ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾವು ಪಡೆದುಕೊಳ್ಳಲು ಬಹಳಷ್ಟು ಜ್ಞಾನವಿದೆಯೆ?

ನಾವು ಪಡೆದುಕೊಳ್ಳಲು ಬಹಳಷ್ಟು ಜ್ಞಾನವಿದೆಯೆ?

ನಾವು ಪಡೆದುಕೊಳ್ಳಲು ಬಹಳಷ್ಟು ಜ್ಞಾನವಿದೆಯೆ?

ಪಶ್ಚಿಮ ಆಫ್ರಿಕದ ಸಮುದ್ರತೀರದಲ್ಲಿ ಕುಳಿತಿದ್ದ ಒಂದು ದಂಪತಿ, ಬಾನಿನಲ್ಲಿದ್ದ ಬೆಳ್ಳಿಚಂದಿರನನ್ನು ನೋಡುತ್ತಾ ಇದ್ದರು. “ಮನುಷ್ಯನಿಗೆ ಚಂದ್ರನ ಬಗ್ಗೆ ಎಷ್ಟೋ ವಿಷಯಗಳು ತಿಳಿದಿದೆ, ಆದರೂ ಅವನು ಇನ್ನೆಷ್ಟು ವಿಷಯಗಳನ್ನು ತಿಳಿಯಲಿಕ್ಕಿದೆಯೊ ಏನೋ?” ಎಂದು ಗಂಡನು ಉದ್ಗರಿಸಿದನು.

ಹೆಂಡತಿಯು ಪ್ರತಿಕ್ರಿಯಿಸುತ್ತಾ ಹೇಳಿದ್ದು: “ಈ ರೀತಿಯಾಗಿ ಭೂಮಿ ನಿಧಾನವಾಗಿ ಹಾದುಹೋಗುತ್ತಿರುವುದನ್ನು ನೋಡುವ ಸಾಧ್ಯತೆ ನಮಗಿರುವುದರ ಬಗ್ಗೆ ತುಸು ಭಾವಿಸಿ. ಜನರಿಗೆ ಈಗಾಗಲೇ ಎಷ್ಟೋ ಜ್ಞಾನವಿದೆಯಾದರೂ ಅವರಿಗೆ ಇನ್ನೆಷ್ಟು ವಿಷಯಗಳನ್ನು ಕಲಿಯಲಿಕ್ಕಿದೆಯೋ? ಅಷ್ಟುಮಾತ್ರವಲ್ಲದೆ, ಈ ಭೂಮಿ ಸೂರ್ಯನ ಸುತ್ತಲೂ ತಿರುಗುತ್ತದಷ್ಟೇಯಲ್ಲದೆ ನಮ್ಮ ಇಡೀ ಸೌರವ್ಯೂಹವೇ ಚಲಿಸುತ್ತಿರುವುದರ ಕುರಿತು ಯೋಚಿಸಿ! ಇದರರ್ಥ, ನಾವು ಈ ವಿಶ್ವದಲ್ಲಿ ಈಗ ಎಲ್ಲಿದ್ದೆವೋ ಆ ನಿಷ್ಕೃಷ್ಟ ಸ್ಥಳಕ್ಕೆ ಪ್ರಾಯಶಃ ಪುನಃ ಬರಲಿಕ್ಕಿಲ್ಲ. ನಿಜ ಹೇಳಬೇಕಾದರೆ, ಇತರ ಪರಿಚಿತ ಆಕಾಶಸ್ಥಕಾಯಗಳನ್ನು ನೋಡುವ ಮೂಲಕವೇ ನಾವು ಅಂತರಿಕ್ಷದಲ್ಲಿ ಎಲ್ಲಿದ್ದೇವೆಂಬುದನ್ನು ನಾವು ತಿಳಿದುಕೊಳ್ಳುತ್ತೇವೆ. ನಮಗೆ ಕೆಲವೊಂದು ವಿಷಯಗಳ ಬಗ್ಗೆ ಬಹಳಷ್ಟು ಜ್ಞಾನವಿದೆಯಾದರೂ, ಒಂದರ್ಥದಲ್ಲಿ ನಾವು ಎಲ್ಲಿದ್ದೇವೆ ಎಂಬುದೇ ನಮಗೆ ತಿಳಿದಿಲ್ಲ ಎಂದು ನಾವು ಹೇಳಬಹುದು!”

ಈ ಅನಿಸಿಕೆಗಳು ಕೆಲವು ಮೂಲಭೂತ ಸತ್ಯಗಳ ಕಡೆಗೆ ಕೈತೋರಿಸುತ್ತವೆ. ನಮಗೆ ಕಲಿಯಲಿಕ್ಕೆ ಸಹಸ್ರಾರು ವಿಷಯಗಳಿವೆ. ವಾಸ್ತವದಲ್ಲಿ, ನಮ್ಮಲ್ಲಿ ಪ್ರತಿಯೊಬ್ಬರೂ ಪ್ರತಿ ದಿನ ಹೊಸ ಹೊಸ ವಿಷಯಗಳನ್ನು ಕಲಿಯುತ್ತಿರುತ್ತೇವೆ. ಆದರೂ, ನಾವು ಎಷ್ಟೇ ವಿಷಯಗಳನ್ನು ಕಲಿಯುವುದಾದರೂ, ಬಯಸಿದಷ್ಟು ವೇಗಗತಿಯಲ್ಲಿ ಇಚ್ಛಿಸಿದಷ್ಟು ವಿಷಯಗಳನ್ನು ಕಲಿಯಲು ನಮ್ಮಿಂದ ಸಾಧ್ಯವಾಗುತ್ತಿಲ್ಲ.

ಹೊಸ ಮಾಹಿತಿಯನ್ನು ತೆಗೆದುಕೊಳ್ಳುವ ಸಾಮರ್ಥ್ಯದೊಂದಿಗೆ, ಮಾಹಿತಿಯನ್ನು ಸಂಗ್ರಹಿಸಿಡುವ ಶಕ್ತಿಯೂ ಮಹತ್ತರವಾಗಿ ಹೆಚ್ಚಿದೆ ಎಂಬುದು ನಿಜವೇ. ತಂತ್ರಜ್ಞಾನದ ಮೂಲಕ ಒಟ್ಟು ಮಾನವರು ಸಂಗ್ರಹಿಸಿರುವ ಜ್ಞಾನದ ಭಂಡಾರವು ಭಾರೀ ಪ್ರಮಾಣವನ್ನು ತಲಪಿದೆ ಎಂಬುದು ನಿಜವೇ. ಕಂಪ್ಯೂಟರ್‌ ಹಾರ್ಡ್‌ ಡಿಸ್ಕ್‌ಗಳಲ್ಲಿ ಮಾಹಿತಿಯನ್ನು ಶೇಖರಿಸಿಡುವ ಶಕ್ತಿಯು ಎಷ್ಟು ಹೆಚ್ಚಾಗಿದೆಯೆಂದರೆ, ಅದನ್ನು ವರ್ಣಿಸಲಿಕ್ಕಾಗಿ ಹೊಸ ಮಾಪನ ಪದಗಳನ್ನು ಕಂಡುಹಿಡಿಯಬೇಕಾಯಿತು. ಒಂದು ಸಾಧಾರಣ ಸಿಡಿ-ರಾಮ್‌ನಲ್ಲಿ ಮಾಹಿತಿಯನ್ನು ಭಾರೀ ಪ್ರಮಾಣದಲ್ಲಿ ಶೇಖರಿಸಿಡಬಹುದು; ಅದರ ಸಂಗ್ರಹ ಶಕ್ತಿಯನ್ನು 680 ಮೆಗಬೈಟ್‌ ಅಥವಾ ಅದಕ್ಕಿಂತಲೂ ಹೆಚ್ಚು ಎಂದು ವರ್ಣಿಸಲಾಗುತ್ತದೆ. ಆದರೆ ಒಂದು ಸ್ಟ್ಯಾಂಡರ್ಡ್‌ ಡಿವಿಡಿ ಮುದ್ರಿಕೆಯಲ್ಲಿ ಇದಕ್ಕಿಂತಲೂ ಏಳು ಪಟ್ಟು ಹೆಚ್ಚು ಮಾಹಿತಿಯನ್ನು ಸಂಗ್ರಹಿಸಿಡಲು ಸಾಧ್ಯವಿದೆ, ಮತ್ತು ಏಳು ಪಟ್ಟು ಏಕೆ ಅದಕ್ಕಿಂತಲೂ ಹೆಚ್ಚು ಸಂಗ್ರಹ ಶಕ್ತಿಯನ್ನು ಹೊಂದಿರುವ ಡಿವಿಡಿ ಮುದ್ರಿಕೆಗಳು ಮಾರುಕಟ್ಟೆಯಲ್ಲಿ ಸಿಗುತ್ತಿವೆ.

ಆಧುನಿಕ ಮಾನವನು ಮಾಹಿತಿಯನ್ನು ಹಂಚಿಕೊಳ್ಳಲು ಉಪಯೋಗಿಸುವ ಮಾಧ್ಯಮವು ಸಹ ಹೆಚ್ಚುಕಡಿಮೆ ನಮ್ಮ ತಿಳಿವಳಿಕೆಗೆ ಮೀರಿದ ವಿಷಯವಾಗಿದೆ. ರೋಟರಿ ಮುದ್ರಣ ಯಂತ್ರಗಳು ನಂಬಲಸಾಧ್ಯವಾದಷ್ಟು ವೇಗದಲ್ಲಿ ಓಡುತ್ತಾ ವಾರ್ತಾಪತ್ರಿಕೆಗಳು, ಮ್ಯಾಗಸೀನ್‌ಗಳು ಮತ್ತು ಪುಸ್ತಕಗಳನ್ನು ಛಾಪಿಸುತ್ತವೆ. ಮತ್ತು ಇಂಟರ್‌ನೆಟ್‌ ಉಪಯೋಗಿಸುವ ಒಬ್ಬ ವ್ಯಕ್ತಿ, ಮೌಸನ್ನು ಕ್ಲಿಕ್‌ ಮಾಡಿದರೆ ಸಾಕು ಮಾಹಿತಿಯ ಮಹಾಪೂರವೇ ಅವನ ಕಣ್ಣ ಮುಂದೆ ಕಾಣಿಸಿಕೊಳ್ಳುತ್ತದೆ. ಹೀಗೆ ಮತ್ತು ಇನ್ನಿತರ ವಿಧಗಳಲ್ಲಿ, ಒಬ್ಬನು ಗ್ರಹಿಸಸಾಧ್ಯವಿರುವುದಕ್ಕಿಂತ ಹೆಚ್ಚು ವೇಗವಾಗಿ ಮಾಹಿತಿಯು ಹಂಚಲ್ಪಡುತ್ತಿದೆ. ಇಷ್ಟು ಪರಿಮಾಣದಲ್ಲಿ ಲಭ್ಯವಿರುವ ಮಾಹಿತಿಯು ಕೆಲವೊಮ್ಮೆ ಒಂದು ಸಮುದ್ರಕ್ಕೆ ಹೋಲಿಸಲ್ಪಡುತ್ತದೆ, ಮತ್ತು ಅದು ಹೀಗೆ ವರ್ಣಿಸಲ್ಪಟ್ಟಿರುವುದರಿಂದ ನಾವು ಅದನ್ನೆಲ್ಲಾ ಕುಡಿದುಬಿಡುವ ಬದಲಿಗೆ ಅದರಲ್ಲಿ ಈಜಿಕೊಂಡು ಹೋಗಲು ಕಲಿಯಬೇಕು. ಬೃಹತ್ಪ್ರಮಾಣದಲ್ಲಿ ಲಭ್ಯವಿರುವ ಜ್ಞಾನವು ವಿಷಯಗಳನ್ನು ಆರಿಸಿ ತೆಗೆಯುವಂತೆ ನಮ್ಮನ್ನು ಒತ್ತಾಯಿಸುತ್ತದೆ.

ನಾವು ಹೀಗೆ ಆರಿಸಿ ತೆಗೆದುಕೊಳ್ಳಲಿಕ್ಕಾಗಿರುವ ಮತ್ತೊಂದು ಕಾರಣವೇನೆಂದರೆ, ಲಭ್ಯವಿರುವ ಇಷ್ಟೆಲ್ಲಾ ಮಾಹಿತಿಯು ಯಾವಾಗಲೂ ಪ್ರಯೋಜನಕಾರಿಯಾಗಿರುವುದಿಲ್ಲ. ವಾಸ್ತವದಲ್ಲಿ, ಅದರಲ್ಲಿನ ಕೆಲವು ಮಾಹಿತಿಗಳು ಅನಪೇಕ್ಷಣೀಯವಾಗಿದ್ದು, ತಿಳಿದುಕೊಳ್ಳಲು ಯೋಗ್ಯವಾಗಿರುವುದಿಲ್ಲ. ನೆನಪಿನಲ್ಲಿಡಿರಿ, ಜ್ಞಾನ ಎಂಬುದು ಮಾಹಿತಿಗೆ ಸೂಚಿಸುತ್ತದೆ. ಅದು ಒಂದುವೇಳೆ ಒಳ್ಳೇದಾಗಿರಬಹುದು ಅಥವಾ ಕೆಟ್ಟದಾಗಿರಬಹುದು ಇಲ್ಲವೆ ಸಕಾರಾತ್ಮಕವಾಗಿರಬಹುದು ಅಥವಾ ನಕಾರಾತ್ಮಕವಾಗಿರಬಹುದು. ಅಷ್ಟುಮಾತ್ರವಲ್ಲ, ವಾಸ್ತವಾಂಶಗಳೆಂದು ಅನೇಕರು ನಂಬುವ ವಿಷಯಗಳು ನಿಷ್ಕೃಷ್ಟವಾಗಿರುವುದಿಲ್ಲ ಮತ್ತು ಇದು ನಮ್ಮನ್ನು ಇನ್ನಷ್ಟು ಗಲಿಬಿಲಿಗೊಳಿಸುತ್ತದೆ. ಗಣ್ಯ ವ್ಯಕ್ತಿಗಳು ಆಡಿದ ಮಾತುಗಳು ತದನಂತರ ಲೋಪವುಳ್ಳವುಗಳಾಗಿ, ಅಥವಾ ತಪ್ಪಾದವುಗಳಾಗಿ ಎಷ್ಟು ಬಾರಿ ರುಜುಪಡಿಸಲ್ಪಟ್ಟಿಲ್ಲ! ಉದಾಹರಣೆಗೆ, ಪುರಾತನ ಎಫೆಸ ಪಟ್ಟಣದ ಯಜಮಾನನನ್ನು ತೆಗೆದುಕೊಳ್ಳಿ. ಖಂಡಿತವಾಗಿಯೂ ಈತನನ್ನು ಜನರು ಒಬ್ಬ ಪಾಂಡಿತ್ಯಪಡೆದ ಅಧಿಕಾರಿಯೆಂದು ಎಣಿಸುತ್ತಿದ್ದರು. ಅವನು ಹೇಳಿದ್ದು: “ಎಫೆಸಪಟ್ಟಣದವರು ಅರ್ತೆಮೀ ಮಹಾದೇವಿಯ ದೇವಸ್ಥಾನಕ್ಕೂ ಆಕಾಶದಿಂದ ಬಿದ್ದ ಆಕೆಯ ಮೂರ್ತಿಗೂ ಪಾಲಕರಾಗಿದ್ದಾರೆಂಬದನ್ನು ತಿಳಿಯದಿರುವ ಮನುಷ್ಯನು ಇದ್ದಾನೇ?” (ಅ. ಕೃತ್ಯಗಳು 19:35, 36) ಇದು ಸರ್ವರಿಗೂ ತಿಳಿದಿದ್ದ​—⁠ಮತ್ತು ಅನೇಕರು ನಂಬುವಂತೆ, ಪ್ರಶ್ನಿಸಲ್ಪಡಲು ಸಾಧ್ಯವಿಲ್ಲದ—ವಿಷಯವಾಗಿ ತೋರುವುದಾದರೂ, ಆ ಮೂರ್ತಿಯು ಆಕಾಶದಿಂದ ಬಿದ್ದಿತು ಎಂಬುದು ಸತ್ಯಮಾತಾಗಿರಲಿಲ್ಲ. ಸಕಾರಣದಿಂದಲೇ, ಪವಿತ್ರ ಬೈಬಲು “ಜ್ಞಾನೋಪದೇಶವೆಂದು ಸುಳ್ಳಾಗಿ ಹೇಳಿಕೊಳ್ಳುವ ಬೋಧನೆ”ಯ ವಿರುದ್ಧ ಎಚ್ಚರವಾಗಿರುವಂತೆ ಕ್ರೈಸ್ತರಿಗೆ ತಿಳಿಸುತ್ತದೆ.​—⁠1 ತಿಮೊಥೆಯ 6:⁠20.

ನಾವು ಜ್ಞಾನವನ್ನು ಆರಿಸಿ ತೆಗೆದುಕೊಳ್ಳುವವರಾಗಿರಬೇಕು ಎಂಬುದಕ್ಕಿರುವ ಮತ್ತೊಂದು ಕಾರಣವು ಯಾವುದೆಂದರೆ, ನಮ್ಮ ಪ್ರಸ್ತುತ ಜೀವನಾಯುಷ್ಯವು ಅಲ್ಪಕಾಲದ್ದಾಗಿರುವುದೇ. ನೀವು ಎಷ್ಟೇ ಪ್ರಾಯದವರಾಗಿರಲಿ, ನೀವು ಪರೀಕ್ಷಿಸಿನೋಡಲು ಬಯಸುವ ಅನೇಕ ರೀತಿಯ ಜ್ಞಾನವು ಖಂಡಿತ ಇರಬಲ್ಲದು, ಆದರೆ ಅದೆಲ್ಲವನ್ನು ಪರೀಕ್ಷಿಸುವಷ್ಟು ಕಾಲ ನೀವು ಬದುಕಿರಲಿಕ್ಕಿಲ್ಲ ಎಂಬುದನ್ನು ನೀವು ಗ್ರಹಿಸಿಕೊಳ್ಳುತ್ತೀರಿ.

ಈ ಮೂಲಭೂತ ಸಮಸ್ಯೆಯು ಎಂದಾದರೂ ಬದಲಾಗುವುದೋ? ನಮ್ಮ ಜೀವನಾಯುಷ್ಯವನ್ನು ಸಾಕಷ್ಟು ಲಂಬಿಸುವ ಅಥವಾ ಶಾಶ್ವತಗೊಳಿಸಬಲ್ಲ ಯಾವ ಜ್ಞಾನವಾದರೂ ಇದೆಯೋ? ಇಂತಹ ಜ್ಞಾನವು ಈಗಾಗಲೇ ಅಸ್ತಿತ್ವದಲ್ಲಿರಸಾಧ್ಯವೋ? ಇರುವುದಾದರೆ, ಅದು ಎಲ್ಲರಿಗೂ ಲಭ್ಯಗೊಳಿಸಲ್ಪಡುವುದೋ? ನಾವು ಪಡೆದುಕೊಳ್ಳುವ ಎಲ್ಲಾ ಜ್ಞಾನದಲ್ಲಿ ಸತ್ಯವು ತುಂಬಿರುವ ಕಾಲವು ಎಂದಾದರೂ ಬರುವುದೋ? ಮೇಲೆ ತಿಳಿಸಲ್ಪಟ್ಟ ದಂಪತಿಯು ಆ ಪ್ರಶ್ನೆಗಳಿಗೆ ತೃಪ್ತಿದಾಯಕ ಉತ್ತರಗಳನ್ನು ಕಂಡುಕೊಂಡಿದ್ದಾರೆ; ನಿಮ್ಮಿಂದಲೂ ಇದು ಸಾಧ್ಯ. ದಯವಿಟ್ಟು ಮುಂದಿನ ಲೇಖನವನ್ನು ಓದಿರಿ. ಅದು, ಸದಾಸರ್ವದಾ ಜ್ಞಾನವನ್ನು ಪಡೆದುಕೊಳ್ಳುವ ಪ್ರತೀಕ್ಷೆಯನ್ನು ನಿಮಗೆ ನೀಡುವುದು.