ನಿಮಗೆ ಈ ಪ್ರಶ್ನೆ ಬಂದಿದೆಯಾ?
ಒಳ್ಳೇ ಅಪ್ಪ-ಅಮ್ಮ ಆಗಬೇಕೆಂದರೆ ಏನು ಮಾಡಬೇಕು?
ಯಾವ ಮನೆಯಲ್ಲಿ ಅಪ್ಪ-ಅಮ್ಮ ಒಬ್ಬರನ್ನೊಬ್ಬರು ಪ್ರೀತಿಸಿ ಗೌರವಿಸುತ್ತಾರೋ ಅಂಥ ಮನೆಯಲ್ಲಿ ಮಕ್ಕಳು ಒಳ್ಳೇ ರೀತಿಯಲ್ಲಿ ಬೆಳೆಯಲು ಉತ್ತಮ ವಾತಾವರಣ ಇರುತ್ತದೆ. (ಕೊಲೊಸ್ಸೆ 3:14, 19) ಒಳ್ಳೇ ಹೆತ್ತವರು ತಮ್ಮ ಮಕ್ಕಳನ್ನು ಪ್ರೀತಿಸುತ್ತಾರೆ ಮತ್ತು ಪ್ರಶಂಸಿಸುತ್ತಾರೆ. ಇದಕ್ಕೆ ಒಳ್ಳೇ ಮಾದರಿ ಯೆಹೋವ ದೇವರಾಗಿದ್ದಾನೆ. ಆತನು ಕೂಡ ತನ್ನ ಮಗನಾದ ಯೇಸು ಕ್ರಿಸ್ತನನ್ನು ಪ್ರಶಂಸಿಸಿದನು.—ಮತ್ತಾಯ 3:17 ಓದಿ.
ನಮ್ಮ ತಂದೆಯಾದ ಯೆಹೋವನು ತನ್ನ ಸೇವಕರ ಮಾತುಗಳನ್ನು ಕೇಳಿಸಿಕೊಳ್ಳುತ್ತಾನೆ ಹಾಗೂ ಅವರ ಭಾವನೆಗಳಿಗೆ ಸ್ಪಂದಿಸುತ್ತಾನೆ. ಆತನಂತೆ ಹೆತ್ತವರು ಕೂಡ ತಮ್ಮ ಮಕ್ಕಳು ಹೇಳುವ ಮಾತುಗಳನ್ನು ಕೇಳಿಸಿಕೊಳ್ಳಬೇಕು. (ಯಾಕೋಬ 1:19) ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು. ಎಷ್ಟರ ಮಟ್ಟಿಗೆಂದರೆ, ಮಕ್ಕಳು ಹೆತ್ತವರಲ್ಲಿರುವ ತಪ್ಪನ್ನು ಹೇಳುವಾಗ ಸಹ ಕೋಪಗೊಳ್ಳದೆ ಕೇಳಿಸಿಕೊಳ್ಳಬೇಕು.—ಅರಣ್ಯಕಾಂಡ 11:11, 15 ಓದಿ.
ಮಕ್ಕಳನ್ನು ಒಳ್ಳೇ ರೀತಿಯಲ್ಲಿ ಬೆಳೆಸುವುದು ಹೇಗೆ?
ಮಕ್ಕಳಿಗಾಗಿ ನಿಯಮಗಳನ್ನು ಇಡುವ ಅಧಿಕಾರ ಹೆತ್ತವರಾದ ನಿಮಗಿದೆ. (ಎಫೆಸ 6:1) ಈ ವಿಷಯದಲ್ಲಿ ದೇವರು ಉತ್ತಮ ಮಾದರಿ. ಆತನು ನಮ್ಮನ್ನು ತುಂಬಾ ಪ್ರೀತಿಸುತ್ತಾನೆ. ಆದ್ದರಿಂದ ನಾವು ಏನು ಮಾಡಬೇಕು, ಏನು ಮಾಡಬಾರದು ಅಂತ ಸ್ಪಷ್ಟವಾಗಿ ತಿಳಿಸಿದ್ದಾನೆ. ಒಂದುವೇಳೆ ಆ ನಿಯಮಗಳನ್ನು ತಪ್ಪಿದರೆ ಏನಾಗುತ್ತೆ ಅಂತ ಸಹ ತಿಳಿಸಿದ್ದಾನೆ. (ಆದಿಕಾಂಡ 3:3) ಹಾಗಂತ ನಿಯಮಗಳನ್ನು ನಾವು ಪಾಲಿಸಲೇಬೇಕು ಅಂತ ದೇವರು ಒತ್ತಾಯ ಮಾಡಿಲ್ಲ. ಬದಲಿಗೆ ಸರಿಯಾದದ್ದನ್ನು ಮಾಡಿದರೆ ಯಾವ ಪ್ರಯೋಜನ ಸಿಗುತ್ತೆ ಅಂತ ನಮಗೆ ತಿಳಿಸಿದ್ದಾನೆ.—ಯೆಶಾಯ 48:18, 19 ಓದಿ.
ಹೆತ್ತವರೇ, ದೇವರನ್ನು ಪ್ರೀತಿಸುವಂತೆ ನಿಮ್ಮ ಮಕ್ಕಳಿಗೆ ಸಹಾಯ ನೀಡಿ. ಈ ರೀತಿ ತರಬೇತಿ ಕೊಟ್ಟರೆ ನೀವು ಅವರ ಜೊತೆ ಇಲ್ಲದಿದ್ದಾಗಲೂ ಅವರು ಸರಿಯಾದ ವಿಷಯಗಳನ್ನೇ ಮಾಡುತ್ತಾರೆ. ದೇವರನ್ನು ಪ್ರೀತಿಸುವ ವಿಷಯದಲ್ಲಿ ಮೊದಲು ನೀವು ಮಾದರಿಯಾಗಿರಬೇಕು. ಆಗ ನಿಮ್ಮ ಮಕ್ಕಳು ನಿಮ್ಮನ್ನು ನೋಡಿ ಕಲಿಯುತ್ತಾರೆ. ಏಕೆಂದರೆ ಯೆಹೋವ ದೇವರು ಕೂಡ ಬರೀ ಹೇಳೋದಿಲ್ಲ ಅದನ್ನು ಮಾಡಿ ತೋರಿಸುತ್ತಾನೆ.—ಧರ್ಮೋಪದೇಶಕಾಂಡ 6:5-7; ಎಫೆಸ 4:32; 5:1 ಓದಿ. (w15-E 06/01)