ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಖಪುಟ ಲೇಖನ | ದೇವರು ನಿಮ್ಮ ಸ್ನೇಹಿತನಾ?

ದೇವರ ಹೆಸರು ನಿಮಗೆ ಗೊತ್ತಾ?

ದೇವರ ಹೆಸರು ನಿಮಗೆ ಗೊತ್ತಾ?

ಒಬ್ಬ ವ್ಯಕ್ತಿಯ ಹೆಸರೇ ತಿಳಿಯದೆ ಅವನನ್ನು “ನನ್ನ ಸ್ನೇಹಿತ” ಎಂದು ಹೇಳಲು ಸಾಧ್ಯವಿದೆಯಾ? ಖಂಡಿತ ಇಲ್ಲ. ಬಲ್ಗೇರಿಯ ದೇಶದ ಈರೀನಾ, “ದೇವರ ಹೆಸರನ್ನೇ ತಿಳಿಯದೇ ಯಾರೂ ಆತನಿಗೆ ಆಪ್ತರಾಗಲು ಸಾಧ್ಯವಿಲ್ಲ” ಎಂದು ಹೇಳುತ್ತಾಳೆ. ಹಿಂದಿನ ಲೇಖನದಲ್ಲಿ ಕಲಿತಂತೆ, ನಾವು ದೇವರ ಸ್ನೇಹಿತರಾಗಬೇಕೆಂದು ಸ್ವತಃ ಆತನೇ ಬಯಸುತ್ತಾನೆ. ಆದ್ದರಿಂದ, ಬೈಬಲಿನಲ್ಲಿ “ನಾನೇ ಯೆಹೋವನು; ಇದೇ ನನ್ನ ನಾಮವು” ಎಂದು ದೇವರು ತನ್ನನ್ನು ಪರಿಚಯಿಸಿಕೊಂಡಿದ್ದಾನೆ.—ಯೆಶಾಯ 42:8.

“ನಾನೇ ಯೆಹೋವನು; ಇದೇ ನನ್ನ ನಾಮವು” ಎಂದು ದೇವರು ತನ್ನನ್ನು ಬೈಬಲಿನಲ್ಲಿ ಪರಿಚಯಿಸಿಕೊಂಡಿದ್ದಾನೆ.—ಯೆಶಾಯ 42:8.

ನೀವು ತನ್ನ ಹೆಸರನ್ನು ತಿಳಿದುಕೊಳ್ಳಬೇಕು ಮತ್ತು ಅದನ್ನು ಉಪಯೋಗಿಸಬೇಕು ಎಂದು ಯೆಹೋವ ದೇವರು ಬಯಸುತ್ತಾನಾ? ಇದನ್ನು ಪರಿಗಣಿಸಿ, ಹೀಬ್ರು ಶಾಸ್ತ್ರದ ಮೂಲಪ್ರತಿಯಲ್ಲಿ ದೇವರ ಹೆಸರನ್ನು ಸುಮಾರು 7,000 ಬಾರಿ ಬರೆಯಲಾಗಿದೆ. ಆ ಹೆಸರನ್ನು ನಾಲ್ಕು ಹೀಬ್ರು ವ್ಯಂಜನಾಕ್ಷರಗಳಲ್ಲಿ (ಸ್ವರಾಕ್ಷರಗಳಿಲ್ಲದೆ) ಬರೆಯಲಾಗಿದೆ, ಇದನ್ನು ಟೆಟ್ರಗ್ರ್ಯಾಮಟಾನ್‌ ಎಂದು ಕರೆಯಲಾಗುತ್ತದೆ. ಬೈಬಲಿನಲ್ಲಿ ಬೇರೆಲ್ಲಾ ಹೆಸರುಗಳಿಗಿಂತ ಹೆಚ್ಚು ಬಾರಿ ಈ ಹೆಸರನ್ನು ಬರೆಯಲಾಗಿದೆ. ಯೆಹೋವ ದೇವರು ತನ್ನ ಹೆಸರನ್ನು * ನಾವು ತಿಳಿದುಕೊಳ್ಳಬೇಕು ಮತ್ತು ಉಪಯೋಗಿಸಬೇಕೆಂದು ಬಯಸುತ್ತಾನೆ ಎನ್ನುವುದಕ್ಕೆ ಇದೊಂದು ಒಳ್ಳೇ ರುಜುವಾತಲ್ಲವೇ?

ಹೆಸರೇ ತಿಳಿದುಕೊಳ್ಳದೆ ಸ್ನೇಹ ಮಾಡಲು ಆಗಲ್ಲ. ನೀವು ದೇವರ ಸ್ನೇಹಿತರಾಗಬೇಕೆಂದರೆ ಆತನ ಹೆಸರು ಏನೆಂದು ತಿಳಿದುಕೊಳ್ಳಿ.

ದೇವರು ಪರಿಶುದ್ಧನು ಮತ್ತು ಸರ್ವಶಕ್ತನು ಆಗಿರುವುದರಿಂದ, ಆತನ ಹೆಸರನ್ನು ಉಪಯೋಗಿಸುವುದು ಆತನಿಗೆ ಅಗೌರವ ತೋರಿಸಿದಂತೆ ಎಂದು ಕೆಲವರು ಯೋಚಿಸಬಹುದು. ನಿಮ್ಮ ಸ್ನೇಹಿತನ ಹೆಸರನ್ನು ಹೇಗೆ ನೀವು ತಪ್ಪಾದ ಕೆಲಸಗಳಿಗೆ ಉಪಯೋಗಿಸುವುದಿಲ್ಲವೋ ಹಾಗೆಯೇ ದೇವರ ಹೆಸರನ್ನು ತಪ್ಪಾಗಿ ಉಪಯೋಗಿಸಬಾರದು ಎನ್ನುವುದೇನೋ ನಿಜ. ಆದರೆ, ತನ್ನನ್ನು ಪ್ರೀತಿಸುವವರು ತನ್ನ ಹೆಸರನ್ನು ಗೌರವಿಸಬೇಕು ಮತ್ತು ಅದನ್ನು ಎಲ್ಲರಿಗೆ ತಿಳಿಸಬೇಕು ಎನ್ನುವುದು ದೇವರ ಉದ್ದೇಶವಾಗಿದೆ. (ಕೀರ್ತನೆ 69:30, 31; 96:2, 8) “ಸ್ವರ್ಗದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ” ಎಂದು ಪ್ರಾರ್ಥಿಸುವಂತೆ ಯೇಸು ತನ್ನ ಶಿಷ್ಯರಿಗೆ ಕಲಿಸಿದನು. ಆದ್ದರಿಂದ, ದೇವರ ಹೆಸರನ್ನು ಇತರರಿಗೆ ತಿಳಿಸುವ ಮೂಲಕ ಅದನ್ನು ಪವಿತ್ರೀಕರಿಸಬೇಕು. ಹೀಗೆ ಮಾಡಿದರೆ ನಾವು ಆತನ ಸ್ನೇಹಿತರಾಗುವೆವು.—ಮತ್ತಾಯ 6:9.

‘ತನ್ನ ನಾಮಸ್ಮರಣೆಮಾಡುವವರನ್ನು’ ದೇವರು ತುಂಬ ಮಾನ್ಯಮಾಡುತ್ತಾನೆ ಎಂದು ಬೈಬಲ್‌ ತಿಳಿಸುತ್ತದೆ. (ಮಲಾಕಿಯ 3:16) ಯೆಹೋವನು ಅಂಥವರಿಗೆ, ‘ನೀವು ನನ್ನ ನಾಮವನ್ನು ಅರಿತಿರುವುದರಿಂದ ನಿಮ್ಮನ್ನು ಉದ್ಧರಿಸುವೆನು. ನೀವು ಮೊರೆಯಿಡುವಾಗ ಸದುತ್ತರವನ್ನು ದಯಪಾಲಿಸುವೆನು; ಇಕ್ಕಟ್ಟಿನಲ್ಲಿ ಹತ್ತಿರವಿದ್ದು ತಪ್ಪಿಸುವೆನು’ ಎಂಬ ಆಶ್ವಾಸನೆ ಕೊಟ್ಟಿದ್ದಾನೆ. (ಕೀರ್ತನೆ 91:14, 15) ದೇವರೊಂದಿಗೆ ಆಪ್ತ ಸಂಬಂಧ ಹೊಂದಿರಲು ಬಯಸುವುದಾದರೆ ನಾವು ಆತನ ಹೆಸರನ್ನು ತಿಳಿಯಬೇಕು ಮತ್ತು ಅದನ್ನು ಉಪಯೋಗಿಸಲೇಬೇಕು. (w14-E 12/01)

^ ಪ್ಯಾರ. 4 ಹಳೆಯ ಒಡಂಬಡಿಕೆ ಎಂದು ಕರೆಯಲಾಗುವ ಹೀಬ್ರು ಶಾಸ್ತ್ರದಲ್ಲಿ ದೇವರ ಹೆಸರನ್ನು ಇಷ್ಟೊಂದು ಬಾರಿ ಉಪಯೋಗಿಸಿದ್ದರೂ ಹಲವಾರು ಬೈಬಲ್‌ ಭಾಷಾಂತರಗಳಲ್ಲಿ ದೇವರ ಹೆಸರನ್ನು ಕೈ ಬಿಡಲಾಗಿದೆ. ಇದಕ್ಕೆ ಬದಲಾಗಿ, “ಪ್ರಭು” ಅಥವಾ “ದೇವರು” ಎಂಬ ಬಿರುದುಗಳನ್ನು ಉಪಯೋಗಿಸಲಾಗಿದೆ. ಈ ವಿಷಯದ ಬಗ್ಗೆ ಹೆಚ್ಚು ಮಾಹಿತಿಗಾಗಿ, ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಪುಟ 195-197ನ್ನು ನೋಡಿ, ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.