ವಿಮೋಚನಕಾಂಡ ಪುಸ್ತಕದ ಮುಖ್ಯಾಂಶಗಳು
ಯೆಹೋವನ ವಾಕ್ಯವು ಸಜೀವವಾದದ್ದು
ವಿಮೋಚನಕಾಂಡ ಪುಸ್ತಕದ ಮುಖ್ಯಾಂಶಗಳು
ಇದು ‘ಕ್ರೂರವಾಗಿ ಸೇವೆಮಾಡುವಂತೆ’ ನಿರ್ಬಂಧಿಸಲ್ಪಟ್ಟಿದ್ದವರ ವಿಮೋಚನೆಯ ನಿಜ ಕಥೆಯಾಗಿದೆ. (ವಿಮೋಚನಕಾಂಡ 1:13, 14) ಅದು ಒಂದು ಜನಾಂಗದ ಜನನದ ಕುರಿತಾದ ರೋಮಾಂಚಕ ವೃತ್ತಾಂತವೂ ಹೌದು. ಅದರ ಅಭಿರುಚಿದಾಯಕ ಅಂಶಗಳಲ್ಲಿ ಮೈನವಿರೇಳಿಸುವ ಅದ್ಭುತಕಾರ್ಯಗಳು, ಅತ್ಯುತ್ತಮ ನೀತಿನಿಬಂಧನೆಗಳು ಮತ್ತು ದೇವದರ್ಶನಗುಡಾರದ ನಿರ್ಮಾಣಕಾರ್ಯಗಳು ಒಳಗೂಡಿವೆ. ಮೂಲತಃ ಬೈಬಲಿನ ವಿಮೋಚನಕಾಂಡ ಪುಸ್ತಕದಲ್ಲಿ ಈ ವಿಚಾರಗಳೇ ಒಳಗೂಡಿವೆ.
ಹೀಬ್ರು ಪ್ರವಾದಿಯಾದ ಮೋಶೆಯಿಂದ ಬರೆಯಲ್ಪಟ್ಟಿರುವ ವಿಮೋಚನಕಾಂಡ ಪುಸ್ತಕವು, ಸಾ.ಶ.ಪೂ. 1657ರಲ್ಲಿ ಯೋಸೇಫನು ಮರಣಪಟ್ಟಂದಿನಿಂದ ಸಾ.ಶ.ಪೂ. 1512ರಲ್ಲಿ ದೇವದರ್ಶನಗುಡಾರವು ಪೂರ್ಣಗೊಳ್ಳುವ ತನಕದ 145 ವರ್ಷಗಳ ಕಾಲಾವಧಿಯಲ್ಲಿ ಇಸ್ರಾಯೇಲ್ಯರಿಗಾದ ಅನುಭವಗಳ ವಿವರವನ್ನು ಕೊಡುತ್ತದೆ. ಆದರೂ, ಈ ವೃತ್ತಾಂತವು ಕೇವಲ ಐತಿಹಾಸಿಕ ಘಟನೆಗಿಂತಲೂ ಹೆಚ್ಚು ಮಹತ್ವಭರಿತವಾದದ್ದಾಗಿದೆ. ಇದು ಮಾನವಕುಲಕ್ಕೆ ಕೊಡಲ್ಪಟ್ಟಿರುವ ದೇವರ ವಾಕ್ಯದ ಅಥವಾ ಸಂದೇಶದ ಒಂದು ಭಾಗವಾಗಿದೆ. ಹೀಗಿರುವದರಿಂದ, ಇದು ‘ಸಜೀವವಾದದ್ದು ಮತ್ತು ಕಾರ್ಯಸಾಧಕವಾದದ್ದಾಗಿದೆ.’ (ಇಬ್ರಿಯ 4:12) ಆದುದರಿಂದಲೇ ವಿಮೋಚನಕಾಂಡ ಪುಸ್ತಕವು ನಮಗೆ ನಿಜವಾದ ಅರ್ಥವನ್ನು ಹೊಂದಿದೆ.
‘ದೇವರು ಅವರ ನರಳಾಟವನ್ನು ಕೇಳಿದನು’
ಐಗುಪ್ತದೇಶದಲ್ಲಿ ವಾಸಿಸುತ್ತಿದ್ದ ಯಾಕೋಬನ ವಂಶಸ್ಥರು ಎಷ್ಟು ಬೇಗನೆ ವೃದ್ಧಿಯಾಗತೊಡಗಿದರೆಂದರೆ, ರಾಜನ ಆಜ್ಞೆಯ ಮೇರೆಗೆ ಅವರು ಗುಲಾಮರೋಪಾದಿ ಕಷ್ಟಾನುಭವಕ್ಕೆ ಒಳಪಡಿಸಲ್ಪಟ್ಟರು. ಎಲ್ಲಾ ಇಸ್ರಾಯೇಲ್ಯ ಗಂಡುಕೂಸುಗಳನ್ನು ಹತಿಸುವಂತೆಯೂ ಫರೋಹನು ಆಜ್ಞೆಯನ್ನು ಹೊರಡಿಸಿದನು. ಇಂಥ ಒಂದು ದುರ್ಗತಿಯಿಂದ ಮೂರು ತಿಂಗಳ ಕೂಸಾಗಿದ್ದ ಮೋಶೆಯು ಕಾಪಾಡಲ್ಪಟ್ಟನು ಮತ್ತು ಫರೋಹನ ಮಗಳು ಅವನನ್ನು ದತ್ತುತೆಗೆದುಕೊಂಡಳು. ಮೋಶೆಯು ರಾಜನ ಮನೆವಾರ್ತೆಯಲ್ಲಿ ಬೆಳೆದು ದೊಡ್ಡವನಾದರೂ, 40ರ ಪ್ರಾಯದಲ್ಲಿ ಅವನು ತನ್ನ ಸ್ವಕೀಯ ಜನರ ಪಕ್ಷವನ್ನು ವಹಿಸಿದನು ಮತ್ತು ಒಬ್ಬ ಐಗುಪ್ತ್ಯನನ್ನು ಕೊಂದುಹಾಕಿದನು. (ಅ. ಕೃತ್ಯಗಳು 7:23, 24) ಅಲ್ಲಿಂದ ಪಲಾಯನಗೈಯುವ ಒತ್ತಡಕ್ಕೆ ಒಳಗಾದಾಗ ಅವನು ಮಿದ್ಯಾನ್ ದೇಶಕ್ಕೆ ಓಡಿಹೋದನು. ಅಲ್ಲಿ ಮದುವೆಮಾಡಿಕೊಂಡು ಒಬ್ಬ ಕುರುಬನೋಪಾದಿ ಜೀವಿಸತೊಡಗಿದನು. ಅದ್ಭುತಕರವಾದ ರೀತಿಯಲ್ಲಿ ಉರಿಯುತ್ತಿದ್ದ ಮುಳ್ಳಿನ ಪೊದೆಯೊಂದರ ಬಳಿ ಯೆಹೋವನು, ಇಸ್ರಾಯೇಲ್ಯರನ್ನು ದಾಸತ್ವದಿಂದ ಬಿಡಿಸಲಿಕ್ಕಾಗಿ ಐಗುಪ್ತದೇಶಕ್ಕೆ ಹಿಂದಿರುಗಿ ಹೋಗುವಂತೆ ಮೋಶೆಗೆ ಅಪ್ಪಣೆಕೊಟ್ಟನು. ಅವನ ಸಹೋದರನಾದ ಆರೋನನು ಅವನಿಗೆ ವದನಕನಾಗಿ ನೇಮಿಸಲ್ಪಟ್ಟನು.
ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:
3:1—ಇತ್ರೋನನು ಯಾವ ರೀತಿಯ ಯಾಜಕನಾಗಿದ್ದನು? ಪೂರ್ವಜರ ಕಾಲದಲ್ಲಿ ಕುಟುಂಬದ ತಲೆಯು ತನ್ನ ಸ್ವಂತ ಕುಟುಂಬದ ಯಾಜಕನಾಗಿ ಕಾರ್ಯನಡಿಸುತ್ತಿದ್ದನು. ಇತ್ರೋನನು ಮಿದ್ಯಾನ್ ಕುಲದ ಮುಖ್ಯಸ್ಥನಾಗಿದ್ದನು ಎಂಬುದು ಸುವ್ಯಕ್ತ. ಮಿದ್ಯಾನ್ಯರು ಅಬ್ರಹಾಮನಿಗೆ ಕೆಟೂರಳ ಮೂಲಕ ಹುಟ್ಟಿದವರಾಗಿದ್ದುದರಿಂದ, ಬಹುಶಃ ಇವರು ಯೆಹೋವನ ಆರಾಧನೆಯ ಕುರಿತು ತಿಳಿದವರಾಗಿದ್ದರು.—ಆದಿಕಾಂಡ 25:1, 2.
4:11—‘ಒಬ್ಬನು ಮೂಕನಾಗಿ, ಮತ್ತೊಬ್ಬನು ಕಿವುಡನಾಗಿ, ಮತ್ತೊಬ್ಬನು ಕಣ್ಣಿಲ್ಲದವನಾಗಿ’ ಇರುವಂತೆ ಯೆಹೋವನು ನೇಮಿಸುವುದು ಯಾವ ಅರ್ಥದಲ್ಲಿ? ಯೆಹೋವನು ಕೆಲವು ಸಂದರ್ಭಗಳಲ್ಲಿ ಕುರುಡನ್ನು ಮತ್ತು ಮೂಕತನವನ್ನು ಉಂಟುಮಾಡಿದನಾದರೂ, ಇಂಥ ಬಲಹೀನತೆಯಿರುವ ಪ್ರತಿಯೊಬ್ಬ ವ್ಯಕ್ತಿಗೆ ಹೀಗಾಗಲು ಆತನು ಜವಾಬ್ದಾರನಲ್ಲ. (ಆದಿಕಾಂಡ 19:11; ಲೂಕ 1:20-22, 62-64) ಇವು ಬಾಧ್ಯತೆಯಾಗಿ ಬಂದ ಪಾಪದ ಫಲಿತಾಂಶವಾಗಿವೆ. (ಯೋಬ 14:4; ರೋಮಾಪುರ 5:12) ಆದರೂ, ಈ ಸನ್ನಿವೇಶವು ಅಸ್ತಿತ್ವದಲ್ಲಿರುವಂತೆ ದೇವರು ಅನುಮತಿಸಿರುವುದರಿಂದ, ಸ್ವತಃ ಆತನೇ ಮೂಕನನ್ನು, ಕಿವುಡನನ್ನು ಮತ್ತು ಕಣ್ಣಿಲ್ಲದವನನ್ನು ‘ನೇಮಿಸುವಾತನಾಗಿ’ ತನ್ನ ಕುರಿತು ಮಾತಾಡಿದ್ದಾನೆ.
4:16—ಯಾವ ರೀತಿಯಲ್ಲಿ ಮೋಶೆಯು ಆರೋನನಿಗೆ ‘ದೇವರಂತೆ’ ಕಾರ್ಯನಡಿಸಲಿದ್ದನು? ಮೋಶೆಯು ದೇವರ ಪ್ರತಿನಿಧಿಯಾಗಿದ್ದನು. ಆದುದರಿಂದ, ಮೋಶೆಯ ಪ್ರತಿನಿಧಿಯೋಪಾದಿ ಮಾತಾಡಿದ ಆರೋನನಿಗೆ ಮೋಶೆಯು ‘ದೇವರಂತಾದನು.’
ನಮಗಾಗಿರುವ ಪಾಠಗಳು:
1:7, 14. ಯೆಹೋವನಾದುಕೊಂಡ ಜನರು ಐಗುಪ್ತದೇಶದಲ್ಲಿ ದಬ್ಬಾಳಿಕೆಗೆ ಒಳಗಾಗಿದ್ದಾಗ ಆತನೇ ಅವರಿಗೆ ಬೆಂಬಲ ನೀಡಿದನು. ತದ್ರೀತಿಯಲ್ಲಿ ಆತನು ತೀವ್ರವಾದ ಹಿಂಸೆಯ ಎದುರಿನಲ್ಲಿಯೂ ತನ್ನ ಆಧುನಿಕ ದಿನದ ಸಾಕ್ಷಿಗಳನ್ನು ಸಂರಕ್ಷಿಸುತ್ತಾನೆ.
1:17-21. ಯೆಹೋವನು ನಮ್ಮ “ಹಿತಕ್ಕಾಗಿ” ನಮ್ಮನ್ನು ಜ್ಞಾಪಿಸಿಕೊಳ್ಳುತ್ತಾನೆ.—ನೆಹೆಮೀಯ 13:31.
3:7-10. ಯೆಹೋವನು ತನ್ನ ಜನರ ಮೊರೆಗೆ ಪ್ರತಿಕ್ರಿಯಿಸುತ್ತಾನೆ.
3:14. ಯೆಹೋವನು ತನ್ನ ಉದ್ದೇಶಗಳನ್ನು ತಪ್ಪದೆ ನೆರವೇರಿಸುತ್ತಾನೆ. ಆದುದರಿಂದಲೇ, ಆತನು ನಮ್ಮ ಬೈಬಲಾಧಾರಿತ ನಿರೀಕ್ಷೆಗಳನ್ನು ವಾಸ್ತವಿಕಗೊಳಿಸುವನು ಎಂಬ ದೃಢಭರವಸೆಯಿಂದ ಇರಸಾಧ್ಯವಿದೆ.
4:10, 13, 14. ದೈವಿಕ ಬೆಂಬಲದ ಆಶ್ವಾಸನೆಯು ನೀಡಲ್ಪಟ್ಟಾಗಲೂ ಮೋಶೆಯು ತನ್ನ ವಾಕ್ಚಾತುರ್ಯದ ವಿಷಯದಲ್ಲಿ ಎಷ್ಟು ಅನಿಶ್ಚಿತತೆಯನ್ನು ವ್ಯಕ್ತಪಡಿಸಿದನೆಂದರೆ, ಫರೋಹನೊಂದಿಗೆ ಮಾತಾಡಲಿಕ್ಕಾಗಿ ಬೇರೊಬ್ಬನನ್ನು ನೇಮಿಸುವಂತೆ ಅವನು ದೇವರನ್ನು ಬೇಡಿಕೊಂಡನು. ಆದರೂ ಯೆಹೋವನು ಮೋಶೆಯನ್ನು ಉಪಯೋಗಿಸಿದನು ಮತ್ತು ಅವನ ನೇಮಕವನ್ನು ಪೂರೈಸಲು ಬೇಕಾಗಿದ್ದಂಥ ವಿವೇಕ ಹಾಗೂ ಬಲವನ್ನು ದಯಪಾಲಿಸಿದನು. ನಮ್ಮ ಕುಂದುಕೊರತೆಗಳ ಮೇಲೆ ಗಮನವನ್ನು ಕೇಂದ್ರೀಕರಿಸದೆ, ನಾವು ಯೆಹೋವನ ಮೇಲೆ ಆತುಕೊಳ್ಳೋಣ ಮತ್ತು ಸಾರುವ ಹಾಗೂ ಕಲಿಸುವ ನಮ್ಮ ನೇಮಕವನ್ನು ನಂಬಿಗಸ್ತಿಕೆಯಿಂದ ಪೂರೈಸೋಣ.—ಮತ್ತಾಯ 24:14; 28:19, 20.
ಮೈನವಿರೇಳಿಸುವ ಅದ್ಭುತಕಾರ್ಯಗಳು ವಿಮೋಚನೆಯನ್ನು ತರುತ್ತವೆ
ಮೋಶೆ ಮತ್ತು ಆರೋನರು ಫರೋಹನ ಸನ್ನಿಧಿಗೆ ಹೋಗಿ, ಅರಣ್ಯದಲ್ಲಿ ಯೆಹೋವನಿಗಾಗಿ ಒಂದು ಜಾತ್ರೆಯನ್ನು ನಡೆಸಲಿಕ್ಕಾಗಿ ಇಸ್ರಾಯೇಲ್ಯರಿಗೆ ಅನುಮತಿಯನ್ನು ಕೊಡುವಂತೆ ಕೇಳಿಕೊಂಡರು. ಐಗುಪ್ತದ ಅರಸನು ಇದಕ್ಕೆ ಉದ್ಧಟತನದಿಂದ ನಿರಾಕರಿಸಿದನು. ಒಂದರ ನಂತರ ಇನ್ನೊಂದು ಬಾಧೆಯನ್ನು ತರಲಿಕ್ಕಾಗಿ ಯೆಹೋವನು ಮೋಶೆಯನ್ನು ಉಪಯೋಗಿಸಿದನು. ಹತ್ತನೆಯ ಬಾಧೆಯು ಬರಮಾಡಲ್ಪಟ್ಟ ಬಳಿಕವೇ ಫರೋಹನು ಇಸ್ರಾಯೇಲ್ಯರಿಗೆ ಹೋಗಲು ಅಪ್ಪಣೆ ಕೊಟ್ಟನು. ಆದರೂ, ಸ್ವಲ್ಪದರಲ್ಲೇ ಅವನೂ ಅವನ ಸೈನಿಕರೂ ಇಸ್ರಾಯೇಲ್ಯರನ್ನು ಬೆನ್ನಟ್ಟಿ ಬಂದರು. ಆದರೆ ಕೆಂಪು ಸಮುದ್ರದ ಮೂಲಕ ಯೆಹೋವನು ಇಸ್ರಾಯೇಲ್ಯರಿಗೆ ತಪ್ಪಿಸಿಕೊಳ್ಳುವ ಮಾರ್ಗವನ್ನು ತೆರೆದನು. ತದನಂತರ ಸಮುದ್ರದ ನೀರು ಮೊದಲಿದ್ದಂತೆಯೇ ತುಂಬಿಕೊಳ್ಳುತ್ತಿದ್ದಾಗ ಬೆನ್ನಟ್ಟಿ ಬರುತ್ತಿದ್ದ ಐಗುಪ್ತದ ಸೈನಿಕರು ಅದರಲ್ಲಿ ಮುಳುಗಿ ಸತ್ತುಹೋದರು.
ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:
6:3—ಯಾವ ಅರ್ಥದಲ್ಲಿ ದೇವರ ಹೆಸರು ಅಬ್ರಹಾಮ, ಇಸಾಕ ಮತ್ತು ಯಾಕೋಬರಿಗೆ ತಿಳಿಸಲ್ಪಟ್ಟಿರಲಿಲ್ಲ? ಈ ಪೂರ್ವಜರು ದೇವರ ಹೆಸರನ್ನು ಉಪಯೋಗಿಸಿದರು ಮತ್ತು ಯೆಹೋವನಿಂದ ವಾಗ್ದಾನಗಳನ್ನು ಪಡೆದುಕೊಂಡರು. ಆದರೂ, ಈ ವಾಗ್ದಾನಗಳು ನೆರವೇರುವಂತೆ ಮಾಡಿದಾತನು ಯೆಹೋವನೇ ಎಂಬುದು ಅವರಿಗೆ ತಿಳಿದಿರಲಿಲ್ಲ ಅಥವಾ ಆ ಅನುಭವ ಅವರಿಗಾಗಲಿಲ್ಲ.—ಆದಿಕಾಂಡ 12:1, 2; 15:7, 13-16; 26:24; 28:10-15.
7:1—ಮೋಶೆಯು ‘ಫರೋಹನಿಗೆ ದೇವರು’ ಆಗಿ ಮಾಡಲ್ಪಟ್ಟದ್ದು ಹೇಗೆ? ಮೋಶೆಗೆ ಫರೋಹನ ಮೇಲೆ ದೈವಿಕ ಶಕ್ತಿ ಮತ್ತು ಅಧಿಕಾರವು ಕೊಡಲ್ಪಟ್ಟಿತ್ತು. ಆದುದರಿಂದ, ಆ ಅರಸನಿಗೆ ಭಯಪಡುವ ಅಗತ್ಯವಿರಲಿಲ್ಲ.
7:22—ರಕ್ತವಾಗಿ ಪರಿಣಮಿಸಿರದಿದ್ದಂಥ ನೀರು ಐಗುಪ್ತದೇಶದ ಜೋಯಿಸರಿಗೆ ಎಲ್ಲಿಂದ ಸಿಕ್ಕಿತು? ಈ ಬಾಧೆಯು ಬರಮಾಡಲ್ಪಡುವುದಕ್ಕೆ ಮುಂಚೆ ನೈಲ್ ನದಿಯಿಂದ ತೆಗೆದುಕೊಳ್ಳಲ್ಪಟ್ಟಿದ್ದ ಸ್ವಲ್ಪ ನೀರನ್ನು ಅವರು ಉಪಯೋಗಿಸಿದ್ದಿರುವ ಸಾಧ್ಯತೆಯಿದೆ. ನೈಲ್ ನದಿಯ ಸುತ್ತಲೂ ಇದ್ದ ತೇವಾಂಶಭರಿತ ನೆಲದಲ್ಲಿ ಬಾವಿಗಳನ್ನು ತೋಡುವ ಮೂಲಕವೂ ರಕ್ತದಿಂದ ಕಲುಷಿತವಾಗಿರದ ನೀರನ್ನು ಸಂಗ್ರಹಿಸಸಾಧ್ಯವಿತ್ತು ಎಂಬುದು ಸುಸ್ಪಷ್ಟ.—ವಿಮೋಚನಕಾಂಡ 7:24.
8:26, 27—ಇಸ್ರಾಯೇಲ್ಯರ ಯಜ್ಞಗಳು “ಐಗುಪ್ತರಿಗೆ ನಿಷೇಧ” ಎಂದು ಮೋಶೆ ಏಕೆ ಹೇಳಿದನು? ಐಗುಪ್ತದೇಶದಲ್ಲಿ ಬೇರೆ ಬೇರೆ ರೀತಿಯ ಅನೇಕ ಪ್ರಾಣಿಗಳನ್ನು ಆರಾಧಿಸಲಾಗುತ್ತಿತ್ತು. ಹೀಗೆ, ಯಜ್ಞಗಳ ಉಲ್ಲೇಖವು, ಯೆಹೋವನಿಗೆ ಯಜ್ಞಾರ್ಪಿಸಲಿಕ್ಕಾಗಿ ದೂರಹೋಗುವಂತೆ ಇಸ್ರಾಯೇಲ್ಯರಿಗೆ ಅನುಮತಿ ನೀಡಲ್ಪಡಲೇಬೇಕೆಂಬ ಮೋಶೆಯ ಒತ್ತಾಯಕ್ಕೆ ಇನ್ನೂ ಹೆಚ್ಚಿನ ಒತ್ತನ್ನು ಮತ್ತು ಒಡಂಬಡಿಸುವಿಕೆಯನ್ನು ಕೂಡಿಸಿತು.
12:29—ಯಾರನ್ನು ಚೊಚ್ಚಲುಮಕ್ಕಳಾಗಿ ಪರಿಗಣಿಸಲಾಗುತ್ತಿತ್ತು? ಚೊಚ್ಚಲುಮಕ್ಕಳಲ್ಲಿ ಗಂಡುಮಕ್ಕಳು ಮಾತ್ರ ಒಳಗೂಡಿದ್ದರು. (ಅರಣ್ಯಕಾಂಡ 3:40-51) ಸ್ವತಃ ಒಬ್ಬ ಚೊಚ್ಚಲುಮಗನಾಗಿದ್ದ ಫರೋಹನು ಕೊಲ್ಲಲ್ಪಡಲಿಲ್ಲ. ಅವನಿಗೆ ಅವನ ಸ್ವಂತ ಮನೆವಾರ್ತೆಯಿತ್ತು. ಹತ್ತನೆಯ ಬಾಧೆಯ ಫಲಿತಾಂಶವಾಗಿ, ಕುಟುಂಬ ತಲೆಯಲ್ಲ ಬದಲಾಗಿ ಮನೆವಾರ್ತೆಯ ಚೊಚ್ಚಲುಮಗನು ಸತ್ತುಹೋದನು.
12:40—ಎಷ್ಟು ಕಾಲ ಇಸ್ರಾಯೇಲ್ಯರು ಐಗುಪ್ತದೇಶದಲ್ಲಿ ವಾಸವಾಗಿದ್ದರು? ಈ ವಚನದಲ್ಲಿ ತಿಳಿಸಲ್ಪಟ್ಟಿರುವ 430 ವರ್ಷಗಳು, ಇಸ್ರಾಯೇಲ್ಯರು “ಐಗುಪ್ತದೇಶದಲ್ಲಿಯೂ ಕಾನಾನ್ದೇಶದಲ್ಲಿಯೂ” ಕಳೆದ ಕಾಲಾವಧಿಯನ್ನು ಒಳಗೂಡುತ್ತವೆ. (NW ರೆಫರೆನ್ಸ್ ಬೈಬಲ್, ಪಾದಟಿಪ್ಪಣಿ) ಸಾ.ಶ.ಪೂ. 1943ರಲ್ಲಿ, ಎಪ್ಪತ್ತೈದು ವರ್ಷದವನಾಗಿದ್ದ ಅಬ್ರಹಾಮನು ಕಾನಾನ್ ದೇಶಕ್ಕೆ ಹೋಗುವ ಮಾರ್ಗದಲ್ಲಿ ಯೂಫ್ರೇಟೀಸ್ ನದಿಯನ್ನು ದಾಟಿದನು. (ಆದಿಕಾಂಡ 12:4) ಅಂದಿನಿಂದ ಹಿಡಿದು 130 ವರ್ಷದವನಾಗಿದ್ದ ಯಾಕೋಬನು ಐಗುಪ್ತದೇಶಕ್ಕೆ ಹೋಗುವ ವರೆಗೆ 215 ವರ್ಷಗಳು ಗತಿಸಿದವು. (ಆದಿಕಾಂಡ 21:5; 25:26; 47:9) ಇದರ ಅರ್ಥ, ಅಂದಿನಿಂದ ಇಸ್ರಾಯೇಲ್ಯರು ಐಗುಪ್ತದೇಶದಲ್ಲಿ ಅಷ್ಟೇ ಕಾಲಾವಧಿಯನ್ನು ಅಂದರೆ 215 ವರ್ಷಗಳನ್ನು ಕಳೆದರು.
15:8—ಕೆಂಪು ಸಮುದ್ರದ ‘ಗಟ್ಟಿಯಾದ’ ನೀರು ವಾಸ್ತವದಲ್ಲಿ ಘನೀಭವಿಸಿದ್ದ ನೀರಾಗಿತ್ತೊ? ‘ಗಟ್ಟಿಯಾಗು’ ಎಂದು ಭಾಷಾಂತರಿಸಲ್ಪಟ್ಟಿರುವ ಹೀಬ್ರು ಪದದ ಅರ್ಥ ಸಂಕುಚಿತವಾಗು ಅಥವಾ ದಟ್ಟವಾಗು ಎಂದಾಗಿದೆ. ಯೋಬ 10:10ರಲ್ಲಿ ಈ ಅಭಿವ್ಯಕ್ತಿಯು ಮೊಸರಿನ ಹೆಪ್ಪುಗಟ್ಟಿಸುವಿಕೆಯ ಸಂಬಂಧದಲ್ಲಿ ಉಪಯೋಗಿಸಲ್ಪಟ್ಟಿದೆ. ಆದುದರಿಂದ, ಗಟ್ಟಿಯಾದ ನೀರು ಘನೀಭವಿಸಿದ ನೀರನ್ನು ಅಂದರೆ ಮಂಜುಗಡ್ಡೆಯನ್ನು ಸೂಚಿಸುವುದಿಲ್ಲ. ವಿಮೋಚನಕಾಂಡ 14:21ರಲ್ಲಿ ತಿಳಿಸಲ್ಪಟ್ಟಿರುವ ‘ಮೂಡಣ ದಿಕ್ಕಿನಿಂದ ಬೀಸಲ್ಪಟ್ಟ ಬಲವಾದ ಬಿರುಗಾಳಿಯು’ ನೀರನ್ನು ಘನೀಕರಿಸುವಷ್ಟು ತಣ್ಣಗಿರುತ್ತಿದ್ದಲ್ಲಿ, ವಿಪರೀತ ಚಳಿಯ ಕುರಿತು ಖಂಡಿತವಾಗಿಯೂ ಯಾವುದಾದರೊಂದು ಉಲ್ಲೇಖವನ್ನು ಮಾಡಿರಲಾಗುತ್ತಿತ್ತು ಎಂಬುದರಲ್ಲಿ ಸಂಶಯವಿಲ್ಲ. ಕಣ್ಣಿಗೆ ಗೋಚರವಾಗುವಂಥ ಯಾವುದೂ ನೀರನ್ನು ತಡೆಹಿಡಿಯದಿದ್ದುದರಿಂದ, ಆ ನೀರು ಗಟ್ಟಿಯಾಗಿದ್ದಂತೆ, ಹೆಪ್ಪುಗಟ್ಟಿದ್ದಂತೆ, ಘನೀಭವಿಸಿದ್ದಂತೆ ಕಂಡುಬಂದಿತ್ತು.
ನಮಗಾಗಿರುವ ಪಾಠಗಳು:
7:14–12:30. ಹತ್ತು ಬಾಧೆಗಳು ಆಶ್ಚರ್ಯಕರವಾಗಿ ಸಂಭವಿಸಿದ ಸಹಘಟನೆಗಳಾಗಿರಲಿಲ್ಲ. ಅವು ಮುಂತಿಳಿಸಲ್ಪಟ್ಟಿದ್ದವು ಮತ್ತು ಸೂಚಿಸಲ್ಪಟ್ಟಷ್ಟೇ ನಿಖರವಾಗಿ ನೆರವೇರಿದವು. ಆ ಹತ್ತು ಬಾಧೆಗಳು, ನೀರು, ಸೂರ್ಯನ ಬೆಳಕು, ಕೀಟಗಳು, ಪ್ರಾಣಿಗಳು ಮತ್ತು ಮನುಷ್ಯರ ಮೇಲಿನ ಸೃಷ್ಟಿಕರ್ತನ ನಿಯಂತ್ರಣವನ್ನು ಎಷ್ಟು ಸುವ್ಯಕ್ತವಾಗಿ ತೋರ್ಪಡಿಸುತ್ತವೆ! ತನ್ನ ಆರಾಧಕರನ್ನು ಕಾಪಾಡುತ್ತಾ, ಅದೇ ಸಮಯದಲ್ಲಿ ತನ್ನ ವೈರಿಗಳ ಮೇಲೆ ಆಯ್ದುಕೊಂಡ ವಿಪತ್ತನ್ನು ಬರಮಾಡುವ ಸಾಮರ್ಥ್ಯ ದೇವರಿಗಿದೆ ಎಂಬುದನ್ನು ಸಹ ಬಾಧೆಗಳು ರುಜುಪಡಿಸಿದವು.
11:2; 12:36. ಯೆಹೋವನು ತನ್ನ ಜನರನ್ನು ಆಶೀರ್ವದಿಸುತ್ತಾನೆ. ಈಗ ಇಸ್ರಾಯೇಲ್ಯರಿಗೆ ಐಗುಪ್ತದೇಶದಲ್ಲಿನ ತಮ್ಮ ದುಡಿಮೆಗೆ ಸೂಕ್ತವಾದ ಪ್ರತಿಫಲವನ್ನು ಪಡೆದುಕೊಳ್ಳುವಂತೆ ಆತನು ಮಾರ್ಗವನ್ನು ತೆರೆದನು ಎಂಬುದು ಸುವ್ಯಕ್ತ. ಏಕೆಂದರೆ ಇಸ್ರಾಯೇಲ್ಯರು ಸ್ವತಂತ್ರ ಜನರೋಪಾದಿ ಐಗುಪ್ತದೇಶವನ್ನು ಪ್ರವೇಶಿಸಿದರೇ ಹೊರತು ದಾಸತ್ವಕ್ಕೆ ಉಪಯೋಗಿಸಲ್ಪಡುತ್ತಿದ್ದ ಸೆರೆಯಾಳುಗಳಾಗಿ ಅಲ್ಲ.
14:30. ಬರಲಿರುವ “ಮಹಾ ಸಂಕಟ”ದಲ್ಲಿ ಯೆಹೋವನು ತನ್ನ ಆರಾಧಕರನ್ನು ವಿಮೋಚಿಸುವನು ಎಂಬ ದೃಢಭರವಸೆ ನಮಗಿರಸಾಧ್ಯವಿದೆ.—ಮತ್ತಾಯ 24:20-22; ಪ್ರಕಟನೆ 7:9, 14.
ಯೆಹೋವನು ಒಂದು ದೇವಪ್ರಭುತ್ವಾತ್ಮಕ ಜನಾಂಗವನ್ನು ವ್ಯವಸ್ಥಾಪಿಸುತ್ತಾನೆ
ಇಸ್ರಾಯೇಲ್ಯರು ಐಗುಪ್ತದೇಶದಿಂದ ವಿಮೋಚಿಸಲ್ಪಟ್ಟ ಮೂರನೆಯ ತಿಂಗಳಿನಲ್ಲಿ ಅವರು ಸೀನಾಯಿಬೆಟ್ಟದ ತಪ್ಪಲಿನಲ್ಲಿ ಪಾಳೆಯಹೂಡಿದ್ದರು. ಅಲ್ಲಿ ಅವರು ದಶಾಜ್ಞೆಗಳನ್ನು ಮತ್ತು ಇತರ ಆಜ್ಞಾವಿಧಿಗಳನ್ನು ಪಡೆದುಕೊಂಡು, ಯೆಹೋವನೊಂದಿಗೆ ಒಂದು ಒಡಂಬಡಿಕೆಯ ಸಂಬಂಧದೊಳಕ್ಕೆ ಬಂದರು ಮತ್ತು ಒಂದು ದೇವಪ್ರಭುತ್ವಾತ್ಮಕ ಜನಾಂಗವಾಗಿ ಪರಿಣಮಿಸಿದರು. ಮೋಶೆಯು ಸತ್ಯಾರಾಧನೆಯ ಕುರಿತಾದ ಮತ್ತು ಯೆಹೋವನ ದೇವದರ್ಶನಗುಡಾರದ—ಸುಲಭವಾಗಿ ಸಾಗಿಸಬಲ್ಲ ದೇವಾಲಯ—ನಿರ್ಮಾಣದ ಕುರಿತಾದ ಸಲಹೆಗಳನ್ನು ಪಡೆದುಕೊಳ್ಳುತ್ತಾ ಬೆಟ್ಟದಲ್ಲಿ 40 ದಿನಗಳನ್ನು ಕಳೆದನು. ಈ ಮಧ್ಯೆ ಇಸ್ರಾಯೇಲ್ಯರು ಚಿನ್ನದ ಬಸವನ ಮೂರ್ತಿಯೊಂದನ್ನು ಮಾಡಿಕೊಂಡು ಅದನ್ನು ಆರಾಧಿಸುತ್ತಿದ್ದರು. ಬೆಟ್ಟದಿಂದ ಕೆಳಗೆ ಬರುತ್ತಿದ್ದಾಗ ಮೋಶೆಯು ಇದನ್ನು ನೋಡಿ ಎಷ್ಟು ಕೋಪೋದ್ರಿಕ್ತನಾದನೆಂದರೆ, ದೇವರಿಂದ ಅವನಿಗೆ ಕೊಡಲ್ಪಟ್ಟಿದ್ದ ಎರಡು ಕಲ್ಲಿನ
ಹಲಿಗೆಗಳನ್ನು ನೆಲಕ್ಕೆ ಹಾಕಿ ಒಡೆದುಬಿಟ್ಟನು. ತಪ್ಪಿತಸ್ಥರಿಗೆ ಸೂಕ್ತವಾದ ಶಿಕ್ಷೆಯು ವಿಧಿಸಲ್ಪಟ್ಟ ಬಳಿಕ, ಅವನು ಪುನಃ ಬೆಟ್ಟಕ್ಕೆ ಹೋಗಿ ಇನ್ನೊಂದು ಜೊತೆ ಶಿಲಾಶಾಸನಗಳನ್ನು ಪಡೆದುಕೊಳ್ಳುತ್ತಾನೆ. ಮೋಶೆಯು ಅಲ್ಲಿಂದ ಹಿಂದಿರುಗಿದ ಬಳಿಕ, ದೇವದರ್ಶನಗುಡಾರದ ನಿರ್ಮಾಣಕಾರ್ಯವು ಆರಂಭಗೊಂಡಿತು. ಇಸ್ರಾಯೇಲ್ಯರು ವಿಮೋಚಿಸಲ್ಪಟ್ಟು ಒಂದು ವರ್ಷ ಮುಗಿಯುವಷ್ಟರಲ್ಲಿ, ಈ ಅಪೂರ್ವ ಗುಡಾರ ಮತ್ತು ಅದರ ಎಲ್ಲಾ ಸಾಮಾನುಗಳು ಪೂರ್ಣವಾಗಿ ನಿರ್ಮಿಸಲ್ಪಟ್ಟಿದ್ದವು; ತದನಂತರ ಯೆಹೋವನು ಆ ಗುಡಾರವನ್ನು ತನ್ನ ಮಹಿಮೆಯಿಂದ ತುಂಬಿಸಿದನು.ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:
20:5—ಯೆಹೋವನು ಹೇಗೆ “ತಂದೆಗಳ ದೋಷಫಲವನ್ನು ಮಕ್ಕಳ ಮೇಲೆ” ಬರಮಾಡುತ್ತಾನೆ? ಒಬ್ಬ ವ್ಯಕ್ತಿಯು ವಯಸ್ಕನಾಗುವಾಗ, ಅವನ ಸ್ವಂತ ನಡತೆ ಹಾಗೂ ಮನೋಭಾವದ ಆಧಾರದ ಮೇಲೆ ಅವನಿಗೆ ತೀರ್ಪುಮಾಡಲ್ಪಡುತ್ತದೆ. ಆದರೆ ಇಸ್ರಾಯೇಲ್ ಜನಾಂಗವು ವಿಗ್ರಹಾರಾಧನೆಯನ್ನು ಅವಲಂಬಿಸಿದಾಗ, ಈ ಜನಾಂಗವು ಅನೇಕ ಸಂತತಿಗಳ ವರೆಗೆ ಇದರ ಪರಿಣಾಮಗಳನ್ನು ಅನುಭವಿಸಿತು. ನಂಬಿಗಸ್ತ ಇಸ್ರಾಯೇಲ್ಯರು ಸಹ ಇದರಿಂದ ಬಾಧಿಸಲ್ಪಟ್ಟರು; ಹೇಗೆಂದರೆ ಜನಾಂಗದ ಧಾರ್ಮಿಕ ಅಪರಾಧವು, ಈ ನಂಬಿಗಸ್ತರು ಸಮಗ್ರತೆಯ ಮಾರ್ಗದಲ್ಲಿ ಮುಂದುವರಿಯುವುದನ್ನು ಅತ್ಯಂತ ಕಷ್ಟಕರವಾಗಿ ಮಾಡಿತು.
23:19; 34:26—ಆಡುಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬಾರದು ಎಂಬ ಆಜ್ಞೆಯ ಮಹತ್ವವೇನಾಗಿತ್ತು? ಆಡುಮರಿಯನ್ನು (ಅಥವಾ ಬೇರೆ ಪ್ರಾಣಿಯ ಮರಿಯನ್ನು) ಅದರ ತಾಯಿಯ ಹಾಲಿನಲ್ಲಿ ಬೇಯಿಸುವುದು ಒಂದು ವಿಧರ್ಮಿ ಮತಸಂಸ್ಕಾರವಾಗಿದ್ದು, ಇದು ಮಳೆಯನ್ನು ಬರಿಸುತ್ತದೆಂದು ನಂಬಲಾಗಿತ್ತು. ಅಷ್ಟುಮಾತ್ರವಲ್ಲ, ತಾಯಿಯ ಹಾಲು ಅದರ ಮರಿಯನ್ನು ಪೋಷಿಸಲಿಕ್ಕಾಗಿರುವುದರಿಂದ, ಅದರಲ್ಲೇ ಮರಿಯನ್ನು ಬೇಯಿಸುವುದು ಒಂದು ಕ್ರೂರ ಕೃತ್ಯಕ್ಕೆ ಸಮಾನವಾಗಿತ್ತು. ಈ ನಿಯಮವು, ದೇವಜನರು ಸಹಾನುಭೂತಿಯುಳ್ಳವರಾಗಿರಬೇಕು ಎಂಬುದನ್ನು ಅವರಿಗೆ ಮನದಟ್ಟುಮಾಡಿಸಲು ಸಹಾಯಮಾಡಿತು.
23:20-23—ಇಲ್ಲಿ ತಿಳಿಸಲ್ಪಟ್ಟಿರುವ ದೇವದೂತನು ಯಾರು, ಮತ್ತು ಯೆಹೋವನ ನಾಮಮಹಿಮೆ ‘ಆತನಲ್ಲಿ ಇದ್ದದ್ದು’ ಹೇಗೆ? ಈ ದೇವದೂತನು ಮಾನವಪೂರ್ವ ರೂಪದಲ್ಲಿದ್ದ ಯೇಸುವೇ ಆಗಿದ್ದನು ಎಂಬುದು ಸಂಭವನೀಯ. ಇಸ್ರಾಯೇಲ್ಯರು ವಾಗ್ದತ್ತ ದೇಶಕ್ಕೆ ಹೋಗುವ ಮಾರ್ಗದಲ್ಲಿ ಅವರನ್ನು ಮಾರ್ಗದರ್ಶಿಸಲಿಕ್ಕಾಗಿ ಇವನನ್ನು ಉಪಯೋಗಿಸಲಾಗಿತ್ತು. (1 ಕೊರಿಂಥ 10:1-4) ಯೆಹೋವನ ನಾಮಮಹಿಮೆ ‘ಆತನಲ್ಲಿ’ ಇತ್ತು ಹೇಗೆಂದರೆ, ತನ್ನ ತಂದೆಯ ಹೆಸರನ್ನು ಎತ್ತಿಹಿಡಿದು ಅದನ್ನು ಪವಿತ್ರೀಕರಿಸುವಂಥ ಪ್ರಮುಖ ವ್ಯಕ್ತಿಯು ಯೇಸುವೇ ಆಗಿದ್ದನು.
32:1-8, 25-35—ಚಿನ್ನದ ಬಸವನನ್ನು ಮಾಡಿದ್ದಕ್ಕಾಗಿ ಆರೋನನಿಗೆ ಏಕೆ ಶಿಕ್ಷೆಯು ವಿಧಿಸಲ್ಪಡಲಿಲ್ಲ? ಆರೋನನು ಹೃತ್ಪೂರ್ವಕವಾಗಿ ವಿಗ್ರಹಾರಾಧನೆಗೆ ಒಪ್ಪಿಕೊಳ್ಳಲಿಲ್ಲ. ಸಮಯಾನಂತರ, ದೇವರ ಪಕ್ಷವನ್ನು ವಹಿಸಿ, ಮೋಶೆಯನ್ನು ವಿರೋಧಿಸಿದವರ ವಿರುದ್ಧ ನಿಲ್ಲುವುದರಲ್ಲಿ ಆರೋನನು ಲೇವಿಯರ ಜೊತೆಗೂಡಿದನು ಎಂಬುದು ಸುವ್ಯಕ್ತ. ದೋಷಿಗಳು ಹತರಾದ ನಂತರ, ಆರೋನನನ್ನೂ ಸೇರಿಸಿ ಇತರರು ಯೆಹೋವನ ಕರುಣೆಯನ್ನು ಪಡೆದುಕೊಂಡರು ಎಂಬುದನ್ನು ಸೂಚಿಸುತ್ತಾ, ಜನರು ಯೆಹೋವನ ವಿರುದ್ಧ ಮಹಾ ಪಾಪವನ್ನು ಮಾಡಿದ್ದರು ಎಂಬುದನ್ನು ಮೋಶೆ ಅವರಿಗೆ ನೆನಪು ಹುಟ್ಟಿಸಿದನು.
33:11, 20—ದೇವರು ಹೇಗೆ ಮೋಶೆಯೊಂದಿಗೆ “ಮುಖಾಮುಖಿಯಾಗಿ” ಮಾತಾಡಿದನು? ಈ ಅಭಿವ್ಯಕ್ತಿಯು ಎರಡೂ ಕಡೆಯಿಂದ ನಡೆದ ಆಪ್ತವಾದ ಸಂಭಾಷಣೆಯನ್ನು ಸೂಚಿಸುತ್ತದೆ. ಮೋಶೆಯು ದೇವರ ಪ್ರತಿನಿಧಿಯೊಂದಿಗೆ ಮಾತಾಡಿದನು ಮತ್ತು ಅವನ ಮೂಲಕವೇ ಯೆಹೋವನಿಂದ ಮೌಖಿಕ ಉಪದೇಶವನ್ನು ಪಡೆದುಕೊಂಡನು. ಆದರೆ ಮೋಶೆಯು ಯೆಹೋವನನ್ನು ನೋಡಲಿಲ್ಲ, ಏಕೆಂದರೆ ‘ಮನುಷ್ಯರಲ್ಲಿ ಯಾವನೂ ದೇವರನ್ನು ನೋಡಿ ಜೀವಿಸಲಾರನು.’ ವಾಸ್ತವದಲ್ಲಿ, ಯೆಹೋವನು ಮೋಶೆಯೊಂದಿಗೆ ವ್ಯಕ್ತಿಗತವಾಗಿ ಮಾತಾಡಲಿಲ್ಲ. ಧರ್ಮಶಾಸ್ತ್ರವು “ದೇವದೂತರ ಮುಖಾಂತರ ಒಬ್ಬ ಮಧ್ಯಸ್ಥನ ಕೈಯಲ್ಲಿ” ರವಾನಿಸಲ್ಪಟ್ಟಿತು ಎಂದು ಗಲಾತ್ಯ 3:19 ಹೇಳುತ್ತದೆ.
ನಮಗಾಗಿರುವ ಪಾಠಗಳು:
15:25; 16:12. ಯೆಹೋವನು ತನ್ನ ಜನರಿಗೆ ಅಗತ್ಯವಿರುವುದನ್ನು ಒದಗಿಸುತ್ತಾನೆ.
18:21. ಕ್ರೈಸ್ತ ಸಭೆಯಲ್ಲಿ ಜವಾಬ್ದಾರಿಯುತ ಸ್ಥಾನಗಳಲ್ಲಿರುವುದಕ್ಕಾಗಿ ಆಯ್ಕೆಮಾಡಲ್ಪಟ್ಟಿರುವ ಪುರುಷರು ಸಹ ಸಮರ್ಥರೂ, ದೇವಭಯವುಳ್ಳವರೂ, ಭರವಸಾರ್ಹರೂ ನಿಸ್ವಾರ್ಥಭಾವದವರೂ ಆಗಿರಬೇಕು.
20:1–23:33. ಯೆಹೋವನೇ ಅತಿ ಶ್ರೇಷ್ಠ ನಿಯಮದಾತನಾಗಿದ್ದಾನೆ. ಆತನ ನಿಯಮಗಳಿಗೆ ಇಸ್ರಾಯೇಲ್ಯರು ವಿಧೇಯರಾಗಿದ್ದಾಗ, ಅವರು ವ್ಯವಸ್ಥಿತ ರೀತಿಯಲ್ಲಿ ಮತ್ತು ಹರ್ಷಭರಿತರಾಗಿ ಆತನನ್ನು ಆರಾಧಿಸುವಂತೆ ಇವು ಅವರನ್ನು ಶಕ್ತರನ್ನಾಗಿ ಮಾಡಿದವು. ಇಂದು ಸಹ ಯೆಹೋವನು ಒಂದು ದೇವಪ್ರಭುತ್ವಾತ್ಮಕ ಸಂಸ್ಥೆಯನ್ನು ಹೊಂದಿದ್ದಾನೆ. ಇದರೊಂದಿಗೆ ಸಹಕರಿಸುವುದು, ನಮ್ಮ ಸಂತೋಷ ಹಾಗೂ ಭದ್ರತೆಗೆ ನಡಿಸುತ್ತದೆ.
ನಮಗೆ ನಿಜವಾದ ಅರ್ಥವುಳ್ಳದ್ದಾಗಿದೆ
ವಿಮೋಚನಕಾಂಡ ಪುಸ್ತಕವು ಯೆಹೋವನ ಕುರಿತು ಏನನ್ನು ಪ್ರಕಟಪಡಿಸುತ್ತದೆ? ಇದು ಆತನನ್ನು ಪ್ರೀತಿಯಿಂದ ಒದಗಿಸುವಿಕೆಗಳನ್ನು ಮಾಡುವಾತನಾಗಿ, ಹೋಲಿಸಲಸಾಧ್ಯವಾದ ವಿಮೋಚಕನಾಗಿ ಮತ್ತು ಉದ್ದೇಶಗಳನ್ನು ಪೂರೈಸುವಾತನಾಗಿ ಚಿತ್ರಿಸುತ್ತದೆ. ಆತನು ದೇವಪ್ರಭುತ್ವಾತ್ಮಕ ಸಂಸ್ಥೆಯ ದೇವರಾಗಿದ್ದಾನೆ.
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಗಾಗಿರುವ ಸಿದ್ಧತೆಯಲ್ಲಿ ನೀವು ಸಾಪ್ತಾಹಿಕ ಬೈಬಲ್ ವಾಚನವನ್ನು ಮಾಡುವಾಗ, ವಿಮೋಚನಕಾಂಡ ಪುಸ್ತಕದಿಂದ ಏನನ್ನು ಕಲಿಯುತ್ತೀರೋ ಅದರಿಂದ ಆಳವಾಗಿ ಪ್ರಭಾವಿತರಾಗುವಿರಿ ಎಂಬುದರಲ್ಲಿ ಸಂಶಯವೇ ಇಲ್ಲ. “ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು” ಎಂಬ ವಿಭಾಗದ ಕೆಳಗೆ ಏನು ತಿಳಿಸಲ್ಪಟ್ಟಿದೆಯೋ ಅದನ್ನು ನೀವು ಪರಿಗಣಿಸುವಾಗ, ಕೆಲವು ಶಾಸ್ತ್ರೀಯ ಭಾಗಗಳ ವಿಷಯದಲ್ಲಿ ನೀವು ಮಹತ್ತರವಾದ ಒಳನೋಟವನ್ನು ಪಡೆದುಕೊಳ್ಳುವಿರಿ. “ನಮಗಾಗಿರುವ ಪಾಠಗಳು” ಎಂಬ ಮೇಲ್ಬರಹದ ಕೆಳಗೆ ಕೊಡಲ್ಪಟ್ಟಿರುವ ಹೇಳಿಕೆಗಳು, ಆಯಾ ವಾರಕ್ಕಾಗಿರುವ ಬೈಬಲ್ ವಾಚನದಿಂದ ನೀವು ಹೇಗೆ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ ಎಂಬುದನ್ನು ತೋರಿಸುವವು.
[ಪುಟ 24, 25ರಲ್ಲಿರುವ ಚಿತ್ರ]
ಇಸ್ರಾಯೇಲ್ಯರನ್ನು ದಾಸತ್ವದಿಂದ ಬಿಡಿಸಲಿಕ್ಕಾಗಿ ಬಹುಸಾತ್ವಿಕನಾಗಿದ್ದ ಮೋಶೆಯನ್ನು ಯೆಹೋವನು ನೇಮಿಸಿದನು
[ಪುಟ 25ರಲ್ಲಿರುವ ಚಿತ್ರ]
ಆ ಹತ್ತು ಬಾಧೆಗಳು, ನೀರು, ಸೂರ್ಯನ ಬೆಳಕು, ಕೀಟಗಳು, ಪ್ರಾಣಿಗಳು ಮತ್ತು ಮನುಷ್ಯರ ಮೇಲಿನ ಸೃಷ್ಟಿಕರ್ತನ ನಿಯಂತ್ರಣವನ್ನು ತೋರ್ಪಡಿಸಿದವು
[ಪುಟ 26, 27ರಲ್ಲಿರುವ ಚಿತ್ರ]
ಮೋಶೆಯ ಮೂಲಕ ಯೆಹೋವನು ಇಸ್ರಾಯೇಲ್ಯರನ್ನು ಒಂದು ದೇವಪ್ರಭುತ್ವಾತ್ಮಕ ಜನಾಂಗವಾಗಿ ವ್ಯವಸ್ಥಾಪಿಸಿದನು