ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹೆತ್ತವರೇ—ನಿಮ್ಮ ಮಕ್ಕಳ ಪರಿಪಾಲನೆ ಮಾಡಿ

ಹೆತ್ತವರೇ—ನಿಮ್ಮ ಮಕ್ಕಳ ಪರಿಪಾಲನೆ ಮಾಡಿ

“ನಿನ್ನ ಹಿಂಡುಗಳ ಸ್ಥಿತಿಯನ್ನು ಚೆನ್ನಾಗಿ ತಿಳಿದುಕೊಂಡಿರು.”—ಜ್ಞಾನೋ. 27:23.

1, 2. (ಎ) ಇಸ್ರಾಯೇಲ್ಯ ಕುರುಬರಿಗಿದ್ದ ಕೆಲವೊಂದು ಜವಾಬ್ದಾರಿಗಳೇನು? (ಬಿ) ಹೆತ್ತವರು ಹೇಗೆ ಕುರುಬರಂತಿದ್ದಾರೆ?

ಪ್ರಾಚೀನ ಇಸ್ರಾಯೇಲಿನಲ್ಲಿದ್ದ ಕುರುಬರ ಜೀವನ ತುಂಬ ಕಠಿನವಾಗಿತ್ತು. ಬಿಸಿಲು, ಚಳಿಯೆನ್ನದೆ ಕುರಿಗಳನ್ನು ಕಾಯುತ್ತಿದ್ದರು. ಪರಭಕ್ಷಕ ಪ್ರಾಣಿಗಳಿಂದ, ಕಳ್ಳರಿಂದ ಕಾಪಾಡುತ್ತಿದ್ದರು. ಕುರಿಗಳನ್ನು ಆಗಾಗ ಪರೀಕ್ಷಿಸಿ ನೋಡುತ್ತಿದ್ದರು. ಯಾವುದಾದರೂ ಕುರಿ ಅಸ್ವಸ್ಥವಾದರೆ, ಗಾಯಗೊಂಡರೆ ಬೇಕಾದ ಚಿಕಿತ್ಸೆ ಕೊಡುತ್ತಿದ್ದರು. ಕುರಿಮರಿಗಳಿಗಂತೂ ವಿಶೇಷ ಗಮನಕೊಡುತ್ತಿದ್ದರು. ಏಕೆಂದರೆ ಅವು ತುಂಬ ನಾಜೂಕಾಗಿರುತ್ತಿದ್ದವು ಮತ್ತು ದೊಡ್ಡ ಕುರಿಗಳಿಗೆ ಇರುವಷ್ಟು ಬಲ ಅವುಗಳಿಗೆ ಇರುತ್ತಿರಲಿಲ್ಲ.—ಆದಿ. 33:13.

2 ಕ್ರೈಸ್ತ ಹೆತ್ತವರು ಕೆಲವೊಂದು ವಿಧಗಳಲ್ಲಿ ಕುರುಬರಂತಿದ್ದಾರೆ. ಕುರುಬರಲ್ಲಿರುವ ಗುಣಗಳನ್ನು ಅವರು ತೋರಿಸಬೇಕು. ತಮ್ಮ ಮಕ್ಕಳನ್ನು “ಯೆಹೋವನ ಶಿಸ್ತಿನಲ್ಲಿಯೂ ಮಾನಸಿಕ ಕ್ರಮಪಡಿಸುವಿಕೆಯಲ್ಲಿಯೂ” ಬೆಳೆಸುವಂಥ ಜವಾಬ್ದಾರಿ ಅವರಿಗಿದೆ. (ಎಫೆ. 6:4) ಈ ಕೆಲಸ ನೀರು ಕುಡಿದಷ್ಟು ಸುಲಭವೇ? ಇಲ್ಲವೇ ಇಲ್ಲ! ಮಕ್ಕಳ ಮೇಲೆ ಸೈತಾನನ ಪ್ರಚಾರದ ನಿರಂತರ ದಾಳಿ ನಡೆಯುತ್ತಾ ಇರುತ್ತದೆ. ಅಪರಿಪೂರ್ಣತೆಯಿಂದ ಬಂದಿರುವ ಪ್ರವೃತ್ತಿಗಳೂ ಅವರಲ್ಲಿವೆ. (2 ತಿಮೊ. 2:22; 1 ಯೋಹಾ. 2:16) ನಿಮಗೆ ಮಕ್ಕಳಿರುವಲ್ಲಿ ಅವರಿಗೆ ಹೇಗೆ ಸಹಾಯಮಾಡುವಿರಿ? ಇದಕ್ಕಾಗಿ ನೀವು ಮೂರು ವಿಷಯಗಳನ್ನು ಮಾಡಬೇಕು. ಅವರನ್ನು ತಿಳಿದುಕೊಳ್ಳಬೇಕು, ಅವರಿಗೆ ಆಧ್ಯಾತ್ಮಿಕವಾಗಿ ಉಣಿಸಬೇಕು, ಅವರಿಗೆ ದಾರಿ ತೋರಿಸಬೇಕು. ಇದನ್ನು ಮಾಡುವುದು ಹೇಗೆಂದು ಚರ್ಚಿಸೋಣ.

 ನಿಮ್ಮ ಮಕ್ಕಳನ್ನು ತಿಳಿದುಕೊಳ್ಳಿ

3. ಹೆತ್ತವರು ತಮ್ಮ ಮಕ್ಕಳ ‘ಸ್ಥಿತಿಯನ್ನು ಚೆನ್ನಾಗಿ ತಿಳಿದುಕೊಂಡಿರಬೇಕು’ ಎಂಬದರ ಅರ್ಥವೇನು?

3 ಒಬ್ಬ ಒಳ್ಳೇ ಕುರುಬ ಪ್ರತಿಯೊಂದು ಕುರಿಯನ್ನು ಪರೀಕ್ಷಿಸಿ, ಅದು ಆರೋಗ್ಯವಾಗಿದೆಯಾ ಎಂದು ತಿಳಿದುಕೊಳ್ಳುತ್ತಾನೆ. ಒಂದರ್ಥದಲ್ಲಿ ನಿಮ್ಮ ಮಕ್ಕಳಿಗೂ ಇದನ್ನೇ ಮಾಡಬಹುದು. “ನಿನ್ನ ಹಿಂಡುಗಳ ಸ್ಥಿತಿಯನ್ನು ಚೆನ್ನಾಗಿ ತಿಳಿದುಕೊಂಡಿರು” ಎನ್ನುತ್ತದೆ ಬೈಬಲ್‌. (ಜ್ಞಾನೋ. 27:23) ಇದನ್ನು ಮಾಡಲಿಕ್ಕಾಗಿ ನೀವು ಅವರ ಕ್ರಿಯೆಗಳಿಗೆ ಮಾತ್ರವಲ್ಲ ಅವರ ಆಲೋಚನೆ, ಭಾವನೆಗಳಿಗೂ ಗಮನ ಕೊಡಬೇಕು. ಹೇಗೆ? ಅವರೊಟ್ಟಿಗೆ ಯಾವಾಗಲೂ ಮಾತಾಡುತ್ತಾ ಇರುವುದು ಒಂದು ಅತ್ಯುತ್ತಮ ವಿಧ.

4, 5. (ಎ) ಹೆತ್ತವರೊಟ್ಟಿಗೆ ಮಕ್ಕಳು ಮನಬಿಚ್ಚಿ ಮಾತಾಡಲು ನೆರವಾಗುವ ಕೆಲವು ಪ್ರಾಯೋಗಿಕ ಸಲಹೆಗಳಾವುವು? (ಶೀರ್ಷಿಕೆ ಚಿತ್ರ ನೋಡಿ.) (ಬಿ) ನಿಮ್ಮ ಮಕ್ಕಳು ಹಿಂಜರಿಯದೆ ನಿಮ್ಮೊಟ್ಟಿಗೆ ಮಾತಾಡಲು ಸಾಧ್ಯವಾಗುವಂತೆ ಏನು ಮಾಡಿದ್ದೀರಿ?

4 ಮಕ್ಕಳು ಹದಿಪ್ರಾಯಕ್ಕೆ ಕಾಲಿಟ್ಟಾಗ ಅವರೊಟ್ಟಿಗೆ ಮಾತಾಡುವುದು ಕೆಲವು ಹೆತ್ತವರಿಗೆ ಕಬ್ಬಿಣದ ಕಡಲೆಯಂತಿರುತ್ತದೆ. ಏಕೆಂದರೆ ಹದಿಪ್ರಾಯದ ಮಕ್ಕಳು ತಮ್ಮ ಪಾಡಿಗೆ ಒಂಟಿಯಾಗಿರಲು ಬಯಸುತ್ತಾರೆ. ತಮ್ಮ ಆಲೋಚನೆಗಳನ್ನು, ಭಾವನೆಗಳನ್ನು ಬಾಯಿಬಿಟ್ಟು ಹೇಳಲು ಮುಜುಗರಪಡುತ್ತಾರೆ. ನಿಮ್ಮ ಮಕ್ಕಳೂ ಹೀಗಿರುವಲ್ಲಿ ನೀವೇನು ಮಾಡಬಹುದು? ಮಗ/ಮಗಳನ್ನು ಮುಂದೆ ಕೂರಿಸಿ ಅವರೊಟ್ಟಿಗೆ ತುಂಬ ಗಂಭೀರವಾದ, ಉದ್ದುದ್ದ ಚರ್ಚೆಗಳನ್ನು ಮಾಡುವ ಬದಲು ಅನೌಪಚಾರಿಕ ಸನ್ನಿವೇಶಗಳಲ್ಲಿ ಅವರೊಟ್ಟಿಗೆ ಮಾತಾಡಿ. (ಧರ್ಮೋ. 6:6, 7) ಇದಕ್ಕಾಗಿ ನೀವು ಹೆಚ್ಚು ಪ್ರಯತ್ನ ಮಾಡಬೇಕಾಗಿ ಬರಬಹುದು. ಅಂದರೆ ಅವರ ಜೊತೆ ನಡೆದೊ ಗಾಡಿಯಲ್ಲೊ ಸುತ್ತಾಡಲು ಹೋಗಿ. ಅವರಿಷ್ಟದ ಆಟ ಆಡಿ ಇಲ್ಲವೇ ಒಟ್ಟಿಗೆ ಸೇರಿ ಮನೆಕೆಲಸ ಮಾಡಿ. ಇಂಥ ಅನೌಪಚಾರಿಕ ಸನ್ನಿವೇಶಗಳಲ್ಲಿ ಹದಿಪ್ರಾಯದವರಿಗೆ ಹಾಯೆನಿಸಬಹುದು. ಅವರು ಮನಬಿಚ್ಚಿ ಮಾತಾಡುವ ಸಾಧ್ಯತೆ ಹೆಚ್ಚು.

5 ಇದೆಲ್ಲ ಮಾಡಿದರೂ ನಿಮ್ಮ ಮಗ/ಮಗಳು ಮಾತಾಡಲು ಹಿಂದೇಟು ಹಾಕುವಲ್ಲಿ ಇನ್ನೊಂದು ವಿಧಾನ ಬಳಸಿ. ಉದಾಹರಣೆಗೆ ನಿಮ್ಮ ಮಗಳಿಗೆ ‘ಇವತ್ತು ಏನೇನಾಯಿತು? ನೀನೇನು ಮಾಡಿದೆ?’ ಎಂದು ಕೇಳುವ ಬದಲು ನೀವೇ ನಿಮ್ಮ ಬಗ್ಗೆ ಹೇಳಿ. ನೀವು ಏನೇನು ಮಾಡಿದಿರಿ, ಏನೇನಾಯಿತೆಂದು ಹೇಳಿ. ಆಗ ಅವಳೂ ತನ್ನ ದಿನ ಹೇಗಿತ್ತೆಂದು ಹೇಳಲಾರಂಭಿಸಬಹುದು. ಅಥವಾ ಒಂದು ವಿಷಯದ ಬಗ್ಗೆ ಅವಳ ಅಭಿಪ್ರಾಯ ಏನೆಂದು ತಿಳಿದುಕೊಳ್ಳಬೇಕಾದರೆ ನೇರವಾಗಿ ಅವಳನ್ನೇ ಗುರಿಮಾಡಿ ಪ್ರಶ್ನೆ ಕೇಳುವ ಬದಲಿಗೆ ‘ಇದರ ಬಗ್ಗೆ ನಿನ್ನ ಗೆಳತಿಯರಿಗೆ ಏನನಿಸುತ್ತದೆ?’ ಎಂದು ಕೇಳಿ. ನಂತರ ನಿಮ್ಮ ಮಗಳು ಆ ವಿಷಯದ ಬಗ್ಗೆ ಗೆಳತಿಯರಿಗೆ ಏನು ಸಲಹೆ ಕೊಡುವಳೆಂದು ಕೇಳಿ.

6. ಮಾತಾಡಲು ಸಿದ್ಧರಿದ್ದೀರಿ, ನಿಮ್ಮೊಟ್ಟಿಗೆ ಮಾತಾಡುವುದು ಸುಲಭ ಎಂದು ಮಕ್ಕಳಿಗೆ ಹೇಗೆ ತೋರಿಸುವಿರಿ?

6 ನಿಮ್ಮ ಮಕ್ಕಳು ನಿಮ್ಮೊಟ್ಟಿಗೆ ಮನಬಿಚ್ಚಿ ಮಾತಾಡಬೇಕಾದರೆ ನೀವು ಯಾವುದೇ ಸಮಯದಲ್ಲೂ ಅವರೊಟ್ಟಿಗೆ ಮಾತಾಡಲು ಸಿದ್ಧರಿದ್ದೀರೆಂದು ತೋರಿಸಿ. ಏಕೆಂದರೆ ಹೆತ್ತವರಿಗೆ ತಮ್ಮ ಜೊತೆ ಮಾತಾಡಲು ಪುರುಸೊತ್ತೇ ಇಲ್ಲ ಎಂದು ಯುವಜನರಿಗೆ ಅನಿಸಿದರೆ ಅವರು ತಮ್ಮ ಸಮಸ್ಯೆಗಳ ಬಗ್ಗೆ ಬಾಯಿಬಿಡುವುದಿಲ್ಲ. ಅಷ್ಟುಮಾತ್ರವಲ್ಲ ನಿಮ್ಮೊಟ್ಟಿಗೆ ಮಾತಾಡುವುದು ಸುಲಭ ಎಂದೂ ತೋರಿಸಿ. ಹೇಗೆ? ‘ಯಾವಾಗ ಬೇಕಾದರೂ ನೀನು ನನ್ನ ಹತ್ತಿರ ಮಾತಾಡಬಹುದು’ ಎಂದು ಹೇಳಿದರೆ ಸಾಲದು. ಅವರ ಸಮಸ್ಯೆಗಳನ್ನು ನೀವು ತೀರ ಚಿಕ್ಕದ್ದೆಂದು ಎಣಿಸುವುದಿಲ್ಲ ಇಲ್ಲವೆ ಅವುಗಳ ಬಗ್ಗೆ ಕೇಳಿ ಸಿಟ್ಟುಮಾಡಿಕೊಳ್ಳುವುದಿಲ್ಲ ಎಂಬ ಭಾವನೆಯನ್ನು ಅವರಲ್ಲಿ ಮೂಡಿಸಬೇಕು. ಅನೇಕ ಹೆತ್ತವರು ಈ ವಿಷಯದಲ್ಲಿ ಒಳ್ಳೇ ಮಾದರಿ ಇಡುತ್ತಾರೆ. 19 ವರ್ಷದ ಕೆಲಾ ಎಂಬಾಕೆ ಹೇಳುವುದು: “ನನ್ನ ಅಪ್ಪನ ಜತೆ ನಾನು ಯಾವುದೇ ವಿಷಯದ ಬಗ್ಗೆ ಮಾತಾಡಬಹುದು, ನನಗೇನೂ ಹಿಂಜರಿಕೆಯಿಲ್ಲ. ನಾನು ಮಾತಾಡುವಾಗ ಅವರು ಮಧ್ಯ ಬಾಯಿಹಾಕುವುದಿಲ್ಲ. ಅಥವಾ ನನ್ನ ಮಾತನ್ನು ಪೂರ್ತಿ ಕೇಳುವ ಮುಂಚೆಯೇ ನಾನೇನೊ ತಪ್ಪುಮಾಡಿರಬೇಕೆಂಬ ತೀರ್ಮಾನಕ್ಕೆ ಬರುವುದಿಲ್ಲ. ಕಿವಿಗೊಟ್ಟು ಕೇಳುತ್ತಾರೆ. ನಂತರವೇ ಸಲಹೆ ಬುದ್ಧಿವಾದ ಕೊಡುತ್ತಾರೆ. ಅದು ಯಾವಾಗಲೂ ಅತ್ಯುತ್ತಮವಾಗಿರುತ್ತದೆ.”

7. ವಿರುದ್ಧ ಲಿಂಗದವರೊಟ್ಟಿಗಿನ ಒಡನಾಟದ ಬಗ್ಗೆ ಸಲಹೆ ಕೊಡುವಾಗ ಮಕ್ಕಳಿಗೆ ಕಿರಿಕಿರಿಯಾಗದಂತೆ ಹೆತ್ತವರು ಹೇಗೆ ಸಮತೋಲನ ತೋರಿಸಬಹುದು?

7 ನಾಜೂಕಾದ ವಿಷಯಗಳ ಬಗ್ಗೆ ಮಾತಾಡುವಾಗಲೂ ಜಾಗ್ರತೆ ವಹಿಸಿ. ಉದಾಹರಣೆಗೆ, ವಿರುದ್ಧ ಲಿಂಗದವರೊಟ್ಟಿಗಿನ ಒಡನಾಟದ ವಿಷಯ ತಕ್ಕೊಳ್ಳಿ. ಮಕ್ಕಳ ತಲೆಯಲ್ಲಿ ಬರೀ ಎಚ್ಚರಿಕೆಗಳನ್ನೇ ತುಂಬಿಸುವ ಬದಲು ವಿರುದ್ಧ ಲಿಂಗದವರೊಟ್ಟಿಗೆ ಹೇಗೆ ಯೋಗ್ಯ ರೀತಿಯಲ್ಲಿ ನಡೆದುಕೊಳ್ಳಬೇಕೆಂದೂ ಕಲಿಸಿ. ನೆನಸಿ, ನೀವು ಹೋಟೆಲ್‌ಗೆ ಹೋದಾಗ ಹೋಟೆಲಿನ ಮಾಣಿ ಅಲ್ಲಿ ಯಾವ ತಿನಿಸು ಸಿಗುತ್ತದೆಂದು ಹೇಳುವ ಬದಲು ಹೊಟ್ಟೆ ಹಾಳಾಗುವುದರ ಬಗ್ಗೆ ಬರೀ ಎಚ್ಚರಿಕೆಗಳನ್ನೇ ಕೊಡುತ್ತಾ ಇದ್ದರೆ ಏನು ಮಾಡುತ್ತೀರಾ? ಕೂಡಲೇ ಅಲ್ಲಿಂದ ಎದ್ದು ಇನ್ನೊಂದು ಹೋಟೆಲ್‌ಗೆ ಹೋಗುತ್ತೀರಿ ಅಲ್ಲವೇ? ಮಕ್ಕಳು ಒಂದು ವಿಷಯದ ಬಗ್ಗೆ ನಿಮ್ಮ ಬಳಿ ಸಲಹೆ ಪಡೆಯಲು ಬಂದಾಗ ನೀವು ಯಾವಾಗಲೂ ಬರೀ ಕಟ್ಟುನಿಟ್ಟಾದ ಎಚ್ಚರಿಕೆಗಳನ್ನೇ ಕೊಟ್ಟರೆ ಅವರ ಪ್ರತಿಕ್ರಿಯೆಯೂ ಹಾಗೆ ಇರುವುದು. (ಕೊಲೊಸ್ಸೆ 3:21 ಓದಿ.) ಆದ್ದರಿಂದ ನೀವು ಕೊಡುವ ಸಲಹೆಗಳಲ್ಲಿ ಸಮತೋಲನವಿರಲಿ. ಉದಾಹರಣೆಗೆ  ಎಮಿಲಿ ಎಂಬ ಯುವ ಸಹೋದರಿ ಹೇಳಿದ್ದೇನೆಂದರೆ ಒಂದು ವಿಷಯದ ಬಗ್ಗೆ ಹೆತ್ತವರೊಟ್ಟಿಗೆ ಮಾತಾಡುವಾಗ ಅವರು ಬರೀ ಅದರ ನಕಾರಾತ್ಮಕ ಅಂಶಗಳನ್ನೇ ಎತ್ತಿ ಆಡುವುದಿಲ್ಲ. ಬದಲಿಗೆ ಸಮತೋಲನದಿಂದ ಮಾತಾಡುತ್ತಾರೆ. ಆದ್ದರಿಂದ ಆಕೆಗೆ ಯಾವುದೇ ವಿಷಯವನ್ನು ಅವರಿಂದ ಮುಚ್ಚಿಡಲು ಮನಸ್ಸಾಗುವುದಿಲ್ಲ.

8, 9. (ಎ) ಮಧ್ಯ ಬಾಯಿಹಾಕದೆ ತಾಳ್ಮೆಯಿಂದ ಕಿವಿಗೊಡುವುದರ ಪ್ರಯೋಜನಗಳೇನು? (ಬಿ) ನಿಮ್ಮ ಮಕ್ಕಳಿಗೆ ಕಿವಿಗೊಡುವ ವಿಷಯದಲ್ಲಿ ಹೇಗೆ ಯಶಸ್ವಿಗಳಾಗಿದ್ದೀರಿ?

8 ಕೆಲಾ ಹೇಳಿದ ಮಾತಿಗೆ ಹೊಂದಿಕೆಯಲ್ಲಿ, ನೀವು ತಾಳ್ಮೆಯಿಂದ ಕಿವಿಗೊಡುವ ಮೂಲಕ ನಿಮ್ಮೊಟ್ಟಿಗೆ ಮಾತಾಡುವುದು ಸುಲಭವೆಂದು ಮಕ್ಕಳಿಗೆ ತೋರಿಸಿಕೊಡುತ್ತೀರಿ. (ಯಾಕೋಬ 1:19 ಓದಿ.) ಒಂಟಿ ತಾಯಿ ಆಗಿರುವ ಕಾಟ್ಯಾ ಎಂಬಾಕೆ ಹೇಳುವುದು: “ಮೊದಲೆಲ್ಲ ನನ್ನ ಮಗಳು ನನ್ನೊಟ್ಟಿಗೆ ಮಾತಾಡುವಾಗ ನಾನು ತಾಳ್ಮೆ ತೋರಿಸುತ್ತಿರಲಿಲ್ಲ. ಅವಳು ಮಾತು ಮುಗಿಸಲಿಕ್ಕೇ ನಾನು ಬಿಡುತ್ತಿರಲಿಲ್ಲ. ನನಗೆ ಸುಸ್ತಾದಾಗ ಅವಳು ಹೇಳುವುದನ್ನು ಕೇಳಲು ಮನಸ್ಸಾಗುತ್ತಿರಲಿಲ್ಲ. ಅಥವಾ ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಈಗ ಬದಲಾಗಿದ್ದೇನೆ. ಹಾಗಾಗಿ ಅವಳೂ ಬದಲಾಗಿದ್ದಾಳೆ ಮತ್ತು ಹೆಚ್ಚು ಸಹಕರಿಸುತ್ತಾಳೆ.”

ಅವರನ್ನು ತಿಳಿದುಕೊಳ್ಳಲು ಕಿವಿಗೊಡಿ (ಪ್ಯಾರ 3-9 ನೋಡಿ)

9 ಹದಿಪ್ರಾಯದ ಮಗಳಿರುವ ರಾನಲ್ಡ್‌ ಎಂಬವರಿಗೂ ಅಂಥದ್ದೇ ಅನುಭವವಾಯಿತು. “ಕಾಲೇಜಲ್ಲಿ ಒಬ್ಬ ಹುಡುಗನನ್ನು ಪ್ರೀತಿಸುತ್ತೇನೆಂದು ಮಗಳು ಹೇಳಿದಾಗ ನನ್ನ ಕೋಪ ನೆತ್ತಿಗೇರಿತು. ಆದರೆ ನಾನಾಗ ಯೆಹೋವನ ಬಗ್ಗೆ ಯೋಚಿಸಿದೆ. ಆತನು ತನ್ನ ಸೇವಕರೊಟ್ಟಿಗೆ ಎಷ್ಟು ತಾಳ್ಮೆ, ನ್ಯಾಯದಿಂದ ವರ್ತಿಸುತ್ತಾನೆ. ಆದ್ದರಿಂದ ಮಗಳನ್ನು ತಿದ್ದುವ ಮೊದಲು ಅವಳ ಮನಸ್ಸಲ್ಲಿರುವುದನ್ನು ಹೇಳಲು ಅವಕಾಶ ಕೊಡುವುದು ಉತ್ತಮವೆಂದು ನೆನಸಿದೆ. ಹಾಗೆ ಮಾಡಿದ್ದು ಒಳ್ಳೇದೇ ಆಯಿತು. ನನ್ನ ಮಗಳ ಭಾವನೆಗಳನ್ನು ನಾನು ಅರ್ಥಮಾಡಿಕೊಳ್ಳಲು ಸಾಧ್ಯವಾದದ್ದು ಇದೇ ಮೊದಲು. ಅವಳು ಮಾತಾಡಿ ಮುಗಿಸಿದ ನಂತರ ಅವಳೊಟ್ಟಿಗೆ ಪ್ರೀತಿಯಿಂದ ಮಾತಾಡಲು ಸಾಧ್ಯವಾಯಿತು. ಆಶ್ಚರ್ಯದ ಸಂಗತಿಯೇನೆಂದರೆ ನಾನು ಕೊಟ್ಟ ಬುದ್ಧಿವಾದವನ್ನು ಸ್ವೀಕರಿಸಿದಳು. ತನ್ನ ತಪ್ಪನ್ನು ತಿದ್ದಿಕೊಳ್ಳುತ್ತೇನೆಂದು ಮನಸಾರೆ ಹೇಳಿದಳು.” ನಿಮ್ಮ ಮಕ್ಕಳೊಟ್ಟಿಗೆ ನೀವು ಯಾವಾಗಲೂ ಮಾತಾಡುತ್ತಾ ಇದ್ದರೆ ಅವರು ಏನು ಯೋಚಿಸುತ್ತಾರೆ, ಅವರ ಭಾವನೆಗಳೇನು ಎಂದು ನಿಮಗೆ ಗೊತ್ತಾಗುವುದು. ಆಗ, ಅವರು ಬದುಕಿನಲ್ಲಿ ತೆಗೆದುಕೊಳ್ಳಲಿರುವ ನಿರ್ಣಯಗಳ ಮೇಲೆ ನೀವು ಹೆಚ್ಚು ಪ್ರಭಾವಬೀರಲು ಸಾಧ್ಯವಾಗುವುದು. *

ನಿಮ್ಮ ಮಕ್ಕಳಿಗೆ ಆಧ್ಯಾತ್ಮಿಕವಾಗಿ ಉಣಿಸಿ

10, 11. ನಿಮ್ಮ ಮಕ್ಕಳು ಸತ್ಯದಿಂದ ದೂರ ಸರಿಯದಂತೆ ಹೇಗೆ ಸಹಾಯ ಮಾಡಬಲ್ಲಿರಿ?

10 ಒಬ್ಬ ಒಳ್ಳೇ ಕುರುಬನಿಗೆ ಮಂದೆಯಿಂದ ಒಂದು ಕುರಿ ದೂರ ಸರಿಯುವ ಸಾಧ್ಯತೆಯಿದೆಯೆಂದು ತಿಳಿದಿರುತ್ತದೆ. ಮೊದಲು ಸ್ವಲ್ಪ ದೂರದಲ್ಲಿರುವ ಹಸಿರು ಹುಲ್ಲನ್ನು ನೋಡಿ ಅಲ್ಲಿಗೆ ಹೋಗಿ ಮೇಯುತ್ತದೆ, ಅಲ್ಲಿಂದ ಇನ್ನೊಂದೆಡೆ ಹಸಿರು ಹುಲ್ಲನ್ನು ನೋಡಿ ಅಲ್ಲಿಗೂ ಹೋಗಿ ಮೇಯುತ್ತದೆ. ಹೀಗೆ ಮಾಡುತ್ತಾ ಮಾಡುತ್ತಾ ಅದು ಮಂದೆಯಿಂದ ಅಗಲಿ ಹೋಗುತ್ತದೆ. ನಿಮ್ಮ ಮಗ ಅಥವಾ ಮಗಳಿಗೆ ಹೀಗೆಯೇ ಆಗಬಹುದು. ಹಾನಿಕರವಾದ ಸಹವಾಸ ಅಥವಾ ಕೀಳ್ಮಟ್ಟದ ಮನೋರಂಜನೆಯ ಕಾರಣದಿಂದಾಗಿ ಅವರು ನಿಧಾನವಾಗಿ ದೂರ ಸರಿಯುತ್ತಾ ಆಧ್ಯಾತ್ಮಿಕವಾಗಿ  ಅಪಾಯಕಾರಿಯಾದ ಹಾದಿಗಿಳಿಯಬಹುದು. (ಜ್ಞಾನೋ. 13:20) ಇದನ್ನು ಹೇಗೆ ತಡೆಯಬಲ್ಲಿರಿ?

11 ಮಕ್ಕಳಿಗೆ ಕಲಿಸುತ್ತಿರುವಾಗ ನಿಮಗೇನಾದರೂ ಅವರಲ್ಲಿ ಮುಂದೆ ದೊಡ್ಡದಾಗಬಲ್ಲ ಬಲಹೀನತೆಗಳು ಗಮನಕ್ಕೆ ಬಂದರೆ ಕೂಡಲೇ ಕ್ರಮಗೈಯಿರಿ. ಅವರಲ್ಲಿ ಕ್ರೈಸ್ತ ಗುಣಗಳು ಇರಬಹುದಾದರೂ ಅವು ಬಲವಾಗಿ ಬೇರೂರಿರುವುದಿಲ್ಲ. ಈ ವಿಷಯದಲ್ಲಿ ಅವರಿಗೆ ಸಹಾಯಮಾಡಿ. (2 ಪೇತ್ರ 1:5-8) ಇದನ್ನು ಮಾಡಲಿಕ್ಕಿರುವ ಉತ್ತಮ ಸಂದರ್ಭ ನೀವು ನಿಯಮಿತವಾಗಿ ಮಾಡುವ ಕುಟುಂಬ ಆರಾಧನಾ ಸಮಯವೇ. ಈ ಏರ್ಪಾಡಿನ ಬಗ್ಗೆ ತಿಳಿಸುವಾಗ ಅಕ್ಟೋಬರ್‌ 2008ರ ರಾಜ್ಯ ಸೇವೆ ಹೀಗಂದಿತ್ತು: “ಕ್ರಮವಾದ ಹಾಗೂ ಅರ್ಥಭರಿತ ಕುಟುಂಬ ಬೈಬಲ್‌ ಅಧ್ಯಯನದ ರೂಢಿಯನ್ನು ಹೊಂದಿರುವಂತೆ ನೋಡಿಕೊಳ್ಳುವ ಜವಾಬ್ದಾರಿಯು ಯೆಹೋವನ ಮುಂದೆ ಕುಟುಂಬದ ತಲೆಗಳಿಗೆ ಇದೆ.” ನಿಮ್ಮ ಮಕ್ಕಳ ಪರಿಪಾಲನೆ ಮಾಡಲು ಸಹಾಯಮಾಡುವ ಈ ಪ್ರೀತಿಭರಿತ ಏರ್ಪಾಡನ್ನು ಸದುಪಯೋಗಿಸುತ್ತಿದ್ದೀರೊ? ನಿಮ್ಮ ಮಕ್ಕಳ ಆಧ್ಯಾತ್ಮಿಕ ಅಗತ್ಯವನ್ನು ಪೂರೈಸಲು ನೀವು ಆದ್ಯತೆ ಕೊಡುವಾಗ ಅವರದನ್ನು ತುಂಬ ಮಾನ್ಯ ಮಾಡುತ್ತಾರೆಂಬ ಭರವಸೆ ನಿಮಗಿರಲಿ.—ಮತ್ತಾ. 5:3; ಫಿಲಿ. 1:10.

ಅವರಿಗೆ ಆಧ್ಯಾತ್ಮಿಕವಾಗಿ ಉಣಿಸಿರಿ (ಪ್ಯಾರ 10-12 ನೋಡಿ)

12. (ಎ) ನಿಯಮಿತ ಕುಟುಂಬ ಆರಾಧನೆಯಿಂದ ಯುವ ಜನರಿಗೆ ಹೇಗೆ ಪ್ರಯೋಜನವಾಗಿದೆ? (“ಕುಟುಂಬ ಆರಾಧನೆಗಾಗಿ ಕೃತಜ್ಞರು” ಎಂಬ ಚೌಕ ನೋಡಿ.) (ಬಿ) ಕುಟುಂಬ ಆರಾಧನೆಯಿಂದ ನಿಮಗೆ ವೈಯಕ್ತಿಕವಾಗಿ ಹೇಗೆ ಪ್ರಯೋಜನವಾಗಿದೆ?

12 ಕ್ಯಾರಿಸಾ ಎಂಬ ಹದಿಪ್ರಾಯದ ಹುಡುಗಿ ಕುಟುಂಬ ಆರಾಧನಾ ಕಾರ್ಯಕ್ರಮದಿಂದ ತನ್ನ ಕುಟುಂಬಕ್ಕಾದ ಪ್ರಯೋಜನಗಳ ಬಗ್ಗೆ ತಿಳಿಸಿದಳು. “ನನಗಿಷ್ಟವಾಗುವಂಥ ಸಂಗತಿಯೇನೆಂದರೆ ನಾವೆಲ್ಲರೂ ಒಟ್ಟಿಗೆ ಕೂತು ಮಾತಾಡಲಿಕ್ಕೆ ಆಗುತ್ತದೆ. ಇದರಿಂದ ನಮ್ಮ ನಡುವಿನ ಬಂಧ ಬಲಗೊಳ್ಳುತ್ತದೆ. ಸಿಹಿ ನೆನಪುಗಳು ಉಳಿಯುತ್ತವೆ. ಅಪ್ಪ ಕುಟುಂಬ ಆರಾಧನಾ ಕಾರ್ಯಕ್ರಮವನ್ನು ತಪ್ಪದೇ ಪ್ರತಿ ವಾರ ನಡೆಸುತ್ತಾರೆ. ಅವರದಕ್ಕೆ ಅಷ್ಟು ಮಹತ್ವ ಕೊಡುವುದನ್ನು ನೋಡಿ ನನಗೆ ತುಂಬ ಪ್ರೋತ್ಸಾಹ ಸಿಗುತ್ತದೆ. ನಾನು ಸಹ ಅದಕ್ಕೆ ಮಹತ್ವ ಕೊಡುವಂತೆ ಮಾಡುತ್ತದೆ. ಅವರು ನನ್ನ ಅಪ್ಪ ಮಾತ್ರವಲ್ಲ ನನ್ನ ಆಧ್ಯಾತ್ಮಿಕ ಶಿರಸ್ಸೂ ಆಗಿರುವುದರಿಂದ ಅವರನ್ನು ಗೌರವಿಸಲು ಇದು ಹೆಚ್ಚಿನ ಕಾರಣ ಕೊಡುತ್ತದೆ.” ಬ್ರಿಟ್ನಿ ಎಂಬ ಹೆಸರಿನ ಯುವ ಸಹೋದರಿಯೊಬ್ಬಳು ಹೇಳಿದ್ದು: “ಕುಟುಂಬ ಆರಾಧನೆಯಿಂದಾಗಿ ನನ್ನ ಹೆತ್ತವರಿಗೆ ಹೆಚ್ಚು ಹತ್ತಿರವಾಗಿದ್ದೇನೆ. ಅವರದನ್ನು ಮಾಡುವುದರಿಂದ ಅವರಿಗೆ ನನ್ನ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ಮನಸ್ಸಿದೆ, ನನ್ನ ಬಗ್ಗೆ ಕಾಳಜಿಯಿದೆ ಎಂದು ನನಗೆ ಗೊತ್ತಾಗುತ್ತದೆ. ಅದರಿಂದಾಗಿ ನಮ್ಮ ಕುಟುಂಬ ಬಲವಾಗಿರಲು, ಐಕ್ಯವಾಗಿರಲು ಸಹಾಯವಾಗುತ್ತಿದೆ.” ನೀವು ಒಳ್ಳೇ ಕುರುಬರಾಗುವ ಒಂದು ಪ್ರಧಾನ ವಿಧ ನಿಮ್ಮ ಮಕ್ಕಳಿಗೆ ಆಧ್ಯಾತ್ಮಿಕವಾಗಿ ಉಣಿಸುವುದೇ. ವಿಶೇಷವಾಗಿ ಕುಟುಂಬ ಆರಾಧನೆಯ ಮೂಲಕ. *

ಅವರಿಗೆ ದಾರಿ ತೋರಿಸಿ

13. ಯೆಹೋವನ ಸೇವೆಮಾಡಲು ಎಳೆಯರನ್ನು ಯಾವುದು ಪ್ರಚೋದಿಸಬಲ್ಲದು?

13 ಒಬ್ಬ ಒಳ್ಳೇ ಕುರುಬನು ತನ್ನ ಮಂದೆಯನ್ನು ನಿರ್ದೇಶಿಸಲು ಮತ್ತು ರಕ್ಷಿಸಲು ಕೋಲನ್ನು ಬಳಸುತ್ತಾನೆ. ಕುರಿಗಳನ್ನು ಒಳ್ಳೇ ‘ಹುಲ್ಗಾವಲಿಗೆ’ ನಡೆಸುವುದೇ ಅವನ ಪ್ರಮುಖ ಗುರಿಗಳಲ್ಲೊಂದು. (ಯೆಹೆ. 34:13, 14) ಇದಕ್ಕೆ ಹೋಲುವಂಥ ಆಧ್ಯಾತ್ಮಿಕ ಗುರಿ ಹೆತ್ತವರಾದ ನಿಮಗೂ ಇದೆಯಲ್ಲವೇ? ನಿಮ್ಮ ಮಕ್ಕಳು ಯೆಹೋವನ ಸೇವೆಮಾಡುವ ಹಾಗೆ ಅವರಿಗೆ ದಾರಿ ತೋರಿಸಲು ಬಯಸುತ್ತೀರಿ. ನಿಮ್ಮ ಮಕ್ಕಳಿಗೂ, “ನನ್ನ ದೇವರೇ, ನಿನ್ನ ಚಿತ್ತವನ್ನು ಅನುಸರಿಸುವದೇ ನನ್ನ ಸಂತೋಷವು; ನಿನ್ನ ಧರ್ಮೋಪದೇಶವು ನನ್ನ ಅಂತರಂಗದಲ್ಲಿದೆ” ಎಂದು ಹೇಳಿದ ಕೀರ್ತನೆಗಾರನಂತೆ ಅನಿಸಬೇಕೆಂದು ಬಯಸುತ್ತೀರಿ. (ಕೀರ್ತ. 40:8) ಇಂಥ ಕೃತಜ್ಞತಾಭಾವವನ್ನು ಎಳೆಯರು ಬೆಳೆಸಿಕೊಂಡಾಗ ತಮ್ಮ ಜೀವನವನ್ನು ಯೆಹೋವನಿಗೆ ಸಮರ್ಪಿಸಿಕೊಂಡು, ದೀಕ್ಷಾಸ್ನಾನ ಪಡೆಯುತ್ತಾರೆ. ಈ ಹೆಜ್ಜೆಯನ್ನು ಅವರು ಯಾವಾಗ ತೆಗೆದುಕೊಳ್ಳಬೇಕು? ಈ ನಿರ್ಣಯ ತೆಗೆದುಕೊಳ್ಳುವಷ್ಟು ಪ್ರೌಢತೆ ಮತ್ತು ಯೆಹೋವನ ಸೇವೆಮಾಡುವ ಯಥಾರ್ಥ ಆಸೆ ಅವರಿಗಿರುವಾಗ.

14, 15. (ಎ) ಕ್ರೈಸ್ತ ಹೆತ್ತವರ ಗುರಿ ಏನಾಗಿರಬೇಕು? (ಬಿ) ಯುವ ಪ್ರಾಯದವರು ಸತ್ಯದ ಬಗ್ಗೆ ಏಕೆ ಸಂಶಯಗಳನ್ನು ವ್ಯಕ್ತಪಡಿಸಬಹುದು?

14 ಆದರೆ ನಿಮ್ಮ ಮಕ್ಕಳು ಆಧ್ಯಾತ್ಮಿಕ ಪ್ರಗತಿ ಮಾಡುತ್ತಿರಲಿಕ್ಕಿಲ್ಲ. ಯೆಹೋವನ ಸಾಕ್ಷಿಗಳ ನಂಬಿಕೆಗಳನ್ನೂ ಪ್ರಶ್ನಿಸುತ್ತಿರಬಹುದು. ಆಗೇನು ಮಾಡುವಿರಿ? ಯೆಹೋವ ದೇವರಿಗಾಗಿ ಪ್ರೀತಿ ಮತ್ತು ಆತನು ಮಾಡಿರುವ ಎಲ್ಲ ಸಂಗತಿಗಳಿಗಾಗಿ ಕೃತಜ್ಞತಾಭಾವವನ್ನು ಮಕ್ಕಳ ಹೃದಯದಲ್ಲಿ ನಾಟಿಸಲು ಶ್ರಮಿಸಿ. (ಪ್ರಕ. 4:11) ನೀವದನ್ನು ಮಾಡಿದರೆ, ದೇವರ ಆರಾಧನೆಯ ಬಗ್ಗೆ ಸ್ವಂತ ನಿರ್ಣಯಮಾಡಲು ಅವರು ಸಿದ್ಧರಾದಾಗ ಖಂಡಿತ ಹಾಗೆ ಮಾಡುವರು.

15 ಆದರೆ ಅದಕ್ಕಿಂತಲೂ ಮುಂಚೆ ಯಾವತ್ತಾದರೂ ನಿಮ್ಮ ಮಕ್ಕಳು ಸತ್ಯದ ಬಗ್ಗೆ ಸಂಶಯಗಳನ್ನು ವ್ಯಕ್ತಪಡಿಸಬಹುದು. ಆಗೆಲ್ಲ ಯೆಹೋವನ ಸೇವೆಯೇ ನಿಜವಾಗಿಯೂ ಅತ್ಯುತ್ತಮ ಜೀವನರೀತಿ ಮತ್ತು ಅದರಿಂದಲೇ ಅವರಿಗೆ ಅನಂತ ಸಂತೋಷ ಸಾಧ್ಯವೆಂದು ಅವರಿಗೆ ಮನಗಾಣಿಸಿರಿ. ಹೇಗೆ? ಅವರ ಸಂಶಯಗಳ ಹಿಂದಿರುವ  ಕಾರಣ ತಿಳಿಯಲು ಪ್ರಯತ್ನಿಸಿ. ಉದಾಹರಣೆಗೆ, ನಿಮ್ಮ ಮಗನ ಸಂಶಯಕ್ಕೆ ನಿಜವಾದ ಕಾರಣ ಬೈಬಲ್‌ ಬೋಧನೆಗಳು ಸರಿಯಿಲ್ಲ ಎಂಬ ಭಾವನೆಯಾ? ಅಥವಾ ತನ್ನ ಸಮಪ್ರಾಯದವರ ಮುಂದೆ ಅವುಗಳನ್ನು ಸಮರ್ಥಿಸುವುದು ಹೇಗೆಂದು ಗೊತ್ತಿಲ್ಲದೇ ಇರುವುದಾ? ನಿಮ್ಮ ಮಗಳ ಸಂಶಯಕ್ಕೆ ನಿಜವಾದ ಕಾರಣ ದೇವರ ಮಟ್ಟಗಳು ವಿವೇಕಭರಿತವಲ್ಲ ಎಂಬ ಭಾವನೆಯಾ? ಅಥವಾ ಎಲ್ಲರೂ ಅವಳನ್ನು ದೂರಮಾಡಿರುವುದರಿಂದ ಕಾಡುತ್ತಿರುವ ಒಂಟಿಭಾವನೆಯಾ?

ಅವರಿಗೆ ದಾರಿ ತೋರಿಸಿ (ಪ್ಯಾರ 13-18 ನೋಡಿ)

16, 17. ಹೆತ್ತವರು ತಮ್ಮ ಮಕ್ಕಳಿಗೆ ಸತ್ಯವನ್ನು ತಮ್ಮದಾಗಿಸಿಕೊಳ್ಳಲು ಹೇಗೆಲ್ಲ ಸಹಾಯಮಾಡಬಹುದು?

16 ಕಾರಣ ಏನೇ ಇರಲಿ ನಿಮ್ಮ ಮಗ ಅಥವಾ ಮಗಳಿಗೆ ಇರುವ ಯಾವುದೇ ಆಧ್ಯಾತ್ಮಿಕ ಸಂಶಯಗಳನ್ನು ಬುಡಸಹಿತ ಕಿತ್ತುಹಾಕಲು ಸಹಾಯಮಾಡಿ. ಹೇಗೆ? ಅನೇಕ ಹೆತ್ತವರು ತಮ್ಮ ಮಕ್ಕಳ ಮನಸ್ಸಿನಲ್ಲಿದದ್ದನ್ನು ಹೊರಗೆಳೆಯಲು ಪ್ರಾಯೋಗಿಕ ಹಾಗೂ ಪರಿಣಾಮಕಾರಿಯಾಗಿರುವ ಒಂದು ವಿಧವನ್ನು ಕಂಡುಕೊಂಡಿದ್ದಾರೆ. ಅದೇನೆಂದರೆ ಮಕ್ಕಳನ್ನು ಹೀಗೆ ಕೇಳುವುದು: “ಯೆಹೋವನ ಸಾಕ್ಷಿ ಆಗಿರುವುದರ ಬಗ್ಗೆ ನಿನಗೆ ಹೇಗನಿಸುತ್ತದೆ? ಯಾವ ಪ್ರಯೋಜನಗಳು ನಿನ್ನ ಅನುಭವಕ್ಕೆ ಬಂದಿವೆ? ಯಾವ ಅನಾನುಕೂಲತೆಗಳನ್ನು ಎದುರಿಸಬೇಕಾಗುತ್ತದೆ? ಅನಾನುಕೂಲತೆಗಳಿಗಿಂತ ಈಗಲೂ ಮುಂದಕ್ಕೂ ನಮಗಿರುವ ಪ್ರಯೋಜನಗಳೇ ಹೆಚ್ಚು ಪ್ರಾಮುಖ್ಯವೆಂದು ನಿನಗನಿಸುತ್ತದಾ? ಏಕೆ?” ಈ ಪ್ರಶ್ನೆಗಳನ್ನು ನಿಮ್ಮ ಸ್ವಂತ ಮಾತಲ್ಲಿ ಕೇಳಿ. ಪೊಲೀಸರು ವಿಚಾರಣೆ ಮಾಡುವ ಧಾಟಿಯಲ್ಲಲ್ಲ ಬದಲಾಗಿ ದಯೆಯಿಂದ, ಕಾಳಜಿಯಿಂದ ಕೇಳಿ. ಸಂಭಾಷಣೆಯ ಸಮಯದಲ್ಲಿ ನೀವು ಮಾರ್ಕ 10:29, 30ನ್ನು ಚರ್ಚಿಸಬಹುದು. ಕೆಲವು ಯುವಜನರು ತಮ್ಮ ಅಭಿಪ್ರಾಯಗಳನ್ನು ಬರೆಯಲು ಇಷ್ಟಪಡುತ್ತಾರೆ. ಹಾಗಿದ್ದರೆ, ಎರಡು ಕಾಲಮ್‌ ಮಾಡಿ ಒಂದರಲ್ಲಿ ಪ್ರಯೋಜನಗಳನ್ನು ಇನ್ನೊಂದರಲ್ಲಿ ಅನಾನುಕೂಲತೆಗಳನ್ನು ಬರೆಯಲಿ. ತಮ್ಮ ಅಭಿಪ್ರಾಯಗಳನ್ನು ಬರವಣಿಗೆಯಲ್ಲಿ ನೋಡುವಾಗ ಸಮಸ್ಯೆಗಳನ್ನು ಗುರುತಿಸಲು ಮತ್ತು ಪರಿಹಾರದ ಕುರಿತು ಯೋಚಿಸಲು ಅವರಿಗೆ ಸಾಧ್ಯವಾಗುತ್ತದೆ. ಆಸಕ್ತ ಜನರೊಂದಿಗೆ ಬೈಬಲ್‌ ಬೋಧಿಸುತ್ತದೆ ಮತ್ತು “ದೇವರ ಪ್ರೀತಿ” ಪುಸ್ತಕ ಅಧ್ಯಯನ ಮಾಡುವ ನಾವು ನಮ್ಮ ಸ್ವಂತ ಮಕ್ಕಳೊಟ್ಟಿಗೆ ಅವುಗಳ ಅಧ್ಯಯನ ಮಾಡುವುದು ಎಷ್ಟು ಹೆಚ್ಚು ಪ್ರಾಮುಖ್ಯವಲ್ಲವೇ? ಅದನ್ನು ಮಾಡುತ್ತಿದ್ದೀರಾ?

17 ಯಾರನ್ನು ಆರಾಧಿಸಬೇಕೆಂದು ನಿಮ್ಮ ಮಕ್ಕಳು ಒಂದಲ್ಲ ಒಂದು ದಿನ ನಿರ್ಣಯ ಮಾಡಬೇಕಾಗಿ ಬರುತ್ತದೆ. ನೀವು ಸತ್ಯದಲ್ಲಿರುವುದರಿಂದ ನಿಮ್ಮ ಮಕ್ಕಳಿಗೆ ತನ್ನಿಂದತಾನೇ ಸತ್ಯ ದಾಟುವುದೆಂದು ನೆನಸಬೇಡಿ. ಸತ್ಯವನ್ನು ಸ್ವತಃ ಅವರೇ ತಮ್ಮದಾಗಿಸಿಕೊಳ್ಳಬೇಕು. (ಜ್ಞಾನೋ. 3:1, 2) ನಿಮ್ಮ ಮಗ ಇಲ್ಲವೇ ಮಗಳಿಗೆ ಈ ವಿಷಯದಲ್ಲಿ ಸಮಸ್ಯೆಯಿದ್ದರೆ ಅವರು ಸತ್ಯದ ಮೂಲಭೂತ ವಿಷಯಗಳನ್ನು ಪರೀಕ್ಷಿಸುವಂತೆ ಹೇಳಿ. ಅವನಿಗೆ/ಳಿಗೆ ಈ ಪ್ರಶ್ನೆಗಳ ಕುರಿತು ಯೋಚಿಸುವಂತೆ ಸಹಾಯಮಾಡಿ: “ನಿಜವಾಗಿ ದೇವರಿದ್ದಾನೆಂದು ನನಗೆ ಹೇಗೆ ಗೊತ್ತು? ಯೆಹೋವ ದೇವರು ನನ್ನನ್ನು ಅಮೂಲ್ಯವಾಗಿ ಎಣಿಸುತ್ತಾನೆಂದು ನನಗೆ ಮನವರಿಕೆ ಮಾಡಿಸಿರುವ ಕಾರಣಗಳು ಯಾವುವು? ಯೆಹೋವನ ಮಟ್ಟಗಳು ನನ್ನ ಒಳಿತಿಗಾಗಿವೆಯೆಂದು ಏಕೆ ನಂಬುತ್ತೇನೆ?” ನಿಮ್ಮ ಮಗ/ಮಗಳು ಯೆಹೋವನ ಮಾರ್ಗವೇ ಅತ್ಯುತ್ತಮವಾದ ಜೀವನ ಮಾರ್ಗವೆಂದು ಪರಿಶೋಧಿಸಿ ತಿಳಿದುಕೊಳ್ಳುವಂತೆ ಅವರಿಗೆ ತಾಳ್ಮೆಯಿಂದ ದಾರಿ ತೋರಿಸಿ. ಹೀಗೆ ನೀವು ಒಳ್ಳೇ ಕುರುಬರಾಗಿದ್ದೀರೆಂದು ತೋರಿಸಿ. *ರೋಮ. 12:2.

18. ಹೆತ್ತವರು ಅತ್ಯುಚ್ಚ ಕುರುಬನಾದ ಯೆಹೋವನನ್ನು ಹೇಗೆ ಅನುಕರಿಸುತ್ತಾರೆ?

18 ಸತ್ಕ್ರೈಸ್ತರಾದ ನಾವೆಲ್ಲರೂ ಅತ್ಯುಚ್ಚನಾದ ಕುರುಬನನ್ನು ಅನುಕರಿಸಲು ಬಯಸುತ್ತೇವೆ. (ಎಫೆ. 5:1; 1 ಪೇತ್ರ 2:25) ವಿಶೇಷವಾಗಿ ಹೆತ್ತವರು ತಮ್ಮ ಮಂದೆ ಅಂದರೆ ತಮ್ಮ ಕಣ್ಮಣಿಗಳಾದ ಮಕ್ಕಳ ಸ್ಥಿತಿಯನ್ನು ಚೆನ್ನಾಗಿ ತಿಳಿದುಕೊಂಡಿರಬೇಕು. ಯೆಹೋವನು ಅವರಿಗಾಗಿ ಇಟ್ಟಿರುವ ಆಶೀರ್ವಾದಗಳೆಡೆಗೆ ನಡೆಸಲು ಹೆತ್ತವರು ತಮ್ಮಿಂದಾದುದೆಲ್ಲವನ್ನು ಮಾಡಬೇಕು. ಹಾಗಾಗಿ, ನಿಮ್ಮ ಮಕ್ಕಳನ್ನು ಸತ್ಯದ ಮಾರ್ಗದಲ್ಲಿ ಬೆಳೆಸುತ್ತಾ ಇರುವ ಮೂಲಕ ಅವರನ್ನು ಎಲ್ಲ ವಿಧದಲ್ಲೂ ಪರಿಪಾಲಿಸಿ!

^ ಪ್ಯಾರ. 9 ಹೆಚ್ಚಿನ ಸಲಹೆಗಳಿಗಾಗಿ ಅಕ್ಟೋಬರ್‌ 1, 2008ರ ಕಾವಲಿನಬುರುಜು ಪುಟ 18-20 ನೋಡಿ.

^ ಪ್ಯಾರ. 12 ಹೆಚ್ಚಿನ ಮಾಹಿತಿಗಾಗಿ ಅಕ್ಟೋಬರ್‌ 15, 2009ರ ಕಾವಲಿನಬುರುಜು ಪುಟ 29-31ರಲ್ಲಿರುವ “ಕುಟುಂಬ ಆರಾಧನೆ—ಪಾರಾಗುವಿಕೆಗೆ ಪ್ರಾಮುಖ್ಯ!” ಎಂಬ ಲೇಖನ ನೋಡಿ.

^ ಪ್ಯಾರ. 17 ಈ ವಿಷಯವನ್ನು ಜುಲೈ 1, 2012ರ ಕಾವಲಿನಬುರುಜು ಪುಟ 22-25ರಲ್ಲಿ ಇನ್ನಷ್ಟು ಚರ್ಚಿಸಲಾಗಿದೆ.