ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಉಪವಾಸ ದೇವರಿಗೆ ಮೆಚ್ಚಿಕೆಯೋ?

ಉಪವಾಸ ದೇವರಿಗೆ ಮೆಚ್ಚಿಕೆಯೋ?

ಉಪವಾಸ ದೇವರಿಗೆ ಮೆಚ್ಚಿಕೆಯೋ?

‘ಆಧ್ಯಾತ್ಮಿಕ ವಿಷಯಗಳನ್ನು ಧ್ಯಾನಿಸಲು ಉಪವಾಸವು ಸಹಾಯಕರ. ಪ್ರಾಪಂಚಿಕ ವಸ್ತುಗಳೇ ಜೀವನದಲ್ಲಿ ಅತ್ಯಂತ ಮಹತ್ವದ ವಿಷಯಗಳಲ್ಲ ಎಂಬ ಅರಿವನ್ನು ಅದು ಮೂಡಿಸುತ್ತದೆ.’’ —ಕ್ಯಾಥಲಿಕ್‌ ಮಹಿಳೆ.

‘ಆಧ್ಯಾತ್ಮಿಕವಾಗಿ ದೇವರಿಗೆ ಹತ್ತಿರವಾಗಲು ಉಪವಾಸವು ನೆರವಾಗುತ್ತದೆ.’—ಯೆಹೂದಿ ರಬ್ಬಿ.

‘ನನ್ನ ಧರ್ಮದಲ್ಲಿ ಉಪವಾಸ ಕಡ್ಡಾಯ, ದೇವರಿಗೆ ಭಕ್ತಿ ಮತ್ತು ಕೃತಜ್ಞತೆಯನ್ನು ತೋರಿಸುವ ದಾರಿ ಅದು. ನಾನು ಉಪವಾಸ ಮಾಡುವುದು ದೇವರನ್ನು ಪ್ರೀತಿಸುವುದರಿಂದಲೇ.’ —ಬಹಾಯಿ ಧರ್ಮದ ಅನುಯಾಯಿ.

ಉಪವಾಸವ್ರತ ಲೋಕದ ಅನೇಕ ಧರ್ಮಗಳಲ್ಲಿ ವಾಡಿಕೆಯಲ್ಲಿರುವ ರೂಢಿ. ಇಸ್ಲಾಮ್‌, ಜೈನ್‌, ಬೌದ್ಧ, ಯೆಹೂದಿ ಮತ್ತು ಹಿಂದೂ ಧರ್ಮಗಳು ಅದನ್ನು ಪಾಲಿಸುತ್ತವೆ. ನಿರ್ದಿಷ್ಟ ಸಮಯದ ವರೆಗೆ ಆಹಾರ ಸೇವಿಸದಿರುವ ಮೂಲಕ ದೇವರಿಗೆ ಅತಿ ಆಪ್ತರಾಗಬಹುದೆಂದು ಅನೇಕರ ನಂಬಿಕೆ.

ನಿಮಗೆ ಹೇಗೆ ಅನಿಸುತ್ತದೆ? ನೀವು ಉಪವಾಸ ಮಾಡಬೇಕೋ? ದೇವರ ವಾಕ್ಯವಾದ ಬೈಬಲ್‌ ಈ ಕುರಿತು ಹೇಳುವುದೇನು?

ಬೈಬಲ್‌ ಕಾಲದಲ್ಲಿ ಉಪವಾಸಗಳು

ಬೈಬಲ್‌ ಕಾಲದಲ್ಲಿ ಜನರು ಹಲವಾರು ಕಾರಣಕ್ಕಾಗಿ ಉಪವಾಸ ಮಾಡುತ್ತಿದ್ದರು. ದೇವರಿಗೆ ಅದು ಮೆಚ್ಚಿಕೆಯಾಗಿತ್ತು. ಆ ಕಾರಣಗಳು ಯಾವುವೆಂದರೆ, ತಮ್ಮ ಪಾಪಗಳಿಗಾಗಿ ಘೋರ ದುಃಖ ಅಥವಾ ಪಶ್ಚಾತ್ತಾಪವನ್ನು ವ್ಯಕ್ತಪಡಿಸಲಿಕ್ಕಾಗಿ (1 ಸಮುವೇಲ 7:4-6); ದೇವರ ಮೆಚ್ಚಿಗೆ ಅಥವಾ ಮಾರ್ಗದರ್ಶನವನ್ನು ಕೋರಲಿಕ್ಕಾಗಿ (ನ್ಯಾಯಸ್ಥಾಪಕರು 20:26-28; ಲೂಕ 2:36, 37); ಅಥವಾ ಧ್ಯಾನಿಸುವಾಗ ತಮ್ಮ ಏಕಾಗ್ರತೆಯನ್ನು ಹೆಚ್ಚಿಸಲಿಕ್ಕಾಗಿ.—ಮತ್ತಾಯ 4:1, 2.

ಆದರೂ ದೇವರ ದೃಷ್ಟಿಯಲ್ಲಿ ಮೆಚ್ಚಿಕೆಯಾಗಿರದ ಉಪವಾಸಗಳ ಕುರಿತೂ ಬೈಬಲ್‌ ಹೇಳುತ್ತದೆ. ಉದಾಹರಣೆಗೆ, ರಾಜ ಸೌಲನು ದೇವರ ಆಜ್ಞೆಗೆ ವಿರುದ್ಧವಾಗಿ ದೆವ್ವ ಮಾದ್ಯಮವನ್ನು ಸಂಪರ್ಕಿಸಿದಾಗ ಅದಕ್ಕೆ ಮೊದಲು ಉಪವಾಸ ಮಾಡಿದ್ದನು. (ಯಾಜಕಕಾಂಡ 20:6; 1 ಸಮುವೇಲ 28:20) ಈಜೆಬೆಲಳಂಥ ಹಾಗೂ ಪೌಲನನ್ನು ಕೊಲ್ಲಲು ಹೊಂಚುಹಾಕಿದ ಮತಾಂಧರಂಥ ದುಷ್ಟಜನರು ಕೂಡ ನಿರ್ದಿಷ್ಟ ದಿನದಲ್ಲಿ ಉಪವಾಸ ಮಾಡಿದ್ದರು. (1 ಅರಸುಗಳು 21:7-12; ಅ. ಕಾರ್ಯಗಳು 23:12-14) ರೂಢಿಯಾಗಿ ಮಾಡುತ್ತಿದ್ದ ಉಪವಾಸಕ್ಕಾಗಿ ಯೇಸುವಿನ ಕಾಲದ ಫರಿಸಾಯರು ಖ್ಯಾತರಾಗಿದ್ದರೂ ದೇವರ ಮೆಚ್ಚಿಕೆಯನ್ನು ಅವರು ಗಳಿಸಲಿಲ್ಲ. ಯೇಸು ಸಹ ಅವರನ್ನು ಖಂಡಿಸಿದ್ದನು. (ಮತ್ತಾಯ 6:16; ಮಾರ್ಕ 2:18; ಲೂಕ 18:12) ಅಂತೆಯೇ, ಕೆಲವು ಇಸ್ರಾಯೇಲ್ಯರ ದುರ್ನಡತೆ ಮತ್ತು ದುರುದ್ದೇಶಗಳ ಕಾರಣ ಅವರ ಉಪವಾಸಗಳನ್ನು ಯೆಹೋವ ದೇವರು ತಿರಸ್ಕರಿಸಿದನು.—ಯೆರೆಮೀಯ 14:12.

ಈ ಉದಾಹರಣೆಗಳು, ಕೇವಲ ಉಪವಾಸ ಮಾಡುವುದು ತಾನೇ ದೇವರನ್ನು ಮೆಚ್ಚಿಸುವುದಿಲ್ಲ ಎಂದು ತೋರಿಸುತ್ತವೆ. ಆದರೂ ದೇವರ ಅನೇಕ ಪ್ರಾಮಾಣಿಕ ಸೇವಕರು ಉಪವಾಸವನ್ನು ಮಾಡಿ ಆತನ ಮೆಚ್ಚಿಕೆಯನ್ನು ಗಳಿಸಿದ್ದರು. ಹಾಗಾದರೆ ಕ್ರೈಸ್ತರ ವಿಷಯದಲ್ಲೇನು? ಅವರು ಉಪವಾಸವನ್ನು ಮಾಡಬೇಕೋ?

ಕ್ರೈಸ್ತರಿಗೆ ಉಪವಾಸ ಕಡ್ಡಾಯವೋ?

ಯೆಹೂದ್ಯರು ವರ್ಷಕ್ಕೊಮ್ಮೆ ದೋಷಪರಿಹಾರಕ ದಿನದಲ್ಲಿ ತಮ್ಮ ‘ಪ್ರಾಣವನ್ನು ಕುಂದಿಸಿಕೊಳ್ಳುವಂತೆ’ ಅಂದರೆ ಉಪವಾಸ ಮಾಡುವಂತೆ ಮೋಶೆಯ ಧರ್ಮಶಾಸ್ತ್ರವು ಆಜ್ಞಾಪಿಸಿತ್ತು. (ಯಾಜಕಕಾಂಡ 16:29-31; ಕೀರ್ತನೆ 35:13) ಯೆಹೋವನು ತನ್ನ ಜನರಿಗೆ ಆಜ್ಞಾಪಿಸಿದ್ದ ಉಪವಾಸವು ಇದೊಂದೇ ಆಗಿತ್ತು. * ಮೋಶೆಯ ಧರ್ಮಶಾಸ್ತ್ರದ ಕೆಳಗೆ ಜೀವಿಸಿದ್ದ ಯೆಹೂದ್ಯರು ಆ ಆಜ್ಞೆಯನ್ನು ಪಾಲಿಸಿದ್ದರು. ಆದರೆ ಕ್ರೈಸ್ತರು ಮೋಶೆಯ ಧರ್ಮಶಾಸ್ತ್ರವನ್ನು ಪಾಲಿಸುವ ಹಂಗಿನಲ್ಲಿಲ್ಲ.—ರೋಮನ್ನರಿಗೆ 10:4; ಕೊಲೊಸ್ಸೆ 2:14.

ಯೇಸು ಧರ್ಮಶಾಸ್ತ್ರದ ನೇಮದ ಪ್ರಕಾರ ಉಪವಾಸವನ್ನು ಮಾಡಿದನಾದರೂ ಅವನು ಒಂದು ರೂಢಿಯಾಗಿ ಅದನ್ನು ಮಾಡುತ್ತಿರಲಿಲ್ಲ. ತನ್ನ ಶಿಷ್ಯರು ಉಪವಾಸವನ್ನು ಮಾಡಿದ್ದಲ್ಲಿ ಅದನ್ನು ಹೇಗೆ ಮಾಡಬೇಕೆಂದು ಅವರಿಗೆ ತಿಳಿಸಿದನೇ ಹೊರತು ಮಾಡಲೇಬೇಕೆಂದು ಆಜ್ಞಾಪಿಸಲಿಲ್ಲ. (ಮತ್ತಾಯ 6:16-18; 9:14) ಹೀಗಿರಲಾಗಿ, ತನ್ನ ಮರಣದ ನಂತರ ತನ್ನ ಶಿಷ್ಯರು ಉಪವಾಸ ಮಾಡುವರೆಂದು ಯೇಸು ಹೇಳಿದ್ದೇಕೆ? (ಮತ್ತಾಯ 9:15) ಇದು ಕೂಡ ಒಂದು ಆಜ್ಞೆಯಲ್ಲ. ಆದರೂ ತಾನು ಮರಣ ಹೊಂದಿದಾಗ ಶಿಷ್ಯರು ದುಃಖದಿಂದ ಎಷ್ಟು ಮನಗುಂದಿ ಹೋಗುವರೆಂದರೆ ಊಟ ಮಾಡುವ ಅಪೇಕ್ಷೆಯು ಕೂಡ ಅವರಿಗಿರುವುದಿಲ್ಲ ಎಂಬರ್ಥದಲ್ಲಿ ಯೇಸು ಹಾಗೆ ಹೇಳಿದ್ದನು.

ಆದಿ ಕ್ರೈಸ್ತರ ಉಪವಾಸದ ಕುರಿತ ಎರಡು ವೃತ್ತಾಂತಗಳು ಬೈಬಲಿನಲ್ಲಿವೆ. ಒಬ್ಬ ವ್ಯಕ್ತಿಯು ಒಳ್ಳೇ ಉದ್ದೇಶದಿಂದ ಉಪವಾಸ ಮಾಡಲು ಆರಿಸಿಕೊಳ್ಳುವುದಾದರೆ ಅದು ದೇವರಿಗೆ ಸ್ವೀಕರಣೀಯ ಎಂದು ಅವು ತೋರಿಸುತ್ತವೆ. (ಅ. ಕಾರ್ಯಗಳು 13:2, 3; 14:23) * ಆದುದರಿಂದ ಕ್ರೈಸ್ತರು ಉಪವಾಸ ಮಾಡಲೇಬೇಕೆಂದು ಕಡ್ಡಾಯವಿಲ್ಲ. ಆದರೂ ಅದನ್ನು ಆರಿಸಿಕೊಳ್ಳುವ ವ್ಯಕ್ತಿಯು ತಪ್ಪು ಹೇತುವಿನಿಂದ ಮಾಡುವ ನಿರ್ದಿಷ್ಟ ಅಪಾಯಗಳ ಕುರಿತು ಎಚ್ಚರಿಕೆಯಿಂದ ಇರಬೇಕು.

ಅಪಾಯಗಳ ಬಗ್ಗೆ ಎಚ್ಚರಿಕೆ

ಉಪವಾಸದ ವಿಷಯದಲ್ಲಿ ಎಚ್ಚರಿಕೆಯಿಂದರಬೇಕಾದ ಒಂದು ಅಪಾಯ ಯಾವುದೆಂದರೆ ಸ್ವನೀತಿವಂತಿಕೆಯೇ. “ಕಪಟ ದೀನತೆ” ಅಥವಾ ದೀನತೆಯ ಸೋಗನ್ನು ಹಾಕುವ ಕುರಿತು ಬೈಬಲ್‌ ಎಚ್ಚರಿಕೆ ನೀಡುತ್ತದೆ. (ಕೊಲೊಸ್ಸೆ 2:20-23) ಗರ್ವದಿಂದ ಉಬ್ಬಿದ್ದ ಫರಿಸಾಯನ ಕುರಿತು ಯೇಸು ಒಮ್ಮೆ ನೀಡಿದ ದೃಷ್ಟಾಂತವನ್ನು ಗಮನಿಸಿ. ಅವನು ಕ್ರಮವಾಗಿ ಉಪವಾಸಮಾಡುತ್ತಿದ್ದ ಕಾರಣ ಬೇರೆಯವರಿಗಿಂತ ತಾನು ತುಂಬ ನೀತಿವಂತನೆಂದು ನೆನಸಿದ್ದನು. ಆದರೆ ದೇವರು ಅಂಥ ಮನೋಭಾವವನ್ನು ಮೆಚ್ಚಲಿಲ್ಲ ಎಂಬುದು ನಿಸ್ಸಂಶಯ.—ಲೂಕ 18:9-14.

ನೀವು ಉಪವಾಸ ಮಾಡುತ್ತಿರುವುದನ್ನು ಡಂಗುರಹೊಡೆದು ಸಾರುವುದು ಅಥವಾ ಇತರರು ಹೇಳುತ್ತಾರೆಂಬ ಕಾರಣ ಮಾತ್ರದಿಂದ ಉಪವಾಸ ಮಾಡುವುದು ಕೂಡ ತಪ್ಪು. ಮತ್ತಾಯ 6:16-18ಕ್ಕನುಸಾರವಾಗಿ ಉಪವಾಸವು ನಿಮ್ಮ ಮತ್ತು ದೇವರ ನಡುವಣ ಒಂದು ಖಾಸಗಿ ವಿಷಯವೆಂದೂ ಎಲ್ಲರಿಗೆ ತಿಳಿದುಬರುವಂತೆ ಅದನ್ನು ಮಾಡಬಾರದೆಂದೂ ಯೇಸು ಹೇಳಿದನು.

ಉಪವಾಸದಿಂದ ಹೇಗಾದರೂ ಪಾಪ ಪರಿಹಾರವಾಗುತ್ತದೆಂದು ನಾವೆಂದೂ ನೆನಸಬಾರದು. ದೇವರಿಂದ ಮೆಚ್ಚಲ್ಪಡಬೇಕಾದರೆ ಉಪವಾಸದೊಂದಿಗೆ ದೇವರ ನಿಯಮಕ್ಕೆ ವಿಧೇಯತೆಯೂ ಕೂಡಿರಬೇಕು. (ಯೆಶಾಯ 58:3-7) ಮನದಾಳದ ಪಶ್ಚಾತ್ತಾಪ ಪಾಪಕ್ಷಮೆಗೆ ನಡೆಸುತ್ತದೆಯೇ ಹೊರತು ಉಪವಾಸವಲ್ಲ. (ಯೋವೇಲ 2:12, 13) ಯೆಹೋವ ದೇವರ ಅಪಾರ ಕೃಪೆಯಾದ ಕ್ರಿಸ್ತನ ಯಜ್ಞದ ಮೂಲಕ ನಮಗೆ ಕ್ಷಮಾಪಣೆ ದೊರೆಯುತ್ತದೆಂದು ಬೈಬಲ್‌ ಒತ್ತಿಹೇಳುತ್ತದೆ. ಉಪವಾಸವೂ ಸೇರಿದಂತೆ ಯಾವುದೇ ಕ್ರಿಯೆಗಳ ಮೂಲಕ ಪಾಪಕ್ಷಮೆಯನ್ನು ಪಡೆಯುವುದು ಅಸಾಧ್ಯ.—ರೋಮನ್ನರಿಗೆ 3:24, 27, 28; ಗಲಾತ್ಯ 2:16; ಎಫೆಸ 2:8, 9.

ಯೆಶಾಯ 58:3 ಉಪವಾಸದ ಕುರಿತ ಇನ್ನೊಂದು ಸಾಮಾನ್ಯ ತಪ್ಪು ಹೇತುವನ್ನು ಚೆನ್ನಾಗಿ ಚಿತ್ರಿಸುತ್ತದೆ. ಇಸ್ರಾಯೇಲ್ಯರು ಉಪವಾಸದ ಮೂಲಕ ದೇವರಿಗೆ ಒಂದು ಉಪಕಾರ ಮಾಡುತ್ತಿದ್ದೆವೊ ಎಂಬಂತೆ ತಾವು ಉಪವಾಸ ಮಾಡಿದ್ದಕ್ಕಾಗಿ ಏನಾದರೂ ಪ್ರತಿಫಲ ಸಲ್ಲಬೇಕೆಂದು ಯೆಹೋವನಿಗೆ ಸೂಚಿಸಿದ್ದರು. ಅವರು ಕೇಳಿದ್ದು: “ನಾವು ಉಪವಾಸ ಮಾಡಿದ್ದೇವೆ, ನೀನು ಏಕೆ ಕಟಾಕ್ಷಿಸುವದಿಲ್ಲ; ನಮ್ಮ ಆತ್ಮವನ್ನು ಕುಂದಿಸಿಕೊಂಡಿದ್ದೇವೆ, ನೀನು ಗಮನಿಸದಿರುವದೇಕೆ?” ಅಂತೆಯೇ ತಮ್ಮ ಉಪವಾಸವನ್ನು ದೇವರು ಮೆಚ್ಚಿ ತಮಗೇನಾದರೂ ಪ್ರತಿಫಲ ಕೊಟ್ಟಾನು ಎಂದು ಅನೇಕರು ನಿರೀಕ್ಷಿಸುತ್ತಾರೆ. ಅಂಥ ಅಗೌರವಯುತ ಹಾಗೂ ಅಶಾಸ್ತ್ರೀಯ ಮನೋಭಾವವನ್ನು ನಾವೆಂದೂ ಅನುಕರಿಸದಿರೋಣ!

ಉಪವಾಸ, ಚಡಿಯೇಟುಗಳೇ ಮುಂತಾದ ಕ್ರಿಯೆಗಳಿಂದ ತಮ್ಮ ದೇಹವನ್ನು ದಂಡಿಸುವ ಮೂಲಕ ದೇವರ ಮೆಚ್ಚಿಕೆಯನ್ನು ಗಳಿಸಸಾಧ್ಯವಿದೆಯೆಂದು ಇನ್ನು ಕೆಲವರು ನಂಬುತ್ತಾರೆ. ದೇವರ ವಾಕ್ಯವು ಇಂಥಾ ಕಲ್ಪನೆಯನ್ನು ಖಂಡಿಸುತ್ತದೆ. “ದೇಹದಂಡನೆಯನ್ನು ಉಂಟುಮಾಡುವಂಥ” ಈ ಕ್ರಿಯೆಗಳು ದುರಿಚ್ಛೆಗಳನ್ನು “ನಿಗ್ರಹಿಸುವುದರಲ್ಲಿ . . . ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ” ಎಂಬುದು ಸ್ಪಷ್ಟ.—ಕೊಲೊಸ್ಸೆ 2:20-23.

ತರ್ಕಬದ್ಧ ನೋಟ

ಉಪವಾಸವನ್ನು ಮಾಡಲೇಬೇಕೆಂಬ ಯಾವ ಬಂಧಕವೂ ಇಲ್ಲ; ಅದು ತಪ್ಪು ಕೂಡಾ ಅಲ್ಲ. ಮೇಲೆ ತಿಳಿಸಿದ ಕೆಟ್ಟ ಹೇತುಗಳನ್ನು ವರ್ಜಿಸಿದ್ದಲ್ಲಿ ಕೆಲವು ಸಂದರ್ಭಗಳಲ್ಲಿ ಉಪವಾಸವು ಪ್ರಯೋಜನಕರವೂ ಆಗಿರಬಲ್ಲದು. ಆದರೆ ಸ್ವೀಕರಣೀಯವಾದ ಆರಾಧನೆಯಲ್ಲಿ ಉಪವಾಸವು ತಾನೇ ಮುಖ್ಯವಲ್ಲ. ಯೆಹೋವನು “ಸಂತೋಷದ ದೇವರು” ಆಗಿರುವುದರಿಂದ ತನ್ನ ಸೇವಕರು ಸಂತೋಷದಿಂದಿರುವಂತೆ ಬಯಸುತ್ತಾನೆ. (1 ತಿಮೊಥೆಯ 1:11) ಆತನ ಸ್ವಂತ ವಾಕ್ಯವು ಅನ್ನುವುದು: “ಪ್ರತಿಯೊಬ್ಬನು ಅನ್ನಪಾನಗಳನ್ನು ತೆಗೆದುಕೊಂಡು ತನ್ನ ನಾನಾ ಪ್ರಯಾಸಗಳಲ್ಲಿಯೂ ಸುಖವನ್ನನುಭವಿಸುವದು ದೇವರ ಅನುಗ್ರಹವೇ.”—ಪ್ರಸಂಗಿ 3:12, 13.

ನಮ್ಮ ಆರಾಧನೆಯು ಸಂತೋಷದಿಂದ ಕೂಡಿದ್ದಾಗಿರಬೇಕು. ಉಪವಾಸವನ್ನು ಬೈಬಲು ಸಂತೋಷದೊಂದಿಗೆ ಎಂದೂ ಜತೆಗೂಡಿಸುವುದಿಲ್ಲ. ಅದಲ್ಲದೆ ಅನ್ನಾಹಾರವನ್ನು ಬಿಡುವ ಮೂಲಕ ನಮ್ಮ ಆರೋಗ್ಯಕ್ಕೆ ಹಾನಿಯಾದಲ್ಲಿ ಅಥವಾ ನಿಜ ಕ್ರೈಸ್ತರಿಗೆ ನಿರ್ಮಾಣಿಕನು ವಹಿಸಿಕೊಟ್ಟಿರುವ ಹರ್ಷದಾಯಕ ಕೆಲಸವಾದ ರಾಜ್ಯ ಸುವಾರ್ತೆಯ ಸಾರುವಿಕೆಗೆ ಬೇಕಾಗಿರುವ ಶಕ್ತಿಯನ್ನು ಅದು ಕುಂದಿಸಿದಲ್ಲಿ ಅದು ನಿಜವಾಗಿ ಫಲಕಾರಿಯಲ್ಲ.

ಉಪವಾಸ ಮಾಡಲಿ ಮಾಡದಿರಲಿ ನಾವು ಆ ವಿಷಯದಲ್ಲಿ ಇತರರಿಗೆ ತೀರ್ಪುಮಾಡುವುದನ್ನು ಮಾತ್ರ ವರ್ಜಿಸಬೇಕು. ನಿಜ ಕ್ರೈಸ್ತರ ನಡುವೆ ಈ ವಿಷಯದ ಬಗ್ಗೆ ಯಾವ ವಾದವಿವಾದವೂ ಇರಬಾರದು. “ಏಕೆಂದರೆ ತಿನ್ನುವುದೂ ಕುಡಿಯುವುದೂ ದೇವರ ರಾಜ್ಯವಲ್ಲ; ನೀತಿಯೂ ಶಾಂತಿಯೂ ಪವಿತ್ರಾತ್ಮದಿಂದ ಉಂಟಾಗುವ ಆನಂದವೂ ದೇವರ ರಾಜ್ಯವಾಗಿದೆ.”—ರೋಮನ್ನರಿಗೆ 14:17. (w09 4/1)

[ಪಾದಟಿಪ್ಪಣಿಗಳು]

^ ಪ್ಯಾರ. 12 ಎಸ್ತೇರಳು ಮಾಡಿದ ಉಪವಾಸದ ಕುರಿತೇನು? ಅದು ದೇವರಿಂದ ಆಜ್ಞಾಪಿಸಲ್ಪಟ್ಟಿರಲಿಲ್ಲವಾದರೂ ದೇವರು ಅದನ್ನು ಮೆಚ್ಚಿದನೆಂದು ತೋರಿಬರುತ್ತದೆ. ಇಂದು ಯೆಹೂದ್ಯರು ಸಾಂಪ್ರದಾಯಿಕವಾಗಿ ಆ ಉಪವಾಸವನ್ನು ತಮ್ಮ ಪೂರೀಮ್‌ ಹಬ್ಬಕ್ಕೆ ಮುಂಚಿತವಾಗಿ ಆಚರಿಸುತ್ತಾರೆ.

^ ಪ್ಯಾರ. 14 ಕೆಲವು ಬೈಬಲ್‌ಗಳಲ್ಲಿ ಉಪವಾಸದ ಬಗ್ಗೆ ಇರುವ ನಿರ್ದೇಶನಗಳು ತಪ್ಪು. ಏಕೆಂದರೆ ಅವು ಅತಿ ಹಳೆಯ ಗ್ರೀಕ್‌ ಹಸ್ತಪ್ರತಿಗಳಲ್ಲಿ ಕಂಡುಬರುವುದಿಲ್ಲ.—ಮತ್ತಾಯ 17:21; ಮಾರ್ಕ 9:29; ಅ. ಕಾರ್ಯಗಳು 10:30; 1 ಕೊರಿಂಥ 7:5, ಕಿಂಗ್‌ ಜೇಮ್ಸ್‌ ವರ್ಷನ್‌.

[ಪುಟ 26ರಲ್ಲಿರುವ ಸಂಕ್ಷಿಪ್ತ ವಿವರಣೆ]

ಫರಿಸಾಯರು ಉಪವಾಸ ಮಾಡುವಾಗ ದೀನತೆಯ ಸೋಗನ್ನು ಹಾಕಿಕೊಂಡರು

[ಪುಟ 27ರಲ್ಲಿರುವ ಸಂಕ್ಷಿಪ್ತ ವಿವರಣೆ]

“ತಿನ್ನುವುದೂ ಕುಡಿಯುವುದೂ ದೇವರ ರಾಜ್ಯವಲ್ಲ; ನೀತಿಯೂ ಶಾಂತಿಯೂ . . . ಆನಂದವೂ ದೇವರ ರಾಜ್ಯವಾಗಿದೆ”

[ಪುಟ 27ರಲ್ಲಿರುವ ಚೌಕ]

‘ಲೆಂಟ್‌’ ಉಪವಾಸದ ಕುರಿತೇನು?

ಕ್ರಿಸ್ತನು ಮಾಡಿದ 40 ದಿನಗಳ ಉಪವಾಸದ ನೆನಪಿಗಾಗಿ ‘ಲೆಂಟ್‌’ ಎಂಬ ನಲವತ್ತು ದಿನಗಳ ಉಪವಾಸವನ್ನು ಆಚರಿಸಲಾಗುತ್ತದೆ ಎಂದು ಹೇಳುತ್ತಾರೆ. ಆದರೂ ತಾನು ಮಾಡಿದ್ದ ಉಪವಾಸವನ್ನು ಆಚರಿಸಬೇಕೆಂದು ಯೇಸು ತನ್ನ ಶಿಷ್ಯರಿಗೆ ಎಂದೂ ಆಜ್ಞಾಪಿಸಲಿಲ್ಲ. ಶಿಷ್ಯರು ಅದನ್ನು ಆಚರಿಸಿದ್ದರೆಂಬುದಕ್ಕೂ ಯಾವ ಪುರಾವೆಯೂ ಇಲ್ಲ. ಈಸ್ಟರ್‌ ಹಬ್ಬಕ್ಕೆ ಮುಂಚಿತವಾಗಿ ಮಾಡಲಾಗುವ ಈ 40 ದಿನಗಳ ಉಪವಾಸದ ಕುರಿತ ಮೊದಲನೇ ಭರವಸಾರ್ಹ ಉಲ್ಲೇಖವಿರುವದು ಕ್ರಿ. ಶ. 330ರಲ್ಲಿ ಬರೆಯಲಾದ ಆ್ಯಥನೇಸಿಯಸನ ಪತ್ರಗಳಲ್ಲೇ ಎಂಬುದು ವ್ಯಕ್ತ.

ಆದರೆ ಯೇಸು ಉಪವಾಸ ಮಾಡಿದ್ದು ತನ್ನ ದೀಕ್ಷಾಸ್ನಾನದ ನಂತರವೇ ಹೊರತು ತನ್ನ ಮರಣಕ್ಕೆ ಮುಂಚಿತವಾಗಿ ಅಲ್ಲ. ಆದರೂ ಕೆಲವು ಧರ್ಮಗಳು ಲೆಂಟ್‌ ಕಾಲವನ್ನು ಈಸ್ಟರ್‌ ಹಬ್ಬಕ್ಕೆ ಮುಂಚಿನ ವಾರಗಳಲ್ಲಿ ಆಚರಿಸುವುದು ನಿಜಕ್ಕೂ ವಿಚಿತ್ರ. ಪುರಾತನ ಬಬಿಲೋನ್ಯರು, ಈಜಿಪ್ಟಿನವರು ಮತ್ತು ಗ್ರೀಕರಲ್ಲಿ 40 ದಿನಗಳ ಇಂಥ ಒಂದು ಉಪವಾಸವನ್ನು ವರ್ಷದ ಆರಂಭದಲ್ಲಿ ಆಚರಿಸುವುದು ಸಾಮಾನ್ಯ ಪದ್ಧತಿಯಾಗಿತ್ತು. ಕ್ರೈಸ್ತರೆಂದೆಣಿಸಿಕೊಳ್ಳುವವರು ಅವರಿಂದಲೇ ಈ ಪದ್ಧತಿಯನ್ನು ಎರವಲಾಗಿ ಪಡೆದಿದ್ದಿರಬಹುದೆಂಬುದು ವ್ಯಕ್ತ.