ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅನಾಥ ಮಕ್ಕಳಿಗೆ ತಂದೆ

ಅನಾಥ ಮಕ್ಕಳಿಗೆ ತಂದೆ

ದೇವರ ಸಮೀಪಕ್ಕೆ ಬನ್ನಿರಿ

ಅನಾಥ ಮಕ್ಕಳಿಗೆ ತಂದೆ

ವಿಮೋಚನಕಾಂಡ 22:22-24

‘ಪರಿಶುದ್ಧ ವಾಸಸ್ಥಾನದಲ್ಲಿರುವ ದೇವರು ದಿಕ್ಕಿಲ್ಲದವರಿಗೆ [“ತಂದೆಯಿಲ್ಲದ ಹುಡುಗರಿಗೆ,” NW] ತಂದೆಯೂ ಆಗಿದ್ದಾನೆ.’ (ಕೀರ್ತನೆ 68:5) ಆ ಪ್ರೇರಿತ ಮಾತುಗಳು ದಿಕ್ಕಿಲ್ಲದವರ ಅಗತ್ಯತೆಗಳ ಕಡೆಗೆ ಯೆಹೋವ ದೇವರ ಸಂವೇದನಾಶೀಲತೆಯ ಕುರಿತು ಮನತಟ್ಟುವ ಪಾಠವನ್ನು ಕಲಿಸುತ್ತದೆ. ತಂದೆ ಅಥವಾ ತಾಯಿ ಇಲ್ಲದ ಮಕ್ಕಳ ಕಡೆಗೆ ಆತನಿಗಿರುವ ಚಿಂತೆಯು ಇಸ್ರಾಯೇಲ್ಯರಿಗೆ ಕೊಡಲ್ಪಟ್ಟ ಧರ್ಮಶಾಸ್ತ್ರದಲ್ಲಿ ಸ್ಪಷ್ಟವಾಗಿ ತೋರಿಬಂದಿತ್ತು. “ತಂದೆಯಿಲ್ಲದ ಹುಡುಗನ” * ವಿಷಯದಲ್ಲಿ ಬೈಬಲ್‌ ತಿಳಿಸಿದ ಮೊದಲ ಹೇಳಿಕೆಯನ್ನು ನಾವೀಗ ಪರೀಕ್ಷಿಸೋಣ. ಅದು ವಿಮೋಚನಕಾಂಡ 22:22-24ರಲ್ಲಿ ಕಂಡುಬರುತ್ತದೆ.

ದೇವರು ಎಚ್ಚರಿಸಿದ್ದು: ‘[ನೀವು] ದಿಕ್ಕಿಲ್ಲದ ಮಕ್ಕಳನ್ನು ಬಾಧಿಸಬಾರದು.’ (ವಚನ 22) ಇದು ಮಾನವೀಯತೆಯನ್ನು ತೋರಿಸಲು ಹೇಳಿರುವ ಕೇವಲ ವಿನಂತಿಯಲ್ಲ. ಅದು ದೇವರ ಆಜ್ಞೆಯಾಗಿತ್ತು. ತಂದೆ ಸತ್ತ ಮಗುವು ತನ್ನ ಪಾಲಕ ಮತ್ತು ಪೋಷಕನನ್ನು ಕಳಕೊಳ್ಳುತ್ತದೆ. ಆದ್ದರಿಂದ ಅದು ಇತರರಿಂದ ದುರ್ಬಳಕೆ ಹೊಂದುವ ಅವಕಾಶವಿದೆ. ಅಂಥ ಮಗುವನ್ನು ಯಾವನಾದರೂ ಯಾವ ರೀತಿಯಲ್ಲಾದರೂ ‘ಬಾಧಿಸಬಾರದಿತ್ತು.’ ಬೇರೆ ಬೈಬಲ್‌ ಭಾಷಾಂತರಗಳಲ್ಲಿ ‘ಬಾಧಿಸು’ ಎಂಬ ಪದವನ್ನು “ದುರುಪಯೋಗಿಸು,” “ದುರುಪಚರಿಸು” ಮತ್ತು “ಸ್ವಪ್ರಯೋಜನಕ್ಕಾಗಿ ಬಳಸು” ಎಂದು ಅನುವಾದಿಸಲಾಗಿದೆ. ತಂದೆಯಿಲ್ಲದ ಮಗುವಿಗೆ ಕೆಟ್ಟದ್ದನ್ನು ಮಾಡುವುದು ದೇವರ ದೃಷ್ಟಿಯಲ್ಲಿ ಒಂದು ಗಂಭೀರವಾದ ವಿಷಯ. ಎಷ್ಟು ಗಂಭೀರ?

ಧರ್ಮಶಾಸ್ತ್ರವು ಮುಂದುವರಿಸಿ ಹೇಳುವುದು: “ನೀವು ಇಂಥವರನ್ನು ಬಾಧಿಸಿದರೆ ಅವರು ನನಗೆ ಮೊರೆಯಿಡುವರು; ಆ ಮೊರೆಗೆ ನಾನು ಕಿವಿಗೊಡುವೆನೆಂದು ತಿಳಿದುಕೊಳ್ಳಿರಿ.” (ವಚನ 23) ಹೀಬ್ರು ಮೂಲ ಗ್ರಂಥದಲ್ಲಿ ವಚನ 22ರಲ್ಲಿ “ನೀವು” ಎಂಬ ಬಹುವಚನವನ್ನು ಉಪಯೋಗಿಸಲಾಗಿದೆ. ಆದರೆ ವಚನ 23ರಲ್ಲಿ ಏಕವಚನವನ್ನು ಬಳಸಲಾಗಿದೆ. ಇದರಿಂದ, ಈ ದೈವಿಕ ಆಜ್ಞೆಯನ್ನು ಪಾಲಿಸಲು ಪ್ರತಿಯೊಬ್ಬನು ವೈಯಕ್ತಿಕವಾಗಿ ಹಾಗೂ ಇಡೀ ಜನಾಂಗವು ಸಹ ಹೊಣೆಯಾಗಿತ್ತು ಎಂಬುದು ಸ್ಪಷ್ಟ. ಯೆಹೋವನು ಎಲ್ಲವನ್ನು ಗಮನಿಸುತ್ತಿದ್ದನು. ತಂದೆಯಿಲ್ಲದ ಹುಡುಗರ ಮೊರೆಯನ್ನು ಅವನು ಕೇಳುತ್ತಿದ್ದನು. ಕೂಡಲೇ ಅವರ ಸಹಾಯಕ್ಕೆ ಬರುತ್ತಿದ್ದನು.—ಕೀರ್ತನೆ 10:14; ಜ್ಞಾನೋಕ್ತಿ 23:10, 11.

ಹಾಗಾದರೆ ಯಾರಾದರೂ ತಂದೆಯಿಲ್ಲದ ಹುಡುಗನಿಗೆ ಕೆಟ್ಟದ್ದನ್ನು ಮಾಡಿದಲ್ಲಿ ಆಗೇನು? ಆ ಮಗುವು ದುಃಖದಿಂದ ದೇವರಿಗೆ ಮೊರೆಯಿಟ್ಟರೆ? “ನಾನು ಕೋಪಿಸಿಕೊಂಡು ನಿಮ್ಮನ್ನು ಶತ್ರುಗಳ ಕತ್ತಿಯಿಂದ ಸಂಹಾರಮಾಡಿಸುವೆನು” ಎಂದು ಯೆಹೋವ ದೇವರು ಹೇಳುತ್ತಾನೆ. (ವಚನ 24) ಇದು ಕಡುಕೋಪವನ್ನು ಸೂಚಿಸುವ ಆಡುಮಾತಾದ “ಮೂಗಿನ ತುದಿ ಕೆಂಪಾಗು” ಅಂದರೆ ಕ್ರೋಧಾವಿಷ್ಟನಾಗು ಎಂಬ ಅಕ್ಷರಾರ್ಥವನ್ನು ಕೊಡುತ್ತದೆಂದು ಹೇಳುತ್ತದೆ ಬೈಬಲಿನ ಒಂದು ಪರಾಮರ್ಶೆ ಕೃತಿ. ಈ ನಿಯಮವನ್ನು ಜಾರಿಗೆ ತರಲು ಇಸ್ರಾಯೇಲಿನ ನ್ಯಾಯಸ್ಥಾಪಕರಿಗೆ ಯೆಹೋವನು ವಹಿಸಿಕೊಡಲಿಲ್ಲ ಎಂಬುದನ್ನು ಗಮನಿಸಿ. ಸಹಾಯಶೂನ್ಯ ಮಗುವನ್ನು ಯಾರಾದರೂ ಸ್ವಪ್ರಯೋಜನಕ್ಕಾಗಿ ಬಳಸಿದ್ದಲ್ಲಿ ಅವರ ಮೇಲೆ ದೇವರು ತಾನೇ ಶಿಕ್ಷಾ ತೀರ್ಪನ್ನು ಬರಮಾಡುವನು.—ಧರ್ಮೋಪದೇಶಕಾಂಡ 10:17, 18.

ಯೆಹೋವ ದೇವರು ಬದಲಾಗಿಲ್ಲ. (ಮಲಾಕಿಯ 3:6) ತಂದೆ, ತಾಯಿ ಅಥವಾ ಇಬ್ಬರನ್ನೂ ಕಳಕೊಂಡಿರುವ ಮಕ್ಕಳಿಗಾಗಿ ದೇವರ ಹೃದಯವು ಕನಿಕರದಿಂದ ಮಿಡಿಯುತ್ತದೆ. (ಯಾಕೋಬ 1:27) ಮುಗ್ಧಮಕ್ಕಳಿಗೆ ಕಿರುಕುಳಕೊಡುವಾಗ, ತಂದೆಯಿಲ್ಲದ ಮಕ್ಕಳ ಪಿತನಾದ ದೇವರು ಧರ್ಮಕ್ರೋಧದಿಂದ ಕೆರಳುತ್ತಾನೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಯಾರು ಸಹಾಯಶೂನ್ಯ ಮಗುವನ್ನು ದುರುಪಯೋಗಿಸಲು ಪ್ರಯತ್ನಿಸುತ್ತಾರೋ ಅವರು ‘ಯೆಹೋವನ ಉಗ್ರಕೋಪವನ್ನು’ ತಪ್ಪಿಸಿಕೊಳ್ಳಲಾರರು. (ಚೆಫನ್ಯ 2:1) ಅಂಥ ದುಷ್ಟಜನರು “ಜೀವಸ್ವರೂಪನಾದ ದೇವರ ಕೈಯಲ್ಲಿ ಸಿಕ್ಕಿಬೀಳುವದು ಭಯಂಕರವಾದದ್ದು” ಎಂಬುದನ್ನು ಕಲಿತುಕೊಳ್ಳುವರು.—ಇಬ್ರಿಯ 10:31. (w09 4/1)

[ಪಾದಟಿಪ್ಪಣಿ]

^ ಪ್ಯಾರ. 4 “ತಂದೆಯಿಲ್ಲದ ಹುಡುಗ” ಎಂಬ ಅಭಿವ್ಯಕ್ತಿಯು ಬೈಬಲಿನಲ್ಲಿ ಸುಮಾರು 40 ಸಲ ಕಾಣಸಿಗುತ್ತದೆ. ಈ ರೀತಿ ತರ್ಜುಮೆಯಾಗಿರುವ ಹೀಬ್ರು ಪದವು ಪುಲ್ಲಿಂಗ ರೂಪದಲ್ಲಿ ಇರುವುದಾದರೂ, ಅಂಥ ಹೇಳಿಕೆಯಲ್ಲಿರುವ ಮೂಲತತ್ತ್ವವು ತಂದೆಯಿಲ್ಲದ ಹೆಣ್ಣುಮಕ್ಕಳಿಗೆ ಅನ್ವಯಿಸುವುದಿಲ್ಲವೆಂದು ನಾವು ನೆನಸಬಾರದು. ಮೋಶೆಯ ಧರ್ಮಶಾಸ್ತ್ರವು ತಂದೆಯಿಲ್ಲದ ಹುಡುಗಿಯರ ಹಕ್ಕುಗಳನ್ನು ಸಹ ಸಮರ್ಥಿಸಿತ್ತು.—ಅರಣ್ಯಕಾಂಡ 27:1-8.