ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಪೌಲನು 2 ಕೊರಿಂಥ 6:14ರಲ್ಲಿ ‘ಕ್ರಿಸ್ತನಂಬಿಕೆಯಿಲ್ಲದವರು’ ಎಂಬ ಪದವನ್ನು ಉಪಯೋಗಿಸುವಾಗ ಯಾರನ್ನು ಸೂಚಿಸುತ್ತಿದ್ದಾನೆ?

“ನೀವು ಕ್ರಿಸ್ತನಂಬಿಕೆಯಿಲ್ಲದವರೊಂದಿಗೆ ಸೇರಿ ಇಜ್ಜೋಡಾಗಬೇಡಿರಿ” ಎಂದು ನಾವು 2 ಕೊರಿಂಥ 6:14ರಲ್ಲಿ ಓದುತ್ತೇವೆ. ನಾವು ಪೂರ್ವಾಪರವನ್ನು ನೋಡುವಲ್ಲಿ, ಪೌಲನು ಕ್ರೈಸ್ತ ಸಭೆಯ ಭಾಗವಾಗಿರದಿದ್ದವರ ಕುರಿತು ಮಾತಾಡುತ್ತಿದ್ದನೆಂದು ವ್ಯಕ್ತವಾಗುತ್ತದೆ. ಈ ತಿಳಿವಳಿಕೆಯನ್ನು ಪೌಲನು ಇತರ ಬೈಬಲ್‌ ವಚನಗಳಲ್ಲಿ ಉಪಯೋಗಿಸಿದ “ಕ್ರಿಸ್ತನಂಬಿಕೆಯಿಲ್ಲದವರು” ಅಥವಾ ‘ನಂಬದಿರುವವನು’ ಎಂಬ ಪದಗಳು ಬೆಂಬಲಿಸುತ್ತವೆ.

ದೃಷ್ಟಾಂತಕ್ಕೆ ಪೌಲನು, ಕ್ರೈಸ್ತರು “ಕ್ರಿಸ್ತಭಕ್ತರಲ್ಲದವರ” ಅಥವಾ ಕ್ರಿಸ್ತನಂಬಿಕೆಯಿಲ್ಲದವರ “ಮುಂದೆ” ಕೋರ್ಟಿಗೆ ಹೋಗುತ್ತಿರುವುದಕ್ಕಾಗಿ ಅವರನ್ನು ಖಂಡಿಸಿದನು. (1 ಕೊರಿಂಥ 6:6) ಇಲ್ಲಿ ತಿಳಿಸಲ್ಪಟ್ಟ ನಂಬಿಕೆಯಿಲ್ಲದವರು ಕೊರಿಂಥದ ಕೋರ್ಟ್‌ ವ್ಯವಸ್ಥೆಯಲ್ಲಿ ಸೇವೆ ಮಾಡುತ್ತಿದ್ದ ನ್ಯಾಯಾಧೀಶರಾಗಿದ್ದರು. ಪೌಲನು ತನ್ನ ಎರಡನೆಯ ಪತ್ರದಲ್ಲಿ, ಸೈತಾನನು “ನಂಬಿಕೆಯಿಲ್ಲದವರ ಮನಸ್ಸನ್ನು ಮಂಕುಮಾಡಿದನು” ಎಂದು ತಿಳಿಸಿದನು. ಇಂತಹ ನಂಬಿಕೆಯಿಲ್ಲದವರ ಕಣ್ಣುಗಳಿಗೆ ಸುವಾರ್ತೆಯು ಕಾಣದಂತೆ ‘ಮುಸುಕು’ ಹಾಕಲ್ಪಟ್ಟಿದೆ. ಇದರರ್ಥವು, ಈ ಅವಿಶ್ವಾಸಿಗಳು ಯೆಹೋವನನ್ನು ಸೇವಿಸಲು ಯಾವ ಒಲವನ್ನೂ ತೋರಿಸಲಿಲ್ಲ ಎಂಬುದೇ. ಪೌಲನು ಆ ಮೊದಲೇ ವಿವರಿಸಿದಂತೆ, ‘ಅವರ ಹೃದಯವು ಕರ್ತನ [“ಯೆಹೋವನ,” NW] ಕಡೆಗೆ ತಿರುಗಿಕೊಂಡಾಗ ಆ ಮುಸುಕು ತೆಗೆಯಲ್ಪಡುತ್ತದೆ.’​—⁠2 ಕೊರಿಂಥ 3:16; 4:⁠4.

ನಂಬದವರಲ್ಲಿ ಕೆಲವರು ನಿಯಮರಾಹಿತ್ಯ ಅಥವಾ ವಿಗ್ರಹಾರಾಧನೆಯಲ್ಲಿ ಸೇರಿಕೊಂಡಿರುತ್ತಾರೆ. (2 ಕೊರಿಂಥ 6:​15, 16) ಆದರೂ, ನಂಬದವರಲ್ಲಿ ಎಲ್ಲರೂ ಯೆಹೋವನ ಸೇವಕರನ್ನು ವಿರೋಧಿಸುವುದಿಲ್ಲ. ಕೆಲವರು ಸತ್ಯದಲ್ಲಿ ಆಸಕ್ತಿ ತೋರಿಸುತ್ತಾರೆ. ಇನ್ನೂ ಅನೇಕರು ತಮ್ಮ ವಿವಾಹ ಸಂಗಾತಿಗಳು ಕ್ರೈಸ್ತರಾಗಿದ್ದರೂ ಅವರೊಂದಿಗೆ ತಮ್ಮ ಬಾಳನ್ನು ಮುಂದುವರಿಸಲು ಇಷ್ಟಪಡುತ್ತಾರೆ. (1 ಕೊರಿಂಥ 7:12-14; 10:27; 14:22-25; 1 ಪೇತ್ರ 3:1, 2) ಆದರೆ ಪೌಲನು ಎಲ್ಲಾ ಕಡೆಯಲ್ಲೂ “ಕ್ರಿಸ್ತನಂಬಿಕೆಯಿಲ್ಲದವರು” ಇಲ್ಲವೆ ‘ನಂಬದಿರುವವನು’ ಎಂಬ ಪದವನ್ನು, ಮೇಲೆ ತಿಳಿಸಲ್ಪಟ್ಟಿರುವಂತೆ “ಕರ್ತನಲ್ಲಿ ನಂಬಿಕೆ” ಇಡುವವರಿಂದ ರಚಿತವಾದ ಕ್ರೈಸ್ತ ಸಭೆಯ ಭಾಗವಾಗಿರದೇ ಇರುವವರಿಗೆ ಅನ್ವಯಿಸುತ್ತಾನೆ.​—⁠ಅ. ಕೃತ್ಯಗಳು 2:41; 5:14; 8:12, 13.

ಎರಡನೆಯ ಕೊರಿಂಥ 6:14ರಲ್ಲಿ ಕಂಡುಬರುವ ಮೂಲತತ್ತ್ವವು ಕ್ರೈಸ್ತರಿಗೆ ಜೀವನದ ಸಕಲ ಸನ್ನಿವೇಶಗಳಲ್ಲಿ ಅತ್ಯಮೂಲ್ಯವಾದ ಮಾರ್ಗದರ್ಶಿಯಾಗಿದೆ. ಅನೇಕವೇಳೆ ಈ ಮೂಲತತ್ತ್ವವನ್ನು, ವಿವಾಹ ಸಂಗಾತಿಯನ್ನು ಹುಡುಕುತ್ತಿರುವ ಕ್ರೈಸ್ತರಿಗೆ ವಿವೇಕಯುಕ್ತ ಸಲಹೆಯನ್ನು ಕೊಡುವಾಗ ಉಲ್ಲೇಖಿಸಲಾಗುತ್ತದೆ. (ಮತ್ತಾಯ 19:​4-6) ಸಮರ್ಪಿತ, ಸ್ನಾತ ಕ್ರೈಸ್ತನೊಬ್ಬನು ವಿವೇಕಯುತವಾಗಿಯೇ ನಂಬಿಕೆಯಿಲ್ಲದವರಲ್ಲಿ ವಿವಾಹ ಸಂಗಾತಿಯನ್ನು ಹುಡುಕದಿರುತ್ತಾನೆ, ಏಕೆಂದರೆ ನಂಬಿಕೆಯಿಲ್ಲದವರ ಮಟ್ಟಗಳು, ಗುರಿಗಳು ಮತ್ತು ವಿಶ್ವಾಸಗಳು ಸತ್ಯ ಕ್ರೈಸ್ತರದ್ದಕ್ಕಿಂತ ಎಷ್ಟೋ ಭಿನ್ನವಾಗಿವೆ.

ಆದರೆ ಬೈಬಲ್‌ ಅಧ್ಯಯನವನ್ನು ಮಾಡುತ್ತ ಕ್ರೈಸ್ತ ಸಭೆಯವರೊಂದಿಗೆ ಸಹವಾಸಿಸುತ್ತಿರುವವರ ವಿಷಯದಲ್ಲಿ ಏನು ಹೇಳಬಹುದು? ಅಸ್ನಾತ ಪ್ರಚಾರಕರ ಕುರಿತು ಏನನ್ನಬಹುದು? ಅವರು ನಂಬಿಕೆಯಿಲ್ಲದವರೊ? ಇಲ್ಲ. ಸುವಾರ್ತೆಯ ಸತ್ಯವನ್ನು ಅಂಗೀಕರಿಸಿ ಈಗ ದೀಕ್ಷಾಸ್ನಾನದತ್ತ ಏಕಪ್ರಕಾರವಾಗಿ ಪ್ರಗತಿಮಾಡುತ್ತಿರುವವರನ್ನು ನಂಬಿಕೆಯಿಲ್ಲದವರೆಂದು ಕರೆಯಬಾರದು. (ರೋಮಾಪುರ 10:10; 2 ಕೊರಿಂಥ 4:13) ಕೊರ್ನೇಲ್ಯನನ್ನು ದೀಕ್ಷಾಸ್ನಾನಕ್ಕೆ ಮೊದಲೇ, “ಭಕ್ತನೂ . . . ದೇವರಿಗೆ ಭಯಪಡುವವನೂ” ಎಂದು ಕರೆಯಲಾಗಿತ್ತು.​—⁠ಅ. ಕೃತ್ಯಗಳು 10:⁠2.

ಹಾಗಾದರೆ, ಕಟ್ಟುನಿಟ್ಟಾಗಿ ಹೇಳುವುದಾದರೆ 2 ಕೊರಿಂಥ 6:14 ಒಬ್ಬ ಅಸ್ನಾತ ಪ್ರಚಾರಕರಿಗೆ ಅನ್ವಯಿಸದೇ ಇರುವುದರಿಂದ, ಸಮರ್ಪಿತ ಕ್ರೈಸ್ತನೊಬ್ಬನು ಅಸ್ನಾತ ಪ್ರಚಾರಕಳೆಂದು ಅಂಗೀಕರಿಸಲ್ಪಟ್ಟವಳೊಂದಿಗೆ ಪ್ರಣಯ ಮತ್ತು ವಿವಾಹವನ್ನು ಬೆನ್ನಟ್ಟುವುದು ವಿವೇಕಪ್ರದವೊ? ಇಲ್ಲ, ಅದು ವಿವೇಕಪ್ರದವಲ್ಲ. ಅದೇಕೆ? ಕ್ರೈಸ್ತ ವಿಧವೆಯರ ಸಂಬಂಧದಲ್ಲಿ ಪೌಲನು ಕೊಟ್ಟ ನೇರವಾದ ಸಲಹೆಯ ಕಾರಣದಿಂದಲೇ. ಪೌಲನು ಬರೆದುದು: “ಆಕೆಯು ಬೇಕಾದವನನ್ನು ಮದುವೆಮಾಡಿಕೊಳ್ಳುವದಕ್ಕೆ ಸ್ವತಂತ್ರಳಾಗಿದ್ದಾಳೆ. ಆದರೆ ಈ ಕಾರ್ಯವು ಕರ್ತನ ಶಿಷ್ಯರಿಗೆ ತಕ್ಕಂತೆ” ಅಥವಾ ಕರ್ತನಲ್ಲಿ ಮಾತ್ರ “ನಡೆಯಲಿ.” (1 ಕೊರಿಂಥ 7:​39, ಓರೆ ಅಕ್ಷರಗಳು ನಮ್ಮವು.) ಆ ಸಲಹೆಯ ಮೇರೆಗೆ, ಸಮರ್ಪಿತ ಕ್ರೈಸ್ತರು ವಿವಾಹ ಸಂಗಾತಿಗಳನ್ನು “ಕರ್ತನಲ್ಲಿ”ರುವವರಿಂದ ಮಾತ್ರ ಹುಡುಕುವಂತೆ ಪ್ರೋತ್ಸಾಹಿಸಲ್ಪಡುತ್ತಾರೆ.

“ಕರ್ತನಲ್ಲಿ” ಮತ್ತು ಅದಕ್ಕೆ ಸಂಬಂಧಿಸಿದ “ಕ್ರಿಸ್ತನಲ್ಲಿ” ಎಂಬ ಪದಗಳ ಅರ್ಥವೇನು? ಪೌಲನು ರೋಮಾಪುರ 16:​8-10 ಮತ್ತು ಕೊಲೊಸ್ಸೆ 4:7ರಲ್ಲಿ “ಕ್ರಿಸ್ತನ ಸೇವೆಯಲ್ಲಿ” ಮತ್ತು “ಕರ್ತನಲ್ಲಿ” ಇದ್ದ ವ್ಯಕ್ತಿಗಳ ಕುರಿತು ಮಾತಾಡುತ್ತಾನೆ. ನೀವು ಆ ವಚನಗಳನ್ನು ಓದುವಲ್ಲಿ, ಇವರು ‘ಜೊತೆಕೆಲಸದವರು,’ ‘ಪರಿಶೋಧಿತರು,’ ‘ಪ್ರಿಯರಾದ ಸಹೋದರರು,’ ‘ನಂಬಿಗಸ್ತ ಸೇವಕರು’ ಮತ್ತು ‘ಜೊತೆಯ ದಾಸರು’ ಆಗಿದ್ದಾರೆಂದು ಕಂಡುಕೊಳ್ಳುವಿರಿ.

ಒಬ್ಬನು ಯಾವಾಗ “ಕರ್ತನಲ್ಲಿ . . . ದಾಸನು” ಆಗಿ ಪರಿಣಮಿಸುತ್ತಾನೆ? ಅವನು ಒಬ್ಬ ದಾಸನು ಮಾಡಬೇಕಾದದ್ದನ್ನು ಇಷ್ಟಪೂರ್ವಕವಾಗಿ ಮಾಡಿ ತನ್ನನ್ನು ನಿರಾಕರಿಸುವಾಗಲೇ. ಯೇಸು ವಿವರಿಸುವುದು: “ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಹಿಂಸಾ ಕಂಬವನ್ನು ಹೊತ್ತುಕೊಂಡು ನನ್ನ ಹಿಂದೆ ಬರಲಿ.” (ಮತ್ತಾಯ 16:24, NW) ಒಬ್ಬ ವ್ಯಕ್ತಿಯು ತನ್ನನ್ನು ದೇವರಿಗೆ ಸಮರ್ಪಿಸಿಕೊಳ್ಳುವಾಗ, ಕ್ರಿಸ್ತನನ್ನು ಅನುಕರಿಸಲು ಮತ್ತು ದೇವರ ಚಿತ್ತಕ್ಕೆ ತನ್ನನ್ನು ಪೂರ್ತಿಯಾಗಿ ಅಧೀನಪಡಿಸಿಕೊಳ್ಳಲು ತೊಡಗುತ್ತಾನೆ. ಆ ಬಳಿಕ ಅವನು ತನ್ನನ್ನು ದೀಕ್ಷಾಸ್ನಾನಕ್ಕೆ ಒಪ್ಪಿಸಿಕೊಟ್ಟು, ಯೆಹೋವ ದೇವರ ಮುಂದೆ ಸಮ್ಮತಿಯ ನಿಲುವಿರುವ ಒಬ್ಬ ದೀಕ್ಷೆ ಪಡೆದ ಶುಶ್ರೂಷಕನಾಗುತ್ತಾನೆ. * ಹೀಗೆ, ‘ಕರ್ತನಲ್ಲಿ’ ಮದುವೆಯಾಗುವುದೆಂದರೆ, ನಿಜವಾಗಿ ನಂಬಿಕೆಯಲ್ಲಿದ್ದೇನೆಂದು, “ದೇವರಿಗೂ ಕರ್ತನಾದ ಯೇಸು ಕ್ರಿಸ್ತನಿಗೂ ದಾಸನಾಗಿರುವ” ಸಮರ್ಪಿತನೆಂದು ಸ್ಪಷ್ಟವಾಗಿ ತೋರಿಸಿರುವವನನ್ನು ಮದುವೆಯಾಗುವುದೆಂದರ್ಥ.​—⁠ಯಾಕೋಬ 1:⁠1.

ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್‌ ಅಧ್ಯಯನ ಮಾಡುತ್ತಿರುವ ಮತ್ತು ಉತ್ತಮವಾದ ಆಧ್ಯಾತ್ಮಿಕ ಪ್ರಗತಿಯನ್ನು ಮಾಡುತ್ತಿರುವ ವ್ಯಕ್ತಿಯು ಪ್ರಶಂಸಾರ್ಹನು. ಆದರೆ ಅವನಿನ್ನೂ ಯೆಹೋವನಿಗೆ ತನ್ನನ್ನು ಸಮರ್ಪಿಸಿ, ಸೇವೆ ಹಾಗೂ ತ್ಯಾಗದ ಜೀವನಕ್ಕೆ ತನ್ನನ್ನು ಒಪ್ಪಿಸಿಕೊಟ್ಟಿರುವುದಿಲ್ಲ. ಅವನಿನ್ನೂ ಅಗತ್ಯವಿರುವ ಬದಲಾವಣೆಗಳನ್ನು ಮಾಡುತ್ತಿದ್ದಾನೆ. ಆದುದರಿಂದ, ಮದುವೆಯಂಥ ಜೀವನದ ಇನ್ನೊಂದು ದೊಡ್ಡ ಬದಲಾವಣೆಯ ಕುರಿತು ಯೋಚಿಸುವುದಕ್ಕೆ ಮೊದಲು ಅವನು ಸಮರ್ಪಿತ, ಸ್ನಾತ ಕ್ರೈಸ್ತನಾಗುವುದರಲ್ಲಿ ಒಳಗೊಂಡಿರುವ ದೊಡ್ಡ ಬದಲಾವಣೆಗಳನ್ನು ಪೂರ್ಣಗೊಳಿಸುವುದು ಆವಶ್ಯಕ.

ಬೈಬಲ್‌ ಅಧ್ಯಯನದಲ್ಲಿ ಒಳ್ಳೆಯ ಪ್ರಗತಿಯನ್ನು ಮಾಡುತ್ತಿರುವಂತೆ ತೋರುವ ಒಬ್ಬನೊಡನೆ, ಅವನ ದೀಕ್ಷಾಸ್ನಾನವಾಗುವ ವರೆಗೆ ಬಹುಶಃ ಕಾದು ನಂತರ ಮದುವೆಯಾಗುವ ಉದ್ದೇಶದಿಂದ ಈಗಲೇ ಪ್ರೇಮಯಾಚನೆ ಮಾಡುವುದು ಒಬ್ಬ ಕ್ರೈಸ್ತಳಿಗೆ ಉಚಿತವೊ? ಇಲ್ಲ. ಏಕೆಂದರೆ ಸಮರ್ಪಿತ ಕ್ರೈಸ್ತಳೊಬ್ಬಳು ತನ್ನನ್ನು ವಿವಾಹವಾಗ ಬಯಸುತ್ತಾಳೆ, ಆದರೆ ತಾನು ದೀಕ್ಷಾಸ್ನಾನ ಹೊಂದುವ ವರೆಗೆ ವಿವಾಹವಾಗುವುದಿಲ್ಲವೆಂದು ಆ ಬೈಬಲ್‌ ವಿದ್ಯಾರ್ಥಿಗೆ ತಿಳಿದಿರುವಲ್ಲಿ, ಒಬ್ಬ ಸ್ನಾತ ಕ್ರೈಸ್ತನಾಗುವುದಕ್ಕಾಗಿರುವ ಅವನ ಪ್ರಚೋದನೆಗಳಲ್ಲಿ ಗಲಿಬಿಲಿಯಾಗಬಹುದು.

ಸಾಮಾನ್ಯವಾಗಿ, ಒಬ್ಬನು ಅಸ್ನಾತ ಪ್ರಚಾರಕನಾಗಿರುವುದು ಒಂದು ಸೀಮಿತ ಸಮಯದ ವರೆಗೆ ಮಾತ್ರ, ಅಂದರೆ ಅವನು ಪ್ರಗತಿಮಾಡಿ ದೀಕ್ಷಾಸ್ನಾನ ಹೊಂದುವ ತನಕ ಮಾತ್ರ. ಆದಕಾರಣ, ಕರ್ತನಲ್ಲಿ ಮಾತ್ರ ವಿವಾಹವಾಗುವುದರ ಕುರಿತು ಮೇಲೆ ಕೊಡಲ್ಪಟ್ಟಿರುವ ಸಲಹೆ ಅಸಮಂಜಸವಾದದ್ದಲ್ಲ. ಆದರೆ, ಒಬ್ಬನು ವಿವಾಹದ ವಯಸ್ಸಿನವನು, ಕ್ರೈಸ್ತ ಕುಟುಂಬದಲ್ಲಿ ಬೆಳೆದು ಬಂದವನು, ಸಭೆಯಲ್ಲಿ ಅನೇಕ ವರುಷಗಳಿಂದ ಕ್ರಿಯಾಶೀಲನು, ಮತ್ತು ಅಸ್ನಾತ ಪ್ರಚಾರಕನಾಗಿ ಸೇವೆಮಾಡುವವನು ಆಗಿರುವಲ್ಲಿ ಏನು ಹೇಳಬಹುದು? ಸನ್ನಿವೇಶವು ಹೀಗಿರುವಲ್ಲಿ, ಸಮರ್ಪಣೆಯಲ್ಲಿ ಯೆಹೋವನಿಗೆ ತನ್ನ ಜೀವವನ್ನು ಒಪ್ಪಿಸಿಕೊಡುವುದರಿಂದ ಅವನನ್ನು ಯಾವುದು ತಡೆದುಹಿಡಿದಿದೆ? ಅವನು ಹಿಂಜರಿಯುವುದೇಕೆ? ಅವನಿಗೆ ಯಾವುದಾದರೂ ಸಂದೇಹಗಳಿವೆಯೊ? ಅವನು ಕ್ರಿಸ್ತನಂಬಿಕೆಯಿಲ್ಲದವನು ಆಗಿಲ್ಲವಾದರೂ, ಅವನು ‘ಕರ್ತನಲ್ಲಿ’ ಇದ್ದಾನೆಂದು ಹೇಳುವುದಕ್ಕಾಗದು.

ವಿವಾಹದ ಕುರಿತ ಪೌಲನ ಸಲಹೆಯು ನಮ್ಮ ಪ್ರಯೋಜನಕ್ಕಾಗಿದೆ. (ಯೆಶಾಯ 48:17) ಭಾವೀ ಸಂಗಾತಿಗಳಿಬ್ಬರೂ ಯೆಹೋವನಿಗೆ ತಮ್ಮನ್ನು ಸಮರ್ಪಿಸಿಕೊಂಡಿರುವಲ್ಲಿ, ಅವರು ವಿವಾಹದಲ್ಲಿ ಒಬ್ಬರಿಗೊಬ್ಬರು ಮಾಡಿಕೊಂಡಿರುವ ಬದ್ಧತೆಗೆ ಬಲವಾದ, ಆಧ್ಯಾತ್ಮಿಕ ಅಸ್ತಿವಾರವಿರುತ್ತದೆ. ಅವರು ಸಮಾನವಾದ ಜೀವನ ಮೌಲ್ಯಗಳಲ್ಲಿ ಮತ್ತು ಸಮಾನವಾದ ಗುರಿಗಳಲ್ಲಿ ಭಾಗಿಗಳಾಗುತ್ತಾರೆ. ಇದು ಸಂತೋಷಭರಿತ ವಿವಾಹ ಜೀವನಕ್ಕೆ ಮಹತ್ತರವಾಗಿ ಸಹಾಯಮಾಡುತ್ತದೆ. ಅಲ್ಲದೆ, ‘ಕರ್ತನಲ್ಲಿ ವಿವಾಹ ಮಾಡಿಕೊಳ್ಳುವ’ ಮೂಲಕ ಒಬ್ಬನು ಯೆಹೋವನಿಗೆ ನಿಷ್ಠೆಯನ್ನು ತೋರಿಸುತ್ತಾನೆ, ಮತ್ತು ಇದು ಅನಂತ ಆಶೀರ್ವಾದಗಳಿಗೆ ನಡೆಸುತ್ತದೆ. ಏಕೆಂದರೆ, ಯೆಹೋವನು ‘ಯಾರು ನಿಷ್ಠಾವಂತರಾಗಿದ್ದಾರೋ ಅವರೊಂದಿಗೆ ನಿಷ್ಠೆಯಿಂದ ನಡೆದುಕೊಳ್ಳುತ್ತಾನೆ.’​—⁠ಕೀರ್ತನೆ 18:​25, NW.

[ಪಾದಟಿಪ್ಪಣಿ]

^ ಪೌಲನು ಆರಂಭದಲ್ಲಿ ಯಾರಿಗೆ ಬರೆದನೊ ಆ ಅಭಿಷಿಕ್ತ ಕ್ರೈಸ್ತರ ಸಂಬಂಧದಲ್ಲಿ, “ಕರ್ತನಲ್ಲಿ . . . ದಾಸನು” ಆಗಿರುವುದರಲ್ಲಿ ದೇವರ ಪುತ್ರರು ಮತ್ತು ಕ್ರಿಸ್ತನ ಸಹೋದರರು ಆಗಿ ಅಭಿಷಿಕ್ತರಾಗುವುದೂ ಸೇರಿತ್ತು.

[ಪುಟ 31ರಲ್ಲಿರುವ ಚಿತ್ರ]

ಯೆಹೋವನು ‘ನಿಷ್ಠಾವಂತರೊಂದಿಗೆ ನಿಷ್ಠೆಯಿಂದ ನಡೆದುಕೊಳ್ಳುತ್ತಾನೆ’