ಸ್ವತ್ಯಾಗ ಮನೋಭಾವವನ್ನು ಬಿಟ್ಟುಬಿಡಬೇಡಿ
‘ಯಾವನಿಗಾದರೂ ನನ್ನ ಹಿಂದೆ ಬರುವುದಕ್ಕೆ ಮನಸ್ಸಿದ್ದರೆ, ಅವನು ತನ್ನನ್ನು ನಿರಾಕರಿಸಲಿ.’—ಮತ್ತಾ. 16:24.
1. ಸ್ವತ್ಯಾಗ ಮಾಡುವುದರಲ್ಲಿ ಯೇಸು ಹೇಗೆ ಪರಿಪೂರ್ಣ ಮಾದರಿಯನ್ನಿಟ್ಟನು?
ಯೇಸು ಭೂಮಿಯಲ್ಲಿದ್ದಾಗ ಸ್ವತ್ಯಾಗ ಮನೋಭಾವ ತೋರಿಸುವುದರಲ್ಲಿ ಪರಿಪೂರ್ಣ ಮಾದರಿಯನ್ನಿಟ್ಟನು. ದೇವರ ಚಿತ್ತವನ್ನು ಮಾಡಲಿಕ್ಕಾಗಿ ಸ್ವಂತ ಸುಖ ಆಶೆಆಕಾಂಕ್ಷೆಯನ್ನು ಬಿಟ್ಟುಕೊಟ್ಟನು. (ಯೋಹಾ. 5:30) ಯಾತನಾ ಕಂಬದ ಮೇಲೆ ತನ್ನ ಜೀವವನ್ನು ತೆತ್ತ ಸಮಯದ ವರೆಗೂ ನಂಬಿಗಸ್ತನಾಗಿ ಉಳಿಯುವ ಮೂಲಕ ತನ್ನ ಸ್ವತ್ಯಾಗಕ್ಕೆ ಎಲ್ಲೆಯಿಲ್ಲವೆಂದು ತೋರಿಸಿಕೊಟ್ಟನು.—ಫಿಲಿ. 2:8.
2. (ಎ) ಸ್ವತ್ಯಾಗ ಮನೋಭಾವವನ್ನು ನಾವು ಹೇಗೆ ತೋರಿಸಬಲ್ಲೆವು? (ಬಿ) ನಮ್ಮಲ್ಲಿ ಏಕೆ ಆ ಮನೋಭಾವವಿರಬೇಕು?
2 ಯೇಸುವಿನ ಹಿಂಬಾಲಕರಾದ ನಮ್ಮಲ್ಲಿ ಕೂಡ ಸ್ವತ್ಯಾಗ ಮನೋಭಾವ ಇರಬೇಕು. ಸ್ವತ್ಯಾಗ ಅಂದರೇನು? ಸರಳವಾಗಿ ಹೇಳುವುದಾದರೆ, ಪರರ ಪ್ರಯೋಜನಕ್ಕಾಗಿ ಸ್ವಂತ ಸುಖವನ್ನು ಬಿಟ್ಟುಕೊಡುವ ಮನಸ್ಸು ಎಂದಾಗಿದೆ. ಅಂದರೆ ಇದು ಸ್ವಾರ್ಥಕ್ಕೆ ವಿರುದ್ಧವಾದ ಗುಣ. (ಮತ್ತಾಯ 16:24 ಓದಿ.) ಈ ನಿಸ್ವಾರ್ಥ ಮನೋಭಾವವು ನಮ್ಮ ಭಾವನೆ, ಇಷ್ಟಾನಿಷ್ಟಗಳಿಗಿಂತ ಬೇರೆಯವರ ಭಾವನೆ, ಇಷ್ಟಾನಿಷ್ಟಗಳಿಗೆ ಹೆಚ್ಚು ಬೆಲೆಕೊಡಲು ಸಹಾಯ ಮಾಡುತ್ತದೆ. (ಫಿಲಿ. 2:3, 4) ನಿಜವೇನೆಂದರೆ ಯೇಸು ಕಲಿಸಿದಂತೆ ನಮ್ಮ ಆರಾಧನೆಯಲ್ಲಿ ನಿಸ್ವಾರ್ಥ ಮನೋಭಾವ ಪ್ರಮುಖವಾಗಿದೆ. ಅದು ಹೇಗೆ? ಸ್ವತ್ಯಾಗ ಮನೋಭಾವ ತೋರಿಸಲು ಪ್ರೇರಕಶಕ್ತಿಯಾಗಿರುವುದು ಪ್ರೀತಿಯೇ. ಈ ಪ್ರೀತಿಯು ಯೇಸುವಿನ ನಿಜ ಹಿಂಬಾಲಕರ ಗುರುತುಚಿಹ್ನೆ. (ಯೋಹಾ. 13:34, 35) ಸ್ವತ್ಯಾಗ ಮನೋಭಾವವಿರುವ ಲೋಕವ್ಯಾಪಕ ಸಹೋದರ ಬಳಗದಲ್ಲಿ ಒಬ್ಬರಾಗಿರುವುದರಿಂದ ನಾವು ಪಡೆಯುವ ಆಶೀರ್ವಾದಗಳ ಕುರಿತು ಯೋಚಿಸಿ.
3. ನಮ್ಮ ಸ್ವತ್ಯಾಗ ಮನೋಭಾವವನ್ನು ಯಾವುದು ಕುಗ್ಗಿಸಬಹುದು?
3 ಆದರೆ ನಮ್ಮಲ್ಲಿರುವ ಸ್ವತ್ಯಾಗ ಮನೋಭಾವವನ್ನು ನಮಗೇ ಗೊತ್ತಾಗದ ಹಾಗೆ ಕುಗ್ಗಿಸುವ ಶತ್ರುವೊಂದಿದೆ. ಅದು ನಮ್ಮ ಸ್ವಾರ್ಥ ಪ್ರವೃತ್ತಿಯೇ. ಆದಾಮಹವ್ವರು ಹೇಗೆ ಸ್ವಾರ್ಥ ಮನೋಭಾವ ತೋರಿಸಿದರೆಂದು ನೆನಪಿಸಿಕೊಳ್ಳಿ. ಹವ್ವಳು ದೇವರಂತೆ ಆಗಲು ಬಯಸಿದ್ದು ಸ್ವಾರ್ಥಪರ ಆಸೆಯಿಂದಲ್ಲವೇ? ಆದಾಮನು ಯೆಹೋವನಿಗಿಂತ ಹೆಚ್ಚು ತನ್ನ ಹೆಂಡತಿಯನ್ನು ಮೆಚ್ಚಿಸಲು ಬಯಸಿದ್ದು ಅದೇ ಸ್ವಾರ್ಥದಾಶೆಯಿಂದ. (ಆದಿ. 3:5, 6) ಆದಾಮಹವ್ವರನ್ನು ಪಿಶಾಚನು ಸತ್ಯಾರಾಧನೆಯಿಂದ ದಾರಿತಪ್ಪಿಸಿದ ಮೇಲೆ ಇತರರನ್ನೂ ಸ್ವಾರ್ಥಿಗಳಾಗುವಂತೆ ಪ್ರಲೋಭಿಸುತ್ತಾ ಹೋದನು. ಯೇಸುವನ್ನು ಪ್ರಲೋಭಿಸುವಾಗಲೂ ಅವನು ಆ ಗಾಳವನ್ನು ಬಳಸಿದನು. (ಮತ್ತಾ. 4:1-9) ಇಂದು ಅನೇಕ ವಿಧಗಳಲ್ಲಿ ಸ್ವಾರ್ಥವನ್ನು ತೋರಿಸುವಂತೆ ಬಹುತೇಕ ಜನರನ್ನು ಪ್ರೇರಿಸುವುದರಲ್ಲಿ ಸೈತಾನನು ಯಶಸ್ವಿಯಾಗಿದ್ದಾನೆ. ಸ್ವಾರ್ಥಪರತೆಯು ಎಲ್ಲೆಲ್ಲೂ ಹರಡಿರುವುದರಿಂದ ನಾವು ಜಾಗ್ರತೆ ವಹಿಸದಿದ್ದರೆ ಅದು ನಮಗೂ ಸೋಂಕಬಲ್ಲದು.—ಎಫೆ. 2:2.
4. (ಎ) ಸ್ವಾರ್ಥ ಪ್ರವೃತ್ತಿಯನ್ನು ನಾವೀಗ ತೆಗೆದುಹಾಕಲು ಸಾಧ್ಯವೇ? ವಿವರಿಸಿ. (ಬಿ) ನಾವು ಯಾವ ಪ್ರಶ್ನೆಗಳಿಗೆ ಉತ್ತರ ತಿಳಿಯಲಿದ್ದೇವೆ?
4 ಸ್ವಾರ್ಥವನ್ನು ಕಬ್ಬಿಣಕ್ಕೆ ಹಿಡಿಯುವ ತುಕ್ಕಿಗೆ ಹೋಲಿಸಬಹುದು. ವಾತಾವರಣದಲ್ಲಿರುವ ಘಟಕಾಂಶಗಳು ಕಬ್ಬಿಣದ ವಸ್ತುವಿಗೆ ಸೋಕಿದಾಗ ತುಕ್ಕು ಹಿಡಿಯುತ್ತದೆ. ಆರಂಭ ಹಂತದಲ್ಲಿ ಅದನ್ನು ತೆಗೆಯದಿದ್ದರೆ ವಸ್ತುವಿನ ಸ್ವರೂಪ ಬದಲಾಗಬಹುದು ಅಥವಾ ಪೂರ್ತಿ ಹಾಳಾಗಬಹುದು. ಅದೇ ರೀತಿ ನಮ್ಮಲ್ಲಿರುವ ಸ್ವಾರ್ಥ ಪ್ರವೃತ್ತಿಯಿಂದಾಗುವ ಹಾನಿ ಕೂಡ. ನಾವು ಅಪರಿಪೂರ್ಣತೆ ಮತ್ತು ಸ್ವಾರ್ಥ ಪ್ರವೃತ್ತಿಗಳನ್ನು ಸದ್ಯಕ್ಕೆ ತೆಗೆದುಹಾಕಲು ಸಾಧ್ಯವಿಲ್ಲವಾದರೂ ಅದರಿಂದುಂಟಾಗುವ ಅಪಾಯಗಳ ಕುರಿತು ಎಚ್ಚರ ವಹಿಸಬೇಕು ಮತ್ತು ಆ ಪ್ರವೃತ್ತಿಯ ವಿರುದ್ಧ ಹೋರಾಡುತ್ತಾ ಇರಬೇಕು. ಇಲ್ಲದಿದ್ದಲ್ಲಿ ಸ್ವತ್ಯಾಗ ಮನೋಭಾವ ನಮ್ಮಿಂದ ಪೂರ್ಣವಾಗಿ ಹೋಗಿಬಿಡಬಹುದು. (1 ಕೊರಿಂ. 9:26, 27) ಹಾಗಾದರೆ ಸ್ವಾರ್ಥ ಗುಣ ನಮಗೆ ಸೋಂಕಿದೆಯೇ ಎಂದು ಗುರುತಿಸುವುದು ಹೇಗೆ? ಸ್ವತ್ಯಾಗ ಮನೋಭಾವವನ್ನು ಇನ್ನೂ ಹೆಚ್ಚಾಗಿ ಬೆಳೆಸಿಕೊಳ್ಳುವುದು ಹೇಗೆ?
ಬೈಬಲನ್ನು ಬಳಸಿ ನಿಮ್ಮನ್ನು ಪರೀಕ್ಷಿಸಿಕೊಳ್ಳಿ
5. (ಎ) ಬೈಬಲ್ ಹೇಗೆ ಕನ್ನಡಿಯಂತಿದೆ? (ಲೇಖನದ ಆರಂಭದಲ್ಲಿರುವ ಚಿತ್ರ ನೋಡಿ.) (ಬಿ) ಸ್ವಾರ್ಥ ಗುಣ ನಮ್ಮಲ್ಲಿದೆಯೇ ಎಂದು ಪರೀಕ್ಷಿಸುವಾಗ ಏನನ್ನು ಮಾಡಬಾರದು?
5 ನಾವು ಚೆನ್ನಾಗಿ ಕಾಣುತ್ತಿದ್ದೇವಾ ಎಂದು ನೋಡಲು ಹೇಗೆ ಕನ್ನಡಿ ಮುಂದೆ ನಿಲ್ಲುತ್ತೇವೋ ಹಾಗೆಯೇ ನಾವು ಆಂತರ್ಯದಲ್ಲಿ ಎಂಥವರಾಗಿದ್ದೇವೆಂದು ಪರೀಕ್ಷಿಸಲು ಬೈಬಲನ್ನು ಕನ್ನಡಿಯಾಗಿ ಬಳಸಸಾಧ್ಯ. ಬಳಿಕ ಏನೇ ದೋಷಗಳಿದ್ದರೂ ಸರಿಪಡಿಸಿಕೊಳ್ಳಲು ಆಗುತ್ತದೆ. (ಯಾಕೋಬ 1:22-25 ಓದಿ.) ಆದರೆ ಕನ್ನಡಿಯನ್ನು ಸರಿಯಾಗಿ ಬಳಸಿದರೆ ಮಾತ್ರ ನಮ್ಮ ತೋರಿಕೆಯನ್ನು ಸರಿಪಡಿಸಿಕೊಳ್ಳಬಲ್ಲೆವು. ನಾವು ಕನ್ನಡಿ ಮುಂದೆ ನಿಂತು ಸುಮ್ಮನೆ ಕಣ್ಣಾಡಿಸಿದರೆ ಮುಖದಲ್ಲಿರುವ ಕಲೆ ಗಮನಕ್ಕೆ ಬಾರದೇ ಹೋಗಬಹುದು. ಚಿಕ್ಕದಿದ್ದರೂ ಎದ್ದುಕಾಣುವ ಆ ಕಲೆ ಹಾಗೇ ಉಳಿದು ಬಿಡಬಹುದು. ಅಥವಾ ಒಂದು ಬದಿಯಿಂದ ಕನ್ನಡಿ ನೋಡಿದರೆ ನಮಗೆ ಬೇರೆಯವರು ಮಾತ್ರ ಕಾಣಬಹುದು. ಅದೇ ರೀತಿ ನಮ್ಮಲ್ಲಿ ಸ್ವಾರ್ಥದಂಥ ದೋಷಗಳಿವೆಯೇ ಎಂದು ಗುರುತಿಸಬೇಕಾದರೆ ಬೈಬಲನ್ನು ಸುಮ್ಮನೆ ಓದಿದರಷ್ಟೇ ಸಾಲದು ಅಥವಾ ಬೇರೆಯವರ ದೋಷಗಳನ್ನು ನೋಡಲಿಕ್ಕೆ ಮಾತ್ರ ಅದನ್ನು ಬಳಸಬಾರದು.
6. ಪರಿಪೂರ್ಣ ನಿಯಮದಲ್ಲಿ ನಾವು ‘ಪಟ್ಟುಹಿಡಿಯುವುದು’ ಹೇಗೆ?
6 ಉದಾಹರಣೆಗೆ, ದೇವರ ವಾಕ್ಯವನ್ನು ನಿಯತವಾಗಿ, ಪ್ರತಿ ದಿನ ಓದುತ್ತಿದ್ದರೂ ನಮ್ಮಲ್ಲಿ ಬೆಳೆಯುತ್ತಿರುವ ಸ್ವಾರ್ಥವೆಂಬ ದೋಷವನ್ನು ನಾವು ಗಮನಿಸದೇ ಹೋಗುವ ಸಂಭವವಿದೆ. ಅದು ಹೇಗೆ ಸಾಧ್ಯ? ಕನ್ನಡಿಯ ಬಗ್ಗೆ ಯಾಕೋಬನು ಕೊಟ್ಟ ಉದಾಹರಣೆಯನ್ನು ಗಮನಿಸಿ. ಆ ಮನುಷ್ಯನು ಕನ್ನಡಿಯಲ್ಲಿ ತನ್ನನ್ನು ಜಾಗ್ರತೆಯಿಂದ ನೋಡಲಿಲ್ಲವೆಂದು ಹೇಳಲಾಗಿಲ್ಲ. ‘ತನ್ನನ್ನು ನೋಡಿಕೊಂಡನು’ ಎಂದು ಯಾಕೋಬನು ಬರೆದನು. ಇಲ್ಲಿ, ಯಾಕೋಬನು ಉಪಯೋಗಿಸಿದ ಗ್ರೀಕ್ ಪದವು ಕೂಲಂಕಷವಾಗಿ ಅಥವಾ ಜಾಗ್ರತೆಯಿಂದ ಪರಿಶೀಲಿಸುವುದನ್ನು ಸೂಚಿಸುತ್ತದೆ. ಹಾಗಾದರೆ ಸಮಸ್ಯೆಯಾದದ್ದು ಎಲ್ಲಿ? ಅವನು “ಅಲ್ಲಿಂದ ಹೋಗಿ ತಾನು ಹೇಗಿದ್ದೇನೆ ಎಂಬುದನ್ನು ಆ ಕೂಡಲೆ ಮರೆತುಬಿಡುತ್ತಾನೆ” ಎಂದನು ಯಾಕೋಬ. ಹೌದು, ಆ ಮನುಷ್ಯನು ಕನ್ನಡಿ ನೋಡಿದರೂ ದೋಷವನ್ನು ಸರಿಪಡಿಸಿಕೊಳ್ಳದೆ ಅಲ್ಲಿಂದ ಹೋಗಿಬಿಟ್ಟನು. ಆದರೆ ಇನ್ನೊಬ್ಬನು “ಪರಿಪೂರ್ಣ ನಿಯಮದೊಳಕ್ಕೆ ಇಣಿಕಿ” ನೋಡುತ್ತಾನೆ ಮಾತ್ರವಲ್ಲ ‘ಅದರಲ್ಲಿ ಪಟ್ಟುಹಿಡಿಯುತ್ತಾನೆ.’ ಪರಿಪೂರ್ಣ ನಿಯಮವಾದ ದೇವರ ವಾಕ್ಯವನ್ನು ಓದಿ ಅಲ್ಲಿಗೆ ಬಿಟ್ಟುಬಿಡದೆ ಅದರ ಪ್ರಕಾರ ಸದಾ ನಡೆಯುತ್ತಾನೆ. ಈ ಅಂಶವನ್ನು ಯೇಸು ಕೂಡ ಒತ್ತಿಹೇಳಿದನು. ಅವನು ಅಂದದ್ದು: “ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡಿರುವುದಾದರೆ ನಿಜವಾಗಿಯೂ ನನ್ನ ಶಿಷ್ಯರಾಗಿರುವಿರಿ.”—ಯೋಹಾ. 8:31.
7. ಸ್ವಾರ್ಥ ಗುಣದ ಸುಳಿವೇನಾದರೂ ನಮ್ಮಲ್ಲಿದೆಯೇ ಎಂದು ಪರೀಕ್ಷಿಸಲು ಬೈಬಲನ್ನು ನಾವು ಹೇಗೆ ಬಳಸಸಾಧ್ಯವಿದೆ?
7 ಆದುದರಿಂದ ಸ್ವಾರ್ಥದ ಸುಳಿವಿರುವಲ್ಲಿ ಅದನ್ನು ಕಿತ್ತೊಗೆಯಲು ನೀವು ಮೊದಲು ದೇವರ ವಾಕ್ಯವನ್ನು ಜಾಗ್ರತೆಯಿಂದ ಓದಬೇಕು. ಆಗ ಯಾವ ಕ್ಷೇತ್ರಗಳಲ್ಲಿ ತಪ್ಪಿಬೀಳುತ್ತಿದ್ದೀರಿ ಎಂಬುದು ನಿಮ್ಮ ಗಮನಕ್ಕೆ ಬರಬಹುದು. ಆದರೆ ನೀವು ಅಷ್ಟಕ್ಕೆ ನಿಲ್ಲಿಸೋದಲ್ಲ. ಓದಿದ ವೃತ್ತಾಂತದ ಬಗ್ಗೆ ಸಂಶೋಧನೆ ಮಾಡುವ ಮೂಲಕ ಆಳವಾಗಿ ಪರಿಶೀಲಿಸಿ. ಆ ವೃತ್ತಾಂತ ನಿಮ್ಮ ಮನಸ್ಸಿನಲ್ಲಿ ಸ್ಪಷ್ಟವಾದ ಮೇಲೆ ಸ್ವತಃ ನಿಮ್ಮನ್ನು ಆ ಸನ್ನಿವೇಶದಲ್ಲಿರಿಸಿಕೊಳ್ಳಿ. ‘ನಾನು ಆ ಸನ್ನಿವೇಶದಲ್ಲಿದ್ದಿದ್ದರೆ ಏನು ಮಾಡುತ್ತಿದ್ದೆ? ಸರಿ ಯಾವುದೊ ಅದನ್ನೇ ಮಾಡುತ್ತಿದ್ದೆನಾ?’ ಎಂದು ಕೇಳಿಕೊಳ್ಳಿ. ಹೀಗೆ ಓದಿದ್ದನ್ನು ಧ್ಯಾನಿಸಿದ ಬಳಿಕ ಅತಿ ಮುಖ್ಯವಾದದ್ದೊಂದನ್ನು ಮಾಡಬೇಕು. ಕಲಿತದ್ದನ್ನು ಅನ್ವಯಿಸಲು ಸರ್ವಪ್ರಯತ್ನ ಮಾಡಬೇಕು. (ಮತ್ತಾ. 7:24, 25) ನಾವೀಗ ರಾಜ ಸೌಲ ಮತ್ತು ಅಪೊಸ್ತಲ ಪೇತ್ರನ ವೃತ್ತಾಂತಗಳಿಂದ ಸ್ವತ್ಯಾಗ ಮನೋಭಾವವನ್ನು ಬಿಟ್ಟುಬಿಡದಿರುವ ಪಾಠವನ್ನು ಹೇಗೆ ಕಲಿಯುವುದೆಂದು ನೋಡೋಣ.
ರಾಜ ಸೌಲನ ಎಚ್ಚರಿಕೆಯ ಉದಾಹರಣೆಯಿಂದ ಕಲಿಯಿರಿ
8. (ಎ) ಸೌಲನು ಅರಸನಾದ ಆರಂಭದಲ್ಲಿ ಅವನಲ್ಲಿ ಎಂಥ ಗುಣವಿತ್ತು? (ಬಿ) ಅವನು ಆ ಗುಣವನ್ನು ತೋರಿಸಿದ್ದು ಹೇಗೆ?
8 ನಮ್ಮಲ್ಲಿರುವ ಸ್ವತ್ಯಾಗ ಮನೋಭಾವವನ್ನು ಸ್ವಾರ್ಥವು ಹೇಗೆ ಕೊರೆದು ಹಾಕಬಲ್ಲದು ಎಂಬುದಕ್ಕೆ ಇಸ್ರಾಯೇಲಿನ ರಾಜ ಸೌಲನು ಒಂದು ಎಚ್ಚರಿಕೆಯ ಉದಾಹರಣೆ. ಅವನು ಅರಸನಾದ ಆರಂಭದಲ್ಲಿ ತುಂಬ ದೀನನಾಗಿದ್ದ. ತನ್ನ ಇತಿಮಿತಿಗಳನ್ನು ಅರಿತಿದ್ದ. (1 ಸಮು. 9:21) ಅವನು ಅರಸನಾದದ್ದನ್ನು ಕೆಲವು ಇಸ್ರಾಯೇಲ್ಯರು ಹೀಯಾಳಿಸಿದಾಗ ಪ್ರತೀಕಾರ ಮಾಡಲಿಲ್ಲ. ದೇವರೇ ತನ್ನನ್ನು ಆ ಅಧಿಕಾರ ಸ್ಥಾನಕ್ಕೆ ನೇಮಿಸಿದ್ದಾನೆಂದು ಸಮರ್ಥಿಸುತ್ತಾ ಅವರನ್ನು ದಂಡಿಸುವ ಹಕ್ಕಿದ್ದರೂ ದಂಡಿಸಲಿಲ್ಲ. (1 ಸಮು. 10:27) ಇನ್ನೊಂದು ಸಂದರ್ಭದಲ್ಲಿ ಸೌಲನು ದೇವರಾತ್ಮದ ನಿರ್ದೇಶನವನ್ನು ಅನುಸರಿಸಿ ಇಸ್ರಾಯೇಲ್ಯರನ್ನು ಅಮ್ಮೋನಿಯರ ವಿರುದ್ಧ ಯುದ್ಧಕ್ಕೆ ನಡೆಸಿ ಜಯಸಾಧಿಸಿದನು. ಬಳಿಕ ದೀನತೆಯಿಂದ ಆ ಕೀರ್ತಿಯನ್ನು ಯೆಹೋವನಿಗೆ ಸಲ್ಲಿಸಿದನು.—1 ಸಮು. 11:6, 11-13.
9. ಸೌಲನಲ್ಲಿ ಸ್ವಾರ್ಥ ಮನೋಭಾವ ಬೆಳೆದದ್ದು ಹೇಗೆ?
9 ಅದಾದ ನಂತರ ಸೌಲನಲ್ಲಿ ಸ್ವಾರ್ಥ ಯೋಚನೆ ಮತ್ತು ಹೆಮ್ಮೆ ಮೆಲ್ಲಮೆಲ್ಲನೆ ಬೆಳೆಯತೊಡಗಿತು. ಹೇಗೆ ತುಕ್ಕು ಮೆಲ್ಲನೆ ಹರಡುತ್ತದೊ ಹಾಗೆ. ಅಮಾಲೇಕ್ಯರನ್ನು ಯುದ್ಧದಲ್ಲಿ ಸೋಲಿಸಿದಾಗ ಅವನು ಏನು ಮಾಡಿದನೆಂದು ಗಮನಿಸಿ. ಕೊಳ್ಳೆಹೊಡೆದದ್ದನ್ನು ಸಂಪೂರ್ಣವಾಗಿ ನಾಶಮಾಡಬೇಕೆಂದು ಯೆಹೋವನು ಆಜ್ಞೆ ಕೊಟ್ಟಿದ್ದನು. ಆದರೆ ಯೆಹೋವನಿಗೆ ವಿಧೇಯನಾಗುವುದಕ್ಕಿಂತ ಸೌಲನಿಗೆ ತನ್ನ ಸ್ವಂತ ಆಶೆಗಳೇ ಹೆಚ್ಚಾದವು. ಅತಿಯಾಶೆಯಿಂದ ಅವನು ಕೊಳ್ಳೆಯನ್ನು ಬಾಚಿಕೊಂಡನು. ಅಷ್ಟೇ ಅಲ್ಲದೆ ಅಹಂಕಾರದಿಂದ ತನ್ನ ಸ್ಮರಣಾರ್ಥವಾಗಿ ಒಂದು ಸ್ತಂಭವನ್ನು ಕಟ್ಟಿಸಿದನು. (1 ಸಮು. 15:3, 9, 12) ಪ್ರವಾದಿ ಸಮುವೇಲನು ಸೌಲನ ಬಳಿ ಬಂದು ಅವನ ಅವಿಧೇಯತೆಯನ್ನು ಯೆಹೋವನು ಮೆಚ್ಚಲಿಲ್ಲವೆಂದು ಹೇಳಿದಾಗ ಅವನ ಪ್ರತಿಕ್ರಿಯೆ ಹೇಗಿತ್ತು? ದೇವರ ಆಜ್ಞೆಯಲ್ಲಿ ತಾನು ಯಾವುದಕ್ಕೆ ವಿಧೇಯನಾದನೊ ಅದಕ್ಕೆ ಮಾತ್ರ ಒತ್ತುಕೊಟ್ಟು ತಾನು ಮಾಡಿದ್ದನ್ನು ಸಮರ್ಥಿಸಿದನು. ತನ್ನ ತಪ್ಪನ್ನು ಬೇರೆಯವರ ಮೇಲೆ ಹೊರಿಸಿದನು. (1 ಸಮು. 15:16-21) ಮಾತ್ರವಲ್ಲ ಅವನಲ್ಲಿ ಗರ್ವವಿದ್ದದ್ದರಿಂದ ದೇವರನ್ನು ಮೆಚ್ಚಿಸುವುದಕ್ಕಿಂತ ಜನರ ಮುಂದೆ ತನ್ನ ಮಾನವನ್ನು ಉಳಿಸಿಕೊಳ್ಳುವುದೇ ಅವನಿಗೆ ಮುಖ್ಯವಾಗಿತ್ತು. (1 ಸಮು. 15:30) ನಾವು ಈ ವೃತ್ತಾಂತವನ್ನು, ಸ್ವಾರ್ಥ ಗುಣ ನಮ್ಮಲ್ಲಿ ಚಿಗುರುತ್ತಿದೆಯೇ ಎಂದು ಪರೀಕ್ಷಿಸಲು ಕನ್ನಡಿಯಂತೆ ಹೇಗೆ ಉಪಯೋಗಿಸಬಹುದು?
10, 11. (ಎ) ಸ್ವತ್ಯಾಗ ಮನೋಭಾವವನ್ನು ಬಿಟ್ಟುಬಿಡದಿರುವ ಬಗ್ಗೆ ಸೌಲನ ಉದಾಹರಣೆ ಏನು ಕಲಿಸುತ್ತದೆ? (ಬಿ) ಸೌಲನ ಕೆಟ್ಟ ಮಾದರಿಯನ್ನು ಅನುಸರಿಸದಿರಲು ನಾವೇನು ಮಾಡಬೇಕು?
10 ಮೊದಲನೇದಾಗಿ ಸೌಲನ ಉದಾಹರಣೆಯಿಂದ ಏನು ಕಲಿಯುತ್ತೇವೆಂದರೆ ನಮ್ಮಲ್ಲಿ ಅತಿಯಾದ ಆತ್ಮವಿಶ್ವಾಸ ಇರಬಾರದು. ಈ ಮುಂಚೆ ಸ್ವತ್ಯಾಗ ಮನೋಭಾವ ತೋರಿಸಿದ್ದೇವೆ ಎಂದ ಮಾತ್ರಕ್ಕೆ ಮುಂದಕ್ಕೂ ಆ ಗುಣ ತನ್ನಿಂತಾನೇ ನಮ್ಮಲ್ಲಿ ಬಂದು ಬಿಡುತ್ತದೆಂದು ನೆನಸಬಾರದು. (1 ತಿಮೊ. 4:10) ನೆನಪಿಡಿ, ಆರಂಭದಲ್ಲಿ ಸೌಲನಲ್ಲಿ ಒಳ್ಳೇ ಗುಣಗಳಿದ್ದವು. ದೇವರ ಅನುಗ್ರಹ ಪಡೆದಿದ್ದನು. ಆದರೆ ಸ್ವಾರ್ಥ ಅವನಲ್ಲಿ ಬೇರುಬಿಡಲು ಆರಂಭಿಸಿದಾಗ ಅದನ್ನು ಕಿತ್ತೊಗೆಯಲು ತಪ್ಪಿಹೋದನು. ಸೌಲನ ಅವಿಧೇಯತೆಯಿಂದಾಗಿ ಯೆಹೋವನು ಕೊನೆಗೆ ಅವನನ್ನು ತಳ್ಳಿಬಿಟ್ಟನು.
11 ಎರಡನೇದಾಗಿ, ನಾವು ಯಾವುದನ್ನು ಒಳ್ಳೇದಾಗಿ ಮಾಡುತ್ತಿದ್ದೇವೋ ಅದರ ಮೇಲೆ ಮಾತ್ರ ಗಮನನೆಡುತ್ತಾ ಹೊಂದಾಣಿಕೆಗಳನ್ನು ಮಾಡಬೇಕಿರುವ ವಿಷಯಗಳನ್ನು ನಿರ್ಲಕ್ಷಿಸದಂತೆ ಜಾಗ್ರತೆ ವಹಿಸಬೇಕು. ಇಲ್ಲದಿದ್ದರೆ ಅದು, ನಾವು ಹೊಸ ಬಟ್ಟೆ ಹಾಕಿಕೊಂಡು ಕನ್ನಡಿ ಮುಂದೆ ನಿಂತು ಕೇವಲ ಅದನ್ನು ಮೆಚ್ಚುತ್ತಾ ಮುಖದ ಮೇಲಿರುವ ಕೊಳೆಯನ್ನು ಗಮನಿಸದೇ ಹೋಗುವುದಕ್ಕೆ ಸಮವಾಗಿದೆ. ಸೌಲನಂತೆ ಹೆಮ್ಮೆ, ಅತಿಯಾದ ಆತ್ಮವಿಶ್ವಾಸ ನಮ್ಮಲ್ಲಿ ಇಲ್ಲದಿರಬಹುದಾದರೂ ಆ ಕೆಟ್ಟ ಗುಣಗಳು ನಮ್ಮಲ್ಲಿ ಬೆಳೆಯುವಂತೆ ಮಾಡುವ ಯಾವುದೇ ಪ್ರವೃತ್ತಿಯನ್ನು ನಾವು ತೊರೆಯಬೇಕು. ನಮಗೆ ಸಲಹೆಬುದ್ಧಿವಾದ ಕೊಡಲಾದಾಗ ನಮ್ಮ ಕ್ರಿಯೆಗಳನ್ನು ಸಮರ್ಥಿಸದಿರೋಣ, ಮಾಡಿದ ತಪ್ಪನ್ನು ದೊಡ್ಡದಲ್ಲವೆಂಬಂತೆ ತೋರಿಸಲು ಪ್ರಯತ್ನಿಸದಿರೋಣ, ತಪ್ಪನ್ನು ಬೇರೆಯವರ ಮೇಲೆ ಹೊರಿಸದಿರೋಣ. ಬುದ್ಧಿವಾದವನ್ನು ಸೌಲನಂತೆ ತಳ್ಳಿಹಾಕದೆ ಅದನ್ನು ನಾವು ಸ್ವೀಕರಿಸುವುದು ನಮಗೆ ಮೇಲನ್ನುಂಟುಮಾಡುತ್ತದೆ.—ಕೀರ್ತನೆ 141:5 ಓದಿ.
12. ನಾವೊಂದು ಗಂಭೀರ ಪಾಪವನ್ನು ಮಾಡಿರುವಲ್ಲಿ ಸ್ವತ್ಯಾಗ ಮನೋಭಾವ ಹೇಗೆ ಸಹಾಯ ಮಾಡಬಲ್ಲದು?
12 ನಾವು ಗಂಭೀರ ಪಾಪವನ್ನು ಮಾಡಿರುವಲ್ಲಿ ಆಗೇನು? ಸೌಲನಿಗೆ ತನ್ನ ಮಾನವನ್ನು ಕಾಪಾಡಿಕೊಳ್ಳುವುದೇ ಮುಖ್ಯವಾಗಿತ್ತು. ಇದು ಅವನು ಆಧ್ಯಾತ್ಮಿಕವಾಗಿ ಚೇತರಿಸಿಕೊಳ್ಳುವುದಕ್ಕೆ ತಡೆಯಾಯಿತು. ಆದರೆ ನಮ್ಮಲ್ಲಿ ಸ್ವತ್ಯಾಗ ಮನೋಭಾವ ಇದ್ದರೆ ಅದು, ಅವಮಾನಕ್ಕೊಳಗಾಗುವ ಭಯವನ್ನು ಮೆಟ್ಟಿನಿಂತು ಬೇಕಾದ ಸಹಾಯವನ್ನು ಪಡೆಯುವಂತೆ ನೆರವಾಗುತ್ತದೆ. (ಜ್ಞಾನೋ. 28:13; ಯಾಕೋ. 5:14-16) ಹನ್ನೆರಡು ವಯಸ್ಸಿನಿಂದಲೇ ಅಶ್ಲೀಲ ಸಾಹಿತ್ಯವನ್ನು ನೋಡುತ್ತಿದ್ದ ಸಹೋದರನ ಉದಾಹರಣೆ ಗಮನಿಸಿ. ಅವನು ಹತ್ತಕ್ಕಿಂತ ಹೆಚ್ಚು ವರ್ಷಗಳಿಂದ ಗುಟ್ಟಾಗಿ ಅದನ್ನು ನೋಡುತ್ತಿದ್ದನು. ಅವನು ಹೀಗನ್ನುತ್ತಾನೆ: “ನಾನು ಮಾಡುತ್ತಿದ್ದದ್ದನ್ನು ನನ್ನ ಹೆಂಡತಿ ಮತ್ತು ಸಭಾ ಹಿರಿಯರ ಬಳಿ ಒಪ್ಪಿಕೊಳ್ಳಲು ತುಂಬ ಕಷ್ಟವಾಯಿತು. ಆದರೆ ನಾನದನ್ನು ಒಪ್ಪಿಕೊಂಡ ಮೇಲೆ ನನ್ನ ಹೆಗಲ ಮೇಲಿಂದ ದೊಡ್ಡ ಭಾರವನ್ನು ತೆಗೆದುಹಾಕಿದ ಹಾಗಿದೆ. ಶುಶ್ರೂಷಾ ಸೇವಕನ ಸ್ಥಾನದಿಂದ ನನ್ನನ್ನು ತೆಗೆದುಹಾಕಿದಾಗ ನನ್ನ ಕೆಲವು ಸ್ನೇಹಿತರು ತುಂಬ ನಿರಾಶೆಗೊಂಡರು. ಆದರೆ ನನಗೆ ಗೊತ್ತು, ನಾನು ಅಶ್ಲೀಲ ಸಾಹಿತ್ಯ ನೋಡುತ್ತಿದ್ದಾಗ ಮಾಡುತ್ತಿದ್ದ ಸೇವೆಗಿಂತ ಈಗ ನನ್ನ ಸೇವೆಯನ್ನು ಯೆಹೋವನು ತುಂಬ ಮೆಚ್ಚುತ್ತಾನೆ. ಬೇರೆಯವರಿಗೆ ಹೇಗೆ ಅನಿಸುತ್ತದೆ ಅನ್ನೋದಕ್ಕಿಂತ ಯೆಹೋವನಿಗೆ ಹೇಗೆ ಅನಿಸುತ್ತದೆ ಅನ್ನೋದೇ ಮುಖ್ಯ.”
ಪೇತ್ರನು ಸ್ವಾರ್ಥವನ್ನು ಮೆಟ್ಟಿನಿಂತನು
13, 14. ಪೇತ್ರನು ಸ್ವಾರ್ಥ ಪ್ರವೃತ್ತಿಯನ್ನು ತೋರಿಸಿದ್ದು ಹೇಗೆ?
13 ಅಪೊಸ್ತಲ ಪೇತ್ರನು ಯೇಸುವಿನಿಂದ ತರಬೇತಿಯನ್ನು ಪಡೆಯುತ್ತಿದ್ದಾಗ ಸ್ವತ್ಯಾಗ ಮನೋಭಾವ ತೋರಿಸಿದನು. (ಲೂಕ 5:3-11) ಹಾಗಿದ್ದರೂ ಅವನು ಸ್ವಾರ್ಥ ಪ್ರವೃತ್ತಿಗಳ ವಿರುದ್ಧ ಹೋರಾಡಬೇಕಿತ್ತು. ಉದಾಹರಣೆಗೆ, ಅಪೊಸ್ತಲ ಯಾಕೋಬ ಮತ್ತು ಯೋಹಾನನು ದೇವರ ರಾಜ್ಯದಲ್ಲಿ ಯೇಸುವಿನ ಪಕ್ಕದಲ್ಲಿರುವ ಶ್ರೇಷ್ಠ ಸ್ಥಾನಗಳನ್ನು ಗಳಿಸಲಿಕ್ಕಾಗಿ ಪಿತೂರಿ ನಡೆಸಿದಾಗ ಪೇತ್ರ ಸಿಡಿಮಿಡಿಗೊಂಡನು. ಪ್ರಾಯಶಃ ಅವನು ಅವುಗಳಲ್ಲಿ ಒಂದು ಸ್ಥಾನ ತನ್ನದೆಂದು ಯೋಚಿಸಿದ್ದನು. ಪೇತ್ರನು ಮುಂದೆ ಒಂದು ವಿಶೇಷ ಪಾತ್ರವನ್ನು ವಹಿಸಲಿದ್ದಾನೆಂದು ಯೇಸು ಇದಕ್ಕೆ ಮುಂಚೆ ಹೇಳಿದ್ದರಿಂದ ಅವನು ಹಾಗೆ ನೆನಸಿದ್ದಿರಬಹುದು. (ಮತ್ತಾ. 16:18, 19) ಆದರೆ ಯೇಸು ಯಾಕೋಬನನ್ನೂ ಯೋಹಾನನನ್ನೂ ಹಾಗೂ ಪೇತ್ರನನ್ನೂ ಸೇರಿಸಿ ಇನ್ನುಳಿದ ಅಪೊಸ್ತಲರಿಗೆ ಸ್ವಾರ್ಥದಿಂದ ಇತರರ ಮೇಲೆ ‘ದಬ್ಬಾಳಿಕೆ ನಡೆಸಬಾರದೆಂದು’ ಎಚ್ಚರಿಕೆ ಕೊಟ್ಟನು.—ಮಾರ್ಕ 10:35-45.
14 ಪೇತ್ರನು ಯೇಸುವಿನಿಂದ ತಿದ್ದುಪಾಟು ಪಡೆದ ಬಳಿಕವೂ ತನ್ನ ಬಗ್ಗೆ ಸಮತೆಯ ನೋಟವನ್ನಿಟ್ಟುಕೊಳ್ಳಲು ಹೆಣಗಾಡಬೇಕಾಯಿತು. ಅಪೊಸ್ತಲರೆಲ್ಲರೂ ಸ್ವಲ್ಪ ಸಮಯ ತನ್ನನ್ನು ಬಿಟ್ಟು ಓಡಿಹೋಗುವರು ಎಂದು ಯೇಸು ಹೇಳಿದಾಗ ಪೇತ್ರನು ತಾನೊಬ್ಬನೇ ನಂಬಿಗಸ್ತನಾಗಿ ಉಳಿಯುವೆನೆಂದು ಕೊಚ್ಚಿಕೊಂಡನು. ಹೀಗೆ ಬೇರೆಲ್ಲರನ್ನು ಕೀಳಂದಾಜು ಮಾಡಿ ತನ್ನನ್ನು ಮೇಲಕ್ಕೇರಿಸಿಕೊಂಡನು. (ಮತ್ತಾ. 26:31-33) ಆದರೆ ಅವನ ಆತ್ಮವಿಶ್ವಾಸ ಸುಳ್ಳಾಯಿತು. ಅವನು ಆ ಮಾತು ಹೇಳಿದ ಅದೇ ರಾತ್ರಿ ಸ್ವತ್ಯಾಗ ಮನೋಭಾವ ತೋರಿಸಲು ತಪ್ಪಿದನು. ತನ್ನನ್ನು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ ಯೇಸುವನ್ನು ಅರಿಯೆನೆಂದು ಮೂರು ಬಾರಿ ಹೇಳಿದನು.—ಮತ್ತಾ. 26:69-75.
15. ಪೇತ್ರನ ಜೀವನಾದ್ಯಂತದ ಮಾದರಿಯು ನಮಗೆ ಏಕೆ ಉತ್ತೇಜನದಾಯಕ?
15 ಇಷ್ಟೆಲ್ಲಾ ಹೆಣಗಾಟ ಮತ್ತು ಸೋಲುಗಳ ಹೊರತಾಗಿಯೂ ಪೇತ್ರನ ಜೀವನವು ಒಂದು ಉತ್ತೇಜನದಾಯಕ ಉದಾಹರಣೆಯಾಗಿದೆ. ಬಹಳಷ್ಟು ಶ್ರಮ ಹಾಗೂ ಪವಿತ್ರಾತ್ಮದ ಸಹಾಯದಿಂದ ಪೇತ್ರನು ಸ್ವಾರ್ಥ ಪ್ರವೃತ್ತಿಗಳನ್ನು ಮೆಟ್ಟಿನಿಲ್ಲಲು ಮತ್ತು ಸ್ವನಿಯಂತ್ರಣವನ್ನೂ ಸ್ವತ್ಯಾಗದ ಪ್ರೀತಿಯನ್ನೂ ತೋರಿಸಲು ಶಕ್ತನಾದನು. (ಗಲಾ. 5:22, 23) ಅವನು ಎಡವಿದ ವಿಷಯಗಳಿಗೆ ಹೋಲಿಸಿದರೆ ಅವನು ನಂತರ ಎದುರಿಸಿದ ನಂಬಿಕೆಯ ಪರೀಕ್ಷೆಗಳು ಹೆಚ್ಚು ತೀವ್ರವಾಗಿದ್ದವೆಂದು ಹೇಳಬಹುದು. ಒಮ್ಮೆ ಸುತ್ತಲಿದ್ದ ಎಲ್ಲರ ಮುಂದೆ ಅಪೊಸ್ತಲ ಪೌಲನು ಪೇತ್ರನನ್ನು ಖಂಡಿಸಿದಾಗ ಅವನು ದೀನತೆ ತೋರಿಸಿದನು. (ಗಲಾ. 2:11-14) ತನ್ನನ್ನು ಪೌಲ ಗದರಿಸಿದ್ದರಿಂದ ತನ್ನ ಸ್ಥಾನಕ್ಕೆ ಅವಮರ್ಯಾದೆ ಆಯಿತೆಂದು ನೆನಸಿ ಅವನ ಮೇಲೆ ಹಗೆತನ ಸಾಧಿಸಲಿಲ್ಲ. ಮುಂದಕ್ಕೂ ಪೌಲನಿಗೆ ಪ್ರೀತಿ ತೋರಿಸಿದನು. (2 ಪೇತ್ರ 3:15) ಪೇತ್ರನ ಮಾದರಿ ಸ್ವತ್ಯಾಗ ಮನೋಭಾವವನ್ನು ಇನ್ನೂ ಹೆಚ್ಚಾಗಿ ಬೆಳೆಸಿಕೊಳ್ಳುವಂತೆ ನಮಗೆ ಸಹಾಯ ಮಾಡಬಲ್ಲದು.
16. ಕಷ್ಟಕರ ಸನ್ನಿವೇಶಗಳಲ್ಲಿ ನಾವು ಹೇಗೆ ಸ್ವತ್ಯಾಗ ಮನೋಭಾವವನ್ನು ತೋರಿಸಬಲ್ಲೆವು?
16 ಕಷ್ಟಕರ ಸನ್ನಿವೇಶಗಳಲ್ಲಿ ನೀವು ಹೇಗೆ ಪ್ರತಿಕ್ರಿಯಿಸುವಿರೆಂದು ಯೋಚಿಸಿ. ಸುವಾರ್ತೆ ಸಾರುತ್ತಿದ್ದದ್ದಕ್ಕಾಗಿ ಪೇತ್ರನನ್ನೂ ಇತರ ಅಪೊಸ್ತಲರನ್ನೂ ಸೆರೆಗೆ ಹಾಕಿ ಥಳಿಸಿದಾಗ ಅವರು ಹೇಗೆ ಪ್ರತಿಕ್ರಿಯಿಸಿದರು? “[ಯೇಸುವಿನ] ಹೆಸರಿನ ನಿಮಿತ್ತ ತಾವು ಅವಮಾನಪಡಲು ಯೋಗ್ಯರೆನಿಸಿಕೊಂಡದ್ದಕ್ಕಾಗಿ” ಅವರು ಸಂತೋಷಪಟ್ಟರು. (ಅ. ಕಾ. 5:41) ಅದೇ ರೀತಿ ನೀವು ಹಿಂಸೆಯನ್ನು ಎದುರಿಸುವಾಗ ಅದನ್ನು, ಪೇತ್ರನನ್ನು ಅನುಕರಿಸಲು ಹಾಗೂ ಯೇಸುವಿನ ಹೆಜ್ಜೆಜಾಡು ಹಿಂಬಾಲಿಸಲು ಒಂದು ಅವಕಾಶವಾಗಿ ಕಾಣುತ್ತಾ ಸ್ವತ್ಯಾಗ ಮನೋಭಾವವನ್ನು ತೋರಿಸಿರಿ. (1 ಪೇತ್ರ 2:20, 21 ಓದಿ.) ಇಂಥ ಮನೋಭಾವವು ಸಭಾ ಹಿರಿಯರಿಂದ ಶಿಸ್ತು ಸಿಕ್ಕಿದಾಗ ಅದನ್ನು ಸ್ವೀಕರಿಸಲು ಕೂಡ ನಿಮಗೆ ಸಹಾಯ ಮಾಡುವುದು. ಹಿರಿಯರ ಮೇಲೆ ಕೋಪಿಸಿಕೊಳ್ಳದೆ ಪೇತ್ರನಂತೆ ಶಿಸ್ತನ್ನು ಸ್ವೀಕರಿಸಿ.—ಪ್ರಸಂಗಿ 7:9.
17, 18. (ಎ) ನಾವಿಟ್ಟಿರುವ ಆಧ್ಯಾತ್ಮಿಕ ಗುರಿಗಳ ಸಂಬಂಧದಲ್ಲಿ ಏನು ಕೇಳಿಕೊಳ್ಳಬಹುದು? (ಬಿ) ನಮ್ಮ ಹೃದಯದಲ್ಲಿ ಸ್ವಲ್ಪಮಟ್ಟಿಗೆ ಸ್ವಾರ್ಥಭಾವ ಇದೆಯೆಂದು ಗೊತ್ತಾದಲ್ಲಿ ಏನು ಮಾಡಬೇಕು?
17 ಆಧ್ಯಾತ್ಮಿಕ ಗುರಿಗಳನ್ನು ಮುಟ್ಟಲು ಪ್ರಯತ್ನಿಸುವಾಗಲೂ ನೀವು ಪೇತ್ರನ ಮಾದರಿಯಿಂದ ಪ್ರಯೋಜನ ಪಡೆಯಬಲ್ಲಿರಿ. ಸ್ವತ್ಯಾಗ ಮನೋಭಾವದಿಂದ ಅಂಥ ಗುರಿಗಳನ್ನು ಮುಟ್ಟಲು ಪ್ರಯತ್ನಿಸಿ. ಅದೇ ಸಮಯದಲ್ಲಿ ಆ ಗುರಿಗಳನ್ನು ಮುಟ್ಟುವ ಉದ್ದೇಶ ಸ್ಥಾನಮಾನದ ಲಾಲಸೆ ಆಗಿರದಂತೆ ಜಾಗ್ರತೆ ವಹಿಸಿ. ಹೀಗೆ ಕೇಳಿಕೊಳ್ಳಿ: ‘ಯಾವ ಕಾರಣಕ್ಕಾಗಿ ನಾನು ಯೆಹೋವನ ಸೇವೆಯಲ್ಲಿ ಪ್ರಗತಿ ಮಾಡಲು ಅಥವಾ ಅದನ್ನು ಹೆಚ್ಚಿಸಲು ಬಯಸುತ್ತಿದ್ದೇನೆ? ಇತರರಿಂದ ಹೊಗಳಿಕೆ, ಮಾನ ಪಡೆಯಲಿಕ್ಕಾಗಿಯೊ? ಯೇಸುವಿನ ಬಳಿ ವಿನಂತಿಸಿಕೊಂಡಾಗ ಯಾಕೋಬ ಯೋಹಾನರಲ್ಲಿ ಇದ್ದಿರಬಹುದಾದ ಹೆಚ್ಚಿನ ಸ್ಥಾನವನ್ನು ಗಳಿಸುವ ಬಯಕೆ ನನ್ನಲಿದೆಯೊ?’
18 ನಿಮ್ಮ ಹೃದಯದಲ್ಲಿ ಸ್ವಲ್ಪಮಟ್ಟಿಗೆ ಸ್ವಾರ್ಥ ಇದೆ ಎಂದು ಗೊತ್ತಾದಲ್ಲಿ ಏನು ಮಾಡಬೇಕು? ನಿಮ್ಮ ಯೋಚನೆ ಮತ್ತು ಭಾವನೆಗಳನ್ನು ತಿದ್ದಿಕೊಳ್ಳಲು ಸಹಾಯ ಮಾಡುವಂತೆ ಯೆಹೋವನಲ್ಲಿ ಕೇಳಿಕೊಳ್ಳಿ. ಬಳಿಕ ನಿಮಗೆ ಮಾನವನ್ನು ತಂದುಕೊಳ್ಳುವುದರ ಮೇಲಲ್ಲ ಯೆಹೋವನಿಗೆ ಮಾನವನ್ನು ತರುವುದರ ಮೇಲೆ ಮನಸ್ಸಿಡಲು ಶ್ರಮಿಸಿ. (ಕೀರ್ತ. 86:11) ಇತರರ ಗಮನಕ್ಕೆ ಬಾರದೆ ಹೋಗುವ ಗುರಿಗಳನ್ನು ಸಹ ನೀವು ಇಡಬಹುದು. ಉದಾಹರಣೆಗೆ, ದೇವರಾತ್ಮ ಫಲದ ಅಂಶಗಳಲ್ಲಿ ಯಾವುದರಲ್ಲಿ ನೀವು ಪ್ರಗತಿ ಮಾಡಬೇಕಿದೆಯೊ ಆ ಗುಣವನ್ನು ಹೆಚ್ಚು ಬೆಳೆಸಿಕೊಳ್ಳಬಹುದು. ಅಥವಾ ನೀವು ಕೂಟಗಳಿಗಾಗಿ ಒಳ್ಳೇ ತಯಾರಿ ಮಾಡಲು ಶ್ರಮ ಹಾಕುತ್ತಿದ್ದರೂ ರಾಜ್ಯಸಭಾಗೃಹವನ್ನು ಶುಚಿಮಾಡುವುದರಲ್ಲಿ ಅಷ್ಟೇನೂ ಆಸಕ್ತಿಯಿಲ್ಲದಿರುವುದಾದರೆ ರೋಮನ್ನರಿಗೆ 12:16ರಲ್ಲಿ (ಓದಿ) ಇರುವ ಬುದ್ಧಿವಾದವನ್ನು ಅನ್ವಯಿಸುವ ಗುರಿಯನ್ನು ಇಡಸಾಧ್ಯ.
19. ದೇವರ ವಾಕ್ಯವೆಂಬ ಕನ್ನಡಿಯಲ್ಲಿ ನೋಡಿದಾಗ ನಮಗೆ ಕಾಣುವ ಲೋಪಗಳಿಂದ ನಿರಾಶೆ ಹೊಂದದಿರಲು ಏನು ಮಾಡಸಾಧ್ಯವಿದೆ?
19 ದೇವರ ವಾಕ್ಯವೆಂಬ ಕನ್ನಡಿಯಲ್ಲಿ ನಾವು ನಮ್ಮನ್ನೇ ಜಾಗ್ರತೆಯಿಂದ ನೋಡಿಕೊಂಡಾಗ ಲೋಪಗಳು, ಅಲ್ಲದೆ ಸ್ವಾರ್ಥ ಪ್ರವೃತ್ತಿಗಳು ಇವೆಯೆಂದು ಕಂಡುಬಂದರೆ ನಿರಾಶರಾಗುವ ಸಾಧ್ಯತೆಯಿದೆ. ನಿಮಗೆ ಒಂದುವೇಳೆ ನಿರಾಶೆ ಆಗುವಲ್ಲಿ, ಯಾಕೋಬನು ದೃಷ್ಟಾಂತದಲ್ಲಿ ಹೇಳಿದ, ಲೋಪವನ್ನು ಸರಿಪಡಿಸಿಕೊಂಡ ಮನುಷ್ಯನ ಬಗ್ಗೆ ನೆನಪಿಸಿಕೊಳ್ಳಿ. ಆ ವ್ಯಕ್ತಿ ದೋಷವನ್ನು ಎಷ್ಟು ಬೇಗ ಸರಿಪಡಿಸಿಕೊಂಡನು ಎಂದಾಗಲಿ ಒಂದನ್ನೂ ಬಿಡದೆ ಎಲ್ಲವನ್ನೂ ಸರಿಪಡಿಸಿಕೊಳ್ಳಲು ಅವನಿಗಾಯಿತು ಎಂದಾಗಲಿ ಯಾಕೋಬನು ಹೇಳಲಿಲ್ಲ. ಆದರೆ ಆ ವ್ಯಕ್ತಿ ‘ಪರಿಪೂರ್ಣ ನಿಯಮದಲ್ಲಿ ಪಟ್ಟುಹಿಡಿದನು’ ಎಂದು ಯಾಕೋಬನು ಹೇಳಿದನು. (ಯಾಕೋ. 1:25) ಕನ್ನಡಿಯಲ್ಲಿ ನೋಡಿದ್ದನ್ನು ಅವನು ಮರೆತುಬಿಡದೆ ಅದನ್ನು ಸರಿಪಡಿಸಲು ನಿರಂತರ ಪ್ರಯತ್ನಿಸುತ್ತಿದ್ದನು. ಆದ್ದರಿಂದ ನಿಮಗೆ ನಿಮ್ಮ ಬಗ್ಗೆ ಸಕಾರಾತ್ಮಕ ಭಾವವಿರಲಿ ಮತ್ತು ನಿಮ್ಮ ಅಪರಿಪೂರ್ಣತೆಗಳ ವಿಷಯದಲ್ಲಿ ಸಮತೂಕ ನೋಟವಿರಲಿ. (ಪ್ರಸಂಗಿ 7:20 ಓದಿ.) ಪರಿಪೂರ್ಣ ನಿಯಮದೊಳಕ್ಕೆ ಇಣಿಕಿ ನೋಡುತ್ತಾ ಇರಿ ಮತ್ತು ಸ್ವತ್ಯಾಗ ಮನೋಭಾವವನ್ನು ಕಾಪಾಡಿಕೊಳ್ಳಲು ಶ್ರಮಿಸಿರಿ. ಯೆಹೋವನು ನಿಮಗೆ ಸಹಾಯ ಮಾಡಲು ಸಿದ್ಧನಿದ್ದಾನೆ. ನಿಮ್ಮ ಸಹೋದರರಲ್ಲಿ ಅನೇಕರಿಗೆ ಆತನು ಸಹಾಯ ಮಾಡಿದ್ದಾನೆ. ಹಾಗಾಗಿ ಅಪರಿಪೂರ್ಣರಾಗಿದ್ದರೂ ಅವರು ದೇವರ ಅನುಗ್ರಹ ಮತ್ತು ಆಶೀರ್ವಾದವನ್ನು ಪಡೆಯಲು ಸಾಧ್ಯವಾಗಿದೆ.