ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಬದುಕನ್ನೇ ಬದಲಾಯಿಸಿತು ಬೈಬಲ್

ಭೂಮಿ ಸುಂದರ ತೋಟ ಆಗುವುದೆಂಬ ವಾಗ್ದಾನ ನನ್ನ ಬದುಕನ್ನೇ ಬದಲಿಸಿದೆ!

ಭೂಮಿ ಸುಂದರ ತೋಟ ಆಗುವುದೆಂಬ ವಾಗ್ದಾನ ನನ್ನ ಬದುಕನ್ನೇ ಬದಲಿಸಿದೆ!
  • ಜನನ: 1974

  • ದೇಶ: ಲ್ಯಾಟ್ವಿಯ

  • ಹಿಂದೆ: ಸಾಹಸೀ ಬೈಕ್‌ ರೇಸರ್‌

ಹಿನ್ನೆಲೆ:

ನಾನು ಹುಟ್ಟಿದ್ದು ಲ್ಯಾಟ್ವಿಯ ದೇಶದ ರಾಜಧಾನಿ ರಿಗಾ ಎಂಬಲ್ಲಿ. ಅಮ್ಮ ನನ್ನನ್ನು ಅಕ್ಕನನ್ನು ಸಾಕಿದರು. ಅಮ್ಮ ಕ್ಯಾಥೊಲಿಕ್‌ ಧರ್ಮದವರಾದರೂ ನಾವು ಚರ್ಚಿಗೆ ಹೋಗುತ್ತಿದ್ದದ್ದು ಹಬ್ಬ ಬಂದಾಗ ಮಾತ್ರ. ದೇವರ ಮೇಲೆ ನನಗೆ ನಂಬಿಕೆ ಇತ್ತು, ಆದರೆ ಯುವಪ್ರಾಯಕ್ಕೆ ಬಂದಾಗ ಗಮನವೆಲ್ಲ ಬೇರೆ ವಿಷಯಗಳ ಮೇಲೆ ಹೋಗಿಬಿಟ್ಟಿತು.

ನಾನು ಬೆಳೆಯುತ್ತಾ ಬಂದ ಹಾಗೆ ಅಮ್ಮ ಒಂದು ವಿಷಯವನ್ನು ಗಮನಿಸಿದರು. ಏನೆಂದರೆ ನಾನು ವಸ್ತುಗಳ ಭಾಗಗಳನ್ನೆಲ್ಲ ಕಳಚಿ ಮತ್ತೆ ಅದೇ ಥರ ಜೋಡಿಸುತ್ತಿದ್ದೆ. ಮನೆಯಲ್ಲಿರುವ ವಸ್ತುಗಳನ್ನೂ ಹೀಗೇ ಮಾಡಿದರೆ ಎನ್ನುವ ಭಯದಲ್ಲಿ ಅಮ್ಮ ನನ್ನನ್ನು ಒಬ್ಬನನ್ನೇ ಮನೆಯಲ್ಲಿ ಬಿಟ್ಟು ಹೋಗುತ್ತಿರಲಿಲ್ಲ. ಬಿಡಿಸಿ ಜೋಡಿಸಬಹುದಾದ ಲೋಹದ ಆಟಿಕೆ-ವಾಹನಗಳ ಒಂದು ಕಿಟ್‌ ತಂದುಕೊಟ್ಟರು. ಅದು ನನಗೆ ತುಂಬ ಇಷ್ಟವಾಗುತ್ತಿತ್ತು. ಅದರ ಜೊತೆಗೆ ಬೈಕ್‌ ಓಡಿಸುವ ಹುಚ್ಚೂ ಇತ್ತು. ಅಮ್ಮ ನನ್ನನ್ನು ಜಲ್ಟಾ ಮೊಪಾಟ್ಸ್‌ ಎಂಬ ಬೈಕ್‌ ರೇಸಿಗೆ ಸೇರಿಸಿದರು. ಮೊದಮೊದಲು ಮೊಪೆಡ್‌ ರೇಸಿಂಗ್‌ ಮಾಡುತ್ತಿದ್ದೆ, ಆಮೇಲೆ ಬೈಕ್‌ ರೇಸಿಂಗ್‌ ಶುರುಮಾಡಿದೆ.

ತುಂಬ ವೇಗ ಮತ್ತು ಅಪಾಯಕಾರಿಯಾದ ಈ ಬೈಕ್‌ ರೇಸಿಂಗ್‍ನಲ್ಲಿ ಬೇಗ ಪರಿಣತಿ ಪಡೆದು ಯಶಸ್ಸು ಪಡೆದೆ. ಮೂರು ಸಲ ಹಲವಾರು ಮೋಟಾರ್‌ಸೈಕಲ್‌ ರೇಸಿಂಗ್‌ ಕ್ಲಾಸ್‌ಗಳಿಗಾಗಿ ಮೂರು ಸಲ ಲ್ಯಾಟ್ವಿಯನ್‌ ಚಾ೦ಪಿಯನ್‌ಷಿಪ್‌ ಮತ್ತು ಎರಡು ಸಲ ಬಾಲ್ಟಿಕ್‌ ಸ್ಟೇಟ್ಸ್‌ ಚಾ೦ಪಿಯನ್‌ಷಿಪ್‌ ಗೆದ್ದೆ.

ನನ್ನ ಬದುಕನ್ನು ಬದಲಾಯಿಸಿತು ಬೈಬಲ್‌:

ಯಶಸ್ಸಿನ ತುತ್ತತುದಿಯಲ್ಲಿದ್ದ ಸಮಯವದು. ನನ್ನ ಗೆಳತಿ ಎವಿಯಾಳಿಗೆ (ಅವಳನ್ನೇ ಮುಂದೆ ಮದುವೆಯಾದೆ) ಯೆಹೋವನ ಸಾಕ್ಷಿಗಳ ಪರಿಚಯವಾಯಿತು. ಅವರಿಂದ ಅವಳು ಕೆಲವು ಸಾಹಿತ್ಯ ಪಡೆದುಕೊಂಡಿದ್ದಳು. ಅದರಲ್ಲಿ, ಬೈಬಲ್‌ ಕಲಿಸಿಕೊಡಿ ಎನ್ನುವ ವಿನಂತಿಯ ಒಂದು ಕೂಪನ್‌ ಇತ್ತು. ಅವಳದನ್ನು ಭರ್ತಿಮಾಡಿ ಪೋಸ್ಟ್‌ ಮಾಡಿದಳು. ಸ್ವಲ್ಪ ಸಮಯಾನಂತರ ಇಬ್ಬರು ಯೆಹೋವನ ಸಾಕ್ಷಿಗಳು ಅವಳನ್ನು ಭೇಟಿಯಾದರು. ಅವರ ಸಹಾಯದಿಂದ ಬೈಬಲ್‌ ಕಲಿಯಲು ಶುರುಮಾಡಿದಳು. ಅವಳ ಇಷ್ಟಕ್ಕೆ ನಾನೇನು ವಿರೋಧ ಮಾಡಲಿಲ್ಲ ಆದರೆ ನನಗೆ ಧರ್ಮದಲ್ಲಿ ಅಂಥದ್ದೇನೂ ಮಹಾ ಆಸಕ್ತಿ ಇರಲಿಲ್ಲ.

ಎವಿಯಾಳಿಗೆ ಬೈಬಲ್‌ ಕಲಿಸುತ್ತಿದ್ದಾಗ ನಾನೂ ಅವಳ ಜೊತೆ ಕೂತು ಆಲಿಸುವಂತೆ ಆ ಸಾಕ್ಷಿಗಳು ಹೇಳಿದರು. ಹಾಗೇ ಮಾಡಿದೆ. ಚರ್ಚೆಗೆ ಗಮನಕೊಟ್ಟೆ. ಕೇಳಿಸಿಕೊಂಡ ವಿಷಯಗಳು ನನಗೆ ಇಷ್ಟವಾದವು. ಅದರಲ್ಲೂ ಭೂಮಿ ಸುಂದರ ತೋಟವಾಗಲಿದೆ ಎಂಬ ಬೈಬಲ್‌ ವಾಗ್ದಾನ ನನ್ನ ಮನಸ್ಪರ್ಶಿಸಿತು. ಉದಾಹರಣೆಗೆ ಕೀರ್ತನೆ  37:10, 11ರಲ್ಲಿರುವ ಮಾತುಗಳನ್ನು ನನಗೆ ತೋರಿಸಿದರು: “ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು; ಅವನಿದ್ದ ಸ್ಥಳದಲ್ಲಿ ಎಷ್ಟು ವಿಚಾರಿಸಿದರೂ ಅವನು ಸಿಕ್ಕುವದೇ ಇಲ್ಲ. ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.” ದೇವರ ಈ ವಾಗ್ದಾನ ನನಗೆ ತುಂಬ ಹಿಡಿಸಿತು.

ಹೀಗೆ ಆಧ್ಯಾತ್ಮಿಕ ವಿಷಯಗಳಲ್ಲಿ ನನ್ನ ಆಸಕ್ತಿ ಹೆಚ್ಚಾಯಿತು. ಹಲವಾರು ಧಾರ್ಮಿಕ ಬೋಧನೆಗಳು ಸುಳ್ಳೆಂದು ಗೊತ್ತಾಯಿತು. ಆದರೆ ಬೈಬಲ್‌ ಬೋಧನೆಗಳು ಸಂತೋಷ ಕೊಡುತ್ತಿದ್ದವು, ತರ್ಕಬದ್ಧವಾಗಿದ್ದವು, ಸ್ಪಷ್ಟವಾಗಿದ್ದವು.

ಬೈಬಲನ್ನು ಕಲಿಯುತ್ತಾ ಹೋದ ಹಾಗೆ ಯೆಹೋವ ದೇವರ ದೃಷ್ಟಿಯಲ್ಲಿ ಜೀವಕ್ಕೆಷ್ಟು ಬೆಲೆಯಿದೆ, ಅದೆಷ್ಟು ಅಮೂಲ್ಯ ಅಂತ ನನಗರಿವಾಯಿತು. (ಕೀರ್ತನೆ 36:9) ಆಗ ಬೈಕ್‌ ರೇಸಿಂಗ್‌ ನಿಲ್ಲಿಸಿಬಿಡುವ ತೀರ್ಮಾನ ಮಾಡಿದೆ. ಯಾಕೆಂದರೆ ನನ್ನ ಪ್ರಾಣಕ್ಕೆ ಅಪಾಯ ತರುವ ಕೆಲಸ ಮಾಡಲು ಮನಸ್ಸು ಒಪ್ಪುತ್ತಿರಲಿಲ್ಲ. ಜೀವನದಲ್ಲಿ ಯೆಹೋವನಿಗೆ ಗೌರವ, ಮಹಿಮೆ ತರುವಂಥ ಕೆಲಸಗಳನ್ನು ಮಾಡಬೇಕು ಎನ್ನುವ ಬಯಕೆ ಹುಟ್ಟಿತು. ಇದರ ಮುಂದೆ ಬೈಕ್‌ ರೇಸಿಂಗ್‌ನಿಂದ ಸಿಗುವ ಜನಪ್ರಿಯತೆ, ಗೌರವ, ಮಜಾ ಕ್ಷುಲ್ಲಕವಾಗಿ ಕಂಡಿತು.

ಜೀವದ ಜನಕನಾದ ಯೆಹೋವನಿಗೆ ನಾವು ಲೆಕ್ಕ ಒಪ್ಪಿಸಬೇಕು ಅಂತ ಬೈಬಲಿನಿಂದ ಕಲಿತುಕೊಂಡೆ

1996ರಲ್ಲಿ ಎಸ್ಟೋನಿಯದ ಟ್ಯಾಲಿನ್‌ ನಗರದಲ್ಲಿ ನಡೆದ ಯೆಹೋವನ ಸಾಕ್ಷಿಗಳ ಅಂತಾರಾಷ್ಟ್ರೀಯ ಅಧಿವೇಶನಕ್ಕೆ ಹೋದೆ. ಈ ಅಧಿವೇಶನ ನಾನು ಸುಮಾರು ಸಲ ರೇಸಿಂಗ್‌ ಮಾಡಿದ್ದ ಸ್ಟೇಡಿಯಂನಿಂದ ಸ್ವಲ್ಪ ದೂರದಲ್ಲೇ ನಡೆಯುತ್ತಿತ್ತು. ಅಧಿವೇಶನದಲ್ಲಿ ಬೇರೆ ಬೇರೆ ದೇಶದ ಜನರು ಅನ್ಯೋನ್ಯವಾಗಿ ಸಮಾಧಾನದಿಂದ ಇದ್ದರು. ಒಬ್ಬ ಯೆಹೋವನ ಸಾಕ್ಷಿಯ ಬ್ಯಾಗ್‌ ಕಳೆದುಹೋಯಿತು. ನಾನಂದುಕೊಂಡೆ ಅದು ಇನ್ನು ಸಿಗುವುದೇ ಇಲ್ಲ ಅಂತ. ಆದರೆ ಸ್ವಲ್ಪ ಸಮಯದಲ್ಲೇ ಇನ್ನೊಬ್ಬ ಸಾಕ್ಷಿ ಅದನ್ನು ತಂದುಕೊಟ್ಟರು. ಬ್ಯಾಗ್‌ ಒಳಗಿದ್ದ ಎಲ್ಲ ವಸ್ತುಗಳೂ ಹಾಗೇ ಇದ್ದವು. ನನಗಾಗ ತುಂಬ ಆಶ್ಚರ್ಯವಾಯಿತು! ನಿಜವಾಗಲೂ ಬೈಬಲಿನ ಉನ್ನತ ಮಟ್ಟಗಳಿಗೆ ತಕ್ಕ ಹಾಗೆ ಯೆಹೋವನ ಸಾಕ್ಷಿಗಳು ಬದುಕುತ್ತಾರೆ ಅಂತ ನನಗೆ ಗೊತ್ತಾಯಿತು. ನಾನು ಮತ್ತು ಎವಿಯಾ ಬೈಬಲ್‌ ಕಲಿಕೆಯನ್ನು ಮುಂದುವರಿಸಿದೆವು. ಪ್ರಗತಿಮಾಡಿ 1997ರಲ್ಲಿ ದೀಕ್ಷಾಸ್ನಾನ ಪಡೆದು ಯೆಹೋವನ ಸಾಕ್ಷಿಗಳಾದೆವು.

ಸಿಕ್ಕಿದ ಪ್ರಯೋಜನಗಳು:

ನನ್ನ ಕೆಲವು ಗೆಳೆಯರು ವೇಗದ ಬೈಕ್‌ ರೇಸಿಂಗ್‌ ಮಾಡಿ ಜೀವ ಕಳೆದುಕೊಂಡರು. ಜೀವದ ಜನಕನಾದ ಯೆಹೋವನಿಗೆ ನಾವು ಲೆಕ್ಕ ಒಪ್ಪಿಸಬೇಕು ಅಂತ ನಾನು ಬೈಬಲಿನಿಂದ ಕಲಿತುಕೊಂಡೆ. ಇದು ನನ್ನ ಜೀವವನ್ನು ಉಳಿಸಿರಬೇಕು ಎನ್ನುವುದೇ ನನ್ನ ನಂಬಿಕೆ.

ರಿಗಾ ನಗರದಲ್ಲಿ ಇರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿನಲ್ಲಿ ನಾನು ಮತ್ತು ಎವಿಯಾ ನಾಲ್ಕು ವರ್ಷ ಪೂರ್ಣಕಾಲಿಕ ಸೇವೆ ಮಾಡಿದೆವು. ಈಗ ನಮಗೊಬ್ಬ ಮಗಳಿದ್ದಾಳೆ. ಹೆಸರು ಆ್ಯಲಿಸ್‌. ಅವಳಿಗೆ ಯೆಹೋವನನ್ನು ಪ್ರೀತಿಸಲು ಕಲಿಸುತ್ತಾ ನಾವೂ ಸಂತೋಷವಾಗಿದ್ದೇವೆ. ಅಷ್ಟೇ ಅಲ್ಲ, ವಾರಕ್ಕೆ ಒಂದು ದಿನ ಭಾಷಾಂತರ ಕಛೇರಿಯಲ್ಲಿ ಕೆಲಸ ಮಾಡುವ ಸುಯೋಗ ನನಗಿದೆ. ಅಲ್ಲಿ ಕಾರುಗಳ, ಇನ್ನಿತರ ವಸ್ತುಗಳ ರಿಪೇರಿ ಕೆಲಸ ಮಾಡುತ್ತೇನೆ. ಇದನ್ನು ನಾನು ಖುಶಿಖುಶಿಯಾಗಿ ಮಾಡುತ್ತೇನೆ. ಯಾಕೆಂದರೆ ಬಾಲ್ಯದಲ್ಲಿ ನಾನು ಕಲಿತ ಕೌಶಲಗಳು ಈಗ ಉಪಯೋಗಕ್ಕೆ ಬರುತ್ತಿವೆ! ಹೌದು, ಈಗಲೂ ಭಾಗಗಳನ್ನು ಕಳಚುತ್ತೇನೆ, ಮತ್ತೆ ಜೋಡಿಸುತ್ತೇನೆ.

ನಾನು ಬೈಬಲಿನಿಂದ ಕಲಿತಿರುವ ಸಂಗತಿಗಳಿಂದಾಗಿ ನನ್ನ ಕುಟುಂಬದ ಜೊತೆ ಸೇರಿ ಏಕೈಕ ಸತ್ಯದೇವರ ಬಗ್ಗೆ ಜನರಿಗೆ ತಿಳಿಸಲು ಸಾಧ್ಯವಾಗಿದೆ. ಈ ಕೆಲಸ ನನಗೆ ಸಂದಿರುವ ವಿಶೇಷಗೌರವ. ಭೂಮಿ ಸುಂದರ ತೋಟ ಆಗುವುದೆಂಬ ವಾಗ್ದಾನ ನಿಜಕ್ಕೂ ನನ್ನ ಬದುಕನ್ನೇ ಬದಲಿಸಿದೆ! (w14-E 02/01)