ನಿಜ ಕ್ರೈಸ್ತತ್ವವು ಏಳಿಗೆ ಹೊಂದುತ್ತಿದೆ
ನಿಜ ಕ್ರೈಸ್ತತ್ವವು ಏಳಿಗೆ ಹೊಂದುತ್ತಿದೆ
ಪ್ರಥಮ ಶತಮಾನದಲ್ಲಿ, ಯೇಸುವಿನ ಶುಶ್ರೂಷೆಯು ಭೂಮಿಯ ಮೇಲೆ ಪ್ರಬಲವಾದ ಪರಿಣಾಮವನ್ನು ಬೀರಿತು. ಅವನ ಸಂದೇಶವು ಜನರನ್ನು ಅತ್ಯಾಶ್ಚರ್ಯಪಡುವ ಹಾಗೆ ಮಾಡುವಷ್ಟು ಸ್ಫೂರ್ತಿದಾಯಕವೂ ಜ್ಞಾನೋದಯಗೊಳಿಸುವಂಥದ್ದೂ ಮತ್ತು ಭಾವಪ್ರೇರಕವೂ ಆಗಿತ್ತು. ಅವನು ಮಾತನಾಡುವುದನ್ನು ಕೇಳಿಸಿಕೊಂಡ ಅನೇಕರು, ಅವನ ಮಾತುಗಳಿಂದ ಬಲವಾಗಿ ಪ್ರಭಾವಿಸಲ್ಪಟ್ಟರು.—ಮತ್ತಾಯ 7:28, 29.
ಯೇಸು ತನ್ನ ದಿನದ ದಬ್ಬಾಳಿಕೆ ನಡೆಸುವ ಧಾರ್ಮಿಕ ಅಥವಾ ರಾಜಕೀಯ ವ್ಯವಸ್ಥೆಗಳಲ್ಲಿ ಒಳಗೂಡಲು ಧೈರ್ಯದಿಂದ ನಿರಾಕರಿಸಿದನು ಆದರೆ ಸಾಮಾನ್ಯ ಮನುಷ್ಯರು ತನ್ನನ್ನು ಸುಲಭವಾಗಿ ಸಮೀಪಿಸುವ ಅವಕಾಶವನ್ನು ಮಾಡಿಕೊಟ್ಟನು. (ಮತ್ತಾಯ 11:25-30) ಭೂಮಿಯ ಮೇಲೆ ದುಷ್ಟಾತ್ಮಗಳಿಗಿರುವ ವ್ಯಾಪಕವಾದ ಪ್ರಭಾವದ ಬಗ್ಗೆ ಅವನು ಬಹಿರಂಗವಾಗಿ ಒಪ್ಪಿಕೊಂಡನು ಮತ್ತು ಅವುಗಳ ಮೇಲೆ ದೇವದತ್ತ ಶಕ್ತಿಯನ್ನು ಪ್ರದರ್ಶಿಸಿದನು. (ಮತ್ತಾಯ 4:2-11, 24; ಯೋಹಾನ 14:30) ನರಳಾಟ ಮತ್ತು ಪಾಪದ ಮಧ್ಯೆಯಿರುವ ಮೂಲಭೂತ ಸಂಬಂಧವನ್ನು ಯೇಸು ನಿಪುಣತೆಯಿಂದ ಸ್ಪಷ್ಟಪಡಿಸಿದನು, ಮತ್ತು ಬಾಳುವ ಪರಿಹಾರಕ್ಕಾಗಿ ದೇವರ ರಾಜ್ಯದ ಕಡೆಗೆ ನೋಡುವಂತೆ ಪ್ರೀತಿಯಿಂದ ಸೂಚಿಸಿದನು. (ಮಾರ್ಕ 2:1-12; ಲೂಕ 11:2, 17-23) ದೇವರೊಂದಿಗೆ ವೈಯಕ್ತಿಕ ಸಂಬಂಧವನ್ನು ಹೊಂದಿರಲು ಆಸಕ್ತರಾಗಿದ್ದವರೆಲ್ಲರಿಗೆ ದೇವರ ನಾಮವನ್ನು ಸ್ಪಷ್ಟಪಡಿಸುವ ಮೂಲಕ, ತನ್ನ ತಂದೆಯ ನಿಜ ಸ್ವಭಾವವನ್ನು ದೀರ್ಘ ಕಾಲದವರೆಗೆ ಮಂಕುಗೊಳಿಸಿದ್ದ ಕತ್ತಲೆಯ ಪರದೆಯನ್ನು ನಿರಂತರಕ್ಕೂ ತೆಗೆದುಹಾಕಿದನು.—ಯೋಹಾನ 17:6, 26.
ಆದುದರಿಂದ, ತೀವ್ರವಾದ ಧಾರ್ಮಿಕ ಮತ್ತು ರಾಜಕೀಯ ಚಿತ್ರಹಿಂಸೆಯ ಎದುರಿನಲ್ಲೂ ಯೇಸುವಿನ ಶಿಷ್ಯರು ಅವನ ಪ್ರಬಲವಾದ ಸಂದೇಶವನ್ನು ತ್ವರಿತಗತಿಯಲ್ಲಿ ಹಬ್ಬಿಸಿದರು ಎಂಬುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಕೇವಲ ಮೂವತ್ತೇ ವರ್ಷಗಳಲ್ಲಿ, ಚಟುವಟಿಕೆಯಿಂದ ಗಿಜಿಗುಟ್ಟುವ ಕ್ರೈಸ್ತ ಸಭೆಗಳು ಆಫ್ರಿಕ, ಏಷ್ಯಾ, ಮತ್ತು ಯೂರೋಪ್‌ನಲ್ಲಿ ಸ್ಥಾಪಿಸಲ್ಪಟ್ಟವು. (ಕೊಲೊಸ್ಸೆ 1:23) ಯೇಸು ಕಲಿಸಿದಂಥ ಸರಳವಾದ ಸತ್ಯಗಳು, ರೋಮನ್ ಸಾಮ್ರಾಜ್ಯದಾದ್ಯಂತವಿದ್ದ ನಮ್ರ ಹಾಗೂ ಸಹೃದಯಿ ಜನರನ್ನು ಬೆಳಗಿಸಿತು.—ಎಫೆಸ 1:17, 18.
ಆದರೆ, ಇಂತಹ ವೈವಿಧ್ಯಮಯ ಆರ್ಥಿಕ, ಸಾಂಸ್ಕೃತಿಕ, ಭಾಷೀಯ, ಮತ್ತು ಧಾರ್ಮಿಕ ಹಿನ್ನೆಲೆಗಳಿಂದ ಬಂದಿರುವ ಹೊಸ ಶಿಷ್ಯರು, ಪೌಲನು ಕರೆದಂತೆ, ನಿಜವಾಗಿಯೂ ಐಕ್ಯವಾಗಿರುವ “ಒಂದೇ ನಂಬಿಕೆ”ಯಲ್ಲಿ ಹೇಗೆ ಒಟ್ಟುಸೇರುವರು? (ಎಫೆಸ 4:5, ಪರಿಶುದ್ಧ ಬೈಬಲ್ *) ಅವರೆಲ್ಲರೂ ಛಿದ್ರಗೊಳ್ಳದೆ ‘ಒಂದೇ ಮಾತುಳ್ಳವರಾಗಿರುವಂತೆ’ ಯಾವುದು ಮಾಡುವುದು? (1 ಕೊರಿಂಥ 1:10) ಇಂದು ನಾಮಮಾತ್ರದ ಕ್ರೈಸ್ತರ ಮಧ್ಯೆಯಿರುವ ಗಂಭೀರವಾದ ಅನೈಕ್ಯದ ಎದುರಿನಲ್ಲಿ, ಯೇಸು ಸ್ವತಃ ಏನನ್ನು ಬೋಧಿಸಿದನೋ ಅದನ್ನು ಪರಿಗಣಿಸುವುದು ಒಳ್ಳೆಯದಾಗಿರುವುದು.
ಕ್ರೈಸ್ತ ಐಕ್ಯಕ್ಕಾಗಿರುವ ಆಧಾರ
ಪೊಂತ್ಯ ಪಿಲಾತನ ಮುಂದೆ ವಿಚಾರಣೆಗೆ ಒಳಪಡಿಸಲ್ಪಟ್ಟಾಗ, ಕ್ರೈಸ್ತ ಐಕ್ಯಕ್ಕಾಗಿರುವ ಆಧಾರವನ್ನು ಯೇಸು ಸ್ಪಷ್ಟಪಡಿಸಿದನು. ಅವನು ಹೇಳಿದ್ದು: “ನಾನು ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವದಕ್ಕೋಸ್ಕರ ಹುಟ್ಟಿದವನು, ಅದಕ್ಕೋಸ್ಕರವೇ ಈ ಲೋಕಕ್ಕೆ ಬಂದಿದ್ದೇನೆ. ಸತ್ಯಪರರೆಲ್ಲರು ನನ್ನ ಮಾತಿಗೆ ಕಿವಿಕೊಡುತ್ತಾರೆ.” ಯೋಹಾನ 18:37) ಆದುದರಿಂದ, ಯೇಸುವಿನ ಬೋಧನೆಗಳ ಜೊತೆಗೆ ದೇವರ ಪ್ರೇರಿತ ವಾಕ್ಯವಾದ ಇಡೀ ಬೈಬಲನ್ನು ಸ್ವೀಕರಿಸುವುದು, ಕ್ರಿಸ್ತನ ನಿಜ ಶಿಷ್ಯರ ಮೇಲೆ ಬಲಾಢ್ಯವಾದ ಐಕ್ಯಗೊಳಿಸುವ ಪ್ರಭಾವವನ್ನು ಬೀರುತ್ತದೆ.—1 ಕೊರಿಂಥ 4:6; 2 ತಿಮೊಥೆಯ 3:16, 17.
(ವಾಸ್ತವದಲ್ಲಿ, ಕೆಲವೊಮ್ಮೆ ಯೇಸುವಿನ ಶಿಷ್ಯರ ಮಧ್ಯೆ ಯಥಾರ್ಥವಾದ ಪ್ರಶ್ನೆಗಳು ಮತ್ತು ಭಿನ್ನಾಭಿಪ್ರಾಯಗಳು ಏಳಬಹುದು. ಆಗ ಏನು? ಯೇಸು ವಿವರಿಸಿದ್ದು: “ಸತ್ಯದ ಆತ್ಮನು ಬಂದಾಗ ಆತನು ನಿಮ್ಮನ್ನು ನಡಿಸಿಕೊಂಡು ಹೋಗಿ ಸಕಲ ವಿಷಯದಲ್ಲಿಯೂ ಸತ್ಯಕ್ಕೆ ಸೇರಿಸುವನು. ಆತನು ತನ್ನಷ್ಟಕ್ಕೆ ತಾನೇ ಮಾತಾಡದೆ ಕೇಳಿದ ಮಾತುಗಳನ್ನೇ ಆಡುವನು; ಮತ್ತು ಮುಂದಾಗುವ ಸಂಗತಿಗಳನ್ನು ನಿಮಗೆ ತಿಳಿಸುವನು.” (ಯೋಹಾನ 16:12, 13) ಆದುದರಿಂದ, ದೇವರಿಂದ ಸತ್ಯವು ಪ್ರಗತಿಪರವಾಗಿ ಬಯಲುಗೊಳಿಸಲ್ಪಟ್ಟಾಗ ಅದನ್ನು ಯೇಸುವಿನ ನಿಜ ಶಿಷ್ಯರು ಅರ್ಥಮಾಡಿಕೊಳ್ಳುವಂತೆ ದೇವರ ಪವಿತ್ರಾತ್ಮವು ಅವರನ್ನು ಶಕ್ತಗೊಳಿಸುವುದು. ಮಾತ್ರವಲ್ಲದೆ, ಈ ಆತ್ಮವು ಪ್ರೀತಿ, ಸಂತೋಷ, ಸಮಾಧಾನವೆಂಬ ಫಲಗಳನ್ನು ಉತ್ಪಾದಿಸುವುದು, ಮತ್ತು ಇದರಿಂದಾಗಿ ಅವರ ಮಧ್ಯೆ ಐಕ್ಯವು ಬೆಳೆಯುವುದು.—ಅ. ಕೃತ್ಯಗಳು 15:28; ಗಲಾತ್ಯ 5:22, 23.
ತನ್ನ ಶಿಷ್ಯರ ಮಧ್ಯೆ ಯೇಸು ಯಾವುದೇ ಒಡಕು ಅಥವಾ ಪಂಗಡಗಳಿಗೆ ಆಸ್ಪದ ಕೊಡಲಿಲ್ಲ; ಮಾತ್ರವಲ್ಲದೆ, ಅವರು ಭೇಟಿಯಾಗಬಹುದಾದವರ ಸಾಂಸ್ಕೃತಿಕ ಅಥವಾ ಧಾರ್ಮಿಕ ಸಂಪ್ರದಾಯಗಳಿಗೆ ಎಡೆಮಾಡಿಕೊಡಲಿಕ್ಕಾಗಿ ಬೈಬಲ್ ಸತ್ಯಗಳ ಬದಲಿ ಅರ್ಥನಿರೂಪಣೆಗಳನ್ನು ಮಾಡಲು ಅಧಿಕಾರವನ್ನು ಕೊಡಲಿಲ್ಲ. ಬದಲಿಗೆ, ಅವರೊಂದಿಗೆ ಅವನು ಕಳೆದ ಕೊನೆಯ ರಾತ್ರಿಯಂದು, ಅವನು ತೀವ್ರಾಸಕ್ತಿಯಿಂದ ಪ್ರಾರ್ಥಿಸಿದ್ದು: “ಇವರಿಗೋಸ್ಕರ ಮಾತ್ರವಲ್ಲದೆ ಇವರ ವಾಕ್ಯದಿಂದ ನನ್ನನ್ನು ನಂಬುವವರಿಗೋಸ್ಕರ ಸಹ ಕೇಳಿಕೊಳ್ಳುತ್ತೇನೆ. ನೀನು ನನ್ನನ್ನು ಕಳುಹಿಸಿಕೊಟ್ಟಿದ್ದೀ ಎಂದು ಲೋಕವು ನಂಬುವದಕ್ಕಾಗಿ ಅವರೆಲ್ಲರೂ ಒಂದಾಗಿರಬೇಕೆಂತಲೂ ತಂದೆಯೇ, ನೀನು ನನ್ನಲ್ಲಿಯೂ ನಾನು ನಿನ್ನಲ್ಲಿಯೂ ಇರುವ ಪ್ರಕಾರ ಅವರೂ ನಮ್ಮಲ್ಲಿ ಇರಬೇಕೆಂತಲೂ ಕೇಳಿಕೊಳ್ಳುತ್ತೇನೆ.” (ಯೋಹಾನ 17:20, 21) ಆದುದರಿಂದ, ಪ್ರಾರಂಭದಿಂದ ಇಂದಿನ ವರೆಗೂ ಆತ್ಮದಲ್ಲಿಯೂ ಸತ್ಯದಲ್ಲಿಯೂ ಯಥಾರ್ಥವಾದ ಐಕ್ಯತೆಯೇ ಕ್ರಿಸ್ತನ ಶಿಷ್ಯರ ಗುರುತು ಚಿಹ್ನೆಯಾಗಿರಬೇಕಿತ್ತು. (ಯೋಹಾನ 4:23, 24) ಆದರೆ, ಇಂದಿನ ಚರ್ಚುಗಳೋ ಐಕ್ಯವಾಗಿರುವುದಕ್ಕೆ ಬದಲಾಗಿ ವಿಭಜಿತಗೊಂಡಿವೆ. ಇದು ಯಾಕೆ?
ಚರ್ಚುಗಳು ವಿಭಜಿತಗೊಂಡಿರುವುದಕ್ಕೆ ಕಾರಣ
ಇಂದು ನಾಮಮಾತ್ರ ಕ್ರೈಸ್ತರ ಮಧ್ಯೆಯಿರುವ ವಿಸ್ತೃತವಾದ ನಂಬಿಕೆಗಳು ಮತ್ತು ಆಚರಣೆಗಳ ಭಿನ್ನತೆಗೆ ಕೊಡಲ್ಪಡುವ ಮುಚ್ಚುಮರೆಯಿಲ್ಲದ ಕಾರಣವು, ಅವರು ಕ್ರಿಸ್ತನ ಬೋಧನೆಗಳಿಗೆ ಅಂಟಿಕೊಳ್ಳದಿರುವುದೇ. ಒಬ್ಬ ಲೇಖಕನು ಗಮನಿಸಿದ್ದು: “ಪೂರ್ವದಲ್ಲಿದ್ದಂತೆ, ಇಂದಿನ ಹೊಸ ಕ್ರೈಸ್ತರು ತಮ್ಮ ಅಗತ್ಯಗಳನ್ನು ಪೂರೈಸುವ ವಿಷಯಗಳನ್ನು ಮಾತ್ರ ತೆಗೆದುಕೊಳ್ಳುತ್ತಾರೆ—ಮತ್ತು ತಮ್ಮ ಸ್ವಂತ ದೇಶದ ಧಾರ್ಮಿಕ ಸಂಪ್ರದಾಯಗಳಿಗೆ ಸಹಮತದಲ್ಲಿಲ್ಲದಿರುವುದನ್ನು ನಿರಾಕರಿಸುತ್ತಾರೆ.” ಇದೇ ಸಂಭವಿಸುವುದೆಂದು ಯೇಸು ಮತ್ತು ಅವನ ಅಪೊಸ್ತಲರು ಮುಂತಿಳಿಸಿದ್ದರು.
ಉದಾಹರಣೆಗೆ, ದೇವಪ್ರೇರಣೆಯಿಂದ ಅಪೊಸ್ತಲ ಪೌಲನು ತನ್ನ ಜೊತೆ ಮೇಲ್ವಿಚಾರಕನಾದ ತಿಮೊಥೆಯನಿಗೆ ಬರೆದದ್ದು: “ಜನರು ಸ್ವಸ್ಥಬೋಧನೆಯನ್ನು ಸಹಿಸಲಾರದ ಕಾಲವು ಬರುತ್ತದೆ; ಅದರಲ್ಲಿ ಅವರು ತೀಟೇ ಕಿವಿಗಳುಳ್ಳವರಾಗಿ ತಮ್ಮ ದುರಾಶೆಗಳಿಗೆ ಅನುಕೂಲರಾದ ಅನೇಕ ಉಪದೇಶಕರನ್ನು ಇಟ್ಟುಕೊಳ್ಳುವರು. ಅವರು ಸತ್ಯಬೋಧನೆಗೆ ಕಿವಿಗೊಡದೆ ಕಲ್ಪನಾಕಥೆಗಳನ್ನು ಕೇಳುವದಕ್ಕೆ ಹೋಗುವರು.” ಎಲ್ಲಾ ಕ್ರೈಸ್ತರೂ ದಾರಿತಪ್ಪಿಸಲ್ಪಡುವರೋ? ಇಲ್ಲ. ಪೌಲನು ಮುಂದುವರಿಸಿದ್ದು: “ಆದರೆ ನೀನು ಎಲ್ಲಾ ವಿಷಯಗಳಲ್ಲಿ ಸ್ವಸ್ಥಚಿತ್ತನಾಗಿರು, ಶ್ರಮೆಯನ್ನು ತಾಳಿಕೋ, ಸೌವಾರ್ತಿಕನ ಕೆಲಸವನ್ನು ಮಾಡು, ನಿನಗೆ ನೇಮಿಸಿರುವ ಸೇವೆಯನ್ನು ಲೋಪವಿಲ್ಲದೆ ನಡಿಸು.” (2 ತಿಮೊಥೆಯ 4:3-5; ಲೂಕ 21:8; ಅ. ಕೃತ್ಯಗಳು 20:29, 30; 2 ಪೇತ್ರ 2:1-3) ತಿಮೊಥೆಯ ಮತ್ತು ಇತರ ನಂಬಿಗಸ್ತ ಕ್ರೈಸ್ತರು ಆ ಪ್ರೇರಿತ ಬುದ್ಧಿವಾದಕ್ಕೆ ಅನುಸಾರವಾಗಿ ಜೀವಿಸಿದರು.
ನಿಜ ಕ್ರೈಸ್ತರು ಈಗಲೂ ಐಕ್ಯವಾಗಿದ್ದಾರೆ
ತಿಮೊಥೆಯನಂತೆ ಇಂದು ಸತ್ಯ ಕ್ರೈಸ್ತರು, ಮಾನವ ತರ್ಕವನ್ನು ನಿರಾಕರಿಸುವ ಮತ್ತು ತಮ್ಮ ತಾತ್ವಿಕ ನಂಬಿಕೆಗಳಿಗೆ ಶಾಸ್ತ್ರೀಯ ಅಧಿಕಾರವನ್ನು ಮಾತ್ರ ಸ್ವೀಕರಿಸುವ ಮೂಲಕ ಸ್ವಸ್ಥಚಿತ್ತರಾಗಿ ಉಳಿದಿದ್ದಾರೆ. (ಕೊಲೊಸ್ಸೆ 2:8; 1 ಯೋಹಾನ 4:1) ಪ್ರಥಮ ಶತಮಾನದ ಕ್ರೈಸ್ತರನ್ನು ಅನುಕರಿಸುತ್ತಾ, ಯೇಸುವಿನ ಮೂಲ ಸಂದೇಶವಾದ ರಾಜ್ಯದ ಸುವಾರ್ತೆಯನ್ನು ಎಲ್ಲೆಡೆಯೂ ಇರುವ ಜನರಿಗೆ ಕೊಂಡೊಯ್ಯುವ ಮೂಲಕ ಯೆಹೋವನ ಸಾಕ್ಷಿಗಳು ತಮಗೆ ನೇಮಿಸಿರುವ ಸೇವೆಯನ್ನು 230ಕ್ಕಿಂತಲೂ ಹೆಚ್ಚು ದೇಶಗಳಲ್ಲಿ ನಡಿಸುತ್ತಿದ್ದಾರೆ. ಎಲ್ಲಿಯೇ ಜೀವಿಸುತ್ತಿರಲಿ, ಅವರು ಯೇಸುವನ್ನು ಐಕ್ಯದಿಂದ ಅನುಕರಿಸುವ ಮತ್ತು ನಿಜ ಕ್ರೈಸ್ತತ್ವವನ್ನು ಅಭ್ಯಾಸಿಸುವ ನಾಲ್ಕು ಪ್ರಧಾನ ವಿಧಗಳನ್ನು ಪರಿಗಣಿಸಿರಿ.
ಅವರ ನಂಬಿಕೆಗಳು ದೇವರ ವಾಕ್ಯದ ಮೇಲೆ ಆಧಾರಿತವಾಗಿವೆ. (ಯೋಹಾನ 17:17) ಬೆಲ್ಜಿಯಮ್‌ನಲ್ಲಿರುವ ಒಬ್ಬ ಚರ್ಚಿನ ಪಾದ್ರಿಯು ಅವರ ಕುರಿತಾಗಿ ಬರೆದದ್ದು: “ನಾವು ಅವರಿಂದ [ಯೆಹೋವನ ಸಾಕ್ಷಿಗಳಿಂದ] ಒಂದು ಸಂಗತಿಯನ್ನು ಕಲಿತುಕೊಳ್ಳಬಲ್ಲೆವು; ಅದು ದೇವರ ವಾಕ್ಯಕ್ಕೆ ಕಿವಿಗೊಡಲು ಅವರು ತೋರಿಸುವ ಸಿದ್ಧಮನಸ್ಸು ಮತ್ತು ಅದರ ಕುರಿತು ಸಾರುವುದರಲ್ಲಿ ಅವರು ತೋರಿಸುವ ಧೈರ್ಯವೇ ಆಗಿದೆ.”
ಭೌಗೋಳಿಕ ಸಮಸ್ಯೆಗಳ ನಿವಾರಣೆಗಾಗಿ ಅವರು ದೇವರ ರಾಜ್ಯದ ಕಡೆಗೆ ನೋಡುತ್ತಾರೆ. (ಲೂಕ 8:1) ಕೊಲಂಬಿಯದ ಬರಾಂಕೀಯದಲ್ಲಿ, ಒಂದು ರಾಜಕೀಯ ಆಂದೋಲನದ ಕಟ್ಟಾ ಬೆಂಬಲಿಗನಾಗಿದ್ದ ಆಂಟೊನ್ಯೊವಿನೊಂದಿಗೆ ಒಬ್ಬ ಸಾಕ್ಷಿಯು ಮಾತನಾಡಿದನು. ಈ ಸಾಕ್ಷಿಯು ಆಂಟೊನ್ಯೊವಿನ ಪಕ್ಷವನ್ನೂ ವಹಿಸಲಿಲ್ಲ, ಅಥವಾ ಬೇರೊಂದು ರಾಜಕೀಯ ಸಂಘಟನೆಯನ್ನೂ ಸಮರ್ಥಿಸಲಿಲ್ಲ. ಬದಲಿಗೆ, ಯಾವುದೇ ವೆಚ್ಚವಿಲ್ಲದೆ ಆಂಟೊನ್ಯೊ ಮತ್ತು ಅವನ ತಂಗಿಯರೊಂದಿಗೆ ಬೈಬಲನ್ನು ಅಧ್ಯಯನ ಮಾಡುವ ನೀಡಿಕೆಯನ್ನು ಅವನು ಮಾಡಿದನು. ಶೀಘ್ರವೇ ಆಂಟೊನ್ಯೊ, ನಿಜವಾಗಿಯೂ ದೇವರ ರಾಜ್ಯವು ಮಾತ್ರವೇ ಕೊಲಂಬಿಯದಲ್ಲಿರುವ ಮತ್ತು ಇಡೀ ಲೋಕದಲ್ಲಿರುವ ಬಡಜನರ ಏಕಮಾತ್ರ ನಿರೀಕ್ಷೆಯಾಗಿದೆ ಎಂಬುದನ್ನು ಅರ್ಥಮಾಡಿಕೊಂಡನು.
ಅವರು ದೇವರ ನಾಮವನ್ನು ಘನಪಡಿಸುತ್ತಾರೆ. (ಮತ್ತಾಯ 6:10) ಆಸ್ಟ್ರೇಲಿಯದಲ್ಲಿ ಜೀವಿಸುತ್ತಿರುವ ಮಾರೀಅ ಎಂಬ ಯಥಾರ್ಥ ಕ್ಯಾಥೊಲಿಕಳನ್ನು ಯೆಹೋವನ ಸಾಕ್ಷಿಗಳು ಪ್ರಥಮಬಾರಿ ಭೇಟಿಮಾಡಿದಾಗ, ಸಾಕ್ಷಿಗಳು ಬೈಬಲಿನಿಂದ ದೇವರ ಹೆಸರನ್ನು ತೋರಿಸುವಂತೆ ಅವಳು ಅನುಮತಿಸಿದಳು. ಅವಳ ಪ್ರತಿಕ್ರಿಯೆ ಏನಾಗಿತ್ತು? “ಮೊದಲಬಾರಿ ದೇವರ ಹೆಸರನ್ನು ಬೈಬಲಿನಲ್ಲಿ ಕಂಡುಕೊಂಡಾಗ, ನಾನು ಅತ್ತುಬಿಟ್ಟೆ. ನಾನು ದೇವರ ವೈಯಕ್ತಿಕ ಹೆಸರನ್ನು ತಿಳಿದುಕೊಂಡು ಅದನ್ನು ಉಪಯೋಗಿಸಬಲ್ಲೆ ಎಂಬ ಜ್ಞಾನವು ನನ್ನನ್ನು ಈ ರೀತಿಯಾಗಿ ಪ್ರಭಾವಿಸಿತು.” ಮಾರೀಅ ಬೈಬಲನ್ನು ಅಧ್ಯಯನ ಮಾಡುವುದನ್ನು ಮುಂದುವರಿಸಿದಳು, ಮತ್ತು ತನ್ನ ಜೀವಿತದಲ್ಲಿ ಮೊಟ್ಟಮೊದಲ ಬಾರಿ ಯೆಹೋವನು ಯಾವ ರೀತಿಯ ವ್ಯಕ್ತಿಯಾಗಿದ್ದಾನೆ ಎಂಬುದನ್ನು ತಿಳಿದುಕೊಂಡಳು ಹಾಗೂ ಆತನೊಂದಿಗೆ ಒಂದು ಬಾಳುವ ಸಂಬಂಧವನ್ನು ಬೆಳೆಸಿಕೊಳ್ಳಲು ಶಕ್ತಳಾದಳು.
ಅವರು ಪ್ರೀತಿಯಲ್ಲಿ ಹೆಣೆಯಲ್ಪಟ್ಟಿದ್ದಾರೆ. (ಯೋಹಾನ 13:34, 35) ಕೆನಡದ ಲೇಡಿಸ್ಮಿತ್-ಶಮೇನಸ್ ಕ್ರಾನಿಕಲ್ ವಾರ್ತಾಪತ್ರಿಕೆಯಲ್ಲಿನ ಒಂದು ಸಂಪಾದಕೀಯವು ಹೀಗೆ ಹೇಳಿತು: “ನೀವು ಧಾರ್ಮಿಕ ನಂಬಿಕೆಯುಳ್ಳವರಾಗಿರಲಿ, ಇಲ್ಲದವರಾಗಿರಲಿ, ಕಳೆದ ಒಂದೂವರೆ ವಾರದಿಂದ ಕಸಿಡೀಯಲ್ಲಿ 25,000 ಚದರಡಿಯ ಒಂದು ಸಮ್ಮೇಳನ ಸಭಾಂಗಣವನ್ನು ಕಟ್ಟುವುದರಲ್ಲಿ ಹಗಲುರಾತ್ರಿ ಕೆಲಸ ಮಾಡಿದ 4,500 ಮಂದಿ ಯೆಹೋವನ ಸಾಕ್ಷಿಗಳನ್ನು ನೀವು ಪ್ರಶಂಸಿಸಲೇ ಬೇಕಾಗಿದೆ . . . ಯಾವುದೇ ವಾಗ್ವಾದ, ಕಚ್ಚಾಟ ಅಥವಾ ಸ್ವಗೌರವದ ಪೈಪೋಟಿಗಿಳಿಯದೆ ಸಂತೋಷದಿಂದ ಇದನ್ನು ಮಾಡುವುದೇ ನಿಜ ಕ್ರೈಸ್ತತ್ವದ ಗುರುತಾಗಿದೆ.”
ಆದ್ದರಿಂದ ರುಜುವಾತನ್ನು ಪರಿಗಣಿಸಿರಿ. ಕ್ರೈಸ್ತಪ್ರಪಂಚದ ದೇವತಾಶಾಸ್ತ್ರಜ್ಞರು, ಮಿಷನೆರಿಗಳು, ಮತ್ತು ಚರ್ಚ್‌ಹೋಕರು ತಮ್ಮ ಚರ್ಚುಗಳಲ್ಲಿನ ವಿವಾದದ ಒಟ್ಟುಗೂಡುತ್ತಿರುವ ಕಾರ್ಮೋಡಗಳೊಂದಿಗೆ ಹೋರಾಡುತ್ತಾ ಮುಂದುವರಿಯುವಾಗ, ನಿಜ ಕ್ರೈಸ್ತತ್ವವು ಲೋಕವ್ಯಾಪಕವಾಗಿ ಏಳಿಗೆ ಹೊಂದುತ್ತಿದೆ. ವಾಸ್ತವದಲ್ಲಿ, ದೇವರ ವಾಕ್ಯದ ಕುರಿತು ಸಾರುವ ಮತ್ತು ಬೋಧಿಸುವ ತಮ್ಮ ನೇಮಿತ ಶುಶ್ರೂಷೆಯಲ್ಲಿ ಸತ್ಯ ಕ್ರೈಸ್ತರು ಮುಂದುವರಿಯುತ್ತಿದ್ದಾರೆ. (ಮತ್ತಾಯ 24:14; 28:19, 20) ಈಗ ಸಂಭವಿಸುತ್ತಿರುವ ಸಕಲ ಅಸಹ್ಯಕಾರ್ಯಗಳ ಕುರಿತು “ನರಳಿ ಗೋಳಾಡುತ್ತಿರುವ ಜನ”ರಲ್ಲಿ ನೀವೂ ಒಬ್ಬರಾಗಿರುವುದಾದರೆ ಮತ್ತು ಕ್ರೈಸ್ತಪ್ರಪಂಚದ ಧರ್ಮಗಳ ಮಧ್ಯೆಯಿರುವ ಅನೈಕ್ಯದಿಂದಾಗಿ ವ್ಯಥೆಗೀಡಾಗಿರುವುದಾದರೆ, ಒಬ್ಬನೇ ಸತ್ಯ ದೇವರಾದ ಯೆಹೋವನ ಐಕ್ಯವಾದ ಕ್ರೈಸ್ತ ಆರಾಧನೆಯಲ್ಲಿ ಯೆಹೋವನ ಸಾಕ್ಷಿಗಳನ್ನು ಜೊತೆಗೂಡುವಂತೆ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ.—ಯೆಹೆಜ್ಕೇಲ 9:4; ಯೆಶಾಯ 2:2-4.
[ಪಾದಟಿಪ್ಪಣಿ]
^ ಪ್ಯಾರ. 5 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.