ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಕ್ಕಳಿಗೆ ಪರಿಚಯಿಸಿರಿ ಯೆಹೋವನ ಸಂಘಟನೆಯನ್ನು

ಮಕ್ಕಳಿಗೆ ಪರಿಚಯಿಸಿರಿ ಯೆಹೋವನ ಸಂಘಟನೆಯನ್ನು

ಮಕ್ಕಳಿಗೆ ಪರಿಚಯಿಸಿರಿ ಯೆಹೋವನ ಸಂಘಟನೆಯನ್ನು

ಮಕ್ಕಳಿಗೆ ಕಲಿಯುವ ಆತುರ. ಪ್ರಶ್ನೆಗಳ ಮೇಲೆ ಪ್ರಶ್ನೆಗಳಿವೆ ಅವರಿಗೆ. ಪ್ರಥಮ ಪಸ್ಕಹಬ್ಬವನ್ನು ಇಸ್ರಾಯೇಲ್ಯರು ಐಗುಪ್ತದಲ್ಲಿ ಆಚರಿಸಿದಾಗ ಅವರ ಮಕ್ಕಳು ಕೇಳಿದ್ದಿರಬಹುದಾದ ಪ್ರಶ್ನೆಗಳನ್ನು ಊಹಿಸಿಕೊಳ್ಳಿ. ‘ಕುರಿಮರಿ ಏಕೆ ಸಾಯಬೇಕಿತ್ತು?’ ‘ಅದರ ರಕ್ತವನ್ನು ಬಾಗಿಲ ಚೌಕಟ್ಟಿನ ಮೇಲೆ ಅಪ್ಪ ಏಕೆ ಹಚ್ಚುತ್ತಿದ್ದಾರೆ?’ ‘ನಾವು ಎಲ್ಲಿಗೆ ಹೋಗುತ್ತಿದ್ದೇವೆ?’ ಎಂದವರು ಕೇಳಿರಬಹುದು. ಇಂಥ ಪ್ರಶ್ನೆಗಳು ಯೆಹೋವನಿಗೆ ಸ್ವೀಕರಣೀಯವಾಗಿತ್ತೆಂದು ಇಸ್ರಾಯೇಲ್ಯ ತಂದೆಯಂದಿರಿಗೆ ಆತನು ಕೊಟ್ಟ ಆಜ್ಞೆಯಿಂದ ಸ್ಪಷ್ಟವಾಗುತ್ತದೆ. ಮುಂದಣ ದಿನಗಳ ಪಸ್ಕದ ಆಚರಣೆಯ ಬಗ್ಗೆ ತಿಳಿಸುವಾಗ ಯೆಹೋವನು ಅಂದದ್ದು: “ನಿಮ್ಮ ಮಕ್ಕಳು—ನೀವು ನಡಿಸುವ ಈ ಆಚಾರವೇನೆಂದು ನಿಮ್ಮನ್ನು ಕೇಳುವಾಗ ನೀವು ಅವರಿಗೆ—ಯೆಹೋವನು ಐಗುಪ್ತ್ಯರನ್ನು ಸಂಹರಿಸಿದಾಗ ಐಗುಪ್ತದೇಶದಲ್ಲಿದ್ದ ಇಸ್ರಾಯೇಲ್ಯರ ಮನೆಗಳಲ್ಲಿ ಪ್ರವೇಶಿಸದೆ ಮುಂದಕ್ಕೆ ದಾಟಿ ನಮ್ಮವರನ್ನು ಉಳಿಸಿದದರಿಂದ ನಾವು ಯೆಹೋವನ ಪಸ್ಕವೆಂಬ ಈ ಯಜ್ಞಾಚಾರವನ್ನು ನಡಿಸುವದುಂಟು ಎಂದು ಹೇಳಬೇಕು.” (ವಿಮೋ. 12:24-27) ಸಮಯಾನಂತರ, ಯೆಹೋವನು ತಾನು ಆಜ್ಞಾಪಿಸಿದ “ವಿಧಿನಿರ್ಣಯಗಳ” ಸಂಬಂಧದಲ್ಲಿ ಮಕ್ಕಳು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡುವ ಮಹತ್ವವನ್ನು ಇಸ್ರಾಯೇಲ್ಯ ಹೆತ್ತವರಿಗೆ ನೆನಪಿಸಿದನು.—ಧರ್ಮೋ. 6:20-25.

ಹೌದು, ಸತ್ಯಾರಾಧನೆಯ ಕುರಿತ ಪ್ರಶ್ನೆಗಳಿಗೆ ಮಕ್ಕಳು ತೃಪ್ತಿಕರ ಉತ್ತರಗಳನ್ನು ಪಡೆಯಬೇಕೆಂಬುದು ಯೆಹೋವನ ಅಪೇಕ್ಷೆಯಾಗಿತ್ತು. ಏಕೆಂದರೆ ಆ ಉತ್ತರಗಳು ಆತನನ್ನು ತಮ್ಮ ದೇವರೂ ರಕ್ಷಕನೂ ಆಗಿ ಪ್ರೀತಿಸುವಂತೆ ಅವರನ್ನು ಪ್ರಚೋದಿಸಲಿದ್ದವು. ಇಂದು ನಮ್ಮ ಎಳೆಮಕ್ಕಳ ವಿಷಯದಲ್ಲಿ ಯೆಹೋವನ ಅಪೇಕ್ಷೆ ಅದೇ ಆಗಿದೆ. ತಮ್ಮ ಮಕ್ಕಳಲ್ಲಿ ಯೆಹೋವನ ಮತ್ತು ಆತನ ಜನರ ಮೇಲಣ ಹೃತ್ಪೂರ್ವಕ ಪ್ರೀತಿಯನ್ನು ಹೆತ್ತವರು ಹೇಗೆ ಬೇರೂರಿಸಬಲ್ಲರು? ಒಂದು ವಿಧ, ಯೆಹೋವನ ಸಂಘಟನೆಯನ್ನು ಅವರಿಗೆ ಪರಿಚಯಮಾಡಿಸಿ ಆ ಏರ್ಪಾಡು ಅವರಿಗೆ ಹೇಗೆ ಪ್ರಯೋಜನಕಾರಿ ಎಂದು ತಿಳಿಸುವುದೇ. ಆದ್ದರಿಂದ ಚಿಕ್ಕ ಮಕ್ಕಳು ದೇವರ ಸಂಘಟನೆಯ ಕುರಿತು ಹೆಚ್ಚು ವಿವರಗಳನ್ನು ತಿಳುಕೊಳ್ಳಲು ಸಹಾಯನೀಡಬಲ್ಲ ಕೆಲವು ವಿಧಗಳನ್ನು ನಾವೀಗ ಚರ್ಚಿಸೋಣ.

ಸ್ಥಳೀಯ ಸಭೆ

ನಿಮ್ಮ ಕುಟುಂಬವು ಸಹವಾಸಿಸುವ ಸಭೆಯ ಪರಿಚಯವು ಮಕ್ಕಳಿಗೆ ಬೇಕು. ಇದಕ್ಕಾಗಿ ಹೆತ್ತವರಾದ ನೀವು ಎಲ್ಲ ಕ್ರೈಸ್ತ ಕೂಟಗಳಿಗೆ ಅವರನ್ನು ಕರೆದೊಯ್ಯಬೇಕು. ಹಾಗೆ ಮಾಡುವಾಗ ಯೆಹೋವನು ಇಸ್ರಾಯೇಲ್ಯರಿಗೆ ಕೊಟ್ಟ ಈ ಆಜ್ಞಾಮಾದರಿಯನ್ನು ನೀವು ಪಾಲಿಸುವಿರಿ: “ಸ್ತ್ರೀಪುರುಷರನ್ನೂ ಮಕ್ಕಳನ್ನೂ . . . ಕೂಡಿಸಬೇಕು. ಆಗ ಅವರು ತಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿ ಈ ಧರ್ಮಶಾಸ್ತ್ರದ ನಿಯಮಗಳನ್ನು ಅನುಸರಿಸಿ ನಡೆಯುವರು. ಮತ್ತು ಯೆಹೋವನ ಮಹತ್ಕಾರ್ಯಗಳನ್ನು ನೋಡದಿರುವ ನಿಮ್ಮ ಸಂತತಿಯವರೂ ಕೇಳಿ . . . ನಿಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿರುವದಕ್ಕೆ ಕಲಿತುಕೊಳ್ಳುವರು.”—ಧರ್ಮೋ. 31:12, 13.

ಮಕ್ಕಳು ಶೈಶವದಿಂದಲೇ ಯೆಹೋವನ ವಾಕ್ಯದ ಕುರಿತು ಕಲಿಯಲು ಆರಂಭಿಸಬಲ್ಲರು. ಅಪೊಸ್ತಲ ಪೌಲನು ತಿಮೊಥೆಯನ ಕುರಿತು, “ಶೈಶವದಿಂದಲೇ ನೀನು ಪವಿತ್ರ ಬರಹಗಳನ್ನು ತಿಳಿದುಕೊಂಡಿದ್ದೀ” ಎಂದು ಹೇಳಿದನು. (2 ತಿಮೊ. 3:15) ರಾಜ್ಯ ಸಭಾಗೃಹದ ಕೂಟಗಳಲ್ಲಿ ಪುಟ್ಟ ಮಕ್ಕಳು ಸಹ ಅಲ್ಲಿ ಸಾದರಪಡಿಸುವ ಮಾಹಿತಿಯನ್ನು ಅರ್ಥಮಾಡಿಕೊಳ್ಳಲು ಆರಂಭಿಸುತ್ತಾರೆ ಮತ್ತು ರಾಜ್ಯಗೀತೆಗಳ ಪರಿಚಯ ಅವರಿಗಾಗುತ್ತದೆ. ಬೈಬಲ್‌ ಮತ್ತು ಬೈಬಲಾಧಾರಿತ ಸಾಹಿತ್ಯವನ್ನು ಬಳಸುವುದನ್ನೂ ಗೌರವಿಸುವುದನ್ನೂ ಅವರು ಅಲ್ಲಿ ಕಲಿಯುತ್ತಾರೆ. ಅಷ್ಟಲ್ಲದೆ ಕ್ರಿಸ್ತನ ನಿಜ ಹಿಂಬಾಲಕರ ಗುರುತುಚಿಹ್ನೆಯಾದ ನಿಜ ಪ್ರೀತಿಯನ್ನು ನಮ್ಮ ಕೂಟಗಳಲ್ಲಿ ಅವರು ಸವಿಯುತ್ತಾರೆ. ಯೇಸು ಅಂದದ್ದು: “ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಅದೇನೆಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು. ನಿಮ್ಮ ಮಧ್ಯೆ ಪ್ರೀತಿಯಿರುವುದಾದರೆ ನೀವು ನನ್ನ ಶಿಷ್ಯರೆಂದು ಎಲ್ಲರೂ ತಿಳಿದುಕೊಳ್ಳುವರು.” (ಯೋಹಾ. 13:34, 35) ರಾಜ್ಯ ಸಭಾಗೃಹದಲ್ಲಿರುವ ಹೃತ್ಪೂರ್ವಕ ಪ್ರೀತಿ ಮತ್ತು ನಿಜ ಭದ್ರತೆಯು ಮಕ್ಕಳಿಗೆ ಮುದನೀಡುವುದು. ಅಲ್ಲದೆ, ಕ್ರೈಸ್ತ ಕೂಟಗಳಿಗೆ ಹಾಜರಾಗುವುದನ್ನು ಅವರ ಜೀವನದ ಖಾಯಂ ಭಾಗವಾಗಿ ಮಾಡಲು ನೆರವಾಗುವುದು.

ರಾಜ್ಯ ಸಭಾಗೃಹಕ್ಕೆ ಸಮಯಕ್ಕೆ ಮುಂಚೆ ಬಂದು, ಕೂಟಗಳ ನಂತರ ಸ್ವಲ್ಪ ಹೊತ್ತು ಇರುವುದನ್ನು ನೀವು ರೂಢಿಯಾಗಿ ಮಾಡಿಕೊಳ್ಳುವಲ್ಲಿ ನಿಮ್ಮ ಮಕ್ಕಳಿಗೆ ಸ್ನೇಹಿತರನ್ನು ಮಾಡಿಕೊಳ್ಳುವ ಅವಕಾಶ ಸಿಗುವುದು. ಬೇರೆ ಮಕ್ಕಳೊಂದಿಗೆ ಮಾತ್ರ ಸಹವಾಸ ಮಾಡುವಂತೆ ಬಿಡುವ ಬದಲು ಎಲ್ಲ ವಯೋಮಾನದ ಸಹೋದರ ಸಹೋದರಿಯರನ್ನು ಅವರಿಗೆ ಪರಿಚಯಿಸಿರಿ. ಪ್ರಾಯದಲ್ಲಿ ದೊಡ್ಡವರ ಪರಿಚಯವಾದಲ್ಲಿ ನಿಮ್ಮ ಮಕ್ಕಳು ಅವರ ಅನುಭವ ಮತ್ತು ವಿವೇಕದ ಭಂಡಾರದಲ್ಲಿ ಉಲ್ಲಾಸಿಸುವರು. “ದೇವಭಕ್ತಿಯನ್ನು ಬೋಧಿಸುತ್ತಿದ್ದ” ಹಿಂದಿನ ಕಾಲದ ಜೆಕರ್ಯನು ಯೆಹೂದದ ರಾಜನಾದ ಎಳೆಯ ಉಜ್ಜೀಯನ ಮೇಲೆ ಒಳ್ಳೇ ಪ್ರಭಾವವನ್ನು ಬೀರಿದನಲ್ಲಾ. ಅಂತೆಯೇ ಅನೇಕ ವರ್ಷಗಳಿಂದ ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸುವ ಇಂದಿನ ಪ್ರಾಯಸ್ಥರು ಚಿಕ್ಕ ಮಕ್ಕಳ ಮೇಲೆ ಸತ್ಪ್ರಭಾವ ಬೀರುತ್ತಾರೆ. (2 ಪೂರ್ವ. 26:1, 4, 5) ರಾಜ್ಯ ಸಭಾಗೃಹದಲ್ಲಿರುವಾಗ ನೀವು ನಿಮ್ಮ ಮಕ್ಕಳಿಗೆ ಲೈಬ್ರರಿ, ಮಾಹಿತಿ ಫಲಕ ಮತ್ತು ಇತರ ವಿಭಾಗಗಳ ಉಪಯುಕ್ತತೆಯನ್ನು ಸಹ ವಿವರಿಸಬಹುದು.

ಲೋಕವ್ಯಾಪಕ ಸಂಘಟನೆ

ಸ್ಥಳೀಯ ಸಭೆಯು 1,00,000ಕ್ಕಿಂತಲೂ ಹೆಚ್ಚು ಸಭೆಗಳಿರುವ ಒಂದು ಲೋಕವ್ಯಾಪಕ ಸಂಘಟನೆಯ ಭಾಗವೆಂದು ಮಕ್ಕಳು ತಿಳಿದುಕೊಳ್ಳಬೇಕು. ಈ ಸಂಘಟನೆಯ ವೈಶಿಷ್ಟ್ಯಗಳನ್ನು ಅಂದರೆ ಅದರ ಕಾರ್ಯಾಚರಣೆ ಮತ್ತು ಆ ಕೆಲಸವನ್ನು ಮಕ್ಕಳು ಬೆಂಬಲಿಸಬಹುದಾದ ವಿಧವನ್ನು ವಿವರಿಸಿರಿ. ಸರ್ಕಿಟ್‌ ಸಮ್ಮೇಳನ, ಜಿಲ್ಲಾ ಅಧಿವೇಶನ ಮತ್ತು ಸರ್ಕಿಟ್‌ ಮೇಲ್ವಿಚಾರಕರ ಭೇಟಿಗಳಿಗಾಗಿ ನೀವೇಕೆ ಮುನ್ನೋಡುತ್ತೀರೆಂದು ತಿಳಿಸಿರಿ.—ಪುಟ 28ರಲ್ಲಿರುವ “ಕುಟುಂಬ ಆರಾಧನೆಯಲ್ಲಿ ಚರ್ಚಿಸುವ ವಿಷಯಗಳು” ಚೌಕ ನೋಡಿ.

ನಿಮಗೆ ಅವಕಾಶವಿರುವಾಗ ಸಂಚರಣ ಮೇಲ್ವಿಚಾರಕರನ್ನು, ಮಿಷನೆರಿಗಳನ್ನು, ಬೆತೆಲ್‌ ಕುಟುಂಬದ ಸದಸ್ಯರನ್ನು ಮತ್ತು ಪೂರ್ಣ ಸಮಯದ ಇತರ ಶುಶ್ರೂಷಕರನ್ನು ನಿಮ್ಮ ಮನೆಗೆ ಊಟಕ್ಕೆ ಕರೆಯಿರಿ. ಚಿಕ್ಕ ಮಕ್ಕಳಿಗಾಗಿ ಅವರಿಗೆ ಸಮಯವಿಲ್ಲ ಎಂದು ನೆನಸಬೇಡಿ. ಈ ಪೂರ್ಣ ಸಮಯದ ಸೇವಕರು ಯೇಸುವನ್ನು ಅನುಕರಿಸಲು ಪ್ರಯಾಸಪಡುತ್ತಾರೆ. ಯೇಸು ಯಾವಾಗಲೂ ಚಿಕ್ಕ ಮಕ್ಕಳನ್ನು ತನ್ನ ಬಳಿಗೆ ಬರಮಾಡಿಕೊಂಡು ಅವರೊಂದಿಗೆ ಮಾತಾಡಿದನಲ್ಲಾ. (ಮಾರ್ಕ 10:13-16) ಯೆಹೋವನ ಈ ಸೇವಕರ ಅನುಭವಗಳನ್ನು ಕೇಳಿಸಿಕೊಳ್ಳುವಾಗ ಮತ್ತು ಪವಿತ್ರ ಸೇವೆಯಲ್ಲಿ ಅವರು ಹರ್ಷಿಸುವುದನ್ನು ಗಮನಿಸುವಾಗ ನಿಮ್ಮ ಮಕ್ಕಳು ಕೂಡ ಪೂರ್ಣ ಸಮಯದ ಶುಶ್ರೂಷೆಯನ್ನು ತಮ್ಮ ಗುರಿಯಾಗಿ ಮಾಡಿಕೊಳ್ಳಬಹುದು.

ನಿಮ್ಮ ಮಕ್ಕಳು ಯೆಹೋವನ ಸಂಘಟನೆಯೊಂದಿಗೆ ಚಿರಪರಿಚಿತರಾಗಲು ನೀವು ಕುಟುಂಬವಾಗಿ ಇನ್ನೇನು ಮಾಡಸಾಧ್ಯವಿದೆ? ಕೆಲವು ಸಲಹೆಗಳು ಇಲ್ಲಿವೆ: ಯೆಹೋವನ ಸಾಕ್ಷಿಗಳು—ದೇವರ ರಾಜ್ಯದ ಘೋಷಕರು (ಇಂಗ್ಲಿಷ್‌) ಅಥವಾ ಯೆಹೋವನ ಸಾಕ್ಷಿಗಳು—ಅವರು ಯಾರು? ಅವರು ಏನನ್ನು ನಂಬುತ್ತಾರೆ? ಎಂಬ ಬ್ರೋಷರನ್ನು ಮತ್ತು ಕಾವಲಿನಬುರುಜು, ಎಚ್ಚರ! ಪತ್ರಿಕೆಗಳಲ್ಲಿ ಬರುವ ಜೀವನ ಕಥೆಗಳನ್ನು ಕುಟುಂಬವಾಗಿ ಚರ್ಚಿಸಲು ಯೋಜಿಸಿರಿ. ಚರ್ಚಿಸುವಾಗ ಯೆಹೋವನ ಸೇವಕರು ತೋರಿಸಿದ ದೇವಭಕ್ತಿ, ದೀನತೆ, ನಿಷ್ಠೆಯನ್ನು ಒತ್ತಿಹೇಳಿ. ಸುವಾರ್ತೆಯನ್ನು ಭೂಲೋಕದಲ್ಲೆಲ್ಲಾ ಹಬ್ಬಿಸಲು ಯೆಹೋವನು ಅವರನ್ನು ಹೇಗೆ ಉಪಯೋಗಿಸಿದನೆಂದೂ ತಿಳಿಸಿರಿ. ಹಿಂದಿನ ಮತ್ತು ಇಂದಿನ ಸಮಯಗಳ ಘಟನೆಗಳಿಂದ ಪ್ರಾಮುಖ್ಯ ಪಾಠಗಳನ್ನು ಕಲಿಸಲು ಯೆಹೋವನ ಸಂಘಟನೆ ರಚಿಸಿರುವ ವಿಡಿಯೋಗಳನ್ನು ಬಳಸಿರಿ. ಸಾಧ್ಯವಾದಲ್ಲಿ ನಿಮ್ಮ ದೇಶದಲ್ಲಿರುವ ಅಥವಾ ಪರದೇಶಗಳಲ್ಲೂ ಇರುವ ಬ್ರಾಂಚ್‌ ಆಫೀಸ್‌ ಮತ್ತು ಬೆತೆಲ್‌ ಗೃಹಗಳಿಗೆ ಭೇಟಿ ಕೊಡಿರಿ. ಅಂಥ ಸಂದರ್ಶನಗಳು, ಕ್ರಿ.ಶ. ಒಂದನೇ ಶತಮಾನದಲ್ಲಿದ್ದಂತೆಯೇ ಇಂದು ಯೆಹೋವನ ಸಂಘಟನೆಯ ಭೂಭಾಗ ಹೇಗೆ ಸಂಘಟಿಸಲ್ಪಟ್ಟಿದೆ ಎಂಬುದನ್ನು ನಿಮ್ಮ ಮಕ್ಕಳ ಮನಸ್ಸಿನಲ್ಲಿ ಅಚ್ಚೊತ್ತುವುದು. ಮಾತ್ರವಲ್ಲ ಆ ಸಂಘಟನೆಯು ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳುವರ್ಗದ ನಿರ್ದೇಶನದ ಕೆಳಗೆ ಭೂವ್ಯಾಪಕ ಸಹೋದರರಿಗೆ ಹೇಗೆ ಆಧ್ಯಾತ್ಮಿಕ ಆಹಾರವನ್ನೂ ಮಾರ್ಗದರ್ಶನವನ್ನೂ ಕೊಡುತ್ತದೆ ಎಂಬುದನ್ನು ಅವರಿಗೆ ತಿಳಿಯಪಡಿಸುತ್ತದೆ.—ಮತ್ತಾ. 24:45-47; ಅ. ಕಾ. 15:22-31.

ಮಾಹಿತಿಯನ್ನು ಪ್ರತಿಯೊಂದು ಮಗುವಿಗೆ ಹೊಂದಿಸಿಕೊಳ್ಳಿ

ಮಕ್ಕಳಿಗೆ ಕಲಿಸುವಾಗ ಯೇಸು ತನ್ನ ಅಪೊಸ್ತಲರಿಗೆ ಕಲಿಸಿದ ವಿಧವನ್ನು ಮನಸ್ಸಿನಲ್ಲಿಡಿರಿ. ಒಮ್ಮೆ ಅವನು ಅವರಿಗೆ ಹೇಳಿದ್ದು: “ನಾನು ನಿಮಗೆ ಇನ್ನೂ ಅನೇಕ ವಿಷಯಗಳನ್ನು ಹೇಳಲಿಕ್ಕಿದೆ, ಆದರೆ ಸದ್ಯಕ್ಕೆ ನೀವು ಅವುಗಳನ್ನು ಸಹಿಸಿಕೊಳ್ಳಲಾರಿರಿ.” (ಯೋಹಾ. 16:12) ಯೇಸು ತನ್ನ ಶಿಷ್ಯರಿಗೆ ಮಿತಿಮೀರಿ ಮಾಹಿತಿಯನ್ನು ಕೊಟ್ಟು ಕಂಗೆಡಿಸಲಿಲ್ಲ. ಬದಲಾಗಿ ಅವರು ಮಾಹಿತಿಯನ್ನು ಸರಿಯಾಗಿ ಗ್ರಹಿಸಿಕೊಳ್ಳುವಂತೆ ಪ್ರಧಾನ ಸತ್ಯವನ್ನು ಸ್ವಲ್ಪ ಸ್ವಲ್ಪವಾಗಿ ಕಲಿಸಿದನು. ಅದೇ ರೀತಿಯಲ್ಲಿ ತುಂಬ ಮಾಹಿತಿಯನ್ನು ಕೊಟ್ಟು ನಿಮ್ಮ ಮಕ್ಕಳನ್ನು ಕಂಗೆಡಿಸಬೇಡಿ. ಬದಲಾಗಿ, ಯೆಹೋವನ ಸಂಘಟನೆಯ ಬಗ್ಗೆ ತಿಳಿವಳಿಕೆಯನ್ನು ಕ್ರಮವಾಗಿ ಮತ್ತು ಸ್ವಲ್ಪ ಸ್ವಲ್ಪವಾಗಿ ಉಣಿಸಿರಿ. ಈ ಮೂಲಕ ನೀವು ಅವರ ಆಸಕ್ತಿಯನ್ನು ಸೆರೆಹಿಡಿದು ಕ್ರೈಸ್ತ ಸಭೆಯ ಕುರಿತ ಅವರ ಕಲಿಯುವಿಕೆಯನ್ನು ಆನಂದಕರ ಅನುಭವವನ್ನಾಗಿ ಮಾಡುವಿರಿ. ನಿಮ್ಮ ಮಕ್ಕಳ ಅಗತ್ಯಗಳು ಬದಲಾದಂತೆ ಈಗಾಗಲೇ ಅವರು ಕಲಿತ ವಿಷಯಗಳನ್ನು ಪುನರಾವರ್ತಿಸಿ ನಂತರ ಅಧಿಕ ಮಾಹಿತಿಯನ್ನು ನೀಡಬಹುದು.

ಕ್ರೈಸ್ತ ಸಭೆಯು ಆಧ್ಯಾತ್ಮಿಕ ಬಲದ ನಿಜ ಮೂಲ. ಅದರ ಚಟುವಟಿಕೆಯಲ್ಲಿ ಹುರುಪಿನಿಂದ ಭಾಗವಹಿಸುವ ಯುವಜನರು ಸೈತಾನನ ಲೋಕದ ಪ್ರಭಾವವನ್ನು ಎದುರಿಸಲು ಸುಸನ್ನದ್ಧರು. (ರೋಮ. 12:2) ಹೀಗೆ ನಿಮ್ಮ ಮಕ್ಕಳಿಗೆ ಯೆಹೋವನ ಸಂಘಟನೆಯ ಪರಿಚಯ ಮಾಡುವಾಗ ನೀವು ಬಹಳ ಆನಂದವನ್ನು ಕಂಡುಕೊಳ್ಳುವಿರಿ ಎಂಬ ಭರವಸೆ ನಮಗಿದೆ. ದೇವರ ಆಶೀರ್ವಾದದಿಂದ ಅವರು ಆತನ ಸಂಘಟನೆಗೂ ನಾವು ಆರಾಧಿಸುವ ಪ್ರೀತಿಯ ದೇವರಿಗೂ ನಿಷ್ಠೆಯಿಂದ ಉಳಿಯುವಂತಾಗಲಿ.

[ಪುಟ 28ರಲ್ಲಿರುವ ಚೌಕ/ ಚಿತ್ರ]

ಕುಟುಂಬ ಆರಾಧನೆಯಲ್ಲಿ ಚರ್ಚಿಸುವ ವಿಷಯಗಳು

ಕುಟುಂಬ ಆರಾಧನೆಯ ಸಮಯದಲ್ಲಿ ನೀವು ಚರ್ಚಿಸಬಹುದಾದ ಕೆಲವು ವಿಷಯಗಳು ಇಲ್ಲಿವೆ. ಇವು ಯೆಹೋವನ ಸಂಘಟನಾ ವಿಷಯಗಳಿಗೆ ಸಂಬಂಧಿಸಿವೆ.

▪ ಸ್ಥಳೀಯ ಸಭೆಯ ಪೂರ್ವ ಚರಿತ್ರೆಯನ್ನು ಪರಾಮರ್ಶಿಸಿರಿ. ಅದು ಯಾವಾಗ ಮತ್ತು ಹೇಗೆ ಸ್ಥಾಪನೆಗೊಂಡಿತು? ಸಭೆಯು ಯಾವ ವಿವಿಧ ರಾಜ್ಯ ಸಭಾಗೃಹಗಳನ್ನು ಉಪಯೋಗಿಸಿತ್ತು? ಈ ಚರ್ಚೆಗಾಗಿ, ತುಂಬ ಸಮಯದಿಂದ ಸಭೆಯ ಸದಸ್ಯರಾಗಿರುವ ಒಬ್ಬರನ್ನು ನಿಮ್ಮ ಮನೆಗೆ ಆಮಂತ್ರಿಸಿರಿ. ಮಕ್ಕಳು ತಮಗಿರುವ ಪ್ರಶ್ನೆಗಳನ್ನು ಕೇಳಲಿ.

▪ ವಿವಿಧ ಸಭಾ ಕೂಟಗಳ ಮತ್ತು ದೊಡ್ಡ ಒಕ್ಕೂಟಗಳ ಉದ್ದೇಶವನ್ನು ವಿವರಿಸಿರಿ. ಮಕ್ಕಳು ಅವುಗಳಿಂದ ಹೇಗೆ ಪ್ರಯೋಜನ ಹೊಂದಬಲ್ಲರೆಂದು ತಿಳಿಸಿರಿ.

▪ ಯೆಹೋವನ ಸಂಘಟನೆಯಿಂದ ಸ್ಥಾಪಿಸಲಾದ ವಿವಿಧ ಶಾಲೆಗಳ ಉದ್ದೇಶವನ್ನು ಪರಿಗಣಿಸಿರಿ. ಈ ಶಾಲೆಗಳಿಂದ ತೇರ್ಗಡೆಯಾದವರು ಉತ್ಪಾದಿಸುತ್ತಿರುವ ಒಳ್ಳೇ ಫಲಗಳನ್ನು ತೋರಿಸುವ ಅನುಭವಗಳನ್ನು ತಿಳಿಸಿರಿ.

▪ ಸುವಾರ್ತೆಯ ಕ್ರಮದ ಪ್ರಚಾರಕರಾಗುವ ಮಹತ್ವವನ್ನು ತಿಳಿಯಲು ಎಳೆಯರಿಗೆ ಸಹಾಯಮಾಡಿರಿ. ಫೆಬ್ರವರಿ ತಿಂಗಳ ನಮ್ಮ ರಾಜ್ಯ ಸೇವೆಯಲ್ಲಿ ಪ್ರಕಟವಾಗುವ ಭೂವ್ಯಾಪಕ ವರದಿಗೆ ಅವರು ಹೇಗೆ ನೆರವಾಗಬಲ್ಲರೆಂದು ತೋರಿಸಿರಿ.

▪ ಯೆಹೋವನ ಸಂಘಟನೆಯಲ್ಲಿ ಯುವಜನರಿಗೆ ಲಭ್ಯವಿರುವ ಪೂರ್ಣ ಸಮಯದ ವಿವಿಧ ಸೇವಾ ವಿಧಾನಗಳನ್ನು ಚರ್ಚಿಸಿರಿ. ಈ ಕುರಿತ ಉತ್ತಮ ಮಾಹಿತಿಯು ಯೆಹೋವನ ಚಿತ್ತವನ್ನು ಮಾಡಲು ಸಂಘಟಿತರು ಪುಸ್ತಕದ ಅಧ್ಯಾಯ 10ರಲ್ಲಿದೆ.

▪ ಸಭೆಯಲ್ಲಿ ನಿರ್ದಿಷ್ಟ ಕಾರ್ಯವಿಧಾನಗಳನ್ನು ಏಕೆ ಪಾಲಿಸಲಾಗುತ್ತದೆಂದು ಎಳೆಯರಿಗೆ ತಿಳಿಸಿರಿ. ಅವರು ಚಿಕ್ಕ ವಿಧದಲ್ಲಾದರೂ ಯೆಹೋವನ ಸಂಘಟನೆಯಿಂದ ಸ್ವತಂತ್ರವಾಗಿ ವರ್ತಿಸಬಾರದು ಏಕೆಂದು ವಿವರಿಸಿರಿ. ಹಿರಿಯರ ಮಾರ್ಗದರ್ಶನವನ್ನು ಅನುಸರಿಸುವ ಮೂಲಕ ಸಭೆಯಲ್ಲಿ ಒಳ್ಳೇ ಕ್ರಮವನ್ನು ಕಾಪಾಡಿಕೊಳ್ಳಲು ಅವರು ಹೇಗೆ ನೆರವಾಗಬಹುದೆಂದು ತಿಳಿಸಿರಿ.

[ಚಿತ್ರ]

ತುಂಬ ಸಮಯದಿಂದ ಸೇವೆ ಮಾಡುತ್ತಿರುವವರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುವ ಮೂಲಕ ನಿಮ್ಮ ಮಕ್ಕಳು ಪ್ರಯೋಜನ ಹೊಂದುವರು

[ಪುಟ 26ರಲ್ಲಿರುವ ಚಿತ್ರಗಳು]

ಪ್ರಾಚೀನ ಇಸ್ರಾಯೇಲ್ಯರಂತೆ ಇಂದು ಹೆತ್ತವರು ಯೆಹೋವನ ಸಂಘಟನೆಯ ಕುರಿತು ಮಕ್ಕಳು ಕೇಳುವ ಪ್ರಶ್ನೆಗೆ ತೃಪ್ತಿಕರ ಉತ್ತರಕೊಡಲು ಶ್ರಮಿಸುತ್ತಾರೆ