ಯೇಸುವಿನ ದೀಕ್ಷಾಸ್ನಾನ
ಅಧ್ಯಾಯ 12
ಯೇಸುವಿನ ದೀಕ್ಷಾಸ್ನಾನ
ಯೋಹಾನನು ಸಾರಲು ಆರಂಭಿಸಿ, ಸುಮಾರು ಆರು ತಿಂಗಳ ನಂತರ, ಈಗ 30 ವರ್ಷ ಪ್ರಾಯದವನಾದ ಯೇಸುವು ಯೋಹಾನನ ಬಳಿಗೆ ಬರುತ್ತಾನೆ. ಯಾವ ಕಾರಣಕ್ಕಾಗಿ? ಒಂದು ಸ್ನೇಹ ಸೌಹಾರ್ದದ ಭೇಟಿಯೋ? ಯೋಹಾನನ ಕಾರ್ಯವು ಹೇಗೆ ಪ್ರಗತಿಯಾಗುತ್ತದೆ ಎಂಬದರಲ್ಲಿ ಯೇಸುವಿಗೆ ಕೇವಲ ಆಸಕ್ತಿಯಿತ್ತೋ? ಅಲ್ಲ, ತನಗೆ ದೀಕ್ಷಾಸ್ನಾನ ಮಾಡಲು ಯೋಹಾನನಿಗೆ ಯೇಸುವು ಕೇಳುತ್ತಾನೆ.
ತಕ್ಷಣವೇ ಯೋಹಾನನು ಆಕ್ಷೇಪಿಸುತ್ತಾನೆ: “ನಾನು ನಿನ್ನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳತಕ್ಕವನಾಗಿರುವಲ್ಲಿ, ನೀನು ನನ್ನ ಬಳಿಗೆ ಬರುವದೇನು?” ತನ್ನ ಸೋದರನಂಟ ಯೇಸುವು ದೇವರ ವಿಶೇಷ ಪುತ್ರನೆಂದು ಯೋಹಾನನಿಗೆ ತಿಳಿದಿತ್ತು. ಯಾಕೆ, ಮರಿಯಳು ಯೇಸುವಿನ ಗರ್ಭ ಧರಿಸಿದ ಸಮಯದಲ್ಲಿ, ಅವರನ್ನು ಸಂದರ್ಶಿಸಿದಾಗ ತನ್ನ ತಾಯಿಯ ಹೊಟ್ಟೆಯಲ್ಲಿಯೇ ಯೋಹಾನನು ಸಂತೋಷದಿಂದ ಹಾರಾಡಿದ್ದನು! ಯೋಹಾನನ ತಾಯಿ ಎಲಿಸಬೇತಳು ನಿಸ್ಸಂದೇಹವಾಗಿ ಈ ವಿಷಯವನ್ನು ಅನಂತರ ಅವನಿಗೆ ತಿಳಿಸಿರಬೇಕು. ಮತ್ತು ಯೇಸುವಿನ ಜನನದ ಕುರಿತಾಗಿ ದೇವದೂತನ ಪ್ರಕಟನೆಯನ್ನು ಮತ್ತು ಯೇಸು ಜನಿಸಿದ ರಾತ್ರಿಯಲ್ಲಿ ದೇವದೂತರು ಕುರುಬರಿಗೆ ತೋರಿಬಂದ ಕುರಿತೂ ಅವನಿಗೆ ಹೇಳಿರಬೇಕು.
ಆದುದರಿಂದ ಯೋಹಾನನಿಗೆ ಯೇಸುವು ಅಪರಿಚಿತನಾಗಿರಲಿಲ್ಲ. ಮತ್ತು ಅವನ ದೀಕ್ಷಾಸ್ನಾನವು ಯೇಸುವಿಗೆ ಅಲ್ಲವೆಂದೂ ಯೋಹಾನನಿಗೆ ತಿಳಿದಿತ್ತು. ಅದು ತಮ್ಮ ಪಾಪಗಳಿಗೆ ಪಶ್ಚಾತ್ತಾಪ ಪಡುವವರಿಗಾಗಿತ್ತು. ಆದರೆ ಯೇಸುವು ಪಾಪರಹಿತನಾಗಿದ್ದನು. ಆದರೂ ಯೋಹಾನನ ಆಕ್ಷೇಪಣೆ ಇದ್ದಾಗ್ಯೂ, ಯೇಸುವು ಒತ್ತಾಯಿಸುವದು: “ಸದ್ಯಕ್ಕೆ ಒಪ್ಪಿಕೋ, ಹೀಗೆ ನಾವು ಎಲ್ಲಾ ಧರ್ಮವನ್ನು ನೆರವೇರಿಸತಕ್ಕದ್ದಾಗಿದೆ.”
ಯೇಸುವು ದೀಕ್ಷಾಸ್ನಾನ ಪಡೆಯುವದು ಯೋಗ್ಯವಾಗಿತ್ತು ಯಾಕೆ? ಕಾರಣವೇನಂದರೆ ಯೇಸುವಿನ ದೀಕ್ಷಾಸ್ನಾನವು ಪಾಪಗಳಿಗೆ ಪಶ್ಚಾತ್ತಾಪ ಪಡುವದರ ಬದಲು ತನ್ನ ತಂದೆಯ ಚಿತ್ತವನ್ನು ಮಾಡುತ್ತೇನೆ ಎಂದು ಅವನು ತನ್ನನ್ನು ನೀಡಿಕೊಳ್ಳುವುದರ ಸಂಕೇತವಾಗಿತ್ತು. ಯೇಸುವು ಒಬ್ಬ ಬಡಗಿಯಾಗಿದ್ದನು, ಆದರೆ ಯೆಹೋವ ದೇವರು ಅವನನ್ನು ಯಾಕಾಗಿ ಈ ಭೂಮಿಗೆ ಕಳುಹಿಸಿದ್ದನೋ ಆ ಶುಶ್ರೂಷೆಯನ್ನು ಆರಂಭಿಸಲು ಈಗ ಅವನಿಗೆ ಸಮಯ ಬಂದಿತ್ತು. ಅವನು ಯೇಸುವಿಗೆ ದೀಕ್ಷಾಸ್ನಾನ ಕೊಡುವಾಗ ಏನಾದರೂ ಒಂದು ಅಸಾಮಾನ್ಯ ಸಂಗತಿಯು ಸಂಭವಿಸುವದೆಂದು ಯೋಹಾನನು ನಿರೀಕ್ಷಿಸುತ್ತಿದ್ದನೆಂದು ನೀವು ಎಣಿಸುತ್ತೀರೋ?
ಒಳ್ಳೆಯದು, ಯೋಹಾನನು ಅನಂತರ ವರದಿಸುವದು: “ನೀರಿನ ದೀಕ್ಷಾಸ್ನಾನ ಮಾಡಿಸುವದಕ್ಕೆ ನನ್ನನ್ನು ಕಳುಹಿಸಿದಾತನು—ಯಾವನ ಮೇಲೆ ಆತ್ಮವು ಇಳಿದು ಬಂದು ಇರುವದನ್ನು ನೀನು ನೋಡುವಿಯೋ ಆತನೇ ಪವಿತ್ರಾತ್ಮದ ಸ್ನಾನ ಕೊಡುವವನು ಎಂದು ತಾನೇ ನನಗೆ ಹೇಳಿದನು.” ಆದ್ದರಿಂದ ಯೋಹಾನನು ಅವನು ದೀಕ್ಷಾಸ್ನಾನ ಮಾಡಿಸುವ ಯಾವನಾದರೂ ಒಬ್ಬನ ಮೇಲೆ ದೇವರ ಆತ್ಮವು ಬರುವದನ್ನು ನಿರೀಕ್ಷಿಸುತ್ತಿದ್ದನು. ಬಹುಶಃ ಈ ಕಾರಣದಿಂದ, ಯೇಸುವು ನೀರಿನಿಂದ ಮೇಲೆ ಬಂದಾಗ, “ದೇವರ ಆತ್ಮವು ಪಾರಿವಾಳದ ಹಾಗೆ ಇಳಿದು ಅವನ ಮೇಲೆ ಬಂದದ್ದನ್ನು ಕಂಡಾಗ” ಅವನು ನಿಜವಾಗಿಯೂ ಅಚ್ಚರಿಪಟಲಿಲ್ಲ.
ಆದರೆ ಅದಕ್ಕಿಂತಲೂ ಹೆಚ್ಚಾದ್ದದು ಯೇಸುವಿನ ದೀಕ್ಷಾಸ್ನಾನದಲ್ಲಿ ನಡೆಯಿತು. ಅವನಿಗೆ ‘ಪರಲೋಕವು ತೆರೆಯಲ್ಪಟ್ಟಿತು.’ ಇದರ ಅರ್ಥವೇನು? ಅವನು ದೀಕ್ಷಾಸ್ನಾನ ಪಡೆಯುವಾಗ ಪರಲೋಕದಲ್ಲಿ ಮಾನವ ಪೂರ್ವದ ಜೀವಿತದ ಜ್ಞಾಪಕವು ಅವನಿಗೆ ಹಿಂದಕ್ಕೆ ಬಂದಿರಬೇಕು ಎಂಬರ್ಥದಲ್ಲಿ ಸ್ಫುಟವಾಗುತ್ತದೆ. ಆದಕಾರಣ, ಅವನ ಮಾನವಪೂರ್ವ ಅಸ್ತಿತ್ವದಲ್ಲಿ ಪರಲೋಕದಲ್ಲಿ ದೇವರು ಅವನೊಡನೆ ಮಾತಾಡಿದ ಎಲ್ಲಾ ಸಂಗತಿಗಳ ಸಹಿತ, ಯೆಹೋವ ದೇವರ ಒಬ್ಬ ಆತ್ಮ-ಪುತ್ರನಾಗಿದ್ದ ತನ್ನ ಜೀವಿತವನ್ನು ಯೇಸುವು ಈಗ ಪೂರ್ಣವಾಗಿ ಪುನಃ ನೆನಪಿಗೆ ತಂದನು.
ಇದರ ಜೊತೆಯಲ್ಲಿ ದೀಕ್ಷಾಸ್ನಾನದ ಸಮಯದಲ್ಲಿ ಪರಲೋಕದಿಂದ ಒಂದು ವಾಣಿಯು ಘೋಷಿಸಲ್ಪಟ್ಟಿತು: “ಈತನು ನನ್ನ ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ.” ಅದು ಯಾರ ವಾಣಿ? ಯೇಸುವಿನ ಸ್ವಂತ ವಾಣಿಯೋ? ಅಲ್ಲವೇ ಅಲ್ಲ! ಅದು ದೇವರದ್ದು. ಯೇಸುವು ದೇವರ ಮಗನಾಗಿದ್ದನೇ ಹೊರತು, ಕೆಲವರು ವಾದಿಸುವಂತೆ ಅವನು ತಾನೇ ಸ್ವತಃ ದೇವರಾಗಿರಲಿಲ್ಲ ಎಂಬುದು ಸ್ಪಷ್ಟ!.
ಆದಾಗ್ಯೂ, ಮೊದಲನೆಯ ಮನುಷ್ಯನಾದ ಆದಾಮನಿದ್ದಂತೆ, ಯೇಸುವು ದೇವರ ಮಾನವ ಪುತ್ರನಾಗಿದ್ದನು. ಶಿಷ್ಯನಾದ ಲೂಕನು, ಯೇಸುವಿನ ದೀಕ್ಷಾಸ್ನಾನವನ್ನು ವರ್ಣಿಸಿದ ನಂತರ ಬರೆಯುವದು: “ಯೇಸು ಉಪದೇಶ ಮಾಡುವದಕ್ಕೆ ಪ್ರಾರಂಭಿಸಿದಾಗ ಹೆಚ್ಚು ಕಡಿಮೆ ಮೂವತ್ತು ವರುಷದವನಾಗಿದ್ದನು. ಆತನು ಜನರ ಎಣಿಕೆಯಲ್ಲಿ ಯೋಸೇಫನ ಮಗನು, ಹೇಲೀಯ ಮಗನು, . . . ದಾವೀದನ ಮಗನು, . . . ಅಬ್ರಹಾಮನ ಮಗನು, . . . ನೋಹನ ಮಗನು, . . . ಆದಾಮನ ಮಗನು, ಇವನು ದೇವರ ಮಗನು.”
ಆದಾಮನು “ದೇವರ” ಮಾನವ “ಮಗ” ನಾಗಿದ್ದಂತೆಯೇ ಯೇಸುವು ಕೂಡಾ. ಯೇಸುವಿನ ಜೀವನವನ್ನು ನಾವು ಪರೀಕ್ಷಿಸುವಾಗ ಜೀವಿಸಿದ ಎಲ್ಲಾ ಮಾನವರಲ್ಲಿ ಯೇಸು ಅತಿ ಮಹಾ ಪುರುಷನಾಗಿದ್ದಾನೆ ಎಂದು ನಮಗೆ ವಿಶಧವಾಗುತ್ತದೆ. ಆದಾಗ್ಯೂ, ಅವನ ದೀಕ್ಷಾಸ್ನಾನದಲ್ಲಿ, ಯೇಸುವು ದೇವರೊಂದಿಗೆ, ದೇವರ ಆತ್ಮೀಯ ಪುತ್ರನೋಪಾದಿಯ ಒಂದು ಹೊಸ ಸಂಬಂಧದಲ್ಲಿ ಪ್ರವೇಶಿಸುತ್ತಾನೆ. ಈಗ ದೇವರು ಅವನನ್ನು ಪುನಃ ಪರಲೋಕಕ್ಕೆ ಕರೆಯುವ ಕರೆಯಂತೆ ಅದಿರುತ್ತದೆ, ಶಾಪಗ್ರಸ್ತ ಮಾನವಕುಲದ ಪರವಾಗಿ ಸದಾಕಾಲಕ್ಕೂ ಅವನ ಮಾನವ ಜೀವವನ್ನು ಯಜ್ಞವಾಗಿ ನೀಡುವ ಒಂದು ಜೀವಿತಮಾರ್ಗಕ್ಕೆ ಅದು ಅವನನ್ನು ನಡಿಸುವುದು. ಮತ್ತಾಯ 3:13-17; ಲೂಕ 3:21-38; 1:34-36, 44; 2:10-14; ಯೋಹಾನ 1:32-34; ಇಬ್ರಿಯ 10:5-9.
▪ ಯೇಸುವು ಯೋಹಾನನಿಗೆ ಯಾಕೆ ಅಪರಿಚಿತನಾಗಿರಲಿಲ್ಲ?
▪ ಯೇಸುವು ಯಾವುದೇ ಪಾಪವನ್ನು ಮಾಡದೇ ಇದ್ದುದರಿಂದ, ಅವನು ದೀಕ್ಷಾಸ್ನಾನ ಪಡೆದ್ದದು ಯಾಕೆ?
▪ ಯೇಸುವಿನ ಕುರಿತು ಯೋಹಾನನಿಗೆ ಏನು ತಿಳಿದಿತ್ತೋ ಅದರ ನೋಟದಲ್ಲಿ, ಯೇಸುವಿನ ಮೇಲೆ ದೇವರ ಆತ್ಮವು ಬರುವಾಗ ಅವನಿಗೆ ಯಾಕೆ ಆಶ್ಚರ್ಯವಾಗಲಿಲ್ಲ?