ಬದುಕನ್ನೇ ಬದಲಾಯಿಸಿತು ಬೈಬಲ್
ಬದುಕನ್ನೇ ಬದಲಾಯಿಸಿತು ಬೈಬಲ್
ಜೂಜುಕೋರನೂ ಕಳ್ಳನೂ ಆಗಿದ್ದ ಒಬ್ಬ ವ್ಯಕ್ತಿ ತನ್ನ ಚಟವನ್ನು ಬಿಟ್ಟು, ಜೀವನಶೈಲಿಯನ್ನೇ ಬದಲಾಯಿಸುವಂತೆ ಮಾಡಿದ ಸಂಗತಿ ಏನು? ಅವರಿಂದಲೇ ಕೇಳೋಣ.
“ನನಗೆ ಕುದುರೆ ಜೂಜಿನ ಚಟವಿತ್ತು.”—ರಿಚರ್ಡ್ ಸ್ಟುವರ್ಟ್
ಜನನ: 1965
ಸ್ವದೇಶ: ಜಮೇಕಾ
ಹಿಂದೆ: ಜೂಜುಕೋರ, ಪಾತಕಿ
ಹಿನ್ನೆಲೆ: ಜಮೇಕಾದ ರಾಜಧಾನಿ ಕಿಂಗ್ಸ್ಟನ್ನಲ್ಲಿ ಜನನಿಬಿಡ ಕೊಳೆಗೇರಿಯೊಂದರಲ್ಲಿ ಬೆಳೆದೆ. ಅಲ್ಲಿ ನಿರುದ್ಯೋಗಿಗಳು, ಪಾತಕಿಗಳೇ ತುಂಬಿಕೊಂಡಿದ್ದರು. ಅಲ್ಲಿದ್ದ ರೌಡಿ ಗ್ಯಾಂಗ್ಗಳಿಂದಾಗಿ ಜನರು ಭಯದಲ್ಲಿ ಜೀವಿಸುತ್ತಿದ್ದರು. ಬಹುಮಟ್ಟಿಗೆ ಪ್ರತಿದಿನ ಗುಂಡುಗಳ ಸದ್ದು ಕಿವಿಗೆ ಬೀಳುತ್ತಿತ್ತು.
ನನ್ನ ಅಮ್ಮ ತುಂಬ ಶ್ರಮಜೀವಿ. ಅವರಿಗೆ ಮೂರು ಮಂದಿ ಮಕ್ಕಳು. ನನಗೂ ನನ್ನ ತಮ್ಮ-ತಂಗಿಗೂ ಅಮ್ಮ ಯಾವುದಕ್ಕೂ ಕಡಿಮೆ ಮಾಡಲಿಲ್ಲ. ಒಳ್ಳೇ ಶಿಕ್ಷಣ ಸಿಗುವ ಹಾಗೆ ಏರ್ಪಾಡು ಮಾಡಿದರು. ಆದರೆ ನನಗೆ ಈ ಓದು, ವಿದ್ಯಾಭ್ಯಾಸವೆಂದರೆ ಅಷ್ಟಕ್ಕಷ್ಟೆ. ಕುದುರೆಗಳು ಹಾಗೂ ಕುದುರೆ ಪಂದ್ಯಗಳೆಂದರೆ ಬಲು ಇಷ್ಟ. ಶಾಲೆಗೆ ಚಕ್ಕರ್ ಹಾಕಿ ಕುದುರೆ ಪಂದ್ಯಗಳನ್ನು ನೋಡಲು ಹೋಗುತ್ತಿದ್ದೆ. ಕುದುರೆ ಸವಾರಿಯೂ ಮಾಡುತ್ತಿದ್ದೆ.
ಹಾಗಾಗಿ ನನಗೆ ಕುದುರೆ ಪಂದ್ಯಗಳ ಜೂಜಿನ ಚಟ ಹತ್ತಿಕೊಳ್ಳಲು ಹೆಚ್ಚು ಸಮಯ ಹಿಡಿಯಲಿಲ್ಲ. ಹೆಂಗಸರ ಹುಚ್ಚು ಹತ್ತಿ, ಅನೈತಿಕ ಜೀವನವನ್ನೂ ನಡೆಸುತ್ತಿದ್ದೆ. ಗಾಂಜಾ ಎಳೆಯುತ್ತಿದ್ದೆ. ಇಂಥ ಜೀವನಶೈಲಿಗೆ ಬೇಕಾದ ಹಣಕ್ಕಾಗಿ ನಾನು ಮಾಡಿದ ಕಳ್ಳತನಗಳಿಗೆ ಲೆಕ್ಕವೇ ಇಲ್ಲ. ಅದಕ್ಕೆಂದೇ ತುಂಬ ಪಿಸ್ತೂಲುಗಳನ್ನೂ ಇಟ್ಟುಕೊಂಡಿದ್ದೆ. ಆದರೆ ಸದ್ಯ, ಯಾರ ಜೀವವನ್ನೂ ತೆಗೆಯಲಿಲ್ಲ!
ಅಂತೂ ಒಂದು ದಿನ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲು ಸೇರಿದೆ. ಆದರೂ ನಾನು ಬದಲಾಗಲಿಲ್ಲ. ಬಿಡುಗಡೆಯಾಗಿ ಬಂದ ಮೇಲೂ ಹಿಂದಿನ ಚಾಳಿಗಳನ್ನೇ ಮುಂದುವರಿಸಿದೆ. ಇನ್ನಷ್ಟು ನೀಚನಾದೆ ಎಂದೇ ಹೇಳಬಹುದು. ನಾನು ನೋಡಲಿಕ್ಕೆ ತುಂಬ ಮುಗ್ಧನಂತೆ ಕಂಡರೂ ನನ್ನಷ್ಟು ಹಠಮಾರಿ, ಕೋಪಿಷ್ಠ, ಕ್ರೂರಿ ಬೇರಾರೂ ಇರಲಿಲ್ಲ ಅನ್ನಬೇಕು. ಪರಮಸ್ವಾರ್ಥಿ ಆಗಿದ್ದೆ.
ನನ್ನ ಬದುಕನ್ನು ಬದಲಾಯಿಸಿತು ಬೈಬಲ್: ನನ್ನ ಬದುಕಿನ ಈ ನೆಮ್ಮದಿಗೆಟ್ಟ ಸಮಯದಲ್ಲಿ ಅಮ್ಮ ಬೈಬಲ್ ಅಧ್ಯಯನ ಮಾಡಿ ಯೆಹೋವನ ಸಾಕ್ಷಿಯಾದರು. ಅವರ ವ್ಯಕ್ತಿತ್ವದಲ್ಲಾದ ಒಳ್ಳೇ ಬದಲಾವಣೆಗಳನ್ನು ನೋಡಿ ನನ್ನ ಕುತೂಹಲ ಕೆರಳಿತು. ಅವರ ಬದಲಾವಣೆಗೆ ಕಾರಣವೇನೆಂದು ತಿಳಿಯಲಿಕ್ಕಾಗಿಯೇ ಯೆಹೋವನ ಸಾಕ್ಷಿಗಳ ಜೊತೆ ಬೈಬಲ್ ಚರ್ಚೆಗಳನ್ನು ಮಾಡಲಾರಂಭಿಸಿದೆ.
ಯೆಹೋವನ ಸಾಕ್ಷಿಗಳ ಬೋಧನೆಗಳು ಬೇರೆಲ್ಲ ಧರ್ಮಗಳ ಬೋಧನೆಗಳಿಗಿಂತ ಭಿನ್ನವಾಗಿರುವುದನ್ನು ನೋಡಿದೆ. ಅವರು ಹೇಳುವುದೆಲ್ಲದಕ್ಕೂ ಬೈಬಲಿನಲ್ಲಿ ಆಧಾರವಿತ್ತು. ಅಲ್ಲದೆ ನನಗೆ ತಿಳಿದಿದ್ದ ಮಟ್ಟಿಗೆ, ಆರಂಭದ ಕ್ರೈಸ್ತರು ಮಾಡಿದಂತೆಯೇ ಮನೆಯಿಂದ ಮನೆಗೆ ಹೋಗಿ ಸಾರುತ್ತಿದ್ದ ಜನರೆಂದರೆ ಇವರು ಮಾತ್ರ. (ಮತ್ತಾಯ 28:19; ಅಪೊಸ್ತಲರ ಕಾರ್ಯಗಳು 20:20) ಅವರಿಗೆ ಒಬ್ಬರಿಗೊಬ್ಬರ ಮೇಲಿದ್ದ ಸಾಚಾ ಪ್ರೀತಿಯನ್ನು ನೋಡಿದಾಗಲಂತೂ ಇದೇ ಸತ್ಯಧರ್ಮವೆಂದು ನನಗೆ ಮನವರಿಕೆಯಾಯಿತು.—ಯೋಹಾನ 13:35.
ಬೈಬಲ್ ಅಧ್ಯಯನ ಮಾಡುತ್ತಿದ್ದಾಗ, ನನ್ನ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಬೇಕೆಂದು ಮನಗಂಡೆ. ಯೆಹೋವ ದೇವರು ಜಾರತ್ವವನ್ನು ಹಗೆಮಾಡುತ್ತಾನೆಂದೂ ಆತನನ್ನು ಮೆಚ್ಚಿಸಲು ನಾನು ನನ್ನ ದೇಹವನ್ನು ಕಲುಷಿತಗೊಳಿಸುವ ರೂಢಿಗಳನ್ನು ಬಿಟ್ಟುಬಿಡಬೇಕೆಂದೂ ತಿಳಿದುಕೊಂಡೆ. (2 ಕೊರಿಂಥ 7:1; ಇಬ್ರಿಯ 13:4) ಯೆಹೋವನಿಗೆ ಭಾವನೆಗಳಿವೆ ಮತ್ತು ನನ್ನ ಕ್ರಿಯೆಗಳು ಆತನಿಗೆ ದುಃಖ ಇಲ್ಲವೆ ಸಂತೋಷ ತರಬಲ್ಲದೆಂದು ಕಲಿತಾಗ ನನ್ನ ಮನಕಲಕಿತು. (ಜ್ಞಾನೋಕ್ತಿ 27:11) ಗಾಂಜಾ, ಪಿಸ್ತೂಲುಗಳ ಸಹವಾಸ ಬಿಟ್ಟು, ನನ್ನ ವ್ಯಕ್ತಿತ್ವವನ್ನು ಉತ್ತಮಗೊಳಿಸಲು ದೃಢಸಂಕಲ್ಪ ಮಾಡಿದೆ. ನಾನು ಮಾಡಿದ ಅತ್ಯಂತ ಕಷ್ಟಕರ ಬದಲಾವಣೆಯೆಂದರೆ, ನನ್ನ ಅನೈತಿಕ ಜೀವನಶೈಲಿಗೆ, ಜೂಜಿಗೆ ಕೊನೆ ಹಾಡಿದ್ದೇ.
ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್ ಅಧ್ಯಯನ ಮಾಡುತ್ತಿರುವ ವಿಷಯ ನನ್ನ ಮಿತ್ರರಿಗೆ ಗೊತ್ತಾಗುವುದು ನನಗೆ ಮೊದಮೊದಲು ಇಷ್ಟವಿರಲಿಲ್ಲ. ಆದರೆ ಮತ್ತಾಯ 10:33ರಲ್ಲಿ, “ಯಾವನು ಜನರ ಮುಂದೆ ನನ್ನನ್ನು ಅಲ್ಲಗಳೆಯುತ್ತಾನೋ ಅವನನ್ನು ನಾನು ಸಹ ಸ್ವರ್ಗದಲ್ಲಿರುವ ನನ್ನ ತಂದೆಯ ಮುಂದೆ ಅಲ್ಲಗಳೆಯುವೆನು” ಎಂಬ ಯೇಸುವಿನ ಮಾತುಗಳನ್ನು ಓದಿದ್ದು ನನಗೊಂದು ತಿರುಗು ಬಿಂದಾಯಿತು. ಆ ವಾಕ್ಯವು ನನ್ನ ಒಡನಾಡಿಗಳಿಗೆ ನಾನು ಬೈಬಲ್ ಅಧ್ಯಯನ ಮಾಡುತ್ತಿರುವ ವಿಷಯವನ್ನು ಹೇಳುವಂತೆ ಮಾಡಿತು. ಅವರು ದಂಗಾದರು. ‘ಇವನಂಥ ವ್ಯಕ್ತಿ ಕ್ರೈಸ್ತನಾಗುವುದೇ?’ ಎಂದವರು ಆಶ್ಚರ್ಯಪಟ್ಟರು. ಇನ್ನು ಮುಂದೆ ನನ್ನ ಹಿಂದಿನ ಬದುಕನ್ನು ತಿರುಗಿ ನೋಡಲೂ ಇಷ್ಟವಿಲ್ಲ ಎಂದವರಿಗೆ ಹೇಳಿದೆ.
ಸಿಕ್ಕಿದ ಪ್ರಯೋಜನ: ನಾನು ಬೈಬಲ್ ಸೂತ್ರಗಳಿಗನುಸಾರ ಜೀವಿಸುವುದನ್ನು ನೋಡಿದಾಗ ನನ್ನ ಅಮ್ಮನ ಸಂತೋಷಕ್ಕೆ ಪಾರವೇ ಇರಲಿಲ್ಲ. ಮುಂಚೆ ಅವರಿಗೆ, ನಾನು ಯಾವಾಗಲೂ ಏನಾದರೂ ಕೆಟ್ಟ ಕೆಲಸದಲ್ಲಿ ತೊಡಗಿರುತ್ತೇನೆ ಎಂಬ ಚಿಂತೆಯಿರುತ್ತಿತ್ತು. ಈಗ ಅವರಿಗೆ ಆ ಚಿಂತೆಯಿಲ್ಲ. ನಮ್ಮಿಬ್ಬರ ಮಧ್ಯೆಯಿರುವ ಸಾಮಾನ್ಯ ಕೊಂಡಿ ಯೆಹೋವನ ಮೇಲೆ ನಮಗಿರುವ ಪ್ರೀತಿ. ಅದರ ಬಗ್ಗೆ ಮಾತಾಡುತ್ತಿರುತ್ತೇವೆ. ಕೆಲವೊಮ್ಮೆ, ಹಿಂದೆ ಹೇಗಿದ್ದೆ ಎಂಬದರ ಬಗ್ಗೆ ಯೋಚಿಸುತ್ತೇನೆ. ನಾನು ಮಾಡಿರುವ ಬದಲಾವಣೆಗಳನ್ನು ನನಗೆ ನಂಬಲಿಕ್ಕೇ ಆಗುವುದಿಲ್ಲ. ಆದರೆ ಅವುಗಳನ್ನು ದೇವರ ಸಹಾಯದಿಂದ ಮಾಡಿದ್ದೇನೆ. ಹಿಂದೆ ನಾನು ನಡೆಸುತ್ತಿದ್ದ ಅನೈತಿಕ, ಪ್ರಾಪಂಚಿಕ ಜೀವನಶೈಲಿಗಾಗಿ ನಾನೀಗ ಹಂಬಲಿಸುವುದಿಲ್ಲ.
ನಾನು ಬೈಬಲ್ ಸಂದೇಶಕ್ಕೆ ಸ್ಪಂದಿಸಿ ಬದಲಾಗದೇ ಇರುತ್ತಿದ್ದಲ್ಲಿ ಇಷ್ಟರಲ್ಲೇ ಸತ್ತು ಸಮಾಧಿ ಸೇರುತ್ತಿದ್ದೆ ಇಲ್ಲವೆ ಯಾವುದೊ ಜೈಲಿನಲ್ಲಿ ಕೊಳೆಯುತ್ತಾ ಬಿದ್ದಿರುತ್ತಿದ್ದೆ. ಆದರೆ ಈಗ ನನಗೊಂದು ಪ್ರೀತಿಯ, ಸಂತೋಷಭರಿತ ಕುಟುಂಬವಿದೆ. ನನಗೆ ಆಸರೆಯಾಗಿ ನಿಂತಿರುವ ಮಡದಿ ಮತ್ತು ವಿಧೇಯ ಮಗಳಿದ್ದಾಳೆ. ಅವರೊಟ್ಟಿಗೆ ಯೆಹೋವ ದೇವರ ಸೇವೆ ಮಾಡುವುದು ಮಹದಾನಂದ ತರುತ್ತದೆ. ಪ್ರೀತಿತುಂಬಿದ ಕ್ರೈಸ್ತ ಸಹೋದರತ್ವದ ಭಾಗವಾಗಲು ಯೆಹೋವನು ಕೊಟ್ಟಿರುವ ಅವಕಾಶಕ್ಕಾಗಿ ನಾನು ಆಭಾರಿ. ಬೈಬಲ್ ಸತ್ಯ ಕಲಿಸಿಕೊಟ್ಟ ಸಹೋದರನಿಗೂ ನಾನು ಚಿರಋಣಿ. ಅಲ್ಲದೆ, ಬೈಬಲ್ ಏನನ್ನು ಬೋಧಿಸುತ್ತದೊ ಅದನ್ನು ಇತರರು ಕಲಿಯುವಂತೆ ಸಹಾಯಮಾಡುವ ಅವಕಾಶಗಳನ್ನು ತುಂಬ ಅಮೂಲ್ಯವೆಂದೆಣಿಸುತ್ತೇನೆ. ಯೆಹೋವ ದೇವರು ನನ್ನಂಥವನನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡದ್ದಕ್ಕಾಗಿ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು! (w11-E 11/01)
[ಪುಟ 15ರಲ್ಲಿರುವ ಸಂಕ್ಷಿಪ್ತ ವಿವರಣೆ]
‘ಯೆಹೋವನಿಗೆ ಭಾವನೆಗಳಿವೆ ಮತ್ತು ನನ್ನ ಕ್ರಿಯೆಗಳು ಆತನಿಗೆ ದುಃಖ ಇಲ್ಲವೆ ಸಂತೋಷ ತರಬಲ್ಲದೆಂದು ಕಲಿತೆ’
[ಪುಟ 15ರಲ್ಲಿರುವ ಚಿತ್ರ]
ನನ್ನ ಹೆಂಡತಿ ಮತ್ತು ಮಗಳೊಂದಿಗೆ
[ಪುಟ 15ರಲ್ಲಿರುವ ಚಿತ್ರ]
ಅಮ್ಮನ ವ್ಯಕ್ತಿತ್ವದಲ್ಲಿ ಒಳ್ಳೇ ಬದಲಾವಣೆಗಳನ್ನು ಕಂಡೆ