ವಾಚಕರಿಂದ ಪ್ರಶ್ನೆಗಳು
ವಾಚಕರಿಂದ ಪ್ರಶ್ನೆಗಳು
ಆರೋನನ ಮಕ್ಕಳಾದ ನಾದಾಬ್ ಅಬೀಹುರ ಮರಣದ ಬಳಿಕ ಅವರ ಸಹೋದರರಾದ ಎಲ್ಲಾಜಾರ್, ಈತಾಮಾರರ ಮೇಲೆ ಮೋಶೆ ಕೋಪಗೊಂಡದ್ದೇಕೆ? ಅವನ ಕೋಪ ಹೇಗೆ ಶಮನವಾಯಿತು?—ಯಾಜ. 10:16-20.
ಯಾಜಕತ್ವದ ಪ್ರತಿಷ್ಠಾಪನೆಯ ನಂತರ ಸ್ವಲ್ಪದರಲ್ಲೇ ಆರೋನನ ಮಕ್ಕಳಾದ ನಾದಾಬ್, ಅಬೀಹುರನ್ನು ಯೆಹೋವನು ವಧಿಸಿದನು. ಏಕೆಂದರೆ ಯೆಹೋವನು ಆಜ್ಞಾಪಿಸದೆ ಇದ್ದ ಬೇರೆ ಬೆಂಕಿಯಿಂದ ಅವರು ಧೂಪದ್ರವ್ಯವನ್ನು ಆತನ ಸನ್ನಿಧಿಯಲ್ಲಿ ಸಮರ್ಪಿಸಿದ್ದರು. (ಯಾಜ. 10:1, 2) ಸತ್ತುಹೋದ ತಮ್ಮ ಸಹೋದರರಿಗಾಗಿ ಶೋಕಿಸಬಾರದೆಂದು ಆರೋನನ ಉಳಿದ ಪುತ್ರರಿಗೆ ಮೋಶೆ ಆಜ್ಞಾಪಿಸಿದನು. ಆ ಬಳಿಕ ಸ್ವಲ್ಪದರಲ್ಲೇ ಮೋಶೆಯು ಎಲ್ಲಾಜಾರ್, ಈತಾಮಾರರ ಮೇಲೆ ಕೋಪಗೊಂಡನು. ಕಾರಣ, ದೋಷಪರಿಹಾರ ಯಜ್ಞಕ್ಕಾಗಿ ಅರ್ಪಿಸಿದ ಹೋತದ ಮಾಂಸವನ್ನು ಅವರು ತಿಂದಿರಲಿಲ್ಲ. (ಯಾಜ. 9:3) ಮೋಶೆ ಏಕೆ ಆ ರೀತಿ ಪ್ರತಿಕ್ರಿಯಿಸಿದನು?
ಯೆಹೋವನು ಮೋಶೆಗೆ ಕೊಟ್ಟ ನಿಯಮಗಳಲ್ಲಿ, ದೋಷಪರಿಹಾರಕ ಯಜ್ಞವನ್ನು ಅರ್ಪಿಸುವ ಯಾಜಕನು ಅದರ ಸ್ವಲ್ಪ ಭಾಗವನ್ನು ದೇವದರ್ಶನ ಗುಡಾರದ ಅಂಗಳದಲ್ಲಿ ತಿನ್ನಬೇಕೆಂದು ನಿರ್ದಿಷ್ಟವಾಗಿ ಹೇಳಲಾಗಿತ್ತು. ಹಾಗೆ ತಿನ್ನುವುದು ಯಜ್ಞಾರ್ಪಣೆ ಮಾಡಿದವರಿಗೋಸ್ಕರ ದೋಷಪರಿಹಾರವಾಗಿ ಪರಿಗಣಿಸಲಾಗಿತ್ತು. ಆದರೆ ದೇವದರ್ಶನ ಗುಡಾರದ ಮೊದಲನೇ ವಿಭಾಗವಾದ ಪವಿತ್ರ ಸ್ಥಳದೊಳಕ್ಕೆ ಯಜ್ಞಾರ್ಪಿತ ಪಶುವಿನ ಸ್ವಲ್ಪ ರಕ್ತವು ತರಲ್ಪಟ್ಟಲ್ಲಿ ಆ ಪಶುವಿನ ಮಾಂಸವನ್ನು ತಿನ್ನಬಾರದಿತ್ತು, ಬದಲಾಗಿ ಅದನ್ನು ಸುಟ್ಟುಬಿಡಬೇಕಿತ್ತು.—ಯಾಜ. 6:24-26, 30.
ಆ ದಿನದಂದು ನಡೆದ ಆಪತ್ತುಗಳ ಬಳಿಕ ಯೆಹೋವನ ಎಲ್ಲ ಆಜ್ಞೆಗಳು ಪಾಲಿಸಲ್ಪಟ್ಟಿವೆಯೋ ಎಂದು ಖಾತ್ರಿಪಡಿಸುವ ಅಗತ್ಯವನ್ನು ಮೋಶೆ ಕಂಡಿರಬೇಕು. ದೋಷಪರಿಹಾರವಾಗಿ ಅರ್ಪಿಸಿದ ಹೋತದ ಭಾಗವನ್ನು ಸುಟ್ಟುಬಿಟ್ಟದ್ದು ಮೋಶೆಗೆ ತಿಳಿದುಬಂದಾಗ, ಎಲ್ಲಾಜಾರ್, ಈತಾಮಾರರು ಅದನ್ನು ಏಕೆ ತಿನ್ನಲಿಲ್ಲವೆಂದು ಅವನು ಕೋಪದಿಂದ ಪ್ರಶ್ನಿಸಿದನು. ಏಕೆಂದರೆ ಆ ಹೋತದ ರಕ್ತವನ್ನು ಪವಿತ್ರ ಸ್ಥಳದ ಯೆಹೋವನ ಸನ್ನಿಧಿಯಲ್ಲಿ ತರದಿದ್ದ ಕಾರಣ ಅವರು ಅದರ ಮಾಂಸದ ಭಾಗವನ್ನು ತಿನ್ನಬೇಕಿತ್ತು.—ಯಾಜ. 10:17, 18.
ಅವರಿಬ್ಬರು ಪ್ರಾಯಶಃ ಆರೋನನ ಅನುಮತಿಯಿಂದ ಹಾಗೆ ಮಾಡಿದ್ದಿರಬೇಕು. ಆದ್ದರಿಂದ ಆರೋನನೇ ಮೋಶೆಯ ಪ್ರಶ್ನೆಗೆ ಉತ್ತರಿಸಿದನು. ತನ್ನ ಇಬ್ಬರು ಪುತ್ರರನ್ನು ಯೆಹೋವನು ವಧಿಸಿದ್ದನ್ನು ನೋಡಿದಾಗ, ಆ ದಿನ ಇತರ ಯಾಜಕರಾದ ತಾವು ಮೂವರು ದೋಷಪರಿಹಾರಕ ಯಜ್ಞದ ಭಾಗವನ್ನು ಒಳ್ಳೇ ಮನಸ್ಸಾಕ್ಷಿಯಿಂದ ತಿನ್ನುವುದಾದರೂ ಹೇಗೆಂದು ಆರೋನನು ಯೋಚಿಸಿದ್ದಿರಬೇಕು. ನಾದಾಬ್, ಅಬೀಹು ಮಾಡಿದ ತಪ್ಪಿಗೆ ಉಳಿದವರು ನೇರವಾಗಿ ಹೊಣೆಗಾರರಾಗಿಲ್ಲದಿದ್ದರೂ ಅದನ್ನು ತಿನ್ನುವುದು ಯೆಹೋವನಿಗೆ ಮೆಚ್ಚಿಗೆಯಾಗದೆಂದು ಪ್ರಾಯಶಃ ಅವನು ನೆನಸಿದನು.—ಯಾಜ. 10:19.
ಆ ದಿನ ತನ್ನ ಮಕ್ಕಳು ಪ್ರಪ್ರಥಮ ಬಾರಿ ಯಾಜಕ ಸೇವೆಯನ್ನು ಸಲ್ಲಿಸುತ್ತಿದ್ದದ್ದರಿಂದ ಅತಿ ಚಿಕ್ಕ ಚಿಕ್ಕ ವಿಷಯದಲ್ಲೂ ದೇವರನ್ನು ಮೆಚ್ಚಿಸಲು ಅವರು ತುಂಬ ಜಾಗ್ರತೆ ವಹಿಸಿರಬೇಕಿತ್ತು ಎಂದು ಆರೋನನು ತರ್ಕಿಸಿದ್ದಿರಬಹುದು. ಆದರೆ ನಾದಾಬ್, ಅಬೀಹುರ ಕೃತ್ಯವು ಯೆಹೋವನ ನಾಮಕ್ಕೆ ಅಗೌರವವನ್ನು ತಂದಿತಾದ್ದರಿಂದ ದೇವರ ಕೋಪವು ಅವರನ್ನು ದಹಿಸಿಬಿಟ್ಟಿತು. ಆದಕಾರಣ ಇಂಥ ಪಾಪವು ಕಂಡುಬಂದ ಯಾಜಕ ಕುಟುಂಬದಲ್ಲಿನ ಇತರರು ಆ ಪವಿತ್ರ ಯಜ್ಞದ ಭಾಗಗಳನ್ನು ತಿನ್ನಬಾರದೆಂದು ಆರೋನನು ಯೋಚಿಸಿದ್ದಿರಬೇಕು.
ಮೋಶೆ ತನ್ನ ಅಣ್ಣನ ಉತ್ತರಕ್ಕೆ ಸಮ್ಮತಿಸಿದನೆಂದು ತೋರುತ್ತದೆ. ಏಕೆಂದರೆ ವೃತ್ತಾಂತವು ಹೀಗೆ ಕೊನೆಗೊಳ್ಳುತ್ತದೆ: “ಮೋಶೆ ಆ ಮಾತನ್ನು ಕೇಳಿ ಒಪ್ಪಿಕೊಂಡನು.” (ಯಾಜ. 10:20) ಆರೋನನ ಉತ್ತರವನ್ನು ಯೆಹೋವನು ಕೂಡ ಒಪ್ಪಿದನೆಂಬುದು ಸುವ್ಯಕ್ತ.