ಜನರು ಎಷ್ಟು ವರ್ಷಕಾಲ ಬದುಕಬಲ್ಲರು?
ಜನರು ಎಷ್ಟು ವರ್ಷಕಾಲ ಬದುಕಬಲ್ಲರು?
ಇಸವಿ 1513, ಮಾರ್ಚ್ 3ರಂದು, ಸ್ಪ್ಯಾನಿಷ್ ಪರಿಶೋಧಕ ವಾನ್ ಪಾನ್ಸೆ ಡೇ ಲೇಆನ್, ಅಸಾಮಾನ್ಯವಾದ ಒಂದು ಸಮುದ್ರಯಾನಕ್ಕಾಗಿ ಹೊರಟನು. ಅವನು ಬಿಮಿನೀ ಎಂಬ ದ್ವೀಪವನ್ನು ತಲಪುವ ನಿರೀಕ್ಷೆಯಲ್ಲಿ ಪೋರ್ಟರೀಕೊದಿಂದ ನೌಕಾಯಾನವನ್ನು ಆರಂಭಿಸಿದನು. ಒಂದು ಕಥಾಸಂಗ್ರಹಕ್ಕನುಸಾರ, ಅವನು ಚಮತ್ಕಾರದ ಒರತೆಯನ್ನು, ‘ಯೌವನದ ಚಿಲುಮೆ’ಯನ್ನು ಅರಸುತ್ತಾ ಹೋದನು. ಆದರೆ ಅವನು ಹೋಗಿ ತಲಪಿದ್ದು, ಈಗ ಯಾವುದು ಅಮೆರಿಕದ ಫ್ಲಾರಿಡ ರಾಜ್ಯವೆಂದು ಕರೆಯಲ್ಪಡುತ್ತದೊ ಆ ಸ್ಥಳವನ್ನು. ಅಸ್ತಿತ್ವದಲ್ಲೇ ಇಲ್ಲದಿದ್ದ ಆ ಚಿಲುಮೆ ಅವನಿಗೆ ಸಿಗಲಿಲ್ಲ ಎಂದು ಹೇಳಬೇಕಾಗಿಲ್ಲ.
ಇಂದು, ಸಾಮಾನ್ಯವಾಗಿ ಮನುಷ್ಯರು 70 ಇಲ್ಲವೆ 80 ವರ್ಷಕ್ಕಿಂತಲೂ ಹೆಚ್ಚು ಸಮಯ ಜೀವಿಸುವುದಿಲ್ಲ ಎಂಬುದು ವಾಸ್ತವಾಂಶ. ಬೈಬಲಿನಲ್ಲಿ ಎಷ್ಟೋ ಹೆಚ್ಚು ದೀರ್ಘಾವಧಿಯ ಆಯುಸ್ಸುಳ್ಳವರ ಕುರಿತಾಗಿ ಪಟ್ಟಿಮಾಡಲಾಗಿದೆಯಾದರೂ, ಇಸವಿ 2002 ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್, ಇದು ವರೆಗೆ ಜೀವಿಸಿರುವ ಅತಿ ವೃದ್ಧ ವ್ಯಕ್ತಿಯ ವಯಸ್ಸು 122 ವರ್ಷ 164 ದಿನ ಎಂದು ಹೇಳುತ್ತದೆ. (ಆದಿಕಾಂಡ 5:3-32) ಆದರೆ ಜೀವಿನೀತಿಜ್ಞ ಜಾನ್ ಹಾರಿಸ್ ಹೇಳಿದ್ದು: “ಈಗ ಹೊಸ ಸಂಶೋಧನೆಯು, ವೃದ್ಧಾಪ್ಯ—ಮತ್ತು ಮರಣ ಸಹ—ಅನಿವಾರ್ಯ ಆಗಿಲ್ಲದಿರಬಹುದಾದ ಒಂದು ಜಗತ್ತಿನ ಇಣುಕುನೋಟವನ್ನು ಕೊಡುತ್ತದೆ.” 21ನೆಯ ಶತಮಾನದ ಹಲವಾರು ಸಂಶೋಧಕರು, “ಬಹುಮಟ್ಟಿಗೆ ಅಮರತ್ವ,” “2099ರೊಳಗೆ ಮಾನವರ ಜೀವನಾಯುಷ್ಯಕ್ಕೆ ಮಿತಿಯಿಲ್ಲದಿರುವಿಕೆ,” “ಜೀವಕಣಗಳು ಅಮರವಾಗಿ ವೃದ್ಧಿಸುತ್ತಾ ಇರುವ ಸಾಮರ್ಥ್ಯ” ಮುಂತಾದವುಗಳ ಬಗ್ಗೆ ಮಾತಾಡುತ್ತಾರೆ.
ಶಾಶ್ವತ ಜೀವನದ ಕನಸು (ಇಂಗ್ಲಿಷ್) ಎಂಬ ತನ್ನ ಪುಸ್ತಕದಲ್ಲಿ ಮಾರ್ಕ್ ಬೆನೆಕೇ ಹೇಳಿದ್ದು: “ನಮ್ಮ ಜೀವಮಾನದಲ್ಲಿ ಬಹುಮಟ್ಟಿಗೆ ಸಂಪೂರ್ಣ ದೇಹವು ಹಲವಾರು ಸಲ ನವೀಕರಿಸಲ್ಪಡುತ್ತದೆ. . . . ಸುಮಾರು ಏಳು ವರ್ಷಕ್ಕೊಮ್ಮೆ ನಾವು ನಿಜವಾಗಲೂ ಹೊಸ ವ್ಯಕ್ತಿಗಳಾಗುತ್ತೇವೆ.” ಆದರೆ ಇದು ಹೀಗೆಯೇ ಅಂತ್ಯವಿಲ್ಲದೆ ಮುಂದುವರಿಯುವುದಿಲ್ಲ ಏಕೆಂದರೆ ಜೀವಕಣಗಳು ಇಂತಿಷ್ಟೇ ಸಂಖ್ಯೆಯ ವಿಭಜನೆಗಳ ನಂತರ ವರ್ಧಿಸುವುದನ್ನು ನಿಲ್ಲಿಸುತ್ತವೆ. ಹೀಗಾಗದೇ ಇರುತ್ತಿದ್ದಲ್ಲಿ, “ಮಾನವ ದೇಹವು ದೀರ್ಘಕಾಲ—ಶಾಶ್ವತವಾಗಿಯೂ—ತನ್ನನ್ನೇ ಮತ್ತೆ ಮತ್ತೆ ನವೀಕರಿಸುತ್ತಿತ್ತು” ಎಂದು ಬೆನೆಕೇ ಹೇಳುತ್ತಾರೆ.
ಮಾನವ ಮಿದುಳಿನ ದಂಗುಬಡಿಸುವ ಸಾಮರ್ಥ್ಯವನ್ನೂ ಪರಿಗಣಿಸಿರಿ. ಅದು, ನಮ್ಮ ಅಲ್ಪ ಜೀವನಕಾಲದಲ್ಲಿ ನಾವು ಬಳಸಬಹುದಾದಕ್ಕಿಂತಲೂ ಎಷ್ಟೋ ಹೆಚ್ಚು ಸಾಮರ್ಥ್ಯವುಳ್ಳದ್ದಾಗಿದೆ. ಎನ್‌ಸೈಕ್ಲಪೀಡಿಯಾ ಬ್ರಿಟಾನಿಕಾಕ್ಕನುಸಾರ ಮಾನವ ಮಿದುಳು,
“ಒಬ್ಬ ವ್ಯಕ್ತಿಯು ತನ್ನ ಇಡೀ ಜೀವಮಾನಕಾಲದಲ್ಲಿ ಉಪಯೋಗಿಸಲು ಸಾಧ್ಯವಿರುವುದಕ್ಕಿಂತಲೂ ಎಷ್ಟೋ ಹೆಚ್ಚು ಶಕ್ತಿಯುಳ್ಳದ್ದಾಗಿದೆ.” (1976ರ ಆವೃತ್ತಿ, ಸಂಪುಟ 12, ಪುಟ 998) ಡೇವಿಡ್ ಎ. ಸೋಸರಿಂದ ಬರೆಯಲ್ಪಟ್ಟ ಮಿದುಳು ಕಲಿಯುವ ವಿಧ (ಇಂಗ್ಲಿಷ್) ಎಂಬ ಪುಸ್ತಕವು ಹೇಳುವುದು: “ಮಾಹಿತಿಯನ್ನು ಶೇಖರಿಸಿಡುವ ಮಿದುಳಿನ ಸಾಮರ್ಥ್ಯವು ಕಾರ್ಯತಃ ಅಸೀಮಿತವಾಗಿದೆ.”—ಪುಟ 78, ಎರಡನೇ ಆವೃತ್ತಿ, ಕಾಪಿರೈಟ್ 2001.ಸಂಶೋಧಕರು ನಮ್ಮ ಶರೀರದಲ್ಲಿ, ನಾವು ಸಾಯುತ್ತಿರುವುದಕ್ಕೆ ಯಾವುದೇ ಕಾರಣವನ್ನು ಕಂಡುಕೊಳ್ಳಲು ಶಕ್ತರಾಗಿಲ್ಲವೇಕೆ? ಮಾನವ ಮಿದುಳಿಗೆ ಇಷ್ಟೊಂದು ಬೃಹತ್ಪ್ರಮಾಣದ ಸಾಮರ್ಥ್ಯ ಇರುವುದೇಕೆ? ಸದಾಕಾಲ ಜ್ಞಾನವನ್ನು ತೆಗೆದುಕೊಳ್ಳುತ್ತಾ ಇರಲಿಕ್ಕಾಗಿ ನಾವು ವಿನ್ಯಾಸಿಸಲ್ಪಟ್ಟಿದ್ದಿರಬಹುದೊ? ನಾವು ಶಾಶ್ವತ ಜೀವನದ ಕುರಿತಾಗಿ ಊಹಿಸಲು ಸಾಧ್ಯವಿರುವುದಾದರೂ ಹೇಗೆ?
ಬೈಬಲ್ ತಿಳಿಸುವುದು: “ಮನುಷ್ಯರ ಹೃದಯದಲ್ಲಿ [ದೇವರು] ಅನಂತಕಾಲದ ಯೋಚನೆಯನ್ನು ಇಟ್ಟಿದ್ದಾನೆ; ಆದರೂ ದೇವರು ಆದ್ಯಂತವಾಗಿ ನಡಿಸುತ್ತಿರುವ ಕೆಲಸವನ್ನು ಅವರು ಗ್ರಹಿಸಲಾರದಂತೆ ಮಾಡಿದ್ದಾನೆ.” (ಪ್ರಸಂಗಿ 3:11) ಈ ಮಾತುಗಳು ದೇವರು ನಮ್ಮಲ್ಲಿ ಶಾಶ್ವತವಾಗಿ ಜೀವಿಸುವ ವಿಚಾರವನ್ನು ನೆಟ್ಟಿದ್ದಾನೆಂಬುದನ್ನು ಸೂಚಿಸುತ್ತವೆ. ಹಾಗಿದ್ದಲ್ಲಿ ದೇವರ ಬಗ್ಗೆ ಮತ್ತು ಆತನ ಕೃತಿಗಳ ಬಗ್ಗೆ ನಮಗೆ ಯಾವಾಗಲೂ ಏನಾದರೂ ಕಲಿಯಲಿಕ್ಕಿರುವುದು. ನಾವು ಲೆಕ್ಕವಿಲ್ಲದಷ್ಟು ವರ್ಷಗಳ ವರೆಗೆ, ಹೌದು ಶಾಶ್ವತವಾಗಿ ಜೀವಿಸಿದ್ದಲ್ಲಿ ದೇವರ ಸೃಷ್ಟಿಕಾರ್ಯದ ಅದ್ಭುತಗಳ ಕುರಿತಾಗಿ ಯಾವಾಗಲೂ ಹೆಚ್ಚೆಚ್ಚನ್ನು ಕಲಿಯಲು ಶಕ್ತರಾಗಿರುವೆವು.
ಯೇಸು ಕ್ರಿಸ್ತನ ಮಾತುಗಳು ಸಹ, ಮಾನವರಿಗೆ ಅನಂತ ಜೀವನವು ಸಾಧ್ಯವೆಂದು ತೋರಿಸುತ್ತವೆ. ಅವನಂದದ್ದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.” (ಓರೆ ಅಕ್ಷರಗಳು ನಮ್ಮವು.) (ಯೋಹಾನ 17:3) ನಿಮ್ಮ ಅಭಿಪ್ರಾಯವೇನು? ನೀವು ಶಾಶ್ವತವಾಗಿ ಜೀವಿಸಲು ಬಯಸುತ್ತೀರೊ?
[ಪುಟ 3ರಲ್ಲಿರುವ ಚಿತ್ರಗಳು]
ವಾನ್ ಪಾನ್ಸೆ ಡೇ ಲೇಆನ್ ‘ಯೌವನದ ಚಿಲುಮೆ’ಯನ್ನು ಹುಡುಕಿಕೊಂಡು ಹೋದನು
[ಕೃಪೆ]
ಪಾನ್ಸೆ ಡೇ ಲೇಆನ್: Harper’s Encyclopædia of United States History