ವಾಚಕರಿಂದ ಪ್ರಶ್ನೆಗಳು
ಯೆರಿಕೋ ಎಂಬ ಪ್ರಾಚೀನ ಪಟ್ಟಣವನ್ನು ವಶಪಡಿಸಿಕೊಳ್ಳುವ ಮುಂಚೆ ಅದನ್ನು ದೀರ್ಘಕಾಲದ ವರೆಗೆ ಸುತ್ತುವರಿಯಲಾಗಲಿಲ್ಲ ಎನ್ನುವುದಕ್ಕೆ ಯಾವ ಪುರಾವೆ ಇದೆ?
ಯೆಹೋಶುವ 6:10-15, 20 ಕ್ಕನುಸಾರ ಇಸ್ರಾಯೇಲ್ ಸೈನ್ಯವು ಆರು ದಿನಗಳ ವರೆಗೆ ದಿನಕ್ಕೆ ಒಂದು ಸಲ ಯೆರಿಕೋ ಪಟ್ಟಣದ ಸುತ್ತ ನಡೆದರು. ಏಳನೇ ದಿನದಂದು ಅವರು ಏಳು ಸಲ ಪಟ್ಟಣದ ಸುತ್ತ ನಡೆದರು. ಆಗ ದೇವರು ಯೆರಿಕೋವಿನ ಬೃಹತ್ ಗೋಡೆಗಳು ಕುಸಿದುಬೀಳುವಂತೆ ಮಾಡಿದನು. ಹೀಗೆ ಇಸ್ರಾಯೇಲ್ಯರು ಯೆರಿಕೋವನ್ನು ಪ್ರವೇಶಿಸಿ ಅದನ್ನು ವಶಪಡಿಸಿಕೊಳ್ಳಲು ಸಾಧ್ಯವಾಯಿತು. ಯೆರಿಕೋ ದೀರ್ಘ ಸಮಯದ ವರೆಗೆ ಸುತ್ತುವರಿಯಲ್ಪಟ್ಟಿರಲಿಲ್ಲ ಎಂದು ಬೈಬಲ್ ಸೂಚಿಸುತ್ತದೆ. ಆದರೆ ಇದಕ್ಕೆ ಪುಷ್ಟಿ ಕೊಡುವ ಭೂ ಅಗೆತಶಾಸ್ತ್ರದ ಪುರಾವೆ ಏನಾದರೂ ಇದೆಯಾ?
ಪುರಾತನ ಕಾಲಗಳಲ್ಲಿ ದಾಳಿಕೋರರು ಕೋಟೆಕೊತ್ತಲಿನ ನಗರಗಳನ್ನು ಸುತ್ತುವರಿಯುತ್ತಿದ್ದದ್ದು ಸಾಮಾನ್ಯ ವಿಷಯವಾಗಿತ್ತು. ಈ ಮುತ್ತಿಗೆ ಎಷ್ಟೇ ದೀರ್ಘ ಸಮಯದ ವರೆಗೆ ಇದ್ದರೂ ವಿಜಯಿ ಸೈನ್ಯವು ಪಟ್ಟಣದ ಐಶ್ವರ್ಯ ಮತ್ತು ಅಲ್ಲಿ ಉಳಿದಿರುವ ಆಹಾರದ ಸರಬರಾಜುಗಳನ್ನು ದೋಚಿಕೊಳ್ಳುತ್ತಿತ್ತು. ಆದರೆ ಯೆರಿಕೋವಿನ ಅವಶೇಷಗಳಲ್ಲಿ ಭೂ ಅಗೆತಶಾಸ್ತ್ರಜ್ಞರಿಗೆ ತುಂಬ ದೊಡ್ಡ ಮೊತ್ತದ ಧಾನ್ಯ ಸರಬರಾಜು ಸಿಕ್ಕಿತು. ಈ ವಿಷಯದ ಬಗ್ಗೆ ಬಿಬ್ಲಿಕಲ್ ಆರ್ಕಿಯಾಲಜಿ ರಿವ್ಯೂ ಎಂಬ ಪುಸ್ತಕ ಹೇಳಿದ್ದು: “ಮಣ್ಣಿನ ಪಾತ್ರೆಗಳನ್ನು ಬಿಟ್ಟು ಅಲ್ಲಿ ಹೇರಳವಾಗಿ ಸಿಕ್ಕಿದ್ದು ಧಾನ್ಯಗಳು. . . . ಪ್ಯಾಲೆಸ್ಟೀನಿನ ಭೂ ಅಗೆತಶಾಸ್ತ್ರದ ದಾಖಲೆಗಳಲ್ಲಿ ಇದೊಂದು ಅಪೂರ್ವ ವಿಷಯ. . . . ಹೆಚ್ಚೆಂದರೆ ಒಂದು ಅಥವಾ ಎರಡು ಹೂಜಿ ಧಾನ್ಯ ಸಿಕ್ಕಿದ್ದು ಇದೆ. ಆದರೆ ಇಷ್ಟೊಂದು ಮೊತ್ತದ ಧಾನ್ಯ ಸಿಕ್ಕಿರುವುದು ಅಪೂರ್ವ.”
ಬೈಬಲಿನ ವೃತ್ತಾಂತಕ್ಕನುಸಾರ ಇಸ್ರಾಯೇಲ್ಯರು ಯೆರಿಕೋವಿನ ಧಾನ್ಯವನ್ನು ದೋಚಿಕೊಂಡು ಹೋಗಲಿಲ್ಲ. ಇದಕ್ಕೆ ಒಳ್ಳೇ ಕಾರಣವಿತ್ತು. ಹಾಗೆ ಮಾಡಬಾರದೆಂದು ಯೆಹೋವನೇ ಆಜ್ಞೆ ಕೊಟ್ಟಿದ್ದನು. (ಯೆಹೋ. 6:17, 18) ಇಸ್ರಾಯೇಲ್ಯರು ವಸಂತಕಾಲದಲ್ಲಿ, ಅಂದರೆ ಕೊಯ್ಲಿನ ಕಾಲ ಮುಗಿದ ನಂತರ ಯೆರಿಕೋವಿನ ಮೇಲೆ ಆಕ್ರಮಣ ಮಾಡಿದರು. ಆಗ ಧಾನ್ಯದ ಸರಬರಾಜು ತುಂಬ ಹೇರಳವಾಗಿತ್ತು. (ಯೆಹೋ. 3:15-17; 5:10) ಯೆರಿಕೋವಿನಲ್ಲಿ ಅಷ್ಟೊಂದು ಧಾನ್ಯ ಉಳಿದಿತ್ತು ಎಂಬ ಸಂಗತಿ, ಇಸ್ರಾಯೇಲ್ಯರು ದೀರ್ಘ ಸಮಯದ ವರೆಗೆ ಮುತ್ತಿಗೆ ಹಾಕಿರಲಿಲ್ಲವೆಂದು ತೋರಿಸುತ್ತದೆ. ಇದನ್ನೇ ಬೈಬಲ್‍ನಲ್ಲಿ ವರ್ಣಿಸಲಾಗಿದೆ.