ಅವರು ತಮ್ಮನ್ನು ನೀಡಿಕೊಳ್ಳುತ್ತಿದ್ದಾರೆ
ಅವರು ತಮ್ಮನ್ನು ನೀಡಿಕೊಳ್ಳುತ್ತಿದ್ದಾರೆ
“ನಿನ್ನ ಪ್ರಜೆಗಳು ಸಂತೋಷದಿಂದ ತಾವಾಗಿಯೇ ಸೇರಿಕೊಳ್ಳುವರು.” (ಕೀರ್ತನೆ 110:3) ಈ ಮಾತುಗಳು, ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನ 118ನೇ ಕ್ಲಾಸಿನ 46 ಮಂದಿ ವಿದ್ಯಾರ್ಥಿಗಳಿಗೆ ವಿಶೇಷ ಅರ್ಥವನ್ನು ಪಡೆದಿವೆ. ವಿದೇಶಗಳಲ್ಲಿ ಜನರ ಆಧ್ಯಾತ್ಮಿಕ ಆವಶ್ಯಕತೆಗಳನ್ನು ಪೂರೈಸಲಿಕ್ಕಾಗಿ ಭಾವೀ ಮಿಷನೆರಿಗಳನ್ನು ತರಬೇತುಗೊಳಿಸುವಂಥ ಈ ಶಾಲೆಗೆ ಹಾಜರಾಗಲಿಕ್ಕಾಗಿ ಅವರು ತಮ್ಮನ್ನು ಹೇಗೆ ಸಿದ್ಧಪಡಿಸಿಕೊಂಡರು? 118ನೇ ಕ್ಲಾಸಿನ ಮೈಕ್ ಮತ್ತು ಸ್ಟೇಸೀ ವಿವರಿಸಿದ್ದು: “ಸರಳವಾದ ಜೀವನವನ್ನು ನಡೆಸುವ ನಮ್ಮ ನಿರ್ಧಾರವು ಅಪಕರ್ಷಣೆಗಳನ್ನು ಕಡಿಮೆಗೊಳಿಸುವಂತೆ ಮತ್ತು ನಮ್ಮ ಜೀವನದಲ್ಲಿ ಆಧ್ಯಾತ್ಮಿಕ ವಿಷಯಗಳಿಗೆ ಪ್ರಥಮ ಸ್ಥಾನವನ್ನು ಕೊಡುವಂತೆ ನಮಗೆ ಸಹಾಯಮಾಡಿತು. ವ್ಯಾಪಾರ ಜಗತ್ತಿನಲ್ಲಿನ ನಮ್ಮ ಸಾಫಲ್ಯವು ಆಧ್ಯಾತ್ಮಿಕ ಗುರಿಗಳನ್ನು ಬದಿಗೊತ್ತುವಂತೆ ಅನುಮತಿಸಬಾರದು ಎಂಬ ದೃಢನಿರ್ಧಾರವನ್ನು ನಾವು ಮಾಡಿದ್ದೆವು.” ಮೈಕ್ ಮತ್ತು ಸ್ಟೇಸೀಯರಂತೆ, ಈ ಕ್ಲಾಸಿನ ಇತರ ವಿದ್ಯಾರ್ಥಿಗಳು ಸಂತೋಷದಿಂದ ತಮ್ಮನ್ನು ನೀಡಿಕೊಂಡರು ಮತ್ತು ಈಗ ಅವರು ನಾಲ್ಕು ಭಿನ್ನಭಿನ್ನ ಭೂಖಂಡಗಳಲ್ಲಿ ರಾಜ್ಯದ ಘೋಷಕರಾಗಿ ಸೇವೆಮಾಡಲು ಸಿದ್ಧರಾಗಿದ್ದಾರೆ.
ಇಸವಿ 2005, ಮಾರ್ಚ್ 12ರ ಶನಿವಾರದಂದು, 6,843 ಮಂದಿ ಸಭಿಕರು ಈ ಪದವಿಪ್ರಾಪ್ತಿ ಕಾರ್ಯಕ್ರಮಕ್ಕೆ ಕಿವಿಗೊಟ್ಟಾಗ ಅವರಿಗೆ ತುಂಬ ಸಂತೋಷವಾಯಿತು ಎಂಬುದು ಸುವ್ಯಕ್ತವಾಗಿತ್ತು. ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಒಬ್ಬ ಸದಸ್ಯರಾಗಿರುವ ಥಿಯೊಡರ್ ಜಾರಸ್ ಅಧ್ಯಕ್ಷರಾಗಿ ಕಾರ್ಯನಡಿಸಿದರು. 28 ಭಿನ್ನ ದೇಶಗಳಿಂದ ಬಂದಿದ್ದ ಅತಿಥಿಗಳನ್ನು ಹಾರ್ದಿಕವಾಗಿ ಸ್ವಾಗತಿಸಿದ ಬಳಿಕ ಅವರು ಬೈಬಲ್ ಶಿಕ್ಷಣದ ಮೌಲ್ಯದ ಮೇಲೆ ಗಮನವನ್ನು ಕೇಂದ್ರೀಕರಿಸಿದರು. ಅಮೆರಿಕದ ವಿಲ್ಯಮ್ ಲೈಯನ್ ಫೆಲ್ಪ್ಸ್ ಎಂಬ ಒಬ್ಬ ಶಿಕ್ಷಕನ ಮಾತುಗಳನ್ನು ಉಲ್ಲೇಖಿಸುತ್ತಾ ಅವರು ಘೋಷಿಸಿದ್ದು: “ಬೈಬಲಿನ ಸಮಗ್ರ ಜ್ಞಾನವಿರುವ ಪ್ರತಿಯೊಬ್ಬರನ್ನು ನಿಜವಾಗಿಯೂ ವಿದ್ಯಾವಂತರು ಎಂದು ಕರೆಯಬಹುದು.” ಐಹಿಕ ಶಿಕ್ಷಣವು ಪ್ರಯೋಜನದಾಯಕವಾಗಿ ಇರಬಹುದಾದರೂ, ಬೈಬಲ್ ಶಿಕ್ಷಣವು ಅದಕ್ಕಿಂತಲೂ ಉತ್ಕೃಷ್ಟವಾದದ್ದಾಗಿದೆ. ಇದು ಜನರಿಗೆ ನಿತ್ಯಜೀವಕ್ಕೆ ನಡಿಸುವಂಥ ದೇವರ ಕುರಿತಾದ ಜ್ಞಾನವನ್ನು ಪಡೆದುಕೊಳ್ಳುವಂತೆ ಸಹಾಯಮಾಡುತ್ತದೆ. (ಯೋಹಾನ 17:3) ಲೋಕವ್ಯಾಪಕವಾಗಿ ಯೆಹೋವನ ಸಾಕ್ಷಿಗಳ 98,000ಕ್ಕಿಂತಲೂ ಹೆಚ್ಚಿನ ಸಭೆಗಳಲ್ಲಿ ನಡೆಸಲ್ಪಡುವ ಭೌಗೋಳಿಕ ಬೈಬಲ್ ಶಿಕ್ಷಣ ಕಾರ್ಯಕ್ರಮದಲ್ಲಿ ಹೆಚ್ಚಿನ ಪಾಲನ್ನು ವಹಿಸಿಕೊಳ್ಳಲು ಪದವೀಧರರು ತೋರಿಸಿರುವ ಸಿದ್ಧಮನಸ್ಸಿಗಾಗಿ ಸಹೋದರ ಜಾರಸ್ರು ಅವರನ್ನು ಶ್ಲಾಘಿಸಿದರು.
ಪದವೀಧರರಿಗೆ ಸಮಯೋಚಿತ ಉತ್ತೇಜನ
ಅಧ್ಯಕ್ಷರ ಆರಂಭದ ಹೇಳಿಕೆಗಳ ಬಳಿಕ, ವಿಲ್ಯಮ್ ಸ್ಯಾಮ್ವೆಲ್ಸನ್ ಅವರು ಕೀರ್ತನೆ 52:8ರ ಮೇಲಾಧಾರಿತವಾದ “ದೇವಾಲಯದಲ್ಲಿ ನೀವು ಸೊಗಸಾದ ಎಣ್ಣೇಮರದಂತೆ ಇರಸಾಧ್ಯವಿರುವ ವಿಧ” ಎಂಬ ಮುಖ್ಯ ವಿಷಯದ ಕುರಿತು ಮಾತಾಡಿದರು. ಬೈಬಲಿನಲ್ಲಿ ಎಣ್ಣೇಮರವನ್ನು ಅಂದರೆ ಆಲೀವ್ ಮರವನ್ನು ಫಲಸಮೃದ್ಧಿ, ಸೌಂದರ್ಯ ಮತ್ತು ಘನತೆಯ ಚಿಹ್ನೆಯೋಪಾದಿ ಸಾಂಕೇತಿಕವಾಗಿ ಉಪಯೋಗಿಸಲಾಗಿದೆ ಎಂದು ಅವರು ತಿಳಿಸಿದರು. (ಯೆರೆಮೀಯ 11:16) ವಿದ್ಯಾರ್ಥಿಗಳನ್ನು ಆಲೀವ್ ಮರಗಳಿಗೆ ಹೋಲಿಸುತ್ತಾ ಭಾಷಣಕರ್ತರು ಹೇಳಿದ್ದು: “ನಿಮ್ಮ ಮಿಷನೆರಿ ನೇಮಕಗಳಲ್ಲಿ ರಾಜ್ಯದ ಸಾರುವಿಕೆಯ ನಿಮ್ಮ ಕೆಲಸವನ್ನು ನೀವು ನಂಬಿಗಸ್ತಿಕೆಯಿಂದ ಮುಂದುವರಿಸಿಕೊಂಡು ಹೋಗುವಾಗ, ಯೆಹೋವನು ನಿಮ್ಮನ್ನು ಸೌಂದರ್ಯ ಹಾಗೂ ಘನತೆಯುಳ್ಳವರಾಗಿ ಪರಿಗಣಿಸುವನು.” ಕ್ಷಾಮದ ಕಾಲಾವಧಿಯಲ್ಲಿ ಒಣಗದೇ ಇರಲಿಕ್ಕಾಗಿ ಆಲೀವ್ ಮರವು ವ್ಯಾಪಕವಾಗಿ ಬೇರುಗಳನ್ನು ಬಿಡುವ ಅಗತ್ಯವಿರುವಂತೆಯೇ, ವಿದ್ಯಾರ್ಥಿಗಳು ತಮ್ಮ ವಿದೇಶೀ ಸೇವೆಯಲ್ಲಿ ಎದುರಿಸಬಹುದಾದ ನಿರ್ಲಕ್ಷ್ಯ, ವಿರೋಧ, ಅಥವಾ ಇತರ ಪರೀಕ್ಷೆಗಳನ್ನು ತಾಳಿಕೊಳ್ಳಲಿಕ್ಕಾಗಿ ತಮ್ಮ ಆಧ್ಯಾತ್ಮಿಕ ಬೇರುಗಳನ್ನು ದೃಢಗೊಳಿಸುವ ಅಗತ್ಯವಿದೆ.—ಮತ್ತಾಯ 13:21; ಕೊಲೊಸ್ಸೆ 2:6, 7.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆಡಳಿತ ಮಂಡಲಿಯ ಮೂವರು ಸದಸ್ಯರಲ್ಲಿ ಒಬ್ಬರಾದ ಜಾನ್ ಇ. ಬಾರ್ ಅವರು, “ನೀವು ಭೂಮಿಗೆ ಉಪ್ಪಾಗಿದ್ದೀರಿ” ಎಂಬ ವಿಷಯದ ಕುರಿತು ಮಾತಾಡಿದರು. (ಮತ್ತಾಯ 5:13) ಅವರು ಹೇಳಿದ್ದೇನೆಂದರೆ, ಆಹಾರವು ಕೆಡದಂತೆ ಅಕ್ಷರಾರ್ಥ ಉಪ್ಪು ಸಂರಕ್ಷಣೆ ನೀಡುವಂತೆಯೇ ದೇವರ ರಾಜ್ಯದ ಕುರಿತಾಗಿ ಸಾರುವಂಥ ಮಿಷನೆರಿಗಳು ಯಾರು ಅವರಿಗೆ ಕಿವಿಗೊಡುತ್ತಾರೋ ಅವರ ಮೇಲೆ ಜೀವರಕ್ಷಕ ಪ್ರಭಾವವನ್ನು ಬೀರುವರು; ಅವರನ್ನು ನೈತಿಕ ಹಾಗೂ ಆಧ್ಯಾತ್ಮಿಕ ಅವನತಿಯಿಂದ ಸಂರಕ್ಷಿಸುವರು. ತದನಂತರ ದಯಾಪರ ಸ್ವರದಲ್ಲಿ ಸಹೋದರ ಬಾರ್ರವರು ಪದವೀಧರರನ್ನು, ಇತರರೊಂದಿಗೆ “ಸಮಾಧಾನದಿಂದಿರಿ” ಎಂದು ಹುರಿದುಂಬಿಸಿದರು. (ಮಾರ್ಕ 9:50) “ಆತ್ಮದ ಫಲಗಳನ್ನು ಬೆಳೆಸಿಕೊಳ್ಳಿರಿ ಮತ್ತು ನಿಮ್ಮ ನಡೆನುಡಿಯು ಯಾವಾಗಲೂ ದಯಾಪರವೂ ಪರಿಗಣನೆಯುಳ್ಳದ್ದೂ ಆಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿರಿ” ಎಂದು ಭಾಷಣಕರ್ತರು ಸಲಹೆ ನೀಡಿದರು.
“ನಡುಸಮುದ್ರದಲ್ಲಿ ಹಡಗಿನಲ್ಲೇ ಉಳಿಯಿರಿ” ಎಂಬುದು, ಗಿಲ್ಯಡ್ ಶಿಕ್ಷಕರಲ್ಲಿ ಒಬ್ಬರಾದ ವಾಲೆಸ್ ಲಿವರೆನ್ಸ್ರಿಂದ ಎತ್ತಿಹೇಳಲ್ಪಟ್ಟ ಮುಖ್ಯ ವಿಷಯವಾಗಿತ್ತು. ನಡುಸಮುದ್ರದ ಆಳವಾದ ನೀರಿನಲ್ಲಿ ಸಂಚರಿಸುತ್ತಿರುವ ಒಂದು ಹಡಗು ಸರಿಯಾದ ದಿಕ್ಕಿನಲ್ಲಿ ಚಲಿಸಸಾಧ್ಯವಿರುವಂತೆಯೇ, “ದೇವರ ಅಗಾಧವಾದ ವಿಷಯಗಳ” ಅಂದರೆ ದೇವರ ಉದ್ದೇಶ ಮತ್ತು ಅದು ಹೇಗೆ ಜಾರಿಗೆ ತರಲ್ಪಡುವುದು ಎಂಬುದರ ಕುರಿತಾದ ಸತ್ಯಗಳ ತಿಳಿವಳಿಕೆಯು ಒಬ್ಬ ವ್ಯಕ್ತಿಯು ಆಧ್ಯಾತ್ಮಿಕ ಪ್ರಗತಿಯನ್ನು ಮಾಡುವಂತೆ ಸಹಾಯಮಾಡಬಲ್ಲದು. (1 ಕೊರಿಂಥ 2:10) ‘ದೈವೋಕ್ತಿಗಳ ಮೂಲಪಾಠಗಳಲ್ಲೇ’ ತೃಪ್ತರಾಗಿರುವ ಮೂಲಕ ಆಳವಿಲ್ಲದ ಆಧ್ಯಾತ್ಮಿಕ ನೀರಿನಲ್ಲಿ ಉಳಿಯುವುದು, ನಮ್ಮ ಪ್ರಗತಿಯನ್ನು ಕುಂಠಿತಗೊಳಿಸುತ್ತದೆ ಮತ್ತು ಇದು “[ನಮ್ಮ] ಕ್ರಿಸ್ತನಂಬಿಕೆಯ ವಿಷಯದಲ್ಲಿ ಹಡಗು ಒಡೆದು ನಷ್ಟ”ಪಡುವಂತೆಯೂ ಮಾಡಬಹುದು. (ಇಬ್ರಿಯ 5:12, 13; 1 ತಿಮೊಥೆಯ 1:19) “‘ಅಗಾಧವಾಗಿರುವ ದೇವರ ಐಶ್ವರ್ಯ, ಜ್ಞಾನ ಮತ್ತು ವಿವೇಕವು’ ನಿಮ್ಮ ಮಿಷನೆರಿ ನೇಮಕಗಳಲ್ಲಿ ನಿಮ್ಮನ್ನು ಪೋಷಿಸಲಿ” ಎಂದು ಹೇಳಿ ಸಹೋದರ ಲಿವರೆನ್ಸ್ರು ತಮ್ಮ ಭಾಷಣವನ್ನು ಮುಗಿಸಿದರು.—ರೋಮಾಪುರ 11:33.
ಮಾರ್ಕ್ ನ್ಯೂಮರ್ ಎಂಬ ಇನ್ನೊಬ್ಬ ಗಿಲ್ಯಡ್ ಶಿಕ್ಷಕರು, “ನಿಮ್ಮ ಪರಂಪರೆಯ ಮಟ್ಟಕ್ಕನುಸಾರ ಜೀವಿಸುವಿರೊ?” ಎಂಬ ವಿಷಯದ ಕುರಿತು ಮಾತಾಡಿದರು. ಸುಮಾರು 60ಕ್ಕಿಂತಲೂ ಹೆಚ್ಚು ವರ್ಷಗಳಿಂದ, ಶಾಲೆಯ ಪದವೀಧರರಿಂದ ಕೊಡಲ್ಪಟ್ಟ ‘ಅತ್ಯಧಿಕ ಒಳ್ಳೇ ಸಾಕ್ಷಿಯ’ (NW) ಕಾರಣದಿಂದಾಗಿ, ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ ವಿಶ್ವಾಸಾರ್ಹತೆಯನ್ನು ಮತ್ತು ಅತ್ಯುತ್ತಮ ಹೆಸರನ್ನು ಪಡೆದಿದೆ. (ಆದಿಕಾಂಡ 31:48) ಈ ಗಿಲ್ಯಡ್ ಪರಂಪರೆಯು 118ನೇ ಕ್ಲಾಸಿನ ವಿದ್ಯಾರ್ಥಿಗಳಿಗೂ ದಾಟಿಸಲ್ಪಟ್ಟಿದೆ. ಸಹೋದರ ನ್ಯೂಮರ್ ವಿದ್ಯಾರ್ಥಿಗಳನ್ನು, ನೆಹೆಮೀಯನ ದಿನದ ಪುರಾತನ ತೆಕೋವದವರನ್ನು ಅನುಕರಿಸುವಂತೆ ಮತ್ತು ಸ್ಥಳಿಕ ಸಭೆಯೊಂದಿಗೆ ಹಾಗೂ ಜೊತೆ ಮಿಷನೆರಿಗಳೊಂದಿಗೆ ದೀನಭಾವದಿಂದ ಸಹಕರಿಸುವಂತೆ ಉತ್ತೇಜಿಸಿದರು. ನೆಹೆಮೀಯನು ಯಾರ ಕುರಿತು ಮಾತಾಡಿದನೋ ಆ ಅಹಂಕಾರಭರಿತ “ಶ್ರೀಮಂತರ” ಮನೋಭಾವವನ್ನು ತೋರಿಸುವುದರಿಂದ ದೂರವಿರುವಂತೆ ಮತ್ತು ಸೌಮ್ಯಭಾವದಿಂದ ಹಿನ್ನೆಲೆಯಲ್ಲಿ ಕೆಲಸಮಾಡಲು ಸಿದ್ಧಮನಸ್ಸುಳ್ಳವರಾಗಿರುವಂತೆ ವಿದ್ಯಾರ್ಥಿಗಳಿಗೆ ಬುದ್ಧಿಹೇಳಲಾಯಿತು.—ನೆಹೆಮೀಯ 3:5.
ಬೋಧಪ್ರದ ಅನುಭವಗಳು ಮತ್ತು ಇಂಟರ್ವ್ಯೂಗಳು
ಕಾರ್ಯಕ್ರಮದ ಮುಂದಿನ ಭಾಗವು “ದೇವರ ವಾಕ್ಯವು ಪ್ರಬಲವಾಯಿತು” ಎಂಬ ಶೀರ್ಷಿಕೆಯನ್ನು ಹೊಂದಿತ್ತು. (ಅ. ಕೃತ್ಯಗಳು 6:7) ಗಿಲ್ಯಡ್ ಶಿಕ್ಷಕರಾದ ಲಾರೆನ್ಸ್ ಬೋವನ್ರ ನಿರ್ದೇಶನದ ಕೆಳಗೆ ವಿದ್ಯಾರ್ಥಿಗಳು, ಆ ಶಾಲೆಗೆ ಹಾಜರಾಗುತ್ತಿದ್ದಾಗ ಕ್ಷೇತ್ರ ಶುಶ್ರೂಷೆಯಲ್ಲಿ ತಾವು ಆನಂದಿಸಿದ್ದ ಅನುಭವಗಳನ್ನು ಪುನರಭಿನಯಿಸಿದರು. ಈ ಅನುಭವಗಳು, ವಿದ್ಯಾರ್ಥಿಗಳು ದೇವರ ವಾಕ್ಯವನ್ನು ಹುರುಪಿನಿಂದ ಘೋಷಿಸಿದ್ದರು ಮತ್ತು ಯೆಹೋವನು ಅವರ ಪ್ರಯತ್ನಗಳನ್ನು ಹೇರಳವಾಗಿ ಆಶೀರ್ವದಿಸಿದ್ದನು ಎಂಬುದನ್ನು ತೋರಿಸಿದವು.
ರಿಚ್ಚರ್ಡ್ ಆ್ಯಶ್ರು, ಶಾಲೆಯೊಂದಿಗೆ ನಿಕಟವಾಗಿ ಕೆಲಸಮಾಡುವ ಬೆತೆಲ್ ಕುಟುಂಬದ ಸದಸ್ಯರೊಂದಿಗೆ ಇಂಟರ್ವ್ಯೂಗಳನ್ನು ನಡೆಸಿದರು. ಅವರ ಹೇಳಿಕೆಗಳು, ತಮ್ಮ ಶಾಲಾ ವ್ಯಾಸಂಗದಿಂದ ಗಿಲ್ಯಡ್ ವಿದ್ಯಾರ್ಥಿಗಳು ಸಾಧ್ಯವಾದಷ್ಟು ಹೆಚ್ಚು ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಹಾಯಮಾಡಲಿಕ್ಕಾಗಿ ಬೆತೆಲ್ ಕುಟುಂಬವು ಹೇಗೆ ಸಹಕಾರ ನೀಡುತ್ತದೆ ಎಂಬುದರ ಕುರಿತು ಒಳನೋಟವನ್ನು ನೀಡಿದವು. ತದನಂತರ, ಜೆಫ್ರಿ ಜ್ಯಾಕ್ಸನ್ರು ಹಿಂದಿನ ಗಿಲ್ಯಡ್ ಪದವೀಧರರಲ್ಲಿ ಕೆಲವರೊಂದಿಗೆ ಮಾತಾಡಿದರು. ಯೆಹೋವನಿಗೆ ಸ್ತುತಿ ಹಾಗೂ ಘನತೆಯನ್ನು ತರಲು ಮಿಷನೆರಿ ಜೀವನವು ನೀಡುವಂಥ ಅಸಂಖ್ಯಾತ ಸದವಕಾಶಗಳನ್ನು ಅವರು ಎತ್ತಿಹೇಳಿದರು. ಒಬ್ಬ ಪದವೀಧರನು ಹೇಳಿಕೆಯನ್ನಿತ್ತದ್ದು: “ಒಬ್ಬ ಮಿಷನೆರಿಯಾಗಿ ನಾವು ಮಾಡುವ ಪ್ರತಿಯೊಂದನ್ನೂ ಜನರು ಗಮನಿಸುತ್ತಾರೆ. ಅವರು ಕಿವಿಗೊಡುತ್ತಾರೆ, ನೋಡುತ್ತಾರೆ ಮತ್ತು ಜ್ಞಾಪಕದಲ್ಲಿಡುತ್ತಾರೆ.” ಆದುದರಿಂದ, ಎಲ್ಲ ಸಮಯಗಳಲ್ಲಿ ಒಳ್ಳೇ ಮಾದರಿಯನ್ನಿಡುವ ಪ್ರಜ್ಞೆಯುಳ್ಳವರಾಗಿರುವಂತೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಯಿತು. ಈ ಪ್ರಾಯೋಗಿಕ ಬುದ್ಧಿವಾದವು ಮುಂಬರುವ ದಿನಗಳಲ್ಲಿ ಅಮೂಲ್ಯವಾದದ್ದಾಗಿ ರುಜುವಾಗುವುದು ಎಂಬುದರಲ್ಲಿ ಸಂಶಯವಿಲ್ಲ.
ಆಡಳಿತ ಮಂಡಲಿಯ ಒಬ್ಬ ಸದಸ್ಯರಾಗಿರುವ ಸ್ಟೀಫನ್ ಲೆಟ್, “‘ಜೀವಕರವಾದ ನೀರಿನ’ ವಾಹಕರಾಗಿ ಮುನ್ನಡೆಯಿರಿ” ಎಂಬ ಶೀರ್ಷಿಕೆಯುಳ್ಳ ಮುಕ್ತಾಯದ ಭಾಷಣವನ್ನು ಕೊಟ್ಟರು. (ಯೋಹಾನ 7:38) ಕಳೆದ ಐದು ತಿಂಗಳುಗಳಿಂದ ವಿದ್ಯಾರ್ಥಿಗಳು ದೇವರ ಸತ್ಯ ವಾಕ್ಯದಿಂದ ಬಹಳವಾಗಿ ಕುಡಿಯುವ ಮೂಲಕ ಅಪಾರ ಪ್ರಯೋಜನಗಳನ್ನು ಪಡೆದುಕೊಂಡಿದ್ದಾರೆ ಎಂದು ಅವರು ಹೇಳಿದರು. ಆದರೆ ಈ ಹೊಸ ಮಿಷನೆರಿಗಳು ತಾವು ಕಲಿತಿರುವಂಥ ಮಾಹಿತಿಯನ್ನು ಏನು ಮಾಡಲಿದ್ದಾರೆ? ಇತರರೂ ತಮ್ಮೊಳಗೆ ‘ನಿತ್ಯಜೀವವನ್ನು ಉಂಟುಮಾಡುವ ಉಕ್ಕುವ ಒರತೆಯನ್ನು’ ಹೊಂದಲಿಕ್ಕಾಗಿ ಈ ಆಧ್ಯಾತ್ಮಿಕ ನೀರನ್ನು ನಿಸ್ವಾರ್ಥಭಾವದಿಂದ ಹಂಚುವಂತೆ ಸಹೋದರ ಲೆಟ್ರು ಪದವೀಧರರನ್ನು ಉತ್ತೇಜಿಸಿದರು. (ಯೋಹಾನ 4:14) ಭಾಷಣಕರ್ತರು ಕೂಡಿಸಿ ಹೇಳಿದ್ದು: “‘ಜೀವಜಲದ ಬುಗ್ಗೆ’ಯಾಗಿರುವ ಯೆಹೋವನಿಗೆ ಸಲ್ಲತಕ್ಕ ಘನತೆ ಮತ್ತು ಮಹಿಮೆಯನ್ನು ಸಲ್ಲಿಸಲು ಎಂದಿಗೂ ಮರೆಯದಿರಿ. ಬರಪೀಡಿತ ಮಹಾ ಬಾಬೆಲಿನಿಂದ ಹೊರಬಂದಿರುವವರಿಗೆ ಕಲಿಸುವಾಗ ತಾಳ್ಮೆಯನ್ನು ತೋರಿಸಿರಿ.” (ಯೆರೆಮೀಯ 2:13) ಆತ್ಮ ಮತ್ತು ಮದಲಗಿತ್ತಿಯನ್ನು ಹುರುಪಿನಿಂದ ಅನುಕರಿಸಿ, ಅವರಂತೆಯೇ ‘ಬಾ. ಬಾಯಾರಿದವನು ಬರಲಿ. ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ’ ಎಂದು ಹೇಳುತ್ತಾ ಇರುವಂತೆ ಪದವೀಧರರನ್ನು ಪ್ರೋತ್ಸಾಹಿಸಿ ಸಹೋದರ ಲೆಟ್ರು ತಮ್ಮ ಭಾಷಣವನ್ನು ಮುಗಿಸಿದರು.—ಪ್ರಕಟನೆ 22:17.
ಬೇರೆ ಬೇರೆ ದೇಶಗಳಿಂದ ಬಂದ ಶುಭಾಶಯಗಳನ್ನು ತಿಳಿಸುವ ಮೂಲಕ ಸಹೋದರ ಜಾರಸ್ರು ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು. ತದನಂತರ ಪದವಿ ಪಡೆದುಕೊಳ್ಳುತ್ತಿರುವ ಕ್ಲಾಸಿನ ಒಬ್ಬ ಸದಸ್ಯನು ಒಂದು ಕೃತಜ್ಞತಾ ಪತ್ರವನ್ನು ಓದಿದನು.
ಎಲ್ಲಿ ಅಗತ್ಯವು ಹೆಚ್ಚಾಗಿದೆಯೋ ಅಲ್ಲಿ ಸೇವೆಮಾಡಲಿಕ್ಕಾಗಿ ನೀವು ನಿಮ್ಮನ್ನು ನೀಡಿಕೊಳ್ಳಸಾಧ್ಯವಿದೆಯೋ? ಹಾಗಿರುವಲ್ಲಿ, ಪದವಿ ಪಡೆದುಕೊಂಡಿರುವ ಈ ವಿದ್ಯಾರ್ಥಿಗಳಂತೆ, ಆಧ್ಯಾತ್ಮಿಕ ಗುರಿಗಳನ್ನು ಬೆನ್ನಟ್ಟಿರಿ. ವಿದೇಶವೊಂದರಲ್ಲಿ ಒಬ್ಬ ಮಿಷನೆರಿಯಾಗಿ ಅಥವಾ ಸ್ವಂತ ದೇಶದಲ್ಲೇ ಒಬ್ಬ ಶುಶ್ರೂಷಕನಾಗಿದ್ದು, ದೇವರ ಸೇವೆಯಲ್ಲಿ ಮನಃಪೂರ್ವಕವಾಗಿ ತನ್ನನ್ನು ಸಂತೋಷದಿಂದ ನೀಡಿಕೊಳ್ಳುವಾಗ ಸಿಗುವ ಆನಂದ ಮತ್ತು ಸಂತೃಪ್ತಿಯನ್ನು ಪಡೆದುಕೊಳ್ಳಿರಿ.
[ಪುಟ 13ರಲ್ಲಿರುವ ಚೌಕ]
ತರಗತಿಯ ಅಂಕಿಅಂಶಗಳು
ಪ್ರತಿನಿಧಿಸಲ್ಪಟ್ಟ ದೇಶಗಳ ಸಂಖ್ಯೆ: 8
ನೇಮಿಸಲ್ಪಟ್ಟ ದೇಶಗಳ ಸಂಖ್ಯೆ: 19
ವಿದ್ಯಾರ್ಥಿಗಳ ಸಂಖ್ಯೆ: 46
ಸರಾಸರಿ ಪ್ರಾಯ: 33.0
ಸತ್ಯದಲ್ಲಿ ಸರಾಸರಿ ವರ್ಷಗಳು: 16.5
ಪೂರ್ಣ ಸಮಯದ ಶುಶ್ರೂಷೆಯಲ್ಲಿ ಸರಾಸರಿ ವರ್ಷಗಳು: 12.9
[ಪುಟ 15ರಲ್ಲಿರುವ ಚಿತ್ರ]
ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನಿಂದ ಪದವಿಯನ್ನು ಪಡೆದ 118ನೆಯ ತರಗತಿ
ಈ ಕೆಳಗಿರುವ ಪಟ್ಟಿಯಲ್ಲಿ, ಸಾಲುಗಳು ಮುಂದಿನಿಂದ ಹಿಂದಕ್ಕೆ ಎಣಿಸಲ್ಪಟ್ಟು, ಪ್ರತಿ ಸಾಲಿನಲ್ಲಿರುವ ಹೆಸರುಗಳು ಎಡದಿಂದ ಬಲಕ್ಕೆ ಪಟ್ಟಿಮಾಡಲ್ಪಟ್ಟಿವೆ.
(1) ಬ್ರಾಕ್ಮೈರ್, ಏ.; ಮಲೋನೀ, ಎಸ್.; ಸೈಮಂಡ್ಸ್, ಎನ್.; ಲೋಪೆಸ್, ವೈ.; ಹವರ್ಡ್, ಸೀ. (2) ಜಾಸ್ಡ್ರೆಬ್ಸ್ಕೀ, ಟಿ.; ಬ್ರೌನ್, ಡಿ.; ಹರ್ನಾಂಡೆಸ್, ಏಚ್.; ಮಾಲಾಗಾನ್, ಐ.; ಜೋನ್ಸ್, ಏ.; ಕಾನೆಲ್, ಎಲ್. (3) ಹವರ್ಡ್, ಜೆ.; ಲಾರೂ, ಈ.; ಷ್ಯಾಮ್ಸ್, ಬಿ.; ಹೇಸ್, ಎಸ್.; ಬ್ರೌನ್, ಓ. (4) ಬರಲ್, ಜೆ.; ಹ್ಯಾಮರ್, ಎಮ್.; ಮೇಯರ್, ಏ.; ಕಿಮ್, ಕೆ.; ಸ್ಟ್ಯಾನ್ಲೀ, ಆರ್.; ರೇನೀ, ಆರ್. (5) ಜಾಸ್ಡ್ರೆಬ್ಸ್ಕೀ, ಪಿ.; ಸಿಲವೆಟ್ಸ್, ಕೆ.; ಫೆರಸ್, ಎಸ್.; ಟಾರೆಸ್, ಬಿ.; ಟಾರೆಸ್, ಎಫ್. (6) ಕಾನೆಲ್, ಜೆ.; ಹರ್ನಾಂಡೆಸ್ ಆರ್.; ಮಲೋನೀ, ಎಮ್.; ಮಾಲಾಗಾನ್, ಜೆ.; ಷ್ಯಾಮ್ಸ್, ಆರ್.; ಹೇಸ್, ಜೆ. (7) ಫೆರಸ್, ಏ.; ಹ್ಯಾಮರ್, ಜೆ.; ಸ್ಟ್ಯಾನ್ಲೀ, ಜೀ.; ಕಿಮ್, ಸಿ.; ಸೈಮಂಡ್ಸ್, ಎಸ್.; ಲೋಪೆಸ್, ಡಿ.; ಬರಲ್, ಡಿ. (8) ಬ್ರಾಕ್ಮೈರ್, ಡಿ.; ಮೇಯರ್, ಜೆ.; ರೇನೀ, ಎಸ್.; ಸಿಲವೆಟ್ಸ್, ಎಸ್.; ಜೋನ್ಸ್, ಆರ್.; ಲಾರೂ, ಜೆ.