ಯೆಹೋವನ ಮಹಾನ್ ನಾಮವನ್ನು ಘನಪಡಿಸಿ
ಯೆಹೋವನ ಮಹಾನ್ ನಾಮವನ್ನು ಘನಪಡಿಸಿ
“ಎಂದೆಂದಿಗೂ ನಿನ್ನ ನಾಮವನ್ನು ಘನಪಡಿಸುವೆನು.”—ಕೀರ್ತ. 86:12.
ವಿವರಿಸುವಿರಾ?
ದೇವರ ಹೆಸರನ್ನು ತಿಳಿದುಕೊಳ್ಳುವುದು ಎಂದರೇನು?
ಯೆಹೋವನು ತನ್ನ ಹೆಸರನ್ನು ಹಂತಹಂತವಾಗಿ ಹೇಗೆ ಪ್ರಕಟಪಡಿಸಿದ್ದಾನೆ?
ಯೆಹೋವನ ಹೆಸರಿನಲ್ಲಿ ನಡೆಯುವುದು ಹೇಗೆ?
1, 2. ಕ್ರೈಸ್ತಪ್ರಪಂಚದ ಚರ್ಚುಗಳಿಗೆ ತದ್ವಿರುದ್ಧವಾಗಿ ಯೆಹೋವನ ಸಾಕ್ಷಿಗಳಿಗೆ ದೇವರ ನಾಮದ ಕುರಿತು ಯಾವ ದೃಷ್ಟಿಕೋನವಿದೆ?
ಕ್ರೈಸ್ತಪ್ರಪಂಚದ ಹೆಚ್ಚಿನ ಚರ್ಚುಗಳು ದೇವರ ಹೆಸರನ್ನು ಬಳಸುವುದೇ ಇಲ್ಲ. ಉದಾಹರಣೆಗೆ, ಒಂದು ಬೈಬಲ್ ಭಾಷಾಂತರದ ಮುನ್ನುಡಿಯಲ್ಲಿ ಹೀಗೆ ಹೇಳಲಾಗಿದೆ: “ಏಕಮಾತ್ರ ದೇವರನ್ನು ಹೆಸರಿನಿಂದ ಸಂಬೋಧಿಸುವುದು ಕ್ರೈಸ್ತ ಚರ್ಚಿನ ಸಾರ್ವತ್ರಿಕ ನಂಬಿಕೆಗೆ ಯೋಗ್ಯವಾದದ್ದಲ್ಲ.”—ರಿವೈಸ್ಡ್ ಸ್ಟ್ಯಾಂಡರ್ಡ್ ವರ್ಷನ್.
2 ಇದಕ್ಕೆ ತದ್ವಿರುದ್ಧವಾಗಿ ಯೆಹೋವನ ಸಾಕ್ಷಿಗಳಾಗಿರುವ ನಾವು ದೇವರ ಹೆಸರಿನಿಂದ ಕರೆಯಲ್ಪಡಲು ಹಾಗೂ ಆ ನಾಮವನ್ನು ಘನತೆಗೇರಿಸಲು ಹೆಮ್ಮೆಪಡುತ್ತೇವೆ. (ಕೀರ್ತನೆ 86:12; ಯೆಶಾಯ 43:10 ಓದಿ.) ದೇವರ ಹೆಸರಿನ ಅರ್ಥ ತಿಳಿದುಕೊಂಡಿರುವುದು ಹಾಗೂ ಆ ಹೆಸರು ಪವಿತ್ರಗೊಳ್ಳುವುದು ಎಷ್ಟು ಪ್ರಾಮುಖ್ಯವೆಂದು ತಿಳಿದಿರುವುದು ನಮ್ಮ ಸುಯೋಗವಾಗಿದೆ. (ಮತ್ತಾ. 6:9) ಆದರೆ ಇದೆಲ್ಲವನ್ನು ನಾವು ಮಾಮೂಲಿ ವಿಷಯವಾಗಿ ನೆನಸದಂತೆ ಜಾಗ್ರತೆ ವಹಿಸಬೇಕು. ನಾವೀಗ ದೇವರ ನಾಮದ ಕುರಿತಾದ ಮೂರು ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ನೋಡೋಣ: ದೇವರ ಹೆಸರನ್ನು ತಿಳಿದುಕೊಳ್ಳುವುದು ಎಂದರೇನು? ಯೆಹೋವನು ತನ್ನ ಮಹೋನ್ನತ ಹೆಸರಿಗೆ ತಕ್ಕಂತೆ ಹೇಗೆ ನಡೆದಿದ್ದಾನೆ, ಮತ್ತು ಅದರಿಂದ ತನ್ನ ನಾಮದ ಘನತೆಯನ್ನು ಹೇಗೆ ಹೆಚ್ಚಿಸಿದ್ದಾನೆ? ನಾವು ಯೆಹೋವನ ನಾಮದಲ್ಲಿ ನಡೆಯುವುದು ಹೇಗೆ?
ದೇವರ ಹೆಸರನ್ನು ತಿಳಿದುಕೊಳ್ಳುವುದು ಎಂದರೇನು?
3. ದೇವರ ಹೆಸರನ್ನು ತಿಳಿದುಕೊಳ್ಳುವುದು ಎಂದರೇನು?
3 ದೇವರ ಹೆಸರನ್ನು ತಿಳಿದುಕೊಳ್ಳುವುದು ಎಂದರೆ ಕೇವಲ “ಯೆಹೋವ” ಎಂಬ ಪದವನ್ನು ತಿಳಿದಿರುವುದಲ್ಲ. ಬದಲಿಗೆ ಆತನು ಯಾವ ರೀತಿಯ ವ್ಯಕ್ತಿಯಾಗಿದ್ದಾನೆ, ಅಂದರೆ ಆತನ ಗುಣಗಳು, ಉದ್ದೇಶ, ಚಟುವಟಿಕೆಗಳನ್ನು ತಿಳಿದಿರುವುದಾಗಿದೆ. ಇದರಲ್ಲಿ ಆತನು ತನ್ನ ಸೇವಕರೊಂದಿಗೆ ವ್ಯವಹರಿಸಿದ ರೀತಿಯನ್ನು ತಿಳಿಯುವುದೂ ಸೇರಿದೆ. ಈ ಎಲ್ಲ ಮಾಹಿತಿಯನ್ನು ಆತನು ಬೈಬಲಿನಲ್ಲಿ ದಾಖಲಿಸಿಟ್ಟಿದ್ದಾನೆ. ಯೆಹೋವನು ತನ್ನ ಉದ್ದೇಶಗಳನ್ನು ಪೂರೈಸುತ್ತಾ ಬಂದಂತೆ, ತನ್ನ ಬಗೆಗಿನ ಜ್ಞಾನವನ್ನು ಜನರಿಗೆ ಹಂತಹಂತವಾಗಿ ತಿಳಿಸುತ್ತಾ ಬಂದಿದ್ದಾನೆ. (ಜ್ಞಾನೋ. 4:18) ಮೊದಲ ಮಾನವ ದಂಪತಿಯಾದ ಆದಾಮ ಹವ್ವರಿಗೆ ಆತನು ತನ್ನ ಹೆಸರನ್ನು ಬಹಿರಂಗಪಡಿಸಿದನು. ಆದ್ದರಿಂದಲೇ ಹವ್ವಳು ಕಾಯಿನನಿಗೆ ಜನ್ಮಕೊಟ್ಟಾಗ ಆ ಹೆಸರನ್ನು ಉಪಯೋಗಿಸಿದ್ದರ ದಾಖಲೆಯಿದೆ. (ಆದಿ. 4:1) ನಂಬಿಗಸ್ತ ಪೂರ್ವಜರಾದ ನೋಹ, ಅಬ್ರಹಾಮ, ಇಸಾಕ, ಯಾಕೋಬರಿಗೂ ಆ ಹೆಸರು ತಿಳಿದಿತ್ತು. ಮಾತ್ರವಲ್ಲ ದೇವರು ಅವರನ್ನು ಆಶೀರ್ವದಿಸುತ್ತಾ ಪರಾಮರಿಸುತ್ತಾ ತನ್ನ ಉದ್ದೇಶಗಳನ್ನು ತಿಳಿಸುತ್ತಾ ಇದ್ದಾಗ ಆತನ ನಾಮದ ಮೇಲೆ ಅವರಿಗಿದ್ದ ಗಣ್ಯತೆ ಇನ್ನೂ ಹೆಚ್ಚಾಯಿತು. ಮೋಶೆಗಂತೂ ದೇವರು ತನ್ನ ನಾಮದ ಕುರಿತು ವಿಶೇಷ ತಿಳಿವಳಿಕೆ ಕೊಟ್ಟನು.
4. (1) ದೇವರ ಹೆಸರೇನೆಂದು ಮೋಶೆ ಕೇಳಿದ್ದೇಕೆ? (2) ಮೋಶೆಯ ಚಿಂತೆ ಏಕೆ ತಕ್ಕದ್ದಾಗಿತ್ತು?
4 ವಿಮೋಚನಕಾಂಡ 3:10-15 ಓದಿ. ಮೋಶೆಗಾಗ 80 ವರ್ಷ. ಆಗ ಯೆಹೋವನು ಅವನಿಗೆ ತನ್ನ “ಜನರಾಗಿರುವ ಇಸ್ರಾಯೇಲ್ಯರನ್ನು ಐಗುಪ್ತದೇಶದಿಂದ ಹೊರಗೆ ಬರಮಾಡುವ” ಭಾರೀ ಜವಾಬ್ದಾರಿ ವಹಿಸಿದನು. ಆ ಸಂದರ್ಭದಲ್ಲಿ ಮೋಶೆ ಗೌರವಭರಿತವಾಗಿ ಒಂದು ಅರ್ಥಪೂರ್ಣ ಪ್ರಶ್ನೆಯನ್ನು ದೇವರಿಗೆ ಕೇಳಿದನು. ಅದೇನು ಗೊತ್ತೆ? ‘ನಿನ್ನ ಹೆಸರೇನು?’ ಎಂದು. ದೇವರು ತನ್ನ ಹೆಸರನ್ನು ಎಷ್ಟೋ ವರ್ಷಗಳ ಮುಂಚೆಯೇ ತಿಳಿಸಿದ್ದನಲ್ಲ, ಅಂದಮೇಲೆ ಮೋಶೆ ಹೀಗೇಕೆ ಕೇಳಿದನು ಅಂತೀರಾ? ಮೋಶೆಗೆ ಕೇವಲ ದೇವರ ಹೆಸರು ತಿಳಿಯಬೇಕೆಂದಲ್ಲ, ಆ ಹೆಸರಿನ ಹಿಂದಿರುವ ವ್ಯಕ್ತಿ ಅಥವಾ ವ್ಯಕ್ತಿತ್ವದ ಕುರಿತು ತಿಳಿಯಬೇಕಿತ್ತು. ಹೀಗೆ ಅದು ತಮ್ಮ ಪಿತೃಗಳ ದೇವರು ತಮ್ಮನ್ನು ನಿಜವಾಗಿಯೂ ಬಿಡುಗಡೆ ಮಾಡುತ್ತಾನೆಂಬ ಭರವಸೆಯನ್ನು ಇಸ್ರಾಯೇಲ್ಯರಿಗೆ ಕೊಡುತ್ತದೆ ಎಂದು ಮೋಶೆ ಯೋಚಿಸಿದನು. ಮೋಶೆಯ ಯೋಚನೆ ಸರಿಯೇ ಆಗಿತ್ತು. ಏಕೆಂದರೆ ಇಸ್ರಾಯೇಲ್ಯರು ಈಜಿಪ್ಟಿನಲ್ಲಿ ಅನೇಕ ವರ್ಷಗಳಿಂದ ದಾಸರಾಗಿ ದುಡಿಯುತ್ತಿದ್ದರು. ಹಾಗಾಗಿ ಇಷ್ಟು ವರ್ಷ ಬಿಡುಗಡೆ ಮಾಡದ ಯೆಹೋವನು ಈಗ ಬಿಡುಗಡೆ ಮಾಡುತ್ತಾನಾ ಎಂಬ ಪ್ರಶ್ನೆ ಅವರಲ್ಲಿ ಬರುವ ಸಾಧ್ಯತೆಯಿತ್ತು. ಅಷ್ಟೆ ಅಲ್ಲದೆ ಕೆಲವು ಇಸ್ರಾಯೇಲ್ಯರು ಈಜಿಪ್ಟಿನ ದೇವರುಗಳನ್ನು ಪೂಜಿಸಲು ಶುರುಮಾಡಿದ್ದರು.—ಯೆಹೆ. 20:7, 8.
5. ಯೆಹೋವನು ಮೋಶೆಗೆ ತನ್ನ ಹೆಸರಿನ ಕುರಿತು ಯಾವ ತಿಳಿವಳಿಕೆಯನ್ನು ಕೊಟ್ಟನು?
5 ಮೋಶೆಯ ಪ್ರಶ್ನೆಗೆ ದೇವರು ಏನೆಂದು ಉತ್ತರಕೊಟ್ಟನು? ದೇವರು ಅದಕ್ಕೆ, “ಇರುವಾತನೆಂಬವನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದನು” ಎಂದು ಇಸ್ರಾಯೇಲ್ಯರಿಗೆ ಹೇಳು ಎಂದನು. * ‘ನಿಮ್ಮ ಪಿತೃಗಳ’ “ದೇವರಾಗಿರುವ ಯೆಹೋವನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ” ಎಂದು ಹೇಳುವಂತೆ ಸಹ ದೇವರು ಮೋಶೆಗೆ ಅಂದನು. ಇದರಿಂದ ದೇವರು ಏನನ್ನು ಸ್ಪಷ್ಟಪಡಿಸಿದನು? ‘ನನ್ನ ಉದ್ದೇಶವನ್ನು ಪೂರೈಸಲು ನಾನು ಏನಾಗಬೇಕೆಂದು ಬಯಸುವೆನೋ ಅದಾಗಿ ಪರಿಣಮಿಸುತ್ತೇನೆ’ ಎಂದು ತಿಳಿಯಪಡಿಸಿದನು. ಅಂದರೆ ಕೊಟ್ಟ ಮಾತಿಗೆ ಆತನು ಯಾವತ್ತೂ ತಪ್ಪನು. ಆದ್ದರಿಂದಲೇ ಯೆಹೋವನು ವಚನ 15ರಲ್ಲಿ ಹೀಗೆ ಹೇಳಿದನು: “ಇದು ಸದಾಕಾಲಕ್ಕೂ ನನ್ನ ಹೆಸರು; ಇದು ತಲತಲಾಂತರಕ್ಕೂ ನನ್ನನ್ನು ಸ್ಮರಿಸಬೇಕಾದ ನಾಮ.” ಇದು ಮೋಶೆಯ ನಂಬಿಕೆಯನ್ನು ಇನ್ನಷ್ಟು ಬಲಗೊಳಿಸಿ, ಭಯಭಕ್ತಿಯನ್ನು ಹೆಚ್ಚಿಸಿತು ಎನ್ನುವುದರಲ್ಲಿ ಸಂದೇಹವಿಲ್ಲ.
ಯೆಹೋವನು ತನ್ನ ಹೆಸರಿಗೆ ತಕ್ಕಂತೆ ನಡೆದಿದ್ದಾನೆ
6, 7. ಯೆಹೋವನು ಹೇಗೆ ಪೂರ್ಣವಾಗಿ ತನ್ನ ಹೆಸರಿಗೆ ತಕ್ಕಂತೆ ನಡೆದನು?
6 ಮೋಶೆಗೆ ನೇಮಕ ಕೊಟ್ಟ ನಂತರ ಯೆಹೋವನು ತನ್ನ ಹೆಸರಿಗೆ ತಕ್ಕಂತೆ ನಡೆದನು. ಹೇಳಿದಂತೆಯೇ ಇಸ್ರಾಯೇಲ್ಯರ ವಿಮೋಚಕನಾದನು. ವಿನಾಶಕಾರಿ ಬಾಧೆಗಳನ್ನು ತರುವ ಮೂಲಕ ಐಗುಪ್ತ್ಯರನ್ನು ನಾಚಿಕೆಪಡಿಸಿದನು. ಅವರ ದೇವರುಗಳು ಮತ್ತು ಫರೋಹನು ಕೈಲಾಗದವರೆಂದು ರುಜುಪಡಿಸಿದನು. (ವಿಮೋ. 12:12) ನಂತರ ಕೆಂಪು ಸಮುದ್ರವನ್ನು ವಿಭಾಗಿಸಿ ಅದರ ಮಧ್ಯೆ ಇಸ್ರಾಯೇಲ್ಯರನ್ನು ನಡೆಸಿದನು. ಫರೋಹನನ್ನೂ ಅವನ ಮಿಲಿಟರಿ ಸೇನೆಯನ್ನೂ ಅದೇ ಸಮುದ್ರದಲ್ಲಿ ಮುಳುಗಿಸಿಬಿಟ್ಟನು. (ಕೀರ್ತ. 136:13-15) “ಘೋರವಾದ ಮಹಾರಣ್ಯ”ದಲ್ಲಿ ಒಬ್ಬಿಬ್ಬರಿಗಲ್ಲ, ಇಪ್ಪತ್ತರಿಂದ ಮೂವತ್ತು ಲಕ್ಷಕ್ಕಿಂತ ಹೆಚ್ಚು ಜನರಿಗೆ ಆಹಾರ, ನೀರನ್ನು ಒದಗಿಸುತ್ತಾ ಅವರ ಜೀವರಕ್ಷಕನಾದನು. ಅವರ ಉಡುಪು ಮತ್ತು ಕೆರಗಳು ಸವೆದು ಹೋಗದಂತೆ ನೋಡಿಕೊಂಡನು. (ಧರ್ಮೋ. 1:19; 29:5) ಯೆಹೋವನು ತನ್ನ ಅಪ್ರತಿಮ ನಾಮಕ್ಕೆ ತಕ್ಕದ್ದಾಗಿ ನಡೆಯುವುದನ್ನು ಯಾರೂ ಯಾವುದೂ ತಡೆಹಿಡಿಯಲಾರದು. ಹಾಗಾಗಿಯೇ ಯೆಹೋವನು ಯೆಶಾಯನ ಮೂಲಕ ಹೀಗೆ ಹೇಳಿದ್ದಾನೆ: “ನಾನೇ, ನಾನೇ ಯೆಹೋವನು; ನಾನು ಹೊರತು ಯಾವ ರಕ್ಷಕನೂ ಇಲ್ಲ.”—ಯೆಶಾ. 43:11.
7 ಮೋಶೆಯ ನಂತರ ಇಸ್ರಾಯೇಲ್ಯರ ನಾಯಕನಾದ ಯೆಹೋಶುವನು ಸಹ ಯೆಹೋವ ದೇವರು ಈಜಿಪ್ಟಿನಲ್ಲಿ ಹಾಗೂ ಅರಣ್ಯದಲ್ಲಿ ಮಾಡಿದ ಭಯಪ್ರೇರಕ ಕಾರ್ಯಗಳನ್ನು ಕಣ್ಣಾರೆ ಕಂಡಿದ್ದನು. ಆದ್ದರಿಂದಲೇ ತನ್ನ ಜೀವನದ ಅಂತಿಮ ಕ್ಷಣಗಳಲ್ಲಿ ಪೂರ್ಣ ನಿಶ್ಚಿತಾಭಿಪ್ರಾಯದಿಂದ ಇಸ್ರಾಯೇಲ್ಯರಿಗೆ ಹೇಳಿದ್ದು: “ನಿಮ್ಮ ದೇವರಾದ ಯೆಹೋವನು ನಿಮ್ಮ ವಿಷಯದಲ್ಲಿ ನುಡಿದ ಆಶೀರ್ವಚನಗಳಲ್ಲಿ ಒಂದೂ ವ್ಯರ್ಥವಾಗಲಿಲ್ಲ; ಎಲ್ಲವೂ ತಪ್ಪದೆ ನೆರವೇರಿದವೆಂಬದು ನಿಮಗೆ ಮಂದಟ್ಟಾಯಿತಲ್ಲಾ.” (ಯೆಹೋ. 23:14) ಯೆಹೋವನು ಚಾಚೂತಪ್ಪದೆ ತಾನು ಹೇಳಿದಂತೆ ನಡೆದನು.
8. ನಮ್ಮ ಸಮಯದಲ್ಲಿ ಹೇಗೆ ಯೆಹೋವನು ತನ್ನ ನಾಮಕ್ಕೆ ತಕ್ಕಂತೆ ನಡೆಯುತ್ತಿದ್ದಾನೆ?
8 ಇಂದು ಸಹ ಯೆಹೋವನು ತಾನು ಹೇಳಿದಂತೆ ನಡೆಯುತ್ತಿದ್ದಾನೆ. ತನ್ನ ಮಗನ ಮೂಲಕ ಆತನು ಒಂದು ವಿಷಯವನ್ನು ಮುಂತಿಳಿಸಿದ್ದನು. ಕಡೇದಿವಸಗಳಲ್ಲಿ ದೇವರ ರಾಜ್ಯದ ಸಂದೇಶವು “ನಿವಾಸಿತ ಭೂಮಿಯಾದ್ಯಂತ” ಸಾರಲ್ಪಡುವುದೆಂದು ಹೇಳಿದ್ದನು. (ಮತ್ತಾ. 24:14) ಇಂಥ ಒಂದು ಮಹತ್ತಾದ ಕೆಲಸವನ್ನು ಸರ್ವಶಕ್ತನಾದ ಯೆಹೋವ ದೇವರು ಬಿಟ್ಟು ಇನ್ಯಾರು ತಾನೆ ಮುಂತಿಳಿಸಬಲ್ಲರು? ಯೆಹೋವನಲ್ಲದೆ ಇನ್ಯಾರು ಇಂಥ ಕೆಲಸ ಪೂರ್ಣವಾಗಿ ಆಗುವಂತೆ ನೋಡಿಕೊಳ್ಳಬಲ್ಲರು? ಅದೂ ‘ಹೆಚ್ಚು ವಿದ್ಯಾಭ್ಯಾಸವಿಲ್ಲದ ಸಾಧಾರಣ ವ್ಯಕ್ತಿಗಳ’ ಮೂಲಕ? (ಅ. ಕಾ. 4:13) ನಾವು ಈ ಸಾರುವ ಕೆಲಸದಲ್ಲಿ ಪಾಲ್ಗೊಳ್ಳುವಾಗ ಬೈಬಲ್ ಪ್ರವಾದನೆಯ ನೆರವೇರಿಕೆಯಲ್ಲಿ ಭಾಗಿಗಳಾಗುತ್ತೇವೆ. ಹೀಗೆ ನಾವು ನಮ್ಮ ತಂದೆಯಾದ ಯೆಹೋವನನ್ನು ಘನಪಡಿಸುತ್ತೇವೆ ಹಾಗೂ “ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಸ್ವರ್ಗದಲ್ಲಿ ನೆರವೇರುವ ಪ್ರಕಾರ ಭೂಮಿಯಲ್ಲಿಯೂ ನೆರವೇರಲಿ” ಎಂದು ಪ್ರಾರ್ಥಿಸುವುದು ಮಾತ್ರವಲ್ಲ ಹಾಗೆ ಆಗಬೇಕೆಂದು ನಿಜವಾಗಿಯೂ ಬಯಸುತ್ತೇವೆ ಎಂದು ತೋರಿಸಿಕೊಡುತ್ತೇವೆ.—ಮತ್ತಾ. 6:9, 10.
ದೇವರ ಮಹೋನ್ನತ ನಾಮ
9, 10. (1) ಇಸ್ರಾಯೇಲ್ಯರೊಂದಿಗಿನ ವ್ಯವಹಾರದ ಮೂಲಕ ಯೆಹೋವನು ತನ್ನ ಹೆಸರಿನ ಅರ್ಥವನ್ನು ಹೇಗೆ ಇನ್ನಷ್ಟು ಸ್ಪಷ್ಟಪಡಿಸಿದನು? (2) ಫಲಿತಾಂಶವೇನಾಯಿತು?
9 ಇಸ್ರಾಯೇಲ್ಯರು ಈಜಿಪ್ಟಿನಿಂದ ಬಿಡುಗಡೆಯಾದ ಮೇಲೆ ಯೆಹೋವನು ಅವರಿಗಾಗಿ ಇನ್ನೊಂದು ಪಾತ್ರವಹಿಸಿದನು. ಅವರೊಂದಿಗೆ ಧರ್ಮಶಾಸ್ತ್ರದ ಒಡಂಬಡಿಕೆಯನ್ನು ಮಾಡಿ ಆ ಜನಾಂಗದ ಸಾಂಕೇತಿಕ ‘ಪತಿಯಾಗಿ’ ಎಲ್ಲ ಜವಾಬ್ದಾರಿಗಳನ್ನು ತನ್ನ ಹೆಗಲ ಮೇಲೆ ತಕ್ಕೊಂಡನು. (ಯೆರೆ. 3:14) ಇಸ್ರಾಯೇಲ್ಯರು ಯೆಹೋವನ ಸಾಂಕೇತಿಕ ಪತ್ನಿಯಂತಿದ್ದರು. ಆತನ ಹೆಸರನ್ನು ಹೊಂದಿದ್ದ ಜನರಾಗಿದ್ದರು. (ಯೆಶಾ. 54:5, 6) ಅವರು ಆತನ ಆಜ್ಞೆಗಳಂತೆ ನಡೆದು ಅಧೀನರಾಗಿ ಉಳಿದಾಗೆಲ್ಲ ಯೆಹೋವನು ‘ಪತಿಯೋಪಾದಿ’ ತನ್ನ ಪಾತ್ರವನ್ನು ನಿರ್ವಹಿಸಿದನು. ಅವರನ್ನು ಆಶೀರ್ವದಿಸಿ, ಪರಾಮರಿಸಿ, ಶಾಂತಿಯನ್ನು ಅನುಗ್ರಹಿಸಿದನು. (ಅರ. 6:22-27) ಹೀಗೆ ಯೆಹೋವನ ಮಹೋನ್ನತ ನಾಮವು ಬೇರೆ ಜನಾಂಗಗಳ ಮಧ್ಯೆ ಘನತೆಗೇರಿತು. (ಧರ್ಮೋಪದೇಶಕಾಂಡ 4:5-8; ಕೀರ್ತನೆ 86:7-10 ಓದಿ.) ಅದೇ ಕಾರಣದಿಂದ ಇಸ್ರಾಯೇಲ್ಯರ ಸಮಯದಲ್ಲಿ ಅನೇಕ ವಿದೇಶೀಯರು ಯೆಹೋವನನ್ನು ಆರಾಧಿಸತೊಡಗಿದರು. ರೂತಳು ನೊವೊಮಿಗೆ ಅಂದ ಮಾತುಗಳನ್ನು ಅವರು ಅಂದಂತಿತ್ತು: “ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು.”—ರೂತ. 1:16.
10 ಇಸ್ರಾಯೇಲ್ಯರೊಂದಿಗೆ ಯೆಹೋವನ 1,500 ವರ್ಷಗಳ ವ್ಯವಹಾರವನ್ನು ನೋಡುವಾಗ ಆತನ ಅನೇಕ ಗುಣಗಳು ತೋರಿಬರುತ್ತವೆ. ಇಸ್ರಾಯೇಲ್ಯರು ಪದೇ ಪದೇ ಮೊಂಡುತನ ತೋರಿಸಿದರೂ ಯೆಹೋವನು ತಾಳ್ಮೆ ಹಾಗೂ ದೀರ್ಘಸಹನೆ ತೋರಿಸಿದನು. (ವಿಮೋ. 34:5-7) ಆದರೂ ಯೆಹೋವನ ತಾಳ್ಮೆಗೆ ಒಂದು ಮಿತಿಯಿದೆ. ಇಸ್ರಾಯೇಲ್ ಜನಾಂಗವು ದೇವರ ಮಗನನ್ನೇ ತಿರಸ್ಕರಿಸಿ ಕೊಂದಾಗ ಆತನು ಇನ್ನು ತಾಳ್ಮೆ ತೋರಿಸಲಿಲ್ಲ. (ಮತ್ತಾ. 23:37, 38) ಇದರ ನಂತರ ಇಸ್ರಾಯೇಲ್ಯರು ಯೆಹೋವನ ಹೆಸರನ್ನು ಪ್ರತಿನಿಧಿಸುವ ಜನರಾಗಿ ಉಳಿಯಲಿಲ್ಲ. ಅವರು ಒಣಗಿಹೋದ ಮರದಂತಾದರು. ಆಧ್ಯಾತ್ಮಿಕವಾಗಿ ನಿರ್ಜೀವ ಸ್ಥಿತಿಗೆ ತಲಪಿದರು. (ಲೂಕ 23:31) ಅನಂತರ ದೇವರ ಹೆಸರಿನ ಕಡೆಗೆ ಅವರಿಗಿದ್ದ ಮನೋಭಾವದಲ್ಲಿ ಬದಲಾವಣೆ ಆಯಿತಾ?
11. ಯೆಹೂದಿ ಜನಾಂಗವು ದೇವರ ನಾಮವನ್ನು ಧರಿಸುವ ಸುಯೋಗವನ್ನು ಕಳೆದುಕೊಂಡದ್ದು ಹೇಗೆ?
11 ಇತಿಹಾಸ ತೋರಿಸುವಂತೆ ಸಮಯಾನಂತರ ಯೆಹೂದ್ಯರಲ್ಲಿ ದೇವರ ಹೆಸರಿನ ಕುರಿತು ಒಂದು ಮೂಢನಂಬಿಕೆ ಹುಟ್ಟಿತು. ದೇವರ ಹೆಸರನ್ನು ಉಚ್ಚರಿಸಬಾರದ ಒಂದು ವಿಷಯದಂತೆ ನೋಡತೊಡಗಿದರು. (ವಿಮೋ. 20:7) ಮೆಲ್ಲಮೆಲ್ಲನೆ ಯೆಹೂದಿ ಮತದಿಂದ ದೇವರ ನಾಮ ಹೇಳಹೆಸರಿಲ್ಲದೆ ಹೋಯಿತು. ಈ ಜನರು ತನ್ನ ಹೆಸರನ್ನು ಅಷ್ಟು ಅಗೌರವದಿಂದ ಉಪಚರಿಸುವುದನ್ನು ನೋಡಿ ಯೆಹೋವನು ಎಷ್ಟು ನೊಂದುಕೊಂಡಿರಬೇಕು. (ಕೀರ್ತ. 78:40, 41) “ಸ್ವಗೌರವವನ್ನು ಕಾಪಾಡಿಕೊಳ್ಳುವವನು ಎಂಬ ಹೆಸರುಳ್ಳ” ಯೆಹೋವನು ತನ್ನನ್ನು ತ್ಯಜಿಸಿದ ಜನರಿಗೆ ಇನ್ನುಮುಂದೆ ತನ್ನ ಹೆಸರನ್ನು ಧರಿಸುವ ಅವಕಾಶ ಕೊಡಲು ಸಿದ್ಧನಿರಲಿಲ್ಲ. (ವಿಮೋ. 34:14) ಸೃಷ್ಟಿಕರ್ತನ ಹೆಸರನ್ನು ನಾವು ಎಷ್ಟು ಗೌರವದಿಂದ ನೋಡಬೇಕು ಎನ್ನುವುದಕ್ಕೆ ಇದೊಂದು ಒಳ್ಳೇ ನಿದರ್ಶನ!
ದೇವರ ಹೆಸರಿನಿಂದ ಕರೆಯಲ್ಪಡುವ ಹೊಸ ಜನಾಂಗ
12. ಮುಂತಿಳಿಸಲಾಗಿದ್ದ ದೇವರ ಹೆಸರಿಗಾಗಿರುವ ಜನಾಂಗ ಯಾವುದು?
12 ಯೆಹೋವನು ಯೆರೆಮೀಯನ ಮೂಲಕ ಒಂದು ಹೊಸ ವಿಷಯವನ್ನು ಮುಂತಿಳಿಸಿದನು. ಒಂದು ಹೊಸ ಜನಾಂಗದೊಂದಿಗೆ “ಹೊಸದಾಗಿರುವ ಒಂದು ಒಡಂಬಡಿಕೆಯನ್ನು” ಮಾಡಿಕೊಳ್ಳುವೆನೆಂದು ಹೇಳಿದನು. ಈ ಜನಾಂಗದಲ್ಲಿ “ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ” ಹೀಗೆ ಆ ಜನಾಂಗದ ಎಲ್ಲ ಸದಸ್ಯರು “ಯೆಹೋವನ ಜ್ಞಾನ” ಪಡೆಯುವರು ಎಂದು ಯೆರೆಮೀಯ ಮುಂತಿಳಿಸಿದನು. (ಯೆರೆ. 31:31, 33, 34) ಕ್ರಿ.ಶ. 33ರ ಪಂಚಾಶತ್ತಮದಂದು ದೇವರು ಹೊಸ ಜನಾಂಗದೊಂದಿಗೆ ಹೊಸ ಒಡಂಬಡಿಕೆ ಸ್ಥಾಪಿಸಿದಾಗ ಈ ಪ್ರವಾದನೆ ನೆರವೇರತೊಡಗಿತು. ಆ ಹೊಸ ಜನಾಂಗವೇ ‘ದೇವರ ಇಸ್ರಾಯೇಲ್.’ ಇದರಲ್ಲಿ ಯೆಹೂದ್ಯರೂ ಯೆಹೂದ್ಯರಲ್ಲದವರೂ ಸೇರಿದ್ದರು. ಇವರು ‘[ದೇವರ] ಹೆಸರಿಗಾಗಿರುವ ಪ್ರಜೆ’ ಆದರು. ಯೆಹೋವನು ಅವರನ್ನು ‘ನನ್ನ ಹೆಸರಿನಿಂದ ಕರೆಯಲ್ಪಡುವ ಜನರು’ ಎಂದು ಕರೆದನು.—ಗಲಾ. 6:16; ಅಪೊಸ್ತಲರ ಕಾರ್ಯಗಳು 15:14-17 ಓದಿ; ಮತ್ತಾ. 21:43.
13. (1) ಆರಂಭದ ಕ್ರೈಸ್ತರು ದೇವರ ಹೆಸರನ್ನು ಉಪಯೋಗಿಸಿದರೋ? ವಿವರಿಸಿ. (2) ಸುವಾರ್ತೆ ಸಾರುವಾಗ ಯೆಹೋವನ ಹೆಸರನ್ನು ಉಪಯೋಗಿಸುವ ಅವಕಾಶದ ಕುರಿತು ನಿಮಗೆ ಹೇಗನಿಸುತ್ತದೆ?
13 “[ದೇವರ] ಹೆಸರಿನಿಂದ ಕರೆಯಲ್ಪಡುವ” ಈ ಆಧ್ಯಾತ್ಮಿಕ ಜನಾಂಗದ ಸದಸ್ಯರು ದೇವರ ಹೆಸರನ್ನು ಉಪಯೋಗಿಸಿದರು. ಹೀಬ್ರು ಶಾಸ್ತ್ರದಿಂದ ವಚನಗಳನ್ನು ಉದ್ಧರಿಸುವಾಗಲೂ ಆತನ ಹೆಸರನ್ನು ಖಂಡಿತ ಉಪಯೋಗಿಸಿರಬೇಕು. * ಅಪೊಸ್ತಲ ಪೇತ್ರನು ಕ್ರಿ.ಶ. 33ರ ಪಂಚಾಶತ್ತಮದಂದು ಯೆಹೂದ್ಯರನ್ನೂ ಯೆಹೂದಿ ಮತಾವಲಂಬಿಗಳನ್ನೂ ಉದ್ದೇಶಿಸಿ ಮಾತಾಡುವಾಗ ದೇವರ ಹೆಸರನ್ನು ಅನೇಕಬಾರಿ ಉಚ್ಚರಿಸಿದನು. (ಅ. ಕಾ. 2:14, 20, 21, 25, 34) ಹೀಗೆ ಆರಂಭದ ಆ ಕ್ರೈಸ್ತರು ದೇವರ ಹೆಸರಿಗೆ ಗೌರವ ಸಲ್ಲಿಸಿದರು. ಪ್ರತಿಯಾಗಿ ಅವರು ಸುವಾರ್ತೆ ಸಾರುವುದರಲ್ಲಿ ಪಡುತ್ತಿದ್ದ ಶ್ರಮವನ್ನು ಯೆಹೋವನು ಆಶೀರ್ವದಿಸಿದನು. ಇಂದು ಸಹ ನಾವು ದೇವರ ಹೆಸರನ್ನು ಜನರಿಗೆ ಪ್ರಕಟಪಡಿಸುತ್ತಾ ಆಸಕ್ತ ಜನರಿಗೆ ಆ ಹೆಸರನ್ನು ತೋರಿಸುವಾಗ, ಸಾಧ್ಯವಾಗುವಲ್ಲಿ ಅವರ ಸ್ವಂತ ಬೈಬಲ್‌ಗಳಲ್ಲಿ ತೋರಿಸುವಾಗ ಯೆಹೋವನು ನಮ್ಮನ್ನು ಆಶೀರ್ವದಿಸುತ್ತಾನೆ. ಹೀಗೆ ಮಾಡುವ ಮೂಲಕ ನಾವು ಸತ್ಯ ದೇವರನ್ನು ಅವರಿಗೆ ಪರಿಚಯಿಸುತ್ತೇವೆ. ಇದು ನಮಗಿರುವ ಎಂಥ ದೊಡ್ಡ ಸುಯೋಗ! ಇದನ್ನು ಕೇಳಿಸಿಕೊಳ್ಳುವ ಜನರಿಗೂ ಇದು ಸುಯೋಗವೇ! ಏಕೆಂದರೆ ಯೆಹೋವನೊಂದಿಗೆ ಅತ್ಯಮೂಲ್ಯ ಸಂಬಂಧವನ್ನು ಬೆಸೆಯುವುದಕ್ಕೆ ಇದು ಅವರಿಗೆ ದಾರಿ ಮಾಡಿಕೊಡಬಹುದು. ಆ ಸಂಬಂಧ ದಿನದಿಂದ ದಿನಕ್ಕೆ ಬಲಗೊಳ್ಳುವುದು ಹಾಗೂ ನಿತ್ಯಕ್ಕೂ ಬಾಳುವುದು.
14, 15. ಧರ್ಮಭ್ರಷ್ಟತೆಯು ಹರಡಿದರೂ ಸ್ಮರಿಸಬೇಕಾದ ತನ್ನ ನಾಮವನ್ನು ಯೆಹೋವನು ಹೇಗೆ ಕಾಪಾಡಿದ್ದಾನೆ?
14 ಅನಂತರ, ಮುಖ್ಯವಾಗಿ ಅಪೊಸ್ತಲರು ಮರಣಪಟ್ಟ ಮೇಲೆ ಕ್ರೈಸ್ತ ಸಭೆಯಲ್ಲಿ ಧರ್ಮಭ್ರಷ್ಟತೆ ನುಸುಳಿತು. (2 ಥೆಸ. 2:3-7) ಸುಳ್ಳು ಬೋಧಕರು ಯೆಹೂದಿ ಪದ್ಧತಿಯನ್ನು ಸ್ವೀಕರಿಸಿ ದೇವರ ಹೆಸರಿನ ಬಳಕೆಯನ್ನು ನಿಲ್ಲಿಸಿದರು. ಆದರೆ ಯೆಹೋವನು ತನ್ನ ಹೆಸರು ಅಳಿದುಹೋಗಲು ಬಿಡುವನೇ? ಖಂಡಿತ ಇಲ್ಲ. ಆ ಸಮಯದಲ್ಲಿ ದೇವರ ಹೆಸರನ್ನು ಉಚ್ಚಾರಣೆ ಮಾಡುತ್ತಿದ್ದ ರೀತಿ ನಮಗೆ ಗೊತ್ತಿಲ್ಲದಿದ್ದರೂ ದೇವರ ಹೆಸರು ಇಂದಿನ ವರೆಗೂ ಉಳಿದಿದೆ, ನಮಗೂ ಅದು ತಿಳಿದಿದೆ. ಅನೇಕ ಬೈಬಲ್ ಭಾಷಾಂತರಗಳಲ್ಲಿ, ಬೈಬಲ್ ವಿದ್ವಾಂಸರ ಬರಹಗಳಲ್ಲಿ ದೇವರ ಹೆಸರಿದೆ. ಉದಾಹರಣೆಗೆ, ದೇವರಿಗೆ ಬಳಸುವ ಅನೇಕ ಬಿರುದುಗಳಲ್ಲಿ “ಯೆಹೋವ ಎಂಬುದು ದೇವರ ವ್ಯಕ್ತಿತ್ವವನ್ನು ಚೆನ್ನಾಗಿ ವ್ಯಕ್ತಪಡಿಸುತ್ತದೆಂದು ತೋರುತ್ತದೆ” ಎಂದು ಚಾರ್ಲ್ಸ್ ಪೀಟರ್ಸ್ 1757ರಲ್ಲಿ ಬರೆದರು. ಹಾಪ್ಟನ್ ಹೇನ್ಸ್ ಎಂಬವರು ದೇವರ ಆರಾಧನೆಯ ಕುರಿತು 1797ರಲ್ಲಿ ಬರೆದ ಪುಸ್ತಕದಲ್ಲಿ ಹೀಗೆ ಬರೆದಿದ್ದಾರೆ: “ಯೆಹೋವ ಎಂಬುದು ಯೆಹೂದಿ ದೇವರ ಸರಿಯಾದ ಹೆಸರು. ಆತನೊಬ್ಬನನ್ನೇ ಅವರು ಆರಾಧಿಸುತ್ತಿದ್ದರು. ಕ್ರಿಸ್ತನು ಮತ್ತು ಅಪೊಸ್ತಲರು ಆ ದೇವರನ್ನೇ ಆರಾಧಿಸಿದರು.” ಹೆನ್ರಿ ಗ್ರೂ (1781-1862) ಎಂಬವರು ದೇವರ ಹೆಸರನ್ನು ಉಪಯೋಗಿಸಿದರು ಮಾತ್ರವಲ್ಲ ಆ ಹೆಸರಿಗೆ ಮಸಿಬಳಿಯಲಾಗಿದೆ, ಆದ್ದರಿಂದ ಅದನ್ನು ಪವಿತ್ರೀಕರಿಸುವ ಅಗತ್ಯವಿದೆ ಎನ್ನುವುದನ್ನೂ ಅರ್ಥಮಾಡಿಕೊಂಡರು. ಚಾರ್ಲ್ಸ್ ಟಿ. ರಸಲ್‌ರು ಮತ್ತು ಅವರ ಆಪ್ತ ಒಡನಾಡಿ ಜಾರ್ಜ್ ಸ್ಟೋರ್ಸ್ (1796-1879) ಸಹ ದೇವರ ಹೆಸರನ್ನು ಉಪಯೋಗಿಸಿದರು.
15 ದೇವರ ಹೆಸರಿನ ವಿಷಯದಲ್ಲಿ 1931ರ ವರ್ಷ ತುಂಬ ಮಹತ್ವಪೂರ್ಣವಾದದ್ದಾಗಿದೆ. ಏಕೆಂದರೆ ಅಷ್ಟರವರೆಗೆ ದೇವಜನರನ್ನು ಅಂತಾರಾಷ್ಟ್ರೀಯ ಬೈಬಲ್ ವಿದ್ಯಾರ್ಥಿಗಳು ಎಂದು ಕರೆಯಲಾಗುತ್ತಿತ್ತು. ಆದರೆ ಆ ವರ್ಷ ಅವರು ಬೈಬಲಾಧರಿತವಾದ ಯೆಹೋವನ ಸಾಕ್ಷಿಗಳು ಎಂಬ ಹೆಸರನ್ನು ಪಡೆದುಕೊಂಡರು. (ಯೆಶಾ. 43:10-12) ಈ ಮೂಲಕ ತಾವು ಒಬ್ಬನೇ ಸತ್ಯ ದೇವರ ಸೇವಕರಾಗಿರಲು ಮತ್ತು ‘[ಆತನ] ಹೆಸರಿಗಾಗಿರುವ ಪ್ರಜೆಯಾಗಿದ್ದು’ ಆ ಹೆಸರನ್ನು ಸ್ತುತಿಸಲು ಹೆಮ್ಮೆ ಪಡುತ್ತೇವೆ ಎಂದು ಲೋಕಕ್ಕೇ ಪ್ರಕಟಿಸಿದರು. (ಅ. ಕಾ. 15:14) ಇದೆಲ್ಲವು ಮಲಾಕಿಯ 1:11ರಲ್ಲಿರುವ “ಸೂರ್ಯನು ಮೂಡುವ ದಿಕ್ಕಿನಿಂದ ಮುಣುಗುವ ದಿಕ್ಕಿನ ವರೆಗೂ ನನ್ನ ನಾಮವು ಅನ್ಯಜನಾಂಗಗಳಲ್ಲಿ ಘನವಾಗಿದೆ” ಎಂಬ ಯೆಹೋವನ ಮಾತುಗಳನ್ನು ನಮ್ಮ ನೆನಪಿಗೆ ತರುವುದಿಲ್ಲವೆ?
ಯೆಹೋವನ ಹೆಸರಿನಲ್ಲಿ ನಡೆಯಿರಿ!
16. ಯೆಹೋವನ ಹೆಸರಿನಲ್ಲಿ ನಡೆಯುವುದನ್ನು ಗೌರವವೆಂದು ವೀಕ್ಷಿಸಬೇಕು ಏಕೆ?
16 ಪ್ರವಾದಿ ಮೀಕನು ಹೀಗೆ ಬರೆದನು: “ಅನ್ಯಜನಾಂಗಗಳು ತಮ್ಮ ತಮ್ಮ ದೇವರುಗಳ ಹೆಸರಿನಲ್ಲಿ ನಡೆಯುತ್ತವೆ; ನಾವಾದರೋ ನಮ್ಮ ದೇವರಾದ ಯೆಹೋವನ ಹೆಸರಿನಲ್ಲಿ ಯುಗಯುಗಾಂತರಗಳಲ್ಲಿ ನಡೆಯುವೆವು.” (ಮೀಕ 4:5) ಯೆಹೋವ ದೇವರು ಬೈಬಲ್ ವಿದ್ಯಾರ್ಥಿಗಳಿಗೆ ತನ್ನ ಹೆಸರಿನಿಂದ ಕರೆಯಲ್ಪಡುವ ಅವಕಾಶ ಕೊಟ್ಟಿದ್ದಾನೆ. ಈ ಮೂಲಕ ನಾವು ಊಹಿಸಲೂ ಸಾಧ್ಯವಿಲ್ಲದಷ್ಟು ನಮ್ಮನ್ನು ಗೌರವಿಸಿದ್ದಾನೆ! ಆತನು ನಮ್ಮನ್ನು ಮೆಚ್ಚುತ್ತಾನೆ ಎನ್ನುವುದನ್ನೂ ಇದು ಸೂಚಿಸುತ್ತದೆ. (ಮಲಾಕಿಯ 3:16-18 ಓದಿ.) ನಿಮ್ಮ ಕುರಿತೇನು? ಮೀಕನು ಹೇಳಿದಂತೆ ‘ಯೆಹೋವನ ಹೆಸರಿನಲ್ಲಿ ನಡೆಯಲು’ ನಿಮ್ಮಿಂದಾದ ಎಲ್ಲ ಪ್ರಯತ್ನ ಮಾಡುತ್ತಿದ್ದೀರಾ?
17. ದೇವರ ಹೆಸರಿನಲ್ಲಿ ನಡೆಯುವುದರಲ್ಲಿ ಏನೆಲ್ಲ ಸೇರಿದೆ?
17 ದೇವರ ಹೆಸರಿನಲ್ಲಿ ನಡೆಯುವುದು ಅಂದರೆ ಕಡಿಮೆಪಕ್ಷ ಮೂರು ವಿಷಯಗಳನ್ನು ನಾವು ಮಾಡಬೇಕು. ಮೊದಲನೇದಾಗಿ ‘ಯೆಹೋವನ ನಾಮದಲ್ಲಿ ಕೋರುವವನು ಮಾತ್ರ ರಕ್ಷಿಸಲ್ಪಡುವನು’ ಎನ್ನುವುದನ್ನು ಅಂಗೀಕರಿಸಿ ಆ ಹೆಸರನ್ನು ಇತರರಿಗೆ ಪ್ರಕಟಪಡಿಸಬೇಕು. (ರೋಮ. 10:13) ಎರಡನೇದಾಗಿ ಯೆಹೋವನ ಗುಣಗಳ ಕುರಿತು, ಮುಖ್ಯವಾಗಿ ಆತನಲ್ಲಿರುವ ಪ್ರೀತಿಯ ಕುರಿತು ಆಳವಾಗಿ ಪರ್ಯಾಲೋಚಿಸಬೇಕು. ಮೂರನೇದಾಗಿ, ಆತನ ನೀತಿಯ ಮಟ್ಟಗಳಿಗೆ ಅಧೀನರಾಗಬೇಕು. ಅವುಗಳಿಗೆ ವಿರುದ್ಧ ನಡೆದರೆ ನಮ್ಮ ತಂದೆಯಾದ ಯೆಹೋವನ ಪವಿತ್ರ ನಾಮಕ್ಕೆ ನಾವೇ ಮಸಿಬಳಿದಂತಾಗುತ್ತದೆ. (1 ಯೋಹಾ. 4:8; 5:3) ಹಾಗಾದರೆ ‘ನಮ್ಮ ದೇವರಾದ ಯೆಹೋವನ ಹೆಸರಿನಲ್ಲಿ ಯುಗಯುಗಾಂತರಗಳಲ್ಲಿ ನಡೆಯುವ’ ಸಂಕಲ್ಪವನ್ನು ನೀವು ಮಾಡಿದ್ದೀರಾ?
18. ಯೆಹೋವನ ಮಹೋನ್ನತ ನಾಮವನ್ನು ಘನತೆಗೇರಿಸುವವರು ಭವಿಷ್ಯತ್ತಿನ ಕಡೆಗೆ ಭರವಸೆಯ ನೋಟ ಬೀರಬಲ್ಲರು ಏಕೆ?
18 ಯೆಹೋವನನ್ನು ತಿರಸ್ಕರಿಸಿ ವಿರೋಧಿಸುವವರೆಲ್ಲರು ಆತನು ಯಾರೆಂಬುದನ್ನು ಚೆನ್ನಾಗಿ ತಿಳಿದುಕೊಳ್ಳುವ ಕಾಲ ಬೇಗನೆ ಬರಲಿದೆ. (ಯೆಹೆ. 38:23) ಫರೋಹನಂತಿರುವ ಜನರು ಸಹ ಇದಕ್ಕೆ ಹೊರತಲ್ಲ. “ಯೆಹೋವನೆಂಬವನು ಯಾರು? ನಾನು ಅವನ ಮಾತನ್ನು ಕೇಳಿ ಇಸ್ರಾಯೇಲ್ಯರನ್ನು ಹೋಗಗೊಡಿಸುವದೇಕೆ?” ಎಂದು ದರ್ಪದಿಂದ ಅವನು ಕೇಳಿದನು. ಯೆಹೋವನು ಯಾರೆಂದು ಗೊತ್ತಾಗಲಿಕ್ಕೆ ಅವನಿಗೆ ಹೆಚ್ಚು ಸಮಯ ಹಿಡಿಯಲಿಲ್ಲ. (ವಿಮೋ. 5:1, 2; 9:16; 12:29) ನಾವಾದರೋ ಯೆಹೋವನನ್ನು ತಿಳಿದುಕೊಳ್ಳಲು ಇಷ್ಟಪೂರ್ವಕವಾಗಿ ಮುಂದೆ ಬಂದಿದ್ದೇವೆ. ಆತನ ಹೆಸರಿನಿಂದ ಕರೆಯಲ್ಪಡಲು, ಆತನ ವಿಧೇಯ ಜನರಾಗಿರಲು ಹೆಮ್ಮೆ ಪಡುತ್ತೇವೆ. ಭವಿಷ್ಯತ್ತಿನ ಕಡೆಗೆ ಭರವಸೆಯ ನೋಟ ಬೀರುತ್ತೇವೆ. ಏಕೆಂದರೆ ನಮಗೆ ಕೀರ್ತನೆ 9:10ರಲ್ಲಿ ಹೇಳಲಾಗಿರುವ ಈ ವಾಗ್ದಾನದಲ್ಲಿ ಪೂರ್ಣ ನಂಬಿಕೆಯಿದೆ: “ಯೆಹೋವನೇ, ನಿನ್ನ ನಾಮಮಹಿಮೆಯನ್ನು ಬಲ್ಲವರು ನಿನ್ನಲ್ಲಿ ಭರವಸವಿಡುವರು; ಯಾಕಂದರೆ ನಿನ್ನ ಮರೆಹೋಗುವವರನ್ನು ನೀನು ಕೈಬಿಡುವವನಲ್ಲ.”
[ಪಾದಟಿಪ್ಪಣಿಗಳು]
^ ಪ್ಯಾರ. 5 ದೇವರ ಹೆಸರು ಹೀಬ್ರುವಿನಲ್ಲಿ “ಆಗುವಂತೆ” ಎಂಬ ಅರ್ಥವಿರುವ ಕ್ರಿಯಾಪದದ ಒಂದು ರೂಪವಾಗಿದೆ. ಹಾಗಾಗಿ “ಯೆಹೋವ” ಎಂಬ ಹೆಸರಿನ ಅರ್ಥ “ಆತನು ಆಗುವಂತೆ ಮಾಡುತ್ತಾನೆ” ಎಂದಾಗಿದೆ.
^ ಪ್ಯಾರ. 13 ಆರಂಭದ ಕ್ರೈಸ್ತರು ಉಪಯೋಗಿಸುತ್ತಿದ್ದ ಹೀಬ್ರು ಶಾಸ್ತ್ರದಲ್ಲಿ ಚತುರಕ್ಷರಿ ಇತ್ತು. ಹೀಬ್ರು ಶಾಸ್ತ್ರಗಳ ಗ್ರೀಕ್ ಅನುವಾದವಾದ ಸೆಪ್ಟೂಅಜಂಟ್‌ನ ಆರಂಭದ ಪ್ರತಿಗಳಲ್ಲೂ ಈ ಹೆಸರಿತ್ತು ಎಂಬುದಕ್ಕೆ ಪುರಾವೆಗಳಿವೆ.
[ಅಧ್ಯಯನ ಪ್ರಶ್ನೆಗಳು]
[ಪುಟ 24ರಲ್ಲಿರುವ ಚಿತ್ರ]
[ಪುಟ 25ರಲ್ಲಿರುವ ಚಿತ್ರ]
ಮೋಶೆಗೆ ದೇವರ ಹೆಸರಿನ ಅರ್ಥ ಗೊತ್ತಿತ್ತು, ಅದು ಅವನ ನಂಬಿಕೆಯನ್ನು ಬಲಗೊಳಿಸಿತು
[ಪುಟ 26ರಲ್ಲಿರುವ ಚಿತ್ರ]
ಫರೋಹನು ಯೆಹೋವನನ್ನು ದೇವರೆಂದು ಒಪ್ಪಿಕೊಳ್ಳಲು ನಿರಾಕರಿಸಿದನು