ಮರಣ ಒಂದು ಭೀಕರ ವಾಸ್ತವಾಂಶ!
ಮರಣ ಒಂದು ಭೀಕರ ವಾಸ್ತವಾಂಶ!
“ಒಬ್ಬ ಮಾನವನು ಹುಟ್ಟಿದ ಕ್ಷಣದಿಂದ ಯಾವ ಗಳಿಗೆಯಲ್ಲೂ ಸಾಯಬಹುದಾದ ಸಾಧ್ಯತೆಯು ಸದಾ ಇರುತ್ತದೆ. ಮತ್ತು ಅನಿವಾರ್ಯವಾಗಿ ಈ ಸಾಧ್ಯತೆಯು ಒಂದು ಸಾಧಿಸಲ್ಪಟ್ಟ ಸತ್ಯಾಂಶವಾಗಲಿರುತ್ತದೆ” ಎಂದು ಬ್ರಿಟಿಷ್ ಇತಿಹಾಸಗಾರನಾದ ಆರ್ನಲ್ಡ್ ಟಾಯ್ನ್ಬೀಯವರು ಬರೆದರು. ನಮ್ಮ ಕುಟುಂಬದ ಪ್ರಿಯ ಸದಸ್ಯನೊಬ್ಬನು ಅಥವಾ ಒಬ್ಬ ಆಪ್ತ ಮಿತ್ರನು ಮರಣ ಹೊಂದುವಾಗ ನಮಗೆಷ್ಟು ದುಃಖವಾಗುತ್ತದೆ!
ಸಹಸ್ರಮಾನಗಳಿಂದ ಮರಣವು ಮಾನವಕುಲಕ್ಕೆ ಒಂದು ಭೀಕರ ವಾಸ್ತವಾಂಶವಾಗಿದೆ. ನಾವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ ನಾವು ನಿಸ್ಸಹಾಯಕ ಭಾವನೆಯ ಮಡುವಿನಲ್ಲಿ ಮುಳುಗಿಹೋಗುತ್ತೇವೆ. ಈ ದುಃಖವು ಯಾವುದೇ ತಾರತಮ್ಯವಿಲ್ಲದೆ, ಯಾರಿಗೂ ವಿನಾಯತಿ ಕೊಡದೆ ತಗಲುತ್ತದೆ. “ಶೋಕವು ನಮ್ಮನ್ನು ಮತ್ತೊಮ್ಮೆ ಮಕ್ಕಳನ್ನಾಗಿ ಮಾಡುತ್ತದೆ. ಬುದ್ಧಿವಂತರು ಬುದ್ಧಿಹೀನರೆಂಬ ಭೇದಗಳನ್ನು ಅಳಿಸಿಹಾಕುತ್ತದೆ. ಅತಿ ವಿವೇಕಿಗಳಿಗೂ ಏನೂ ತಿಳಿಯದು” ಎಂದು 19 ನೇ ಶತಮಾನದ ಪ್ರಬಂಧಕಾರನೊಬ್ಬನು ಬರೆದನು. ನಾವು ಮಕ್ಕಳಂತೆ ನಿಸ್ಸಹಾಯಕರೂ, ಪರಿಸ್ಥಿತಿಯನ್ನು ಬದಲಾಯಿಸಲು ಅಶಕ್ತರೂ ಆಗುತ್ತೇವೆ. ಮರಣದಿಂದ ಉಂಟಾಗುವ ನಷ್ಟವನ್ನು ಐಶ್ವರ್ಯ ಅಥವಾ ಅಧಿಕಾರದ ಬಲದಿಂದ ಸರಿಪಡಿಸಲು ಸಾಧ್ಯವಾಗದು. ವಿವೇಕಿಗಳು ಮತ್ತು ಬುದ್ಧಿವಂತರು ಉತ್ತರವಿಲ್ಲದವರಾಗಿದ್ದಾರೆ. ಬಲಹೀನರಂತೆಯೇ ಬಲಿಷ್ಠರೂ ಗೋಳಾಡುತ್ತಾರೆ.
ಪುರಾತನ ಇಸ್ರಾಯೇಲಿನ ರಾಜ ದಾವೀದನು ತನ್ನ ಮಗನಾದ ಅಬ್ಷಾಲೋಮನು ತೀರಿಹೋದಾಗ ತದ್ರೀತಿಯ ಬೇಗುದಿಯನ್ನು ಅನುಭವಿಸಿದನು. ಮಗನ ಮರಣದ ವಾರ್ತೆಯನ್ನು ಕೇಳಿದೊಡನೆ ರಾಜನು ಗೋಳಾಡುತ್ತಾ ಹೇಳಿದ್ದು: “ನನ್ನ ಮಗನೇ, ಅಬ್ಷಾಲೋಮನೇ, ನನ್ನ ಮಗನೇ, ನನ್ನ ಮಗನಾದ ಅಬ್ಷಾಲೋಮನೇ, ನಿನಗೆ ಬದಲಾಗಿ ನಾನು ಸತ್ತಿದ್ದರೆ ಎಷ್ಟೋ ಒಳ್ಳೇದಾಗುತ್ತಿತ್ತು. ಅಬ್ಷಾಲೋಮನೇ, ನನ್ನ ಮಗನೇ.” (2 ಸಮುವೇಲ 18:33) ಪ್ರಬಲ ವಿರೋಧಿಗಳನ್ನು ಅಧೀನಪಡಿಸಿಕೊಂಡ ಈ ಬಲಿಷ್ಠ ರಾಜನು ಏನನ್ನೂ ಮಾಡಶಕ್ತನಾಗದೆ ನಿಸ್ಸಹಾಯಕನಾಗಿ, ತನ್ನ ಮಗನ ಬದಲು ತಾನೇ ‘ಕಡೇ ಶತ್ರುವಾದ ಮರಣಕ್ಕೆ’ ಶರಣಾಗಲು ಆಶಿಸಿದನು.—1 ಕೊರಿಂಥ 15:26.
ಹಾಗಾದರೆ, ಮರಣಕ್ಕೆ ಪರಿಹಾರವಿದೆಯೇ? ಇರುವಲ್ಲಿ, ಈಗಾಗಲೇ ಮೃತಪಟ್ಟವರಿಗೆ ಯಾವ ನಿರೀಕ್ಷೆಯಿದೆ? ನಮ್ಮ ಪ್ರಿಯರನ್ನು ನಾವು ಪುನಃ ಎಂದಾದರೂ ನೋಡುವೆವೋ? ಮುಂದಿನ ಲೇಖನವು ಈ ಪ್ರಶ್ನೆಗಳಿಗೆ ಶಾಸ್ತ್ರವಚನಾಧಾರಿತ ಉತ್ತರಗಳನ್ನು ಕೊಡುತ್ತದೆ.