ಅವರ ನಂಬಿಕೆಯನ್ನು ಅನುಕರಿಸಿ
ದೇವರು ಅವನನ್ನು ಅವನ ಕುಟುಂಬವನ್ನು ಕಾಪಾಡಿದನು
ನೋಹ ಮತ್ತು ಅವನ ಕುಟುಂಬ ಭಯವಿಸ್ಮಿತರಾಗಿ ನಾವೆಯೊಳಗೆ ಒತ್ತೊತ್ತಾಗಿ ಕೂತಿರುವುದು ಕಾಣುತ್ತಿದೆ. ಎಣ್ಣೆದೀಪದ ಮಂದ ಬೆಳಕಿನಲ್ಲಿ ಅವರನ್ನು ಚಿತ್ರಿಸಿಕೊಳ್ಳಿ. ಹೊರಗೆ ಆಕಾಶದಿಂದ ಒಂದೇ ಸಮನೆ ಮಳೆ. ನಾವೆಯ ಮೇಲೆ ರಭಸವಾಗಿ ಬಿದ್ದ ಮಳೆ ಬರ್ರೆಂದು ಎರಡೂ ಬದಿಯಿಂದ ಹರಿಯುತ್ತಿದೆ. ಅದರ ಸದ್ದಿಗೆ ಒಳಗಿರುವ ಎಂಟು ಮಂದಿ ಮಿಕಿಮಿಕಿ ನೋಡುತ್ತಿದ್ದಾರೆ. ಇನ್ನೊಂದು ಕಡೆ ಮನಸ್ಸೂ ಪುಳಕಗೊಂಡಿರಬೇಕು!
ನಿಷ್ಠೆಯಿಂದ ತನ್ನ ಜತೆಗಿದ್ದ ಮಡದಿಯ ಮುಖ ನೋಡಿದಾಗ, ಚಾಚೂತಪ್ಪದೆ ತನ್ನ ಮಾತನ್ನು ಪಾಲಿಸಿದ ಮೂರು ಗಂಡುಮಕ್ಕಳನ್ನು ಮತ್ತು ಸೊಸೆಯಂದಿರನ್ನು ನೋಡಿದಾಗ ನೋಹನಿಗೆ ಹೃದಯದಲ್ಲಿ ಕೃತಜ್ಞತಾಭಾವ ತುಂಬಿ ಬಂದಿರಬೇಕು. ಅವನ ಪ್ರೀತಿಯ ಕುಟುಂಬ ಅವನೊಂದಿಗೆ ಇದೆ. ಅವರಿಗೆ ಯಾವ ಹಾನಿಯೂ ಆಗದೆ ಸುರಕ್ಷಿತವಾಗಿ ಇದ್ದಾರೆ. ಇದನ್ನೆಲ್ಲ ನೆನಸಿಕೊಂಡಾಗ ಭಾರವಾಗಿದ್ದ ಅವನ ಮನಸ್ಸು ಹಗುರವಾಗಿರಬೇಕು. ಅವರ ಜೊತೆಸೇರಿ ಪ್ರಾರ್ಥನೆ ಮಾಡಿ ದೇವರಿಗೆ ಖಂಡಿತ ಧನ್ಯವಾದ ಹೇಳಿರಬೇಕು.
ನೋಹನಿಗೆ ದೇವರ ಮೇಲೆ ತುಂಬ ನಂಬಿಕೆ ಇತ್ತು. ಆ ನಂಬಿಕೆಯನ್ನು ನೋಡಿಯೇ ಅವನ ದೇವರು ಅಂದರೆ ಯೆಹೋವ ದೇವರು ಅವನನ್ನು ಮತ್ತವನ ಕುಟುಂಬವನ್ನು ಜಲಪ್ರಳಯ ಆದಾಗ ಕಾಪಾಡಿದನು. (ಇಬ್ರಿಯ 11:7) ಅದರ ನಂತರ ಅವರಿಗೆ ಇಂಥ ಅಚಲ ನಂಬಿಕೆಯ ಅಗತ್ಯ ಇರಲಿಲ್ವಾ? ಖಂಡಿತ ಇತ್ತು. ಮುಂದೆ ಕೂಡ ಅವರಿಗೆ ಅನೇಕ ಸವಾಲು ಕಾದಿದ್ದವು. ಈ ಕಾಲದಲ್ಲೂ ನಮಗೆ ಅಂಥ ನಂಬಿಕೆಯ ಅವಶ್ಯಕತೆ ಇದೆ. ಹಾಗಾಗಿ ಅಪಾರ ನಂಬಿಕೆ ಇದ್ದ ನೋಹ ನಮಗೆ ಕಲಿಸಿಕೊಟ್ಟ ಪಾಠವೇನು ಅಂತ ನೋಡೋಣ.
“ನಾಲ್ವತ್ತು ದಿವಸ ಹಗಲಿರುಳು”
“ನಾಲ್ವತ್ತು ದಿವಸ ಹಗಲಿರುಳು” ಭಾರೀ ಮಳೆಯಾಯಿತು. (ಆದಿಕಾಂಡ 7:4, 11, 12) ಭೂಮಿಯಲ್ಲಿ ನೀರು ತುಂಬಿ ನೆರೆ ಏರುತ್ತಾ ಹೋಯಿತು. ಇದರ ಮಧ್ಯೆ ಯೆಹೋವ ದೇವರು ಹೇಗೆ ಒಳ್ಳೇ ಜನರನ್ನು ಕಾಪಾಡಿದನು, ಕೆಟ್ಟವರನ್ನು ನಾಶಮಾಡಿದನು ಅನ್ನೋದನ್ನು ನೋಹ ಕಣ್ಣಾರೆ ಕಂಡ.
ದುಷ್ಟ ದೇವದೂತರು ಭೂಮಿಯಲ್ಲಿ ಎಬ್ಬಿಸಿದ ದಂಗೆಯನ್ನು ಜಲಪ್ರಳಯ ಅಡಗಿಸಿಬಿಟ್ಟಿತು. ಸೈತಾನನಂತೆ ಈ ದುಷ್ಟ ದೇವದೂತರು ಸ್ವಾರ್ಥಿಗಳಾಗಿದ್ದರು. “ತಮ್ಮ ಸೂಕ್ತವಾದ ವಾಸಸ್ಥಳವನ್ನು” ಅಂದರೆ ಸ್ವರ್ಗವನ್ನು ಬಿಟ್ಟು ಭೂಮಿಯಲ್ಲಿನ ಮಹಿಳೆಯರ ಜೊತೆ ಸಂಸಾರ ಮಾಡಿದ್ದರು. ಹೀಗೆ ಮನುಷ್ಯಪುತ್ರಿಯರು ಮತ್ತು ದೇವದೂತರ ಸಂಗಮದಿಂದ ಮಹಾಶರೀರಿಗಳು ಹುಟ್ಟಿದರು. ಇವರನ್ನು ನೆಫೀಲಿಯರು ಅಂತ ಕರೆಯಲಾಗುತ್ತಿತ್ತು. (ಯೂದ 6; ಆದಿಕಾಂಡ 6:4) ಇವರಿಂದ ಇಡೀ ಲೋಕದಲ್ಲಿ ದುಷ್ಟತನ ತುಂಬಿಹೋಗಿತ್ತು. ಇದನ್ನು ನೋಡಿ ಸೈತಾನ ಖುಷಿಯಿಂದ ಕುಣಿದು ಕುಪ್ಪಳಿಸಿರಬೇಕು. ಭೂಮಿಯಲ್ಲೇ ಶ್ರೇಷ್ಠ ಸೃಷ್ಟಿಯಾದ ಮಾನವ ಸೃಷ್ಟಿಯನ್ನು ಈ ದೇವದೂತರು ಇನ್ನಷ್ಟು ಕೆಟ್ಟತನಕ್ಕೆ ಇಳಿಸಿದ್ದರು.
ಆದರೆ ನೆರೆ ಏರುತ್ತಾ ಹೋದಂತೆ ಈ ದುಷ್ಟ ದೇವದೂತರಿಗೆ ತಮ್ಮ ಲೋಕಕ್ಕೆ ಹೋಗೋದೊಂದೇ ದಾರಿ ಉಳಿದಿತ್ತು. ಆದ್ದರಿಂದ ಮಾನವ ದೇಹವನ್ನು ಶಾಶ್ವತವಾಗಿ ಕಳಚಿ ಹಾಕಿ ತಮ್ಮ ಹೆಂಡತಿ-ಮಕ್ಕಳು ಬೇರೆ ಜನರ ಜತೆ ನೀರಲ್ಲಿ ಮುಳುಗಿ ಸಾಯುವಂತೆ ಬಿಟ್ಟು ಹೋಗಿಯೇ ಬಿಟ್ಟರು.
ದುಷ್ಟ ಜನರ ಸಂಹಾರದ ಬಗ್ಗೆ ಯೆಹೋವ ದೇವರು ಮುಂಚೆನೇ ತಿಳಿಸಿದ್ದನು. ಹನೋಕ ಅನ್ನೋ ದೇವಭಕ್ತನ ಕಾಲದಿಂದ ಅಂದರೆ ಸುಮಾರು 700 ವರ್ಷಗಳಿಂದ ಹೇಳುತ್ತಾ ಬಂದಿದ್ದನು. (ಆದಿಕಾಂಡ 5:24; ಯೂದ 14, 15) ಆದರೆ ತಪ್ಪನ್ನು ತಿದ್ದಿಕೊಳ್ಳದೆ ಜನರು ಇನ್ನೂ ಹಾಳಾಗುತ್ತಾ ಹೋದರು. ಭೂಮಿಯನ್ನು ಮತ್ತಷ್ಟು ಹಾಳುಗೆಡವಿದರು. ಹಿಂಸಾಚಾರ ತಾರಕಕ್ಕೆ ಏರುತ್ತಾ ಹೋಯಿತು. ಆದರೆ ಈಗ, ನೀರು ಪಾಲಾಗಿ ಸಾಯುತ್ತಿದ್ದರು. ಇದನ್ನು ನೋಡಿ ನೋಹ, ಮತ್ತವನ ಕುಟುಂಬಕ್ಕೆ ಖುಷಿ ಆಯ್ತಾ?
ಇಲ್ಲ! ಅವರಿಗೂ ಖುಷಿಯಾಗಲಿಲ್ಲ, ಕರುಣಾಮಯಿ ದೇವರು ಕೂಡ ಖುಷಿ ಪಡಲಿಲ್ಲ. (ಯೆಹೆಜ್ಕೇಲ 33:11) ಜನರನ್ನು ಕಾಪಾಡಬೇಕು ಅಂತ ದೇವರು ಪ್ರಯತ್ನಪಟ್ಟಿದ್ದು ಅಷ್ಟಿಷ್ಟಲ್ಲ. ಜನರನ್ನು ಎಚ್ಚರಿಸುವ ಜವಾಬ್ದಾರಿಯನ್ನು ದೇವರು ಹನೋಕನಿಗೆ ವಹಿಸಿದ್ದನು. ಒಂದು ನಾವೆ ಕಟ್ಟಲು ನೋಹನಿಗೆ ಆಜ್ಞೆ ನೀಡಿದ್ದನು. ಅದೊಂದು ಬೃಹತ್ ಕಾಮಗಾರಿ ಆಗಿತ್ತು. ನೋಹ ಮತ್ತು ಅವನ ಪತ್ನಿ, ಮಕ್ಕಳು, ಸೊಸೆಯಂದಿರು ಎಲ್ಲರೂ ಹತ್ತಾರು ವರ್ಷ ಕೆಲಸಮಾಡಿದ್ದರು. ಇದೆಲ್ಲ ಜನರ ಕಣ್ಣೆದುರಿಗೇ ನಡೆದಿತ್ತು. ಅಷ್ಟೇ ಅಲ್ಲ ಜನರಿಗೆ “ನೀತಿಯನ್ನು ಸಾರುವ” ಕೆಲಸವನ್ನು ಸಹ ದೇವರು ನೋಹನಿಗೆ ಕೊಟ್ಟಿದ್ದನು. (2 ಪೇತ್ರ 2:5) ಹನೋಕನಂತೆ ನೋಹ ಕೂಡ ದೇವರು ನ್ಯಾಯತೀರ್ಪು ವಿಧಿಸಲಿರುವ ಬಗ್ಗೆ ಜನರಿಗೆ ಎಚ್ಚರಿಕೆ ನೀಡುತ್ತಿದ್ದನು. ಇದಕ್ಕೆ ಜನರ ಪ್ರತಿಕ್ರಿಯೆ ಹೇಗಿತ್ತು? ನೋಹನ ಕಾಲದ ಜನರ ನಡತೆಯನ್ನು ಸ್ವರ್ಗದಿಂದ ಗಮನಿಸುತ್ತಿದ್ದ ಯೇಸು ಹೇಳಿದ್ದು: “ಪ್ರಳಯವು ಬಂದು ಅವರೆಲ್ಲರನ್ನು ಕೊಚ್ಚಿಕೊಂಡುಹೋಗುವ ತನಕ ಅವರು ಲಕ್ಷ್ಯಕೊಡಲೇ ಇಲ್ಲ.”—ಮತ್ತಾಯ 24:39.
ನಲ್ವತ್ತು ದಿನಗಳು ಧಾರಾಕಾರವಾಗಿ ಮಳೆ ಸುರಿಯುತ್ತಿದ್ದಾಗ ಬಾಗಿಲು ಮುಚ್ಚಿದ ನಾವೆಯ ಒಳಗೆ ನೋಹ ಮತ್ತು ಅವನ ಕುಟುಂಬದ ದಿನಚರಿ ಹೇಗಿದ್ದಿರಬಹುದು? ನಾವೆಯ ಒಳಗೆ ಈ ಎಂಟು ಜನರು ಪರಸ್ಪರ ಕಾಳಜಿ ವಹಿಸುವುದು, ನಾವೆಯನ್ನು ಸುಸ್ಥಿತಿಯಲ್ಲಿಡುವುದು, ಸರಹದ್ದು ಮೀರದಂತೆ ಪ್ರಾಣಿಗಳನ್ನು ನೋಡಿಕೊಂಡು ಅವುಗಳ ಪಾಲನೆ ಮಾಡುವುದು, ಹೀಗೆ ನಡಿತಿತ್ತು ಅವರ ದಿನಚರಿ. ಒಂದಿನ ಇದ್ದಕ್ಕಿದ್ದ ಹಾಗೆ ನಾವೆ ಅಲುಗಾಡುತ್ತಿದೆ! ಆಕಡೆ ಈಕಡೆ ವಾಲುತ್ತಿದೆ! ಯಾಕೆ ಗೊತ್ತಾ? ನಾವೆ ಚಲಿಸುತ್ತಿತ್ತು! ನೀರು ಏರುತ್ತಾ ಹೋದಂತೆ ನಾವೆ ನೀರಿನ ಮೇಲೆ ತೇಲಲು ಶುರುವಾಗಿತ್ತು. ಭೂಮಿ ಮೇಲೆ ನಾವೆ ಒಂದು ಬಿಟ್ಟರೆ ಬೇರೆ ಯಾವುದೂ ಕಾಣಿಸುತ್ತಿರಲಿಲ್ಲ. ಎಲ್ಲ ಮುಳುಗಿ ಹೋಗಿ ಅದೊಂದೇ ತೇಲುತ್ತಿತ್ತು. (ಆದಿಕಾಂಡ 7:17) ಯೆಹೋವ ದೇವರ ಪ್ರಚಂಡ ಶಕ್ತಿಯ ಎಂಥಾ ಸಾಕ್ಷ್ಯ ಇದು!
ನೋಹನನ್ನು ಮತ್ತು ಅವನ ಕುಟುಂಬದವರನ್ನು ದೇವರು ಕಾಪಾಡಿದ್ದನು. ಅಷ್ಟೇ ಅಲ್ಲ ಅವರ ಮೂಲಕ ಜನರಿಗೆ ಎಚ್ಚರಿಕೆ ನೀಡಿ ದಯೆ ತೋರಿಸಿದ್ದನು. ಇದಕ್ಕೆಲ್ಲ ದೇವರಿಗೆ ಅದೆಷ್ಟು ಬಾರಿ ನೋಹ ಕೃತಜ್ಞತೆ ಹೇಳಿರಬಹುದಲ್ವಾ. ಎಷ್ಟೋ ವರ್ಷಗಳ ತನಕ ಎಚ್ಚರಿಕೆ ನೀಡಲಾಗಿತ್ತು. ಆವಾಗೆಲ್ಲ ನೋಹನ ಪ್ರಯತ್ನ ವ್ಯರ್ಥ ಎನ್ನುವಂತೆ ಕಾಣುತಿತ್ತು. ಯಾಕೆಂದರೆ ಜನರು ನೋಹನ ಮಾತನ್ನು ಕಿವಿಗೇ ಹಾಕಿಕೊಳ್ಳುತ್ತಿರಲಿಲ್ಲ! ಈಗ ನೀರಿನ ಪಾಲಾಗುತ್ತಿದ್ದಾರೆ. ಅದರಲ್ಲಿ ನೋಹನ ಸಹೋದರರು, ಸಹೋದರಿಯರು, ಅವರ ಮಕ್ಕಳೂ ಇದ್ದಿರಬೇಕು. ಜಲಪ್ರಳಯ ಬರುವ ಮುಂಚೆ ಅವರ್ಯಾರೂ ನೋಹನ ಮಾತಿಗೆ ಕವಡೆ ಕಾಸಿನಷ್ಟೂ ಬೆಲೆ ಕೊಟ್ಟಿರಲಿಲ್ಲ. (ಆದಿಕಾಂಡ 5:30) ಈಗ ಈ ಎಂಟು ಜನ ಮಾತ್ರ ತಮ್ಮ ಜೀವ ಉಳಿಸಿಕೊಂಡಿದ್ದಾರೆ. ನಾವೆಯೊಳಗೆ ಕೂತು ಇದನ್ನೆಲ್ಲ ಜ್ಞಾಪಿಸಿಕೊಳ್ಳುತ್ತಿದ್ದಾರೆ. ಅಷ್ಟೊಂದು ಸಮಯ ವ್ಯಯಿಸಿ ಪ್ರತಿಯೊಬ್ಬರಿಗೂ ಜೀವ ಉಳಿಸಿಕೊಳ್ಳಲು ಅವಕಾಶ ನೀಡಿದೆವಲ್ಲಾ ಅಂದುಕೊಂಡು ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ.
ನೋಹನ ಕಾಲದಿಂದ ಇಂದಿನ ವರೆಗೂ ಯೆಹೋವ ದೇವರು ಬದಲಾಗಿಲ್ಲ. (ಮಲಾಕಿಯ 3:6) ಇವತ್ತಿನ ಲೋಕ ಕೂಡ ಯೇಸು ಹೇಳಿದಂತೆ ನೋಹನ ಕಾಲದ ಹಾಗೇ ಇದೆ. (ಮತ್ತಾಯ 24:37) ಅಷ್ಟೇ ಅಲ್ಲ ಈ ದುಷ್ಟ ಲೋಕ ಅಂತ್ಯವಾಗುವ ಕೊನೇ ಗಳಿಗೆಯಲ್ಲಿ ನಾವಿದ್ದೇವೆ. ಅದು ಮಹಾಸಂಕಟದ ಸಮಯ. ಕೇಳುವ ಮನಸ್ಸಿರುವ ಜನರಿಗೆ ಇವತ್ತು ದೇವಜನರು ಎಚ್ಚರಿಕೆಯ ಸಂದೇಶವನ್ನು ಹೇಳುತ್ತಿದ್ದಾರೆ. ಆ ಸಂದೇಶಕ್ಕೆ ನೀವು ಸ್ಪಂದಿಸುತ್ತೀರಾ? ಜೀವದಾಯಕವಾದ ಈ ಸಂದೇಶವನ್ನು ನೀವು ತಿಳಿದಿರುವುದಾದರೆ ಬೇರೆಯವರಿಗೂ ತಿಳಿಸುವಿರಾ? ಈ ವಿಷಯದಲ್ಲಿ ನೋಹ ಮತ್ತು ಅವನ ಕುಟುಂಬ ನಮಗೆ ಆದರ್ಶ ವ್ಯಕ್ತಿಗಳು ಅಲ್ಲವೇ?
‘ನೀರಿನಿಂದ ಸುರಕ್ಷಿತವಾಗಿ ಪಾರಾದರು’
ಹೊಯ್ದಾಡುತ್ತಿದ್ದ ಸಾಗರದಂತಾಗಿತ್ತು ಇಡೀ ಭೂಮಿ. ನೀರಿನ ಅಬ್ಬರಕ್ಕೆ ದೊಡ್ಡ ದೊಡ್ಡ ಮರದ ದಿಮ್ಮಿಗಳು ದಡಬಡ ಸದ್ದು ಮಾಡುತ್ತಿದ್ದವು. ಇಬ್ರಿಯ 11:7) ಯಾವುದರಲ್ಲಿ ನಂಬಿಕೆಯಿತ್ತು ನೋಹನಿಗೆ? ನೋಹ ಮತ್ತವನ ಜತೆ ಸೇರಿಕೊಳ್ಳುವ ಜನರನ್ನು ಜಲಪ್ರಳಯ ಆದಾಗ ದೇವರು ಕಾಪಾಡುವ ಮಾತುಕೊಟ್ಟಿದ್ದನು. (ಆದಿಕಾಂಡ 6:18, 19) ಇಡೀ ವಿಶ್ವವನ್ನು, ಭೂಮಿಯನ್ನು ಅದರಲ್ಲಿರುವ ಸಮಸ್ತವನ್ನು ಮಾಡಿರುವ ಸೃಷ್ಟಿಕರ್ತನಿಗೆ ಈ ಒಂದು ನಾವೆಯನ್ನು ಸುರಕ್ಷಿತವಾಗಿಡಲು ಆಗುತ್ತಿರಲಿಲ್ಲವಾ? ನುಡಿದಂತೆ ನಡೆಯುವ ಯೆಹೋವ ದೇವರ ಮೇಲೆ ಭರವಸೆ ಇಟ್ಟನು ನೋಹ. ಅವನನ್ನು ಮತ್ತವನ ಕುಟುಂಬವನ್ನು ದೇವರು ‘ನೀರಿನಿಂದ ಸುರಕ್ಷಿತವಾಗಿ’ ಪಾರು ಮಾಡಿದನು.—1 ಪೇತ್ರ 3:20.
ಜತೆಗೆ ಅಲೆಗಳ ಅಟ್ಟಹಾಸವನ್ನು ನಾವೆಯೊಳಗಿಂದ ಕೇಳಿಸಿಕೊಂಡ ನೋಹ ತಬ್ಬಿಬ್ಬುಗೊಂಡನಾ? ನಾವೆ ನುಚ್ಚುನೂರಾದರೆ ಅಂತ ಆತಂಕಗೊಂಡನಾ? ಒಂದಿಷ್ಟೂ ಇಲ್ಲ. ಇಂದಿನ ಸಂದೇಹವಾದಿಗಳು ತಬ್ಬಿಬ್ಬುಗೊಳ್ಳಬಹುದೆನೋ. ಆದರೆ ನೋಹನಲ್ಲಿ ಸಂದೇಹ ಗೂಡು ಮಾಡಲಿಲ್ಲ. ಎಳ್ಳಿನಷ್ಟೂ ಆತಂಕ ಪಡಲಿಲ್ಲ. “ನಂಬಿಕೆಯಿಂದಲೇ ನೋಹ . . . ನಾವೆಯನ್ನು ಕಟ್ಟಿದನು” ಎನ್ನುತ್ತೆ ಬೈಬಲ್. (ನಮ್ಮ ಕ್ಯಾಲೆಂಡರಿಗನುಸಾರ ಕ್ರಿ.ಪೂ. 2370ರ ಡಿಸೆಂಬರ್ ತಿಂಗಳ ಆಸುಪಾಸು. ಅಂದು ನಲ್ವತ್ತು ದಿನ ಹಗಲು-ರಾತ್ರಿ ಸುರಿದ ಮಳೆ ಕೊನೆಗೂ ನಿಂತಿತು. ಆದರೆ ಆ ಎಂಟು ಜನ ನಾವೆಯಿಂದ ಹೊರಗೆ ಕಾಲಿಡುವಂತಿರಲಿಲ್ಲ. ಇಡೀ ಭೂಮಿ ಒಂದು ಸಮುದ್ರವಾಗಿತ್ತು. ನಾವೆಯೊಂದೇ ನೀರಿನ ಮೇಲೆ ತೇಲುತ್ತಿತ್ತು. ಎತ್ತರವಾಗಿದ್ದ ಎಲ್ಲ ಪರ್ವತಗಳೂ ನೀರಿನಲ್ಲಿ ಮುಳುಗಿದ್ದವು. (ಆದಿಕಾಂಡ 7:19, 20) ನೋಹ ತನ್ನ ಮಕ್ಕಳಾದ ಶೇಮ್, ಹಾಮ್, ಯೆಫೆತ್ರೊಂದಿಗೆ ಸೇರಿ ನಾವೆಯೊಳಗಿದ್ದ ಪ್ರಾಣಿಗಳ ಪಾಲನೆ-ಪೋಷಣೆ, ಶುಚಿತ್ವ, ಆರೋಗ್ಯಕ್ಕೆ ಎಷ್ಟೆಲ್ಲ ಕೆಲಸಮಾಡಿರಬಹುದು ಅಂತ ನೀವೇ ಊಹಿಸಿಕೊಳ್ಳಿ. ಸರ್ವಶಕ್ತ ದೇವರು ಸಹ ಕ್ರೂರಮೃಗಗಳನ್ನೆಲ್ಲ ಸಾಧುಪ್ರಾಣಿಗಳನ್ನಾಗಿ ಮಾಡಿ ನಾವೆಯೊಳಗೆ ಸೇರಿಸಿದನು. ಅಲ್ಲಿಂದ ನಾವೆಯೊಳಗಿರುವ ತನಕ ಅವು ಸಾಧುಪ್ರಾಣಿಗಳಾಗಿಯೇ ಇರೋ ಹಾಗೆ ದೇವರು ನೋಡಿಕೊಂಡನು. a
ನೋಹ ನಾವೆಯೊಳಗಿನ ದಿನಚರಿಯನ್ನು ಖಂಡಿತ ಬರಿದಿಟ್ಟಿರಬೇಕು. ಆ ದಿನಚರಿಯಿಂದ ಅನೇಕ ವಿಷಯಗಳು ತಿಳಿದು ಬರುತ್ತೆ. ಯಾವಾಗ ಮಳೆ ಶುರುವಾಯಿತು, ಯಾವಾಗ ನಿಂತಿತು ಅಂತ ತಿಳೀಬಹುದು. ಅಷ್ಟೇ ಅಲ್ಲ ನೀರು ಭೂಮಿಯಲ್ಲಿ 150 ದಿನಗಳ ತನಕ ಹಾಗೇ ಇತ್ತು, ಆಮೇಲೆ ಅದು ಆವಿಯಾಗಲು ಶುರುವಾಯಿತು, ಕ್ರಿ.ಪೂ. 2,369 ಏಪ್ರಿಲ್ ತಿಂಗಳ ಒಂದು ದಿನ ನಿಧಾನವಾಗಿ “ನಾವೆಯು ಅರಾರಾಟ್ ಸೀಮೆಯ ಬೆಟ್ಟಗಳಲ್ಲಿ ನಿಂತಿತು.” (ಈ ಬೆಟ್ಟಗಳು ಇವಾಗಿನ ಟರ್ಕಿ ದೇಶದಲ್ಲಿದೆ.) ಇವೆಲ್ಲದರ ಬಗ್ಗೆ ಅವನು ಬರೆದ ದಿನಚರಿಯಿಂದ ನಾವು ತಿಳಿಯಬಹುದು. ನಂತರ ಜೂನ್ನಲ್ಲಿ ಅಂದರೆ 73 ದಿನಗಳ ನಂತರ ಪರ್ವತಗಳ ತುದಿ ಕಾಣಿಸಿತು. ಮೂರು ತಿಂಗಳ ನಂತರ ಅಂದರೆ ಸೆಪ್ಟೆಂಬರ್ನಲ್ಲಿ ನೋಹ ನಾವೆಯ ಭಾರವಾದ ಕೆಲವು ಮೇಲ್ಚಾವಣಿಯನ್ನು ತೆಗೆದನು. ತೆಗೆದದ್ದರಿಂದ ಒಳಗೆ ಬೆಳಕು, ಶುದ್ಧಗಾಳಿ ಬಂತು! ಈ ಕೆಲಸದ ಜತೆಗೆ ನೋಹ ಭೂಮಿ ಮೇಲೆ ನೀರು ಒಣಗಿದೆಯಾ ಅಂತ ಆಗಾಗ್ಗೆ ಪರೀಕ್ಷಿಸುತ್ತಾ ಕೂಡ ಇದ್ದ. ಅದಕ್ಕಾಗಿ ಒಂದು ಕಾಗೆಯನ್ನು ಹೊರಗೆ ಬಿಟ್ಟನು. ಅದು ನೆಲದ ಮೇಲೆ ನೀರು ಒಣಗುವ ವರೆಗೂ ಹೋಗುತ್ತಾ ಬರುತ್ತಾ ಇತ್ತು. ಆಮೇಲೆ ಒಂದು ಪಾರಿವಾಳ ಬಿಟ್ಟನು. ಅದು ಕೂಡ ಕುಳಿತುಕೊಳ್ಳಲು ರೆಂಬೆಯೊಂದು ಸಿಗುವ ತನಕ ನೋಹನ ಬಳಿ ಬರುತ್ತಾ ಹೋಗುತ್ತಾ ಇತ್ತು.—ಆದಿಕಾಂಡ 7:24–8:13.
ಅದೇನೇ ಕೆಲಸವಿದ್ದರೂ ನೋಹ ಆಧ್ಯಾತ್ಮಿಕ ವಿಷಯಗಳಿಗೆ ಆದ್ಯತೆ ಕೊಡುತ್ತಿದ್ದನು. ಎಲ್ಲರೂ ಸೇರಿ ಬಂದು ಪ್ರಾರ್ಥನೆ ಮಾಡುವುದನ್ನು, ತಮ್ಮ ದೇವರ ಬಗ್ಗೆ ಆತನು ನೀಡುವ ಸಂರಕ್ಷಣೆ ಬಗ್ಗೆ ಮಾತಾಡುವುದನ್ನು ನಾವು ಚಿತ್ರಿಸಿಕೊಳ್ಳಬಹುದು. ಪ್ರತಿಯೊಂದು ಮಹತ್ವದ ನಿರ್ಣಯ ತೆಗೆದುಕೊಳ್ಳುವಾಗಲೂ ನೋಹ ಯೆಹೋವ ದೇವರ ಮಾರ್ಗದರ್ಶನ ಕೋರುತ್ತಿದ್ದನು. ಭೂಮಿ ಒಣಗಿದ್ದನ್ನು ನೋಡಿದಾಗ ಕೂಡ ನಾವೆಯ ಬಾಗಿಲು ತೆರೆದು ಹೋಗೋಣ ಅಂತ ಹೇಳಿ ಹೊರಟುಬಿಡಲಿಲ್ಲ. (ಆದಿಕಾಂಡ 8:14) ಒಂದು ವರ್ಷಕ್ಕೂ ಜಾಸ್ತಿ ಸಮಯ ನಾವೆಯೊಳಗೇ ಇದ್ದ ನೋಹ ದೇವರು ಹೇಳುವ ತನಕ ಕಾದನು!
ಇವತ್ತು ಕುಟುಂಬದ ಯಜಮಾನರು ದೇವಭಕ್ತ ನೋಹನಿಂದ ಕಲಿಯಬೇಕಾದದ್ದು ತುಂಬ ಇದೆ. ಅವನು ಶಿಸ್ತಿನ ಮನುಷ್ಯ, ಶ್ರಮಜೀವಿ, ತಾಳ್ಮೆ ತೋರಿಸುವ ವ್ಯಕ್ತಿ ಆಗಿದ್ದನು. ಅವನ ಉಸ್ತುವಾರಿಯ ಕೆಳಗಿದ್ದ ಪ್ರತಿಯೊಂದನ್ನೂ ಸಂರಕ್ಷಿಸುತ್ತಿದ್ದನು. ಅವನಲ್ಲಿದ್ದ ಅತ್ಯುತ್ತಮ ಗುಣವೇನೆಂದರೆ ಏನೇ ಮಾಡಬೇಕಿದ್ದರೂ ಮೊದಲು ಯೆಹೋವ ದೇವರ ಅಭಿಪ್ರಾಯ, ಮಾರ್ಗದರ್ಶನ ತಿಳಿದುಕೊಳ್ಳುತ್ತಿದ್ದನು. ಇದಕ್ಕೆಲ್ಲ ಕಾರಣ ನೋಹನಿಗೆ ದೇವರ ಮೇಲೆ ಇದ್ದ ನಂಬಿಕೆ. ನಾವೂ ನೋಹನನ್ನು ಅನುಕರಿಸಿದರೆ ನಮ್ಮಿಂದಾಗಿ ನಮ್ಮ ಆತ್ಮೀಯರಿಗೆ ದೇವರ ಹೇರಳ ಆಶೀರ್ವಾದ ಸಿಗುತ್ತೆ.
“ನಾವೆಯನ್ನು ಬಿಟ್ಟು ಹೊರಗೆ ಬಾ”
ಯೆಹೋವ ದೇವರು ನೋಹನಿಗೆ “ನೀನು ಹೆಂಡತಿ ಮಕ್ಕಳು ಸೊಸೆಯರು ಸಹಿತವಾಗಿ ನಾವೆಯನ್ನು ಬಿಟ್ಟು ಹೊರಗೆ ಬಾ” ಅಂತ ಹೇಳಿದನು. ಇದನ್ನು ಕೇಳಿದ ತಕ್ಷಣ ಒಬ್ಬರನ್ನೊಬ್ಬರು ನೂಕಿ ಎದ್ದುಬಿದ್ದು ಓಡಿ ಹೊರಗೆ ಬಂದ್ರಾ? ಮೊದಲು ಎಂಟು ಜನರು ಹೊರಗೆ ಬಂದರು. ಆಮೇಲೆ ಅವರನ್ನು ಹಿಂಬಾಲಿಸಿ ಎಲ್ಲಾ ಪ್ರಾಣಿಗಳು ಹೊರಗೆ ಬಂದವು. ಬೈಬಲ್ ಹೇಳುತ್ತದೆ “ಮೃಗಪಶುಪಕ್ಷಿಕ್ರಿಮಿಗಳೆಲ್ಲವು ತಮ್ಮತಮ್ಮ ಜಾತಿಗನುಸಾರವಾಗಿ ನಾವೆಯಿಂದ ಹೊರಗೆ ಬಂದವು.” (ಆದಿಕಾಂಡ 8:15-19) ಹೊರಗಿನ ಶುದ್ಧಗಾಳಿಯನ್ನು ಉಸಿರಾಡುತ್ತಾ ನೋಹ ಮತ್ತು ಅವನ ಕುಟುಂಬ ಅರಾರಾಟ್ ಬೆಟ್ಟದ ಮೇಲೆ ನಿಂತು ಚೊಕ್ಕಟವಾಗಿದ್ದ ಭೂಮಿಯನ್ನು ಕಣ್ತುಂಬಿಕೊಂಡರು. ನೆಫೀಲಿಯರ ಮತ್ತು ಅವರ ಹಿಂಸೆಯ ಸದ್ದಡಗಿತ್ತು, ದುಷ್ಟ ದೇವದೂತರು ಪರಾರಿಯಾಗಿದ್ದರು. ಕೆಟ್ಟ ಜನರಂತೂ ಸಂಪೂರ್ಣ ಸಂಹಾರ ಆಗಿ ಹೋಗಿದ್ದರು! b ಮಾನವಕುಲ ಜೀವನದ ಹೊಸ ಆರಂಭ ಮಾಡಬೇಕಿತ್ತು.
ಆದಿಕಾಂಡ 7:2; 8:20) ಈ ಆರಾಧನೆ ದೇವರಿಗೆ ಇಷ್ಟವಾಯಿತಾ?
ನಾವೆಯಿಂದ ಹೊರಗೆ ಬಂದಿದ್ದಾಯಿತು. ಈಗ ನೋಹನಿಗೆ ಏನು ಮಾಡಬೇಕೆಂದು ಗೊತ್ತಿತ್ತು. ಎಲ್ಲದಕ್ಕಿಂತ ಮೊದಲು ಅವನು ದೇವರ ಆರಾಧನೆ ಮಾಡಿದ. ಒಂದು ಯಜ್ಞವೇದಿಯನ್ನು ಕಟ್ಟಿ ದೇವರ ದೃಷ್ಟಿಯಲ್ಲಿ ಶುದ್ಧವಾಗಿದ್ದ ಕೆಲವು ಪ್ರಾಣಿಗಳನ್ನು ತಂದು ಅರ್ಪಿಸಿದನು. ನಾವೆಯಲ್ಲಿ ಅವರು ತಂದಿದ್ದ ಏಳೇಳು ಜೊತೆ ಪ್ರಾಣಿಗಳಲ್ಲಿ ಕೆಲವನ್ನು ಆಯ್ದುಕೊಂಡನು. (“ಅದರ ಸುವಾಸನೆಯು ಯೆಹೋವನಿಗೆ ಗಮಗಮಿ”ಸಿತು ಎನ್ನುತ್ತೆ ಬೈಬಲ್. ಪ್ರಳಯ ಆಗುವ ಮುಂಚೆ ಜನರು ಮಾಡುತ್ತಿದ್ದ ಅನಾಚಾರ, ಹಿಂಸಾಚಾರವನ್ನು ನೋಡಿ ದೇವರ ಮನಸ್ಸಲ್ಲಿ ಬರೀ ನೋವೇ ತುಂಬಿಕೊಂಡಿತ್ತು. ಈಗ ಆ ಜಾಗದಲ್ಲಿ ಸುವಾಸನೆ ತುಂಬಿಕೊಂಡಿತು. ಅಂದರೆ ದೇವಭಕ್ತ ಕುಟುಂಬವೊಂದನ್ನು ನೋಡುವಾಗ ಆಗುವ ಆನಂದ ಎಂದರ್ಥ. ಇವರು ದೇವರ ಇಷ್ಟವನ್ನು ಮಾಡುತ್ತಾ ಬದುಕುವ ದೃಢಸಂಕಲ್ಪ ಮಾಡಿರುವ ಒಂದು ಕುಟುಂಬ. ಆದರೆ ಯೆಹೋವ ದೇವರು ಅವರಿಂದ ಪರಿಪೂರ್ಣತೆಯನ್ನು ನಿರೀಕ್ಷಿಸಲಿಲ್ಲ. ಯಾಕೆಂದರೆ ದೇವರಿಗೆ ಗೊತ್ತಿತ್ತು “ಮನುಷ್ಯರ ಮನಸ್ಸಂಕಲ್ಪವು ಚಿಕ್ಕಂದಿನಿಂದಲೇ ಕೆಟ್ಟದ್ದು” ಅಂತ. (ಆದಿಕಾಂಡ 8:21) ದೇವರು ಮಾನವರಿಗೆ ಹೇಗೆ ತಾಳ್ಮೆ, ದಯೆ ತೋರಿಸಿದನೆಂದು ನೋಡೋಣ.
ದೇವರು ಭೂಮಿಯ ಮೇಲಿದ್ದ ಶಾಪವನ್ನು ತೆಗೆದುಬಿಟ್ಟನು. ಆದಾಮ ಹವ್ವರಿಂದಾಗಿ ದೇವರು ಭೂಮಿಯನ್ನು ಶಪಿಸಿದ್ದನು. ಇದರಿಂದಾಗಿ ಕೃಷಿ ಮಾಡುವುದು ತುಂಬ ಕಷ್ಟವಾಗಿತ್ತು. ನೋಹನಿಗೆ ಹೆಸರಿಡುವಾಗ ಅವನ ತಂದೆ ಲೆಮೆಕ ಬಹುಶಃ “ವಿಶ್ರಾಂತಿ” ಅಥವಾ “ಸಮಾಧಾನ” ಅನ್ನೋ ಅರ್ಥವಿರೋ ಹೆಸರನ್ನು ಆರಿಸಿಕೊಂಡನು. ಭೂಮಿಗೆ ಬಂದ ಶಾಪದಿಂದ ತನ್ನ ಮಗನಾದ ನೋಹ ಅದನ್ನು ವಿಮುಕ್ತಗೊಳಿಸುವನು ಅಂತ ಕೂಡ ಲೆಮೆಕ ಭವಿಷ್ಯನುಡಿದಿದ್ದನು. ಆ ಭವಿಷ್ಯವಾಣಿ ಸತ್ಯವಾಯಿತು, ಭೂಮಿ ಕೃಷಿಯೋಗ್ಯವಾಯಿತು ಅಂತ ತಿಳಿದಾಗ ನೋಹ ಹಿರಿಹಿರಿ ಹಿಗ್ಗಿರಬೇಕು. ಅವನು ಆಗಲೇ ಬೇಸಾಯ ಆರಂಭಿಸಿದ್ದರಲ್ಲಿ ಸಂಶಯವಿಲ್ಲ!—ಆದಿಕಾಂಡ 3:17, 18; 5:28, 29; 9:20.
ಅದೇ ಸಮಯದಲ್ಲಿ ಯೆಹೋವ ದೇವರು ನೋಹನ ಸಂತತಿಗೆ ಕೆಲವು ನೇರ, ಸರಳ ನಿಯಮಗಳನ್ನು ಕೊಟ್ಟನು. ಇವು ಅವರ ಬದುಕಲ್ಲಿ ಮಾರ್ಗದರ್ಶನ ನೀಡುತ್ತಿದ್ದವು. ಕೊಲೆ ಮಾಡಬಾರದು ಮತ್ತು ರಕ್ತ ಸೇವಿಸಬಾರದು ಅನ್ನೋ ನಿಯಮಗಳು ಸೇರಿದ್ದವು. ದೇವರು ಇನ್ಯಾವತ್ತೂ ಜಲಪ್ರಳಯದಿಂದ ಮನುಷ್ಯರನ್ನು ನಾಶಮಾಡಲ್ಲ ಅಂತ ಮಾನವಕುಲಕ್ಕೆ ಮಾತು ಕೊಟ್ಟನು. ಇದಕ್ಕೆ ಸಾಕ್ಷಿಯಾಗಿ ಮಳೆಬಿಲ್ಲನ್ನು ಆಕಾಶದಲ್ಲಿ ಮೂಡಿಸಿದನು. ಅದೇ ಮೊದಲ ಸಲ ಆ ಮನುಷ್ಯರು ಸೊಗಸಾದ ಮಳೆಬಿಲ್ಲನ್ನು ನೋಡಿದ್ದು. ನಾವು ಇವತ್ತಿಗೂ ಮಳೆಬಿಲ್ಲನ್ನು ನೋಡುವಾಗ ದೇವರು ಪ್ರೀತಿಯಿಂದ ಕೊಟ್ಟ ಮಾತನ್ನು ನೆನಪಿಸಿಕೊಳ್ಳುತ್ತೇವೆ.—ಆದಿಕಾಂಡ 9:1-17.
ನೋಹನ ಕಥೆ ಕಾಲ್ಪನಿಕ ಕಥೆಯಲ್ಲ. ಹಾಗಿದ್ದರೆ ಅದು ಮಳೆಬಿಲ್ಲಿನ ಜತೆಗೇ ಸುಖಾಂತ್ಯ ಕಾಣಬೇಕಿತ್ತು. ನೋಹ ನಿಜವಾಗ್ಲೂ ಬದುಕಿದ್ದ. ಅವನ ಜೀವನಗಾಥೆ ಅಷ್ಟು ಸುಲಭವಿರಲಿಲ್ಲ. ಆ ಕಾಲದಲ್ಲೆಲ್ಲ ಜನರು ತುಂಬ ವರ್ಷ ಬದುಕುತ್ತಿದ್ದರು. ದೇವಭಕ್ತ ನೋಹ ಕೂಡ ಜಲಪ್ರಳಯದ ನಂತರ 350 ವರ್ಷ ಬದುಕಿದ್ದ. ಆ ವರ್ಷಗಳಲ್ಲೂ ಅವನು ಸ್ವಲ್ಪವೇನಲ್ಲ ನೋವನುಭವಿಸಿದ್ದು. ಒಮ್ಮೆ ಕುಡಿದು ಮತ್ತೇರಿದಾಗ ಮಾಡಿದ ತಪ್ಪು ಗಂಭೀರವಾಗಿತ್ತು. ಆದರೆ ಅವನ ಮೊಮ್ಮಗ ಕಾನಾನ ಅದಕ್ಕಿಂತ ದೊಡ್ಡ ತಪ್ಪು ಮಾಡಿದ. ಅದರ ಕೆಟ್ಟ ಫಲಿತಾಂಶವನ್ನು ಅನುಭವಿಸಿದ್ದು ಅವನ ಕುಟುಂಬ. ಹೀಗೆ ಅವನ ವಂಶದವರು ದುಷ್ಟರಾಗುತ್ತಾ ಹೋದರು. ನಿಮ್ರೋದ ಅನ್ನೋ ವ್ಯಕ್ತಿಯ ಕಾಲದಲ್ಲಿ ಮೂರ್ತಿಪೂಜೆ, ಕ್ರೂರತನದಲ್ಲಿ ಮುಳುಗಿ ಹೋದರು. ಇದನ್ನೆಲ್ಲಾ ನೋಹ ಕಣ್ಣಾರೆ ನೋಡಬೇಕಾಗಿ ಬಂತು. ಆದರೆ ಇನ್ನೊಂದೆಡೆ ತನ್ನ ಮಗನಾದ ಶೇಮ್ ಮುಂದಿನ ತಲೆಮಾರಿಗೆ ಒಳ್ಳೇ ಮಾದರಿ ಇಟ್ಟದ್ದನ್ನು ಕೂಡ ನೋಡಿದನು.—ಆದಿಕಾಂಡ 9:21-28; 10:8-11; 11:1-11.
ನಾವು ಕೂಡ ಜೀವನದಲ್ಲಿ ಅದೇನೇ ಕಷ್ಟ ಬಂದರೂ ನೋಹನಂತೆ ದೇವರ ಮೇಲಿರೋ ನಂಬಿಕೆಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡದಿರೋಣ. ನಮ್ಮ ಸುತ್ತಮುತ್ತ ಇರುವ ಜನರು ಸತ್ಯದೇವರನ್ನು ಅಲಕ್ಷಿಸಲಿ, ಆತನನ್ನು ಪೂಜಿಸುವುದನ್ನು ಬಿಟ್ಟುಬಿಡಲಿ ನಾವು ಮಾತ್ರ ನೋಹನಂತೆ ದೇವರನ್ನು ಆರಾಧಿಸೋಣ. ಹಾಗೆ ಇದ್ದರೆ ದೇವರ ಕಣ್ಣಲ್ಲಿ ಬಹು ಅಮೂಲ್ಯರಾಗುತ್ತೇವೆ. ಯೇಸು ಹೇಳಿದ ಹಾಗೆ “ಕಡೇ ವರೆಗೆ ತಾಳಿಕೊಂಡಿರುವವನೇ ರಕ್ಷಿಸಲ್ಪಡುವನು.”—ಮತ್ತಾಯ 24:13. (w13-E 08/01)
a ದೇವರು ಈ ಪ್ರಾಣಿಗಳನ್ನು ಜಡಸ್ಥಿತಿಯಲ್ಲಿ ಇಟ್ಟಿರಬಹುದು ಮತ್ತು ಚಳಿನಿದ್ದೆ ಬರುವ ಹಾಗೆ ಮಾಡಿರಬಹುದು. ಇದರಿಂದ ಅವುಗಳ ಆಹಾರ ಸೇವನೆ ಕಮ್ಮಿಯಾಗಿರಬಹುದು ಎನ್ನುತ್ತಾರೆ ಕೆಲವರು. ದೇವರು ಹಾಗೆ ಮಾಡಿದನಾ ಇಲ್ವಾ ಅಂತ ನಮಗೆ ಗೊತ್ತಿಲ್ಲ. ಆದರೆ ನಾವೆಯೊಳಗೆ ಯಾವ ಪ್ರಾಣಿಗೂ ಹಾನಿಯಾಗದಂತೆ ನೋಡಿಕೊಂಡನು. ಕೊಟ್ಟ ಮಾತನ್ನು ಪಾಲಿಸಿದನು.
b ಏದೆನ್ ತೋಟದ ಸುಳಿವೇ ಇರಲಿಲ್ಲ. ಅದು ಕೂಡ ಆ ಭಾರೀ ನೆರೆಯಲ್ಲಿ ನಾಶವಾಗಿರಬೇಕು. ನಾಶ ಆಗಿದ್ದರೆ ಆ ತೋಟದ ಪ್ರವೇಶದ್ವಾರದಲ್ಲಿ ಕಾವಲಿದ್ದ ಕೆರೂಬಿಗಳಿಗೆ ಸ್ವರ್ಗಕ್ಕೆ ಹಿಂದೆ ಹೋಗಲು ಸಾಧ್ಯವಾಯಿತು. 1,600 ವರ್ಷಗಳಿಂದ ಅವರು ಮಾಡುತ್ತಿದ್ದ ಕಾವಲು ಕಾಯುವ ಕೆಲಸ ಕೊನೆಗೂ ಮುಗಿಯಿತು.—ಆದಿಕಾಂಡ 3:22-24.