ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಎಲ್ಲ ವಿಷಯಗಳಲ್ಲಿ ನಂಬಿಗಸ್ತರಾಗಿದ್ದೀರೊ?

ನೀವು ಎಲ್ಲ ವಿಷಯಗಳಲ್ಲಿ ನಂಬಿಗಸ್ತರಾಗಿದ್ದೀರೊ?

ನೀವು ಎಲ್ಲ ವಿಷಯಗಳಲ್ಲಿ ನಂಬಿಗಸ್ತರಾಗಿದ್ದೀರೊ?

“ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾದವನು ಬಹಳವಾದದ್ದರಲ್ಲಿಯೂ ನಂಬಿಗಸ್ತನಾಗುವನು.”​—⁠ಲೂಕ 16:⁠10.

ದಿನವು ಬೆಳಗಾಗುತ್ತಾ ಹೋದಂತೆ, ನೆಲದ ಮೇಲೆ ಬೀಳುವ ಮರವೊಂದರ ನೆರಳಿಗೆ ಏನಾಗುತ್ತದೆ ಎಂಬುದನ್ನು ನೀವೆಂದಾದರೂ ಗಮನಿಸಿದ್ದೀರೊ? ಆ ನೆರಳಿನ ಆಕಾರ ಮತ್ತು ದಿಕ್ಕು ಬದಲಾಗುತ್ತಾ ಇರುತ್ತದೆ! ಮಾನವ ಪ್ರಯತ್ನಗಳು ಮತ್ತು ವಾಗ್ದಾನಗಳು ಅನೇಕವೇಳೆ ಒಂದು ನೆರಳಿನಷ್ಟೇ ಅಸ್ಥಿರವಾಗಿರುತ್ತವೆ. ಯೆಹೋವ ದೇವರಾದರೋ ಕಾಲಕ್ಕೆ ತಕ್ಕಂತೆ ಬದಲಾಗುವವನಲ್ಲ. ಆತನನ್ನು ‘ಸಕಲವಿಧವಾದ ಬೆಳಕಿಗೆ ಮೂಲಕಾರಣನು’ ಎಂದು ಸಂಬೋಧಿಸುತ್ತಾ ಶಿಷ್ಯ ಯಾಕೋಬನು ಹೇಳುವುದು: “ಆತನಲ್ಲಿ ಚಂಚಲತ್ವವೇನೂ ಇಲ್ಲ, ವ್ಯತ್ಯಾಸದ ಸೂಚನೆಯೂ ಇಲ್ಲ [“ಬದಲಾಗುವ ನೆರಳಿನಂತೆ ಆತನು ಬದಲಾಗುವುದಿಲ್ಲ,” NIBV].” (ಯಾಕೋಬ 1:17) ಅತಿ ಸೂಕ್ಷ್ಮ ವಿವರಗಳಲ್ಲೂ ಯೆಹೋವನು ಅಚಲನಾಗಿದ್ದಾನೆ ಮತ್ತು ವಿಶ್ವಾಸಾರ್ಹನಾಗಿದ್ದಾನೆ. ಆತನು ‘ನಂಬಿಗಸ್ತ ದೇವರಾಗಿದ್ದಾನೆ.’​—⁠ಧರ್ಮೋಪದೇಶಕಾಂಡ 32:⁠4.

2 ದೇವರು ತನ್ನ ಆರಾಧಕರ ವಿಶ್ವಾಸಾರ್ಹತೆಯನ್ನು ಹೇಗೆ ವೀಕ್ಷಿಸುತ್ತಾನೆ? ದಾವೀದನು ಹೇಗೆ ವೀಕ್ಷಿಸಿದನೋ ಹಾಗೆಯೇ. ಅವರ ಕುರಿತಾಗಿ ಅವನಂದದ್ದು: “ದೇಶದಲ್ಲಿರುವ ನಂಬಿಗಸ್ತರನ್ನು ಆರಿಸಿಕೊಳ್ಳುವೆನು; ಅವರೇ ನನ್ನ ಸನ್ನಿಧಿಯಲ್ಲಿ ವಾಸಿಸಬೇಕು. ಸನ್ಮಾರ್ಗಿಯೇ ನನ್ನ ಸೇವೆಯಲ್ಲಿರಬೇಕು.” (ಕೀರ್ತನೆ 101:6) ಹೌದು, ಯೆಹೋವನು ತನ್ನ ಸೇವಕರ ನಂಬಿಗಸ್ತಿಕೆಯಲ್ಲಿ ಸಂತೋಷಿಸುತ್ತಾನೆ. ಸಕಾರಣದಿಂದಲೇ ಅಪೊಸ್ತಲ ಪೌಲನು ಬರೆದುದು: “ಮನೆವಾರ್ತೆಯವನು ನಂಬಿಗಸ್ತನಾಗಿ ಕಂಡುಬರುವದು ಅವಶ್ಯ.” (1 ಕೊರಿಂಥ 4:2) ನಂಬಿಗಸ್ತರಾಗಿರುವುದರಲ್ಲಿ ಏನು ಒಳಗೂಡಿದೆ? ಜೀವನದ ಯಾವ ಕ್ಷೇತ್ರಗಳಲ್ಲಿ ನಾವು ನಂಬಿಗಸ್ತಿಕೆಯಿಂದ ಕ್ರಿಯೆಗೈಯಬೇಕು? ‘ಸನ್ಮಾರ್ಗದಲ್ಲಿ’ ನಡೆಯುವುದರಿಂದ ಯಾವ ಪ್ರಯೋಜನಗಳಿವೆ?

ನಂಬಿಗಸ್ತರಾಗಿರುವುದರ ಅರ್ಥವೇನು?

3 “ಮೋಶೆಯು ಸೇವಕನಾಗಿ ದೇವರ ಮನೆಯಲ್ಲೆಲ್ಲಾ ನಂಬಿಗಸ್ತನಾಗಿದ್ದನು” ಎಂದು ಇಬ್ರಿಯ 3:5 ತಿಳಿಸುತ್ತದೆ. ಪ್ರವಾದಿಯಾದ ಮೋಶೆಯನ್ನು ಯಾವುದು ನಂಬಿಗಸ್ತನನ್ನಾಗಿ ಮಾಡಿತು? ದೇವದರ್ಶನ ಗುಡಾರದ ನಿರ್ಮಾಣ ಹಾಗೂ ಸ್ಥಾಪನೆಯಲ್ಲಿ, “ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆ ಎಲ್ಲವನ್ನು ಮಾಡಿದನು.” (ವಿಮೋಚನಕಾಂಡ 40:16) ಯೆಹೋವನ ಆರಾಧಕರಾಗಿರುವ ನಾವು ವಿಧೇಯತೆಯಿಂದ ಆತನ ಸೇವೆಮಾಡುವ ಮೂಲಕ ನಂಬಿಗಸ್ತಿಕೆಯನ್ನು ತೋರಿಸುತ್ತೇವೆ. ನಾವು ಕಷ್ಟಕರವಾದ ಪರೀಕ್ಷೆಗಳನ್ನು ಅಥವಾ ಗಂಭೀರವಾದ ಶೋಧನೆಗಳನ್ನು ಎದುರಿಸುತ್ತಿರುವಾಗ ಯೆಹೋವನಿಗೆ ನಿಷ್ಠರಾಗಿ ಉಳಿಯುವುದು ಇದರಲ್ಲಿ ಒಳಗೂಡಿದೆ ಎಂಬುದಂತೂ ನಿಶ್ಚಯ. ಆದರೂ, ದೊಡ್ಡ ಪರೀಕ್ಷೆಗಳೊಂದಿಗೆ ವ್ಯವಹರಿಸುವುದರಲ್ಲಿ ಸಫಲರಾಗುವುದು ತಾನೇ ನಮ್ಮ ನಂಬಿಗಸ್ತಿಕೆಯನ್ನು ನಿರ್ಧರಿಸುವ ಏಕಮಾತ್ರ ಅಂಶವಾಗಿರುವುದಿಲ್ಲ. ಯೇಸು ಹೇಳಿದ್ದು: “ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾದವನು ಬಹಳವಾದದ್ದರಲ್ಲಿಯೂ ನಂಬಿಗಸ್ತನಾಗುವನು; ಸ್ವಲ್ಪವಾದದ್ದರಲ್ಲಿ ಅನ್ಯಾಯಗಾರನಾದವನು ಬಹಳವಾದದ್ದರಲ್ಲಿಯೂ ಅನ್ಯಾಯಗಾರನಾಗುವನು.” (ಲೂಕ 16:10) ಅಲ್ಪವೆಂದು ತೋರುವ ವಿಷಯಗಳಲ್ಲಿಯೂ ನಾವು ನಂಬಿಗಸ್ತರಾಗಿ ಉಳಿಯಬೇಕು.

4 ಪ್ರತಿ ದಿನ “ಸ್ವಲ್ಪವಾದದ್ದರಲ್ಲಿ” ವಿಧೇಯತೆಯನ್ನು ತೋರಿಸುವುದು ಎರಡು ಕಾರಣಗಳಿಗಾಗಿ ಪ್ರಾಮುಖ್ಯವಾಗಿದೆ. ಮೊದಲನೆಯದಾಗಿ, ಯೆಹೋವನ ಪರಮಾಧಿಕಾರದ ಕುರಿತು ನಮಗೆ ಹೇಗನಿಸುತ್ತದೆ ಎಂಬುದನ್ನು ಅದು ಪ್ರಕಟಪಡಿಸುತ್ತದೆ. ಪ್ರಥಮ ಮಾನವ ಜೋಡಿಯಾಗಿದ್ದ ಆದಾಮಹವ್ವರ ಮುಂದೆ ಒಡ್ಡಲ್ಪಟ್ಟ ನಿಷ್ಠೆಯ ಪರೀಕ್ಷೆಯ ಕುರಿತು ಆಲೋಚಿಸಿರಿ. ಅದು ಅವರಿಗೆ ಕಷ್ಟಕರವಾದ ಆವಶ್ಯಕತೆಯೇನಾಗಿರಲಿಲ್ಲ. ಏದೆನ್‌ ತೋಟದಲ್ಲಿದ್ದ ಎಲ್ಲ ರೀತಿಯ ಆಹಾರವನ್ನು ಅವರು ತಿನ್ನುವ ಸ್ವಾತಂತ್ರ್ಯವಿತ್ತು, ಆದರೆ ಒಂದೇ ಒಂದು ಮರದ ಹಣ್ಣನ್ನು​—⁠“ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು”​—⁠ಮಾತ್ರ ತಿನ್ನುವುದರಿಂದ ಅವರು ದೂರವಿರಬೇಕಾಗಿತ್ತು. (ಆದಿಕಾಂಡ 2:16, 17) ಆ ಸರಳವಾದ ಆಜ್ಞೆಗೆ ವಿಧೇಯರಾಗುವುದರಲ್ಲಿ ಆ ಪ್ರಥಮ ಮಾನವ ದಂಪತಿಯು ತೋರಿಸುವ ನಂಬಿಗಸ್ತಿಕೆಯು, ಅವರು ಯೆಹೋವನ ಆಳ್ವಿಕೆಯನ್ನು ಎತ್ತಿಹಿಡಿಯುತ್ತಾರೋ ಇಲ್ಲವೋ ಎಂಬುದನ್ನು ತೋರ್ಪಡಿಸಸಾಧ್ಯವಿತ್ತು. ನಮ್ಮ ದೈನಂದಿನ ಜೀವನದಲ್ಲಿ ಯೆಹೋವನ ಸೂಚನೆಗಳನ್ನು ಅನುಸರಿಸುವುದು, ನಾವು ಆತನ ಪರಮಾಧಿಕಾರದ ಪಕ್ಷದಲ್ಲಿದ್ದೇವೆ ಎಂಬುದನ್ನು ತೋರಿಸುತ್ತದೆ.

5 ಎರಡನೆಯದಾಗಿ, “ಸ್ವಲ್ಪವಾದದ್ದರಲ್ಲಿ” ಅಥವಾ ಚಿಕ್ಕಪುಟ್ಟ ವಿಷಯಗಳಲ್ಲಿ ನಮ್ಮ ನಡತೆಯು, “ಬಹಳವಾದದ್ದರಲ್ಲಿ” ಅಂದರೆ ಜೀವನದಲ್ಲಿ ಹೆಚ್ಚು ದೊಡ್ಡ ವಿವಾದಾಂಶಗಳನ್ನು ಎದುರಿಸುವಾಗ ನಾವು ಹೇಗೆ ಪ್ರತಿಕ್ರಿಯಿಸುವೆವು ಎಂಬುದರ ಮೇಲೆ ಪ್ರಭಾವ ಬೀರುತ್ತದೆ. ಈ ವಿಷಯದಲ್ಲಿ, ದಾನಿಯೇಲನಿಗೆ ಮತ್ತು ಅವನ ಮೂವರು ನಂಬಿಗಸ್ತ ಇಬ್ರಿಯ ಸಂಗಡಿಗರಾದ ಹನನ್ಯ, ಮೀಶಾಯೇಲ ಮತ್ತು ಅಜರ್ಯರಿಗೆ ಏನು ಸಂಭವಿಸಿತು ಎಂಬುದನ್ನು ಪರಿಗಣಿಸಿರಿ. ಸಾ.ಶ.ಪೂ. 617ರಲ್ಲಿ ಅವರು ಬಾಬೆಲಿಗೆ ದೇಶಭ್ರಷ್ಟರಾಗಿ ಕರೆದೊಯ್ಯಲ್ಪಟ್ಟರು. ಇನ್ನೂ ಚಿಕ್ಕವರಾಗಿದ್ದ, ಬಹುಶಃ ಹದಿಪ್ರಾಯದವರಾಗಿದ್ದ ಈ ನಾಲ್ಕು ಮಂದಿ ಇಬ್ರಿಯರು ರಾಜನಾದ ನೆಬೂಕದ್ನೆಚ್ಚರನ ಆಸ್ಥಾನದಲ್ಲಿ ಇರಿಸಲ್ಪಟ್ಟರು. ಅಲ್ಲಿ ಅವರು ‘ಸನ್ನಿಧಿಸೇವಕರಾಗಲಿಕ್ಕಾಗಿ ಅರಸನ ಭೋಜನಪದಾರ್ಥಗಳನ್ನೂ ಅವನು ಕುಡಿಯುವ ದ್ರಾಕ್ಷಾರಸವನ್ನೂ ಅವರಿಗೆ ದಿನವಹಿ ಬಡಿಸುವ ಏರ್ಪಾಡುಮಾಡಿ, ಅವರನ್ನು ಮೂರು ವರುಷ ಪೋಷಿಸಬೇಕು ಎಂದು ಆಜ್ಞಾಪಿಸಲಾಯಿತು.’​—⁠ದಾನಿಯೇಲ 1:3-5.

6 ಆದರೂ, ಬಾಬೆಲಿನ ಅರಸನ ಆಹಾರದ ಏರ್ಪಾಡುಗಳು ಈ ನಾಲ್ಕು ಮಂದಿ ಇಬ್ರಿಯ ಯುವಕರಿಗೆ ಒಂದು ಸವಾಲನ್ನೊಡ್ಡಿದವು. ಮೋಶೆಯ ಧರ್ಮಶಾಸ್ತ್ರದಿಂದ ನಿಷೇಧಿಸಲ್ಪಟ್ಟ ಆಹಾರವು ಅರಸನ ಭೋಜನಪದಾರ್ಥದಲ್ಲಿ ಒಳಗೂಡಿದ್ದಿರುವುದು ಸಂಭವನೀಯ. (ಧರ್ಮೋಪದೇಶಕಾಂಡ 14:​3-20) ಕೊಯ್ಯಲ್ಪಟ್ಟ ಪ್ರಾಣಿಗಳ ರಕ್ತವು ಸರಿಯಾಗಿ ಸುರಿಸಲ್ಪಡದೇ ಇದ್ದಿರಬಹುದು, ಮತ್ತು ಇಂಥ ಮಾಂಸವನ್ನು ತಿನ್ನುವುದು ದೇವರ ಧರ್ಮಶಾಸ್ತ್ರವನ್ನು ಉಲ್ಲಂಘಿಸಲಿತ್ತು. (ಧರ್ಮೋಪದೇಶಕಾಂಡ 12:23-25) ಒಂದು ಸಹಭೋಜನವನ್ನು ಮಾಡುವುದಕ್ಕೆ ಮುಂಚೆ ಬಾಬೆಲಿನ ಆರಾಧಕರಲ್ಲಿ ವಾಡಿಕೆಯಾಗಿದ್ದಂತೆ ಆ ಆಹಾರವು ವಿಗ್ರಹಗಳಿಗೂ ನೈವೇದ್ಯ ಮಾಡಲ್ಪಟ್ಟದ್ದಾಗಿರಬಹುದು.

7 ಬಾಬೆಲಿನ ರಾಜಮನೆತನದಲ್ಲಿದ್ದವರಿಗೆ ಆಹಾರಪಥ್ಯದ ನಿರ್ಬಂಧಗಳು ನಿಸ್ಸಂದೇಹವಾಗಿಯೂ ಗಂಭೀರವಾದ ಸಮಸ್ಯೆಯಾಗಿರಲಿಲ್ಲ. ಆದರೆ, ದಾನಿಯೇಲನು ಮತ್ತು ಅವನ ಮೂವರು ಸ್ನೇಹಿತರು, ದೇವರು ಇಸ್ರಾಯೇಲ್ಯರಿಗೆ ಕೊಟ್ಟಿದ್ದ ಧರ್ಮಶಾಸ್ತ್ರದಲ್ಲಿ ನಿಷೇಧಿತವಾದ ಆಹಾರವನ್ನು ತಿನ್ನುವ ಮೂಲಕ ತಮ್ಮನ್ನು ಮಲಿನಗೊಳಿಸಿಕೊಳ್ಳಬಾರದೆಂದು ತಮ್ಮ ಹೃದಯಗಳಲ್ಲಿ ನಿಶ್ಚಯಿಸಿದ್ದರು. ಇದು ದೇವರಿಗೆ ಅವರ ನಿಷ್ಠೆ ಮತ್ತು ನಂಬಿಗಸ್ತಿಕೆಯನ್ನು ಒಳಗೂಡಿದ್ದ ಒಂದು ವಿವಾದಾಂಶವಾಗಿತ್ತು. ಆದುದರಿಂದ ಅವರು ಕಾಯಿಪಲ್ಯ ಮತ್ತು ನೀರಿನ ಆಹಾರಪಥ್ಯವನ್ನು ಮಾತ್ರ ಒದಗಿಸುವಂತೆ ಕೇಳಿಕೊಂಡರು, ಹಾಗೂ ಅವರ ಬೇಡಿಕೆಯು ಪೂರೈಸಲ್ಪಟ್ಟಿತು. (ದಾನಿಯೇಲ 1:9-14) ಆ ನಾಲ್ಕು ಯುವಕರು ಏನು ಮಾಡಿದರೋ ಅದು ಇಂದು ಕೆಲವರಿಗೆ ತೀರ ಕ್ಷುಲ್ಲಕವಾದದ್ದಾಗಿ ಕಂಡುಬರಬಹುದು. ಆದರೆ, ದೇವರಿಗೆ ಅವರು ತೋರಿಸಿದ ವಿಧೇಯತೆಯು, ಯೆಹೋವನ ಪರಮಾಧಿಕಾರದ ವಿವಾದಾಂಶದಲ್ಲಿ ಅವರ ನಿಲುವೇನು ಎಂಬುದನ್ನು ತೋರಿಸಿಕೊಟ್ಟಿತು.

8 ತೀರ ಕ್ಷುಲ್ಲಕವಾಗಿ ತೋರಿರಬಹುದಾದಂಥ ವಿಚಾರದಲ್ಲಿ ನಂಬಿಗಸ್ತರಾಗಿ ರುಜುಪಡಿಸಿಕೊಂಡದ್ದು, ಇನ್ನೂ ದೊಡ್ಡ ಪರೀಕ್ಷೆಯನ್ನು ನಿಭಾಯಿಸುವಂತೆ ದಾನಿಯೇಲನ ಮೂವರು ಸ್ನೇಹಿತರನ್ನು ಸಿದ್ಧಗೊಳಿಸಿತು. ದಾನಿಯೇಲ ಪುಸ್ತಕದ 3ನೇ ಅಧ್ಯಾಯವನ್ನು ತೆರೆಯಿರಿ ಮತ್ತು ಅರಸನಾದ ನೆಬೂಕದ್ನೆಚ್ಚರನು ಸ್ಥಾಪಿಸಿದಂಥ ಚಿನ್ನದ ಪ್ರತಿಮೆಯನ್ನು ಆರಾಧಿಸಲು ನಿರಾಕರಿಸಿದ್ದಕ್ಕಾಗಿ ಆ ಮೂವರು ಇಬ್ರಿಯರು ಹೇಗೆ ಮರಣದಂಡನೆಯನ್ನು ಎದುರಿಸಿದರು ಎಂಬುದನ್ನು ನೀವೇ ಓದಿ ನೋಡಿ. ಅರಸನ ಮುಂದೆ ಕರೆತರಲ್ಪಟ್ಟಾಗ, ತಮ್ಮ ದೃಢನಿರ್ಧಾರವನ್ನು ಅವರು ಆತ್ಮವಿಶ್ವಾಸದಿಂದ ಪ್ರಕಟಪಡಿಸಿದರು: “ಅರಸೇ, ನಾವು ಸೇವಿಸುವ ದೇವರಿಗೆ ಚಿತ್ತವಿದ್ದರೆ ಆತನು ಧಗಧಗನೆ ಉರಿಯುವ ಆವಿಗೆಯೊಳಗಿಂದ ನಮ್ಮನ್ನು ಬಿಡಿಸಬಲ್ಲನು; ಹೇಗೂ ನಿನ್ನ ಕೈಯಿಂದ ನಮ್ಮನ್ನು ಬಿಡಿಸುವನು. ಚಿತ್ತವಿಲ್ಲದಿದ್ದರೂ ರಾಜನೇ, ಇದು ನಿನಗೆ ತಿಳಿದಿರಲಿ, ನಾವು ನಿನ್ನ ದೇವರುಗಳನ್ನು ಸೇವಿಸುವದಿಲ್ಲ, ನೀನು ನಿಲ್ಲಿಸಿದ ಬಂಗಾರದ ಪ್ರತಿಮೆಯನ್ನು ಪೂಜಿಸುವದಿಲ್ಲ.” (ದಾನಿಯೇಲ 3:17, 18) ಯೆಹೋವನು ಅವರನ್ನು ರಕ್ಷಿಸಿದನೊ? ಧಗಧಗನೆ ಉರಿಯುವ ಆವಿಗೆಯೊಳಗೆ ಈ ಯುವಕರನ್ನು ಎತ್ತಿಹಾಕಿದಂಥ ಕಾವಲುಗಾರರೇ ಅದರ ಕಾವಿನಿಂದ ಸಂಹಾರವಾದರು, ಆದರೆ ಆ ಮೂವರು ನಂಬಿಗಸ್ತ ಇಬ್ರಿಯರು ಸಜೀವವಾಗಿಯೇ ಬೆಂಕಿಯಿಂದ ಹೊರಬಂದರು​—⁠ಆವಿಗೆಯ ಕಾವಿನಿಂದಲೂ ಅವರು ತಟ್ಟಲ್ಪಟ್ಟಿರಲಿಲ್ಲ! ಅವರ ನಂಬಿಗಸ್ತಿಕೆಯ ಸುಸ್ಥಾಪಿತ ನಮೂನೆಯು ಈ ನಿರ್ಣಾಯಕ ಪರೀಕ್ಷೆಯ ಸಮಯದಲ್ಲಿ ನಂಬಿಗಸ್ತರಾಗಿರುವಂತೆ ಸಿದ್ಧಗೊಳಿಸಲು ಅವರಿಗೆ ಸಹಾಯಮಾಡಿತು. ಚಿಕ್ಕಪುಟ್ಟ ವಿಷಯಗಳಲ್ಲಿಯೂ ನಂಬಿಗಸ್ತರಾಗಿರುವುದರ ಪ್ರಮುಖತೆಯನ್ನು ಇದು ದೃಷ್ಟಾಂತಿಸುವುದಿಲ್ಲವೊ?

“ಅನ್ಯಾಯದ ಧನದ” ವಿಷಯದಲ್ಲಿ ನಂಬಿಗಸ್ತಿಕೆ

9 ಚಿಕ್ಕಪುಟ್ಟದ್ದಾಗಿ ತೋರುವ ವಿಷಯಗಳಲ್ಲಿ ನಂಬಿಗಸ್ತನಾಗಿರುವವನು ಪ್ರಮುಖ ವಿಷಯಗಳಲ್ಲಿಯೂ ನಂಬಿಗಸ್ತನಾಗಿರುತ್ತಾನೆ ಎಂಬ ಮೂಲತತ್ತ್ವವನ್ನು ತಿಳಿಯಪಡಿಸುವ ಮುಂಚೆ ಯೇಸು ತನ್ನ ಕೇಳುಗರಿಗೆ ಹೀಗೆ ಸಲಹೆ ನೀಡಿದನು: “ಅನ್ಯಾಯದ ಧನದ ಮೂಲಕವಾಗಿ ನಿಮಗೆ ಸ್ನೇಹಿತರನ್ನು ಮಾಡಿಕೊಳ್ಳಿರಿ; ಹೀಗೆ ಮಾಡಿದರೆ ಅದು ನಿಮ್ಮ ಕೈಬಿಟ್ಟುಹೋದಾಗ ಅವರು ನಿಮ್ಮನ್ನು ಶಾಶ್ವತವಾದ ವಾಸಸ್ಥಾನಗಳಲ್ಲಿ ಸೇರಿಸಿಕೊಳ್ಳುವರು.” ತದನಂತರ ಅವನು ಸ್ವಲ್ಪವಾದದ್ದರಲ್ಲಿ ನಂಬಿಗಸ್ತರಾಗಿರುವುದರ ಕುರಿತಾದ ಹೇಳಿಕೆಯನ್ನು ನುಡಿದನು. ಆ ಬಳಿಕ ಯೇಸು ಹೇಳಿದ್ದು: “ಹೀಗಿರುವದರಿಂದ ಅನ್ಯಾಯದ ಧನದ ವಿಷಯದಲ್ಲಿ ನೀವು ನಂಬಿಗಸ್ತರಲ್ಲದವರಾದರೆ ನಿಜವಾದ ಧನವನ್ನು ನಿಮ್ಮ ವಶಕ್ಕೆ ಯಾರು ಕೊಟ್ಟಾರು? . . . ಯಾವ ಆಳಾದರೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು; ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು, ಇಲ್ಲವೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಾತ್ಸಾರಮಾಡುವನು. ನೀವು ದೇವರನ್ನೂ ಧನವನ್ನೂ ಕೂಡ ಸೇವಿಸಲಾರಿರಿ.”​—⁠ಲೂಕ 16:9-13.

10 ಪೂರ್ವಾಪರಕ್ಕನುಸಾರ, ಲೂಕ 16:10ರಲ್ಲಿ ಕಂಡುಬರುವ ಯೇಸುವಿನ ಮಾತುಗಳ ಮೂಲ ಅನ್ವಯವು “ಅನ್ಯಾಯದ ಧನ” ಅಂದರೆ ನಮ್ಮ ಭೌತಿಕ ಸಂಪನ್ಮೂಲಗಳು ಅಥವಾ ಸೊತ್ತುಗಳ ಉಪಯೋಗಕ್ಕೆ ಸಂಬಂಧಿಸಿದ್ದಾಗಿದೆ. ಅವುಗಳನ್ನು ಅನ್ಯಾಯದ ಧನ ಎಂದು ಏಕೆ ಕರೆಯಲಾಗಿದೆಯೆಂದರೆ, ಭೌತಿಕ ಐಶ್ವರ್ಯವು ಅದರಲ್ಲೂ ವಿಶೇಷವಾಗಿ ಹಣವು ಪಾಪಭರಿತ ಮಾನವರ ನಿಯಂತ್ರಣದ ಕೆಳಗಿದೆ. ಅಷ್ಟುಮಾತ್ರವಲ್ಲ, ಐಶ್ವರ್ಯವಂತರಾಗುವ ಬಯಕೆಯು ಅನ್ಯಾಯದ ಕೃತ್ಯಗಳಿಗೆ ನಡಿಸಸಾಧ್ಯವಿದೆ. ನಮ್ಮ ಭೌತಿಕ ಸೊತ್ತುಗಳನ್ನು ಉಪಯೋಗಿಸುವ ರೀತಿಯಲ್ಲಿ ವಿವೇಕವನ್ನು ತೋರಿಸುವ ಮೂಲಕ ನಾವು ನಂಬಿಗಸ್ತಿಕೆಯನ್ನು ವ್ಯಕ್ತಪಡಿಸುತ್ತೇವೆ. ಅವುಗಳನ್ನು ಸ್ವಾರ್ಥಪರ ಉದ್ದೇಶಗಳಿಗಾಗಿ ಉಪಯೋಗಿಸುವುದಕ್ಕೆ ಬದಲಾಗಿ, ರಾಜ್ಯಾಭಿರುಚಿಗಳನ್ನು ಹೆಚ್ಚಿಸುವುದರಲ್ಲಿ ಮತ್ತು ಅಗತ್ಯದಲ್ಲಿರುವವರಿಗೆ ಸಹಾಯಮಾಡುವುದರಲ್ಲಿ ನಾವು ಅವುಗಳನ್ನು ಉಪಯೋಗಿಸಲು ಬಯಸುತ್ತೇವೆ. ಈ ರೀತಿಯಲ್ಲಿ ನಂಬಿಗಸ್ತರಾಗಿರುವ ಮೂಲಕ ನಾವು, ‘ಶಾಶ್ವತವಾದ ವಾಸಸ್ಥಾನಗಳನ್ನು’ ಹೊಂದಿರುವ ಯೆಹೋವ ದೇವರೊಂದಿಗೆ ಮತ್ತು ಯೇಸು ಕ್ರಿಸ್ತನೊಂದಿಗೆ ಸ್ನೇಹಸಂಬಂಧವನ್ನು ಪಡೆಯುತ್ತೇವೆ. ಪರಲೋಕದಲ್ಲಾಗಲಿ ಅಥವಾ ಭೂಪರದೈಸಿನಲ್ಲಾಗಲಿ ನಮಗೆ ನಿತ್ಯಜೀವವನ್ನು ದಯಪಾಲಿಸುವ ಮೂಲಕ ಅವರು ನಮ್ಮನ್ನು ಆ ಸ್ಥಾನಗಳಲ್ಲಿ ಸೇರಿಸಿಕೊಳ್ಳುವರು.

11 ನಾವು ರಾಜ್ಯದ ಸಂದೇಶವನ್ನು ಘೋಷಿಸುವಾಗ ಯಾರಿಗೆ ಬೈಬಲುಗಳನ್ನು ಅಥವಾ ಬೈಬಲ್‌ ಆಧಾರಿತ ಸಾಹಿತ್ಯವನ್ನು ಕೊಟ್ಟು, ಯೆಹೋವನ ಜನರಿಂದ ಲೋಕವ್ಯಾಪಕವಾಗಿ ನಡೆಸಲ್ಪಡುವ ಕೆಲಸಕ್ಕೆ ನಾವು ಕಾಣಿಕೆಗಳನ್ನು ಸ್ವೀಕರಿಸುತ್ತೇವೆ ಎಂದು ವಿವರಿಸುತ್ತೇವೋ ಅಂಥ ಜನರಿಗೆ ಏನನ್ನು ನೀಡುತ್ತಿದ್ದೇವೆ ಎಂಬುದನ್ನೂ ಪರಿಗಣಿಸಿರಿ. ತಮ್ಮ ಭೌತಿಕ ಸಂಪನ್ಮೂಲಗಳನ್ನು ವಿವೇಕಯುತವಾದ ರೀತಿಯಲ್ಲಿ ಉಪಯೋಗಿಸುವ ಅವಕಾಶವನ್ನು ನಾವು ಅವರಿಗೆ ನೀಡುತ್ತಿದ್ದೇವಲ್ಲವೊ? ಲೂಕ 16:10ರ ಮೂಲ ಅನ್ವಯವು ಭೌತಿಕ ಸಂಪನ್ಮೂಲಗಳ ಬಳಕೆಗೆ ಸಂಬಂಧಿಸಿದೆಯಾದರೂ, ಅಲ್ಲಿ ತಿಳಿಸಲ್ಪಟ್ಟಿರುವ ಮೂಲತತ್ತ್ವವು ಜೀವನದ ಇತರ ಕ್ಷೇತ್ರಗಳಲ್ಲಿಯೂ ಅನ್ವಯವಾಗುತ್ತದೆ.

ಪ್ರಾಮಾಣಿಕತೆಯು ನಿಜವಾಗಿಯೂ ಪ್ರಾಮುಖ್ಯವಾಗಿದೆ

12 ಅಪೊಸ್ತಲ ಪೌಲನು ಬರೆದುದು: “ನಾವು ಎಲ್ಲಾ ವಿಷಯಗಳಲ್ಲಿ ಶುದ್ಧಮನಸ್ಸಾಕ್ಷಿಯಿಂದ, ಪ್ರತಿಯೊಂದರಲ್ಲಿಯೂ ಪ್ರಾಮಾಣಿಕವಾಗಿ ಇರಲು ಬಯಸುತ್ತೇವೆ.” (ಇಬ್ರಿಯ 13:​18, NIBV) ಈ “ಎಲ್ಲಾ ವಿಷಯಗಳಲ್ಲಿ,” ಹಣಕಾಸನ್ನು ನಿರ್ವಹಿಸುವ ಎಲ್ಲ ವಿಚಾರಗಳೂ ಒಳಗೂಡಿವೆ ಎಂಬುದು ನಿಶ್ಚಯ. ನಾವು ನಮ್ಮ ಸಾಲಗಳನ್ನು ಮತ್ತು ತೆರಿಗೆಗಳನ್ನು ತಡಮಾಡದೆ ಮತ್ತು ಪ್ರಾಮಾಣಿಕವಾಗಿ ತೀರಿಸುತ್ತೇವೆ. ಏಕೆ? ನಮ್ಮ ಮನಸ್ಸಾಕ್ಷಿಯ ಕಾರಣದಿಂದ ಮತ್ತು ಪ್ರಧಾನವಾಗಿ ದೇವರಿಗಾಗಿರುವ ಪ್ರೀತಿ ಹಾಗೂ ಆತನ ಸಲಹೆಗಳಿಗೆ ವಿಧೇಯತೆಯಲ್ಲಿ ಹೀಗೆ ಮಾಡುತ್ತೇವೆ. (ರೋಮಾಪುರ 13:5, 6) ನಮ್ಮದಾಗಿರದ ಒಂದು ವಸ್ತುವು ನಮಗೆ ಸಿಗುವಲ್ಲಿ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ? ಅದು ಯಾರದ್ದೊ ಅವರಿಗೆ ಹಿಂದಿರುಗಿಸಲು ಪ್ರಯತ್ನಿಸುತ್ತೇವೆ. ಆ ವ್ಯಕ್ತಿಯ ಸೊತ್ತನ್ನು ಹಿಂದಿರುಗಿಸುವಂತೆ ಯಾವುದು ನಮ್ಮನ್ನು ಪ್ರಚೋದಿಸಿತು ಎಂಬುದನ್ನು ನಾವು ವಿವರಿಸುವುದರ ಫಲಿತಾಂಶವಾಗಿ ಎಷ್ಟು ಒಳ್ಳೇ ಸಾಕ್ಷಿಯು ಕೊಡಲ್ಪಡುತ್ತದೆ!

13 ಎಲ್ಲಾ ವಿಷಯಗಳಲ್ಲಿ ನಂಬಿಗಸ್ತರು ಮತ್ತು ಪ್ರಾಮಾಣಿಕರು ಆಗಿರುವುದು, ನಮ್ಮ ಉದ್ಯೋಗದ ಸ್ಥಳದಲ್ಲಿಯೂ ಪ್ರಾಮಾಣಿಕರಾಗಿರುವುದನ್ನು ಅಗತ್ಯಪಡಿಸುತ್ತದೆ. ನಮ್ಮ ಕೆಲಸದಲ್ಲಿ ತೋರಿಸಲ್ಪಡುವ ಪ್ರಾಮಾಣಿಕತೆಯು, ನಾವು ಯಾವ ರೀತಿಯ ದೇವರನ್ನು ಪ್ರತಿನಿಧಿಸುತ್ತೇವೆ ಎಂಬುದರ ಕಡೆಗೆ ಗಮನ ಸೆಳೆಯುತ್ತದೆ. ಸೋಮಾರಿಗಳಾಗಿರುವ ಮೂಲಕ ನಾವು ಸಮಯವನ್ನು ‘ಕಳವುಮಾಡುವುದಿಲ್ಲ.’ ಬದಲಾಗಿ ಯೆಹೋವನಿಗೋಸ್ಕರವೇ ಎಂದು ಕಷ್ಟಪಟ್ಟು ಕೆಲಸಮಾಡುತ್ತೇವೆ. (ಎಫೆಸ 4:28; ಕೊಲೊಸ್ಸೆ 3:23) ಯೂರೋಪಿನ ಒಂದು ದೇಶದಲ್ಲಿ, ಅನಾರೋಗ್ಯದ ರಜೆಯನ್ನು ಮಂಜೂರುಮಾಡುವಂತೆ ವೈದ್ಯರಿಂದ ಪತ್ರವನ್ನು ವಿನಂತಿಸಿಕೊಳ್ಳುವ ಉದ್ಯೋಗಸ್ಥರಲ್ಲಿ ಮೂರನೇ ಒಂದು ಭಾಗದಷ್ಟು ಮಂದಿ ಮೋಸದಿಂದ ಹೀಗೆ ಮಾಡುತ್ತಾರೆ ಎಂದು ಅಂದಾಜುಮಾಡಲಾಗಿದೆ. ದೇವರ ಸತ್ಯ ಸೇವಕರಾದರೋ, ಕೆಲಸಕ್ಕೆ ಹೋಗುವುದನ್ನು ತಪ್ಪಿಸಲಿಕ್ಕಾಗಿ ಸುಳ್ಳು ನೆಪಗಳನ್ನು ಹೆಣೆಯುವುದಿಲ್ಲ. ಕೆಲವೊಮ್ಮೆ, ಧಣಿಗಳು ಯೆಹೋವನ ಸಾಕ್ಷಿಗಳ ಪ್ರಾಮಾಣಿಕತೆ ಮತ್ತು ಪರಿಶ್ರಮದ ಕೆಲಸವನ್ನು ಗಮನಿಸಿ ಸಾಕ್ಷಿಗಳಿಗೆ ಬಡತಿಯನ್ನು ನೀಡಲು ಮುಂದೆಬಂದಿದ್ದಾರೆ.​—⁠ಜ್ಞಾನೋಕ್ತಿ 10:⁠4.

ನಮ್ಮ ಕ್ರೈಸ್ತ ಶುಶ್ರೂಷೆಯಲ್ಲಿ ನಂಬಿಗಸ್ತಿಕೆ

14 ನಮಗೆ ವಹಿಸಿಕೊಡಲ್ಪಟ್ಟಿರುವ ಶುಶ್ರೂಷೆಯಲ್ಲಿ ನಾವು ಹೇಗೆ ನಂಬಿಗಸ್ತಿಕೆಯನ್ನು ತೋರಿಸುತ್ತೇವೆ? ಬೈಬಲ್‌ ಹೇಳುವುದು: “ದೇವರಿಗೆ ಸ್ತೋತ್ರಯಜ್ಞವನ್ನು ಎಡೆಬಿಡದೆ ಸಮರ್ಪಿಸೋಣ. ಆತನು ಕರ್ತನೆಂದು ಬಾಯಿಂದ ಪ್ರತಿಜ್ಞೆಮಾಡುವದೇ ನಾವು ಅರ್ಪಿಸುವ ಯಜ್ಞವಾಗಿದೆ.” (ಇಬ್ರಿಯ 13:15) ಕ್ಷೇತ್ರ ಶುಶ್ರೂಷೆಯಲ್ಲಿ ನಂಬಿಗಸ್ತಿಕೆಯನ್ನು ತೋರಿಸುವ ಅತಿ ಪ್ರಾಮುಖ್ಯ ವಿಧವು, ಅದರಲ್ಲಿ ಕ್ರಮವಾಗಿ ಪಾಲ್ಗೊಳ್ಳುವ ಮೂಲಕವೇ ಆಗಿದೆ. ಯೆಹೋವನ ಮತ್ತು ಆತನ ಉದ್ದೇಶದ ಕುರಿತು ಇತರರಿಗೆ ಸಾಕ್ಷಿಕೊಡದೆ ಒಂದು ಇಡೀ ತಿಂಗಳು ದಾಟುವಂತೆ ನಾವೇಕೆ ಬಿಡಬೇಕು? ಸುವಾರ್ತೆಯನ್ನು ಸಾರುವ ಕೆಲಸದಲ್ಲಿ ಕ್ರಮವಾಗಿ ಭಾಗವಹಿಸುವುದು, ನಮ್ಮ ಕೌಶಲಗಳನ್ನು ಮತ್ತು ಪರಿಣಾಮಕಾರಿತ್ವವನ್ನು ಉತ್ತಮಗೊಳಿಸಿಕೊಳ್ಳಲು ಸಹ ನಮಗೆ ಸಹಾಯಮಾಡುತ್ತದೆ.

15 ಕ್ಷೇತ್ರ ಸೇವೆಯಲ್ಲಿ ನಂಬಿಗಸ್ತಿಕೆಯನ್ನು ತೋರಿಸುವ ಇನ್ನೊಂದು ಉತ್ತಮ ವಿಧವು, ಕಾವಲಿನಬುರುಜು ಮತ್ತು ನಮ್ಮ ರಾಜ್ಯದ ಸೇವೆಯಲ್ಲಿ ಕಂಡುಬರುವ ಸಲಹೆಗಳನ್ನು ಅನ್ವಯಿಸಿಕೊಳ್ಳುವ ಮೂಲಕವೇ ಆಗಿದೆ. ಸೂಚಿತ ನಿರೂಪಣೆಗಳನ್ನು ಅಥವಾ ಪ್ರಾಯೋಗಿಕವಾಗಿರುವ ಇತರ ನಿರೂಪಣೆಗಳನ್ನು ನಾವು ತಯಾರಿಸಿ ಉಪಯೋಗಿಸುವಾಗ, ನಮ್ಮ ಶುಶ್ರೂಷೆಯು ಹೆಚ್ಚು ಫಲದಾಯಕವಾಗಿರುವುದನ್ನು ನೋಡುತ್ತೇವಲ್ಲವೊ? ರಾಜ್ಯದ ಸಂದೇಶದಲ್ಲಿ ಆಸಕ್ತಿಯನ್ನು ತೋರಿಸುವಂಥ ಯಾರನ್ನಾದರೂ ನಾವು ಭೇಟಿಯಾಗುವಾಗ, ತಡಮಾಡದೆ ಅವರ ಆಸಕ್ತಿಯನ್ನು ಬೆಳೆಸಲು ಪುನಃ ಅವರ ಬಳಿಗೆ ಹಿಂದಿರುಗುತ್ತೇವೊ? ಮತ್ತು ಆಸಕ್ತ ಜನರೊಂದಿಗೆ ನಾವು ಆರಂಭಿಸಬಹುದಾದ ಬೈಬಲ್‌ ಅಧ್ಯಯನಗಳ ಕುರಿತಾಗಿ ಏನು? ಬೈಬಲ್‌ ಅಧ್ಯಯನಗಳನ್ನು ಕ್ರಮವಾಗಿ ನಡೆಸುವುದರಲ್ಲಿ ನಾವು ಭರವಸಾರ್ಹರಾಗಿದ್ದೇವೋ ಮತ್ತು ನಂಬಿಗಸ್ತರಾಗಿದ್ದೇವೋ? ಶುಶ್ರೂಷೆಯಲ್ಲಿ ನಮ್ಮನ್ನೇ ನಂಬಿಗಸ್ತರಾಗಿ ರುಜುಪಡಿಸಿಕೊಳ್ಳುವುದು, ನಮ್ಮನ್ನು ಮತ್ತು ನಮ್ಮ ಉಪದೇಶಕ್ಕೆ ಕಿವಿಗೊಡುವವರನ್ನು ಜೀವಕ್ಕೆ ನಡೆಸಬಲ್ಲದು.​—⁠1 ತಿಮೊಥೆಯ 4:15, 16.

ಲೋಕದಿಂದ ಪ್ರತ್ಯೇಕರಾಗಿ ಇರುವುದು

16 ದೇವರಿಗೆ ಮಾಡಿದ ಪ್ರಾರ್ಥನೆಯಲ್ಲಿ ಯೇಸು ತನ್ನ ಹಿಂಬಾಲಕರ ಕುರಿತಾಗಿ ಹೇಳಿದ್ದು: “ನಾನು ನಿನ್ನ ವಾಕ್ಯವನ್ನು ಇವರಿಗೆ ಕೊಟ್ಟಿದ್ದೇನೆ; ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರೂ ಲೋಕದವರಲ್ಲ; ಆದಕಾರಣ ಲೋಕವು ಇವರ ಮೇಲೆ ದ್ವೇಷ ಮಾಡಿ ಅದೆ. ಇವರನ್ನು ಲೋಕದೊಳಗಿಂದ ತೆಗೆದುಕೊಂಡು ಹೋಗಬೇಕೆಂದು ನಾನು ಕೇಳಿಕೊಳ್ಳುವದಿಲ್ಲ; ಕೆಡುಕನಿಂದ ತಪ್ಪಿಸಿ ಕಾಪಾಡಬೇಕೆಂದು ಕೇಳಿಕೊಳ್ಳುತ್ತೇನೆ. ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರು ಲೋಕದವರಲ್ಲ.” (ಯೋಹಾನ 17:14-16) ತಾಟಸ್ಥ್ಯ, ಧಾರ್ಮಿಕ ಹಬ್ಬಗಳು ಮತ್ತು ಪದ್ಧತಿಗಳು ಹಾಗೂ ಅನೈತಿಕತೆಯಂಥ ದೊಡ್ಡ ದೊಡ್ಡ ವಿಷಯಗಳಲ್ಲಿ ನಾವು ಲೋಕದಿಂದ ಪ್ರತ್ಯೇಕವಾಗಿರುವ ತೀರ್ಮಾನವನ್ನು ಮತ್ತು ದೃಢನಿರ್ಧಾರವನ್ನು ಮಾಡಿರಬಹುದು. ಆದರೆ ಚಿಕ್ಕಪುಟ್ಟ ವಿಷಯಗಳ ಕುರಿತಾಗಿ ಏನು? ನಮಗೆ ಅರಿವಿಲ್ಲದೇ ನಾವು ಲೋಕದ ಮಾರ್ಗಗಳಿಂದ ಪ್ರಭಾವಿಸಲ್ಪಡಬಹುದಾದ ಸಾಧ್ಯತೆಯಿದೆಯೋ? ಉದಾಹರಣೆಗೆ, ಜಾಗರೂಕರಾಗಿ ಇಲ್ಲದಿರುವಲ್ಲಿ, ನಾವು ಉಡುಪನ್ನು ಧರಿಸುವಂಥ ವಿಧವು ಎಷ್ಟು ಸುಲಭವಾಗಿ ಗೌರವಕ್ಕೆ ಕುಂದು ತರುವಂಥದ್ದು ಹಾಗೂ ಅಯೋಗ್ಯವಾದದ್ದಾಗಿ ಪರಿಣಮಿಸಸಾಧ್ಯವಿದೆ! ನಂಬಿಗಸ್ತರಾಗಿರುವುದು, ಉಡುಪು ಹಾಗೂ ಕೇಶಾಲಂಕಾರದ ವಿಚಾರಗಳಲ್ಲಿಯೂ “ಸಭ್ಯತೆ ಹಾಗೂ ಸ್ವಸ್ಥಬುದ್ಧಿಯುಳ್ಳವರಾಗಿ”ರುವುದನ್ನು (NIBV) ಅಗತ್ಯಪಡಿಸುತ್ತದೆ. (1 ತಿಮೊಥೆಯ 2:9, 10) ಹೌದು, ‘ನಮ್ಮ ಸೇವೆಯು ಅವಹೇಳನಕ್ಕೆ ಗುರಿಯಾಗದಂತೆ ನಾವು ಯಾರಿಗೂ ಅಡ್ಡಿಯನ್ನು ಒಡ್ಡುವುದಿಲ್ಲ. ಅದಕ್ಕೆ ಬದಲಾಗಿ ಸರ್ವ ವಿಷಯಗಳಲ್ಲಿ ನಾವು ದೇವರ ಸೇವಕರಾಗಿದ್ದೇವೆಂದು ತೋರಿಸುತ್ತೇವೆ.’​—⁠2 ಕೊರಿಂಥ 6:3, 4, NIBV.

17 ಯೆಹೋವನಿಗೆ ಘನತೆಯನ್ನು ತರುವ ಬಯಕೆಯಿಂದ, ನಮ್ಮ ಸಭಾ ಕೂಟಗಳಿಗೆ ನಾವು ಗೌರವಾರ್ಹವಾದ ರೀತಿಯ ಉಡುಪನ್ನು ಧರಿಸುತ್ತೇವೆ. ಸಮ್ಮೇಳನಗಳಲ್ಲಿ ಮತ್ತು ಅಧಿವೇಶನಗಳಲ್ಲಿ ನಾವು ದೊಡ್ಡ ಸಂಖ್ಯೆಯಲ್ಲಿ ಕೂಡಿಬರುವಾಗಲೂ ಇದು ನಿಜವಾಗಿರುತ್ತದೆ. ನಮ್ಮ ಉಡುಪು, ಕೂಟ ನಡೆಯುತ್ತಿರುವ ಸ್ಥಳಕ್ಕೆ ತಕ್ಕದ್ದಾಗಿರಬೇಕು ಮತ್ತು ಸಭ್ಯವಾಗಿರಬೇಕು. ಇದು ನಮ್ಮನ್ನು ಗಮನಿಸುವಂಥ ಇತರರಿಗೆ ಒಂದು ಸಾಕ್ಷಿಯಾಗಿ ಕಾರ್ಯನಡಿಸುತ್ತದೆ. ದೇವದೂತರು ಸಹ ನಮ್ಮ ಚಟುವಟಿಕೆಯನ್ನು ಗಮನಿಸುತ್ತಾರೆ. ಉದಾಹರಣೆಗೆ, ಅವರು ಪೌಲನ ಮತ್ತು ಅವನ ಕ್ರೈಸ್ತ ಸಂಗಡಿಗರ ಚಟುವಟಿಕೆಯನ್ನು ಗಮನಿಸಿದ್ದರು. (1 ಕೊರಿಂಥ 4:9) ವಾಸ್ತವದಲ್ಲಿ, ನಾವು ಯಾವಾಗಲೂ ಯೋಗ್ಯವಾದ ರೀತಿಯಲ್ಲಿ ಉಡುಪನ್ನು ಧರಿಸಿದವರಾಗಿರಬೇಕು. ಬಟ್ಟೆಬರೆಯ ಆಯ್ಕೆಯಲ್ಲಿ ನಂಬಿಗಸ್ತಿಕೆಯನ್ನು ತೋರಿಸುವುದು ಕೆಲವರ ದೃಷ್ಟಿಯಲ್ಲಿ ತೀರ ಕ್ಷುಲ್ಲಕವಾದ ಸಂಗತಿಯಾಗಿರಬಹುದು, ಆದರೆ ದೇವರ ದೃಷ್ಟಿಯಲ್ಲಿ ಅದು ತುಂಬ ಪ್ರಾಮುಖ್ಯವಾದ ವಿಷಯವಾಗಿದೆ.

ನಂಬಿಗಸ್ತಿಕೆಗೆ ಸಿಗುವ ಆಶೀರ್ವಾದಗಳು

18 ಸತ್ಯ ಕ್ರೈಸ್ತರ ಬಗ್ಗೆ, ‘ದೇವರ ವಿವಿಧ ಕೃಪೆಯ ವಿಷಯದಲ್ಲಿ ಒಳ್ಳೇ ಮನೆವಾರ್ತೆಯವರು’ ಎಂದು ತಿಳಿಸಲಾಗಿದೆ. ಹೀಗಿರುವುದರಿಂದಲೇ ಅವರು “ದೇವರು ದಯಪಾಲಿಸುವ ಬಲದ ಮೇಲೆ ಹೊಂದಿಕೊಂಡಿದ್ದಾರೆ” (NW). (1 ಪೇತ್ರ 4:10, 11) ಅಷ್ಟುಮಾತ್ರವಲ್ಲ, ಮನೆವಾರ್ತೆಯವರಾಗಿರುವ ನಮಗೆ, ವೈಯಕ್ತಿಕವಾಗಿ ಯಾವುದು ನಮಗೆ ಸೇರಿದ್ದಾಗಿಲ್ಲವೋ ಅದು ನಮ್ಮ ವಶಕ್ಕೆ ಕೊಡಲ್ಪಟ್ಟಿದೆ; ಅದೇನೆಂದರೆ ಶುಶ್ರೂಷೆಯನ್ನೂ ಸೇರಿಸಿ ದೇವರ ಅಪಾತ್ರ ಕೃಪೆಯ ಅಭಿವ್ಯಕ್ತಿಗಳೇ. ನಾವು ಒಳ್ಳೇ ಮನೆವಾರ್ತೆಯವರು ಎಂಬುದನ್ನು ರುಜುಪಡಿಸಲಿಕ್ಕಾಗಿ ದೇವರು ಒದಗಿಸುವ ಬಲದ​—⁠‘ಬಲಾಧಿಕ್ಯದ’​—⁠ಮೇಲೆ ಅವಲಂಬಿಸುತ್ತೇವೆ. (2 ಕೊರಿಂಥ 4:7) ಭವಿಷ್ಯತ್ತು ತರಬಹುದಾದ ಯಾವುದೇ ಪರೀಕ್ಷೆಗಳನ್ನು ಎದುರಿಸುವಂತೆ ನಮಗೆ ಸಹಾಯಮಾಡಲಿಕ್ಕಾಗಿ ಎಷ್ಟು ಅತ್ಯುತ್ತಮವಾದ ತರಬೇತಿಯಿದು!

19 ಕೀರ್ತನೆಗಾರನು ಹಾಡಿದ್ದು: “ಭಕ್ತರೇ, ನೀವೆಲ್ಲರೂ ಯೆಹೋವನನ್ನು ಪ್ರೀತಿಸಿರಿ. ಆತನು ನಂಬಿಗಸ್ತರನ್ನು ಕಾಪಾಡುತ್ತಾನೆ.” (ಕೀರ್ತನೆ 31:23) ಯೆಹೋವನು ‘ಎಲ್ಲಾ ಮನುಷ್ಯರಿಗೆ, ವಿಶೇಷವಾಗಿ ನಂಬುವವರಿಗೆ ರಕ್ಷಕನಾಗಿದ್ದಾನೆ’ ಎಂಬ ಪೂರ್ಣ ಭರವಸೆಯಿಂದ, ನಮ್ಮನ್ನು ನಂಬಿಗಸ್ತರಾಗಿ ರುಜುಪಡಿಸಿಕೊಳ್ಳಲು ನಾವು ದೃಢನಿರ್ಧಾರವನ್ನು ಮಾಡೋಣ.​—⁠1 ತಿಮೊಥೆಯ 4:10.

ನಿಮಗೆ ನೆನಪಿದೆಯೆ?

• ನಾವು “ಸ್ವಲ್ಪವಾದದ್ದರಲ್ಲಿ ನಂಬಿಗಸ್ತ”ರಾಗಿರಬೇಕು ಏಕೆ?

ಪ್ರಾಮಾಣಿಕತೆಯನ್ನು ತೋರಿಸುವುದರಲ್ಲಿ

ಶುಶ್ರೂಷೆಯಲ್ಲಿ

ಲೋಕದಿಂದ ಪ್ರತ್ಯೇಕರಾಗಿ ಇರಿಸಿಕೊಳ್ಳುವುದರಲ್ಲಿ

• ನಂಬಿಗಸ್ತರೆಂಬುದನ್ನು ನಾವು ಹೇಗೆ ರುಜುಪಡಿಸಿಕೊಳ್ಳಸಾಧ್ಯವಿದೆ?

[ಅಧ್ಯಯನ ಪ್ರಶ್ನೆಗಳು]

1. ಯೆಹೋವನು ನಂಬಿಗಸ್ತನಾಗಿರುವ ವಿಧಗಳಲ್ಲಿ ಒಂದು ಯಾವುದು?

2. (ಎ) ನಂಬಿಗಸ್ತರಾಗಿದ್ದೇವೊ ಇಲ್ಲವೋ ಎಂಬುದನ್ನು ನಿರ್ಧರಿಸಲಿಕ್ಕಾಗಿ ನಮ್ಮನ್ನು ನಾವು ಏಕೆ ಪರಿಶೀಲಿಸಿಕೊಳ್ಳಬೇಕು? (ಬಿ) ನಂಬಿಗಸ್ತಿಕೆಯ ಕುರಿತಾದ ಯಾವ ಪ್ರಶ್ನೆಗಳನ್ನು ನಾವು ಪರಿಗಣಿಸುವೆವು?

3. ನಾವು ನಂಬಿಗಸ್ತರಾಗಿದ್ದೇವೋ ಇಲ್ಲವೋ ಎಂಬುದನ್ನು ಯಾವುದು ನಿರ್ಧರಿಸುತ್ತದೆ?

4, 5. “ಸ್ವಲ್ಪವಾದದ್ದರಲ್ಲಿ” ನಾವು ತೋರಿಸುವ ನಂಬಿಗಸ್ತಿಕೆಯು ಏನನ್ನು ಪ್ರಕಟಪಡಿಸುತ್ತದೆ?

6. ಬಾಬೆಲಿನ ರಾಜನ ಆಸ್ಥಾನದಲ್ಲಿ ದಾನಿಯೇಲನು ಮತ್ತು ಅವನ ಮೂವರು ಇಬ್ರಿಯ ಸಂಗಡಿಗರು ಯಾವ ಪರೀಕ್ಷೆಯನ್ನು ಎದುರಿಸಿದರು?

7. ದಾನಿಯೇಲನ ಮತ್ತು ಅವನ ಮೂವರು ಸ್ನೇಹಿತರ ವಿಧೇಯತೆಯು ಏನನ್ನು ತೋರಿಸಿಕೊಟ್ಟಿತು?

8. (ಎ) ಆ ಮೂವರು ಇಬ್ರಿಯರು ನಿಷ್ಠೆಯ ವಿಷಯದಲ್ಲಿ ಯಾವ ನಿರ್ಣಾಯಕ ಪರೀಕ್ಷೆಯನ್ನು ಎದುರಿಸಿದರು? (ಬಿ) ಪರೀಕ್ಷೆಯ ಫಲಿತಾಂಶವೇನಾಗಿತ್ತು, ಮತ್ತು ಇದು ಏನನ್ನು ದೃಷ್ಟಾಂತಿಸುತ್ತದೆ?

9. ಲೂಕ 16:10ರಲ್ಲಿ ದಾಖಲಿಸಲ್ಪಟ್ಟಿರುವ ಯೇಸುವಿನ ಮಾತುಗಳ ಹಿನ್ನೆಲೆ ಏನು?

10. “ಅನ್ಯಾಯದ ಧನದ” ನಮ್ಮ ಉಪಯೋಗದಲ್ಲಿ ನಾವು ನಂಬಿಗಸ್ತಿಕೆಯನ್ನು ಹೇಗೆ ತೋರ್ಪಡಿಸಸಾಧ್ಯವಿದೆ?

11. ಯೆಹೋವನ ಸಾಕ್ಷಿಗಳಿಂದ ಮಾಡಲ್ಪಡುವ ಲೋಕವ್ಯಾಪಕ ಕೆಲಸಕ್ಕಾಗಿ ನಾವು ಕಾಣಿಕೆಗಳನ್ನು ಸ್ವೀಕರಿಸುತ್ತೇವೆ ಎಂದು ಮನೆಯವರಿಗೆ ವಿವರಿಸಲು ಹಿಂಜರಿಯಬಾರದೇಕೆ?

12, 13. ಯಾವ ಕ್ಷೇತ್ರಗಳಲ್ಲಿ ನಾವು ಪ್ರಾಮಾಣಿಕತೆಯನ್ನು ತೋರಿಸಸಾಧ್ಯವಿದೆ?

14, 15. ಕ್ರೈಸ್ತ ಶುಶ್ರೂಷೆಯಲ್ಲಿ ನಮ್ಮನ್ನು ನಂಬಿಗಸ್ತರಾಗಿ ರುಜುಪಡಿಸಿಕೊಳ್ಳಸಾಧ್ಯವಿರುವ ಕೆಲವು ವಿಧಗಳು ಯಾವುವು?

16, 17. ನಾವು ಲೋಕದಿಂದ ಪ್ರತ್ಯೇಕರಾಗಿದ್ದೇವೆ ಎಂಬುದನ್ನು ಯಾವ ವಿಧಗಳಲ್ಲಿ ತೋರಿಸಸಾಧ್ಯವಿದೆ?

18, 19. ನಂಬಿಗಸ್ತಿಕೆಯಿಂದ ಯಾವ ಆಶೀರ್ವಾದಗಳು ಸಿಗುತ್ತವೆ?

[ಪುಟ 26ರಲ್ಲಿರುವ ಚಿತ್ರಗಳು]

ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾದವನು ಬಹಳವಾದದ್ದರಲ್ಲಿಯೂ ನಂಬಿಗಸ್ತನಾಗಿರುವನು

[ಪುಟ 29ರಲ್ಲಿರುವ ಚಿತ್ರ]

‘ಪ್ರತಿಯೊಂದರಲ್ಲಿಯೂ ಪ್ರಾಮಾಣಿಕವಾಗಿ ಇರಿ’

[ಪುಟ 29ರಲ್ಲಿರುವ ಚಿತ್ರ]

ನಂಬಿಗಸ್ತಿಕೆಯನ್ನು ತೋರಿಸುವ ಅತ್ಯುತ್ತಮ ವಿಧವು ಕ್ಷೇತ್ರ ಶುಶ್ರೂಷೆಗಾಗಿ ಚೆನ್ನಾಗಿ ತಯಾರಿಯನ್ನು ಮಾಡುವ ಮೂಲಕವೇ ಆಗಿದೆ

[ಪುಟ 30ರಲ್ಲಿರುವ ಚಿತ್ರ]

ನೀವು ಧರಿಸುವ ಉಡುಪು ಮತ್ತು ಕೇಶಾಲಂಕಾರದಲ್ಲಿ ಸಭ್ಯತೆಯನ್ನು ತೋರಿಸಿರಿ