ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೌಲನ ಸಾರುವಿಕೆಯು ವಿರೋಧವನ್ನು ಬಡಿದೆಬ್ಬಿಸುತ್ತದೆ

ಸೌಲನ ಸಾರುವಿಕೆಯು ವಿರೋಧವನ್ನು ಬಡಿದೆಬ್ಬಿಸುತ್ತದೆ

ಸೌಲನ ಸಾರುವಿಕೆಯು ವಿರೋಧವನ್ನು ಬಡಿದೆಬ್ಬಿಸುತ್ತದೆ

ದಮಸ್ಕದಲ್ಲಿದ್ದ ಯೆಹೂದ್ಯರಿಗೆ, ಸಾಂಪ್ರದಾಯಿಕ ನಂಬಿಕೆಗಳ ಹುರುಪಿನ ಸಮರ್ಥಕನಾಗಿದ್ದ ವ್ಯಕ್ತಿಯೊಬ್ಬನು ಧರ್ಮಭ್ರಷ್ಟನಾಗಲು ಹೇಗೆ ಸಾಧ್ಯ ಎಂಬುದನ್ನು ಅರ್ಥಮಾಡಿಕೊಳ್ಳಲಾಗಲಿಲ್ಲ. ಏಕೆಂದರೆ, ಅವನು ಅಂದರೆ ಸೌಲನು ಯೆರೂಸಲೇಮಿನಲ್ಲಿ ಯೇಸುವಿನ ಹೆಸರನ್ನು ಹೇಳಿಕೊಳ್ಳುವವರ ಹಿಂಸಕನೆಂದು ಪ್ರಖ್ಯಾತಿ ಪಡೆದಿದ್ದನು. ದಮಸ್ಕದಲ್ಲಿರುವ ಶಿಷ್ಯರನ್ನು ಹಿಂಸಿಸಲಿಕ್ಕಾಗಿಯೇ ಅವನು ಅಲ್ಲಿಗೆ ಬಂದಿದ್ದನು. ಆದರೆ ಸ್ವತಃ ಸೌಲನೇ ಈಗ, ದೇವದೂಷಣೆಯ ಆರೋಪದಿಂದ ಶೂಲಕ್ಕೇರಿಸಲ್ಪಟ್ಟು, ತುಚ್ಛ ಕೊಲೆಪಾತಕನಾಗಿ ಪರಿಗಣಿಸಲ್ಪಟ್ಟ ಯೇಸುವೇ ಮೆಸ್ಸೀಯನಾಗಿದ್ದಾನೆ ಎಂದು ಸಾರಿಹೇಳುತ್ತಿದ್ದನು! ಸೌಲನಿಗೆ ಹುಚ್ಚು ಹಿಡಿದಿತ್ತೋ?​—⁠ಅ. ಕೃತ್ಯಗಳು 9:1, 2, 20-22.

ಇದಕ್ಕೆ ಒಂದು ವಿವರಣೆಯಿತ್ತು. ಸೌಲನೊಂದಿಗೆ ಹೊರಟ ಯಾತ್ರಿಕರ ಗುಂಪಿನಲ್ಲಿ ಯೆರೂಸಲೇಮಿನಿಂದ ಪ್ರಯಾಣ ಬೆಳೆಸಿದ್ದ ಇತರರು ದಾರಿಯಲ್ಲಿ ಏನು ಸಂಭವಿಸಿತೋ ಅದರ ಕುರಿತು ಮಾತಾಡಿರುವುದು ಸಂಭವನೀಯ. ಅವರು ದಮಸ್ಕದ ಹತ್ತಿರ ಬರುತ್ತಿದ್ದಾಗ, ಫಕ್ಕನೆ ಆಕಾಶದೊಳಗಿಂದ ಒಂದು ಬೆಳಕು ಅವರ ಸುತ್ತಲೂ ಮಿಂಚಿತು ಮತ್ತು ಅವರೆಲ್ಲರೂ ನೆಲಕ್ಕೆ ಬಿದ್ದರು. ಆಗ ಒಂದು ವಾಣಿಯೂ ಕೇಳಿಬಂತು. ಸೌಲನನ್ನು ಬಿಟ್ಟು ಬೇರೆ ಯಾರಿಗೂ ಹಾನಿಯಾಗಲಿಲ್ಲ. ಅವನು ನೆಲದ ಮೇಲೆ ಬಿದ್ದುಕೊಂಡಿದ್ದನು. ಕೊನೆಗೂ ಅವನು ಎದ್ದು ನಿಂತಾಗ, ಅವನಿಗೆ ಏನೂ ಕಾಣಿಸಲಿಲ್ಲವಾದ್ದರಿಂದ ಜೊತೆ ಪ್ರಯಾಣಿಕರು ಅವನನ್ನು ಕೈಹಿಡಿದು ದಮಸ್ಕದೊಳಕ್ಕೆ ಕರೆದುಕೊಂಡು ಹೋಗಬೇಕಾಯಿತು.​—⁠ಅ. ಕೃತ್ಯಗಳು 9:3-8; 26:13, 14.

ಯೇಸುವಿನ ವಿರೋಧಿಯೇ ಅವನ ಕುರಿತು ಸಾರಲು ಆರಂಭಿಸುತ್ತಾನೆ

ದಮಸ್ಕಕ್ಕೆ ಹೋಗುವಾಗ ಸೌಲನಿಗೆ ಏನು ಸಂಭವಿಸಿತು? ದೀರ್ಘ ಪ್ರಯಾಣವಾಗಲಿ ಅಥವಾ ಮಧ್ಯಾಹ್ನದ ಸೂರ್ಯನ ತಾಪವಾಗಲಿ ಅವನನ್ನು ದುರ್ಬಲಗೊಳಿಸಿತ್ತೋ? ಸಹಜ ವಿವರಣೆಗಳನ್ನು ಕಂಡುಕೊಳ್ಳುವ ನಿರ್ಧಾರದಿಂದ ಆಧುನಿಕ ಸಂದೇಹವಾದಿಗಳು, ಭಾವೋನ್ಮಾದ, ಭ್ರಮೆ, ಸೌಲನ ತೊಂದರೆಭರಿತ ಮನಸ್ಸಾಕ್ಷಿಯ ಅಳುಕಿನಿಂದ ಉಂಟಾದ ಗಂಭೀರ ಮನಶ್ಶಾಸ್ತ್ರೀಯ ಅವಸ್ಥೆ, ನರದೌರ್ಬಲ್ಯ, ಮತ್ತು ಅವನು ಮೂರ್ಛೆರೋಗದ ಊಹಿತ ಮನಸ್ಥಿತಿಯನ್ನು ಒಳಗೂಡಿರುವ ಸಾಧ್ಯತೆಗಳನ್ನು ಸಾದರಪಡಿಸಲು ಪ್ರಯತ್ನಿಸುತ್ತಾರೆ.

ಆದರೆ ವಾಸ್ತವದಲ್ಲಿ ಏನು ಸಂಭವಿಸಿತೆಂದರೆ, ಕುರುಡುಗೊಳಿಸುವಂಥ ಬೆಳಕಿನಲ್ಲಿ ಯೇಸು ಕ್ರಿಸ್ತನು ಸೌಲನಿಗೆ ಕಾಣಿಸಿಕೊಂಡನು ಮತ್ತು ತಾನೇ ಮೆಸ್ಸೀಯನೆಂಬುದನ್ನು ಅವನಿಗೆ ಮನಗಾಣಿಸಿದನು. ಈ ಘಟನೆಯನ್ನು ಚಿತ್ರಿಸುವಂಥ ಕೆಲವು ಕಲಾತ್ಮಕ ಚಿತ್ರಣಗಳು, ಸೌಲನು ಒಂದು ಕುದುರೆಯಿಂದ ಕೆಳಗೆ ಬೀಳುತ್ತಿರುವುದನ್ನು ತೋರಿಸುತ್ತವೆ. ಇದು ಸಾಧ್ಯವಿರುವುದಾದರೂ, ಅವನು ‘ನೆಲಕ್ಕೆ ಬಿದ್ದನು’ ಎಂದಷ್ಟೇ ಬೈಬಲು ಹೇಳುತ್ತದೆ. (ಅ. ಕೃತ್ಯಗಳು 22:6-11) ಸೌಲನು ಈ ಸಂದರ್ಭದಲ್ಲಿ ಯಾವುದೇ ರೀತಿಯ ಶಾರೀರಿಕ ಬೀಳುವಿಕೆಯನ್ನು ಅನುಭವಿಸಿದ್ದಿರಲಿ, ಅವನ ಹಿಂದಿನ ಸ್ಥಾನಮಾನದಿಂದ ಅವನಿಗುಂಟಾದ ಪತನಕ್ಕೆ ಹೋಲಿಸುವಾಗ ಇದು ತೀರ ಕ್ಷುಲ್ಲಕವಾಗಿತ್ತು. ಯೇಸುವಿನ ಹಿಂಬಾಲಕರು ಏನನ್ನು ಸಾರುತ್ತಿದ್ದರೋ ಅದು ನಿಜವಾಗಿತ್ತು ಎಂಬುದನ್ನು ಈಗ ಅವನು ಅಂಗೀಕರಿಸಬೇಕಿತ್ತು. ಸೌಲನ ಮುಂದಿದ್ದ ಏಕಮಾತ್ರ ಮಾರ್ಗವು ಆ ಹಿಂಬಾಲಕರನ್ನು ಜೊತೆಗೂಡುವುದೇ ಆಗಿತ್ತು. ಯೇಸುವಿನ ಸಂದೇಶದ ವಿಷಯದಲ್ಲಿ ಆಕ್ರಮಣಶೀಲ ವೈರಿಯಾಗಿದ್ದ ಸೌಲನು, ಈಗ ಅದರ ಕಟ್ಟಾಸಕ್ತಿಯ ಬೆಂಬಲಿಗನಾಗಿ ಪರಿಣಮಿಸಿದನು. ತನ್ನ ದೃಷ್ಟಿಯನ್ನು ಪುನಃ ಪಡೆದುಕೊಂಡು ದೀಕ್ಷಾಸ್ನಾನ ಮಾಡಿಸಿಕೊಂಡ ಬಳಿಕ, “ಸೌಲನು ಇನ್ನೂ ಅಧಿಕ ಸಾಮರ್ಥ್ಯವುಳ್ಳವನಾಗಿ ಯೇಸುವೇ ಕ್ರಿಸ್ತನೆಂದು ಸಿದ್ಧಾಂತಪಡಿಸಿ ದಮಸ್ಕದಲ್ಲಿದ್ದ ಯೆಹೂದ್ಯರನ್ನು ಉತ್ತರವಿಲ್ಲದವರಾಗ ಮಾಡಿದನು.”​—⁠ಅ. ಕೃತ್ಯಗಳು 9:⁠22.

ಹತ್ಯೆಯ ಒಳಸಂಚು ವಿಫಲವಾಗುತ್ತದೆ

ಸಮಯಾನಂತರ ಪೌಲನೆಂದು ಕರೆಯಲ್ಪಟ್ಟ ಸೌಲನು ತನ್ನ ಮತಾಂತರದ ಬಳಿಕ ಎಲ್ಲಿಗೆ ಹೋದನು? ಗಲಾತ್ಯದವರಿಗೆ ಬರೆಯುತ್ತಿರುವಾಗ ಅವನು ತಿಳಿಸಿದ್ದು: ‘ನಾನು ಅರಬಸ್ಥಾನಕ್ಕೆ ಹೋಗಿ ತಿರಿಗಿ ದಮಸ್ಕಕ್ಕೆ ಬಂದೆನು.’ (ಗಲಾತ್ಯ 1:17) ‘ಅರಬಸ್ಥಾನ’ ಎಂಬ ಪದವು, ಅರೇಬಿಯನ್‌ ದ್ವೀಪಕಲ್ಪದ ಯಾವುದೇ ಭಾಗಕ್ಕೆ ಬೆಳೆಸಲ್ಪಡುವ ಪ್ರಯಾಣಕ್ಕೆ ಅನ್ವಯವಾಗಬಲ್ಲದು. ಪೌಲನು ಅರಾಮ್ಯ ಮರುಭೂಮಿಗೆ ಅಥವಾ IVನೆಯ ಅರೇತ ನೆಬಟೇಯ ರಾಜ್ಯದಲ್ಲಿ ಬೇರೆಲ್ಲಿಗೋ ಹೋಗಿದ್ದಿರಬಹುದು ಎಂದು ಕೆಲವು ವಿದ್ವಾಂಸರು ಸೂಚಿಸುತ್ತಾರೆ. ತನ್ನ ನಿಮಜ್ಜನದ ಬಳಿಕ ಯೇಸು ಅಡವಿಗೆ ಹೋದಂತೆಯೇ, ತನ್ನ ದೀಕ್ಷಾಸ್ನಾನದ ಬಳಿಕ ಸೌಲನು ಧ್ಯಾನಕ್ಕಾಗಿ ಒಂದು ಪ್ರಶಾಂತ ಸ್ಥಳಕ್ಕೆ ಹೋಗಿರುವುದು ಹೆಚ್ಚು ಸಂಭವನೀಯ.​—⁠ಲೂಕ 4:​1, 2.

ಸೌಲನು ದಮಸ್ಕಕ್ಕೆ ಹಿಂದಿರುಗಿದಾಗ, “ಯೆಹೂದ್ಯರು ಅವನನ್ನು ಕೊಲ್ಲಬೇಕೆಂದು ಆಲೋಚನೆಮಾಡಿಕೊಂಡರು.” (ಅ. ಕೃತ್ಯಗಳು 9:23) ದಮಸ್ಕದಲ್ಲಿ ಅರಸನಾದ ಅರೇತನ ಅಧೀನದಲ್ಲಿ ಕಾರ್ಯನಡಿಸುತ್ತಿದ್ದ ಅಧಿಪತಿಯು ಸೌಲನನ್ನು ಹಿಡಿಯಲಿಕ್ಕಾಗಿ ಪಟ್ಟಣವನ್ನು ಕಾಯುತ್ತಿದ್ದನು. (2 ಕೊರಿಂಥ 11:32) ಶತ್ರುಗಳು ಸೌಲನ ಮರಣಕ್ಕಾಗಿ ಒಳಸಂಚು ನಡೆಸುತ್ತಿದ್ದಾಗ, ಯೇಸುವಿನ ಶಿಷ್ಯರಾದರೋ ಅವನನ್ನು ಕಾಪಾಡಲಿಕ್ಕಾಗಿ ಯೋಜನೆಯನ್ನು ಮಾಡಿದರು.

ಸೌಲನಿಗೆ ತಪ್ಪಿಸಿಕೊಳ್ಳಲು ಸಹಾಯಮಾಡಿದವರಲ್ಲಿ ಅನನೀಯನು ಮತ್ತು ಸೌಲನು ಕ್ರೈಸ್ತಮತಕ್ಕೆ ಮತಾಂತರಿಸಿದ ಬಳಿಕ ಅವನೊಂದಿಗಿದ್ದ ಶಿಷ್ಯರು ಸೇರಿದ್ದರು. * (ಅ. ಕೃತ್ಯಗಳು 9:17-19) ದಮಸ್ಕದಲ್ಲಿ ಸೌಲನು ಸಾರಿದ್ದರಿಂದ ವಿಶ್ವಾಸಿಗಳಾಗಿ ಪರಿಣಮಿಸಿದ್ದವರು ಸಹ ಅವನಿಗೆ ಸಹಾಯಮಾಡಿದ್ದಿರಬಹುದು. ಏಕೆಂದರೆ ಅ. ಕೃತ್ಯಗಳು 9:25 ಹೇಳುವುದು: “ಆದರೆ ಅವನ ಶಿಷ್ಯರು ರಾತ್ರಿಕಾಲದಲ್ಲಿ ಅವನನ್ನು ಕರೆದುಕೊಂಡುಹೋಗಿ ಒಂದು ಹೆಡಿಗೆಯಲ್ಲಿ ಕೂಡ್ರಿಸಿ ಗೋಡೆಯೊಳಗಿಂದ ಇಳಿಸಿದರು.” “ಅವನ ಶಿಷ್ಯರು” ಎಂಬ ಅಭಿವ್ಯಕ್ತಿಯು, ಸೌಲನು ಯಾರಿಗೆ ಬೋಧಿಸಿದನೋ ಅವರಿಗೆ ಸೂಚಿತವಾಗಿರಬಹುದು. ಏನೇ ಆಗಲಿ, ಅವನ ಶುಶ್ರೂಷೆಯ ಸಾಫಲ್ಯವು, ಈಗಾಗಲೇ ಅವನ ವಿರುದ್ಧ ಇದ್ದಂಥ ದ್ವೇಷವನ್ನು ಇನ್ನಷ್ಟು ತೀವ್ರಗೊಳಿಸಿತು.

ಕಲಿಯತಕ್ಕ ಪಾಠ

ಸೌಲನ ಮತಾಂತರ ಹಾಗೂ ದೀಕ್ಷಾಸ್ನಾನದ ಕಾಲಾವಧಿಯಲ್ಲಿ ನಡೆದ ಘಟನೆಗಳಲ್ಲಿ ಕೆಲವನ್ನು ನಾವು ಪರಿಶೀಲಿಸುವಾಗ, ಇತರರು ತನ್ನ ವಿಷಯದಲ್ಲಿ ಯಾವ ನಿರ್ಧಾರಕ್ಕೆ ಬರುತ್ತಾರೆ ಎಂಬುದರ ಬಗ್ಗೆ ಅವನು ಹೆಚ್ಚು ಚಿಂತಿತನಾಗಿರಲಿಲ್ಲ ಮತ್ತು ತೀವ್ರವಾದ ವಿರೋಧವಿದ್ದರೂ ತನ್ನ ಪ್ರಯತ್ನವನ್ನು ಬಿಟ್ಟುಬಿಡಲಿಲ್ಲ ಎಂಬುದನ್ನು ನಾವು ಸ್ಪಷ್ಟವಾಗಿ ಮನಗಾಣುತ್ತೇವೆ. ತನಗೆ ಕೊಡಲ್ಪಟ್ಟಿದ್ದ ಸಾರುವ ನೇಮಕವನ್ನು ಸೌಲನು ಹೆಚ್ಚು ಪ್ರಾಮುಖ್ಯವಾಗಿ ಪರಿಗಣಿಸಿದನು.​—⁠ಅ. ಕೃತ್ಯಗಳು 22:14, 15.

ಸುವಾರ್ತೆಯನ್ನು ಸಾರುವುದರ ಪ್ರಮುಖತೆಯು ನಿಮಗೆ ಇತ್ತೀಚೆಗೆ ಮನಗಾಣಿಸಲ್ಪಟ್ಟಿತೋ? ಹಾಗಿರುವಲ್ಲಿ, ನಿಜ ಕ್ರೈಸ್ತರೆಲ್ಲರೂ ರಾಜ್ಯದ ಕುರಿತು ಸಾರುವವರಾಗಿರಬೇಕು ಎಂಬುದು ನಿಮಗೆ ತಿಳಿದಿದೆ. ಕೆಲವೊಮ್ಮೆ ನಿಮ್ಮ ಶುಶ್ರೂಷೆಯು ವಿರುದ್ಧವಾದ ಪ್ರತಿಕ್ರಿಯೆಗಳನ್ನು ಕೆರಳಿಸುತ್ತದಾದರೆ ನೀವು ಆಶ್ಚರ್ಯಗೊಳ್ಳಬಾರದು. (ಮತ್ತಾಯ 24:9; ಲೂಕ 21:12; 1 ಪೇತ್ರ 2:20) ವಿರೋಧದ ಎದುರಿನಲ್ಲಿ ಸೌಲನು ತೋರಿಸಿದ ಪ್ರತಿಕ್ರಿಯೆಯು ಆದರ್ಶಪ್ರಾಯವಾದದ್ದಾಗಿದೆ. ಪರೀಕ್ಷೆಗಳ ಕೆಳಗೆ ಪಟ್ಟುಹಿಡಿದು ಮುಂದುವರಿಯುವ ಕ್ರೈಸ್ತರು ದೇವರ ಅನುಗ್ರಹವನ್ನು ಪಡೆದುಕೊಳ್ಳುವರು. ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲರೂ ಹಗೆಮಾಡುವರು.” ಆದರೂ ಅವನು ಅವರಿಗೆ ಆಶ್ವಾಸನೆ ನೀಡಿದ್ದು: “ನಿಮ್ಮ ಸೈರಣೆಯಿಂದ ನಿಮ್ಮ ಪ್ರಾಣಗಳನ್ನು ಪಡಕೊಳ್ಳುವಿರಿ.”​—⁠ಲೂಕ 21:17-19.

[ಪಾದಟಿಪ್ಪಣಿ]

^ ಪ್ಯಾರ. 10 ಯೇಸು ಗಲಿಲಾಯದಲ್ಲಿ ಸಾರಿದ ಬಳಿಕ ಅಥವಾ ಸಾ.ಶ. 33ರ ಪಂಚಾಶತ್ತಮದ ಬಳಿಕ ದಮಸ್ಕದಲ್ಲಿ ಕ್ರೈಸ್ತಮತವು ಆರಂಭಗೊಂಡಿದ್ದಿರಬಹುದು.​—⁠ಮತ್ತಾಯ 4:24; ಅ. ಕೃತ್ಯಗಳು 2:⁠5.

[ಪುಟ 28ರಲ್ಲಿರುವ ಚಿತ್ರ]

ಯೇಸು ಸೌಲನಿಗೆ ಕಾಣಿಸಿಕೊಂಡಾಗ ಅವನು ‘ನೆಲಕ್ಕೆ ಬಿದ್ದನು’

[ಪುಟ 29ರಲ್ಲಿರುವ ಚಿತ್ರ]

ದಮಸ್ಕದಲ್ಲಿ ಸೌಲನು ಹತ್ಯೆಯ ಒಳಸಂಚಿನಿಂದ ತಪ್ಪಿಸಿಕೊಂಡನು