ಅರ್ಮಗೆದೋನ್ ಒಂದು ದುರಂತಮಯ ಅಂತ್ಯವೊ?
ಅರ್ಮಗೆದೋನ್ ಒಂದು ದುರಂತಮಯ ಅಂತ್ಯವೊ?
ಅರ್ಮಗೆದೋನ್! ಈ ಪದವು, ಸಾಮೂಹಿಕ ನಾಶನ ಇಲ್ಲವೆ ವಿಶ್ವಸ್ಫೋಟದ ಚಿತ್ರಣವನ್ನು ನಿಮ್ಮ ಮನಸ್ಸಿಗೆ ತರುತ್ತದೊ? “ಅರ್ಮಗೆದೋನ್” ಎಂಬ ಅಭಿವ್ಯಕ್ತಿಯಂತೆ ಕೆಲವು ಬೈಬಲ್ ಅಭಿವ್ಯಕ್ತಿಗಳು ಲೋಕದ ಅನೇಕ ಭಾಗಗಳಲ್ಲಿ ಪ್ರತಿದಿನದ ಸಂಭಾಷಣೆಯ ಭಾಗವಾಗಿವೆ. ಮಾನವರ ಮುಂದಿರುವ ಮಬ್ಬಾದ ಪ್ರತೀಕ್ಷೆಯನ್ನು ವರ್ಣಿಸಲು “ಅರ್ಮಗೆದೋನ್” ಎಂಬ ಪದವನ್ನು ಹೆಚ್ಚಾಗಿ ಉಪಯೋಗಿಸಲಾಗುತ್ತದೆ. ಬರಲಿರುವ ‘ಅರ್ಮಗೆದೋನಿನ’ ಬಗ್ಗೆ ಭಯಂಕರವಾದ ದೃಶ್ಯಗಳನ್ನು ಮನೋರಂಜನೆಯ ಉದ್ಯಮವು ಜನರ ತಲೆಯಲ್ಲಿ ತುಂಬಿಸಿಟ್ಟಿದೆ. ಈ ಪದವು, ರಹಸ್ಯ ಮತ್ತು ತಪ್ಪಾದ ಕಲ್ಪನೆಗಳ ಮರೆಯಲ್ಲಿದೆ. “ಅರ್ಮಗೆದೋನ್” ಎಂಬ ಪದದ ಅರ್ಥದ ಬಗ್ಗೆ ಅನೇಕ ವಿಚಾರಗಳಿರುವುದಾದರೂ, ಈ ಪದದ ಮೂಲವಾಗಿರುವ ಬೈಬಲ್ ಇದರ ಬಗ್ಗೆ ಏನು ಕಲಿಸುತ್ತದೊ ಅದರೊಂದಿಗೆ ಯಾವುದೂ ಸಹಮತದಲ್ಲಿರುವುದಿಲ್ಲ.
ಬೈಬಲು ಅರ್ಮಗೆದೋನನ್ನು “ಲೋಕಾಂತ್ಯ”ದೊಂದಿಗೆ ಹೊಂದಿಸಿ ಮಾತಾಡುವುದರಿಂದ, ಈ ಪದವು ನಿಜವಾಗಿಯೂ ಏನನ್ನು ಸೂಚಿಸುತ್ತದೆ ಎಂಬುದರ ಕುರಿತು ಸರಿಯಾದ ತಿಳಿವಳಿಕೆಯನ್ನು ಹೊಂದಿರುವುದು ಪ್ರಾಮುಖ್ಯವಾಗಿದೆ ಎಂದು ನೀವು ಒಪ್ಪುವುದಿಲ್ಲವೆ? (ಮತ್ತಾಯ 24:3, NIBV) ಅರ್ಮಗೆದೋನ್ ಎಂದರೇನು ಮತ್ತು ಅದು ನಿಮ್ಮ ಹಾಗೂ ನಿಮ್ಮ ಕುಟುಂಬದ ಮೇಲೆ ಯಾವ ಪ್ರಭಾವವನ್ನು ಬೀರುವುದು ಎಂಬ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು, ಸತ್ಯದ ಪರಮಶ್ರೇಷ್ಠ ಮೂಲವಾದ ದೇವರ ವಾಕ್ಯದ ಕಡೆಗೆ ತಿರುಗುವುದು ನ್ಯಾಯಸಮ್ಮತವಾಗಿದೆ ಅಲ್ಲವೆ?
ಇಂಥ ಪರಿಶೀಲನೆಯು, ಅರ್ಮಗೆದೋನ್ ಒಂದು ದುರಂತಮಯ ಅಂತ್ಯವನ್ನು ತರುವ ಬದಲು ನೀತಿಯ ನೂತನ ಲೋಕದಲ್ಲಿ ಜೀವಿಸಲು ಮತ್ತು ಯಶಸ್ಸನ್ನು ಕಂಡುಕೊಳ್ಳಲು ಬಯಸುವ ಜನರಿಗೆ ಒಂದು ಸಂತೋಷಕರ ಆರಂಭದ ಅರ್ಥದಲ್ಲಿದೆ ಎಂಬುದನ್ನು ತೋರಿಸಿಕೊಡುತ್ತದೆ. ಅರ್ಮಗೆದೋನ್ ಎಂಬ ಪದದ ನಿಜವಾದ ಅರ್ಥದ ಕುರಿತಾದ ಚರ್ಚೆಯನ್ನು ನೀವು ಮುಂದಿನ ಲೇಖನದಲ್ಲಿ ಪರಿಗಣಿಸುವಾಗ, ಪ್ರಾಮುಖ್ಯವಾದ ಈ ಶಾಸ್ತ್ರೀಯ ಸತ್ಯವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವ ಸುಯೋಗ ನಿಮಗಿರುತ್ತದೆ.
[ಪುಟ 3ರಲ್ಲಿರುವ ಚೌಕ/ಚಿತ್ರ]
ಅರ್ಮಗೆದೋನ್ ಎಂದರೆ ಏನೆಂದು ನೀವು ನೆನಸುತ್ತೀರಿ?
• ಒಂದು ನ್ಯೂಕ್ಲಿಯರ್ ಸರ್ವನಾಶ
• ಪರಿಸರೀಯ ವಿಪತ್ತು
• ಒಂದು ಆಕಾಶಸ್ಥಕಾಯ ಮತ್ತು ಭೂಮಿಯ ಅಪ್ಪಳಿಸುವಿಕೆ
• ದೇವರಿಂದ ದುಷ್ಟರ ನಾಶನ