ಯೆಹೋವ —ನಮ್ಮ ಅತ್ಯಾಪ್ತ ಸ್ನೇಹಿತ
“[ಅಬ್ರಹಾಮ] ‘ಯೆಹೋವನ ಸ್ನೇಹಿತನು’ ಎಂದು ಕರೆಯಲ್ಪಟ್ಟನು.”—ಯಾಕೋ. 2:23.
1. ನಾವು ದೇವರ ಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟಿರುವುದರಿಂದ ನಮ್ಮಲ್ಲಿ ಯಾವ ಸಾಮರ್ಥ್ಯಗಳಿವೆ?
“ಅಪ್ಪನಂತೆ ಮಗ” ಎಂದು ಹೇಳುವುದನ್ನು ನಾವು ಅನೇಕಬಾರಿ ಕೇಳಿಸಿಕೊಂಡಿದ್ದೇವೆ. ನಿಜ, ಅನೇಕ ಮಕ್ಕಳು ತಮ್ಮ ತಂದೆತಾಯಿಯನ್ನು ತುಂಬ ಹೋಲುತ್ತಾರೆ. ಏಕೆಂದರೆ ಮಕ್ಕಳು ಹೆತ್ತವರ ಗುಣಗಳನ್ನು ಆನುವಂಶಿಕವಾಗಿ ಪಡೆದಿರುತ್ತಾರೆ. ಸ್ವರ್ಗದಲ್ಲಿರುವ ನಮ್ಮ ತಂದೆಯಾದ ಯೆಹೋವನು ನಮ್ಮ ಜೀವದಾತ. (ಕೀರ್ತ. 36:9) ಆತನ ಮಾನವ ಮಕ್ಕಳಾದ ನಾವು ಅನೇಕ ವಿಧಗಳಲ್ಲಿ ಆತನನ್ನು ಹೋಲುತ್ತೇವೆ. ನಮ್ಮನ್ನು ಆತನು ತನ್ನ ಸ್ವರೂಪದಲ್ಲಿ ಸೃಷ್ಟಿಸಿರುವ ಕಾರಣ ತರ್ಕಬದ್ಧವಾಗಿ ಯೋಚಿಸುವ, ಒಂದು ನಿರ್ಧಾರಕ್ಕೆ ಬರುವ ಹಾಗೂ ಸ್ನೇಹಗಳನ್ನು ಬೆಳೆಸಿ ಉಳಿಸಿಕೊಳ್ಳುವ ಸಾಮರ್ಥ್ಯವನ್ನು ನಾವು ಆತನಿಂದ ಪಡೆದಿದ್ದೇವೆ.—ಆದಿ. 1:26.
2. ಯೆಹೋವನು ನಮ್ಮ ಮಿತ್ರನಾಗುವುದಕ್ಕೆ ಯಾವುದು ಆಧಾರ?
2 ಯೆಹೋವನು ನಮ್ಮ ಅತ್ಯಾಪ್ತ ಮಿತ್ರನಾಗಿರಲು ಸಾಧ್ಯ. ಅಂಥ ಸ್ನೇಹಕ್ಕೆ ಆಧಾರ ದೇವರಿಗೆ ನಮ್ಮ ಮೇಲಿರುವ ಪ್ರೀತಿ ಹಾಗೂ ನಮಗೆ ಆತನಲ್ಲೂ ಆತನ ಮಗನಲ್ಲೂ ಇರುವ ನಂಬಿಕೆ ಆಗಿದೆ. ಯೇಸು ಹೀಗಂದನು: “ದೇವರು ಲೋಕವನ್ನು ಎಷ್ಟೊಂದು ಪ್ರೀತಿಸಿದನೆಂದರೆ ಆತನು ತನ್ನ ಏಕೈಕಜಾತ ಪುತ್ರನನ್ನು ಕೊಟ್ಟನು; ಅವನಲ್ಲಿ ನಂಬಿಕೆಯಿಡುವ ಯಾವನೂ ನಾಶವಾಗದೆ ನಿತ್ಯಜೀವವನ್ನು ಪಡೆದುಕೊಳ್ಳಬೇಕೆಂದು ಅವನನ್ನು ಕೊಟ್ಟನು.” (ಯೋಹಾ. 3:16) ಯೆಹೋವನೊಂದಿಗೆ ಆಪ್ತ ಸ್ನೇಹವನ್ನು ಬೆಳೆಸಿಕೊಂಡ ಅನೇಕರ ಉದಾಹರಣೆಗಳಿವೆ. ಅವುಗಳಲ್ಲಿ ಎರಡನ್ನು ನಾವೀಗ ಚರ್ಚಿಸೋಣ.
“ನನ್ನ ಸ್ನೇಹಿತನಾದ ಅಬ್ರಹಾಮ”
3, 4. ಅಬ್ರಹಾಮನಿಗೆ ಮತ್ತು ಅವನ ವಂಶಜರಿಗೆ ಯೆಹೋವನೊಂದಿಗಿದ್ದ ಸ್ನೇಹದಲ್ಲಿ ಯಾವ ವ್ಯತ್ಯಾಸವಿತ್ತು?
3 ಇಸ್ರಾಯೇಲ್ಯರ ಮೂಲಪಿತೃವೂ ಪೂರ್ವಜನೂ ಆದ ಅಬ್ರಹಾಮನನ್ನು ಯೆಹೋವನು “ನನ್ನ ಸ್ನೇಹಿತ” ಎಂದು ಸಂಬೋಧಿಸಿದನು. (ಯೆಶಾ. 41:8) ಎರಡನೇ ಪೂರ್ವಕಾಲವೃತ್ತಾಂತ 20:7ರಲ್ಲಿ ಸಹ ಅಬ್ರಹಾಮನನ್ನು ದೇವರ ಸ್ನೇಹಿತನೆಂದು ಕರೆಯಲಾಗಿದೆ. ಈ ನಂಬಿಗಸ್ತ ವ್ಯಕ್ತಿಗೆ ತನ್ನ ಸೃಷ್ಟಿಕರ್ತನೊಂದಿಗಿದ್ದ ಬಾಳುವ ಸ್ನೇಹಕ್ಕೆ ಆಧಾರ ಯಾವುದಾಗಿತ್ತು? ದೇವರಲ್ಲಿ ಅವನಿಗಿದ್ದ ನಂಬಿಕೆಯೇ.—ಆದಿ. 15:6; ಯಾಕೋಬ 2:21-23 ಓದಿ.
4 ಅಬ್ರಹಾಮನ ವಂಶದಿಂದ ಬಂದ ಪ್ರಾಚೀನ ಇಸ್ರಾಯೇಲ್ ಜನಾಂಗಕ್ಕೂ ಯೆಹೋವನು ತಂದೆಯೂ ಸ್ನೇಹಿತನೂ ಆಗಿದ್ದನು. ಆದರೆ ದುಃಖದ ಸಂಗತಿಯೇನೆಂದರೆ ತದನಂತರ ಆ ಸ್ನೇಹ ಮುರಿದುಹೋಯಿತು. ಏಕೆ? ಯೆಹೋವನು ಮಾಡಿದ ವಾಗ್ದಾನಗಳಲ್ಲಿ ಅವರು ನಂಬಿಕೆ ಕಳೆದುಕೊಂಡದ್ದರಿಂದಲೇ.
5, 6. (ಎ) ಯೆಹೋವನು ಹೇಗೆ ನಿಮ್ಮ ಸ್ನೇಹಿತನಾದನು? (ಬಿ) ನಾವು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು?
5 ನಿಮಗೆ ಯೆಹೋವನು ಹೇಗೆ ಸ್ನೇಹಿತನಾಗಬಲ್ಲನು? ನೀವು ಯೆಹೋವನ ಬಗ್ಗೆ ಹೆಚ್ಚೆಚ್ಚು ತಿಳಿದುಕೊಂಡಂತೆ ಆತನ ಮೇಲಿನ ನಿಮ್ಮ ನಂಬಿಕೆ ಹೆಚ್ಚೆಚ್ಚು ಬಲಗೊಳ್ಳುತ್ತದೆ. ಪರಿಣಾಮವಾಗಿ ನೀವಾತನನ್ನು ಗಾಢವಾಗಿ ಪ್ರೀತಿಸತೊಡಗುತ್ತೀರಿ. ದೇವರು ಒಬ್ಬ ನಿಜವಾದ ವ್ಯಕ್ತಿ ಎಂದು ನೀವು ಮೊತ್ತಮೊದಲು ತಿಳಿದುಕೊಂಡ ಸಮಯವನ್ನು ನೆನಪಿಸಿಕೊಳ್ಳಿ. ಆತನೊಂದಿಗೆ ನೀವು ಸ್ನೇಹವನ್ನು ಬೆಳೆಸಿಕೊಳ್ಳಬಹುದೆಂದು ಆಗ ನಿಮಗೆ ಗೊತ್ತಾಯಿತು. ಆದಾಮನ ಅವಿಧೇಯತೆಯಿಂದಾಗಿ ಮಾನವರೆಲ್ಲರು ಪಾಪಿಗಳಾಗಿ ಹುಟ್ಟುತ್ತಿದ್ದಾರೆ, ಹಾಗಾಗಿ ಇಡೀ ಮಾನವಕುಲ ದೇವರಿಂದ ದೂರಸರಿದಿದೆ ಎಂದು ನಂತರ ನಿಮಗೆ ತಿಳಿಯಿತು. (ಕೊಲೊ. 1:21) ಮಾತ್ರವಲ್ಲ ನಮ್ಮ ಪ್ರೀತಿಯ ತಂದೆಯಾಗಿರುವ ದೇವರು ನಮ್ಮಿಂದ ದೂರವಾಗಿರುವುದಿಲ್ಲ, ನಮ್ಮ ಬಗ್ಗೆ ಆತನಿಗೆ ಕಾಳಜಿಯಿದೆ ಎಂದು ತಿಳಿದಿರಿ. ದೇವರ ಏರ್ಪಾಡಾಗಿರುವ ಯೇಸುವಿನ ವಿಮೋಚನಾ ಮೌಲ್ಯ ಯಜ್ಞದ ಕುರಿತು ಕಲಿತು ಅದರಲ್ಲಿ ನಂಬಿಕೆಯಿಟ್ಟಾಗ ದೇವರೊಂದಿಗೆ ನಿಮ್ಮ ಸ್ನೇಹ ಆರಂಭವಾಯಿತು.
6 ಈಗ ನಾವು ಹೀಗೆ ಕೇಳಿಕೊಳ್ಳೋಣ: ‘ದೇವರೊಂದಿಗಿನ ನನ್ನ ಸ್ನೇಹವನ್ನು ನಾನು ಉತ್ತಮಗೊಳಿಸುತ್ತಿದ್ದೇನಾ? ಯೆಹೋವನ ಮೇಲೆ ನನಗೆ ದೃಢವಾದ ಭರವಸೆಯಿದೆಯಾ? ನನ್ನ ನೆಚ್ಚಿನ ಸ್ನೇಹಿತನಾದ ಆತನ ಮೇಲೆ ನನಗಿರುವ ಪ್ರೀತಿ ದಿನದಿಂದ ದಿನಕ್ಕೆ ಗಾಢವಾಗುತ್ತಿದೆಯಾ?’ ಯೆಹೋವನೊಂದಿಗೆ ಆಪ್ತ ಸಂಬಂಧವಿದ್ದ ಇನ್ನೊಬ್ಬ ವ್ಯಕ್ತಿ ಗಿದ್ಯೋನನು. ಅವನ ಒಳ್ಳೇ ಮಾದರಿಯನ್ನು ನಾವೀಗ ಚರ್ಚಿಸೋಣ ಮತ್ತು ಅದನ್ನು ಅನ್ವಯಿಸೋಣ.
“ಯೆಹೋವನು ಸಮಾಧಾನಪ್ರದನು”
7-9. (ಎ) ಗಿದ್ಯೋನನಿಗೆ ಯಾವ ಗಮನಾರ್ಹ ಅನುಭವವಾಯಿತು? (ಲೇಖನದ ಆರಂಭದಲ್ಲಿರುವ ಚಿತ್ರ ನೋಡಿ.) (ಬಿ) ಅದರ ಫಲಿತಾಂಶವೇನಾಯಿತು? (ಸಿ) ಯೆಹೋವನೊಟ್ಟಿಗೆ ಸ್ನೇಹವಿರಬೇಕಾದರೆ ಏನು ಮಾಡಬೇಕು?
7 ವಾಗ್ದತ್ತ ದೇಶದಲ್ಲಿ ನೆಲೆಸಿದ್ದ ಇಸ್ರಾಯೇಲ್ಯರ ಇತಿಹಾಸದ ಒಂದು ಪ್ರಕ್ಷುಬ್ಧ ಕಾಲದಲ್ಲಿ ಗಿದ್ಯೋನನು ನ್ಯಾಯಸ್ಥಾಪಕನಾಗಿ ಯೆಹೋವನಿಗೆ ಸೇವೆ ಸಲ್ಲಿಸುತ್ತಿದ್ದನು. ಒಫ್ರದಲ್ಲಿ ಈತನಿಗೆ ದೇವದೂತನೊಬ್ಬನು ಕಾಣಿಸಿಕೊಂಡ ಘಟನೆಯನ್ನು ನ್ಯಾಯಸ್ಥಾಪಕರು ಪುಸ್ತಕದ 6ನೇ ಅಧ್ಯಾಯದಲ್ಲಿ ದಾಖಲಿಸಲಾಗಿದೆ. ಆ ಸಮಯದಲ್ಲಿ ನೆರೆಯ ಜನಾಂಗವಾದ ಮಿದ್ಯಾನ್ಯರು ಇಸ್ರಾಯೇಲ್ಯರಿಗೆ ತುಂಬ ಕಿರುಕುಳ ಕೊಡುತ್ತಿದ್ದರು. ಆದ್ದರಿಂದ ಗಿದ್ಯೋನನು ಗೋದಿಯನ್ನು ಹೊಲದಲ್ಲಿ ಬಡಿಯದೆ ದ್ರಾಕ್ಷೆಯ ಆಲೆಯಲ್ಲಿ ಬಡಿಯುತ್ತಿದ್ದನು. ಮಿದ್ಯಾನ್ಯರು ದಾಳಿಯಿಟ್ಟರೆ ಆ ಬೆಳೆಬಾಳುವ ಗೋದಿಯನ್ನು ತಕ್ಷಣ ಅಡಗಿಸಿಡಬಹುದು ಎಂಬುದು ಅವನ ಯೋಚನೆ. ಆಗ ದೇವದೂತನು ಅವನಿಗೆ ಕಾಣಿಸಿಕೊಂಡು ಅವನನ್ನು “ಪರಾಕ್ರಮಶಾಲಿಯೇ” ಎಂದು ಕರೆದನು. ಇದಕ್ಕೆ ಗಿದ್ಯೋನನು ಆಶ್ಚರ್ಯಗೊಂಡನು. ಅನಂತರ, ಇಸ್ರಾಯೇಲ್ಯರನ್ನು ಐಗುಪ್ತದಿಂದ ಬಿಡುಗಡೆ ಮಾಡಿದ ಯೆಹೋವನು ಈಗಲೂ ನಮಗೆ ಸಹಾಯ ಮಾಡುವನೋ ಎಂದು ಗಿದ್ಯೋನ ಕೇಳಿದನು. ಸೃಷ್ಟಿಕರ್ತನ ಪರವಾಗಿ ಮಾತಾಡುತ್ತಿದ್ದ ಆ ದೇವದೂತನು ಪ್ರತಿಯಾಗಿ ಗಿದ್ಯೋನನಿಗೆ, ಯೆಹೋವನು ಅವನಿಗೆ ಬೆಂಬಲವಾಗಿ ಇದ್ದಾನೆಂದು ಆಶ್ವಾಸನೆ ಕೊಟ್ಟನು.
8 ಗಿದ್ಯೋನನು ‘ಇಸ್ರಾಯೇಲ್ಯರನ್ನು ಮಿದ್ಯಾನ್ಯರಿಂದ ಬಿಡಿಸುವನೆಂದು’ ದೇವದೂತನು ಹೇಳಿದನು. ಅದು ತನ್ನಿಂದ ಹೇಗೆ ಸಾಧ್ಯ ಎಂದು ಗಿದ್ಯೋನನು ಕೇಳಿದಾಗ ಯೆಹೋವನಿಂದ ಅವನಿಗೆ ಈ ನೇರ ಉತ್ತರ ಸಿಕ್ಕಿತು: “ನಾನು ನಿನ್ನ ಸಂಗಡ ಇರುವದರಿಂದ ನೀನು ಮಿದ್ಯಾನ್ಯರೆಲ್ಲರನ್ನೂ ಒಬ್ಬ ಮನುಷ್ಯನನ್ನೋ ಎಂಬಂತೆ ಸಂಹರಿಸಿಬಿಡುವಿ.” (ನ್ಯಾಯ. 6:11-16) ಹಾಗಿದ್ದರೂ ಅದು ಹೇಗೆಂಬ ಗೊಂದಲ ಗಿದ್ಯೋನನಿಗೆ ಇನ್ನೂ ಹೋಗಿರಲಿಲ್ಲ. ಹಾಗಾಗಿ ಅವನು ದೇವದೂತನಿಂದ ಒಂದು ಗುರುತನ್ನು ಕೇಳಿಕೊಂಡನು. ಈ ಸಂಭಾಷಣೆಯಲ್ಲಿ ನಾವು ಒಂದು ವಿಷಯವನ್ನು ಗಮನಿಸಬಹುದು ಏನೆಂದರೆ, ಗಿದ್ಯೋನನು ಯೆಹೋವನನ್ನು ಒಬ್ಬ ನಿಜವಾದ ವ್ಯಕ್ತಿಯಾಗಿ ಪರಿಗಣಿಸಿದನು.
9 ಮುಂದೇನಾಯಿತೋ ಅದು ಗಿದ್ಯೋನನ ನಂಬಿಕೆಯನ್ನು ಬಲಪಡಿಸಿ ಯೆಹೋವನಿಗೆ ಅವನನ್ನು ಇನ್ನೂ ಆಪ್ತನಾಗಿ ಮಾಡಿತು. ಗಿದ್ಯೋನನು ಮನೆಗೆ ಹೋಗಿ ಅಡುಗೆ ಮಾಡಿ ದೇವದೂತನಿಗೆ ತಂದುಕೊಟ್ಟನು. ದೇವದೂತನು ತನ್ನ ಕೋಲನ್ನು ಆ ಆಹಾರಕ್ಕೆ ತಾಗಿಸಿದಾಗ ಥಟ್ಟನೆ ಬೆಂಕಿಯೆದ್ದು ಅದನ್ನು ದಹಿಸಿಬಿಟ್ಟಿತು. ಈ ಅದ್ಭುತದಿಂದ ಗಿದ್ಯೋನನಿಗೆ ಆ ದೇವದೂತನು ಯೆಹೋವನ ಪ್ರತಿನಿಧಿಯೆಂಬುದು ಖಾತ್ರಿಯಾಯಿತು. ಆಗ ಗಿದ್ಯೋನನು, “ಅಯ್ಯೋ ಕರ್ತನೇ, ಯೆಹೋವನೇ, ಯೆಹೋವನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ” ಎಂದು ಭಯಭೀತನಾಗಿ ಕೂಗಿದನು. (ನ್ಯಾಯ. 6:17-22) ಈ ಘಟನೆ ಗಿದ್ಯೋನನಿಗೆ ಯೆಹೋವನೊಂದಿಗಿದ್ದ ಸ್ನೇಹಕ್ಕೆ ಮುಳುವಾಯಿತೊ? ಖಂಡಿತ ಇಲ್ಲ. ಬದಲಿಗೆ ಅವನು ಯೆಹೋವನನ್ನು ಹೆಚ್ಚು ತಿಳಿದುಕೊಂಡನು. ಇದು ಅವನನ್ನು ದೇವರೊಂದಿಗೆ ಸಮಾಧಾನ ಸಂಬಂಧಕ್ಕೆ ತಂದಿತು. ನಮಗಿದು ಹೇಗೆ ಗೊತ್ತಾಗುತ್ತದೆ? ಗಿದ್ಯೋನನು ನಂತರ ಅಲ್ಲಿ ಒಂದು ಯಜ್ಞವೇದಿಯನ್ನು ಕಟ್ಟಿ ಅದಕ್ಕೆ “ಯೆಹೋವ ಷಾಲೋಮ್” ಎಂದು ಹೆಸರಿಟ್ಟನು. ಅದರರ್ಥ “ಯೆಹೋವನು ಸಮಾಧಾನಪ್ರದನು” ಎಂದಾಗಿದೆ. (ನ್ಯಾಯಸ್ಥಾಪಕರು 6:23, 24 ಓದಿ; ಪಾದಟಿಪ್ಪಣಿ) ನಮಗಾಗಿ ಯೆಹೋವನು ಪ್ರತಿದಿನ ಏನನ್ನೆಲ್ಲ ಮಾಡಿದ್ದಾನೆ ಎಂದು ನಾವು ಧ್ಯಾನಿಸುವಲ್ಲಿ ಆತನು ನಮ್ಮ ನಿಜ ಮಿತ್ರನೆಂದು ಮನದಟ್ಟಾಗುವುದು. ಪ್ರಾರ್ಥನೆಯಲ್ಲಿ ದೇವರೊಂದಿಗೆ ಕ್ರಮವಾಗಿ ಮಾತಾಡುವ ಮೂಲಕ ನಮ್ಮಲ್ಲಿ ಹೆಚ್ಚೆಚ್ಚು ಸಮಾಧಾನ ನೆಲೆಸುತ್ತದೆ ಮತ್ತು ಆತನೊಂದಿಗಿನ ಸ್ನೇಹಬಂಧ ಇನ್ನಷ್ಟು ಬಲಗೊಳ್ಳುತ್ತದೆ.
‘ಯೆಹೋವನ ಗುಡಾರದಲ್ಲಿ ಇಳುಕೊಂಡಿರುವದಕ್ಕೆ ಯೋಗ್ಯನು ಯಾರು?’
10. ಕೀರ್ತನೆ 15:3, 5ರ ಪ್ರಕಾರ, ನಾವು ಯೆಹೋವನ ಸ್ನೇಹಿತರಾಗಿರಬೇಕಾದರೆ ಏನು ಮಾಡಬೇಕೆಂದು ಆತನು ಅಪೇಕ್ಷಿಸುತ್ತಾನೆ?
10 ಯೆಹೋವನು ನಮ್ಮ ಸ್ನೇಹಿತನಾಗಿರಬೇಕಾದರೆ ನಾವು ನಿರ್ದಿಷ್ಟ ಷರತ್ತುಗಳನ್ನು ಪಾಲಿಸಬೇಕು. ನಾವು ‘ಯೆಹೋವನ ಗುಡಾರದಲ್ಲಿ ಇಳುಕೊಂಡಿರಲು ಯೋಗ್ಯರಾಗಬೇಕಾದರೆ’ ಅಂದರೆ ಆತನ ಸ್ನೇಹಿತರಾಗಿರಬೇಕಾದರೆ ಮಾಡಬೇಕಾದ ಕೆಲವು ವಿಷಯಗಳನ್ನು 15ನೇ ಕೀರ್ತನೆಯಲ್ಲಿ ದಾವೀದನು ಹೇಳಿದ್ದಾನೆ. (ಕೀರ್ತ. 15:1) ಅವುಗಳಲ್ಲಿ ಎರಡು ಯಾವುವೆಂದರೆ ನಾವು ಚಾಡಿ ಹೇಳಬಾರದು ಮತ್ತು ಪ್ರಾಮಾಣಿಕರಾಗಿರಬೇಕು. ಈ ಬಗ್ಗೆ ಅವನು ಕೀರ್ತನೆಯಲ್ಲಿ ಹೀಗೆ ಹೇಳಿದ್ದಾನೆ: “ಅವನು ಚಾಡಿಯನ್ನು ಹೇಳದವನೂ . . . ನಿರಪರಾಧಿಯ ಕೇಡಿಗಾಗಿ ಲಂಚತೆಗೆದುಕೊಳ್ಳದವನೂ ಆಗಿರಬೇಕು.”—ಕೀರ್ತ. 15:3, 5.
11. ನಾವು ಚಾಡಿ ಹೇಳಬಾರದು ಏಕೆ?
11 ಇನ್ನೊಂದು ಕೀರ್ತನೆಯಲ್ಲಿ ದಾವೀದನು “ಕೆಟ್ಟದ್ದಕ್ಕೆ ಹೋಗದಂತೆ ನಾಲಿಗೆಯನ್ನು ಕಾದುಕೋ” ಎಂಬ ಎಚ್ಚರಿಕೆ ಕೊಟ್ಟಿದ್ದಾನೆ. (ಕೀರ್ತ. 34:13) ಈ ದೇವಪ್ರೇರಿತ ಸಲಹೆಗೆ ಕಿವಿಗೊಡದಿದ್ದರೆ ನಮ್ಮ ನೀತಿವಂತ ತಂದೆಯಾದ ಯೆಹೋವನೊಂದಿಗೆ ನಮಗಿರುವ ಸಂಬಂಧದಲ್ಲಿ ಬಿರುಕು ಉಂಟಾಗುವುದು. ನಿಜವೇನೆಂದರೆ, ಚಾಡಿಹೇಳುವುದು ಯೆಹೋವನ ಪರಮ ಶತ್ರುವಾದ ಸೈತಾನನ ಲಕ್ಷಣವಾಗಿದೆ. “ಪಿಶಾಚ” ಎಂಬ ಪದಕ್ಕಿರುವ ಗ್ರೀಕ್ ಮೂಲಪದದ ಅರ್ಥ “ಚಾಡಿಕೋರ” ಎಂದಾಗಿದೆ. ಆದುದರಿಂದ ನಾವು ಇತರರ ಬಗ್ಗೆ, ವಿಶೇಷವಾಗಿ ಸಭೆಯಲ್ಲಿರುವ ನೇಮಿತ ಪುರುಷರ ಬಗ್ಗೆ ಏನು ಮಾತಾಡುತ್ತೇವೋ ಅದನ್ನು ಹತೋಟಿಯಲ್ಲಿಡಬೇಕು. ಆಗ ಯೆಹೋವನಿಗೆ ಆಪ್ತರಾಗಿ ಉಳಿಯುವೆವು.—ಇಬ್ರಿಯ 13:17; ಯೂದ 8 ಓದಿ.
12, 13. (ಎ) ನಾವು ಎಲ್ಲ ವಿಷಯಗಳಲ್ಲಿ ಪ್ರಾಮಾಣಿಕರಾಗಿರಬೇಕು ಏಕೆ? (ಬಿ) ನಾವು ತೋರಿಸುವ ಪ್ರಾಮಾಣಿಕತೆ ಬೇರೆಯವರ ಮೇಲೆ ಹೇಗೆ ಪ್ರಭಾವ ಬೀರಬಹುದು?
12 ಯೆಹೋವನ ಸೇವಕರು ಪ್ರಾಮಾಣಿಕತೆಗೆ ಖ್ಯಾತರು. ಅಪೊಸ್ತಲ ಪೌಲ ಈ ಕುರಿತು ಬರೆದದ್ದು: “ನಮಗೋಸ್ಕರ ಪ್ರಾರ್ಥಿಸುತ್ತಾ ಇರಿ; ನಾವು ಎಲ್ಲ ವಿಷಯಗಳಲ್ಲಿ ಪ್ರಾಮಾಣಿಕರಾಗಿ ನಡೆದುಕೊಳ್ಳಲು ಬಯಸುವುದರಿಂದ ನಮಗೆ ಪ್ರಾಮಾಣಿಕವಾದ ಮನಸ್ಸಾಕ್ಷಿಯಿದೆ ಎಂದು ನಾವು ನಂಬುತ್ತೇವೆ.” (ಇಬ್ರಿ. 13:18) “ನಾವು ಎಲ್ಲ ವಿಷಯಗಳಲ್ಲಿ ಪ್ರಾಮಾಣಿಕರಾಗಿ ನಡೆದುಕೊಳ್ಳಲು ಬಯಸುವುದರಿಂದ” ನಮ್ಮ ಕ್ರೈಸ್ತ ಸಹೋದರರನ್ನು ಸ್ವಾರ್ಥ ಲಾಭಕ್ಕಾಗಿ ಬಳಸಿಕೊಳ್ಳುವುದಿಲ್ಲ. ಉದಾಹರಣೆಗೆ, ಅವರು ನಮ್ಮಲ್ಲಿ ಕೆಲಸಕ್ಕಿರುವಲ್ಲಿ ಅವರೊಂದಿಗೆ ನ್ಯಾಯವಾಗಿ ನಡೆದುಕೊಳ್ಳಬೇಕು. ಮಾಡಿಕೊಂಡಿರುವ ಒಪ್ಪಂದಕ್ಕೆ ಸರಿಯಾಗಿ ಸಂಬಳ ಕೊಡಬೇಕು. ಕ್ರೈಸ್ತರಾದ ನಾವು, ನಮ್ಮ ಕೈಕೆಳಗೆ ಕೆಲಸಮಾಡುವವರೊಂದಿಗೆ ಮಾತ್ರವಲ್ಲ ಎಲ್ಲರೊಂದಿಗೂ ಪ್ರಾಮಾಣಿಕರಾಗಿರಬೇಕು. ಒಂದುವೇಳೆ ನಾವು ಕ್ರೈಸ್ತ ಸಹೋದರನೊಬ್ಬನ ಹತ್ತಿರ ಕೆಲಸಕ್ಕಿರುವಲ್ಲಿ ಆಗೇನು? ಮಾಲೀಕ ನಮ್ಮ ಸಹೋದರನೆಂಬ ಕಾರಣಕ್ಕೆ ನಮ್ಮನ್ನು ಇತರರಿಗಿಂತ ವಿಶೇಷವಾಗಿ ಉಪಚರಿಸಬೇಕೆಂದು ಅಪೇಕ್ಷಿಸಬಾರದು.
13 ಯೆಹೋವನ ಸಾಕ್ಷಿಗಳ ಪ್ರಾಮಾಣಿಕತೆಯನ್ನು ಲೋಕದ ಜನರು ಅನೇಕ ಬಾರಿ ಪ್ರಶಂಸಿಸುತ್ತಾರೆ. ಉದಾಹರಣೆಗೆ, ಒಂದು ದೊಡ್ಡ ಕಂಪನಿಯ ಡೈರೆಕ್ಟರರು ಯೆಹೋವನ ಸಾಕ್ಷಿಗಳ ಬಗ್ಗೆ “ನೀವು ಒಪ್ಪಂದ ಮಾಡಿದ ಮೇಲೆ ಮಾತು ಬದಲಾಯಿಸುವುದಿಲ್ಲ. ಹೇಳಿದಂತೆ ಮಾಡ್ತೀರಿ” ಎಂದು ತಿಳಿಸಿದರು. (ಕೀರ್ತ. 15:4) ಇಂಥ ಸುನಡತೆ ಯೆಹೋವನೊಟ್ಟಿಗಿನ ನಮ್ಮ ಸ್ನೇಹವನ್ನು ಕಾಪಾಡುತ್ತದೆ. ಮಾತ್ರವಲ್ಲ ನಮ್ಮ ತಂದೆಯಾದ ಆತನಿಗೆ ಸ್ತುತಿಯನ್ನು ತರುತ್ತದೆ.
ಯೆಹೋವನ ಸ್ನೇಹಿತರಾಗಲು ಇತರರಿಗೆ ನೆರವಾಗಿ
14, 15. ಸೇವೆಯಲ್ಲಿ ಸಿಗುವ ಜನರಿಗೆ ಯೆಹೋವನ ಸ್ನೇಹಿತರಾಗಲು ನಾವು ಹೇಗೆ ನೆರವಾಗಬಲ್ಲೆವು?
14 ಸೇವೆಯಲ್ಲಿ ನಾವು ಭೇಟಿಮಾಡುವ ಅನೇಕ ಜನರು ದೇವರಿದ್ದಾನೆ ಎಂದು ನಂಬುತ್ತಾರಾದರೂ ಆತನು ನಮ್ಮ ಅತ್ಯಾಪ್ತ ಸ್ನೇಹಿತನಾಗಲು ಸಾಧ್ಯ ಎಂದವರಿಗೆ ಅನಿಸುವುದಿಲ್ಲ. ಅವರಿಗೆ ನಾವು ಹೇಗೆ ಸಹಾಯ ಮಾಡಬಲ್ಲೆವು? ಯೇಸು ಎಪ್ಪತ್ತು ಮಂದಿಯನ್ನು ಸುವಾರ್ತೆ ಸಾರಲು ಇಬ್ಬಿಬ್ಬರಾಗಿ ಕಳುಹಿಸುವಾಗ ಯಾವ ನಿರ್ದೇಶನ ಕೊಟ್ಟನೆಂದು ನೆನಪಿಸಿಕೊಳ್ಳಿ. ಅವನಂದದ್ದು: “ನೀವು ಯಾವುದಾದರೊಂದು ಮನೆಯೊಳಗೆ ಹೋಗುವಾಗ, ‘ಈ ಮನೆಗೆ ಶಾಂತಿಯಿರಲಿ’ ಎಂದು ಮೊದಲು ಹೇಳಿರಿ. ಶಾಂತಿಪಾತ್ರನು ಅಲ್ಲಿರುವುದಾದರೆ ನಿಮ್ಮ ಶಾಂತಿಯು ಅವನ ಮೇಲೆ ನೆಲೆಸುವುದು. ಇಲ್ಲದಿದ್ದರೆ ಅದು ನಿಮಗೆ ಹಿಂದಿರುಗುವುದು.” (ಲೂಕ 10:5, 6) ಇದರಿಂದ ಏನು ತಿಳಿಯುತ್ತೇವೆ? ನಾವು ಸ್ನೇಹಪರರಾಗಿ ಮಾತನಾಡುವ ಮೂಲಕ ಜನರನ್ನು ಸತ್ಯದ ಕಡೆಗೆ ಆಕರ್ಷಿಸಬಹುದು. ವಿರೋಧ ಮಾಡುವವರಿಗೆ ಸ್ನೇಹಭಾವ ತೋರಿಸುವಾಗ ಅದು ಅವರನ್ನು ತಣ್ಣಗಾಗಿಸಬಹುದು. ಮುಂದೆಂದಾದರೂ ಸಾಕ್ಷಿಗಳು ಅವರನ್ನು ಭೇಟಿಯಾದಾಗ ಕಿವಿಗೊಡಲು ಮನಸ್ಸು ಮಾಡಬಹುದು.
15 ಸುಳ್ಳುಧರ್ಮದಲ್ಲಿ ಮುಳುಗಿ ಹೋಗಿರುವ ಅಥವಾ ಅದರ ಆಚಾರವಿಚಾರ ಪದ್ಧತಿಗಳನ್ನು ಅನುಸರಿಸುವ ಜನರನ್ನು ಭೇಟಿಯಾದಾಗ ಸಹ ನಾವು ಸ್ನೇಹಭಾವದಿಂದ ಶಾಂತಿಯುತವಾಗಿ ಮಾತನಾಡಿಸುತ್ತೇವೆ. ಯಾರು ಆಧುನಿಕ ಸಮಾಜ ವ್ಯವಸ್ಥೆಯಿಂದ ರೋಸಿಹೋಗಿ ನಾವು ಆರಾಧಿಸುವ ದೇವರ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೋ ಅವರನ್ನು ನಮ್ಮ ಕೂಟಗಳಿಗೆ ಹಾರ್ದಿಕವಾಗಿ ಆಮಂತ್ರಿಸುತ್ತೇವೆ. ಅಂಥ ಅನೇಕ ವ್ಯಕ್ತಿಗಳ ಉದಾಹರಣೆಗಳನ್ನು “ಬದುಕನ್ನೇ ಬದಲಾಯಿಸಿತು ಬೈಬಲ್” ಎಂಬ ಲೇಖನಮಾಲೆಯಲ್ಲಿ ನಾವು ನೋಡಬಹುದು.
ನಮ್ಮ ಅತ್ಯಾಪ್ತ ಸ್ನೇಹಿತನೊಂದಿಗೆ ಕೆಲಸಮಾಡುವ ಸುಯೋಗ
16. ನಾವು ಯೆಹೋವನ ಸ್ನೇಹಿತರು ಮಾತ್ರವಲ್ಲ ಆತನ “ಜೊತೆಕೆಲಸದವರು” ಕೂಡ ಆಗಿದ್ದೇವೆ ಹೇಗೆ?
16 ಜೊತೆಯಾಗಿ ಕೆಲಸಮಾಡುವವರು ಹೆಚ್ಚಾಗಿ ಆಪ್ತ ಸ್ನೇಹಿತರಾಗುತ್ತಾರೆ. ಯೆಹೋವನಿಗೆ ಸಮರ್ಪಣೆ ಮಾಡಿಕೊಂಡಿರುವ ಎಲ್ಲರಿಗೆ ಆತನ ಸ್ನೇಹಿತರಾಗಿರುವ ಸುಯೋಗ ಮಾತ್ರವಲ್ಲ “ಜೊತೆಕೆಲಸದವರು” ಆಗಿರುವ ಅಮೂಲ್ಯ ಸದವಕಾಶವೂ ಇದೆ. (1 ಕೊರಿಂಥ 3:9 ಓದಿ.) ಹೌದು, ನಾವು ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಹೆಚ್ಚೆಚ್ಚು ಪಾಲ್ಗೊಂಡಂತೆ ನಮ್ಮ ತಂದೆಯಾದ ಯೆಹೋವನ ಸುಂದರ ಗುಣಗಳನ್ನು ಹೆಚ್ಚೆಚ್ಚು ತಿಳಿದುಕೊಳ್ಳುತ್ತೇವೆ. ಸುವಾರ್ತೆ ಸಾರುವ ಕೆಲಸವನ್ನು ಪೂರೈಸಲು ಆತನ ಪವಿತ್ರಾತ್ಮವು ನಮ್ಮನ್ನು ಹೇಗೆ ಸನ್ನದ್ಧಗೊಳಿಸುತ್ತದೆ ಎಂಬುದನ್ನು ಸ್ವತಃ ಅನುಭವದಿಂದ ತಿಳಿದುಕೊಳ್ಳುತ್ತೇವೆ.
17. ಯೆಹೋವನು ನಮ್ಮ ಸ್ನೇಹಿತ ಎಂಬುದನ್ನು ಅಧಿವೇಶನ ಹಾಗೂ ಸಮ್ಮೇಳನದ ಕಾರ್ಯಕ್ರಮಗಳು ಹೇಗೆ ತೋರಿಸಿಕೊಡುತ್ತವೆ?
17 ನಾವು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಎಷ್ಟು ಹೆಚ್ಚು ಭಾಗವಹಿಸುತ್ತೇವೋ ಅಷ್ಟು ಹೆಚ್ಚು ಯೆಹೋವನಿಗೆ ಆಪ್ತರಾಗುತ್ತೇವೆ. ಉದಾಹರಣೆಗೆ ಸೇವೆಯಲ್ಲಿ ಭಾಗವಹಿಸುವಾಗ, ವಿರೋಧಿಗಳು ಸಾರುವ ಕೆಲಸವನ್ನು ತಡೆಯದಂತೆ ಯೆಹೋವನು ಹೇಗೆ ನೋಡಿಕೊಂಡಿದ್ದಾನೆ ಎಂದು ಕಣ್ಣಾರೆ ಕಾಣುತ್ತೇವೆ. ಕಳೆದ ಕೆಲವು ವರ್ಷಗಳೆಡೆ ಹಿನ್ನೋಟ ಬೀರುವುದಾದರೆ ಯೆಹೋವನು ನಮ್ಮನ್ನು ಮಾರ್ಗದರ್ಶಿಸುತ್ತಿರುವುದು ನಮಗೆ ಸ್ಪಷ್ಟವಾಗಿ ಕಾಣುತ್ತದೆ. ಆತನು ನಮಗೆ ಸಮೃದ್ಧ ಆಧ್ಯಾತ್ಮಿಕ ಆಹಾರವನ್ನು ನಿರಂತರವಾಗಿ ಪೂರೈಸುತ್ತಿದ್ದಾನೆ. ಅಧಿವೇಶನ ಮತ್ತು ಸಮ್ಮೇಳನಗಳ ಕಾರ್ಯಕ್ರಮಗಳು ಯೆಹೋವನು ನಮ್ಮ ಸಮಸ್ಯೆಗಳನ್ನು, ನಮ್ಮ ಅಗತ್ಯಗಳನ್ನು ಎಷ್ಟು ಚೆನ್ನಾಗಿ ಅರಿತಿದ್ದಾನೆಂದು ಮನಗಾಣಿಸುತ್ತವೆ. ಒಂದು ಅಧಿವೇಶನಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸುತ್ತಾ ಒಂದು ಕುಟುಂಬ ಬರೆದ ಪತ್ರದಲ್ಲಿ ಹೀಗಿತ್ತು: “ಅಧಿವೇಶನ ಕಾರ್ಯಕ್ರಮ ನಮ್ಮ ಹೃದಯದಾಳವನ್ನು ಮುಟ್ಟಿತು. ನಮ್ಮಲ್ಲಿ ಒಬ್ಬೊಬ್ಬರನ್ನೂ ಯೆಹೋವನು ಎಷ್ಟೊಂದು ಪ್ರೀತಿಸುತ್ತಾನೆ, ನಾವು ಸಫಲರಾಗಬೇಕೆಂದು ಎಷ್ಟೊಂದು ಬಯಸುತ್ತಾನೆ ಎಂಬುದನ್ನು ನಮಗೆ ಅರ್ಥ ಮಾಡಿಸಿತು.” ಜರ್ಮನಿಯ ಒಂದು ದಂಪತಿ ಐರ್ಲೆಂಡ್ನಲ್ಲಿ ವಿಶೇಷ ಅಧಿವೇಶನಕ್ಕೆ ಹಾಜರಾಗಿದ್ದರು. ತಮ್ಮನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದ್ದಕ್ಕಾಗಿ ಹಾಗೂ ಚೆನ್ನಾಗಿ ನೋಡಿಕೊಂಡದ್ದಕ್ಕಾಗಿ ಅವರು ಗಣ್ಯತೆ ವ್ಯಕ್ತಪಡಿಸಿದರು. ಅವರು ಹೇಳಿದ ಮಾತಿನ ಒಂದು ತುಣುಕು ಇಲ್ಲಿದೆ: “ಮುಖ್ಯವಾಗಿ ನಾವು ಯೆಹೋವನಿಗೂ ಆತನ ನೇಮಿತ ರಾಜನಾದ ಯೇಸು ಕ್ರಿಸ್ತನಿಗೂ ಆಭಾರಿಗಳಾಗಿದ್ದೇವೆ. ಏಕೆಂದರೆ ಈ ಐಕ್ಯ ಜನರಲ್ಲಿ ಒಬ್ಬರಾಗಿರುವ ಸದವಕಾಶವನ್ನು ಅವರು ನಮಗೆ ದಯಪಾಲಿಸಿದ್ದಾರೆ. ನಾವು ಐಕ್ಯತೆಯ ಕುರಿತು ಮಾತಾಡುವುದಷ್ಟೇ ಅಲ್ಲ, ಅದನ್ನು ಪ್ರತಿದಿನ ಅನುಭವಿಸುತ್ತಿದ್ದೇವೆ. ಡಬ್ಲಿನ್ನಲ್ಲಿ ವಿಶೇಷ ಅಧಿವೇಶನಕ್ಕೆ ಹಾಜರಾದದ್ದು, ನಿಮ್ಮೆಲ್ಲರೊಂದಿಗೆ ಸೇರಿ ನಮ್ಮ ಮಹಾನ್ ದೇವರನ್ನು ಆರಾಧಿಸುವುದು ಎಷ್ಟು ಅಮೂಲ್ಯ ಸುಯೋಗ ಎಂಬುದನ್ನು ಸದಾ ನೆನಪಿಸುತ್ತದೆ.”
ಸ್ನೇಹಿತರಲ್ಲಿ ಸಂವಾದ ಅವಶ್ಯ
18. ಯೆಹೋವನೊಂದಿಗಿನ ನಮ್ಮ ಸಂವಾದದ ಕುರಿತು ಯಾವ ಪ್ರಶ್ನೆ ಕೇಳಿಕೊಳ್ಳಬೇಕು?
18 ಒಳ್ಳೇ ಸಂವಾದವಿದ್ದರೆ ಸ್ನೇಹಿತರು ಹೆಚ್ಚು ಆಪ್ತರಾಗುತ್ತಾರೆ. ಈಗಂತೂ ಇಂಟರ್ನೆಟ್, ಎಲೆಕ್ಟ್ರಾನಿಕ್ ಸಾಧನಗಳದ್ದೇ ರಾಜ್ಯಭಾರ. ಸೋಶಿಯಲ್ ನೆಟ್ವರ್ಕಿಂಗ್ ಬಳಸುವ ಮೂಲಕ, ಮೊಬೈಲ್ನಿಂದ ಆಗಾಗ್ಗೆ ಮೆಸೇಜ್ಗಳನ್ನು ಕಳುಹಿಸುವ ಮೂಲಕ ಸ್ನೇಹಿತರೊಂದಿಗೆ ಸಂವಾದ ನಡೆಯುತ್ತಲೇ ಇರುತ್ತದೆ. ಹೀಗಿರುವಾಗ ವೈಯಕ್ತಿಕವಾಗಿ ನಾವು ನಮ್ಮ ಅತ್ಯಾಪ್ತ ಸ್ನೇಹಿತನಾದ ಯೆಹೋವನೊಂದಿಗೆ ಎಷ್ಟು ಸಲ ಸಂವಾದ ಮಾಡುತ್ತೇವೆ? ಯೆಹೋವನು ‘ಪ್ರಾರ್ಥನೆಯನ್ನು ಕೇಳುವವನು’ ನಿಜ. (ಕೀರ್ತ. 65:2) ಆದರೆ ನಾವಾಗಿ ಎಷ್ಟು ಬಾರಿ ಆತನೊಡನೆ ಮಾತಾಡಲು ಮೊದಲ ಹೆಜ್ಜೆ ತಕ್ಕೊಳ್ಳುತ್ತೇವೆ?
19. ಯೆಹೋವನ ಬಳಿ ನಮ್ಮ ಭಾವನೆಗಳನ್ನು ಹೃದಯಬಿಚ್ಚಿ ಹೇಳಲು ಕಷ್ಟವಾಗುವಲ್ಲಿ ನಮಗೆ ಯಾವ ಸಹಾಯವಿದೆ?
19 ಯೆಹೋವನ ಸೇವಕರಲ್ಲಿ ಕೆಲವರಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದು ಕಷ್ಟದ ವಿಷಯ. ಆದರೂ ನಾವು ಪ್ರಾರ್ಥಿಸುವಾಗ ಹೃದಯಬಿಚ್ಚಿ ಮಾತಾಡಬೇಕೆಂಬುದೇ ಯೆಹೋವನ ಬಯಕೆ. (ಕೀರ್ತ. 119:145; ಪ್ರಲಾ. 3:41) ಒಂದುವೇಳೆ ನಮ್ಮ ಭಾವನೆಗಳನ್ನು ಮಾತುಗಳಲ್ಲಿ ವ್ಯಕ್ತಪಡಿಸಲು ಕಷ್ಟವಾಗುವಲ್ಲಿ ನಮಗೆ ಸಹಾಯವಿದೆ. ಪೌಲನು ರೋಮಿನ ಕ್ರೈಸ್ತರಿಗೆ ಈ ಕುರಿತು ಹೀಗೆ ಬರೆದಿದ್ದಾನೆ: “ನಾವು ಪ್ರಾರ್ಥಿಸುವ ಅಗತ್ಯವಿರುವಾಗ, ಏನು ಪ್ರಾರ್ಥಿಸಬೇಕು ಎಂಬುದು ನಮಗೆ ತಿಳಿಯದೇ ಇರುವಾಗ, ಮಾತಿನಿಂದ ವ್ಯಕ್ತಪಡಿಸಲು ಸಾಧ್ಯವಿಲ್ಲದ ನರಳಾಟದೊಂದಿಗೆ ಪವಿತ್ರಾತ್ಮವು ತಾನೇ ನಮಗೋಸ್ಕರ ಬೇಡಿಕೊಳ್ಳುತ್ತದೆ. ಹಾಗಿದ್ದರೂ ಹೃದಯಗಳನ್ನು ಪರಿಶೋಧಿಸುವಾತನಿಗೆ ಪವಿತ್ರಾತ್ಮವು ಏನನ್ನು ಬೇಡಿಕೊಳ್ಳುತ್ತಿದೆ ಎಂಬುದು ತಿಳಿದಿದೆ, ಏಕೆಂದರೆ ಅದು ದೇವರ ಚಿತ್ತಕ್ಕನುಸಾರ ಪವಿತ್ರ ಜನರಿಗೋಸ್ಕರ ಬೇಡಿಕೊಳ್ಳುತ್ತಿದೆ.” (ರೋಮ. 8:26, 27) ಬೈಬಲಿನ ಪುಸ್ತಕಗಳಾದ ಯೋಬ, ಕೀರ್ತನೆಗಳು, ಜ್ಞಾನೋಕ್ತಿಯಲ್ಲಿರುವ ನುಡಿಗಳನ್ನು ಓದಿ ಮನನ ಮಾಡುವಲ್ಲಿ ನಮ್ಮ ಅಂತರಾಳದ ಭಾವನೆಗಳನ್ನು ಯೆಹೋವನ ಮುಂದೆ ಬಿಚ್ಚಿಡಲು ನಮಗೆ ಸಹಾಯವಾಗುವುದು.
20, 21. ಫಿಲಿಪ್ಪಿ 4:6, 7ರಲ್ಲಿರುವ ಪೌಲನ ಮಾತುಗಳು ನಮಗೆ ಹೇಗೆ ಸಾಂತ್ವನ ಕೊಡುತ್ತವೆ?
20 ನಾವು ಸಂಕಷ್ಟಕರ ಪರಿಸ್ಥಿತಿಯಲ್ಲಿರುವಾಗ ಪೌಲನು ಫಿಲಿಪ್ಪಿಯವರಿಗೆ ಬರೆದ ಈ ದೇವಪ್ರೇರಿತ ಸಲಹೆಯನ್ನು ಯಾವಾಗಲೂ ಮನಸ್ಸಿನಲ್ಲಿಡೋಣ: “ಯಾವ ವಿಷಯದ ಕುರಿತಾಗಿಯೂ ಚಿಂತೆಮಾಡಬೇಡಿರಿ; ಎಲ್ಲ ವಿಷಯಗಳಲ್ಲಿ ಕೃತಜ್ಞತಾಸ್ತುತಿಯಿಂದ ಕೂಡಿದ ಪ್ರಾರ್ಥನೆ ಮತ್ತು ಯಾಚನೆಗಳಿಂದ ನಿಮ್ಮ ಬಿನ್ನಹಗಳನ್ನು ದೇವರಿಗೆ ತಿಳಿಯಪಡಿಸಿರಿ.” ನಮ್ಮ ಅತ್ಯಾಪ್ತ ಮಿತ್ರನೊಂದಿಗೆ ಈ ರೀತಿ ಹೃದಯ ತೆರೆದು ಮಾತಾಡುವಾಗ ನಮಗೆ ಸಾಂತ್ವನ ಮತ್ತು ಉಪಶಮನ ದೊರೆಯುವುದು. ಪೌಲನು ಹೇಳಿದ್ದು: “ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ನಿಮ್ಮ ಮಾನಸಿಕ ಶಕ್ತಿಗಳನ್ನೂ ಕ್ರಿಸ್ತ ಯೇಸುವಿನ ಮೂಲಕ ಕಾಯುವುದು.” (ಫಿಲಿ. 4:6, 7) ನಮ್ಮ ಹೃದಯವನ್ನೂ ಮಾನಸಿಕ ಶಕ್ತಿಗಳನ್ನೂ ಕಾಯುವ ಈ ಹೋಲಿಸಲಸಾಧ್ಯವಾದ ‘ದೇವಶಾಂತಿಯನ್ನು’ ದೇವರು ನಮಗೆ ಕೊಡುವುದಕ್ಕಾಗಿ ಯಾವಾಗಲೂ ಆತನಿಗೆ ಆಭಾರಿಗಳಾಗಿರೋಣ.
21 ಪ್ರಾರ್ಥನೆ ನಮಗೆ ಯೆಹೋವನೊಂದಿಗೆ ಸ್ನೇಹವನ್ನು ಬೆಳೆಸಲು ಸಹಾಯ ಮಾಡುತ್ತದೆ. ಹಾಗಾಗಿ ‘ಎಡೆಬಿಡದೆ ಪ್ರಾರ್ಥನೆ ಮಾಡೋಣ.’ (1 ಥೆಸ. 5:17) ಈ ಲೇಖನದ ಅಧ್ಯಯನವು ದೇವರೊಂದಿಗಿನ ನಮ್ಮ ಅಮೂಲ್ಯ ಸಂಬಂಧವನ್ನು ಬಲಗೊಳಿಸಲಿ. ಆತನ ನೀತಿಯ ಮಟ್ಟಗಳ ಪ್ರಕಾರ ನಡೆಯುವ ನಮ್ಮ ದೃಢಸಂಕಲ್ಪವನ್ನು ಇನ್ನೂ ಗಟ್ಟಿಗೊಳಿಸಲಿ. ಮಾತ್ರವಲ್ಲ ಯೆಹೋವನು ನಮ್ಮ ತಂದೆ, ನಮ್ಮ ದೇವರು ಹಾಗೂ ನಮ್ಮ ಮಿತ್ರನಾಗಿರುವುದರಿಂದ ನಮಗೆ ಲಭಿಸುತ್ತಿರುವ ಆಶೀರ್ವಾದಗಳ ಕುರಿತು ಧ್ಯಾನಿಸಲು ನಾವು ಸಮಯ ಮಾಡಿಕೊಳ್ಳೋಣ.