ರಷ್ಯದ ಅತಿ ಹಳೆಯ ಗ್ರಂಥಾಲಯದಿಂದ ಬೈಬಲಿನ ಮೇಲೆ “ಸ್ಪಷ್ಟವಾದ ಬೆಳಕು”
ರಷ್ಯದ ಅತಿ ಹಳೆಯ ಗ್ರಂಥಾಲಯದಿಂದ ಬೈಬಲಿನ ಮೇಲೆ “ಸ್ಪಷ್ಟವಾದ ಬೆಳಕು”
ಇಬ್ಬರು ವಿದ್ವಾಂಸರು, ಬೈಬಲಿನ ಪುರಾತನ ಹಸ್ತಪ್ರತಿಗಳನ್ನು ಹುಡುಕುತ್ತಾ ಹೊರಟರು. ಅವರು ಒಬ್ಬರೊಬ್ಬರಾಗಿ ಮರುಭೂಮಿಗಳಲ್ಲಿ ಪ್ರಯಾಣಿಸಿ, ಗುಹೆಗಳಲ್ಲಿ, ಕ್ರೈಸ್ತ ಸಂನ್ಯಾಸಿಗಳ ಮಠಗಳಲ್ಲಿ ಮತ್ತು ಕಡಿದಾದ ಬಂಡೆಗಳಲ್ಲಿ ಕೊರೆದು ಮಾಡಲ್ಪಟ್ಟ ಪುರಾತನ ನಿವಾಸಸ್ಥಳಗಳಲ್ಲಿ ಹಸ್ತಪ್ರತಿಗಳಿಗಾಗಿ ಹುಡುಕಿದರು. ವರುಷಗಳ ಅನಂತರ, ಅವರಿಬ್ಬರ ಜೀವನದ ಹಾದಿಗಳು ರಷ್ಯದ ಅತಿ ಹಳೆಯ ಗ್ರಂಥಾಲಯದಲ್ಲಿ ಒಂದುಗೂಡುತ್ತವೆ. ಆ ಗ್ರಂಥಾಲಯದಲ್ಲಿ, ಲೋಕವು ಹಿಂದೆಂದೂ ಕಂಡಿರದಂಥ ಬೈಬಲ್ ಹಸ್ತಪತ್ರಿಗಳ ಅತಿ ರೋಮಾಂಚನಕಾರಿ ಕಂಡುಹಿಡಿತಗಳನ್ನು ಕಾಣಸಾಧ್ಯವಿದೆ. ಈ ಪುರುಷರು ಯಾರು? ಅವರು ಕಂಡುಹಿಡಿದ ಆ ನಿಕ್ಷೇಪಗಳು ರಷ್ಯವನ್ನು ಹೇಗೆ ತಲಪಿದ್ದವು?
ಪುರಾತನ ಹಸ್ತಪ್ರತಿಗಳು—ದೇವರ ವಾಕ್ಯವನ್ನು ಸಮರ್ಥಿಸುತ್ತವೆ
ಈ ಇಬ್ಬರು ವಿದ್ವಾಂಸರಲ್ಲಿ ಒಬ್ಬರನ್ನು ಭೇಟಿಯಾಗಲು ನಾವು, ಬೌದ್ಧಿಕ ಕ್ರಾಂತಿಯು ಯೂರೋಪಿನಾದ್ಯಂತ ತ್ವರಿತವಾಗಿ ಹಬ್ಬಿಕೊಂಡಂಥ 19ನೇ ಶತಮಾನದ ಆರಂಭಕ್ಕೆ ಹಿಂದೆ ಹೋಗಬೇಕಾಗಿದೆ. ವೈಜ್ಞಾನಿಕ ಪ್ರಗತಿ ಮತ್ತು ಸಾಂಸ್ಕೃತಿಕ ಸಾಧನೆಯ ಆ ಯುಗವನ್ನು “ಜ್ಞಾನೋದಯ” ಎಂಬ ಪದದಿಂದ ಗುರುತಿಸಲಾಯಿತು. ಇದು ಜನರಲ್ಲಿ, ಸಾಂಪ್ರದಾಯಿಕ ನಂಬಿಕೆಗಳ ಬಗ್ಗೆ ಸಂದೇಹಗಳನ್ನು ಉತ್ತೇಜಿಸಿತು. ಉಚ್ಚ ವಿಮರ್ಶಕರು ಬೈಬಲಿನ ಅಧಿಕಾರವನ್ನು ದುರ್ಬಲಗೊಳಿಸಲು ಪ್ರಯತ್ನಿಸಿದರು. ವಾಸ್ತವದಲ್ಲಿ, ವಿದ್ವಾಂಸರು ಬೈಬಲ್‌ನ ಮೂಲಗ್ರಂಥಪಾಠದ ವಿಶ್ವಾಸಾರ್ಹತೆಯ ವಿರುದ್ಧ ಸಂಶಯಗಳನ್ನು ವ್ಯಕ್ತಪಡಿಸಿದರು.
ಅಷ್ಟರ ತನಕ ಕಂಡುಹಿಡಿಯಲ್ಪಟ್ಟಿರದ ಪುರಾತನ ಬೈಬಲ್ ಹಸ್ತಪ್ರತಿಗಳು ಈಗ ಅನ್ವೇಷಿಸಲ್ಪಡುವಲ್ಲಿ, ಅವು ದೇವರ ವಾಕ್ಯದ ಪ್ರಾಮಾಣಿಕತೆಯನ್ನು ನಿಸ್ಸಂಶಯವಾಗಿ ಎತ್ತಿಹಿಡಿಯುತ್ತವೆ ಎಂಬುದನ್ನು ಬೈಬಲಿನ ನಿರ್ದಿಷ್ಟ ಯಥಾರ್ಥಮನಸ್ಸಿನ ಸಮರ್ಥಕರು ಗ್ರಹಿಸಿದರು. ಆಗ ಅಸ್ತಿತ್ವದಲ್ಲಿದ್ದದ್ದಕ್ಕಿಂತಲೂ ಹಳೆಯ ಹಸ್ತಪ್ರತಿಗಳು ಒಂದುವೇಳೆ ದೊರೆತರೆ, ಬೈಬಲಿನಲ್ಲಿರುವ ಸಂದೇಶವನ್ನು ನಾಶಗೊಳಿಸಲು ಅಥವಾ ತಿರುಚಲು ಪದೇ ಪದೇ ಬಹಳಷ್ಟು ಪ್ರಯತ್ನವು ಮಾಡಲ್ಪಟ್ಟಿದ್ದರೂ ಬೈಬಲ್ ಗ್ರಂಥಪಾಠಗಳು ಇನ್ನೂ ನಿಷ್ಕೃಷ್ಟವಾಗಿವೆ ಎಂಬುದಕ್ಕೆ ಅವು ಒಂದು ಮೌನ ಸಾಕ್ಷಿಯಾಗುವವು. ಅಂಥ ಹಸ್ತಪ್ರತಿಗಳು, ಬೈಬಲಿನಲ್ಲಿ ಎಲ್ಲೆಲ್ಲ ಹೊಸ ವಿಷಯಗಳನ್ನು ಕೂಡಿಸಲಾಗಿತ್ತೊ ಆ ಕೆಲವೊಂದನ್ನು ಸಹ ಬಯಲುಪಡಿಸಸಾಧ್ಯವಿತ್ತು.
ಜರ್ಮನಿಯಲ್ಲಿ ಬೈಬಲಿನ ವಿಶ್ವಾಸಾರ್ಹತೆಯ ಕುರಿತಾದ ಕೆಲವು ತೀಕ್ಷ್ಣವಾದ ವಾಗ್ವಾದಗಳು ನಡೆದವು. ಅಲ್ಲಿನ ಒಬ್ಬ ಯುವ ಪ್ರೊಫೆಸರನು ತನ್ನ ಆರಾಮದ ವಿದ್ಯಾಭ್ಯಾಸದ ಜೀವನವನ್ನು ಕೈಬಿಟ್ಟು ಒಂದು ಸಂಚಾರದಲ್ಲಿ ತೊಡಗಿದನು ಮತ್ತು ಈ ಸಂಚಾರವು ಅವನನ್ನು ಇತಿಹಾಸದಲ್ಲಿಯೇ ಅತಿ ದೊಡ್ಡ ಬೈಬಲ್ ಕಂಡುಹಿಡಿತಗಳಿಗೆ ನಡೆಸಿತು. ಆ ವ್ಯಕ್ತಿಯು ಬೈಬಲ್ ವಿದ್ವಾಂಸನಾದ ಕಾನ್‌ಸ್ಟಾಂಟೀನ್ ವಾನ್ ಟಿಷನ್‌ಡಾರ್ಫ್ ಆಗಿದ್ದನು. ಅವನು ಉಚ್ಚ ವಿಮರ್ಶೆಯನ್ನು ತ್ಯಜಿಸಿದ ಕಾರಣ, ಬೈಬಲ್ ಗ್ರಂಥಪಾಠಗಳ ವಿಶ್ವಾಸಾರ್ಹತೆಯನ್ನು ಸಮರ್ಥಿಸುವುದರಲ್ಲಿ ಗಮನಾರ್ಹ ಯಶಸ್ಸನ್ನು ಪಡೆಯುವಂತೆ ಅದು ಅವನನ್ನು ನಡೆಸಿತು. 1844ರಲ್ಲಿ, ಸೀನಾಯಿ ಮರುಭೂಮಿಗೆ ಅವನು ಮಾಡಿದ ಮೊದಲ ಪ್ರಯಾಣವು ನಂಬಲಸಾಧ್ಯವಾದ ಯಶಸ್ಸನ್ನು ತಂದಿತು. ಸಂನ್ಯಾಸಿ ಮಠದಲ್ಲಿದ್ದ ಒಂದು ಕಸದ ತೊಟ್ಟಿಯಲ್ಲಿ
ಇಣುಕಿನೋಡಿದಾಗ ಅವನಿಗೆ ಸೆಪ್ಟುಅಜಂಟ್, ಅಂದರೆ ಹೀಬ್ರು ಶಾಸ್ತ್ರವಚನಗಳ ಗ್ರೀಕ್ ಭಾಷಾಂತರದ ಒಂದು ಪುರಾತನ ಪ್ರತಿಯು ದೊರಕಿತು—ಇದು ಕಂಡುಹಿಡಿಯಲ್ಪಟ್ಟ ಪ್ರತಿಗಳಲ್ಲಿಯೇ ಅತಿ ಹಳೆಯ ಪ್ರತಿಯಾಗಿತ್ತು!ಹರ್ಷಗೊಂಡ ಟಿಷನ್‌ಡಾರ್ಫ್ ಇದರ 43 ಹಾಳೆಗಳನ್ನು ತೆಗೆಯಲು ಶಕ್ತನಾದನು. ಇನ್ನೂ ಅನೇಕ ಹಾಳೆಗಳು ಇವೆ ಎಂದು ಅವನಿಗೆ ಖಂಡಿತವಾಗಿಯೂ ತಿಳಿದಿತ್ತಾದರೂ, 1853ರಲ್ಲಿ ಅವನು ಪುನಃ ಅಲ್ಲಿಗೆ ಭೇಟಿನೀಡಿದಾಗ ಅವನಿಗೆ ಕೇವಲ ಕೆಲವೇ ಹಾಳೆಗಳು ದೊರೆತವು. ಉಳಿದವುಗಳು ಎಲ್ಲಿದ್ದವು? ಈ ಹಸ್ತಪ್ರತಿಗಳಿಗಾಗಿನ ಹುಡುಕುವಿಕೆಯಲ್ಲಿ ವ್ಯಯಿಸಲು ಟಿಷನ್‌ಡಾರ್ಫ್ ಹೊಂದಿದ್ದ ಹಣ ಮುಗಿದು ಹೋದದ್ದರಿಂದ, ಅವನು ಒಬ್ಬ ಐಶ್ವರ್ಯವಂತನಿಂದ ಆರ್ಥಿಕ ಬೆಂಬಲವನ್ನು ಕೋರಿದನು ಮತ್ತು ಅವನು ಪುನಃ ತನ್ನ ಸ್ವದೇಶವನ್ನು ಬಿಟ್ಟು ಆ ಪುರಾತನ ಹಸ್ತಪ್ರತಿಗಳನ್ನು ಹುಡುಕಲು ಹೋಗುವ ನಿರ್ಣಯವನ್ನು ಮಾಡಿದನು. ಆದರೆ, ಈ ಕೆಲಸಕ್ಕೆ ತೊಡಗುವ ಮುನ್ನ ಅವನು ರಷ್ಯದ ಚಕ್ರವರ್ತಿಗೆ ಮನವಿಮಾಡಿದನು.
ಚಕ್ರವರ್ತಿಯು ಆಸಕ್ತಿ ವಹಿಸುತ್ತಾನೆ
ಪ್ರಾಟೆಸ್ಟೆಂಟ್ ವಿದ್ವಾಂಸನಾಗಿರುವ ತನಗೆ, ರಷ್ಯನ್ ಆರ್ತಡಾಕ್ಸ್ ಧರ್ಮವನ್ನು ತನ್ನದಾಗಿಸಿಕೊಂಡಿದ್ದ ರಷ್ಯದಲ್ಲಿ ಯಾವ ರೀತಿಯ ಸ್ವಾಗತವು ದೊರಕಲಿದೆ ಎಂಬುದರ ಕುರಿತು ಟಿಷನ್‌ಡಾರ್ಫ್ ಯೋಚಿಸಿರಬಹುದು. ಸಂತೋಷಕರವಾಗಿ, ರಷ್ಯವು ಬದಲಾವಣೆ ಮತ್ತು ಸುಧಾರಣೆಯ ಒಂದು ಅನುಕೂಲಕರ ಯುಗವನ್ನು ಪ್ರವೇಶಿಸಿತ್ತು. ವಿದ್ಯಾಭ್ಯಾಸದ ಮೇಲಿನ ಒತ್ತಿನ ಕಾರಣ 1795ರಲ್ಲಿ ಚಕ್ರವರ್ತಿನಿ ಎರಡನೇ ಕ್ಯಾಥರಿನ್‌ನಿಂದ (ಮಹಾ ಕ್ಯಾಥರಿನ್ ಎಂಬುದಾಗಿಯೂ ಪ್ರಖ್ಯಾತಳು) ಸೆಂಟ್ ಪೀಟರ್ಸ್‌ಬರ್ಗ್ ಇಂಪೀರಿಯಲ್ ಲೈಬ್ರರಿಯು ಸ್ಥಾಪಿಸಲ್ಪಟ್ಟಿತು. ಇದು ರಷ್ಯದ ಮೊದಲ ಸಾರ್ವಜನಿಕ ಗ್ರಂಥಾಲಯವಾಗಿದ್ದ ಕಾರಣ, ಅದು ಕೋಟ್ಯಂತರ ಜನರಿಗೆ ಮುದ್ರಿತ ಮಾಹಿತಿಯನ್ನು ಲಭ್ಯಗೊಳಿಸಿತು.
ಯೂರೋಪಿನಲ್ಲಿನ ಅತ್ಯಂತ ಉತ್ತಮ ಗ್ರಂಥಾಲಯಗಳಲ್ಲಿ ಒಂದಾಗಿದೆ ಎಂದು ಕರೆಯಲ್ಪಡುತ್ತಿದ್ದ ಈ ಇಂಪೀರಿಯಲ್ ಲೈಬ್ರರಿಯಲ್ಲಿ ಒಂದು ಕೊರತೆಯಿತ್ತು. ಇದನ್ನು ಸ್ಥಾಪಿಸಿ ಐವತ್ತು ವರುಷಗಳು ಕಳೆದ ಅನಂತರವೂ ಅದರಲ್ಲಿ ಕೇವಲ ಆರು ಹೀಬ್ರು ಹಸ್ತಪ್ರತಿಗಳಿದ್ದವು. ರಷ್ಯದಲ್ಲಿ, ಬೈಬಲ್ ಭಾಷೆಗಳ ಮತ್ತು ಭಾಷಾಂತರಗಳ ಬಗ್ಗೆ ಅಧ್ಯಯನಮಾಡಬೇಕೆಂಬ ಜನರ ಹೆಚ್ಚುತ್ತಿರುವ ಆಸಕ್ತಿಯನ್ನು ಅದು ತೃಪ್ತಿಗೊಳಿಸಶಕ್ತವಾಗಲಿಲ್ಲ. ಎರಡನೇ ಕ್ಯಾಥರಿನ್, ವಿದ್ವಾಂಸರನ್ನು ಹೀಬ್ರು ಭಾಷೆಯನ್ನು ಕಲಿಯಲಿಕ್ಕಾಗಿ ಯೂರೋಪಿಯನ್ ವಿಶ್ವವಿದ್ಯಾನಿಲಯಗಳಿಗೆ ಕಳುಹಿಸಿದ್ದಳು. ಆ ವಿದ್ವಾಂಸರು ಹಿಂದಿರುಗಿದ ಬಳಿಕ, ದೊಡ್ಡ ದೊಡ್ಡ ರಷ್ಯನ್ ಆರ್ತಡಾಕ್ಸ್ ಸೆಮಿನೆರಿಗಳಲ್ಲಿ ಹೀಬ್ರು ಭಾಷೆಯನ್ನು ಕಲಿಸುವ ಕೋರ್ಸ್‌ಗಳು ಆರಂಭಿಸಲ್ಪಟ್ಟವು. ಮತ್ತು ಮೊದಲ ಬಾರಿಗೆ, ರಷ್ಯದ ವಿದ್ವಾಂಸರು ಪುರಾತನ ಹೀಬ್ರು ಭಾಷೆಯಿಂದ ರಷ್ಯನ್ ಭಾಷೆಗೆ ಬೈಬಲನ್ನು ನಿಷ್ಕೃಷ್ಟವಾಗಿ ಭಾಷಾಂತರಿಸುವ ಕೆಲಸವನ್ನು ಆರಂಭಿಸಿದರು. ಆದರೆ ಇದನ್ನು ಮಾಡಲು ಅವರು ಹಣದ ತೀವ್ರ ಕೊರತೆಯನ್ನು ಮತ್ತು ಸಂಪ್ರದಾಯವಾದಿ ಚರ್ಚ್ ಮುಖಂಡರಿಂದ ವಿರೋಧವನ್ನು ಸಹ ಎದುರಿಸಿದರು. ಬೈಬಲಿನ ಜ್ಞಾನವನ್ನು ಹುಡುಕುವವರಿಗೆ ನಿಜವಾದ ಜ್ಞಾನೋದಯವು ಮುಂದಕ್ಕೆ ಆರಂಭವಾಗಲಿತ್ತು.
ಚಕ್ರವರ್ತಿಯಾದ ಎರಡನೇ ಅಲೆಕ್ಸಾಂಡರ್, ಟಿಷನ್‌ಡಾರ್ಫ್‌ನ ಕೆಲಸದ ಮೌಲ್ಯವನ್ನು ಕೂಡಲೆ ಗಣ್ಯಮಾಡಿದನು ಮತ್ತು ಅವನ ಕೆಲಸಕ್ಕೆ ಹಣಕಾಸಿನ ಬೆಂಬಲವನ್ನೂ ನೀಡಿದನು. ಕೆಲವರಿಂದ ತೋರಿಸಲ್ಪಟ್ಟ “ಹೊಟ್ಟೆಕಿಚ್ಚು ಮತ್ತು ಧರ್ಮಾಂಧ ವಿರೋಧದ” ಮಧ್ಯೆಯೂ, ಟಿಷನ್‌ಡಾರ್ಫ್ ತನ್ನ ಕೆಲಸವನ್ನು ಯಶಸ್ವಿಕರವಾಗಿ ಮುಗಿಸಿ, ಸೆಪ್ಟುಅಜಂಟ್‌ನ ಪ್ರತಿಯ ಉಳಿದ ಭಾಗಗಳೊಂದಿಗೆ ಸೀನಾಯಿಯಿಂದ ಹಿಂದಿರುಗಿದನು. * ತದನಂತರ ಅದನ್ನು ಕೋಡೆಕ್ಸ್ ಸೈನಾಯ್ಟಿಕಸ್ ಎಂಬ ಹೆಸರಿನಿಂದ ಕರೆಯಲಾಯಿತು. ಈ ವರೆಗೆ ಅಸ್ತಿತ್ವದಲ್ಲಿರುವ ಅತಿ ಹಳೆಯ ಬೈಬಲ್ ಹಸ್ತಪ್ರತಿಗಳಲ್ಲಿ ಇದು ಒಂದಾಗಿದೆ. ಸೆಂಟ್ ಪೀಟರ್ಸ್‌ಬರ್ಗ್‌ಗೆ ವಾಪಸು ಬಂದ ಕೂಡಲೆ ಟಿಷನ್‌ಡಾರ್ಫನು ಇಂಪೀರಿಯಲ್ ವಿನ್ಟರ್ ಪ್ಯಾಲೆಸ್ ಎಂಬ ಚಕ್ರವರ್ತಿಯ ಅರಮನೆಗೆ ಹೋದನು. “ವಿಶ್ಲೇಷಣಾತ್ಮಕವಾದ ಮತ್ತು ಬೈಬಲಿನ ಕುರಿತಾದ ಅಧ್ಯಯನಗಳಲ್ಲೇ ಅತ್ಯಂತ ಮಹಾನ್ ಆಗಿರುವ ಒಂದು ಕಾರ್ಯವನ್ನು” ಬೆಂಬಲಿಸಬೇಕೆಂದು ಅವನು ಚಕ್ರವರ್ತಿಯನ್ನು ಕೇಳಿಕೊಂಡನು. ಚಕ್ರವರ್ತಿಯು ಇದಕ್ಕೆ ಕೂಡಲೆ ಒಪ್ಪಿಕೊಂಡನು ಮತ್ತು ಅತಿಯಾಗಿ ಸಂತೋಷಗೊಂಡ ಟಿಷನ್‌ಡಾರ್ಫ್ ಅನಂತರ ಬರೆದದ್ದು: “ದೈವಾನುಗ್ರಹವು, . . . ದೇವರ ಲಿಖಿತ ವಾಕ್ಯದ ನಿಜವಾದ ಗ್ರಂಥಪಾಠ ಏನಾಗಿದೆ ಎಂಬುದಕ್ಕೆ ನಮಗೆ ಸಂಪೂರ್ಣವಾದ ಮತ್ತು ಸ್ಪಷ್ಟವಾದ ಬೆಳಕು ಆಗಿರಲು ಹಾಗೂ ಬೈಬಲಿನ ಭರವಸಾರ್ಹತೆಯನ್ನು ಸ್ಥಾಪಿಸುವ ಮೂಲಕ ಅದರ ಸತ್ಯತೆಯನ್ನು ಸಮರ್ಥಿಸಲಿಕ್ಕಾಗಿ ನಮಗೆ ಸಹಾಯಮಾಡಲು ಸೈನಾಯ್ಟಿಕಸ್ ಬೈಬಲ್ ಅನ್ನು ನಮ್ಮ ಸಂತತಿಗೆ ದೊರಕಿಸಿಕೊಟ್ಟಿದೆ.”
ಕ್ರಿಮೀಯದಿಂದ ಬೈಬಲ್ ನಿಕ್ಷೇಪಗಳು
ಬೈಬಲ್ ನಿಕ್ಷೇಪಗಳನ್ನು ಹುಡುಕುತ್ತಿದ್ದ ಇನ್ನೊಬ್ಬ ವಿದ್ವಾಂಸನ ಕುರಿತು ಆರಂಭದಲ್ಲಿ ತಿಳಿಸಲಾಗಿತ್ತು. ಅವನು ಯಾರಾಗಿದ್ದನು? ಟಿಷನ್‌ಡಾರ್ಫ್ ರಷ್ಯಕ್ಕೆ ಹಿಂದಿರುಗುವ ಕೆಲವು ವರುಷಗಳ ಮುಂಚೆ, ‘ದಿ ಇಂಪೀರಿಯಲ್ ಲೈಬ್ರರಿ’ಗೆ ನಂಬಲಸಾಧ್ಯವಾದ ಒಂದು ಪ್ರಸ್ತಾಪವು ಮಾಡಲ್ಪಟ್ಟಿತು. ಆ ಪ್ರಸ್ತಾಪವು ಎಷ್ಟು ನಂಬಲಸಾಧ್ಯವಾದದ್ದು ಆಗಿತ್ತೆಂದರೆ, ಅದು ಚಕ್ರವರ್ತಿಯ ಆಸಕ್ತಿಯನ್ನು ಸೆಳೆಯಿತು ಮತ್ತು ಯೂರೋಪಿನಾದ್ಯಂತವಿದ್ದ ವಿದ್ವಾಂಸರನ್ನು ರಷ್ಯಕ್ಕೆ ತಂದಿತು. ಅದನ್ನು ನೋಡಿದಾಗ ಅವರು ವಿಸ್ಮಯಗೊಂಡರು. ಹಸ್ತಪ್ರತಿಗಳ ಮತ್ತು ಇತರ ವಸ್ತುಗಳ ಒಂದು ಬೃಹತ್ ಸಂಗ್ರಹವು ಅವರ ಕಣ್ಣ ಮುಂದಿತ್ತು. ಅವು, 975 ಹಸ್ತಪ್ರತಿಗಳು ಮತ್ತು ಸುರುಳಿಗಳನ್ನು ಒಳಗೂಡಿದ್ದ ತತ್ತರಗೊಳಿಸುವ 2,412 ವಸ್ತುಗಳು ಆಗಿದ್ದವು! ಆ ಹಸ್ತಪ್ರತಿಗಳಲ್ಲಿ ಹತ್ತನೇ ಶತಮಾನಕ್ಕಿಂತಲೂ ಹಿಂದಿನ 45 ಬೈಬಲ್ ಹಸ್ತಪ್ರತಿಗಳಿದ್ದವು. ಇದು ನಂಬಲಸಾಧ್ಯವೆಂದು ತೋರಿದರೂ, ಈ ಎಲ್ಲ ಹಸ್ತಪ್ರತಿಗಳು ಆಗ 70 ವರುಷ ಪ್ರಾಯದವನಾಗಿದ್ದ ಅಬ್ರಹಾಮ್ ಫಿರ್‌ಕೊವಿಚ್ ಎಂಬ ಕಾರೈಟ ವಿದ್ವಾಂಸನೊಬ್ಬನಿಂದಲೇ ಸಂಗ್ರಹಿಸಲ್ಪಟ್ಟಿದ್ದವು! ಆದರೆ ಈ ಕಾರೈಟರು ಯಾರಾಗಿದ್ದರು? *
ಈ ಪ್ರಶ್ನೆಯು ಚಕ್ರವರ್ತಿಗೆ ಬಹಳ ಆಸಕ್ತಿಕರವಾಗಿತ್ತು. ರಷ್ಯವು ತನ್ನ ಮೇರೆಯನ್ನು ವಿಸ್ತರಿಸಿ, ಹಿಂದೆ ಇತರ ದೇಶಗಳಿಗೆ ಸೇರಿದ್ದ ಸ್ಥಳಗಳನ್ನು ತನ್ನದಾಗಿಸಿಕೊಂಡಿತ್ತು. ಇದು ಸಾಮ್ರಾಜ್ಯದೊಳಗೆ ಹೊಸ ಕುಲವನ್ನು ತಂದಿತು. ಕಪ್ಪು ಸಮುದ್ರದ ತೀರಗಳಲ್ಲಿರುವ ಸುಂದರವಾದ ಕ್ರಿಮೀಯ ಪ್ರದೇಶದಲ್ಲಿ ಯೆಹೂದ್ಯರಂತೆ ತೋರುವ, ಆದರೆ ಟರ್ಕಿಯ ಪದ್ಧತಿಗಳನ್ನು ಅನುಕರಿಸುತ್ತಿದ್ದ ಹಾಗೂ ಟಾಟರ್ ಜನರಿಗೆ ಸಂಬಂಧಿಸಿದ ಭಾಷೆಯನ್ನು ಮಾತಾಡುತ್ತಿದ್ದ ಜನರು ವಾಸಿಸುತ್ತಿದ್ದರು. ಕಾರೈಟರೆಂದು ಕರೆಯಲ್ಪಟ್ಟ ಇವರು, ಸಾ.ಶ.ಪೂ. 607ರಲ್ಲಿ ಯೆರೂಸಲೇಮ್ ನಾಶವಾದ ಅನಂತರ ಬಾಬೆಲಿಗೆ ಬಂಧಿವಾಸಿಗಳಾಗಿ ಕೊಂಡೊಯ್ಯಲ್ಪಟ್ಟ ಯೆಹೂದ್ಯರ ಸಂತಾನದವರಾಗಿದ್ದರು. ಆದರೆ ಯೆಹೂದಿ ರಬ್ಬಿಗಳಂತೆ ಇವರು ಟ್ಯಾಲ್ಮುಡ್ ಅನ್ನು ಅನುಸರಿಸುತ್ತಿರಲಿಲ್ಲ, ಬದಲಾಗಿ ಶಾಸ್ತ್ರವಚನಗಳನ್ನು ಓದುವುದಕ್ಕೆ ಒತ್ತನ್ನು ನೀಡುತ್ತಿದ್ದರು. ತಾವು ಯೆಹೂದ್ಯರಿಗಿಂತ ಭಿನ್ನರು ಎಂಬ ರುಜುವಾತನ್ನು ಚಕ್ರವರ್ತಿಗೆ ಪ್ರಸ್ತುತಪಡಿಸಲು ಮತ್ತು ಈ ರೀತಿಯಲ್ಲಿ ಒಂದು ಪ್ರತ್ಯೇಕ ಗುರುತನ್ನು ಹೊಂದಲು ಕ್ರಿಮೀಯದ ಕಾರೈಟರು ಬಹಳ ಕಾತುರರಾಗಿದ್ದರು. ತಮ್ಮ ಬಳಿ ಇರುವ ಪುರಾತನ ಹಸ್ತಪ್ರತಿಗಳನ್ನು ಪ್ರಸ್ತುತಪಡಿಸುವ ಮೂಲಕ ತಾವು ಬಾಬೆಲಿನ ಬಂಧಿವಾಸದ ಅನಂತರ ಕ್ರಿಮೀಯಕ್ಕೆ ವಲಸೆ ಬಂದ ಯೆಹೂದ್ಯರ ವಂಶಸ್ಥರು ಎಂಬುದನ್ನು ಅವರು ರುಜುಪಡಿಸಲು ನಿರೀಕ್ಷಿಸಿದರು.
ಫಿರ್‌ಕೊವಿಚ್, ಪುರಾತನ ದಾಖಲೆಗಳು ಮತ್ತು ಹಸ್ತಪ್ರತಿಗಳನ್ನು ಹುಡುಕಲು ತೊಡಗಿದನು. ಇದನ್ನು ಅವನು, ಚೂಫೂಟ್ ಕಾಲಿ ಎಂಬಲ್ಲಿನ ಕಡಿದಾದ ಬಂಡೆಗಳಲ್ಲಿನ ನಿವಾಸಸ್ಥಳಗಳಲ್ಲಿ ಆರಂಭಿಸಿದನು. ಕಡಿದಾದ ಬಂಡೆಗಳಲ್ಲಿ ಕೊರೆದು ಮಾಡಿರುವಂಥ ಸಣ್ಣದಾದ ಈ ಮನೆಗಳಲ್ಲಿ ಕಾರೈಟರ ಅನೇಕ ಸಂತತಿಗಳು ವಾಸಿಸಿದ್ದವು ಮತ್ತು ಆರಾಧಿಸಿದ್ದವು. ಯೆಹೋವ ಎಂಬ ದೈವಿಕ ನಾಮವಿದ್ದ ಶಾಸ್ತ್ರವಚನಗಳ ಹರಿದ ಪ್ರತಿಗಳನ್ನು ಕಾರೈಟರು ಎಂದೂ ನಾಶಗೊಳಿಸುತ್ತಿರಲಿಲ್ಲ, ಏಕೆಂದರೆ ಆ ಕೃತ್ಯವನ್ನು ದೇವದ್ರೋಹ ಎಂದು ಅವರು ಪರಿಗಣಿಸುತ್ತಿದ್ದರು. ಹೀಬ್ರು ಭಾಷೆಯಲ್ಲಿ “ಅಡಗಿಸಿಡುವ ಸ್ಥಳ” ಎಂಬ ಅರ್ಥವನ್ನು ಹೊಂದಿರುವ ಗನೀಜಾ ಎಂದು ಕರೆಯಲಾಗುತ್ತಿದ್ದ ಸಣ್ಣ ಉಗ್ರಾಣದಲ್ಲಿ ಆ ಹಸ್ತಪ್ರತಿಗಳನ್ನು ಜಾಗರೂಕತೆಯಿಂದ ಇಡುತ್ತಿದ್ದರು. ಕಾರೈಟರು ದೈವಿಕ ನಾಮಕ್ಕೆ ಆಳವಾದ ಗೌರವವನ್ನು ನೀಡುತ್ತಿದ್ದ ಕಾರಣ ಅಂಥ ಚರ್ಮದ ಕಾಗದಗಳನ್ನು ಎಂದಿಗೂ ಆ ಸ್ಥಳದಿಂದ ತೆಗೆಯುತ್ತಿರಲಿಲ್ಲ.
ಗನೀಜಾ ಸ್ಥಳಗಳಲ್ಲಿ ಶತಮಾನಗಳಿಂದ ಧೂಳು ತುಂಬಿದ್ದರೂ ಅದರಿಂದಾಗಿ ಫಿರ್‌ಕೊವಿಚ್ ಹಿಂಜರಿಯದೆ ಆ ಸ್ಥಳಗಳನ್ನು ಜಾಗ್ರತೆಯಿಂದ ಹುಡುಕಿದನು. ಒಂದು ಸ್ಥಳದಲ್ಲಿ ಅವನು ಸಾ.ಶ. 916ರ ಒಂದು ಪ್ರಖ್ಯಾತ ಹಸ್ತಪ್ರತಿಯನ್ನು ಕಂಡುಕೊಂಡನು. ಕೊನೆಯ ಪ್ರವಾದಿಗಳ ಪೀಟರ್ಸ್‌ಬರ್ಗ್ ಕೋಡೆಕ್ಸ್ ಎಂದು ಕರೆಯಲ್ಪಡುವ ಇವು, ಅಸ್ತಿತ್ವದಲ್ಲಿರುವ ಹೀಬ್ರು ಶಾಸ್ತ್ರವಚನಗಳಲ್ಲಿಯೇ ಅತಿ ಹಳೆಯ ಪ್ರತಿಗಳಾಗಿವೆ.
ಫಿರ್‌ಕೊವಿಚ್ ಬಹಳಷ್ಟು ಹಸ್ತಪ್ರತಿಗಳನ್ನು ಒಟ್ಟುಗೂಡಿಸುವುದರಲ್ಲಿ ಯಶಸ್ವಿಯಾದನು ಮತ್ತು 1859ರಲ್ಲಿ ಅವನು ತನ್ನ ಬೃಹತ್ ಸಂಗ್ರಹವನ್ನು ಇಂಪೀರಿಯಲ್ ಗ್ರಂಥಾಲಯಕ್ಕೆ ನೀಡಲು ನಿರ್ಣಯಿಸಿದನು. 1862ರಲ್ಲಿ, ಅವುಗಳನ್ನು 1,25,000 ರೂಬೆಲ್ಸ್‌ಗಳಿಗೆ ಖರೀದಿಸಲು ಎರಡನೇ ಅಲೆಕ್ಸಾಂಡರ್ ಸಹಾಯಮಾಡಿದನು. ಇದು ಆ ಸಮಯದಲ್ಲಿ ಒಂದು ಗ್ರಂಥಾಲಯಕ್ಕೆ ಸಾಮಾನ್ಯವಾಗಿ ವ್ಯಯಿಸುವ
ಹಣಕ್ಕೆ ಹೋಲಿಸುವಾಗ ತೀರ ಹೆಚ್ಚಾಗಿತ್ತು. ಆ ಸಮಯದಲ್ಲಿ, ಇಡೀ ಗ್ರಂಥಾಲಯದ ವಾರ್ಷಿಕ ಬಡ್ಜೆಟ್ 10,000 ರೂಬೆಲ್ಸ್‌ಗಳಿಗಿಂತ ಕಡಿಮೆಯಾಗಿತ್ತು! ಗ್ರಂಥಾಲಯಕ್ಕಾಗಿ ಪಡೆದುಕೊಂಡ ಈ ಬೃಹತ್ ಸಂಗ್ರಹದಲ್ಲಿ ಪ್ರಖ್ಯಾತ ಲೆನಿನ್‌ಗ್ರ್ಯಾಡ್ ಕೋಡೆಕ್ಸ್ ಸೇರಿದೆ (B 19A). ಇದು 1008ನೇ ಇಸವಿಯಿಂದದ್ದಾಗಿದೆ ಹಾಗೂ ಲೋಕದಲ್ಲಿರುವ ಹೀಬ್ರು ಶಾಸ್ತ್ರವಚನಗಳಲ್ಲಿಯೇ ಅತಿ ಹಳೆಯ ಸಂಪೂರ್ಣ ಪ್ರತಿಯಾಗಿದೆ. ಇದು “ಬಹುಶಃ ಬೈಬಲಿನ ಏಕೈಕ ಅತಿ ಮುಖ್ಯ ಹಸ್ತಪ್ರತಿಯಾಗಿದೆ. ಏಕೆಂದರೆ, ಇದು ಹೀಬ್ರು ಬೈಬಲಿನ ಅತಿ ಆಧುನಿಕ ವಿಮರ್ಶಾತ್ಮಕ ಆವೃತ್ತಿಗಳ ಗ್ರಂಥಪಾಠವನ್ನು ಸ್ಥಿರೀಕರಿಸುತ್ತದೆ.” (ಇದರೊಂದಿಗಿರುವ ಚೌಕವನ್ನು ನೋಡಿ.) ಅದೇ ವರುಷದಲ್ಲಿ, ಅಂದರೆ 1862ರಲ್ಲಿ, ಟಿಷನ್‌ಡಾರ್ಫ್‌ನ ಕೋಡೆಕ್ಸ್ ಸೈನಾಯ್ಟಿಕಸ್ ಪ್ರಕಟಿಸಲ್ಪಟ್ಟಿತು ಮತ್ತು ಇದು ಲೋಕವ್ಯಾಪಕ ಮನ್ನಣೆಯನ್ನು ಪಡೆಯಿತು.ಆಧುನಿಕ ದಿನಗಳಲ್ಲಿ ಆಧ್ಯಾತ್ಮಿಕ ಜ್ಞಾನೋದಯ
ಈಗ ದ ನ್ಯಾಷನಲ್ ಲೈಬ್ರರಿ ಆಫ್ ರಷ್ಯ ಎಂದು ಪ್ರಖ್ಯಾತವಾಗಿರುವ ಈ ಗ್ರಂಥಾಲಯದಲ್ಲಿ ಪುರಾತನ ಹಸ್ತಪ್ರತಿಗಳ ಲೋಕದ ಅತಿ ದೊಡ್ಡ ಸಂಗ್ರಹವಿದೆ. * ರಷ್ಯದ ಇತಿಹಾಸವನ್ನು ಪ್ರತಿಬಿಂಬಿಸುತ್ತಾ, ಎರಡು ಶತಮಾನಗಳಲ್ಲಿ ಈ ಗ್ರಂಥಾಲಯದ ಹೆಸರನ್ನು ಏಳು ಬಾರಿ ಬದಲಾಯಿಸಲಾಗಿದೆ. ಎಲ್ಲರಿಗೆ ತಿಳಿದಿರುವ ಒಂದು ಹೆಸರು, ದ ಸ್ಟೇಟ್ ಸಾಲ್ಟೀಕೊಫ್ ಶಿಡ್‌ರಿನ್ ಪಬ್ಲಿಕ್ ಲೈಬ್ರರಿ. 20ನೇ ಶತಮಾನದ ಗಲಭೆಗಳಿಂದಾಗಿ ಗ್ರಂಥಾಲಯವು ಹಾನಿಗೊಳಗಾಯಿತಾದರೂ, ಎರಡೂ ಲೋಕ ಯುದ್ಧಗಳಲ್ಲಿ ಮತ್ತು ಲೆನಿನ್‌ಗ್ರ್ಯಾಡ್ ಮುತ್ತಿಗೆಯ ಸಮಯದಲ್ಲಿ ಗ್ರಂಥಾಲಯದಲ್ಲಿದ್ದ ಹಸ್ತಪ್ರತಿಗಳು ಯಾವುದೇ ಹಾನಿಗೊಳಗಾಗದೇ ಪಾರಾಗಿ ಉಳಿದವು. ಅಂಥ ಹಸ್ತಪ್ರತಿಗಳಿಂದ ನಾವು ಹೇಗೆ ಪ್ರಯೋಜನವನ್ನು ಪಡೆಯಸಾಧ್ಯವಿದೆ?
ಅನೇಕ ಆಧುನಿಕ ಬೈಬಲ್ ಭಾಷಾಂತರಗಳಿಗೆ ಪುರಾತನ ಹಸ್ತಪ್ರತಿಗಳೇ ಒಂದು ಭರವಸಾರ್ಹ ಮೂಲವಾಗಿವೆ. ಇವು ಸತ್ಯವನ್ನು ಯಥಾರ್ಥವಾಗಿ ಹುಡುಕುವವರಿಗೆ ಪವಿತ್ರ ಶಾಸ್ತ್ರಗಳ ಹೆಚ್ಚು ನಿಷ್ಕೃಷ್ಟ ಅನುವಾದವನ್ನು ಪಡೆದುಕೊಳ್ಳಸಾಧ್ಯವಾಗುವಂತೆ ಮಾಡಿವೆ. ಸೈನಾಯ್ಟಿಕಸ್ ಮತ್ತು ಲೆನಿನ್‌ಗ್ರ್ಯಾಡ್ ಎಂಬ ಎರಡೂ ಕೋಡೆಕ್ಸ್‌ಗಳು, ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟು 1961ರಲ್ಲಿ ಅದರ ಸಂಪೂರ್ಣ ರೂಪದಲ್ಲಿ ಬಿಡುಗಡೆಯಾದ ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರಕ್ಕೆ * ಅಮೂಲ್ಯ ನೆರವನ್ನು ನೀಡಿದವು. ಉದಾಹರಣೆಗೆ, ನೂತನ ಲೋಕ ಭಾಷಾಂತರ ಕಮಿಟಿಯಿಂದ ಉಪಯೋಗಿಸಲಾದ ಬೀಬ್ಲಿಯ ಹೆಬ್ರಾಯಿಕಾ ಸ್ಟೂಟ್ಗಾರ್ಟೆನ್‌ಸಿಯ ಮತ್ತು ಬೀಬ್ಲಿಯ ಹೆಬ್ರಾಯಿಕಾ ಭಾಷಾಂತರಗಳು ಲೆನಿನ್‌ಗ್ರ್ಯಾಡ್ ಕೋಡೆಕ್ಸ್‌ನ ಮೇಲಾಧಾರಿತವಾಗಿವೆ ಮತ್ತು ಚತುರಕ್ಷರಿ [ಟೆಟ್ರಗ್ರಮಾಟನ್] ಅಥವಾ ದೈವಿಕ ನಾಮವನ್ನು ಅದರ ಮೂಲಗ್ರಂಥಪಾಠದಲ್ಲಿ 6,828 ಸಲ ಉಪಯೋಗಿಸಲಾಗಿದೆ.
ಮೌನವಾಗಿರುವ ಸೆಂಟ್ ಪೀಟರ್ಸ್‌ಬರ್ಗ್ ಗ್ರಂಥಾಲಯಕ್ಕೆ ಮತ್ತು ಅದರ ಹಸ್ತಪ್ರತಿಗಳಿಗೆ—ಕೆಲವೊಂದು ಹಸ್ತಪ್ರತಿಗಳು ನಗರದ ಪೂರ್ವ ಹೆಸರಾದ ಲೆನಿನ್‌ಗ್ರ್ಯಾಡ್ ಎಂಬ ಹೆಸರಿಂದ ಪ್ರಖ್ಯಾತವಾಗಿವೆ—ತಾವೆಷ್ಟು ಋಣಿಗಳಾಗಿದ್ದೇವೆಂದು ಕೇವಲ ಕೆಲವೇ ಬೈಬಲ್ ಓದುಗರಿಗೆ ತಿಳಿದಿದೆ. ಆದರೆ ನಾವು ಎಲ್ಲಕ್ಕಿಂತಲೂ ಹೆಚ್ಚಾಗಿ ನಮಗೆ ಆಧ್ಯಾತ್ಮಿಕ ಬೆಳಕನ್ನು ನೀಡುವ ಬೈಬಲಿನ ಗ್ರಂಥಕರ್ತನಾದ ಯೆಹೋವನಿಗೆ ಋಣಿಗಳಾಗಿದ್ದೇವೆ. ಆದುದರಿಂದಲೇ ಕೀರ್ತನೆಗಾರನು ಆತನಿಗೆ ಬಿನ್ನೈಸಿದ್ದು: ‘ನಿನ್ನ ಬೆಳಕನ್ನೂ ನಿನ್ನ ಸತ್ಯವನ್ನೂ ಕಳುಹಿಸು; ಅವು ನನ್ನನ್ನು ನಡೆಸಲಿ.’—ಕೀರ್ತನೆ 43:3, NIBV.
[ಪಾದಟಿಪ್ಪಣಿಗಳು]
^ ಪ್ಯಾರ. 11 ಅವನು, ಸಾ.ಶ. ನಾಲ್ಕನೇ ಶತಮಾನದ ಕ್ರೈಸ್ತ ಗ್ರೀಕ್ ಶಾಸ್ತ್ರದ ಸಂಪೂರ್ಣ ಪ್ರತಿಯನ್ನು ಸಹ ತಂದನು.
^ ಪ್ಯಾರ. 13 ಕಾರೈಟರ ಕುರಿತಾದ ಹೆಚ್ಚಿನ ಮಾಹಿತಿಗಾಗಿ, “ಕಾರೈಟರು ಮತ್ತು ಸತ್ಯಕ್ಕಾಗಿ ಅವರ ಹುಡುಕಾಟ” ಎಂಬ 1995, ಜುಲೈ 15ರ ಕಾವಲಿನಬುರುಜು ಲೇಖನವನ್ನು ನೋಡಿರಿ.
^ ಪ್ಯಾರ. 19 ಕೋಡೆಕ್ಸ್ ಸೈನಾಯ್ಟಿಕಸ್‌ನ ಹೆಚ್ಚಿನ ಭಾಗವು ಬ್ರಿಟಿಷ್ ವಸ್ತುಸಂಗ್ರಹಾಲಯಕ್ಕೆ ಮಾರಲ್ಪಟ್ಟಿತು. ಕೇವಲ ಕೆಲವು ಚೂರುಗಳು ಮಾತ್ರ ದ ನ್ಯಾಷನಲ್ ಲೈಬ್ರರಿ ಆಫ್ ರಷ್ಯದಲ್ಲಿ ಉಳಿದಿವೆ.
^ ಪ್ಯಾರ. 20 ಕನ್ನಡದಲ್ಲಿ ಲಭ್ಯವಿಲ್ಲ.
[ಪುಟ 13ರಲ್ಲಿರುವ ಚೌಕ]
ದೈವಿಕ ನಾಮವು ಜ್ಞಾತವಾಗಿತ್ತು ಮತ್ತು ಉಪಯೋಗಿಸಲ್ಪಟ್ಟಿತ್ತು
ಯೆಹೋವನು ತನ್ನ ವಿವೇಕದಿಂದ ತನ್ನ ವಾಕ್ಯವಾದ ಬೈಬಲ್ ಇಂದಿನ ವರೆಗೂ ಸಂರಕ್ಷಿಸಲ್ಪಡುವಂತೆ ನೋಡಿಕೊಂಡಿದ್ದಾನೆ. ಇದನ್ನು ಸಂರಕ್ಷಿಸುವುದರಲ್ಲಿ, ವರುಷಗಳಾದ್ಯಂತ ಲಿಪಿಕಾರರು ಮಾಡಿರುವ ಶ್ರದ್ಧಾಪೂರ್ವಕ ಕೆಲಸವು ಒಳಗೂಡಿದೆ. ಇವರಲ್ಲಿ ಬಹಳಷ್ಟು ಸೂಕ್ಷ್ಮ ಗಮನಕೊಟ್ಟು ಕೆಲಸಮಾಡಿದವರು, ಸಾ.ಶ. ಆರರಿಂದ ಹತ್ತನೇ ಶತಮಾನಗಳ ವರೆಗೆ ಕೆಲಸಮಾಡಿದ ಪಾಂಡಿತ್ಯ ಪಡೆದಿರುವ ಹೀಬ್ರು ಲಿಪಿಕಾರರಾದ ಮ್ಯಾಸರೀಟರೆಂಬವರು ಆಗಿದ್ದರು. ಪುರಾತನ ಹೀಬ್ರು ಭಾಷೆಯನ್ನು ಯಾವುದೇ ಸ್ವರಾಕ್ಷರಗಳಿಲ್ಲದೆ ಬರೆಯಲಾಗುತ್ತಿತ್ತು. ಸಮಯ ದಾಟಿದಂತೆ, ಹೀಬ್ರು ಭಾಷೆಯ ಸ್ಥಾನವನ್ನು ಅರಾಮಿಕ್ ಭಾಷೆಯು ಆಕ್ರಮಿಸುತ್ತಾ ಬಂದಂತೆ, ಸರಿಯಾದ ಉಚ್ಚರಣೆಯು ಯಾವುದೆಂದು ತಿಳಿಯದೇ ಹೋಗುವ ಅಪಾಯವು ಹೆಚ್ಚಾಯಿತು. ಹೀಬ್ರು ಪದಗಳ ಸರಿಯಾದ ಉಚ್ಚರಣೆಯನ್ನು ಸೂಚಿಸಲು ಬೈಬಲ್ ಗ್ರಂಥಪಾಠಕ್ಕೆ ಸ್ವರಾಕ್ಷರಗಳನ್ನು ಸೇರಿಸುವ ವ್ಯವಸ್ಥೆಯನ್ನು ಮ್ಯಾಸರೀಟರು ಕಂಡುಹಿಡಿದರು.
ಲೆನಿನ್‌ಗ್ರ್ಯಾಡ್ ಕೋಡೆಕ್ಸ್‌ನಲ್ಲಿನ ಮ್ಯಾಸರೀಟರ ಸ್ವರಾಕ್ಷರಗಳ ಬಳಕೆಯು, ದೈವಿಕ ನಾಮದ ನಾಲ್ಕು ಹೀಬ್ರು ವ್ಯಂಜನಾಕ್ಷರಗಳಾದ ಚತುರಕ್ಷರಿ [ಟೆಟ್ರಗ್ರಮಾಟನ್]ಗಳನ್ನು ಯೆಹ್‌ವ, ಯೆಹ್ವಿ, ಮತ್ತು ಯೆಹೋವ ಎಂಬುದಾಗಿ ಉಚ್ಚರಿಸಲು ಅನುಮತಿಸುತ್ತದೆ ಎಂಬುದು ಗಮನಾರ್ಹವಾದ ಸಂಗತಿಯಾಗಿದೆ. “ಯೆಹೋವ” ಎಂಬುದು ಆ ಹೆಸರಿನ ಈಗ ಹೆಚ್ಚು ವ್ಯಾಪಕವಾಗಿ ತಿಳಿದಿರುವ ಉಚ್ಚಾರಣೆಯಾಗಿದೆ. ದೈವಿಕ ನಾಮವು, ಬೈಬಲ್ ಬರಹಗಾರರಿಗೆ ಮತ್ತು ಪುರಾತನ ಕಾಲಗಳಲ್ಲಿದ್ದ ಇತರರಿಗೆ ಒಂದು ಜೀವಂತ ಹಾಗೂ ಪರಿಚಿತ ನಾಮವಾಗಿತ್ತು. ಇಂದು, ‘ಯೆಹೋವನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು’ ಅಂಗೀಕರಿಸುವ ಲಕ್ಷಾಂತರ ಜನರಿಗೆ ದೇವರ ಹೆಸರು ತಿಳಿದಿದೆ ಮತ್ತು ಅದು ಅವರಿಂದ ಉಪಯೋಗಿಸಲ್ಪಡುತ್ತಿದೆ.—ಕೀರ್ತನೆ 83:18.
[ಪುಟ 10ರಲ್ಲಿರುವ ಚಿತ್ರ]
ದ ನ್ಯಾಷನಲ್ ಲೈಬ್ರರಿಯ ಹಸ್ತಪ್ರತಿಯನ್ನಿಡುವ ಕೊಠಡಿ
[ಪುಟ 11ರಲ್ಲಿರುವ ಚಿತ್ರ]
ಚಕ್ರವರ್ತಿನಿ ಎರಡನೇ ಕ್ಯಾಥರಿನ್
[ಪುಟ 11ರಲ್ಲಿರುವ ಚಿತ್ರಗಳು]
ಕಾನ್‌ಸ್ಟಾಂಟೀನ್ ವಾನ್ ಟಿಷನ್‌ಡಾರ್ಫ್ (ಮಧ್ಯದಲ್ಲಿ) ಮತ್ತು ರಷ್ಯದ ಚಕ್ರವರ್ತಿ ಎರಡನೇ ಅಲೆಕ್ಸಾಂಡರ್
[ಪುಟ 12ರಲ್ಲಿರುವ ಚಿತ್ರ]
ಅಬ್ರಹಾಮ್ ಫಿರ್‌ಕೊವಿಚ್
[ಪುಟ 10ರಲ್ಲಿರುವ ಚಿತ್ರ ಕೃಪೆ]
ಎರಡೂ ಚಿತ್ರಗಳು: National Library of Russia, St. Petersburg
[ಪುಟ 11ರಲ್ಲಿರುವ ಚಿತ್ರ ಕೃಪೆ]
ಎರಡನೇ ಕ್ಯಾಥರಿನ್: National Library of Russia, St. Petersburg; ಎರಡನೇ ಅಲೆಕ್ಸಾಂಡರ್: From the book Spamers Illustrierte Weltgeschichte, Leipzig, 1898