ವಾಚಕರಿಂದ ಪ್ರಶ್ನೆಗಳು
ವಾಚಕರಿಂದ ಪ್ರಶ್ನೆಗಳು
ಕ್ರಿಸ್ತನ ಸಾವಿರ ವರ್ಷದಾಳಿಕೆಯ ಸಮಯದಲ್ಲಿ ದೆವ್ವಗಳು ಎಲ್ಲಿರುವವು?
ಬೈಬಲ್ ಈ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಕೊಡುವುದಿಲ್ಲ. ಆದರೂ, ದೆವ್ವಗಳು ಕ್ರಿಸ್ತನ ಸಹಸ್ರ ವರ್ಷದಾಳಿಕೆಯ ಸಮಯದಲ್ಲಿ ಎಲ್ಲಿರುವವು ಎಂಬುದರ ಕುರಿತು ತರ್ಕಬದ್ಧ ತೀರ್ಮಾನವನ್ನು ನಾವು ಮಾಡಬಹುದು.
ಸಹಸ್ರ ವರ್ಷದ ಆರಂಭದಲ್ಲಿ ಹಾಗೂ ಅಂತ್ಯದಲ್ಲಿ ಏನು ಸಂಭವಿಸಲಿದೆ ಎಂಬುದರ ಮುನ್ನೋಟವನ್ನು ಕೊಡುತ್ತಾ, ಅಪೊಸ್ತಲನಾದ ಯೋಹಾನನು ಹೇಳಿದ್ದು: “ಒಬ್ಬ ದೇವದೂತನು ಅಧೋಲೋಕದ ಬೀಗದ ಕೈಯನ್ನೂ ದೊಡ್ಡ ಸರಪಣಿಯನ್ನೂ ಕೈಯಲ್ಲಿ ಹಿಡಿದುಕೊಂಡು ಪರಲೋಕದಿಂದ ಇಳಿದು ಬರುವದನ್ನು ಕಂಡೆನು. ಅವನು ಪಿಶಾಚನೂ ಸೈತಾನನೂ ಆಗಿರುವ ಪುರಾತನಸರ್ಪವೆಂಬ ಘಟಸರ್ಪನನ್ನು ಹಿಡಿದು ಸಾವಿರ ವರುಷ ಬಂಧನದಲ್ಲಿಟ್ಟನು. ಆ ಸಾವಿರ ವರುಷ ತೀರುವ ತನಕ ಸೈತಾನನು ಇನ್ನೂ ಜನಗಳನ್ನು ಮರುಳುಗೊಳಿಸದ ಹಾಗೆ ದೇವದೂತನು ಅವನನ್ನು ಅಧೋಲೋಕದಲ್ಲಿ ದೊಬ್ಬಿ ಬಾಗಿಲು ಮುಚ್ಚಿ ಅದಕ್ಕೆ ಮುದ್ರೆಹಾಕಿದನು. ಆ ಸಾವಿರ ವರುಷಗಳಾದ ಮೇಲೆ ಅವನಿಗೆ ಸ್ವಲ್ಪಕಾಲ ಬಿಡುಗಡೆಯಾಗಬೇಕು.” (ಪ್ರಕಟನೆ 20:1-3) ಈ ವಚನಗಳು ಕೇವಲ ಸೈತಾನನು ಅಧೋಲೋಕಕ್ಕೆ ದೊಬ್ಬಲ್ಪಡುವನು ಮತ್ತು ಕಟ್ಟಕಡೆಗೆ ಸ್ವಲ್ಪಕಾಲ ಅವನನ್ನು ಬಿಡುಗಡೆಮಾಡಲಾಗುವುದು ಎಂದು ತಿಳಿಸುತ್ತವೆ. ಇಲ್ಲಿ ದೆವ್ವಗಳ ಕುರಿತು ಏನೂ ಹೇಳಲ್ಪಟ್ಟಿಲ್ಲವಾದರೂ, ಅಧೋಲೋಕದ ಬೀಗದ ಕೈಯನ್ನು ಹಿಡಿದಿರುವ ಆ ದೇವದೂತನು—ಮಹಿಮಾಭರಿತನಾದ ಯೇಸು ಕ್ರಿಸ್ತನು—ಪಿಶಾಚನನ್ನು ಹಿಡಿದು ಅಧೋಲೋಕಕ್ಕೆ ದೊಬ್ಬುವ ಹಾಗೆಯೇ ದೆವ್ವಗಳಿಗೆ ಮಾಡುವನೆಂಬುದು ತರ್ಕಸಮ್ಮತವಾಗಿ ತೋರುತ್ತದೆ.—ಪ್ರಕಟನೆ 9:11.
ಯೇಸು ಕ್ರಿಸ್ತನು 1914ರಲ್ಲಿ ಸ್ವರ್ಗದಲ್ಲಿ ಅರಸನಾದ ಬಳಿಕ, ಅವನು ಸೈತಾನನು ಹಾಗೂ ದೆವ್ವಗಳ ಮೇಲೆ ತೀವ್ರ ಪರಿಣಾಮ ಬೀರಿದ ಒಂದು ಕ್ರಿಯೆಯನ್ನು ಕೈಗೊಂಡನು. ಪ್ರಕಟನೆ 12:7-9 ಹೇಳುವುದು: “ಪರಲೋಕದಲ್ಲಿ ಯುದ್ಧ ನಡೆಯಿತು. ಮೀಕಾಯೇಲನೂ ಅವನ ದೂತರೂ ಘಟಸರ್ಪನ ಮೇಲೆ ಯುದ್ಧಮಾಡುವದಕ್ಕೆ ಹೊರಟರು. ಘಟಸರ್ಪನೂ ಅವನ ದೂತರೂ [ದೆವ್ವಗಳು] ಯುದ್ಧಮಾಡಿ ಸೋತುಹೋದರು, ಮತ್ತು ಪರಲೋಕದೊಳಗೆ ಅವರಿಗೆ ಸ್ಥಾನವು ತಪ್ಪಿಹೋಯಿತು. ಭೂಲೋಕದವರನ್ನೆಲ್ಲಾ ಮರುಳುಗೊಳಿಸುವ ಆ ಮಹಾ ಘಟಸರ್ಪನು ಅಂದರೆ ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಪುರಾತನ ಸರ್ಪವು ದೊಬ್ಬಲ್ಪಟ್ಟು ಭೂಮಿಗೆ ಬಿದ್ದನು; ಅವನ ದೂತರೂ ಅವನೊಂದಿಗೆ ದೊಬ್ಬಲ್ಪಟ್ಟರು.” ಅಂದಿನಿಂದ, ಸೈತಾನನು ಹಾಗೂ ಅವನ ದೆವ್ವಗಳು ಭೂಮಿಯ ಪರಿಸರಕ್ಕೆ ನಿರ್ಬಂಧಿಸಲ್ಪಟ್ಟಿದ್ದಾರೆ. ಭೂಮಿಯನ್ನು ಸೈತಾನನ ದುಷ್ಟ ಪ್ರಭಾವದಿಂದ ವಿಮುಕ್ತಗೊಳಿಸಲು ಯೇಸು ಕ್ರಿಸ್ತನು ಅವನ ಚಟುವಟಿಕೆಗಳನ್ನು ನಿರ್ಬಂಧಿಸುವ ಹಾಗೆಯೇ ದೆವ್ವಗಳಿಗೂ ಮಾಡುವನು ಎಂದು ನಾವು ತರ್ಕಬದ್ಧವಾಗಿ ಊಹಿಸಬಹುದು.
ಬೈಬಲಿನ ಮೊಟ್ಟಮೊದಲನೆಯ ಪ್ರವಾದನೆಯನ್ನು ಸಹ ಗಮನಿಸಿರಿ. ಅದು ಓದುವುದು: “ನಿನಗೂ [ಸೈತಾನನು] ಈ ಸ್ತ್ರೀಗೂ [ಯೆಹೋವನ ಸ್ವರ್ಗೀಯ ಸಂಘಟನೆ], ನಿನ್ನ [ಸೈತಾನನ] ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ [ಯೇಸು ಕ್ರಿಸ್ತನು] ಹಗೆತನವಿರುವ ಹಾಗೆ ಮಾಡುವೆನು [ದೇವರು]. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ ಎಂದು ಹೇಳಿದನು.” (ಆದಿಕಾಂಡ 3:15) ಸರ್ಪನ ತಲೆಯನ್ನು ಜಜ್ಜುವುದರಲ್ಲಿ, ಕ್ರಿಸ್ತನ ಸಾವಿರ ವರ್ಷದಾಳಿಕೆಯ ಸಮಯದಲ್ಲಿ ಸೈತಾನನು ಅಧೋಲೋಕದಲ್ಲಿ ದೊಬ್ಬಲ್ಪಟ್ಟಿರುವ ಸ್ಥಿತಿಯಲ್ಲಿರುವುದು ಒಳಗೂಡಿದೆ. ಜಜ್ಜುವವನ ಹಾಗೂ ಸೈತಾನನ ಸಂತತಿಯ ನಡುವೆ ವೈರತ್ವವಿದೆಯೆಂದು ಪ್ರವಾದನೆ ಮುಂದಕ್ಕೆ ಹೇಳುತ್ತದೆ. ಈ ಸಂತತಿ ಅಥವಾ ಸಂಘಟನೆಯ ಒಂದು ಅದೃಶ್ಯ ಭಾಗವಿದೆ. ಇದರಲ್ಲಿ ದುಷ್ಟ ದೂತರು ಅಥವಾ ದೆವ್ವಗಳು ಸೇರಿದ್ದಾರೆ. ಆದ್ದರಿಂದ ಯೇಸು ಸೈತಾನನನ್ನು ಅಧೋಲೋಕಕ್ಕೆ ದೊಬ್ಬುವಾಗ, ದೆವ್ವಗಳನ್ನೂ ಬಂಧಿಸಿ ಅಧೋಲೋಕಕ್ಕೆ ದೊಬ್ಬುವನೆಂಬ ತೀರ್ಮಾನಕ್ಕೆ ಬರುವುದು ನ್ಯಾಯಸಮ್ಮತವಾಗಿದೆ. ತಾವು ಅಧೋಲೋಕಕ್ಕೆ ಹೋಗುತ್ತೇವೆಂದು ದುರಾತ್ಮಗಳು ತೋರಿಸಿರುವ ಮಹತ್ತಾದ ಭಯವು ಸೂಚಿಸುವುದೇನೆಂದರೆ, ಅವುಗಳಿಗೆ ಮುಂಬರುವ ಈ ನಿರ್ಬಂಧದ ಕುರಿತಾಗಿ ತಿಳಿದಿದೆ.—ಲೂಕ 8:31.
ಪ್ರಕಟನೆ 20:1-3 ಅವುಗಳ ಕುರಿತು ಒತ್ತಿಹೇಳದೆ ಇರುವ ಸಾಧ್ಯತೆ ಇದೆಯೋ? ಬೈಬಲ್ ಅದು ನಿಜವಲ್ಲವೆಂದು ತೋರಿಸುತ್ತದೆ. ಸೈತಾನನ ಅಂತ್ಯದ ಕುರಿತು ತಿಳಿಸುತ್ತಾ ಅದು ಹೇಳುವುದು: “ಇದಲ್ಲದೆ ಅವರನ್ನು ಮರುಳುಗೊಳಿಸಿದ ಸೈತಾನನು ಬೆಂಕಿ ಗಂಧಕಗಳುರಿಯುವ ಕೆರೆಯಲ್ಲಿ ದೊಬ್ಬಲ್ಪಟ್ಟನು. ಅಲ್ಲಿ ಮೃಗವೂ ಸುಳ್ಳುಪ್ರವಾದಿಯೂ ಕೂಡ ಇದ್ದಾರೆ; ಅವರು ಹಗಲಿರುಳು ಯುಗಯುಗಾಂತರಗಳಲ್ಲಿಯೂ ಯಾತನೆಪಡುತ್ತಿರುವರು.” (ಪ್ರಕಟನೆ 20:10) ಮೃಗವೂ ಸುಳ್ಳುಪ್ರವಾದಿಯೂ ರಾಜಕೀಯ ಪ್ರಭುತ್ವಗಳಾಗಿವೆ ಮತ್ತು ಅವು ಸೈತಾನನ ದೃಶ್ಯ ಸಂಘಟನೆಯ ಭಾಗವಾಗಿವೆ. (ಪ್ರಕಟನೆ 13:1, 2, 11-14; 16:13, 14) ಅರ್ಮಗೆದೋನಿನಲ್ಲಿ, ದೇವರ ರಾಜ್ಯವು ಲೋಕದ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡುವಾಗ ಇವು ಅಂತ್ಯವನ್ನು ಕಾಣುತ್ತವೆ. (ದಾನಿಯೇಲ 2:44) ‘ಪಿಶಾಚನಿಗೂ ಅವನ ದೂತರಿಗೂ ಸಿದ್ಧಮಾಡಿರುವ ನಿತ್ಯ ಬೆಂಕಿಯ’ ಕುರಿತು ಬೈಬಲ್ ಹೇಳುತ್ತದೆ. (ಮತ್ತಾಯ 25:41) ಮೃಗವೂ ಸುಳ್ಳುಪ್ರವಾದಿಯೂ ದೊಬ್ಬಲ್ಪಟ್ಟ ಅದೇ “ಬೆಂಕಿ ಗಂಧಕಗಳುರಿಯುವ ಕೆರೆಯಲ್ಲಿ” ಸೈತಾನನು ಹಾಗೂ ಅವನ ದೆವ್ವಗಳು ದೊಬ್ಬಲ್ಪಡುವರು, ಅಂದರೆ ಅವರೂ ನಿತ್ಯವಾಗಿ ನಾಶವಾಗುವರು. ಸೈತಾನನ ಸಂತತಿಯ ದೃಶ್ಯ ಭಾಗಗಳಿಗಿಂತ ಬಲಶಾಲಿಯಾಗಿರುವ ಅದೃಶ್ಯ ಭಾಗವು ಅಂದರೆ ದೆವ್ವಗಳು ಅರ್ಮಗೆದೋನಿನಲ್ಲಿ ನಾಶವಾಗುವುದಾದರೆ, ಅವುಗಳು ಮೃಗ ಹಾಗೂ ಸುಳ್ಳುಪ್ರವಾದಿಗಳೊಡನೆ ಆ ಸಾಂಕೇತಿಕ ಕೆರೆಯಲ್ಲಿರುವುದಾಗಿ ಖಂಡಿತವಾಗಿಯೂ ಹೇಳಲಾಗುತ್ತಿತ್ತು. ಅವುಗಳ ಕುರಿತು ಪ್ರಕಟನೆ 20:10 ತಿಳಿಸುವುದಿಲ್ಲವಾದ್ದರಿಂದ ದೆವ್ವಗಳು ಅರ್ಮಗೆದೋನಿನಲ್ಲಿ ನಾಶಗೊಳಿಸಲ್ಪಡುವುದಿಲ್ಲ ಎಂಬುದನ್ನು ಅದು ಸೂಚಿಸುತ್ತದೆ.
ಸೈತಾನನ ಸಂತತಿಯ ದೃಶ್ಯ ಭಾಗದೊಂದಿಗೆ ದೆವ್ವಗಳೂ ಅರ್ಮಗೆದೋನಿನಲ್ಲಿ ನಾಶಗೊಳಿಸಲ್ಪಡುವ ಕಾರಣ,ದೆವ್ವಗಳು ಅಧೋಲೋಕಕ್ಕೆ ದೊಬ್ಬಲ್ಪಡುವವು ಎಂದು ಸ್ಪಷ್ಟವಾಗಿ ತಿಳಿಸಲ್ಪಟ್ಟಿರುವುದಿಲ್ಲ, ಆದುದರಿಂದ ಅವು ಅಲ್ಲಿಂದ ಬಿಡುಗಡೆ ಮಾಡಲ್ಪಡುವವು ಎಂಬುದೂ ನಿರ್ದಿಷ್ಟವಾಗಿ ತಿಳಿಸಲ್ಪಟ್ಟಿಲ್ಲ. ಆದರೂ, ಪಿಶಾಚನಿಗಾದ ಅಂತ್ಯವೇ ಅವುಗಳಿಗೂ ಆಗುವುದು. ಪಿಶಾಚನೊಂದಿಗೆ ಬಿಡುಗಡೆಮಾಡಲ್ಪಟ್ಟು ಮತ್ತು ಸಾವಿರ ವರ್ಷದ ಅಂತ್ಯದಲ್ಲಿ ಮಾನವಕುಲದ ಕೊನೆ ಪರೀಕ್ಷೆಯಲ್ಲಿ ಅವನೊಂದಿಗೆ ಜೊತೆಗೂಡಿದ ನಂತರ, ದೆವ್ವಗಳು ಸಹ ಬೆಂಕಿ ಗಂಧಕಗಳುರಿಯುವ ಕೆರೆಯಲ್ಲಿ ದೊಬ್ಬಲ್ಪಡುವರು ಮತ್ತು ಹೀಗೆ ನಿತ್ಯ ನಾಶನವನ್ನು ಅನುಭವಿಸುವರು.—ಪ್ರಕಟನೆ 20:7-9.
ಆದಕಾರಣ, ಪ್ರಕಟನೆ 20:1-3 ಕೇವಲ ಸೈತಾನನು ಬಂಧಿಸಲ್ಪಟ್ಟು ನಿಷ್ಕ್ರಿಯತೆಯ ಅಧೋಲೋಕಕ್ಕೆ ದೊಬ್ಬಲ್ಪಡುವುದರ ಕುರಿತು ಮಾತಾಡುತ್ತದಾದರೂ, ಅವನ ದೂತರು ಸಹ ಬಂಧಿಸಲ್ಪಟ್ಟು ಅಧೋಲೋಕಕ್ಕೆ ದೊಬ್ಬಲ್ಪಡುವರೆಂಬ ತರ್ಕಬದ್ಧ ತೀರ್ಮಾನಕ್ಕೆ ನಾವು ಬರಬಹುದು. ಕ್ರಿಸ್ತನ ಸಾವಿರ ವರ್ಷದ ಆಳಿಕೆಯ ಸಮಯದಲ್ಲಿ, ಭೂಮಿಯನ್ನು ಪರದೈಸವಾಗಿ ಮಾರ್ಪಡಿಸುವ ಮತ್ತು ಮಾನವಕುಲವನ್ನು ಪರಿಪೂರ್ಣತೆಗೆ ಪುನಃಸ್ಥಾಪಿಸುವ ದೇವರ ಉದ್ದೇಶದ ನೆರವೇರಿಕೆಯನ್ನು ಸೈತಾನನಾಗಲಿ ಅವನ ದೆವ್ವಗಳ ಗುಂಪೇ ಆಗಲಿ ತಡೆಯುವಂತೆ ಬಿಡಲಾಗದು.