಿಕೆಗಳು ನಮ್ಮನ್ನು ಕಾಡುತ್ತಿರುವಲ್ಲಿ ಆಗೇನು?

19 ಕೆಲವೊಮ್ಮೆ ಮನಸ್ಸಾಕ್ಷಿಯು ವಿಪರೀತ ಖಂಡನಾತ್ಮಕವಾಗಿರಸಾಧ್ಯವಿದೆ. ಅಂದರೆ ದೋಷಿಭಾವನೆಗಳು ಇನ್ನು ಮುಂದೆ ಯಾವ ಪ್ರಯೋಜನವನ್ನು ತರದಿದ್ದರೂ ಅಂಥ ಭಾವನೆಗಳು ಒಬ್ಬ ಪಾಪಿಯನ್ನು ದೀರ್ಘಕಾಲದ ವರೆಗೆ ಪೀಡಿಸುತ್ತಾ ಇರಸಾಧ್ಯವಿದೆ. ಇಂಥ ಸಂದರ್ಭಗಳಲ್ಲಿ, ಯೆಹೋವನು ಸಕಲ ಮಾನವ ಭಾವನೆಗಳಿಗಿಂತ ಶ್ರೇಷ್ಠನಾಗಿದ್ದಾನೆ ಎಂದು ನಮ್ಮ ಸ್ವಖಂಡನಾತ್ಮಕ ಹೃದಯಕ್ಕೆ ನಾವು ಭರವಸೆ ನೀಡುವ ಅಗತ್ಯವಿರಬಹುದು. ನಾವು ಇತರರನ್ನು ಪ್ರೋತ್ಸಾಹಿಸುವಂತೆಯೇ ನಾವು ಸಹ ಆತನ ಪ್ರೀತಿ ಮತ್ತು ಕ್ಷಮಾಪಣೆಯನ್ನು ನಂಬುವ ಮತ್ತು ಅಂಗೀಕರಿಸುವ ಆವಶ್ಯಕತೆಯಿದೆ. (1 ಯೋಹಾನ 3:19, 20 ಓದಿ.) ಇನ್ನೊಂದು ಕಡೆಯಲ್ಲಿ, ಶುದ್ಧೀಕರಿಸಲ್ಪಟ್ಟ ಮನಸ್ಸಾಕ್ಷಿಯು ಆಂತರಿಕ ಶಾಂತಿ, ನೆಮ್ಮದಿ ಮತ್ತು ಈ ಲೋಕದಲ್ಲಿ ಅತಿ ವಿರಳವಾಗಿ ಕಂಡುಬರುವಂಥ ಅಪಾರ ಆನಂದವನ್ನು ಉಂಟುಮಾಡುತ್ತದೆ. ಹಿಂದೆ ಗಂಭೀರವಾದ ಪಾಪದಲ್ಲಿ ಒಳಗೂಡಿದ್ದ ಅನೇಕರು ಈಗ ಅದ್ಭುತಕರವಾದ ಉಪಶಮನವನ್ನು ಅನುಭವಿಸಿದ್ದಾರೆ ಮತ್ತು ಇಂದು ಅವರು ಯೆಹೋವನಿಗೆ ಸೇವೆಸಲ್ಲಿಸುತ್ತಿರುವಾಗ ಒಳ್ಳೇ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳಲು ಶಕ್ತರಾಗಿದ್ದಾರೆ.—1 ಕೊರಿಂಥ 6:11.

20, 21. (ಎ) ನೀವು ಏನು ಮಾಡುವಂತೆ ಸಹಾಯಮಾಡಲು ಈ ಪುಸ್ತಕವನ್ನು ವಿನ್ಯಾಸಿಸಲಾಗಿದೆ? (ಬಿ) ಕ್ರೈಸ್ತರಾಗಿರುವ ನಾವು ಯಾವ ಸ್ವಾತಂತ್ರ್ಯದಲ್ಲಿ ಆನಂದಿಸುತ್ತೇವೆ, ಆದರೂ ನಾವು ಅದನ್ನು ಹೇಗೆ ಉಪಯೋಗಿಸಬೇಕು?

20 ಆ ಆನಂದವನ್ನು ಕಂಡುಕೊಳ್ಳಲು, ಸೈತಾನನ ವಿಷಯಗಳ ವ್ಯವಸ್ಥೆಯ ಕ್ಲೇಶಕರವಾದ ಕಡೇ ದಿವಸಗಳಾದ್ಯಂತ ಒಳ್ಳೇ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳಲು ನಿಮಗೆ ಸಹಾಯಮಾಡುವಂಥ ರೀತಿಯಲ್ಲಿ ಈ ಪುಸ್ತಕವನ್ನು ವಿನ್ಯಾಸಿಸಲಾಗಿದೆ. ದಿನೇದಿನೇ ಎದುರಾಗುವಂಥ ಸನ್ನಿವೇಶಗಳಲ್ಲಿ ನೀವು ಆಲೋಚಿಸಬೇಕಾದ ಮತ್ತು ಅನ್ವಯಿಸಬೇಕಾದ ಎಲ್ಲ ಬೈಬಲ್‌ ನಿಯಮಗಳನ್ನು ಹಾಗೂ ಮೂಲತತ್ತ್ವಗಳನ್ನು ಇದು ಆವರಿಸಲು ಸಾಧ್ಯವಿಲ್ಲವೆಂಬುದು ನಿಜ. ಮಾತ್ರವಲ್ಲದೆ ಮನಸ್ಸಾಕ್ಷಿಗೆ ಸಂಬಂಧಪಟ್ಟ ವಿಷಯಗಳಲ್ಲಿ ಸರಳವಾದ ಮತ್ತು ಸುಸ್ಪಷ್ಟವಾದ ನಿಯಮಗಳನ್ನು ಕಾಣಲು ಅಪೇಕ್ಷಿಸಬೇಡಿ. ಈ ಪುಸ್ತಕದ ಉದ್ದೇಶವು ನಿಮ್ಮ ದೈನಂದಿನ ಜೀವನದಲ್ಲಿ ದೇವರ ವಾಕ್ಯವನ್ನು ಹೇಗೆ ಅನ್ವಯಿಸುವುದು ಎಂಬುದನ್ನು ಅಧ್ಯಯನಮಾಡುವ ಮೂಲಕ ನಿಮ್ಮ ಮನಸ್ಸಾಕ್ಷಿಯನ್ನು ತರಬೇತುಗೊಳಿಸಿ ಅದನ್ನು ಸಂವೇದನಾಶೀಲವಾಗಿ ಮಾಡಲು ನಿಮಗೆ ಸಹಾಯಮಾಡುವುದೇ ಆಗಿದೆ. ಮೋಶೆಯ ಧರ್ಮಶಾಸ್ತ್ರಕ್ಕೆ ವ್ಯತಿರಿಕ್ತವಾಗಿ ‘ಕ್ರಿಸ್ತನ ನಿಯಮವು’ ಅದರ ಅನುಯಾಯಿಗಳನ್ನು ಲಿಖಿತ ನಿಯಮಗಳಿಗಿಂತ ಹೆಚ್ಚಾಗಿ ಮನಸ್ಸಾಕ್ಷಿ ಮತ್ತು ಮೂಲತತ್ತ್ವಕ್ಕನುಸಾರ ಜೀವಿಸುವಂತೆ ಕರೆಕೊಡುತ್ತದೆ. (ಗಲಾತ್ಯ 6:2) ಹೀಗೆ ಯೆಹೋವನು ಕ್ರೈಸ್ತರಿಗೆ ಅಸಾಧಾರಣವಾದ ಸ್ವಾತಂತ್ರ್ಯವನ್ನು ಕೊಡುತ್ತಾನೆ. ಆದರೆ ನಾವು ಆ ಸ್ವಾತಂತ್ರ್ಯವನ್ನು “ಕೆಟ್ಟತನವನ್ನು ಮರೆಮಾಚುವುದಕ್ಕೆ” ಎಂದಿಗೂ ಉಪಯೋಗಿಸಬಾರದು ಎಂದು ಆತನ ವಾಕ್ಯವು ನಮಗೆ ಮರುಜ್ಞಾಪನವನ್ನು ಕೊಡುತ್ತದೆ. (1 ಪೇತ್ರ 2:16) ಬದಲಿಗೆ ಇಂಥ ಸ್ವಾತಂತ್ರ್ಯವು ಯೆಹೋವನಿಗಾಗಿರುವ ನಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಅದ್ಭುತಕರವಾದ ಅವಕಾಶವನ್ನು ಕೊಡುತ್ತದೆ.

21 ಬೈಬಲ್‌ ಮೂಲತತ್ತ್ವಗಳಿಗನುಸಾರ ಸಾಧ್ಯವಾದಷ್ಟು ಉತ್ತಮವಾಗಿ ಜೀವಿಸುವ ವಿಧವನ್ನು ಪ್ರಾರ್ಥನಾಪೂರ್ವಕವಾಗಿ ಪರಿಗಣಿಸಿದ ಬಳಿಕ ನಿಮ್ಮ ನಿರ್ಣಯಗಳನ್ನು ಕಾರ್ಯರೂಪಕ್ಕೆ ಹಾಕುವ ಮೂಲಕ ನೀವು ಮೊದಲು ಯೆಹೋವನ ಕುರಿತು ತಿಳಿದುಕೊಂಡಾಗ ಆರಂಭಿಸಿದ ಅತ್ಯಾವಶ್ಯಕ ಪ್ರಕ್ರಿಯೆಯನ್ನು ಮುಂದುವರಿಸುವಿರಿ. ‘ಉಪಯೋಗದ ಮೂಲಕ’ ನಿಮ್ಮ ‘ಗ್ರಹಣ ಶಕ್ತಿಗಳು’ ತರಬೇತುಗೊಳಿಸಲ್ಪಡುವವು. (ಇಬ್ರಿಯ 5:14) ನಿಮ್ಮ ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿಯು ನಿಮ್ಮ ಜೀವನದ ಪ್ರತಿ ದಿನವೂ ನಿಮಗೆ ಆಶೀರ್ವಾದದಾಯಕವಾಗಿರುವುದು. ಪ್ರಯಾಣಿಕನನ್ನು ಮಾರ್ಗದರ್ಶಿಸುವ ದಿಕ್ಸೂಚಿಯಂತೆ, ನಿಮ್ಮ ಮನಸ್ಸಾಕ್ಷಿಯು ನಿಮ್ಮ ಸ್ವರ್ಗೀಯ ತಂದೆಯನ್ನು ಸಂತೋಷಪಡಿಸುವಂಥ ನಿರ್ಣಯಗಳನ್ನು ಮಾಡುವಂತೆ ನಿಮಗೆ ಸಹಾಯಮಾಡುವುದು. ಇದು ದೇವರ ಪ್ರೀತಿಯಲ್ಲಿ ನಿಮ್ಮನ್ನು ಕಾಪಾಡಿಕೊಳ್ಳಲಿಕ್ಕಾಗಿರುವ ನಿಶ್ಚಿತ ವಿಧವಾಗಿದೆ.

^ ಪ್ಯಾರ. 8 ಶುದ್ಧ ಮನಸ್ಸಾಕ್ಷಿಯನ್ನು ಹೊಂದಿರುವುದು ಮಾತ್ರವೇ ಯಾವಾಗಲೂ ಸಾಕಾಗುವುದಿಲ್ಲ ಎಂದು ಬೈಬಲ್‌ ತೋರಿಸುತ್ತದೆ. ಉದಾಹರಣೆಗೆ ಪೌಲನು ಹೇಳಿದ್ದು: “ನನಗೇ ವಿರುದ್ಧವಾಗಿರುವ ಯಾವುದರ ಪ್ರಜ್ಞೆಯೂ ನನಗಿಲ್ಲ. ಆದರೂ ಇದರಿಂದ ನಾನು ನೀತಿವಂತನೆಂದು ರುಜುವಾಗುವುದಿಲ್ಲ; ನನ್ನನ್ನು ಪರೀಕ್ಷಿಸುವವನು ಯೆಹೋವನೇ ಆಗಿದ್ದಾನೆ.” (1 ಕೊರಿಂಥ 4:4) ಪೌಲನು ಈ ಮುಂಚೆ ಮಾಡುತ್ತಿದ್ದಂತೆಯೇ ಕ್ರೈಸ್ತರನ್ನು ಹಿಂಸಿಸುವವರು ಸಹ ಶುದ್ಧ ಮನಸ್ಸಾಕ್ಷಿಯಿಂದ ಅದನ್ನು ಮಾಡಬಹುದು; ಏಕೆಂದರೆ ತಮ್ಮ ಮಾರ್ಗಕ್ರಮವನ್ನು ದೇವರು ಒಪ್ಪುತ್ತಾನೆ ಎಂದು ಅವರು ನೆನಸಬಹುದು. ಆದುದರಿಂದ ನಮ್ಮ ಮನಸ್ಸಾಕ್ಷಿ ನಮ್ಮ ದೃಷ್ಟಿಯಲ್ಲಿಯೂ ದೇವರ ದೃಷ್ಟಿಯಲ್ಲಿಯೂ ಶುದ್ಧವಾಗಿರುವುದು ಅತಿ ಪ್ರಾಮುಖ್ಯ.—ಅಪೊಸ್ತಲರ ಕಾರ್ಯಗಳು 23:1; 2 ತಿಮೊಥೆಯ 1:3.

^ ಪ್ಯಾರ. 10 ಅನೇಕ ಡಾಕ್ಟರುಗಳ ಹೇಳಿಕೆಗನುಸಾರ, ಮದ್ಯವ್ಯಸನಿಗಳಿಗೆ ಮಿತವಾಗಿ ಕುಡಿಯುವುದು ನಿಜವಾಗಿಯೂ ಅಸಾಧ್ಯ; ಅವರ ವಿಷಯದಲ್ಲಿ “ಮಿತಸೇವನೆ” ಎಂಬುದರ ಅರ್ಥ ಕುಡಿಯದಿರುವುದಾಗಿದೆ.