ಯೇಸು ಮತ್ತು ಜೋಯಿಸರು
ಅಧ್ಯಾಯ 7
ಯೇಸು ಮತ್ತು ಜೋಯಿಸರು
ಮೂಡಣ ದೇಶದಿಂದ ಅನೇಕ ಪುರುಷರು ಬರುತ್ತಾರೆ. ಅವರು ಜೋಯಿಸರು—ನಕ್ಷತ್ರಗಳ ಸ್ಥಾನದ ಬಗ್ಗೆ ಅರ್ಥಹೇಳುವವರೆಂದು ವಾದಿಸುವವರು. ಅವರು ಮೂಡಣ ದೇಶದಲ್ಲಿ ತಮ್ಮ ಮನೆಯಲ್ಲಿದ್ದಾಗ ಒಂದು ಹೊಸ ನಕ್ಷತ್ರವನ್ನು ಕಂಡರು ಮತ್ತು ಅವರು ಅದನ್ನು ಹಿಂಬಾಲಿಸಿ ನೂರಾರು ಕಿಲೊಮೀಟರ್ ದೂರದಲ್ಲಿರುವ ಯೆರೂಸಲೇಮಿಗೆ ಬಂದರು.
ಜೋಯಿಸರು ಯೆರೂಸಲೇಮ್ ತಲುಪಿದ ನಂತರ, ಅವರು ವಿಚಾರಿಸಿದ್ದು: “ಯೆಹೂದ್ಯರ ಅರಸನಾಗಿ ಹುಟ್ಟಿದವನು ಎಲ್ಲಿದ್ದಾನೆ? ಆತನನ್ನು ಸೂಚಿಸುವ ನಕ್ಷತ್ರವನ್ನು ನಾವು ಮೂಡಣ ದೇಶದಲ್ಲಿ ಕಂಡೆವು ಮತ್ತು ಆತನಿಗೆ ಅಡ್ಡ ಬೀಳಲು ಬಂದೆವು.”
ಯೆರೂಸಲೇಮಿನಲ್ಲಿ ಅರಸನಾದ ಹೆರೋದನು ಇದನ್ನು ಕೇಳಿದಾಗ ಅವನು ಬಹಳವಾಗಿ ಕಳವಳಪಟ್ಟನು. ಆದುದರಿಂದ ಅವನು ಮಹಾಯಾಜಕರನ್ನು ಕರೆಯಿಸಿ, ಕ್ರಿಸ್ತನು ಹುಟ್ಟಬೇಕಾದದ್ದು ಎಲ್ಲಿ ಎಂದು ವಿಚಾರಿಸುತ್ತಾನೆ. ಶಾಸ್ತ್ರದ ಮೇಲೆ ತಮ್ಮ ಉತ್ತರವನ್ನು ಆಧರಿಸಿ, ಅವರು ಹೇಳಿದ್ದು: “ಬೇತ್ಲೆಹೇಮಿನಲ್ಲಿ.” ಆಗ ಹೆರೋದನು ಜೋಯಿಸರನ್ನು ಕರೆದು ಅವರಿಗೆ ಹೇಳಿದ್ದು: “ಹೋಗಿ ಕೂಸಿನ ವಿಷಯದಲ್ಲಿ ಚೆನ್ನಾಗಿ ವಿಚಾರಣೆ ಮಾಡಿರಿ; ಸಿಕ್ಕಿದ ಮೇಲೆ ನನಗೆ ತಿಳಿಸಿರಿ, ನಾನೂ ಬಂದು ಅದಕ್ಕೆ ಅಡ್ಡಬೀಳಬೇಕು.” ಆದರೆ, ವಾಸ್ತವದಲ್ಲಿ, ಹೆರೋದನು ಕೂಸನ್ನು ಕಂಡುಹಿಡಿದು ಕೊಲ್ಲಬೇಕೆಂದು ಬಯಸಿದ್ದನು!
ಅವರು ಹೊರಟ ನಂತರ, ಒಂದು ಆಶ್ಚರ್ಯದ ಸಂಗತಿ ಸಂಭವಿಸಿತು. ಮೂಡಣ ದೇಶದಲ್ಲಿ ಕಂಡ ನಕ್ಷತ್ರವು ಅವರ ಮುಂದೆ ಮುಂದೆ ಹೋಗುತ್ತಿತ್ತು. ಇದೊಂದು ಸಾಮಾನ್ಯವಾದ ನಕ್ಷತ್ರವಲ್ಲವೆಂಬುದು ಸ್ಪಷ್ಟ, ಬದಲು ಅದು ಅವರನ್ನು ವಿಶಿಷ್ಟವಾಗಿ ಮಾರ್ಗದರ್ಶಿಸಲು ಒದಗಿಸಲ್ಪಟ್ಟಿತ್ತು. ಆ ನಕ್ಷತ್ರವು ಯೋಸೇಫನು ಮತ್ತು ಮರಿಯಳು ವಾಸಿಸುತ್ತಿದ್ದ ಮನೆಯ ಮೇಲೆ ನಿಲ್ಲುವ ತನಕ ಜೋಯಿಸರು ಅದನ್ನು ಹಿಂಬಾಲಿಸಿದರು.
ಜೋಯಿಸರು ಮನೆಯನ್ನು ಪ್ರವೇಶಿಸಿದಾಗ, ಅಲ್ಲಿ ಮರಿಯಳ ಜೊತೆ ಅವಳ ಚಿಕ್ಕ ಕೂಸು, ಯೇಸುವನ್ನು ಅವರು ಕಾಣುತ್ತಾರೆ. ಆಗ ಅವರೆಲ್ಲರೂ ಅವನಿಗೆ ಅಡ್ಡ ಬೀಳುತ್ತಾರೆ. ಮತ್ತು ತಮ್ಮ ಗಂಟುಗಳನ್ನು ಬಿಚ್ಚಿ, ಚಿನ್ನ, ಧೂಪ, ರಕ್ತ ಬೋಳಗಳನ್ನು ಕಾಣಿಕೆಯಾಗಿ ಕೊಡುತ್ತಾರೆ. ನಂತರ ಅವರು ಹಿಂತಿರುಗಿ ಹೆರೋದನಿಗೆ ಮಗು ಎಲ್ಲಿದೆ ಎಂದು ಹೇಳಲು ಹೊರಟಾಗ, ದೇವರು ಅವರನ್ನು ಕನಸಿನಲ್ಲಿ ಹಾಗೆ ಮಾಡದಂತೆ ಎಚ್ಚರಿಸಿದನು. ಆದುದರಿಂದ ಅವರು ತಮ್ಮ ಸ್ವಂತ ಊರಿಗೆ ಬೇರೊಂದು ದಾರಿಯ ಮೂಲಕ ಹೋಗುತ್ತಾರೆ.
ಆಕಾಶದಲ್ಲಿ ಚಲಿಸುತ್ತಾ ಜೋಯಿಸರುಗಳನ್ನು ಮಾರ್ಗದರ್ಶಿಸಿದ ಆ ನಕ್ಷತ್ರವನ್ನು ಒದಗಿಸಿದವನು ಯಾರೆಂದು ನೀವು ಎಣಿಸುತ್ತೀರಿ? ಬೇತ್ಲೆಹೇಮಿನಲ್ಲಿರುವ ಯೇಸುವಿನ ಬಳಿಗೆ ನೇರವಾಗಿ ಆ ನಕ್ಷತ್ರವು ಮಾರ್ಗದರ್ಶಿಸಲಿಲ್ಲ ಎಂಬುದನ್ನು ನೆನಪಿನಲ್ಲಿಡಿರಿ. ಅದರ ಬದಲಿಗೆ, ಯೇಸುವನ್ನು ಕೊಲ್ಲಲು ಬಯಸುತ್ತಿದ್ದ ರಾಜ ಹೆರೋದನ ಸಂಪರ್ಕಕ್ಕೆ ಅವರು ಬರುವಂತೆ ಯೆರೂಸಲೇಮಿಗೆ ನಡಿಸಲ್ಪಟ್ಟರು. ದೇವರು ಮಧ್ಯ ಪ್ರವೇಶ ಮಾಡದಿರುತ್ತಿದ್ದರೆ ಮತ್ತು ಹೆರೋದನಿಗೆ ಯೇಸುವು ಎಲ್ಲಿ ಇದ್ದಾನೆಂದು ಹೇಳದಂತೆ ಎಚ್ಚರಿಸದೆ ಇರುತ್ತಿದ್ದರೆ, ಹೆರೋದನು ಅದನ್ನು ಮಾಡುತ್ತಿದ್ದನು. ಅದು ಯೇಸುವನ್ನು ಕೊಲ್ಲಲು ಹವಣಿಸುತ್ತಿದ್ದ ದೇವರ ವೈರಿಯಾದ ಪಿಶಾಚನಾದ ಸೈತಾನನದ್ದಾಗಿತ್ತು ಮತ್ತು ತನ್ನ ಉದ್ದೇಶವನ್ನು ಪೂರೈಸುವ ಪ್ರಯತ್ನದಲ್ಲಿ ಅವನು ಆ ನಕ್ಷತ್ರವನ್ನು ಬಳಸಿದನು. ಮತ್ತಾಯ 2:1-12; ಮೀಕ 5:2.
▪ ಜೋಯಿಸರು ನೋಡಿದ ನಕ್ಷತ್ರವು ಸಾಮಾನ್ಯವಾದ ನಕ್ಷತ್ರವಲ್ಲವೆಂದು ಯಾವುದು ತೋರಿಸುತ್ತದೆ?
▪ ಜೋಯಿಸರು ಯೇಸುವನ್ನು ಕಂಡುಕೊಂಡಾಗ ಅವನು ಎಲ್ಲಿದ್ದನು?
▪ ಜೋಯಿಸರನ್ನು ಮಾರ್ಗದರ್ಶಿಸಲು ಸೈತಾನನು ನಕ್ಷತ್ರವನ್ನು ಒದಗಿಸಿದನು ಎಂದು ನಮಗೆ ಯಾಕೆ ತಿಳಿದದೆ?