ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅವರ ನಂಬಿಕೆಯನ್ನು ಅನುಕರಿಸಿ | ಯೋಸೇಫ

‘ನಾನು ದೇವರಿಗೆ ಸಮಾನನೋ?’

‘ನಾನು ದೇವರಿಗೆ ಸಮಾನನೋ?’

ಯೋಸೇಫ ಸಂಜೆಯ ತಂಗಾಳಿಯಲ್ಲಿ ತನ್ನ ಮನೆಯ ತೋಟದಲ್ಲಿ ನಿಂತು ಸುತ್ತಲು ಕಣ್ಣು ಹಾಯಿಸುತ್ತಾನೆ. ಖರ್ಜೂರ ಮತ್ತು ಇತರ ಹಣ್ಣಿನ ಮರಗಳು, ನೀರಿನ ಕೊಳದಲ್ಲಿ ಕಂಗೊಳಿಸುತ್ತಿದ್ದ ಗಿಡಗಳು, ತನ್ನ ಮನೆಯಿಂದಾಚೆ ಕಾಣುತ್ತಿದ್ದ ಫರೋಹನ ಭವ್ಯ ಅರಮನೆ ಇವೆಲ್ಲ ಅವನ ಕಣ್ಣಿಗೆ ಬೀಳುತ್ತವೆ. ಏನೋ ಶಬ್ದ ಕೇಳಿ ಯೋಸೇಫನು ವಾಸ್ತವಕ್ಕೆ ಬರುತ್ತಾನೆ. ಸರಿಯಾಗಿ ಕೇಳಿದಾಗ, ಅದು ತನ್ನ ಮಕ್ಕಳು ನಗುತ್ತಿರುವ ಶಬ್ದ ಅಂತ ತಿಳಿದುಬರುತ್ತದೆ. ‘ನನ್ನ ಮಗ ಮನಸ್ಸೆ ತನ್ನ ಪುಟ್ಟ ತಮ್ಮ ಎಫ್ರಾಯಿಮನನ್ನು ನಗಿಸುತ್ತಿರಬಹುದು. ಇವರಿಬ್ಬರ ತುಂಟಾಟ ನೋಡಿ ನನ್ನ ಹೆಂಡತಿಯ ಮುಖದಲ್ಲೂ ಮಂದಹಾಸ ಮೂಡಿರಬಹುದು’ ಎಂದು ಊಹಿಸಿಕೊಂಡು ಯೋಸೇಫನು ತನ್ನೊಳಗೆ ನಗುತ್ತಾನೆ. ತಾನೆಷ್ಟು ಸುಖೀ ಅಂತ ನೆನಸಿಕೊಂಡು ಯೆಹೋವನಿಗೆ ಮನದಲ್ಲೇ ಕೃತಜ್ಞತೆ ಹೇಳುತ್ತಾನೆ.

ಯೋಸೇಫನು ತನ್ನ ಮೊದಲನೇ ಮಗನಿಗೆ ಮನಸ್ಸೆ ಅಂತ ಹೆಸರಿಟ್ಟಿದ್ದನು. ಆ ಹೆಸರಿನ ಅರ್ಥ, ಮರೆಯುವಂತೆ ಮಾಡುವವನು ಎಂದಾಗಿತ್ತು. (ಆದಿಕಾಂಡ 41:51) ತನ್ನ ಮನೆ, ಅಣ್ಣತಮ್ಮಂದಿರು ಮತ್ತು ಅಪ್ಪನ ನೆನಪಾದಾಗೆಲ್ಲ ಯೋಸೇಫನಿಗೆ ನೋವಾಗುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಯೆಹೋವನು ತನ್ನನ್ನು ಆಶೀರ್ವದಿಸಿದ ವಿಧ ನೋಡಿ ಯೋಸೇಫ ಖಂಡಿತ ಆ ನೋವನ್ನು ಮರೆತಿದ್ದಿರಬೇಕು. ಅಣ್ಣಂದಿರ ದ್ವೇಷ ಯೋಸೇಫನ ಜೀವನವನ್ನೇ ಬದಲಾಯಿಸಿಬಿಟ್ಟಿತ್ತು. ಅವರು ಯೋಸೇಫನನ್ನು ಬೈದು, ಹೊಡೆದು, ಕೊಲ್ಲಲು ಕೂಡ ಒಳಸಂಚು ಮಾಡಿದ್ದರು. ಆದರೆ, ಕೊನೆಗೆ ಬೇರೆ ದೇಶದವರಿಗೆ ದಾಸನಾಗಿ ಮಾರಿಬಿಟ್ಟಿದ್ದರು. ಆವತ್ತಿನಿಂದ ಯೋಸೇಫನ ಜೀವನದಲ್ಲಿ ಯಾರೂ ಊಹಿಸಿರದ ತಿರುವುಗಳು ಒಂದರ ನಂತರ ಒಂದು ಬಂದವು. ಅವನು ಸುಮಾರು 12 ವರ್ಷ ದಾಸನಾಗಿ ಕೆಲಸ ಮಾಡಿದ. ನಂತರ ಸೆರೆಮನೆ ವಾಸವನ್ನೂ ಅನುಭವಿಸಿದ. ಆದರೆ ಇದೀಗ ಅವನು ಇಡೀ ಐಗುಪ್ತ ದೇಶಕ್ಕೆ ಎರಡನೇ ಸ್ಥಾನದಲ್ಲಿರುವ ಉನ್ನತ ಅಧಿಕಾರಿಯಾಗಿದ್ದ! *

ಯೆಹೋವನು ಹೇಳಿದಂತೆಯೇ ವಿಷಯಗಳು ನಡೆಯುತ್ತಿದ್ದದ್ದನ್ನು ಯೋಸೇಫ ಹಲವು ವರ್ಷಗಳಿಂದ ನೋಡಿದ್ದ. ಯೆಹೋವ ದೇವರು ಹೇಳಿದಂತೆ ಐಗುಪ್ತದಲ್ಲಿ 7 ವರ್ಷಗಳು ಸಮೃದ್ಧ ಆಹಾರ ಬೆಳೆದಿತ್ತು, ಆಗ ಯೋಸೇಫನೇ ಮುಂದಾಳುತ್ವ ವಹಿಸಿಕೊಂಡು ಎಲ್ಲವನ್ನೂ ಶೇಖರಿಸಿಟ್ಟಿದ್ದನು. ಆ ಸಮಯದಲ್ಲಿ ಅವನಿಗೆ ಇಬ್ಬರು ಗಂಡು ಮಕ್ಕಳು ಹುಟ್ಟಿದ್ದರು. ಇವುಗಳೆಲ್ಲದರ ಮಧ್ಯೆಯೂ ಯೋಸೇಫನು ಆಗಾಗ್ಗೆ ನೂರಾರು ಮೈಲಿ ದೂರದಲ್ಲಿದ್ದ ತನ್ನ ಸ್ವಂತ ಕುಟುಂಬದ ಬಗ್ಗೆ ಯೋಚಿಸುತ್ತಿದ್ದ. ಅದರಲ್ಲೂ ಮುಖ್ಯವಾಗಿ ತನ್ನ ತಮ್ಮ ಬೆನ್ಯಾಮೀನ ಮತ್ತು ಪ್ರೀತಿಯ ತಂದೆ ಯಾಕೋಬನ ನೆನಪು ಅವನಿಗೆ ಕಾಡುತ್ತಿತ್ತು. ‘ಅವರು ಹೇಗಿದ್ದಾರೆ? ಅಣ್ಣಂದಿರು ಇನ್ನೂ ಹಾಗೇ ಇದ್ದಾರಾ? ಅಥವಾ ಬದಲಾಗಿದ್ದಾರಾ? ಮತ್ತೆ ಎಂದಾದರೂ ಎಲ್ಲರೂ ಒಂದಾಗಲು ಸಾಧ್ಯಾನಾ?’ ಎಂದು ಯೋಚಿಸುತ್ತಿದ್ದ.

ನಿಮ್ಮ ಪರಿಸ್ಥಿತಿಯೂ ಯೋಸೇಫನಂತೆ ಇದೆಯಾ? ದ್ವೇಷ, ಹೊಟ್ಟೆಕಿಚ್ಚು ಮತ್ತು ಮೋಸದಿಂದಾಗಿ ನಿಮ್ಮ ಕುಟುಂಬದಲ್ಲಿ ಬಿರುಕು ಬಂದಿದೆಯಾ? ಹಾಗಾದರೆ, ಯೋಸೇಫ ಅವನ ಕುಟುಂಬದೊಂದಿಗೆ ನಡೆದುಕೊಂಡ ವಿಧದಿಂದ ನಾವು ಬಹಳಷ್ಟು ಕಲಿಯಬಹುದು.

‘ಯೋಸೇಫನ ಬಳಿಗೆ ಹೋಗಿರಿ’

ವರ್ಷಗಳು ಉರುಳುತ್ತಿದ್ದಂತೆ, ಯೋಸೇಫ ತನ್ನ ಕೆಲಸದಲ್ಲಿ ಹೆಚ್ಚು ಕಾರ್ಯಮಗ್ನನಾದ. ಫರೋಹನ ಕನಸಿನಲ್ಲಿ ಯೆಹೋವ ದೇವರು ಹೇಳಿದಂತೆ, ಸಮೃದ್ಧ ಬೆಳೆಯ 7 ವರ್ಷಗಳು ಮುಗಿದು, ಈಗ ಎಲ್ಲೆಡೆ ಬರಗಾಲ ಶುರುವಾಯಿತು. ಆದರೆ ‘ಐಗುಪ್ತದೇಶದಲ್ಲಿ ಮಾತ್ರ ಆಹಾರ ದೊರೆಯುತ್ತಿತ್ತು’ ಎಂದು ಬೈಬಲ್‌ ಹೇಳುತ್ತದೆ. (ಆದಿಕಾಂಡ 41:54) ದೇವರ ಸಹಾಯದಿಂದ ಯೋಸೇಫ ಈ ಬರಗಾಲದ ಬಗ್ಗೆ ಮೊದಲೇ ಎಚ್ಚರಿಸಿದ್ದರಿಂದ ಮತ್ತು ಒಳ್ಳೆಯ ರೀತಿಯಲ್ಲಿ ಯೋಜನೆ ಮಾಡಿದ್ದರಿಂದ ಐಗುಪ್ತದವರಿಗೆ ಆಹಾರದ ಕೊರತೆ ಬರಲಿಲ್ಲ.

ಯೋಸೇಫನು ದೀನತೆ ತೋರಿಸಿದ್ದರಿಂದ ಯೆಹೋವನು ಅವನನ್ನು ಆಶೀರ್ವದಿಸಿದನು

ಯೋಸೇಫನ ಬುದ್ಧಿವಂತಿಕೆಯಿಂದಾದ ಒಳಿತನ್ನು ನೋಡಿ ಐಗುಪ್ತರು ಅವನಿಗೆ ಕೃತಜ್ಞರಾಗಿದ್ದಿರಬೇಕು. ಆದರೆ ಆ ಮಹಿಮೆಯನ್ನು ಯೋಸೇಫನು ಯೆಹೋವನಿಗೆ ಸಲ್ಲಿಸಿರುತ್ತಾನೆ. ನಮ್ಮಲ್ಲಿರುವ ಕೌಶಲ್ಯಗಳನ್ನು ಯೆಹೋವನ ಸೇವೆ ಮಾಡಲು ದೀನತೆಯಿಂದ ಉಪಯೋಗಿಸುವಲ್ಲಿ, ನಮ್ಮ ಊಹೆಗೂ ಮೀರಿದ ವಿಷಯಗಳನ್ನು ಮಾಡಲು ಯೆಹೋವನು ನಮ್ಮನ್ನು ಶಕ್ತರನ್ನಾಗಿ ಮಾಡುತ್ತಾನೆ.

ಸ್ವಲ್ಪ ದಿನಗಳ ನಂತರ ಐಗುಪ್ತ ಜನರ ಬಳಿ ಇದ್ದ ಆಹಾರವೆಲ್ಲಾ ಖಾಲಿ ಆಯಿತು. ಆಗ ಜನರು ಫರೋಹನಲ್ಲಿ ಸಹಾಯಕ್ಕಾಗಿ ಮೊರೆಯಿಟ್ಟರು. ಅದಕ್ಕೆ ಫರೋಹನು, “ಯೋಸೇಫನ ಬಳಿಗೆ ಹೋಗಿರಿ, ಅವನ ಮಾತಿನ ಮೇರೆಗೆ ಮಾಡಿರಿ” ಎಂದು ಹೇಳಿದನು. ಆಗ ಯೋಸೇಫನು ಇಷ್ಟು ದಿನ ಶೇಖರಿಸಿಟ್ಟಿದ್ದ ದವಸ-ಧಾನ್ಯಗಳ ದಾಸ್ತಾನನ್ನು ತೆರೆದನು. ಜನರು ತಮಗೆ ಬೇಕಾದದ್ದನ್ನು ಖರೀದಿಸಲು ಆರಂಭಿಸಿದರು.—ಆದಿಕಾಂಡ 41:55, 56.

ಆದರೆ ಸುತ್ತಮುತ್ತಲಿನ ದೇಶಗಳ ಜನರು ಆಹಾರವಿಲ್ಲದೆ ಬಳಲಿ ಬೆಂಡಾಗಿದ್ದರು. ನೂರಾರು ಮೈಲಿ ದೂರದಲ್ಲಿದ್ದ ಯೋಸೇಫನ ಕುಟುಂಬ ಸಹ ಬರದಿಂದ ತತ್ತರಿಸಿ ಹೋಗಿತ್ತು. ಐಗುಪ್ತದಲ್ಲಿ ಆಹಾರ ಸಿಗುತ್ತದೆ ಎಂಬ ಸುದ್ದಿ ಕೇಳಿದ ಯಾಕೋಬನು ಆಹಾರ ತೆಗೆದುಕೊಂಡು ಬರಲು ತನ್ನ ಗಂಡು ಮಕ್ಕಳನ್ನು ಐಗುಪ್ತಕ್ಕೆ ಕಳುಹಿಸಿದನು.—ಆದಿಕಾಂಡ 42:1, 2.

ಯಾಕೋಬನಿಗೆ ಬೆನ್ಯಾಮೀನನೆಂದರೆ ತುಂಬ ಪ್ರೀತಿ. ಆದ್ದರಿಂದ ಆಹಾರ ತರಲು ತನ್ನ 10 ಗಂಡು ಮಕ್ಕಳನ್ನು ಮಾತ್ರ ಕಳುಹಿಸಿದನು. ಇದಕ್ಕಿಂತ ಮುಂಚೆ ತಾನು ಪ್ರೀತಿಸಿದ್ದ ಯೋಸೇಫನಿಗೆ ‘ನಿನ್ನ ಅಣ್ಣಂದಿರನ್ನು ನೋಡಿಕೊಂಡು ಬಾ’ ಎಂದು ಹೇಳಿ ಕಳುಹಿಸಿದಾಗ ಏನಾಯಿತು ಅನ್ನುವುದನ್ನು ಯಾಕೋಬನು ಮರೆತಿರಲಿಲ್ಲ. ರಕ್ತಮಯವಾಗಿದ್ದ, ಹರಿದು ಹೋಗಿದ್ದ ಯೋಸೇಫನ ಬಟ್ಟೆಯನ್ನು ಅವನ ಅಣ್ಣಂದಿರು ಯಾಕೋಬನಿಗೆ ತೋರಿಸಿ, ಕಾಡು ಮೃಗ ಅವನನ್ನು ತಿಂದುಬಿಟ್ಟಿದೆ ಎಂದು ನಂಬಿಸಿದ್ದರು.—ಆದಿಕಾಂಡ 37:31-35.

‘ಯೋಸೇಫನು ನೆನಪಿಸಿಕೊಂಡನು’

ಹಲವಾರು ದಿನಗಳ ಪ್ರಯಾಣದ ನಂತರ ಯಾಕೋಬನ ಮಕ್ಕಳು ಐಗುಪ್ತಕ್ಕೆ ಬಂದರು. ‘ಇಲ್ಲಿ ದವಸ ಧಾನ್ಯಗಳು ಎಲ್ಲಿ ಸಿಗುತ್ತವೆ’ ಎಂದು ವಿಚಾರಿಸಿದಾಗ ಅಲ್ಲಿನ ಜನ ಅವರನ್ನು ಒಬ್ಬ ಅಧಿಕಾರಿಯ ಬಳಿ ಕಳುಹಿಸಿದರು. ಈ ಅಧಿಕಾರಿ ಬೇರೆ ಯಾರೂ ಅಲ್ಲ, ಯೋಸೇಫನೇ ಆಗಿದ್ದ. (ಆದಿಕಾಂಡ 41:45) ಹಾಗಾದರೆ, ಅವನ ಅಣ್ಣಂದಿರು ಅವನನ್ನು ಗುರುತಿಸಿದರಾ? ಇಲ್ಲ, ಅವನನ್ನು ಐಗುಪ್ತದ ಒಬ್ಬ ಉನ್ನತ ಅಧಿಕಾರಿ ಎಂದಷ್ಟೇ ನೆನಸಿದರು. ಆದ್ದರಿಂದ, ಯೋಸೇಫನನ್ನು ಕಂಡ ತಕ್ಷಣ ‘ಅವನಿಗೆ ಅಡ್ಡಬಿದ್ದರು.’—ಆದಿಕಾಂಡ 42:5, 6.

ಯೋಸೇಫ ಅವರನ್ನು ಗುರುತಿಸಿದನಾ? ಹೌದು, ನೋಡಿದ ತಕ್ಷಣ ಗುರುತಿಸಿಬಿಟ್ಟ! ಅವರು ತನಗೆ ಅಡ್ಡಬಿದ್ದದ್ದನ್ನು ನೋಡಿ, ಬಾಲ್ಯದಲ್ಲಿ ತನಗೆ ಬಿದ್ದ ‘ಕನಸನ್ನು ನೆನಪಿಸಿಕೊಂಡ.’ ಆ ಕನಸಿನ ಮೂಲಕ ಅವನ ಅಣ್ಣಂದಿರು ಅವನಿಗೆ ಅಡ್ಡ ಬೀಳುವರು ಎಂದು ಯೆಹೋವನು ತಿಳಿಸಿದ್ದನು. (ಆದಿಕಾಂಡ 37:2, 5-9; 42:7, 9) ನಿಮಗೇನು ಅನಿಸುತ್ತೆ, ಯೋಸೇಫ ಈಗ ಏನು ಮಾಡಿರಬಹುದು? ಅವರನ್ನು ಅಪ್ಪಿಕೊಂಡು, ‘ನಾನೇ ನಿಮ್ಮ ತಮ್ಮ’ ಅಂತ ಹೇಳಿರಬಹುದಾ? ಅಥವಾ ಮುಯ್ಯಿಗೆ ಮುಯ್ಯಿ ತೀರಿಸಿರಬಹುದಾ?

ಯೆಹೋವ ದೇವರ ಉದ್ದೇಶದಂತೆ ಎಲ್ಲ ಘಟನೆಗಳು ನಡೆಯುತ್ತಿದ್ದದರಿಂದ ಆ ಸಮಯದಲ್ಲಿ ಹೇಗೆ ನಡೆದುಕೊಳ್ಳಬೇಕೆಂದು ಯೋಸೇಫ ತಿಳಿದುಕೊಳ್ಳಬೇಕಿತ್ತು. ಕಾರಣ, “ನಿನ್ನಿಂದ ಒಂದು ದೊಡ್ಡ ಜನಾಂಗವಾಗುತ್ತದೆ” ಎಂದು ದೇವರು ಯಾಕೋಬನಿಗೆ ಹೇಳಿದ್ದನು. (ಆದಿಕಾಂಡ 35:11, 12) ಒಂದುವೇಳೆ, ಆ ಅಣ್ಣಂದಿರು ಈಗಲೂ ಕೋಪಿಷ್ಠರು, ನಿರ್ದಯಿಗಳು, ಸ್ವಾರ್ಥಿಗಳು ಆಗಿದ್ದರೆ ಮುಂದೆ ತಮ್ಮ ಜನಾಂಗದ ಮೇಲೆ ಭಾರೀ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇತ್ತು. ಯೋಸೇಫ ತನ್ನ ದ್ವೇಷ ತೀರಿಸಿಕೊಂಡಿದ್ದರೆ ತನ್ನ ಊರಲ್ಲಿದ್ದ ಅಪ್ಪ ಮತ್ತು ತಮ್ಮ ಬೆನ್ಯಾಮೀನನಿಗೆ ತೊಂದರೆ ಆಗುವ ಸಾಧ್ಯತೆ ಇತ್ತು. ಆದ್ದರಿಂದ ಯೋಸೇಫ ತಾನು ಯಾರು ಎಂದು ಅವರಿಗೆ ತಿಳಿಸದೆ, ಅವರು ಬದಲಾಗಿದ್ದಾರಾ ಇಲ್ಲವಾ ಎಂದು ಪರೀಕ್ಷಿಸಿದ. ಅವನು ಏನೇ ನಿರ್ಧಾರ ಮಾಡುವುದಕ್ಕೂ ಮುಂಚೆ ತನ್ನ ಅಣ್ಣಂದಿರು ಈಗ ಎಂಥವರಾಗಿದ್ದಾರೆ ಎಂದು ತಿಳಿದುಕೊಳ್ಳುವುದು ಪ್ರಾಮುಖ್ಯವಾಗಿತ್ತು.

ಯೋಸೇಫನಂಥ ಪರಿಸ್ಥಿತಿ ನಿಮಗೆ ಬರದೇ ಇರಬಹುದು. ಆದರೆ ಎಲ್ಲ ಕುಟುಂಬಗಳಲ್ಲೂ ಮನಸ್ತಾಪ ಮತ್ತು ಬಿರುಕುಗಳು ಬಂದೇ ಬರುತ್ತವೆ. ಅಂಥ ಸಂದರ್ಭಗಳಲ್ಲಿ ನಾವು ಯೋಸೇಫನನ್ನು ಅನುಕರಿಸಬೇಕು. ಅದರರ್ಥ, ನಾವು ನಮ್ಮ ಮನಸ್ಸಿಗೆ ತೋಚಿದಂತೆ ನಡೆದುಕೊಳ್ಳುವ ಬದಲಿಗೆ ಯೆಹೋವ ದೇವರು ಬಯಸುವಂತೆ ನಡೆದುಕೊಳ್ಳಲು ಪ್ರಯತ್ನಿಸಬೇಕು. (ಜ್ಞಾನೋಕ್ತಿ 14:12) ನಿಮ್ಮ ಕುಟುಂಬದವರೊಂದಿಗೆ ಸಮಾಧಾನದಿಂದ ನಡೆದುಕೊಳ್ಳುವುದು ಪ್ರಾಮುಖ್ಯ. ಆದರೆ ನೆನಪಿಡಿ, ಯೆಹೋವ ಮತ್ತು ಯೇಸುವಿನೊಂದಿಗಿನ ಸಂಬಂಧ ಅದಕ್ಕಿಂತ ಪ್ರಾಮುಖ್ಯ.—ಮತ್ತಾಯ 10:37.

‘ನಿಮ್ಮನ್ನು ಪರೀಕ್ಷಿಸುತ್ತೇನೆ’

ತನ್ನ ಅಣ್ಣಂದಿರು ಬದಲಾಗಿದ್ದಾರಾ ಇಲ್ಲವಾ ಎಂದು ತಿಳಿದುಕೊಳ್ಳಲು ಯೋಸೇಫನು ಅನೇಕ ಪರೀಕ್ಷೆಗಳನ್ನು ಮಾಡುತ್ತಾನೆ. ಮೊದಲಿಗೆ ಅವರ ಬಳಿ ತುಂಬ ಕಟುವಾಗಿ ಮಾತಾಡುತ್ತಾ ‘ನೀವು ಗೂಢಾಚಾರರು’ ಎಂದು ಆರೋಪಿಸುತ್ತಾನೆ. ‘ಇಲ್ಲ, ನಾವು ಗೂಢಾಚಾರರಲ್ಲ’ ಎಂದು ತಮ್ಮನ್ನು ಸಮರ್ಥಿಸಿಕೊಳ್ಳಲು ತಮ್ಮ ಕುಟುಂಬದ ಮಾಹಿತಿಯನ್ನೆಲ್ಲಾ ಅವರು ಹೇಳುತ್ತಾರೆ. ಆ ಮಾಹಿತಿಯಲ್ಲಿ ಅವರ ಚಿಕ್ಕ ತಮ್ಮ ಬೆನ್ಯಾಮೀನನು ಮನೆಯಲ್ಲಿರುವುದರ ಬಗ್ಗೆಯೂ ಹೇಳುತ್ತಾರೆ. ತನ್ನ ತಮ್ಮನ ಬಗ್ಗೆ ಕೇಳಿ ಯೋಸೇಫನಿಗೆ ತುಂಬ ಸಂತೋಷವಾಗುತ್ತದಾದರೂ ಅದನ್ನು ಹೊರಗೆ ತೋರಿಸಿಕೊಡುವುದಿಲ್ಲ. ಆದರೆ ನಿಜವಾಗಲೂ ಬೆನ್ಯಾಮೀನನು ಬದುಕಿದ್ದಾನಾ? ಅದನ್ನು ತಿಳಿದುಕೊಳ್ಳಲು ಯೋಸೇಫ ಈಗ ಇನ್ನೊಂದು ಉಪಾಯ ಮಾಡುತ್ತಾನೆ. ಅವರಿಗೆ, ‘ನಿಮ್ಮ ಮಾತುಗಳನ್ನು ಪರೀಕ್ಷಿಸುತ್ತೇನೆ. ಅದಕ್ಕಾಗಿ ನೀವು ನಿಮ್ಮ ಚಿಕ್ಕ ತಮ್ಮನಾದ ಬೆನ್ಯಾಮೀನನನ್ನು ಕರೆತರಬೇಕು, ಆಗ ನೀವು ಗೂಢಾಚಾರರಲ್ಲ ಎಂದು ನಂಬುವೆನು. ಅವನನ್ನು ಕರೆತರುವವರೆಗೆ ನಿಮ್ಮಲ್ಲಿ ಒಬ್ಬನನ್ನು ಒತ್ತೆ ಆಳಾಗಿ ಇಟ್ಟುಕೊಳ್ಳುತ್ತೇನೆ’ ಎಂಬ ಷರತ್ತಿಟ್ಟು ಅವರು ಮನೆಗೆ ಹೋಗಲು ಅನುಮತಿಕೊಟ್ಟನು.—ಆದಿಕಾಂಡ 42:9-20.

ಯೋಸೇಫನ ಈ ಮಾತನ್ನು ಕೇಳಿ ಅವರಿಗೆ ಆತಂಕವಾಯಿತು. ಅವನ ಮುಂದೆಯೇ ‘ನಾವು ನಮ್ಮ ತಮ್ಮ ಯೋಸೇಫನಿಗೆ ಮಾಡಿದ್ದು ದ್ರೋಹವೇ ಸರಿ; ಅವನು ನಮ್ಮನ್ನು ಬೇಡಿಕೊಂಡಾಗ ನಾವು ಅವನ ಪ್ರಾಣಸಂಕಟವನ್ನು ತಿಳಿದರೂ ಅವನ ಮೊರೆಗೆ ಕಿವಿಗೊಡಲಿಲ್ಲ; ಆ ಕಾರಣದಿಂದಲೇ ಈ ಸಂಕಟವು ನಮಗೆ ಪ್ರಾಪ್ತವಾಗಿದೆ’ ಎಂದು ಹೇಳಿಕೊಂಡು ಪಶ್ಚಾತ್ತಾಪಪಟ್ಟರು. ಅವರ ಮಾತುಗಳನ್ನು ಕೇಳಿ ಯೋಸೇಫನಿಗೆ ಕಣ್ಣೀರು ಬಂತು, ಆದರೆ ಅಣ್ಣಂದಿರು ಅದನ್ನು ಗಮನಿಸಬಾರದೆಂದು ಯೋಸೇಫ ಅಲ್ಲಿಂದ ಹೊರಟು ಹೋದನು. (ಆದಿಕಾಂಡ 42:21-24) ಕಷ್ಟ ಬಂದಾಗ ಮಾತಿನಲ್ಲಿ ಜನ ಪಶ್ಚಾತ್ತಾಪ ಪಡುತ್ತಾರಾದರೂ ನಿಜ ಪಶ್ಚಾತ್ತಾಪ ಕ್ರಿಯೆಗಳಿಂದ ಗೊತ್ತಾಗಬೇಕೆಂದು ಯೋಸೇಫ ಅವರನ್ನು ಮತ್ತೆ ಪರೀಕ್ಷಿಸಲು ಮುಂದಾಗುತ್ತಾನೆ.

ಅವರನ್ನು ತಮ್ಮ ದೇಶಕ್ಕೆ ಕಳುಹಿಸಿ, ಸಿಮೆಯೋನನನ್ನು ಒತ್ತೆ ಆಳಾಗಿ ಇಟ್ಟುಕೊಳ್ಳುತ್ತಾನೆ. ಅವರನ್ನು ಕಳುಹಿಸುವಾಗ ಅವರ ಆಹಾರದ ಚೀಲದಲ್ಲಿ ಅವರಿಗೇ ತಿಳಿಯದಂತೆ ಹಣವನ್ನು ಹಾಕುತ್ತಾನೆ. ಆ ಅಣ್ಣಂದಿರು ತಮ್ಮ ಮನೆಗೆ ಹಿಂದುರಿಗಿ, ನಡೆದದ್ದೆಲ್ಲವನ್ನೂ ಯಾಕೋಬನಿಗೆ ತಿಳಿಸುತ್ತಾರೆ. ಯಾಕೋಬನನ್ನು ಹೇಗೋ ಒಪ್ಪಿಸಿ ಬೆನ್ಯಾಮೀನನ್ನು ಜೊತೆಗೆ ಕರೆದುಕೊಂಡು ಐಗುಪ್ತಕ್ಕೆ ಮತ್ತೆ ಬರುತ್ತಾರೆ. ಬಂದ ನಂತರ, ಅವರ ಚೀಲದಲ್ಲಿ ಸಿಕ್ಕ ಹಣವನ್ನು ಪ್ರಾಮಾಣಿಕವಾಗಿ ‘ಈ ಹಣ ನಮ್ಮದಲ್ಲ’ ಎಂದು ಹಿಂತಿರುಗಿಸುತ್ತಾರೆ. ಈ ವಿಷಯದಲ್ಲಿ ಅವರ ಪ್ರಾಮಾಣಿಕತೆ ನೋಡಿ ಯೋಸೇಫನು ಸಂತೋಷಿಸುತ್ತಾನಾದರೂ ಅವರು ಹೃದಯದಲ್ಲಿ ಎಂಥವರಾಗಿದ್ದಾರೆ ಎಂದು ತಿಳಿದುಕೊಳ್ಳಲು ಇನ್ನೂ ಪರೀಕ್ಷಿಸುತ್ತಾನೆ. ಬೆನ್ಯಾಮೀನನನ್ನು ನೋಡಿದ ಸಂಭ್ರಮದಲ್ಲಿ ಅವರೆಲ್ಲರಿಗೂ ಒಂದು ದೊಡ್ಡ ಔತಣವನ್ನೇ ಏರ್ಪಡಿಸುತ್ತಾನೆ. ನಂತರ ಅವರೆಲ್ಲರ ಚೀಲಗಳಲ್ಲಿ ದವಸ ಧಾನ್ಯಗಳನ್ನು ತುಂಬಿಸಿ ಅವರನ್ನು ತಮ್ಮ ಊರಿಗೆ ಕಳುಹಿಸುತ್ತಾನೆ. ಆದರೆ ಈ ಬಾರಿ ಬೆನ್ಯಾಮೀನನ ಚೀಲದಲ್ಲಿ ಒಂದು ಬೆಳ್ಳಿಯ ಪಾನಪಾತ್ರೆಯನ್ನು ಅವರಿಗೆ ತಿಳಿಯದಂತೆ ಇಡುತ್ತಾನೆ.—ಆದಿಕಾಂಡ 42:26–44:2.

ಅವರು ಸ್ವಲ್ಪ ದೂರ ಪ್ರಯಾಣ ಮಾಡಿದ ನಂತರ ಯೋಸೇಫನು ತನ್ನ ಸೇವಕರನ್ನು ಕಳುಹಿಸಿ ‘ಬೆಳ್ಳಿಯ ಪಾತ್ರೆಯನ್ನು ನೀವು ಕದ್ದಿದ್ದೀರಿ’ ಎಂದು ಆರೋಪಿಸುತ್ತಾನೆ. ಅವರು ಬೆನ್ಯಾಮೀನನ ಚೀಲದಲ್ಲಿ ಆ ಪಾತ್ರೆಯನ್ನು ಕಂಡಾಗ ಅವರನ್ನು ಮತ್ತೆ ಯೋಸೇಫನ ಬಳಿಗೆ ಕರೆದುಕೊಂಡು ಬರುತ್ತಾರೆ. ಈಗ ಅಣ್ಣಂದಿರು ಬದಲಾಗಿದ್ದಾರಾ ಇಲ್ಲವಾ ಎಂದು ತಿಳಿದುಕೊಳ್ಳುವ ಅವಕಾಶ ಯೋಸೇಫನಿಗೆ ಸಿಗುತ್ತದೆ. ಯೆಹೂದನು ಬೆನ್ಯಾಮೀನನನ್ನು ಕರುಣಿಸಿ ಕ್ಷಮಿಸುವಂತೆ ಮತ್ತು ಬೇಕಾದರೆ ನಾವು 11 ಮಂದಿಯೂ ಇಲ್ಲೇ ಐಗುಪ್ತದಲ್ಲಿ ದಾಸರಾಗಿರುತ್ತೇವೆ ಎಂದು ಅಂಗಲಾಚುತ್ತಾನೆ. ಆದರೆ ಯೋಸೇಫನು ಬೆನ್ಯಾಮೀನನನ್ನು ಬಿಟ್ಟು ಉಳಿದವರೆಲ್ಲ ಹೋಗಬಹುದೆಂದು ಹೇಳುತ್ತಾನೆ.—ಆದಿಕಾಂಡ 44:2-17.

ಆದರೆ ಯೆಹೂದನು ಭಾವುಕನಾಗಿ, ‘ಅವನ ತಾಯಿಯ ಮಕ್ಕಳಲ್ಲಿ ಅವನೊಬ್ಬನೇ ಉಳಿದಿರುವುದು, ನನ್ನ ತಂದೆ ಅವನನ್ನು ತುಂಬ ಪ್ರೀತಿಸುತ್ತಾನೆ’ ಎಂದು ಹೇಳುತ್ತಾನೆ. ಆ ಮಾತುಗಳು ಯೋಸೇಫನ ಹೃದಯವನ್ನು ಮುಟ್ಟಿರಬಹುದು. ಯಾಕೆಂದರೆ, ಯಾಕೋಬ ಮತ್ತು ರಾಹೇಲಳ ಮೊದಲ ಮಗ ಯೋಸೇಫ. ರಾಹೇಲಳು ಬೆನ್ಯಾಮೀನನಿಗೆ ಜನ್ಮ ಕೊಟ್ಟಾಗ ತೀರಿಕೊಂಡಿದ್ದಳು. ಯೋಸೇಫನಿಗೆ ಅವನ ತಂದೆ ಯಾಕೋಬನೆಂದರೆ ಪಂಚಪ್ರಾಣ. ಅವನೂ ತನ್ನ ತಾಯಿಯ ನೆನಪುಗಳನ್ನು ಆಗಾಗ ಮೆಲುಕು ಹಾಕುತ್ತಿದ್ದನು. ಈ ಎಲ್ಲ ವಿಷಯಗಳು ಬೆನ್ಯಾಮೀನನನ್ನು ಯೋಸೇಫನಿಗೆ ಇನ್ನೂ ಆಪ್ತನನ್ನಾಗಿಸಿರಬೇಕು.—ಆದಿಕಾಂಡ 35:18-20; 44:20.

ಬೆನ್ಯಾಮೀನನನ್ನು ಒತ್ತೆಯಾಳಾಗಿಸಬಾರದೆಂದು ಯೆಹೂದ ಬೇಡಿಕೊಳ್ಳುತ್ತಾನೆ. ಬೆನ್ಯಾಮೀನನ ಬದಲಿಗೆ ತಾನೇ ಆಳಾಗಿರುತ್ತೇನೆ ಎಂದು ಹೇಳುತ್ತಾನೆ. “ಈ ಹುಡುಗನನ್ನು ಬಿಟ್ಟು ನಾನು ನನ್ನ ತಂದೆಯ ಬಳಿಗೆ ಹೇಗೆ ಹೋಗುವದಕ್ಕಾದೀತು? ತಂದೆಗೆ ಮಹಾ ಶೋಕವುಂಟಾಗುವದನ್ನು ನಾನು ನೋಡಕೂಡದು” ಎಂದು ತನ್ನ ಮಾತುಗಳನ್ನು ಮುಗಿಸುತ್ತಾನೆ. (ಆದಿಕಾಂಡ 44:18-34) ಯೆಹೂದನು ಬದಲಾಗಿದ್ದಾನೆ ಎಂದು ಯೋಸೇಫನಿಗೆ ಆಗ ಸ್ಪಷ್ಟವಾಯಿತು. ಅವನು ಪಶ್ಚಾತಾಪಪಟ್ಟಿದ್ದಷ್ಟೇ ಅಲ್ಲ, ಈಗ ನಿಸ್ವಾರ್ಥಿಯಾಗಿದ್ದ ಜೊತೆಗೆ ದಯೆ ಮತ್ತು ಕರುಣೆ ತೋರಿಸಿದ್ದ.

ತನ್ನ ಅಣ್ಣಂದಿರ ಪಶ್ಚಾತ್ತಾಪವನ್ನು ಯೋಸೇಫನು ನೋಡಿದನು

ಈ ಮಾತುಗಳನ್ನೆಲ್ಲಾ ಕೇಳಿದ ಯೋಸೇಫನಿಗೆ ಇನ್ನು ತನ್ನ ಭಾವನೆಗಳನ್ನು ಅಡಗಿಸಿಕೊಳ್ಳಲು ಆಗಲಿಲ್ಲ. ತನ್ನ ಸೇವಕರನ್ನೆಲ್ಲಾ ಹೊರಗೆ ಕಳುಹಿಸಿ ಅವನು ತುಂಬ ಗಟ್ಟಿಯಾಗಿ ಅಳುತ್ತಾನೆ. ಅವನ ಅಳು ಫರೋಹನ ಅರಮನೆಯವರೆಗೂ ಕೇಳಿಸುತ್ತದೆ. ನಂತರ ಅವನ ಅಣ್ಣಂದಿರಿಗೆ, ‘ನಾನು ನಿಮ್ಮ ತಮ್ಮನಾದ ಯೋಸೇಫನು’ ಎಂದು ಹೇಳುತ್ತಾನೆ. ಅವರೆಲ್ಲರನ್ನು ಅಪ್ಪಿಕೊಂಡು, ಹಿಂದೆ ಅವರು ಮಾಡಿದ ತಪ್ಪುಗಳನ್ನೆಲ್ಲಾ ಕ್ಷಮಿಸುತ್ತಾನೆ. (ಆದಿಕಾಂಡ 45:1-15) ಹೀಗೆ ಕ್ಷಮಿಸುವುದರ ಮೂಲಕ ಯೋಸೇಫ ಯೆಹೋವ ದೇವರನ್ನು ಅನುಕರಿಸಿದ. (ಕೀರ್ತನೆ 86:5) ನಾವೂ ಹಾಗೇ ಕ್ಷಮಿಸುತ್ತೇವೋ?

“ನೀನಿನ್ನೂ ಜೀವದಿಂದ್ದೀಯಾ!”

ಯೋಸೇಫನ ಕುಟುಂಬದ ಬಗ್ಗೆ ತಿಳಿದುಕೊಂಡ ಫರೋಹ, ಅವನ ತಂದೆ ಮತ್ತು ಕುಟುಂಬದವರನ್ನು ಐಗುಪ್ತಕ್ಕೆ ಆಮಂತ್ರಿಸುತ್ತಾನೆ. ಸ್ವಲ್ಪದರಲ್ಲೇ ಯೋಸೇಫ ಮತ್ತು ಯಾಕೋಬರು ಒಂದಾಗುತ್ತಾರೆ. ಎಷ್ಟೋ ವರ್ಷಗಳಾದ ನಂತರ ಯೋಸೇಫನನ್ನು ನೋಡಿದ ಯಾಕೋಬನು, “ನಾನು ನಿನ್ನ ಮುಖವನ್ನು ಕಂಡು ನೀನು ಇನ್ನೂ ಜೀವದಿಂದಿರುವದನ್ನು ತಿಳುಕೊಂಡದ್ದರಿಂದ ಸಂತೃಪ್ತನಾಗಿ ಸಾಯುವೆನು” ಎಂದು ಹೇಳಿದನು.—ಆದಿಕಾಂಡ 45:16-28; 46:29, 30.

ಐಗುಪ್ತಕ್ಕೆ ಬಂದ ನಂತರ ಯಾಕೋಬ ಇನ್ನೂ 17 ವರ್ಷ ಬದುಕುತ್ತಾನೆ. ತನ್ನ 12 ಮಂದಿ ಮಕ್ಕಳನ್ನು ಆಶೀರ್ವದಿಸುತ್ತಾನೆ. ಮೊದಲ ಮಗನಿಗೆ ಕೊಡಬೇಕಾದ ಎರಡು ಪಾಲು ಆಶೀರ್ವಾದವನ್ನು ತನ್ನ 11ನೇ ಮಗ ಯೋಸೇಫನಿಗೆ ಕೊಡುತ್ತಾನೆ. ಆದ್ದರಿಂದ ಇಸ್ರಾಯೇಲ್ಯ ಕುಲಗಳಲ್ಲಿ ಎರಡು ಕುಲಗಳು ಯೋಸೇಫನಿಂದ ಬರುತ್ತವೆ. ಪಶ್ಚಾತ್ತಾಪ ತೋರಿಸಿ ತನ್ನ ಸಹೋದರರನ್ನು ಕಾಪಾಡಲು ಮುಂದಾದ ಯೆಹೂದನಿಗೆ ಯಾವ ಆಶೀರ್ವಾದ ಸಿಕ್ಕಿತು? ತನ್ನ ವಂಶದಲ್ಲಿ ಮೆಸ್ಸೀಯನು ಬರುವ ಅವಕಾಶವನ್ನು ಪಡೆದನು!—ಆದಿಕಾಂಡ 48, 49ನೇ ಅಧ್ಯಾಯಗಳು.

ಯಾಕೋಬನು 147ರ ವಯಸ್ಸಿನಲ್ಲಿ ತೀರಿಕೊಂಡನು. ತಂದೆ ತೀರಿಕೊಂಡದ್ದರಿಂದ ಈಗ ಯೋಸೇಫನು ತಮ್ಮ ಮೇಲೆ ದ್ವೇಷ ಸಾಧಿಸಬಹುದೆಂದು ಅಣ್ಣಂದಿರು ಭಯಪಟ್ಟರು. ಆದರೆ ಯಾಕೋಬನ ಕುಟುಂಬ ಐಗುಪ್ತಕ್ಕೆ ಬರಲು ಯೆಹೋವನೇ ಕಾರಣ ಎಂದು ಯೋಸೇಫನು ದೃಢವಾಗಿ ನಂಬಿದ್ದನು. ಅವರಿಗೆ ದೃಢಭರವಸೆ ಕೊಡುವ ಸಲುವಾಗಿ ‘ನಾನು ದೇವರಿಗೆ ಸಮಾನನೋ?’ ಎಂದು ಪ್ರಶ್ನಿಸಿದನು. (ಆದಿಕಾಂಡ 15:13; 45:7, 8; 50:15-21) ಯೆಹೋವನೊಬ್ಬನೇ ಪರಿಪೂರ್ಣ ನ್ಯಾಯಾಧೀಶನು ಎಂದು ಯೋಸೇಫನಿಗೆ ತಿಳಿದಿತ್ತು. ಆದ್ದರಿಂದ, ತನ್ನ ಅಣ್ಣಂದಿರ ತಪ್ಪಿಗೆ ಶಿಕ್ಷೆ ಕೊಡಲು ತಾನೆಷ್ಟರವನು? ಎಂದು ಹೇಳುತ್ತಾ ಅವರ ಭಯವನ್ನು ದೂರ ಮಾಡಿದನು.—ಇಬ್ರಿಯ 10:30.

ಇತರರನ್ನು ಕ್ಷಮಿಸಲು ನಿಮಗೆ ಕಷ್ಟವಾಗುತ್ತದಾ? ಯಾರಾದರೂ ಬೇಕುಬೇಕೆಂದೇ ತೊಂದರೆ ಮಾಡಿದಾಗ ಅವರನ್ನು ಕ್ಷಮಿಸಲು ತುಂಬ ಕಷ್ಟವಾಗಬಹುದು. ಆದರೆ ಅವರು ಪಶ್ಚಾತ್ತಾಪಪಟ್ಟಾಗ ನಾವು ಹೃತ್ಪೂರ್ವಕವಾಗಿ ಕ್ಷಮಿಸಿದರೆ, ಎಷ್ಟೋ ಸಮಸ್ಯೆಗಳನ್ನು ಮೊಳಕೆಯಲ್ಲೇ ಕಿತ್ತುಹಾಕಬಹುದು. ಹೀಗೆ ಮಾಡಿದರೆ, ನಾವು ಯೆಹೋವನ ಮಾದರಿಯನ್ನು ಮತ್ತು ಯೋಸೇಫನ ನಂಬಿಕೆಯನ್ನು ಅನುಕರಿಸುತ್ತೇವೆ. ▪ (w15-E 05/01)

^ ಪ್ಯಾರ. 4 ಆಗಸ್ಟ್‌ 1, 2014, ನವೆಂಬರ್‌ 1, 2014 ಮತ್ತು ಫೆಬ್ರವರಿ 1, 2015ರ ಕಾವಲಿನಬುರುಜು (ಇಂಗ್ಲಿಷ್‌) ಪತ್ರಿಕೆಗಳ “ಅವರ ನಂಬಿಕೆಯನ್ನು ಅನುಕರಿಸಿ” ಎಂಬ ಸರಣಿ ಲೇಖನಗಳನ್ನು ನೋಡಿ.