ಮನೆಯಿಂದ ದೂರ ಮನಕ್ಕೆ ಸನಿಹ
ಮನೆಯಿಂದ ದೂರ ಮನಕ್ಕೆ ಸನಿಹ
ಅಪೊಸ್ತಲ ಪೌಲನು ಜೊತೆ ಕ್ರೈಸ್ತರಿಗೆ ಈ ಬುದ್ಧಿವಾದ ಕೊಟ್ಟನು: “ಸಮಯವಿರಲಾಗಿ ಎಲ್ಲರಿಗೆ ಒಳ್ಳೇದನ್ನು ಮಾಡೋಣ; ಮುಖ್ಯವಾಗಿ ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯುಳ್ಳವರಿಗೆ ಮಾಡೋಣ.” (ಗಲಾ. 6:10) ಈ ಪ್ರೇರಿತ ಸಲಹೆಯನ್ನು ನಾವು ಇಂದೂ ಪಾಲಿಸುತ್ತೇವೆ ಮತ್ತು ನಮ್ಮ ಜೊತೆ ವಿಶ್ವಾಸಿಗಳಿಗೆ ಒಳಿತು ಮಾಡುವ ಅವಕಾಶಗಳಿಗಾಗಿ ಹುಡುಕುತ್ತೇವೆ. ವೃದ್ಧರ ನರ್ಸಿಂಗ್ ಹೋಮ್‌ಗಳಲ್ಲಿ ವಾಸಿಸುವ ಇಳಿವಯಸ್ಸಿನ ನಮ್ಮ ಪ್ರಿಯ ಸಹೋದರ ಸಹೋದರಿಯರಿಗೆ ಕ್ರೈಸ್ತ ಸಭೆಯ ಅಕ್ಕರೆಯು ಅವಶ್ಯ ಮತ್ತು ಅವರದಕ್ಕೆ ಸತ್ಪಾತ್ರರು ಕೂಡ.
ಕೆಲವು ದೇಶಗಳಲ್ಲಿ ವೃದ್ಧ ಹೆತ್ತವರನ್ನು ಕುಟುಂಬದವರು ಮನೆಯಲ್ಲೇ ನೋಡಿಕೊಳ್ಳುವ ವಾಡಿಕೆಯಿದೆ. ಆದರೆ ಇತರ ದೇಶಗಳಲ್ಲಿ ವೃದ್ಧರು ಅವರಿಗಾಗಿರುವ ನರ್ಸಿಂಗ್ ಹೋಮ್‌ನ ಆಶ್ರಯದಲ್ಲಿ ಜೀವಿಸುತ್ತಾರೆ. ಇಂಥ ನರ್ಸಿಂಗ್ ಹೋಮ್‌ಗಳಲ್ಲಿ ವಾಸಿಸುವ ನಮ್ಮ ವೃದ್ಧ ಕ್ರೈಸ್ತರ ಕುರಿತೇನು? ಅವರು ಯಾವ ಸಮಸ್ಯೆಗಳನ್ನು ಎದುರಿಸುತ್ತಾರೆ? ಕುಟುಂಬದವರ ನೆರವಿಲ್ಲದಿರುವಲ್ಲಿ ಅವರು ತಮ್ಮನ್ನೇ ಹೇಗೆ ಸಂಭಾಳಿಸಿಕೊಳ್ಳಬಲ್ಲರು? ಕ್ರೈಸ್ತ ಸಭೆಯು ಅವರಿಗೆ ಹೇಗೆ ನೆರವು ನೀಡಬಲ್ಲದು? ಅಲ್ಲದೆ, ಅವರನ್ನು ಕ್ರಮವಾಗಿ ಭೇಟಿಮಾಡುವುದರಿಂದ ನಮಗೇನಾದರೂ ಪ್ರಯೋಜನವಿದೆಯೇ?
ನರ್ಸಿಂಗ್ ಹೋಮ್‌ನಲ್ಲಿ ಅವರು ಎದುರಿಸುವ ಸಮಸ್ಯೆಗಳು
ವೃದ್ಧ ಕ್ರೈಸ್ತರು ಸೇರಿಕೊಂಡಿರುವ ನರ್ಸಿಂಗ್ ಹೋಮ್ ಇನ್ನೊಂದು ಸಭೆಯ ಟೆರಿಟೊರಿಯಲ್ಲಿರಬಹುದು. ಸ್ಥಳಿಕ ಸಾಕ್ಷಿಗಳಿಗೆ ಇವರ ಅಷ್ಟೊಂದು ಪರಿಚಯ ಇರಲಿಕ್ಕಿಲ್ಲವಾದ್ದರಿಂದ ಅವರು ಆ
ವೃದ್ಧ ಸಾಕ್ಷಿಗಳನ್ನು ಕ್ರಮವಾಗಿ ಭೇಟಿಮಾಡುವುದರ ಬಗ್ಗೆ ಯೋಚಿಸಲಿಕ್ಕಿಲ್ಲ. ಅಲ್ಲದೆ, ನರ್ಸಿಂಗ್ ಹೋಮ್‌ನಲ್ಲಿರುವವರು ವಿಭಿನ್ನ ಧರ್ಮಗಳವರು ಆಗಿರುವುದರಿಂದ ನಮ್ಮ ವೃದ್ಧ ಸಾಕ್ಷಿಗಳಿಗೆ ಸಮಸ್ಯೆಗಳೇಳಬಲ್ಲವು.ಉದಾಹರಣೆಗೆ ಕೆಲವು ಕಡೆಗಳಲ್ಲಿ ನರ್ಸಿಂಗ್ ಹೋಮ್‌ನ ಆವರಣದಲ್ಲೇ ಧಾರ್ಮಿಕ ಸಂಸ್ಕಾರಗಳನ್ನು ನಡೆಸಲಾಗುತ್ತದೆ. ನರ್ಸ್ ಒಬ್ಬರು ತಿಳಿಸುವುದು: “ಸ್ಪಷ್ಟವಾಗಿ ಮಾತಾಡಲು ಅಶಕ್ತರಾಗಿರುವ ಕೆಲವು ವೃದ್ಧ ಕ್ರೈಸ್ತರನ್ನು ವಿಚಾರಿಸದೆ, ಗಾಲಿಕುರ್ಚಿಯಲ್ಲಿ ಹಾಕಿ ಇಗರ್ಜಿಯ ಸಂಸ್ಕಾರಗಳಿಗೆ ಕರೆದುಕೊಂಡು ಹೋಗಲಾಗಿದೆ.” ಅಲ್ಲದೆ ನಿವಾಸಿಗಳನ್ನು ಸಂತೋಷಪಡಿಸಲೆಂದು ನರ್ಸಿಂಗ್ ಹೋಮ್‌ಗಳ ಸಿಬ್ಬಂದಿಗಳು ಹುಟ್ಟುಹಬ್ಬಗಳನ್ನು, ಕ್ರಿಸ್‌ಮಸ್ ಅಥವಾ ಇನ್ನಿತರ ಹಬ್ಬಗಳನ್ನು ಮಾಡುತ್ತಾರೆ. ಕೆಲವು ಸಾಕ್ಷಿಗಳಿಗೆ ಅವರ ಮನಸ್ಸಾಕ್ಷಿ ಒಪ್ಪದಂಥ ಆಹಾರ ಪದಾರ್ಥಗಳನ್ನೂ ಬಡಿಸಲಾಗಿದೆ. (ಅ. ಕೃ. 15:28, 29) ನಮ್ಮ ವೃದ್ಧ ಸಹೋದರ ಸಹೋದರಿಯರನ್ನು ನಾವು ಕ್ರಮವಾಗಿ ಭೇಟಿಮಾಡುತ್ತಿರುವುದಾದರೆ ಇಂಥ ಸಮಸ್ಯೆಗಳನ್ನು ನಿಭಾಯಿಸುವಂತೆ ಅವರಿಗೆ ನೆರವಾಗಬಲ್ಲೆವು.
ಸಭೆಯ ಬೆಂಬಲ
ವೃದ್ಧರ ಪರಾಂಬರಿಕೆಗೆ ಅವರ ಕುಟುಂಬದವರು ಇರದಿದ್ದಾಗ ಆದಿ ಕ್ರೈಸ್ತರು ಅದನ್ನು ತಮ್ಮ ಜವಾಬ್ದಾರಿಯಾಗಿ ವಹಿಸಿಕೊಂಡರು. (1 ತಿಮೊ. 5:9) ತದ್ರೀತಿಯಲ್ಲಿ ಇಂದು ಮೇಲ್ವಿಚಾರಕರು ತಮ್ಮ ಕ್ಷೇತ್ರದ ನರ್ಸಿಂಗ್ ಹೋಮ್‌ಗಳಲ್ಲಿರುವ ಕ್ರೈಸ್ತ ವೃದ್ಧರನ್ನು ಕಡೆಗಣಿಸಲಾಗಿಲ್ಲ ಎಂಬದನ್ನು ಖಚಿತಪಡಿಸುತ್ತಾರೆ. * ರಾಬರ್ಟ್ ಎಂಬ ಹಿರಿಯನು ತಿಳಿಸುವುದು: “ಸ್ವತಃ ಕ್ರೈಸ್ತ ಮೇಲ್ವಿಚಾರಕರು ವೃದ್ಧರನ್ನು ಭೇಟಿಮಾಡಿ ಅವರ ಸ್ಥಿತಿಗತಿಗಳನ್ನು ವಿಚಾರಿಸಿ ಅವರೊಂದಿಗೆ ಪ್ರಾರ್ಥಿಸಿದರೆ ತುಂಬ ಒಳ್ಳೇದು. ಸಭೆಯವರು ಸಹ ಅವರ ಅಗತ್ಯತೆಗಳನ್ನು ನೋಡಿಕೊಳ್ಳಬಲ್ಲರು.” ಅಗತ್ಯವಿದ್ದವರಿಗೆ ನೆರವು ನೀಡುವುದು ಯೆಹೋವನ ದೃಷ್ಟಿಯಲ್ಲಿ ಬಹುಮೂಲ್ಯವಾಗಿದೆ. ವೃದ್ಧರನ್ನು ಭೇಟಿಮಾಡಲು ಸಮಯ ಮಾಡುವ ಮೂಲಕ ಈ ಮಾತು ನಮಗೆ ಚೆನ್ನಾಗಿ ಅರ್ಥವಾಗಿದೆ ಎಂದು ತೋರಿಸುತ್ತೇವೆ.—ಯಾಕೋ. 1:27.
ಸ್ಥಳಿಕ ನರ್ಸಿಂಗ್ ಹೋಮ್‌ನಲ್ಲಿ ವಾಸಿಸುವ ತಮ್ಮ ಸಹೋದರ ಸಹೋದರಿಯರಿಗೆ ಅಗತ್ಯವಿರುವ ಪ್ರಾಯೋಗಿಕ ನೆರವು ನೀಡಲು ಹಿರಿಯರು ಸಂತೋಷದಿಂದ ಏರ್ಪಾಡು ಮಾಡುತ್ತಾರೆ. ಅಗತ್ಯವಿರಬಹುದಾದ ಒಂದು ಸಂಗತಿಯ ಕುರಿತು ರಾಬರ್ಟ್ ಹೇಳುವುದು: “ವೃದ್ಧ ಸಹೋದರ ಸಹೋದರಿಯರು ಶಕ್ತರಿರುವಲ್ಲಿ ಕ್ರೈಸ್ತ ಕೂಟಗಳಿಗೆ ಬರುವಂತೆ ಅವರನ್ನು ಹುರಿದುಂಬಿಸಬೇಕು.” ಆದರೆ ರಾಜ್ಯ ಸಭಾಗೃಹಕ್ಕೆ ಬರಲು ಅಶಕ್ತರಾದವರಿಗಾಗಿ ಹಿರಿಯರು ಇತರ ಏರ್ಪಾಡು ಮಾಡಬಲ್ಲರು. 85ರ ಆಸುಪಾಸಿನಲ್ಲಿರುವ ಸಾಕ್ಲೀನ್ ಎಂಬ ಸಹೋದರಿಗೆ ಅಸ್ಥಿಸಂಧಿವಾತ ಇದೆ. ಆಕೆ ಕೂಟಗಳನ್ನು ಫೋನ್ ಮೂಲಕ ಆಲಿಸುತ್ತಾಳೆ. ಆಕೆ ಹೇಳುವುದು: “ಕೂಟಗಳು ನಡೆಯುತ್ತಿರುವಾಗಲೇ ಅವುಗಳನ್ನು ಕೇಳಿಸಿಕೊಳ್ಳುವುದರಿಂದ ನನಗೆ ತುಂಬ ಹಿತವೆನಿಸುತ್ತದೆ. ಏನೇ ಆಗಲಿ ಕೂಟಗಳಿಗೆ ಕಿವಿಗೊಡುವುದನ್ನು ಮಾತ್ರ ನಾನು ತಪ್ಪಿಸುವುದೇ ಇಲ್ಲ!”
ಒಬ್ಬ ವೃದ್ಧ ಕ್ರೈಸ್ತನಿಗೆ ಫೋನ್ ಮೂಲಕ ಕೂಟಗಳನ್ನು ಆಲಿಸಲು ಸಾಧ್ಯವಿರದಿದ್ದಲ್ಲಿ ಅವುಗಳನ್ನು ರೆಕಾರ್ಡ್ ಮಾಡಲು ಹಿರಿಯರು ಏರ್ಪಡಿಸಬಹುದು. ನೇಮಿಸಲ್ಪಟ್ಟ ವ್ಯಕ್ತಿಯು ರೆಕಾರ್ಡ್ ಮಾಡಿದ ಮಾಹಿತಿಯನ್ನು ನರ್ಸಿಂಗ್ ಹೋಮ್‌ನಲ್ಲಿರುವ ಸಹೋದರ ಅಥವಾ ಸಹೋದರಿಗೆ ತಲುಪಿಸುವಾಗ ಆ ಸಂದರ್ಭವನ್ನು ಉತ್ತೇಜಕ ಮಾತುಕತೆ ನಡೆಸಲು ಬಳಸಬಲ್ಲನು. ಒಬ್ಬ ಮೇಲ್ವಿಚಾರಕನು ಹೇಳುವುದು: “ವೃದ್ಧ ಸಹೋದರ ಸಹೋದರಿಯರಿಗೆ ಸಭೆಯಲ್ಲಿರುವವರ ಕುರಿತು ಹೇಳುವಾಗ, ತಾವು ಈಗಲೂ ಆಧ್ಯಾತ್ಮಿಕ ಕುಟುಂಬದ ಭಾಗವಾಗಿದ್ದೇವೆ ಎಂದು ಅವರಿಗೆ ಭಾಸವಾಗುತ್ತದೆ.”
ಸಂವಾದಿಸಲು ಪ್ರಯತ್ನಿಸಿ
ನರ್ಸಿಂಗ್ ಹೋಮ್‌ಗೆ ಸೇರಿಕೊಳ್ಳುವ ಸಂದರ್ಭದಲ್ಲಿ ಅನೇಕರು ಭಾರೀ ಒತ್ತಡ ಹಾಗೂ ದಿಗ್ಭ್ರಮೆಗೊಳಗಾಗುತ್ತಾರೆ. ಇದರಿಂದಾಗಿ ಕೆಲವರು ಯಾರೊಂದಿಗೂ ಮಾತಾಡದೆ ಚಿಪ್ಪಿನೊಳಗೆ ಸೇರಿಕೊಳ್ಳುತ್ತಾರೆ. ಆದರೆ ವೃದ್ಧ ಸಹೋದರ ಸಹೋದರಿಯರು ನರ್ಸಿಂಗ್ ಹೋಮ್‌ಗೆ ಸ್ಥಳಾಂತರಿಸಿದ ಕೂಡಲೇ ನಾವು ಅವರನ್ನು ಭೇಟಿಮಾಡಿ ಅವರಿಗೆ ನೆರವು ನೀಡುತ್ತಿರುವೆವು ಎಂಬದನ್ನು ತೋರಿಸಿದರೆ ಅವರು ಕಳೆದುಕೊಂಡಿರುವ ಮನಶ್ಶಾಂತಿ ಮತ್ತು ಹರ್ಷವನ್ನು ಪುನಃ ಕಂಡುಕೊಳ್ಳಶಕ್ತರಾಗುವರು.—ಜ್ಞಾನೋ. 17:22.
ಕೆಲವೊಮ್ಮೆ ವೃದ್ಧ ಸಹೋದರ ಸಹೋದರಿಯರು ತಮ್ಮ ಮಾನಸಿಕ ಸಾಮರ್ಥ್ಯ ಅಥವಾ ಶ್ರವಣ ಶಕ್ತಿಯನ್ನು ಕಳಕೊಂಡಿರುತ್ತಾರೆ ಇಲ್ಲವೇ ಮಾತಾಡುವುದನ್ನು ಕಷ್ಟಕರವನ್ನಾಗಿಸುವ ಇನ್ನಾವುದೋ ಸಮಸ್ಯೆ ಅವರಿಗಿರುತ್ತದೆ. ಇಂಥವರನ್ನು ಭೇಟಿಯಾಗಿಯೂ ಪ್ರಯೋಜನವಿಲ್ಲ ಎಂದು ಕೆಲವರಿಗನಿಸಬಹುದು. ಅವರೊಂದಿಗೆ ಮಾತಾಡಲು ಎಷ್ಟೇ ಕಷ್ಟವಾದರೂ ನಾವು ಅವರನ್ನು ಭೇಟಿಮಾಡಬೇಕು. ಹೀಗೆ ನಮ್ಮ ಜೊತೆ ವಿಶ್ವಾಸಿಗಳಿಗೆ ‘ಮಾನಮರ್ಯಾದೆ ತೋರಿಸುವದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿದ್ದೇವೆ’ ಎಂಬದನ್ನು ರುಜುಪಡಿಸುತ್ತೇವೆ. (ರೋಮಾ. 12:10) ವೃದ್ಧ ಸಹೋದರರೊಬ್ಬರಿಗೆ ಇತ್ತೀಚಿನ ಸಂಗತಿಗಳನ್ನು ಮರೆಯುವ ಸಮಸ್ಯೆ ಇರುವಲ್ಲಿ, ತನ್ನ ಬಾಲ್ಯದ ಇಲ್ಲವೆ ಯೌವನದ ಅನುಭವಗಳನ್ನು ಅಥವಾ ಸತ್ಯ ಸಿಕ್ಕಿದ್ದರ ಕುರಿತು ಹೇಳುವಂತೆ ನಾವು ಅವರನ್ನು ಪ್ರೋತ್ಸಾಹಿಸಬಹುದು. ಅವರು ಮಾತಾಡುತ್ತಿದ್ದಂತೆ ಸೂಕ್ತ ಪದಗಳಿಗಾಗಿ ಪರದಾಡುವುದಾದರೆ ಆಗೇನು? ತಾಳ್ಮೆಯಿಂದ ಕಿವಿಗೊಡಿ ಮತ್ತು ಯೋಗ್ಯವಾದಲ್ಲಿ ಅವರು ತಡವರಿಸುತ್ತಿರುವ ಎರಡು ಮೂರು ಪದಗಳನ್ನು ಹೇಳಿಬಿಡಿ ಅಥವಾ ಅವರು ಹೇಳುತ್ತಿರುವ ವಿಷಯವನ್ನು ಸಂಕ್ಷಿಪ್ತವಾಗಿ ಮತ್ತೆ ಹೇಳುವ ಮೂಲಕ ಮಾತು ಮುಂದುವರಿಸುವಂತೆ ಅವರನ್ನು ಪ್ರೋತ್ಸಾಹಿಸಿ. ಕೆಲವೊಮ್ಮೆ ಅವರಿಗೆ ಗಲಿಬಿಲಿಯಾಗುವುದರಿಂದ ಅಥವಾ ಮಾತಾಡುವಾಗ ತಡವರಿಸುವುದರಿಂದ ಅವರು ಹೇಳುತ್ತಿರುವ ಸಂಗತಿ ನಮಗೆ ಅರ್ಥವಾಗಲಿಕ್ಕಿಲ್ಲ. ಆದಾಗ್ಯೂ ಅವರ ಸ್ವರಕ್ಕೆ ನಿಕಟ ಗಮನಕೊಡುವುದರಿಂದ ಅವರು ಏನು ಹೇಳಬಯಸುತ್ತಾರೆ ಎಂಬದನ್ನು ನಾವು ಗ್ರಹಿಸಲು ಪ್ರಯತ್ನಿಸಬಹುದು.
ವೃದ್ಧರಿಗೆ ಮಾತಾಡಲು ಸಾಧ್ಯವೇ ಇರದಾಗ ಬೇರೆ ವಿಧಾನಗಳನ್ನು ಬಳಸಬಹುದು. ಲಾರಾನ್ಸ್ ಎಂಬ ಪಯನೀಯರಳು ಮಾತಾಡಲು ಅಶಕ್ತಳಾದ 80 ವರ್ಷ ಪ್ರಾಯದ ಮ್ಯಾಡಲೆನ್ ಎಂಬ ಕ್ರೈಸ್ತ ಸಹೋದರಿಯನ್ನು ಕ್ರಮವಾಗಿ ಭೇಟಿಮಾಡುತ್ತಾಳೆ. ಅವರ ಸಂವಾದದ ರೀತಿಯನ್ನು ಲಾರಾನ್ಸ್ ವಿವರಿಸುವುದು: “ನಾನು ಮ್ಯಾಡಲೆನ್‌ರ ಕೈ ಹಿಡಿದು ಪ್ರಾರ್ಥಿಸುತ್ತೇನೆ. ಆ ಅಮೂಲ್ಯ ಕ್ಷಣಗಳನ್ನು ಆಕೆಯೊಂದಿಗೆ ಕಳೆದದ್ದಕ್ಕಾಗಿ ಕೃತಜ್ಞತೆ ಸೂಚಿಸುತ್ತಾ ಆಕೆ ನನ್ನ ಕೈಯನ್ನು ಮೃದುವಾಗಿ ಒತ್ತಿ ಕಣ್ಣು ಮಿಟುಕಿಸುತ್ತಾಳೆ.” ನಮ್ಮ ವೃದ್ಧ ಸ್ನೇಹಿತರ ಕೈ ಹಿಡಿಯುವುದು ಅಥವಾ ಅವರನ್ನು ಅಪ್ಪಿಕೊಳ್ಳುವುದು ಅವರಲ್ಲಿ ಧೈರ್ಯ ತುಂಬಿಸುತ್ತದೆ.
ನಿಮ್ಮ ಉಪಸ್ಥಿತಿ ಮುಖ್ಯ
ನೀವು ಕ್ರಮವಾಗಿ ವೃದ್ಧರನ್ನು ಭೇಟಿಮಾಡುವುದು, ನರ್ಸಿಂಗ್ ಹೋಮ್‌ನ ಸಿಬ್ಬಂದಿಗಳು ಅವರನ್ನು ನೋಡಿಕೊಳ್ಳುವ ರೀತಿಯನ್ನು ಪ್ರಭಾವಿಸುತ್ತದೆ. ನರ್ಸಿಂಗ್ ಹೋಮ್‌ಗಳಲ್ಲಿ ವಾಸಿಸುವ ಜೊತೆ ಸಾಕ್ಷಿಗಳನ್ನು ಸುಮಾರು 20 ವರ್ಷಗಳಿಂದ ಭೇಟಿಮಾಡುತ್ತಿರುವ ಡೇನ್ಯೆಲ್ ತಿಳಿಸುವುದು: “ತಮ್ಮ ನರ್ಸಿಂಗ್ ಹೋಮ್‌ನ ನಿವಾಸಿಯೊಬ್ಬನನ್ನು ಕ್ರಮವಾಗಿ ಭೇಟಿಮಾಡುವವರು ಇದ್ದಾರೆ ಎಂದು ಅಲ್ಲಿನ ಸಿಬ್ಬಂದಿಗಳಿಗೆ ತಿಳಿಯುವಾಗ ಅವರು ಆ ವ್ಯಕ್ತಿಯ ಆರೈಕೆಯನ್ನು ಹೆಚ್ಚು ಉತ್ತಮವಾಗಿ ಮಾಡುತ್ತಾರೆ.” ಈ ಹಿಂದೆ ತಿಳಿಸಲಾಗಿರುವ ರಾಬರ್ಟ್ ಹೇಳುವುದು: “ಕ್ರಮವಾಗಿ ತಮ್ಮ ನರ್ಸಿಂಗ್ ಹೋಮ್‌ಗೆ ಭೇಟಿನೀಡುತ್ತಿರುವವನ ಮಾತನ್ನು ಅಲ್ಲಿನ ಸಿಬ್ಬಂದಿಗಳು ಕೇಳುವುದು ಹೆಚ್ಚು ಸಂಭವನೀಯ. ಆದರೆ ಅಪರೂಪವಾಗಿ ಸಂದರ್ಶಿಸುವವನ ಮಾತನ್ನು ಅವರು ಅಷ್ಟು ಕೇಳಲಿಕ್ಕಿಲ್ಲ.” ಅಲ್ಲಿನ ನರ್ಸ್‌ಗಳಿಗೆ ‘ಇದು ಕೊಡಿ, ಅದು ಮಾಡಿ’ ಎಂದು ಒತ್ತಾಯಿಸುವ ಕುಟುಂಬದವರೊಂದಿಗೆ ಹೆಚ್ಚಾಗಿ ವ್ಯವಹರಿಸಬೇಕಾಗುವುದರಿಂದ, ಸಂದರ್ಶಿಸುವವರು ಕೃತಜ್ಞತೆಯ ಮಾತುಗಳನ್ನಾಡಿದರೆ ಅವರಿಗೆ ತುಂಬ ಸಂತೋಷವಾಗುತ್ತದೆ. ಅಲ್ಲದೆ ಅಲ್ಲಿನ ನರ್ಸ್ ಸಿಬ್ಬಂದಿಗಳೊಂದಿಗೆ ನಾವು ಒಳ್ಳೇ ಸಂಬಂಧವನ್ನಿಟ್ಟುಕೊಂಡರೆ ಅವರ ಪರಾಂಬರಿಕೆಯಲ್ಲಿರುವ ವೃದ್ಧ ಸಾಕ್ಷಿಯ ಮೌಲ್ಯಗಳನ್ನೂ ನಂಬಿಕೆಗಳನ್ನೂ ಅವರು ಮಾನ್ಯಮಾಡುವ ಸಂಭವ ಹೆಚ್ಚು.
ಚಿಕ್ಕಪುಟ್ಟ ಕೆಲಸಗಳನ್ನು ಮಾಡುವುದರಿಂದಲೂ ಅಲ್ಲಿನ ಸಿಬ್ಬಂದಿಗಳೊಂದಿಗೆ ಉತ್ತಮ ಸಂಬಂಧವನ್ನಿಡಬಹುದು. ಕೆಲವು ಕಡೆ ಅರ್ಹ ಸಿಬ್ಬಂದಿಗಳ ಕೊರತೆ ಯಾವಾಗಲೂ ಇರುತ್ತದೆ. ಹಾಗಾಗಿ ವೃದ್ಧರಿಗೆ ಸಿಗಬೇಕಾದ ಆರೈಕೆಯ ಗುಣಮಟ್ಟ ಕಡಿಮೆಯಾಗುತ್ತದೆ. ನರ್ಸ್ ಆಗಿರುವ ರೆಬೆಕ್ಕಳ ಕಿವಿಮಾತು: “ಊಟದ ಹೊತ್ತಿನಲ್ಲಿ ತುಂಬ ಕಷ್ಟವಾಗುತ್ತದೆ. ಆದುದರಿಂದ ಈ ಸಮಯದಲ್ಲಿ ಬಂದು ನಿಮ್ಮ ಸ್ನೇಹಿತರಿಗೆ ಊಟಮಾಡಲು ಸಹಾಯಮಾಡುವುದು ಉತ್ತಮ.” ನಾವು ಯಾವ ರೀತಿಯಲ್ಲಿ ಸಹಾಯಮಾಡಬಹುದು ಎಂಬದನ್ನು ಸಿಬ್ಬಂದಿಗಳೊಂದಿಗೆ ಕೇಳಲು ಹಿಂಜರಿಯಬಾರದು.
ಒಂದು ನರ್ಸಿಂಗ್ ಹೋಮ್‌ಗೆ ನಾವು ಕ್ರಮವಾಗಿ ಭೇಟಿನೀಡುವಾಗ, ನಮ್ಮ ವೃದ್ಧ ಸಹೋದರ ಅಥವಾ ಸಹೋದರಿಗೆ ಏನು ಅಗತ್ಯವೆಂದು ನಮಗೆ ತಿಳಿದುಬರುತ್ತದೆ ಮತ್ತು ಸಿಬ್ಬಂದಿಗಳ ಪರವಾನಿಗೆ ತೆಗೆದುಕೊಂಡು ಅವರಿಗೆ ಬೇಕಾದದ್ದನ್ನು ತಂದು ಕೊಡಲು ನಾವೇ ಮುಂತೊಡಗಬಹುದು. ಉದಾಹರಣೆಗೆ, ಅವರ ಕೋಣೆಯನ್ನು ಅವರಿಗೆ ಪ್ರಿಯರಾದವರ ಫೋಟೋಗಳಿಂದ ಅಥವಾ ಚಿಕ್ಕ ಮಕ್ಕಳು ಬಿಡಿಸಿದ ಚಿತ್ರಗಳಿಂದ ಅಲಂಕರಿಸಬಹುದು. ಅವರ ಯೋಗಕ್ಷೇಮವನ್ನು ಮನಸ್ಸಿನಲ್ಲಿಟ್ಟು ಅವರನ್ನು ಬೆಚ್ಚಗಿರಿಸುವಂಥ ಬಟ್ಟೆಯನ್ನೋ ಸಾಬೂನ್ ಕ್ರೀಮ್ ಮೊದಲಾದ ಸಾಮಗ್ರಿಗಳನ್ನೋ ತಂದುಕೊಡಬಹುದು. ಆ ನರ್ಸಿಂಗ್ ಹೋಮ್‌ನ ವಠಾರದೊಳಗೆ ಉದ್ಯಾನವಿರುವಲ್ಲಿ ನಮ್ಮ ವೃದ್ಧ ಮಿತ್ರರನ್ನು ನಾವು ಹೊರಗೆ ಕರೆದುಕೊಂಡು ಹೋಗಬಲ್ಲೆವೋ? ಹಿಂದೆ ಉದ್ಧರಿಸಲಾದ ಲಾರಾನ್ಸ್ ಹೇಳುವುದು: “ಪ್ರತಿ ವಾರ ಮ್ಯಾಡಲೆನ್ ನಾನು ಬರುವುದನ್ನು ಕಾಯುತ್ತಿರುತ್ತಾರೆ. ನನ್ನ ಮಕ್ಕಳನ್ನು ಜೊತೆ ಕರಕೊಂಡು ಹೋದಾಗಲಂತೂ ಮುಗುಳ್ನಗೆ ಬೀರುತ್ತಾ ಆಕೆಯ ಕಣ್ಣುಗಳು ಹೊಳೆಯುತ್ತವೆ!” ಹೀಗೆ ನರ್ಸಿಂಗ್ ಹೋಮ್‌ಗಳಲ್ಲಿರುವವರಿಗಾಗಿ ಏನಾದರು ಮಾಡಲು ನಾವೇ ಮುಂತೊಡಗಿದರೆ ಅದು ಅವರ ಮೇಲೆ ಒಂದು ಹಿತಕರ ಪರಿಣಾಮಬೀರುವುದು.—ಜ್ಞಾನೋ. 3:27.
ಪರಸ್ಪರರಿಗೂ ಪ್ರಯೋಜನ
ಒಬ್ಬ ವೃದ್ಧ ವ್ಯಕ್ತಿಯನ್ನು ಕ್ರಮವಾಗಿ ಭೇಟಿಮಾಡುವುದರಿಂದ ‘ನಮ್ಮ ಪ್ರೀತಿ ಯಥಾರ್ಥವಾದದ್ದೋ’ ಎಂಬದನ್ನು ಪರೀಕ್ಷಿಸಲು ಒಂದು ಅವಕಾಶ ಸಿಗುತ್ತದೆ. (2 ಕೊರಿಂ. 8:8) ಅದು ಹೇಗೆ? ನಮ್ಮ ವೃದ್ಧ ಸ್ನೇಹಿತನು ದಿನೇ ದಿನೇ ಕೃಶನಾಗುತ್ತಿರುವುದನ್ನು ನೋಡುವುದು ತುಂಬ ಕಷ್ಟ. ಲಾರಾನ್ಸ್ ಒಪ್ಪಿಕೊಳ್ಳುವುದು: “ಮೊದಮೊದಲು, ಮ್ಯಾಡಲೆನ್‌ಳ ದುರ್ಬಲಾವಸ್ಥೆಯು ನನ್ನನ್ನೆಷ್ಟು ಬಾಧಿಸಿತ್ತೆಂದರೆ, ನಾನು ಆಕೆಯನ್ನು ಭೇಟಿಮಾಡಿ ಬಂದಾಗಲೆಲ್ಲ ಕಣ್ಣೀರಿಡುತ್ತಿದ್ದೆ. ಆದರೆ ಕಟ್ಟಾಸಕ್ತಿಯ ಪ್ರಾರ್ಥನೆಯ ಮೂಲಕ ನಮ್ಮ ಭಯವು ದೂರವಾಗಿ ಅವರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವಂತೆ ನಮಗೆ ಸಹಾಯ ಸಿಗುತ್ತದೆ ಎಂಬದನ್ನು ನಾನು ಕಲಿತೆ.” ಪಾರ್ಕಿನ್‌ಸನ್ಸ್ ವ್ಯಾಧಿಗೆ ತುತ್ತಾಗಿರುವ ಕ್ರೈಸ್ತ ಸಹೋದರ ಲ್ಯಾರಿ ಎಂಬವರನ್ನು ರಾಬರ್ಟ್ ಹಲವಾರು ವರ್ಷಗಳಿಂದ ಭೇಟಿನೀಡುತ್ತಿದ್ದಾರೆ. ರಾಬರ್ಟ್ ಹೇಳುವುದು: “ರೋಗವು ಲ್ಯಾರಿಯವರನ್ನು ಎಷ್ಟು ಆಕ್ರಮಿಸಿದೆ ಎಂದರೆ ಅವರು ಮಾತಾಡುವ ಒಂದು ಪದವೂ ನನಗೆ ಅರ್ಥವಾಗದು. ಆದರೆ ನಾವು ಒಟ್ಟಿಗೆ ಪ್ರಾರ್ಥನೆಮಾಡುವಾಗ ಅವರ ನಂಬಿಕೆ ನನಗೆ ಈಗಲೂ ಭಾಸವಾಗುತ್ತದೆ.”
ವೃದ್ಧ ಜೊತೆ ವಿಶ್ವಾಸಿಗಳನ್ನು ಭೇಟಿಮಾಡುವಾಗ ಪ್ರಯೋಜನ ಅವರಿಗೆ ಮಾತ್ರವಲ್ಲ ನಮಗೂ ಸಿಗುತ್ತದೆ. ವಿಭಿನ್ನ ನಂಬಿಕೆಗಳ ಜನರ ಮಧ್ಯೆ ಜೀವಿಸುವಾಗಲೂ ಯೆಹೋವನಿಗೆ ನಿಕಟವಾಗಿರಬೇಕೆಂಬ ಅವರ ದೃಢಸಂಕಲ್ಪವು ನಮಗೂ ನಂಬಿಕೆ ಮತ್ತು ಧೈರ್ಯವಿರಬೇಕೆಂಬ ಪಾಠವನ್ನು ಕಲಿಸುತ್ತದೆ. ದೃಷ್ಟಿ ಹಾಗೂ ಶ್ರವಣಶಕ್ತಿಯ ಕುಂದುಗಳಿದ್ದರೂ ಆಧ್ಯಾತ್ಮಿಕ ಆಹಾರ ಸೇವಿಸಲು ಅವರಿಗಿರುವ ಹುಮ್ಮಸ್ಸು, “ಮನುಷ್ಯನು ರೊಟ್ಟಿತಿಂದ ಮಾತ್ರದಿಂದ ಬದುಕುವದಿಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು” ಎಂಬದಕ್ಕೆ ಒತ್ತುನೀಡುತ್ತದೆ. (ಮತ್ತಾ. 4:4) ಮಗುವಿನ ನಗು, ಎಲ್ಲರೊಂದಿಗೆ ಕೂತು ಊಟಮಾಡುವುದು ಈ ಮೊದಲಾದ ಚಿಕ್ಕಪುಟ್ಟ ವಿಷಯಗಳಲ್ಲಿ ವೃದ್ಧರಿಗಾಗುವ ಆನಂದವು ಇದ್ದದರಲ್ಲಿ ಸಂತೃಪ್ತರಾಗಬೇಕೆಂಬದನ್ನು ನಮಗೆ ನೆನಪಿಸುತ್ತದೆ. ಆಧ್ಯಾತ್ಮಿಕ ಮೌಲ್ಯಗಳಿಗಾಗಿರುವ ಅವರ ಪ್ರೀತಿಯು ಸರಿಯಾದ ಆದ್ಯತೆಗಳನ್ನು ಇಡುವಂತೆ ನಮಗೆ ಸಹಾಯಮಾಡಬಲ್ಲದು.
ಹೌದು, ವೃದ್ಧರಿಗೆ ನಾವು ನೀಡುವ ಬೆಂಬಲದಿಂದ ಇಡೀ ಸಭೆಯು ಪ್ರಯೋಜನ ಹೊಂದುತ್ತದೆ. ಅದು ಹೇಗೆ? ಶಾರೀರಿಕವಾಗಿ ಬಲಹೀನರಾಗಿರುವವರು ಸಹೋದರ-ವಾತ್ಸಲ್ಯಕ್ಕಾಗಿ ಹಂಬಲಿಸುವುದರಿಂದ ಅನುಕಂಪ ತೋರಿಸಲು ಸಭೆಯವರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತವೆ. ಆದುದರಿಂದ ನಾವೆಲ್ಲರು ವೃದ್ಧರ ಪರಾಂಬರಿಕೆಯನ್ನು ಪರಸ್ಪರರಿಗೆ ಮಾಡುವ ಸೇವೆಯ ಒಂದು ಅಂಗವಾಗಿ ಪರಿಗಣಿಸಬೇಕು. ನಾವು ಅವರಿಗೆ ದೀರ್ಘ ಸಮಯದ ವರೆಗೆ ಸಹಾಯ ನೀಡಬೇಕಾದರೂ ಸರಿ, ಅದೇ ಮನೋಭಾವವನ್ನು ಇಟ್ಟುಕೊಳ್ಳುವೆವು. (1 ಪೇತ್ರ 4:10, 11) ವೃದ್ಧರನ್ನು ಹೀಗೆ ಪರಾಂಬರಿಸುವುದರಲ್ಲಿ ಹಿರಿಯರು ಮುಂದಾಳುತ್ವ ವಹಿಸಿದರೆ, ಕ್ರೈಸ್ತ ಚಟುವಟಿಕೆಯ ಈ ಅಂಶವನ್ನು ಎಂದೂ ಕಡೆಗಣಿಸಬಾರದು ಎಂಬದನ್ನು ಸಭೆಯ ಇತರ ಸದಸ್ಯರೂ ಕಲಿಯುವರು. (ಯೆಹೆ. 34:15, 16) ನಾವು ಸಂತೋಷದಿಂದ ವೃದ್ಧ ಜೊತೆ ಕ್ರೈಸ್ತರಿಗೆ ಕೊಡುವ ಪ್ರೀತಿಯ ನೆರವು, ಅವರಿನ್ನೂ ನಮ್ಮ ಮನದ ಸನಿಹದಲ್ಲಿದ್ದಾರೆ ಎಂಬ ಭರವಸೆಯನ್ನು ಅವರಿಗೆ ಕೊಡುತ್ತದೆ!
[ಪಾದಟಿಪ್ಪಣಿ]
^ ಪ್ಯಾರ. 8 ತಮ್ಮ ಸಭೆಯ ಒಬ್ಬ ಸಹೋದರ ಅಥವಾ ಸಹೋದರಿಯು ಇನ್ನೊಂದು ಸಭೆಯ ಟೆರಿಟೊರಿಯಲ್ಲಿರುವ ವೃದ್ಧರ ನರ್ಸಿಂಗ್ ಹೋಮ್‌ಗೆ ಸೇರಿದ್ದಾರೆಂದು ಸಭಾ ಸೆಕ್ರೆಟರಿಗೆ ತಿಳಿದುಬಂದಾಗ, ಆ ಕ್ಷೇತ್ರದಲ್ಲಿರುವ ಸಭೆಯ ಹಿರಿಯರನ್ನು ಕೂಡಲೇ ಸಂಪರ್ಕಿಸುವುದು ಸಹಾಯಕಾರಿಯೂ ಪ್ರೀತಿಭರಿತವೂ ಆಗಿದೆ.
[ಪುಟ 28ರಲ್ಲಿರುವ ಸಂಕ್ಷಿಪ್ತ ವಿವರಣೆ]
“ತಮ್ಮ ನರ್ಸಿಂಗ್ ಹೋಮ್‌ನ ನಿವಾಸಿಯೊಬ್ಬನನ್ನು ಕ್ರಮವಾಗಿ ಭೇಟಿಮಾಡುವವರು ಇದ್ದಾರೆ ಎಂದು ಅಲ್ಲಿನ ಸಿಬ್ಬಂದಿಗಳಿಗೆ ತಿಳಿಯುವಾಗ ಅವರು ಆ ವ್ಯಕ್ತಿಯ ಆರೈಕೆಯನ್ನು ಹೆಚ್ಚು ಉತ್ತಮವಾಗಿ ಮಾಡುತ್ತಾರೆ.”
[ಪುಟ 26ರಲ್ಲಿರುವ ಚಿತ್ರ]
ವೃದ್ಧ ಜೊತೆ ಸಾಕ್ಷಿಯು ತನ್ನ ಮನಶ್ಶಾಂತಿಯನ್ನು ಮತ್ತೆ ಪಡೆಯಲು ನಮ್ಮ ಹೃತ್ಪೂರ್ವಕ ಪ್ರಾರ್ಥನೆಗಳು ಸಹಾಯಮಾಡಬಲ್ಲವು
[ಪುಟ 26ರಲ್ಲಿರುವ ಚಿತ್ರ]
ನಮ್ಮ ವಾತ್ಸಲ್ಯದ ಕೋಮಲ ಅಭಿವ್ಯಕ್ತಿಗಳು ವೃದ್ಧ ಜೊತೆ ವಿಶ್ವಾಸಿಗಳನ್ನು ಬಲಪಡಿಸುವವು