ಯೆಹೋವನ ಮಹೋಪಕಾರಗಳಿಗೆ ಬದಲೇನು ಮಾಡಲಿ?
ಯೆಹೋವನ ಮಹೋಪಕಾರಗಳಿಗೆ ಬದಲೇನು ಮಾಡಲಿ?
ರೂತ್ ಡ್ಯಾನರ್ ಅವರು ಹೇಳಿದಂತೆ
1933ರಲ್ಲಿ ಹಿಟ್ಲರನು ಅಧಿಕಾರಕ್ಕೆ ಬಂದನು, ಪೋಪ್ ಅದನ್ನು ಪವಿತ್ರ ವರ್ಷವೆಂದು ಘೋಷಿಸಿದನು ಮತ್ತು ನಾನೂ ಅದೇ ವರ್ಷದಲ್ಲಿ ಹುಟ್ಟಿದೆ. ಅದಕ್ಕೆ ನನ್ನ ತಾಯಿ ತಮಾಷೆಗೆ, ಆ ಇಸವಿಯನ್ನು ‘ಮಹಾ ದುರಂತಗಳ ವರ್ಷ’ ಎಂದು ಕರೆಯುತ್ತಿದ್ದರು.
ನನ್ನ ಹೆತ್ತವರು, ಜರ್ಮನಿಯ ಗಡಿಪ್ರದೇಶಕ್ಕೆ ಹತ್ತಿರದಲ್ಲಿದ್ದ ಫ್ರಾನ್ಸ್ ದೇಶದ ಒಂದು ಐತಿಹಾಸಿಕ ಪ್ರದೇಶವಾದ ಲೊರೆನ್ ಎಂಬಲ್ಲಿನ ಯುಟ್ಸ್ ಪಟ್ಟಣದಲ್ಲಿ ವಾಸಿಸುತ್ತಿದ್ದರು. ತುಂಬ ದೇವಭಕ್ತಿ ಇದ್ದ ನನ್ನ ತಾಯಿ ಕ್ಯಾಥೊಲಿಕರಾಗಿದ್ದರು, ತಂದೆ ಪ್ರಾಟೆಸ್ಟಂಟ್‌ರಾಗಿದ್ದರು. ಅವರು 1921ರಲ್ಲಿ ಮದುವೆಯಾದರು. 1922ರಲ್ಲಿ ನನ್ನ ಅಕ್ಕ ಹೆಲೆನ್ ಹುಟ್ಟಿದಳು ಮತ್ತು ಶಿಶುವಾಗಿದ್ದಾಗಲೇ ಅವಳಿಗೆ ಅಪ್ಪಅಮ್ಮ ಕ್ಯಾಥೊಲಿಕ್ ಚರ್ಚ್‌ನಲ್ಲಿ ದೀಕ್ಷಾಸ್ನಾನ ಕೊಡಿಸಿದರು.
ಇಸವಿ 1925ರಲ್ಲಿ ಒಂದು ದಿನ ತಂದೆಯವರಿಗೆ ಜರ್ಮನ್ ಭಾಷೆಯಲ್ಲಿ, ದ ಹಾರ್ಪ್ ಆಫ್ ಗಾಡ್ ಎಂಬ ಪುಸ್ತಕದ ಪ್ರತಿ ಸಿಕ್ಕಿತು. ಆ ಪುಸ್ತಕ ಓದಿದಾಗ ಅದರಲ್ಲಿ ಸತ್ಯವಿದೆಯೆಂದು ಅವರಿಗೆ ಮನದಟ್ಟಾಯಿತು. ತಂದೆಯವರು ಆ ಪುಸ್ತಕದ ಪ್ರಕಾಶಕರಿಗೆ ಪತ್ರ ಬರೆದಾಗ, ಅವರು ಜರ್ಮನಿಯಲ್ಲಿ ಆ ಕಾಲದಲ್ಲಿ ಬೀಬೆಲ್‌ಫೋರ್ಷರ್ ಎಂದು ಜ್ಞಾತರಾಗಿದ್ದ ಯೆಹೋವನ ಸಾಕ್ಷಿಗಳ ಸಂಪರ್ಕ ಕಲ್ಪಿಸಿಕೊಟ್ಟರು. ಬಲು ಬೇಗನೆ ತಂದೆ ತಾವು ಕಲಿತಂಥ ವಿಷಯಗಳ ಬಗ್ಗೆ ಸಾರಲಾರಂಭಿಸಿದರು. ತಾಯಿಗೆ ಇದು ಸ್ವಲ್ಪವೂ ಇಷ್ಟವಾಗಲಿಲ್ಲ. “ಏನು ಬೇಕಾದರೂ ಮಾಡಿ, ಆದರೆ ಆ ಬೀಬೆಲ್‌ಫೋರ್ಷರ್‌ರೊಂದಿಗೆ ಸೇರಬೇಡಿ” ಎಂದು ಜರ್ಮನ್ ಭಾಷೆಯಲ್ಲಿ ಒರಟಾಗಿ ಹೇಳುತ್ತಿದ್ದರು. ಆದರೆ ತಂದೆ ಆಗಲೇ ಮನಸ್ಸು ಮಾಡಿ ಆಗಿತ್ತು. ಆದದ್ದರಿಂದ 1927ರಲ್ಲಿ ಅವರು ದೀಕ್ಷಾಸ್ನಾನ ಪಡೆದು ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾದರು.
ಈ ಕಾರಣಕ್ಕಾಗಿ ವಿಚ್ಛೇದ ಪಡೆಯುವಂತೆ ಅಜ್ಜಿ (ತಾಯಿಯ ಅಮ್ಮ) ಅಮ್ಮನ ತಲೆತಿನ್ನಲಾರಂಭಿಸಿದರು. ಒಂದು ದಿನ ಚರ್ಚಿನಲ್ಲಿ ಮಾಸ್ ನಡೆಯುತ್ತಿದ್ದಾಗ ಪಾದ್ರಿಯು ತನ್ನ ಜನರಿಗೆ, “ಆ ಸುಳ್ಳು ಪ್ರವಾದಿಯಾದ ಡ್ಯಾನರ್‌ನಿಂದ ದೂರವಿರಿ” ಎಂದು ಎಚ್ಚರಿಸಿದನು. ಅಲ್ಲಿಂದ ಮನೆಗೆ ಬಂದದ್ದೇ ತಡ, ಅಜ್ಜಿ ನಮ್ಮ ಮನೆಯ ಮೇಲಂತಸ್ತಿನಿಂದ ಒಂದು ಹೂವಿನ ಕುಂಡ ಎತ್ತಿ ಕೆಳಗಿದ್ದ ನನ್ನ ತಂದೆ ಮೇಲೆ ಹಾಕಿದರು. ಆ ಭಾರೀ ಅಸ್ತ್ರವು ನನ್ನ ತಂದೆಯ ತಲೆಯನ್ನು ಕೂದಲೆಳೆಯಷ್ಟು ಅಂತರದಲ್ಲಿ ತಪ್ಪಿ, ಭುಜದ ಮೇಲೆ ಬಿತ್ತು. ಈ ಘಟನೆಯಿಂದಾಗಿ ನನ್ನ ತಾಯಿ ಹೀಗೆ ಯೋಚಿಸಿದರು: ‘ಒಂದು ಧರ್ಮ ಜನರನ್ನು ಕೊಲೆಗಾರರನ್ನಾಗಿ ಮಾಡುತ್ತದಾದರೆ ಅದು ಒಳ್ಳೇದಾಗಿರಲಾರದು.’ ಆದುದರಿಂದ ಅವರು ಸಹ ಯೆಹೋವನ ಸಾಕ್ಷಿಗಳ ಪ್ರಕಾಶನಗಳನ್ನು ಓದಲಾರಂಭಿಸಿದರು. ತಮಗೆ ಸತ್ಯ ಸಿಕ್ಕಿದೆಯೆಂದು ಸ್ವಲ್ಪ ಸಮಯದಲ್ಲೇ ಅವರಿಗೂ ಮನದಟ್ಟಾಯಿತು ಮತ್ತು 1929ರಲ್ಲಿ ಅವರು ದೀಕ್ಷಾಸ್ನಾನ ಪಡೆದರು.
ಯೆಹೋವನು ಒಬ್ಬ ನೈಜ ವ್ಯಕ್ತಿಯೆಂದು ನನಗೂ ನನ್ನ ಅಕ್ಕನಿಗೂ ಮನಗಾಣಿಸಲು ಹೆತ್ತವರು ತಮ್ಮ ಕೈಲಾದದ್ದೆಲ್ಲವನ್ನೂ ಮಾಡಿದರು. ಅವರು ನಮಗೆ ಬೈಬಲ್ ಕಥೆಗಳನ್ನು ಓದಿಹೇಳುತ್ತಿದ್ದರು. ಆಮೇಲೆ, ಆ ಬೈಬಲ್ ಪಾತ್ರಧಾರಿಗಳು ‘ಯಾಕೆ ಹಾಗೆ ಮಾಡಿದರು?’ ಎಂದು ಕೇಳುತ್ತಿದ್ದರು. ಆಗಿನ ದಿನಗಳಲ್ಲಿ ತಂದೆ, ಸಾಯಂಕಾಲ ಇಲ್ಲವೇ ರಾತ್ರಿ ಪಾಳಿಯ ಕೆಲಸಮಾಡಲು ಒಪ್ಪುತ್ತಿರಲಿಲ್ಲ. ಇದರಿಂದಾಗಿ ಕುಟುಂಬದ ಆದಾಯಕ್ಕೆ ತುಂಬ ನಷ್ಟವಾಗುತ್ತಿತ್ತು. ಆದರೆ ಕ್ರೈಸ್ತ ಕೂಟಗಳಿಗೆ, ಶುಶ್ರೂಷೆಗೆ ಮತ್ತು ಮಕ್ಕಳೊಂದಿಗೆ ಅಧ್ಯಯನ ನಡೆಸಲು ಅವರಿಗೆ ಸಮಯ ಬೇಕಾಗಿದ್ದರಿಂದ ಹಾಗೆ ಮಾಡುತ್ತಿದ್ದರು.
ಕಾರ್ಮೋಡಗಳು ಕವಿದದ್ದು
ನನ್ನ ಹೆತ್ತವರು, ಸ್ವಿಟ್ಸರ್‌ಲೆಂಡ್ ಹಾಗೂ ಫ್ರಾನ್ಸ್‌ನಿಂದ ಬರುತ್ತಿದ್ದ ಸಂಚರಣಾ ಮೇಲ್ವಿಚಾರಕರು ಮತ್ತು ಬೆತೆಲಿಗರಿಗೆ ಆಗಾಗ ಅತಿಥಿಸತ್ಕಾರ ತೋರಿಸುತ್ತಿದ್ದರು. ಇವರು ನಮಗೆ, ನಮ್ಮ ಮನೆಯಿಂದ ಕೆಲವೇ ಮೈಲು ದೂರದಲ್ಲಿದ್ದ ಜರ್ಮನಿಯಲ್ಲಿ ನಮ್ಮ ಜೊತೆ ವಿಶ್ವಾಸಿಗಳು ಎದುರಿಸುತ್ತಿದ್ದ ಕಷ್ಟಸಂಕಟಗಳ ಕುರಿತು ಹೇಳುತ್ತಿದ್ದರು.
ನಾಸಿ ಸರಕಾರವು ಯೆಹೋವನ ಸಾಕ್ಷಿಗಳನ್ನು ಸೆರೆ ಶಿಬಿರಗಳಿಗೆ ದೊಬ್ಬುತ್ತಿತ್ತು ಮತ್ತು ಮಕ್ಕಳನ್ನು ತಮ್ಮ ಸಾಕ್ಷಿ ಹೆತ್ತವರಿಂದ ಬೇರ್ಪಡಿಸುತ್ತಿತ್ತು.ಮುಂದೆ ಬರಲಿದ್ದ ಕಷ್ಟಗಳನ್ನು ಎದುರಿಸಲಿಕ್ಕಾಗಿ ಅಕ್ಕ ಮತ್ತು ನನ್ನನ್ನು ಸಜ್ಜುಗೊಳಿಸಲಾಗಿತ್ತು. ನಮಗೆ ಮಾರ್ಗದರ್ಶನ ಕೊಡುವಂಥ ಬೈಬಲ್ ವಚನಗಳನ್ನು ಕಂಠಪಾಠಮಾಡಲು ಹೆತ್ತವರು ಸಹಾಯಮಾಡಿದರು. ಉದಾಹರಣೆಗೆ ಅವರು ಹೀಗನ್ನುತ್ತಿದ್ದರು: “ಏನು ಮಾಡಬೇಕೆಂದು ನಿಮಗೆ ದಾರಿ ತೋಚದಿರುವಲ್ಲಿ, ಜ್ಞಾನೋಕ್ತಿ 3:5, 6ನ್ನು ಜ್ಞಾಪಿಸಿಕೊಳ್ಳಿ. ಶಾಲೆಯಲ್ಲಿ ಎದುರಾಗುವ ಶೋಧನೆಗಳ ಬಗ್ಗೆ ನಿಮಗೆ ಹೆದರಿಕೆಯಾದರೆ, 1 ಕೊರಿಂಥ 10:13ನ್ನು ಬಳಸಿ. ಯಾರಾದರೂ ನಿಮ್ಮನ್ನು ನಮ್ಮಿಂದ ಬೇರ್ಪಡಿಸಿದರೆ, ಜ್ಞಾನೋಕ್ತಿ 18:10ನ್ನು ಪಠಿಸಿರಿ.” ನಾನು 23ನೇ ಮತ್ತು 91ನೇ ಕೀರ್ತನೆಯನ್ನು ಬಾಯಿಪಾಠ ಮಾಡಿದೆ ಮತ್ತು ಯೆಹೋವನು ನನ್ನನ್ನು ಯಾವಾಗಲೂ ಸಂರಕ್ಷಿಸುವನೆಂದು ಆತನಲ್ಲಿ ಭರವಸೆಯಿಡಲಾರಂಭಿಸಿದೆ.
1940ರಲ್ಲಿ ನಾಸಿ ಜರ್ಮನಿಯು ಆಲ್‌ಸೇಸ್ ಲೋರೇನ್ ಅನ್ನು ಜರ್ಮನಿಯೊಂದಿಗೆ ಜೋಡಿಸಿತು. ಎಲ್ಲ ವಯಸ್ಕರು ನಾಸಿ ಪಕ್ಷವನ್ನು ಸೇರಬೇಕೆಂದು ಆ ಹೊಸ ಸರಕಾರ ಕಡ್ಡಾಯಗೊಳಿಸಿತು. ಅದಕ್ಕೆ ಸೇರಲು ತಂದೆ ಒಪ್ಪದಿದ್ದಾಗ ಗೆಸ್ಟಾಪೋ ಪೊಲೀಸರು ಅವರನ್ನು ದಸ್ತಗಿರಿ ಮಾಡುವ ಧಮಕಿ ಹಾಕಿದರು. ತಾಯಿಯವರು, ಮಿಲಿಟರಿ ಸಮವಸ್ತ್ರಗಳನ್ನು ಹೊಲಿಯಲು ನಿರಾಕರಿಸಿದಾಗ, ಗೆಸ್ಟಾಪೋ ಪೊಲೀಸರು ಅವರಿಗೂ ಧಮಕಿ ನೀಡಲಾರಂಭಿಸಿದರು.
ಶಾಲೆ ನನಗೆ ದುಃಸ್ವಪ್ನವಾಗಿಬಿಟ್ಟಿತ್ತು. ಏಕೆಂದರೆ ಪ್ರತಿದಿನ ಪಾಠಗಳನ್ನು ಆರಂಭಿಸುವ ಮುಂಚೆ, ಹಿಟ್ಲರ್‌ಗಾಗಿ ಒಂದು ಪ್ರಾರ್ಥನೆ ಮತ್ತು ‘ಹಿಟ್ಲರ್‌ಗೆ ಜಯವಾಗಲಿ’ ಎಂಬ ವಂದನೆ ಹೇಳಲಾಗುತ್ತಿತ್ತು, ಹಾಗೂ ಎಲ್ಲರೂ ಬಲಗೈಯನ್ನು ಹೊರಚಾಚಿ ರಾಷ್ಟ್ರಗೀತೆ ಹಾಡಬೇಕಾಗಿತ್ತು. ಹಿಟ್ಲರನನ್ನು ವಂದಿಸಬೇಡ ಎಂದು ನನಗೆ ಹೆತ್ತವರು ಹೇಳಿಕೊಡಲಿಲ್ಲ, ಬದಲಿಗೆ ನನ್ನ ಮನಸ್ಸಾಕ್ಷಿಯನ್ನು ತರಬೇತುಗೊಳಿಸಿದರು. ಆದುದರಿಂದ ನಾಸಿ ವಂದನೆ ಹೇಳಬಾರದೆಂಬ ನಿರ್ಣಯವನ್ನು ಸ್ವತಃ ನಾನೇ ಮಾಡಲು ಸಾಧ್ಯವಾಯಿತು. ಇದಕ್ಕಾಗಿ ಶಿಕ್ಷಕರು ನನ್ನ ಕೆನ್ನೆಗೆ ಹೊಡೆದರು ಮತ್ತು ಶಾಲೆಯಿಂದ ಹೊರಹಾಕುವುದಾಗಿ ಹೆದರಿಸಿದರು. ಒಮ್ಮೆ, ನಾನು ಏಳು ವರ್ಷದವಳಾಗಿದ್ದಾಗ ಶಾಲೆಯ ಎಲ್ಲ 12 ಮಂದಿ ಶಿಕ್ಷಕರ ಮುಂದೆ ನಿಲ್ಲಬೇಕಾಯಿತು. ನಾನು ಹಿಟ್ಲರ್‌ಗೆ ವಂದಿಸುವಂತೆ ಅವರು ಬಲವಂತಮಾಡಿದರು. ಆದರೆ ಯೆಹೋವನ ಸಹಾಯವಿದ್ದದ್ದರಿಂದ ನನ್ನ ನಿಲುವು ಅಚಲವಾಗಿತ್ತು.
ಒಬ್ಬ ಶಿಕ್ಷಕಿಯಾದರೋ ನನ್ನ ಭಾವನೆಗಳೊಂದಿಗೆ ಆಟವಾಡಲಾರಂಭಿಸಿದರು. ನಾನು ಒಳ್ಳೇ ವಿದ್ಯಾರ್ಥಿಯೆಂದೂ, ನನ್ನನ್ನು ಅವರು ತುಂಬ ಇಷ್ಟಪಡುತ್ತಾರೆಂದೂ, ನಾನು ಶಾಲೆಯಿಂದ ಹೊರಹಾಕಲ್ಪಟ್ಟರೆ ಅವರಿಗೆ ತುಂಬ ದುಃಖವಾಗುವುದೆಂದೂ ಅವರು ಹೇಳಿದರು. ಅವರಂದದ್ದು: “ನಿನ್ನ ಕೈಯನ್ನು ಪೂರ್ತಿ ಹೊರಚಾಚಬೇಕಾಗಿಲ್ಲ. ಸ್ವಲ್ಪ ಮೇಲೆಕ್ಕೆತ್ತಿದರೆ ಸಾಕು. ನೀನು ‘ಹಿಟ್ಲರ್‌ಗೆ ಜಯವಾಗಲಿ’ ಎಂದೂ ಹೇಳಬೇಕಾಗಿಲ್ಲ. ಸುಮ್ಮನೆ ತುಟಿ ಅಲ್ಲಾಡಿಸಿ, ನಾಟಕಮಾಡು.”
ನನ್ನ ಶಿಕ್ಷಕಿ ಮಾಡಿದ್ದನ್ನು ತಾಯಿಗೆ ಹೇಳಿದಾಗ ಅವರು, ಬಾಬೆಲಿನ ರಾಜನು ನಿಲ್ಲಿಸಿದ್ದ ಪ್ರತಿಮೆಯ ಮುಂದೆ ನಿಂತಿದ್ದ ಮೂರು ಇಬ್ರಿಯ ಯುವಕರ ಕುರಿತ ಬೈಬಲ್ ವೃತ್ತಾಂತವನ್ನು ನನ್ನ ನೆನಪಿಗೆ ತಂದರು. ‘ಅವರೇನು ಮಾಡುವಂತೆ ಕೇಳಿಕೊಳ್ಳಲಾಯಿತು?’ ಎಂದು ತಾಯಿ ನನಗೆ ಕೇಳಿದರು. ‘ಆ ಪ್ರತಿಮೆಗೆ ಅಡ್ಡಬೀಳಬೇಕಾಗಿತ್ತು’ ಎಂದುತ್ತರಿಸಿದೆ. ‘ಒಂದುವೇಳೆ ಆ ಪ್ರತಿಮೆಯ ಮುಂದೆ ಬಾಗಬೇಕಾದ ಕ್ಷಣದಲ್ಲೇ ಅವರು ತಮ್ಮ ಷೂಗಳ ದಾರ ಕಟ್ಟಲಿಕ್ಕಾಗಿ ಕೆಳಗೆ ಬಾಗುತ್ತಿದ್ದರೆ ಹೇಗಿರುತ್ತಿತ್ತು? ನೀನೇ ನಿರ್ಣಯಿಸು; ನಿನಗೇನು ಸರಿಯೆಂದು ತೋಚುತ್ತದೋ ಅದನ್ನು ಮಾಡು.’ ಶದ್ರಕ್, ಮೇಶಕ್, ಅಬೇದ್‌ನೆಗೋರಂತೆ ನಾನು ಸಹ ಯೆಹೋವನಿಗೆ ಮಾತ್ರ ನಿಷ್ಠೆ ತೋರಿಸಲು ನಿರ್ಣಯಿಸಿದೆ.—ದಾನಿ. 3:1, 13-18.
ಶಿಕ್ಷಕರು ನನ್ನನ್ನು ಹಲವಾರು ಸಲ ಶಾಲೆಯಿಂದ ಹೊರಹಾಕಿದರು, ಮತ್ತು ನನ್ನನ್ನು ಹೆತ್ತವರಿಂದ ಬೇರ್ಪಡಿಸುವ ಬೆದರಿಕೆಯೊಡ್ಡಿದರು. ನಾನು ತುಂಬ ಹೆದರಿಹೋಗಿದ್ದೆ, ಆದರೆ ಹೆತ್ತವರು ನನ್ನನ್ನು ಯಾವಾಗಲೂ ಉತ್ತೇಜಿಸುತ್ತಿದ್ದರು. ನಾನು ಮನೆಯಿಂದ ಶಾಲೆಗೆ ಹೊರಡುವ ಮುಂಚೆ ತಾಯಿ ನನ್ನೊಟ್ಟಿಗೆ ಪ್ರಾರ್ಥನೆ ಮಾಡಿ, ನನ್ನನ್ನು ಯೆಹೋವನ ಸಂರಕ್ಷಣೆಗೆ ಒಪ್ಪಿಸುತ್ತಿದ್ದರು. ಸತ್ಯದ ಪರವಾಗಿ ದೃಢನಿಲ್ಲಲು ಆತನು ನನ್ನನ್ನು ಬಲಪಡಿಸುವನೆಂದು ನನಗೆ ಗೊತ್ತಿತ್ತು. (2 ಕೊರಿಂ. 4:7) ಶಾಲೆಯಲ್ಲಿ ಒತ್ತಡ ಅತಿಯಾದರೆ, ಮನೆಗೆ ವಾಪಸ್ ಬರಲು ಹೆದರಬೇಡ ಎಂದು ತಂದೆ ಹೇಳಿದರು. “ನಾವು ನಿನ್ನನ್ನು ಪ್ರೀತಿಸುತ್ತೇವೆ. ನೀನು ಎಂದಿಗೂ ನಮ್ಮ ಮಗಳೇ. ಆದರೆ ಯೆಹೋವನಿಗೆ ನಂಬಿಗಸ್ತಳಾಗಿರಬೇಕಾದವಳು ಸ್ವತಃ ನೀನೇ” ಎಂದವರು ಹೇಳಿದರು. ಈ ಮಾತುಗಳು, ಸಮಗ್ರತೆ ಕಾಪಾಡಿಕೊಳ್ಳಬೇಕೆಂಬ ನನ್ನ ಅಪೇಕ್ಷೆಯನ್ನು ಇನ್ನಷ್ಟು ಬಲಪಡಿಸಿದವು.—ಯೋಬ 27:5.
ಗೆಸ್ಟಾಪೋ ಪೊಲೀಸರು ಆಗಾಗ್ಗೆ ನಮ್ಮ ಮನೆಗೆ ಬಂದು, ಸಾಕ್ಷಿಗಳ ಪ್ರಕಾಶನಗಳಿಗಾಗಿ ತಪಾಸಣೆ ಮಾಡುತ್ತಿದ್ದರು ಮತ್ತು ನನ್ನ ಹೆತ್ತವರ ವಿಚಾರಣೆ ಮಾಡುತ್ತಿದ್ದರು. ಅವರು ನನ್ನ ತಾಯಿಯನ್ನು ತಾಸುಗಟ್ಟಲೆ ಸಮಯ ಕೊಂಡೊಯ್ಯುತ್ತಿದ್ದರು ಮತ್ತು ನನ್ನ ತಂದೆ ಹಾಗೂ ಅಕ್ಕನನ್ನು ಅವರ ಕೆಲಸದ ಸ್ಥಳಗಳಿಂದ ಕೊಂಡೊಯ್ಯುತ್ತಿದ್ದರು. ನಾನು ಶಾಲೆಯಿಂದ ವಾಪಸ್ ಬರುವಾಗ ತಾಯಿ ಮನೆಯಲ್ಲಿರುತ್ತಾರೋ ಇಲ್ಲವೋ ಎಂಬುದು ನನಗೆ ಗೊತ್ತಿರುತ್ತಿರಲಿಲ್ಲ. ಕೆಲವೊಮ್ಮೆ ನೆರೆಮನೆಯಾಕೆ, “ಅವರು ನಿನ್ನ ತಾಯಿಯನ್ನು ಕರೆದುಕೊಂಡು ಹೋಗಿದ್ದಾರೆ” ಎಂದು ಹೇಳುತ್ತಿದ್ದಳು. ಆಗ ನಾನು ಮನೆಯಲ್ಲಿ ಬಚ್ಚಿಕೊಂಡು ಹೀಗೆ ಯೋಚಿಸುತ್ತಿದ್ದೆ: ‘ಅವರು ಅಮ್ಮನಿಗೆ ಚಿತ್ರಹಿಂಸೆ ಕೊಡುತ್ತಿದ್ದಾರೋ? ಅಮ್ಮನನ್ನು ಪುನಃ ನೋಡುವೆನೋ?’
ಗಡೀಪಾರು
1943ರ ಜನವರಿ 28ರಂದು, ಗೆಸ್ಟಾಪೋ ಪೊಲೀಸರು ಮುಂಜಾನೆ ಮೂರುವರೆ ಗಂಟೆಗೆ ನಮ್ಮನ್ನು ಎಬ್ಬಿಸಿದರು. ನನ್ನ ಹೆತ್ತವರು, ಅಕ್ಕ ಮತ್ತು ನಾನು ನಾಸಿ ಪಕ್ಷ ಸೇರಿದರೆ ನಮ್ಮನ್ನು ಗಡೀಪಾರು ಮಾಡುವುದಿಲ್ಲವೆಂದು ಅವರು ಹೇಳಿದರು. ಸಿದ್ಧರಾಗಲು ನಮಗೆ ಕೇವಲ ಮೂರು ತಾಸುಗಳನ್ನು ಕೊಡಲಾಯಿತು. ತಾಯಿ, ಈ ಸನ್ನಿವೇಶಕ್ಕಾಗಿ ಸಜ್ಜಾಗಿದ್ದರು ಮತ್ತು ನಮ್ಮ ಚೀಲಗಳಲ್ಲಿ ಒಂದು ಜೋಡಿ ಬಟ್ಟೆ ಮತ್ತು ಬೈಬಲನ್ನು ತುಂಬಿಸಿಟ್ಟಿದ್ದರು. ಆದುದರಿಂದ ನಮಗೆ ರೋಮ. 8:35-39.
ಕೊಡಲಾದ ಆ ಸಮಯವನ್ನು ಪ್ರಾರ್ಥಿಸಲು ಮತ್ತು ಪರಸ್ಪರರನ್ನು ಉತ್ತೇಜಿಸಲು ಬಳಸಿದೆವು. ಯಾವುದೇ ವಿಷಯವು ನಮ್ಮನ್ನು ‘ದೇವರ ಪ್ರೀತಿಯಿಂದ ಅಗಲಿಸಲಾರದು’ ಎಂದು ತಂದೆ ನಮಗೆ ಜ್ಞಾಪಕಹುಟ್ಟಿಸಿದರು.—ಮೂರು ತಾಸುಗಳ ಬಳಿಕ ಆ ಗೆಸ್ಟಾಪೋ ಪೊಲೀಸರು ಮತ್ತೆ ಬಂದರು. ಕಂಬನಿ ಸುರಿಸುತ್ತಾ ಕೈಯಾಡಿಸಿ ನಮಗೆ ವಿದಾಯಹೇಳಿದ ವೃದ್ಧ ಸಹೋದರಿ ಆ್ಯಂಗ್ಲೇಡ್‌ರನ್ನು ನಾನೆಂದೂ ಮರೆಯಲಾರೆ. ಗೆಸ್ಟಾಪೋ ಪೊಲೀಸರು ನಮ್ಮನ್ನು ಮೆಟ್ಸ್‌ನಲ್ಲಿರುವ ರೈಲು ನಿಲ್ದಾಣಕ್ಕೆ ಕೊಂಡೊಯ್ದರು. ಮೂರು ದಿನಗಳ ರೈಲು ಪ್ರಯಾಣದ ಬಳಿಕ ನಾವು ಕಾಕ್ಲೊವಿಸ್ ಎಂಬಲ್ಲಿಗೆ ಬಂದು ತಲಪಿದೆವು. ಇದು, ಪೋಲೆಂಡ್‌ನಲ್ಲಿನ ಆಶ್‌ವಿಟ್ಸ್ ಸೆರೆಶಿಬಿರದ ಒಂದು ಉಪಶಿಬಿರವಾಗಿತ್ತು. ಎರಡು ತಿಂಗಳ ಬಳಿಕ ನಮ್ಮನ್ನು ಗ್ಲೀವೀಸ್ ಎಂಬಲ್ಲಿದ್ದ ಸೆರೆಶಿಬಿರಕ್ಕೆ ಸ್ಥಳಾಂತರಿಸಲಾಯಿತು. ಈ ಶಿಬಿರವು ಹಿಂದೆ ಒಂದು ಕಾನ್ವೆಂಟ್ ಆಗಿತ್ತು. ನಮ್ಮಲ್ಲಿ ಪ್ರತಿಯೊಬ್ಬರು ನಮ್ಮ ನಂಬಿಕೆಯನ್ನು ತ್ಯಜಿಸಿದ್ದೇವೆಂದು ಹೇಳುವ ಕಾಗದಕ್ಕೆ ಸಹಿಹಾಕಿದರೆ, ನಮ್ಮನ್ನು ಬಿಡುಗಡೆಗೊಳಿಸಿ, ನಮ್ಮ ಸ್ವತ್ತುಗಳನ್ನು ಹಿಂದಿರುಗಿಸುವುದಾಗಿ ನಾಸಿ ಅಧಿಕಾರಿಗಳು ಹೇಳಿದರು. ಅವರು ಹೇಳಿದಂತೆ ಮಾಡಲು ಅಪ್ಪಅಮ್ಮ ನಿರಾಕರಿಸಿದರು. ಆದುದರಿಂದ ನಮ್ಮನ್ನು ಸೆರೆಹಿಡಿದವರು, “ನೀವು ಇನ್ನೆಂದೂ ಮನೆಗೆ ಮರಳಲಾರಿರಿ” ಎಂದು ಹೇಳಿದರು.
ಜೂನ್ ತಿಂಗಳಲ್ಲಿ ನಮ್ಮನ್ನು ಸ್ವೀಟೊಕ್ಲೊವೀಸ್ ಎಂಬಲ್ಲಿಗೆ ಸ್ಥಳಾಂತರಿಸಲಾಯಿತು. ಅಲ್ಲಿಯೇ ನನಗೆ ತಲೆನೋವು ಬರುವುದು ಆರಂಭವಾಯಿತು. ಈಗಲೂ ನನಗೆ ಆ ಸಮಸ್ಯೆಯಿದೆ. ನನ್ನ ಬೆರಳುಗಳಿಗೆ ಸೋಂಕು ತಗುಲಿದ್ದರಿಂದ, ವೈದ್ಯರೊಬ್ಬರು ನನ್ನ ಉಗುರುಗಳಲ್ಲಿ ಹೆಚ್ಚಿನವನ್ನು ಅರಿವಳಿಕೆ ಕೊಡದೆ ಕಿತ್ತುತೆಗೆದರು. ಆದರೆ ಆ ಸೆರೆಶಿಬಿರದಲ್ಲಿ ನಡೆದ ಒಂದು ಒಳ್ಳೇ ಸಂಗತಿಯೇನೆಂದರೆ, ನಾನು ಸಿಪಾಯಿಗಳಿಗಾಗಿ ಚಿಕ್ಕಪುಟ್ಟ ಕೆಲಸಗಳನ್ನು ಮಾಡಲಿಕ್ಕಾಗಿ ಬೇಕರಿಗೆ ಹೋಗಬೇಕಾಗುತ್ತಿತ್ತು ಮತ್ತು ಅಲ್ಲಿದ್ದ ಮಹಿಳೆಯೊಬ್ಬಳು, ನನಗೆ ತಿನ್ನಲು ಏನನ್ನಾದರೂ ಕೊಡುತ್ತಿದ್ದಳು.
ಅಷ್ಟರ ವರೆಗೆ, ನಾವು ಇತರ ಸೆರೆವಾಸಿಗಳಿಂದ ಪ್ರತ್ಯೇಕರಾಗಿ ಒಂದು ಕುಟುಂಬವಾಗಿ ಜೊತೆಯಾಗಿ ವಾಸಮಾಡುತ್ತಿದ್ದೆವು. 1943ರ ಅಕ್ಟೋಬರ್ ತಿಂಗಳಲ್ಲಿ ನಮ್ಮನ್ನು ಸಬ್ಕೋವೀಸ್‌ನಲ್ಲಿದ್ದ ಸೆರೆಶಿಬಿರಕ್ಕೆ ಕಳುಹಿಸಲಾಯಿತು. ನಾವು ಒಂದು ಅಟ್ಟದಲ್ಲಿ ಇಡಲಾಗಿದ್ದ ಬಂಕ್ ಬೆಡ್‌ಗಳಲ್ಲಿ ಮಲಗುತ್ತಿದ್ದೆವು. ಅಲ್ಲಿ ಇನ್ನೂ 60ರಷ್ಟು ಮಂದಿ ಸ್ತ್ರೀಪುರುಷರು ಹಾಗೂ ಮಕ್ಕಳಿದ್ದರು. ನಾಸಿ ಸಿಪಾಯಿಗಳು ನಮಗೆ ಬೇಕುಬೇಕೆಂದೇ ನಾರಿದ, ತಿನ್ನಲಾಗದಷ್ಟು ಹಳಸಿದ ಊಟ ಕೊಡುತ್ತಿದ್ದರು.
ಇಷ್ಟೆಲ್ಲ ಕಷ್ಟಗಳಿದ್ದರೂ ನಾವು ಆಸೆಬಿಡಲಿಲ್ಲ. ಯುದ್ಧಾನಂತರ ಮಹತ್ತರವಾದ ಸಾರುವ ಕೆಲಸವಿದೆ ಎಂಬುದನ್ನು ಕಾವಲಿನಬುರುಜು ಪತ್ರಿಕೆಯಲ್ಲಿ ಓದಿದ್ದೆವು. ಆದುದರಿಂದ, ನಮ್ಮ ಈ ಕಷ್ಟಗಳಿಗೆ ಕಾರಣವೇನೆಂದೂ, ಇವೆಲ್ಲ ಬೇಗನೆ ಕೊನೆಗೊಳ್ಳುವವೆಂದೂ ನಮಗೆ ಗೊತ್ತಿತ್ತು.
ಮಿತ್ರಪಡೆಗಳು ಆಗಮಿಸುತ್ತಿವೆ ಎಂಬ ಸುದ್ದಿ ಕೇಳಿ, ನಾಸಿಗಳು ಯುದ್ಧದಲ್ಲಿ ಸೋಲುತ್ತಿದ್ದಾರೆಂದು ನಮಗೆ ತಿಳಿದುಬಂತು. 1945ರ ಆದಿಭಾಗದಲ್ಲಿ, ನಾಸಿ ಸಿಪಾಯಿಗಳು ಶಿಬಿರವನ್ನು ಖಾಲಿಮಾಡಿ ಸೆರೆವಾಸಿಗಳೆಲ್ಲರನ್ನು ಬೇರೆಡೆಗೆ ಕೊಂಡೊಯ್ಯಲು ನಿರ್ಣಯಿಸಿದರು. ಸುಮಾರು 240 ಕಿ.ಮೀ. ದೂರದ ನಡಿಗೆಯನ್ನು ಆರಂಭಿಸಲು ಅವರು ನಮ್ಮನ್ನು ಬಲವಂತಪಡಿಸಿದರು. ಫೆಬ್ರವರಿ 19ರಂದು ಹೊರಟ ನಾವು ನಾಲ್ಕು ವಾರಗಳ ನಂತರ ಜರ್ಮನಿಯ ಸ್ಟೀನ್‌ಫೆಲ್ಸ್‌ಗೆ ತಲಪಿದೆವು. ಅಲ್ಲಿ ಆ ಸಿಪಾಯಿಗಳು ಎಲ್ಲ ಸೆರೆವಾಸಿಗಳನ್ನು ಒಂದು ಗಣಿಯಲ್ಲಿ ಹಾಕಿಬಿಟ್ಟರು. ನಮ್ಮೆಲ್ಲರನ್ನು ಕೊಲ್ಲಲಾಗುವುದೆಂದು ಅನೇಕರು ನೆನಸಿದರು. ಆದರೆ ಅದೇ ದಿನ ಮಿತ್ರಪಡೆಗಳು ಆಗಮಿಸಿದವು, ಆ ಸಿಪಾಯಿಗಳು ಓಡಿಹೋದರು ಮತ್ತು ನಮ್ಮ ಕಷ್ಟತಾಪತ್ರಯಗಳು ಮುಗಿದವು.
ನನ್ನ ಗುರಿಗಳನ್ನು ತಲಪುವುದು
1945ರ ಮೇ 5ರಂದು, ಅಂದರೆ ಹೆಚ್ಚುಕಡಿಮೆ ಎರಡೂವರೆ ವರ್ಷಗಳ ಬಳಿಕ ನಾವು ಯುಟ್ಸ್ ಪಟ್ಟಣಕ್ಕೆ ಹಿಂದೆಬಂದೆವು. ನಮ್ಮ ಮೈಯೆಲ್ಲ ಗಲೀಜಾಗಿದ್ದು, ಹೇನುಗಳು ತುಂಬಿಕೊಂಡಿದ್ದವು. ಫೆಬ್ರವರಿ ತಿಂಗಳಂದಿನಿಂದ ನಾವು ಬಟ್ಟೆ ಬದಲಾಯಿಸಿರಲಿಲ್ಲ. ಆದ್ದರಿಂದ ನಾವು ಆ ಹಳೇ ಉಡುಪುಗಳನ್ನು ಸುಟ್ಟುಹಾಕಲು ನಿರ್ಣಯಿಸಿದೆವು. ಆ ದಿನ ನನ್ನ ತಾಯಿ ಹೇಳಿದ ಈ ಮಾತುಗಳು ನನಗಿನ್ನೂ ನೆನಪಿವೆ: “ಇದು ನಿಮ್ಮ ಬದುಕಿನ ಅತೀ ಸುಂದರ ದಿನವಾಗಿರಲಿ. ನಮ್ಮ ಬಳಿ ಏನೂ ಇಲ್ಲ. ನಾವು ಧರಿಸಿರುವ ಉಡುಪು ಸಹ ನಮ್ಮದಲ್ಲ. ಹಾಗಿದ್ದರೂ, ನಾವು ನಾಲ್ಕೂ ಮಂದಿ ರಾಜಿಮಾಡಿಕೊಳ್ಳದೆ ನಂಬಿಗಸ್ತರಾಗಿ ವಾಪಸ್ ಬಂದಿದ್ದೇವೆ.”
ಸ್ವಿಟ್ಸರ್‌ಲೆಂಡ್‌ನಲ್ಲಿ ಮೂರು ತಿಂಗಳ ವಿಶ್ರಾಂತಿಯ ಬಳಿಕ ಚೇತರಿಸಿಕೊಂಡ ನಾನು ಪುನಃ ಶಾಲೆಗೆ ಹೋದೆ. ಈಗಲಾದರೋ ಶಾಲೆಯಿಂದ ಹೊರಹಾಕಲ್ಪಡುವ ಭಯ ನನಗಿರಲಿಲ್ಲ. ನಾವೀಗ ಬಹಿರಂಗವಾಗಿ ನಮ್ಮ ಆಧ್ಯಾತ್ಮಿಕ ಸಹೋದರರೊಂದಿಗೆ ಕೂಟಗಳಲ್ಲಿ ಸೇರಬಹುದಿತ್ತು ಮತ್ತು ಸಾರಬಹುದಿತ್ತು. ನಾನು ವರ್ಷಗಳ ಹಿಂದೆ ಯೆಹೋವನಿಗೆ ಮಾಡಿದ ಸಮರ್ಪಣೆಯನ್ನು ನನ್ನ 13ರ ಪ್ರಾಯದಲ್ಲಿ ಅಂದರೆ 1947ರ ಆಗಸ್ಟ್ 28ರಂದು ಬಹಿರಂಗವಾಗಿ ತೋರಿಸಿದೆ. ನನ್ನ ತಂದೆ ನನಗೆ ಮೊಸೆಲ್ ನದಿಯಲ್ಲಿ ದೀಕ್ಷಾಸ್ನಾನಕೊಟ್ಟರು. ನಾನು ಆ ಕೂಡಲೇ ಪಯನೀಯರಳಾಗಲು ಬಯಸಿದೆ, ಆದರೆ ನಾನು ಮೊದಲು ಒಂದು ಕಸಬನ್ನು ಕಲಿಯಬೇಕೆಂದು ತಂದೆ ಪಟ್ಟುಹಿಡಿದರು. ಹೀಗೆ ನಾನು ಹೊಲಿಗೆ ಕೆಲಸ ಕಲಿತೆ. 17 ವರ್ಷ ಪ್ರಾಯದಲ್ಲಿ ಅಂದರೆ 1951ರಲ್ಲಿ ನನಗೆ ಹತ್ತಿರದ ಥಿಯೊನ್‌ವಿಲ್ಲೇ ಎಂಬಲ್ಲಿ ವಿಶೇಷ ಪಯನೀಯರಳಾಗಿ ಸೇವೆಸಲ್ಲಿಸುವ ನೇಮಕ ಸಿಕ್ಕಿತು.
ಆ ವರ್ಷದಲ್ಲೇ, ನಾನು ಪ್ಯಾರಿಸ್‌ನಲ್ಲಿ ಸಮ್ಮೇಳನವೊಂದನ್ನು ಹಾಜರಾದೆ ಮತ್ತು ಮಿಷನೆರಿ ಸೇವೆಗೆ ಅರ್ಜಿಹಾಕಿದೆ. ಮಿಷನೆರಿಯಾಗಲು ನಾನಿನ್ನೂ ವಯಸ್ಸಿನ ಅರ್ಹತೆ ಹೊಂದಿರಲಿಲ್ಲ. ಆದರೆ ಸಹೋದರ ನೇತನ್ ನಾರ್, ಆ ಅರ್ಜಿಯನ್ನು “ಮುಂದೆ” ಪರಿಗಣಿಸಬೇಕಾಗುವುದೆಂಬ ಕಾರಣಕ್ಕಾಗಿ ಅದನ್ನು ಇಡುವುದಾಗಿ ಹೇಳಿದರು. 1952ರ ಜೂನ್ ತಿಂಗಳಲ್ಲಿ, ಅಮೆರಿಕದ ನ್ಯೂ ಯಾರ್ಕ್‌ನ ಸೌತ್ ಲಾನ್ಸಿಂಗ್‌ನಲ್ಲಿ ವಾಚ್‌ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್‌ನ 21ನೇ ತರಗತಿಗೆ ಹಾಜರಾಗುವ ಆಮಂತ್ರಣ ನನಗೆ ಸಿಕ್ಕಿತು.
ಗಿಲ್ಯಡ್ ಶಾಲೆ ಮತ್ತು ನಂತರದ ಬದುಕು
ಅದೆಂಥ ಅಮೋಘ ಅನುಭವ! ನನ್ನ ಮಾತೃಭಾಷೆ ಬಿಟ್ಟು ಬೇರಾವುದೇ ಭಾಷೆಯಲ್ಲಿ ನನಗೆ ಬಹಿರಂಗವಾಗಿ ಮಾತಾಡಲು ಆಗುತ್ತಿರಲಿಲ್ಲ. ಆದರೆ ಈಗ ನಾನು ಇಂಗ್ಲಿಷ್‌ನಲ್ಲೇ ಮಾತಾಡಬೇಕಿತ್ತು. ಶಿಕ್ಷಕರಾದರೋ ನನಗೆ ಪ್ರೀತಿಯಿಂದ ಬೆಂಬಲ ಕೊಟ್ಟರು. ಒಬ್ಬ ಸಹೋದರನಂತೂ ನನಗೆ ‘ರಾಜ್ಯ ಮುಗುಳ್ನಗೆ’ ಎಂಬ ಅಡ್ಡಹೆಸರನ್ನಿಟ್ಟರು, ಏಕೆಂದರೆ ನನಗೆ ನಾಚಿಕೆಯಾದಾಗಲೆಲ್ಲ ನನ್ನ ಮುಖದಲ್ಲಿ ಮುಗುಳ್ನಗೆ ಲಾಸ್ಯವಾಡುತ್ತಿತ್ತು.
ನಮ್ಮ ಪದವಿಪ್ರದಾನ ಕಾರ್ಯಕ್ರಮವು ನ್ಯೂ ಯಾರ್ಕ್‌ನ ಯಾಂಕೀ ಸ್ಟೇಡಿಯಮ್‌ನಲ್ಲಿ 1953ರ ಜುಲೈ 19ರಂದು ನಡೆಯಿತು. ನನ್ನನ್ನು ಐಡಾ ಕ್ಯಾಂಡುಸ್ಸೊ (ವಿವಾಹಾನಂತರ ಐಡಾ ಸೀಗ್‌ನೊಬೊಸ್) ಎಂಬಾಕೆಯೊಂದಿಗೆ ಪ್ಯಾರಿಸ್‌ಗೆ ನೇಮಿಸಲಾಯಿತು. ಪ್ಯಾರಿಸ್‌ನ ಶ್ರೀಮಂತ ಜನರಿಗೆ ಸಾಕ್ಷಿಕೊಡಲು ನನಗೆ ಹೆದರಿಕೆಯಾಗುತ್ತಿದ್ದರೂ, ಹಲವಾರು ನಮ್ರಭಾವದ ಜನರೊಂದಿಗೆ ಬೈಬಲ್ ಅಧ್ಯಯನ ಮಾಡಲು ಶಕ್ತಳಾದೆ. ಐಡಾ 1956ರಲ್ಲಿ ಮದುವೆಯಾಗಿ ಆಫ್ರಿಕಕ್ಕೆ ಹೊರಟಳು, ಆದರೆ ನಾನು ಪ್ಯಾರಿಸ್‌ನಲ್ಲೇ ಉಳಿದೆ.
1960ರಲ್ಲಿ ನಾನು ಬೆತೆಲಿನ ಸಹೋದರನೊಬ್ಬನನ್ನು ಮದುವೆಯಾದೆ. ನಂತರ ನಾವು ಚೌಮಂಟ್ ಮತ್ತು ವಿಚಿಯಲ್ಲಿ ವಿಶೇಷ ಪಯನೀಯರರಾಗಿ ಸೇವೆಸಲ್ಲಿಸಿದೆವು. ಐದು ವರ್ಷಗಳ ಬಳಿಕ ನನಗೆ ಕ್ಷಯರೋಗ ತಗಲಿತು. ಆದ್ದರಿಂದ ಪಯನೀಯರ್ ಸೇವೆ ನಿಲ್ಲಿಸಬೇಕಾಯಿತು. ಇದು ನನಗೆ ತುಂಬ ದುಃಖ ತಂದಿತು. ಏಕೆಂದರೆ ಬಾಲ್ಯದಿಂದಲೇ ನನ್ನ ಗುರಿ ಪೂರ್ಣ ಸಮಯದ ಸೇವೆಯಾಗಿದ್ದು, ಅದರಲ್ಲೇ ಉಳಿಯಬೇಕೆಂದೆಣಿಸಿದ್ದೆ. ಸ್ವಲ್ಪ ಸಮಯಾನಂತರ ನನ್ನ ಗಂಡ ನನ್ನನ್ನು ಬಿಟ್ಟು ಇನ್ನೊಬ್ಬ ಸ್ತ್ರೀಯ ಹಿಂದೆ ಹೋದನು. ನನ್ನ ಆಧ್ಯಾತ್ಮಿಕ ಸಹೋದರ ಸಹೋದರಿಯರು ಕೊಟ್ಟ ಬೆಂಬಲವು ನನಗೆ ಆ ಕರಾಳ ವರ್ಷಗಳಾದ್ಯಂತ ಸಹಾಯಮಾಡಿತು. ಅಲ್ಲದೇ, ಯೆಹೋವನು ನನ್ನ ಭಾರವನ್ನು ಹೊರುವುದನ್ನು ಮುಂದುವರಿಸಿದನು.—ಕೀರ್ತ. 68:19.
ನಾನೀಗ ಫ್ರಾನ್ಸ್ ದೇಶದ ಬ್ರಾಂಚ್ ಆಫೀಸಿನ ಹತ್ತಿರದಲ್ಲಿರುವ ನಾರ್ಮಂಡಿಯ ಲೂವಿಯಾ ಎಂಬಲ್ಲಿ ವಾಸಿಸುತ್ತಿದ್ದೇನೆ. ನನಗೆ ಆರೋಗ್ಯ ಸಮಸ್ಯೆಗಳಿದ್ದರೂ, ನನ್ನ ಬದುಕಿನಲ್ಲಿ ಯೆಹೋವನ ಸಹಾಯಹಸ್ತವನ್ನು ನೋಡಿ ಸಂತೋಷಪಡುತ್ತೇನೆ. ನನಗೆ ಬಾಲ್ಯದಿಂದ ಸಿಕ್ಕಿರುವ ತರಬೇತಿಯು ನಾನು ಸರಿಯಾದ ಮನೋಭಾವವನ್ನು ಇಟ್ಟುಕೊಳ್ಳಲು ಈಗಲೂ ಸಹಾಯಮಾಡುತ್ತಿದೆ. ನನ್ನ ಹೆತ್ತವರು ನನಗೆ ಕಲಿಸಿದಂತೆ, ಯೆಹೋವನು ಒಬ್ಬ ನೈಜ ವ್ಯಕ್ತಿಯಾಗಿದ್ದಾನೆ, ನಾನು ಆತನನ್ನು ಪ್ರೀತಿಸಬಹುದು, ಆತನೊಂದಿಗೆ ಮಾತಾಡಬಹುದು ಮತ್ತು ಆತನು ನನ್ನ ಪ್ರಾರ್ಥನೆಗಳನ್ನು ಉತ್ತರಿಸುತ್ತಾನೆ. ನಾನು “ಯೆಹೋವನ ಮಹೋಪಕಾರಗಳಿಗೆ ಬದಲೇನು ಮಾಡಲಿ?”—ಕೀರ್ತ. 116:12.
[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರಣೆ]
“ನನ್ನ ಬದುಕಿನಲ್ಲಿ ಯೆಹೋವನ ಸಹಾಯಹಸ್ತವನ್ನು ನೋಡಿ ಸಂತೋಷಪಡುತ್ತೇನೆ”
[ಪುಟ 5ರಲ್ಲಿರುವ ಚಿತ್ರ]
ಆರು ವರ್ಷದವಳಾಗಿದ್ದಾಗ ನನಗಿದ್ದ ಅನಿಲ ಮೊಗವಾಡ
[ಪುಟ 5ರಲ್ಲಿರುವ ಚಿತ್ರ]
16ರ ಪ್ರಾಯದ ನಾನು, ಲಕ್ಸೆಂಬರ್ಗ್‌ನಲ್ಲಿ ವಿಶೇಷ ಸಾರುವ ಕಾರ್ಯಾಚರಣೆಗಾಗಿ ಮಿಷನೆರಿಗಳು ಹಾಗೂ ಪಯನೀಯರರೊಂದಿಗೆ
[ಪುಟ 5ರಲ್ಲಿರುವ ಚಿತ್ರ]
1953ರಲ್ಲಿ ಅಧಿವೇಶನದಲ್ಲಿ ತಂದೆತಾಯಿಯೊಂದಿಗೆ