ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅವರು ಇಕ್ಕಟ್ಟಾದ ದಾರಿಯನ್ನು ಕಂಡುಹಿಡಿಯಲು ಪ್ರಯತ್ನಿಸಿದರು

ಅವರು ಇಕ್ಕಟ್ಟಾದ ದಾರಿಯನ್ನು ಕಂಡುಹಿಡಿಯಲು ಪ್ರಯತ್ನಿಸಿದರು

ಅವರು ಇಕ್ಕಟ್ಟಾದ ದಾರಿಯನ್ನು ಕಂಡುಹಿಡಿಯಲು ಪ್ರಯತ್ನಿಸಿದರು

ಸುಮಾರು 550 ವರ್ಷಗಳ ಹಿಂದೆ, ಈಗ ಯಾವುದು ಚೆಕ್‌ ರಿಪಬ್ಲಿಕ್‌ ಎಂದು ಕರೆಯಲ್ಪಡುತ್ತದೋ ಅದರಲ್ಲಿರುವ ಪ್ರಾಗ್‌, ಕೆಲ್ಸೀಸಿ, ವಿಲೀಮಾವ್‌, ಕ್ಲಾಟವೀ ಹಾಗೂ ಇತರ ಪಟ್ಟಣಗಳಲ್ಲಿ ವಾಸಿಸುತ್ತಿದ್ದ ಕ್ರೈಸ್ತರೆಂದು ಹೇಳಿಕೊಳ್ಳುತ್ತಿದ್ದ ಜನರ ಚಿಕ್ಕ ಗುಂಪುಗಳು ತಮ್ಮ ಮನೆಗಳನ್ನು ತೊರೆದವು. ಈ ಜನರು ಈಶಾನ್ಯ ಬೊಹೆಮಿಯದಲ್ಲಿದ್ದ ಒಂದು ಕಣಿವೆಯ ಕೂನ್‌ವಾಲ್ಟ್‌ ಎಂಬ ಹಳ್ಳಿಯ ಸಮೀಪ ಬಂದು ನೆಲೆಸಿದರು. ಇಲ್ಲಿ ಅವರು ಚಿಕ್ಕ ಚಿಕ್ಕ ಮನೆಗಳನ್ನು ಕಟ್ಟಿಕೊಂಡು, ಜಮೀನುಗಳಲ್ಲಿ ವ್ಯವಸಾಯಮಾಡಿ, ತಮ್ಮ ಬೈಬಲುಗಳನ್ನು ಓದಿ, ಯೂನಿಟಿ ಆಫ್‌ ಬ್ರೆದ್ರನ್‌ ಅಥವಾ ಲ್ಯಾಟಿನ್‌ ಭಾಷೆಯಲ್ಲಿ ಯೂನಿಟಾಸ್‌ ಫ್ರಾಟ್ರುಮ್‌ ಎಂಬ ಹೆಸರನ್ನು ತಮಗೆ ಕೊಟ್ಟುಕೊಂಡರು.

ಈ ನೆಲೆಸಿಗರಲ್ಲಿ ಬೇರೆ ಬೇರೆ ಹಿನ್ನೆಲೆಗಳಿಂದ ಬಂದಿದ್ದ ಜನರು ಸೇರಿದ್ದರು. ಅವರಲ್ಲಿ ರೈತರು, ಕುಲೀನರು, ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು, ಶ್ರೀಮಂತರು ಮತ್ತು ಬಡವರು, ಸ್ತ್ರೀಪುರುಷರು, ವಿಧವೆಯರು ಮತ್ತು ಅನಾಥರು ಇದ್ದರು. ಇವರೆಲ್ಲರಿಗೂ ಒಂದೇ ಬಯಕೆಯಿತ್ತು. ಅವರು ಬರೆದುದು: “ನಾವು ಪ್ರಾರ್ಥನೆಯಲ್ಲಿ ಸ್ವತಃ ದೇವರ ಕಡೆಗೆ ತಿರುಗಿದೆವು, ಮತ್ತು ಸರ್ವ ವಿಷಯಗಳಲ್ಲಿಯೂ ಆತನ ಮಹಾನ್‌ ಚಿತ್ತವನ್ನು ನಮಗೆ ಪ್ರಕಟಪಡಿಸುವಂತೆ ಆತನ ಬಳಿ ಬೇಡಿಕೊಂಡೆವು. ನಾವು ಆತನ ಮಾರ್ಗಗಳಲ್ಲಿ ನಡೆಯಲು ಬಯಸಿದೆವು.” ಸಮಯಾನಂತರ ಯೂನಿಟಿ ಆಫ್‌ ಬ್ರೆದ್ರನ್‌ ಅಥವಾ ಚೆಕ್‌ ಬ್ರೆದ್ರನ್‌ ಎಂದು ಕರೆಯಲ್ಪಟ್ಟ ವಿಶ್ವಾಸಿಗಳ ಈ ಸಮುದಾಯವು, ‘ನಿತ್ಯಜೀವಕ್ಕೆ ಹೋಗುವ ಇಕ್ಕಟ್ಟಾದ ದಾರಿಯನ್ನು’ ಕಂಡುಹಿಡಿಯಲು ಪ್ರಯತ್ನಿಸಿತು ಎಂಬುದಂತೂ ಖಂಡಿತ. (ಮತ್ತಾಯ 7:​13, 14) ಅವರ ಅನ್ವೇಷಣೆಯು ಯಾವ ಬೈಬಲ್‌ ಸತ್ಯತೆಗಳನ್ನು ಬಯಲುಪಡಿಸಿತು? ಆ ಯುಗದಲ್ಲಿ ಸ್ವೀಕರಿಸಲ್ಪಟ್ಟಿದ್ದ ನಂಬಿಕೆಗಳಿಗಿಂತ ಇವರ ನಂಬಿಕೆಗಳು ಹೇಗೆ ಭಿನ್ನವಾಗಿದ್ದವು, ಮತ್ತು ಅವರಿಂದ ನಾವು ಯಾವ ಪಾಠವನ್ನು ಕಲಿಯಸಾಧ್ಯವಿದೆ?

ಹಿಂಸಾಚಾರವಿಲ್ಲ​—ರಾಜಿಯಿಲ್ಲ

ಹದಿನೈದನೆಯ ಶತಮಾನದ ಮಧ್ಯಭಾಗದಲ್ಲಿ, ಅನೇಕ ಧಾರ್ಮಿಕ ಚಳವಳಿಗಳು ಯೂನಿಟಿ ಆಫ್‌ ಬ್ರೆದ್ರನ್‌ ಪಂಗಡದ ರಚನೆಗೆ ಕಾರಣವಾದವು. ಇವುಗಳಲ್ಲಿ ಒಂದು 12ನೇ ಶತಮಾನದಲ್ಲಿ ಆರಂಭಗೊಂಡ ವಾಲ್ಡೆನ್ಸೀಸ್‌ (ವಾಲ್ಡೋ ಪಂಥಿಗಳು) ಎಂಬ ಚಳವಳಿಯಾಗಿತ್ತು. ಆರಂಭದಲ್ಲಿ, ಮಧ್ಯ ಯೂರೋಪಿನಲ್ಲಿ ದೇಶದಾದ್ಯಂತ ಸ್ವೀಕರಿಸಲ್ಪಟ್ಟಿದ್ದ ರೋಮನ್‌ ಕ್ಯಾಥೊಲಿಕ್‌ ಮತವನ್ನು ವಾಲ್ಡೋ ಪಂಥಿಗಳು ತೊರೆದುಬಿಟ್ಟರು. ಆದರೂ, ಸಮಯಾನಂತರ ಅವರು ಪುನಃ ಕ್ಯಾಥೊಲಿಕ್‌ ಬೋಧನೆಗಳನ್ನು ಸ್ವಲ್ಪಮಟ್ಟಿಗೆ ಅಳವಡಿಸಿಕೊಂಡರು. ಆಗ ಇದ್ದ ಇನ್ನೊಂದು ಪ್ರಭಾವಶಾಲಿ ಗುಂಪು ಹಸ್‌

ಪಂಥಿಗಳದ್ದಾಗಿದ್ದು, ಇವರು ಜಾನ್‌ ಹಸ್‌ ಎಂಬ ವ್ಯಕ್ತಿಯ ಅನುಯಾಯಿಗಳಾಗಿದ್ದರು. ಚೆಕ್‌ನಲ್ಲಿದ್ದ ಜನಸಂಖ್ಯೆಯ ಅಧಿಕಾಂಶ ಜನರ ಧರ್ಮವನ್ನು ಇವರು ಪ್ರತಿನಿಧಿಸಿದ್ದರೂ, ಅವರಲ್ಲಿ ಸ್ವಲ್ಪವೂ ಐಕ್ಯಭಾವವಿರಲಿಲ್ಲ. ಒಂದು ಪಕ್ಷವು ಸಾಮಾಜಿಕ ವಿವಾದಗಳ ಕುರಿತು ಹೋರಾಡುತ್ತಿದ್ದಾಗ ಇನ್ನೊಂದು ಪಕ್ಷವು ರಾಜಕೀಯ ಸುಧಾರಣೆಗಾಗಿ ಧರ್ಮವನ್ನು ಉಪಯೋಗಿಸುತ್ತಿತ್ತು. ಬ್ರೆದ್ರನ್‌ ಪಂಗಡದವರು, ಕಿಲಿಆ್ಯಸಮ್‌ (ಸುಯುಗವಾದ) ಗುಂಪಿನವರ ಮತ್ತು ಸ್ಥಳಿಕ ಹಾಗೂ ವಿದೇಶೀ ಬೈಬಲ್‌ ವಿದ್ವಾಂಸರ ಪ್ರಭಾವಕ್ಕೆ ಒಳಗಾಗಿದ್ದರು.

ಚೆಕ್‌ ಬೈಬಲ್‌ ವಿದ್ವಾಂಸನೂ ಮತಸುಧಾರಕನೂ ಆಗಿದ್ದ ಪೀಟರ್‌ ಕೆಲ್‌ಸೀಡ್‌ಸ್ಕೀ (ಸುಮಾರು 1390ರಿಂದ-ಸುಮಾರು 1460ರ ತನಕ), ವಾಲ್ಡೋ ಪಂಥಿಗಳು ಮತ್ತು ಹಸ್‌ ಪಂಥಿಗಳ ಬೋಧನೆಗಳೊಂದಿಗೆ ಚಿರಪರಿಚಿತನಾಗಿದ್ದನು. ಹಸ್‌ ಪಂಥಿಗಳ ಚಳವಳಿಯು ಹಿಂಸಾತ್ಮಕ ವಿಧಗಳನ್ನು ಉಪಯೋಗಿಸಲು ಆರಂಭಿಸಿದ್ದರಿಂದ ಅವನು ಆ ಪಂಥವನ್ನು ತಿರಸ್ಕರಿಸಿದನು, ಮತ್ತು ವಾಲ್ಡೋ ಪಂಥಿಗಳು ತಮ್ಮ ಬೋಧನೆಗಳಲ್ಲಿ ಒಪ್ಪಂದಗಳನ್ನು ಮಾಡಿಕೊಂಡಿದ್ದರಿಂದ ಅವರಿಂದಲೂ ವಿಮುಖನಾದನು. ಅವನು ಯುದ್ಧವನ್ನು ಅಕ್ರೈಸ್ತವೆಂದು ಖಂಡಿಸಿದನು. “ಕ್ರಿಸ್ತನ ನಿಯಮ”ವನ್ನು ಅನುಸರಿಸುವುದರಿಂದ ಯಾವುದೇ ಪರಿಣಾಮಗಳು ಉಂಟಾಗುವುದಾದರೂ, ಈ ನಿಯಮವೇ ಕ್ರೈಸ್ತನೊಬ್ಬನ ಜೀವಿತವನ್ನು ನಿಯಂತ್ರಿಸಬೇಕು ಎಂಬುದು ಅವನ ಅಭಿಪ್ರಾಯವಾಗಿತ್ತು. (ಗಲಾತ್ಯ 6:2; ಮತ್ತಾಯ 22:​37-39) 1440ರಲ್ಲಿ, ನಂಬಿಕೆಯ ಜಾಲ (ಜರ್ಮನ್‌) ಎಂಬ ಪುಸ್ತಕದಲ್ಲಿ ಕೆಲ್‌ಸೀಡ್‌ಸ್ಕೀ ತನ್ನ ಬೋಧನೆಗಳನ್ನು ಲಿಖಿತರೂಪದಲ್ಲಿ ನಮೂದಿಸಿದನು.

ವಿದ್ವಾಂಸನಾಗಿದ್ದ ಕೆಲ್‌ಸೀಡ್‌ಸ್ಕೀಯ ಸಮಕಾಲೀನನಾಗಿದ್ದ ಪ್ರಾಗ್‌ನ ಗ್ರೆಗರಿಯು ಕೆಲ್‌ಸೀಡ್‌ಸ್ಕೀಯ ಬೋಧನೆಗಳಿಂದ ಎಷ್ಟರ ಮಟ್ಟಿಗೆ ಪ್ರಭಾವಿತನಾಗಿದ್ದನೆಂದರೆ, ಅವನು ಹಸ್‌ ಪಂಥದ ಚಳವಳಿಯನ್ನೇ ಬಿಟ್ಟುಬಂದನು. 1458ರಲ್ಲಿ, ಈ ಮುಂಚೆ ಹಸ್‌ ಪಂಥಿಗಳಾಗಿದ್ದ ಜನರ ಚಿಕ್ಕ ಗುಂಪುಗಳು ಚೆಕಿಯದ ಬೇರೆ ಬೇರೆ ಭಾಗಗಳಲ್ಲಿದ್ದ ತಮ್ಮ ಮನೆಗಳನ್ನು ಬಿಟ್ಟು ಬರುವಂತೆ ಗ್ರೆಗರಿಯು ಅವರನ್ನು ಒಡಂಬಡಿಸಿದನು. ಕೂನ್‌ವಾಲ್ಟ್‌ ಹಳ್ಳಿಯ ತನಕ ಅವನನ್ನು ಹಿಂಬಾಲಿಸಿ, ಒಂದು ಹೊಸ ಧಾರ್ಮಿಕ ಸಮುದಾಯವನ್ನು ಸ್ಥಾಪಿಸಿದಂಥ ಜನರಲ್ಲಿ ಇವರೂ ಸೇರಿದ್ದರು. ಸಮಯಾನಂತರ ಚೆಕ್‌ ಮತ್ತು ಜರ್ಮನ್‌ ವಾಲ್ಡೋ ಪಂಥಿಗಳ ಗುಂಪುಗಳು ಅಲ್ಲಿ ಇವರನ್ನು ಜೊತೆಗೂಡಿದರು.

ಗತಕಾಲದ ಒಳನೋಟ

ಇಸವಿ 1464ರಿಂದ 1467ರ ತನಕ, ಹೊಸದಾಗಿದ್ದರೂ ತೀವ್ರಗತಿಯಲ್ಲಿ ಬೆಳೆಯುತ್ತಿದ್ದ ಈ ಗುಂಪು ಕೂನ್‌ವಾಲ್ಟ್‌ ಪ್ರಾಂತ್ಯದಲ್ಲಿ ಅನೇಕ ಸಮ್ಮೇಳನಗಳನ್ನು ನಡೆಸಿತು ಮತ್ತು ಅವರ ಹೊಸ ಧಾರ್ಮಿಕ ಚಳವಳಿಯನ್ನು ಸ್ಪಷ್ಟವಾಗಿ ನಿರೂಪಿಸಿದಂಥ ಅನೇಕ ಠರಾವುಗಳನ್ನು ಸ್ವೀಕರಿಸಿತು. ಈ ಎಲ್ಲಾ ಠರಾವುಗಳನ್ನು ಪುಸ್ತಕಗಳ ಸರಣಿಯಲ್ಲಿ ತುಂಬ ಜಾಗ್ರತೆಯಿಂದ ದಾಖಲಿಸಲಾಗಿದ್ದು, ಈಗ ಇದು ಆಕ್ಟಾ ಯೂನೇಟಾಟಿಸ್‌ ಫ್ರಾಟ್ರುಮ್‌ (ಯೂನಿಟಿ ಆಫ್‌ ಬ್ರೆದ್ರನ್‌ನ ಕೃತ್ಯಗಳು) ಎಂದು ಪ್ರಸಿದ್ಧವಾಗಿದೆ ಮತ್ತು ಇದು ಈಗಲೂ ಅಸ್ತಿತ್ವದಲ್ಲಿದೆ. ಈ ಆಕ್ಟಾವು ಬ್ರೆದ್ರನ್‌ ಪಂಗಡದ ನಂಬಿಕೆ ಏನಾಗಿತ್ತು ಎಂಬುದರ ಕುರಿತಾದ ಸುಸ್ಪಷ್ಟ ಚಿತ್ರಣವನ್ನು ಒದಗಿಸುತ್ತಾ, ಗತಕಾಲದ ಬಗ್ಗೆ ಒಳನೋಟವನ್ನು ನೀಡುತ್ತದೆ. ಈ ಪುಸ್ತಕಗಳಲ್ಲಿ ಪತ್ರಗಳು, ಭಾಷಣಗಳ ಹಸ್ತಲಿಖಿತ ನಕಲುಪ್ರತಿಗಳು ಮತ್ತು ಅವರ ವಾದವಿವಾದಗಳ ಕುರಿತಾದ ವಿವರಗಳು ಒಳಗೂಡಿವೆ.

ಬ್ರೆದ್ರನ್‌ ಪಂಗಡದ ನಂಬಿಕೆಗಳ ಕುರಿತು ಆಕ್ಟಾ ಹೀಗೆ ಹೇಳುತ್ತದೆ: “ಬೈಬಲಿನ ಅನನ್ಯ ವಾಚನ ಮತ್ತು ಮನನಮಾಡುವಿಕೆ, ದೀನಭಾವ ಹಾಗೂ ದೀರ್ಘಶಾಂತಿ, ನಮ್ಮ ವೈರಿಗಳನ್ನು ಪ್ರೀತಿಸುವುದು, ಅವರಿಗೆ ಒಳ್ಳೇದನ್ನು ಮಾಡುವುದು ಮತ್ತು ಒಳಿತನ್ನು ಬಯಸುವುದು ಹಾಗೂ ಅವರಿಗಾಗಿ ಪ್ರಾರ್ಥಿಸುವುದು ಮುಂತಾದ ವಿಷಯಗಳಲ್ಲಿ ನಮ್ಮ ಕರ್ತನ ಹಾಗೂ ಪವಿತ್ರ ಅಪೊಸ್ತಲರ ಮಾದರಿಗಳನ್ನು ಅನುಸರಿಸುವ ಮೂಲಕ ನಮ್ಮ ಕಾರ್ಯನಿರ್ವಹಣೆಯನ್ನು ಸ್ಥಾಪಿಸಲು ನಾವು ದೃಢನಿರ್ಧಾರವನ್ನು ಮಾಡಿದ್ದೇವೆ.” ಆರಂಭದಲ್ಲಿ ಬ್ರೆದ್ರನ್‌ ಪಂಗಡವು ಸಾರುವಿಕೆಯಲ್ಲಿಯೂ ಒಳಗೂಡಿತ್ತು ಎಂಬುದನ್ನು ಸಹ ಬರಹಗಳು ತೋರಿಸುತ್ತವೆ. ಅವರು ಇಬ್ಬಿಬ್ಬರಾಗಿ ಪ್ರಯಾಣಿಸುತ್ತಿದ್ದರು ಮತ್ತು ಸ್ಥಳಿಕವಾಗಿ ಸ್ತ್ರೀಯರು ಸಫಲ ಮಿಷನೆರಿಗಳಾಗಿ ಕಂಡುಬಂದರು. ಬ್ರೆದ್ರನ್‌ ಪಂಗಡವು ರಾಜಕೀಯ ಸ್ಥಾನಮಾನಗಳಿಂದ ದೂರವಿತ್ತು, ಪ್ರತಿಜ್ಞೆಗಳನ್ನು ಮಾಡುತ್ತಿರಲಿಲ್ಲ, ಮಿಲಿಟರಿ ಚಟುವಟಿಕೆಯಲ್ಲಿ ಭಾಗವಹಿಸಲಿಲ್ಲ, ಮತ್ತು ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯಲಿಲ್ಲ.

ಐಕ್ಯದಿಂದ ಅನೈಕ್ಯಕ್ಕೆ

ಆದರೂ, ಕೆಲವು ದಶಕಗಳ ಬಳಿಕ ಯೂನಿಟಿ ಆಫ್‌ ಬ್ರೆದ್ರನ್‌ ಪಂಗಡವು ಅದರ ಹೆಸರಿಗನುಸಾರ ಜೀವಿಸಲು ತಪ್ಪಿಹೋಯಿತು. ತಮ್ಮ ನಂಬಿಕೆಗಳನ್ನು ಹೇಗೆ ಅಕ್ಷರಾರ್ಥವಾಗಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದರ ಕುರಿತಾದ ವಾದವಿವಾದಗಳು ಅವರ ನಡುವೆ ಒಡಕನ್ನು ಉಂಟುಮಾಡಿದವು. 1494ರಲ್ಲಿ ಬ್ರೆದ್ರನ್‌ ಪಂಗಡವು ಮೇಜರ್‌ ಪಾರ್ಟಿ ಮತ್ತು ಮೈನರ್‌ ಪಾರ್ಟಿ ಎಂಬ ಎರಡು ಗುಂಪುಗಳಾಗಿ ವಿಭಾಗಗೊಂಡಿತು. ಮೇಜರ್‌ ಪಾರ್ಟಿಯು ತನ್ನ ಮೂಲ ನಂಬಿಕೆಗಳನ್ನು ದುರ್ಬಲಗೊಳಿಸಿತಾದರೂ, ರಾಜಕೀಯ ಹಾಗೂ ಲೋಕದ ವಿರುದ್ಧವಾದ ತಮ್ಮ ನಿಲುವಿನಲ್ಲಿ ಬ್ರೆದ್ರನ್‌ ಪಂಗಡವು ದೃಢವಾಗಿ ನಿಲ್ಲಬೇಕು ಎಂದು ಮೈನರ್‌ ಪಾರ್ಟಿಯು ಸಾರಿಹೇಳಿತು.​—“ಮೇಜರ್‌ ಪಾರ್ಟಿಯ ಕುರಿತಾಗಿ ಏನು?” ಎಂಬ ಚೌಕವನ್ನು ನೋಡಿ.

ಉದಾಹರಣೆಗಾಗಿ, ಮೈನರ್‌ ಪಾರ್ಟಿಯ ಸದಸ್ಯನೊಬ್ಬನು ಬರೆದುದು: “ಎರಡು ರಸ್ತೆಗಳಲ್ಲಿ ನಡೆಯುತ್ತಿರುವ ಜನರಿಗೆ ತಾವು ದೇವರೊಂದಿಗೇ ಉಳಿಯುತ್ತೇವೆ ಎಂಬ ಖಾತ್ರಿ ಇರುವುದಿಲ್ಲ, ಏಕೆಂದರೆ ಅವರು ಅಪರೂಪವಾಗಿ ಮತ್ತು ಕೆಲವು ವಿಷಯಗಳಲ್ಲಿ ಮಾತ್ರವೇ ತಮ್ಮನ್ನು ನೀಡಿಕೊಳ್ಳಲು ಹಾಗೂ ಆತನಿಗೆ ಅಧೀನರಾಗಲು ಸಿದ್ಧರಾಗಿರುತ್ತಾರೆ; ಆದರೆ ಪ್ರಮುಖ ವಿಷಯಗಳಲ್ಲಿ ಅವರು ತಮಗೆ ಇಷ್ಟಬಂದಂತೆ ಮಾಡುತ್ತಾರೆ. . . . ಯಾರಿಗೆ ಸ್ವಸ್ಥಮನಸ್ಸು ಹಾಗೂ ಒಳ್ಳೇ ಮನಸ್ಸಾಕ್ಷಿಯಿರುತ್ತದೋ ಅವರ ನಡುವೆ, ಅಂದರೆ ತಮ್ಮ ಶಿಲುಬೆಗಳೊಂದಿಗೆ ಇಕ್ಕಟ್ಟಾದ ದಾರಿಯಲ್ಲಿ ಕರ್ತನಾದ ಕ್ರಿಸ್ತನನ್ನು ಪ್ರತಿ ದಿನ ಹಿಂಬಾಲಿಸುವವರ ನಡುವೆ ಇರುವುದೇ ನಮ್ಮ ಹಂಬಲವಾಗಿದೆ.”

ಮೈನರ್‌ ಪಾರ್ಟಿಯ ಸದಸ್ಯರು ಪವಿತ್ರಾತ್ಮವನ್ನು ದೇವರ ಕ್ರಿಯಾಶೀಲ ಶಕ್ತಿಯಾಗಿ, ಆತನ “ಬೆರಳು” ಎಂದು ಪರಿಗಣಿಸಿದರು. ಯೇಸುವಿನ ವಿಮೋಚನಾ ಯಜ್ಞದ ಕುರಿತಾದ ಅವರ ತಿಳಿವಳಿಕೆಯು ಏನಾಗಿತ್ತೆಂದರೆ, ಪಾಪಿಯಾದ ಆದಾಮನು ಏನನ್ನು ಕಳೆದುಕೊಂಡನೋ ಅದಕ್ಕಾಗಿ ಪರಿಪೂರ್ಣ ಮನುಷ್ಯನಾದ ಯೇಸು ತನ್ನ ಮಾನವ ಜೀವಿತವನ್ನು ಬಲಿಯಾಗಿ ಅರ್ಪಿಸಿದನು. ಅವರು ಯೇಸುವಿನ ತಾಯಿಯಾಗಿದ್ದ ಮರಿಯಳನ್ನು ಪೂಜಿಸಲಿಲ್ಲ. ಬ್ರಹ್ಮಚರ್ಯದ ಪ್ರತಿಜ್ಞೆ ಇಲ್ಲದೇ ಎಲ್ಲಾ ವಿಶ್ವಾಸಿಗಳೂ ಯಾಜಕತ್ವದಲ್ಲಿ ಒಳಗೂಡಿದ್ದಾರೆ ಎಂಬ ತತ್ತ್ವವನ್ನು ಅವರು ಪುನಃ ಪರಿಚಯಿಸಿದರು. ತಮ್ಮ ಸಭೆಯ ಎಲ್ಲಾ ಸದಸ್ಯರೂ ಸಾರ್ವಜನಿಕ ಸಾರುವಿಕೆಯಲ್ಲಿ ಒಳಗೂಡುವಂತೆ ಅವರು ಉತ್ತೇಜಿಸಿದರು ಮತ್ತು ಪಶ್ಚಾತ್ತಾಪವನ್ನು ತೋರಿಸದಿರುವಂಥ ಪಾಪಿಗಳನ್ನು ಬಹಿಷ್ಕರಿಸಿದರು. ಅವರು ಮಿಲಿಟರಿ ಹಾಗೂ ರಾಜಕೀಯ ಚಟುವಟಿಕೆಗಳಿಂದ ಪ್ರತ್ಯೇಕವಾಗಿರುವುದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. (“ಮೈನರ್‌ ಪಾರ್ಟಿಯ ಬ್ರೆದ್ರನ್‌ ಪಂಗಡವು ಏನನ್ನು ನಂಬುತ್ತಿತ್ತು?” ಎಂಬ ಚೌಕವನ್ನು ನೋಡಿ.) ಮೈನರ್‌ ಪಾರ್ಟಿಯು ಆಕ್ಟಾದಲ್ಲಿದ್ದ ಠರಾವುಗಳಿಗೆ ನಿಕಟವಾಗಿ ಅಂಟಿಕೊಂಡಿದ್ದರಿಂದ, ಮೂಲತಃ ಇದ್ದ ಯೂನಿಟಿ ಆಫ್‌ ಬ್ರೆದ್ರನ್‌ ಪಂಗಡದ ನಿಜ ಉತ್ತರಾಧಿಕಾರಿಯು ತಾನೇ ಎಂದು ಸ್ವತಃ ಪರಿಗಣಿಸಿಕೊಂಡಿತು.

ಮುಚ್ಚುಮರೆಯಿಲ್ಲದೆ ಮಾತಾಡಿ ಹಿಂಸೆಗೊಳಗಾದದ್ದು

ಮೈನರ್‌ ಪಾರ್ಟಿಯು ಮುಚ್ಚುಮರೆಯಿಲ್ಲದೆ ನೇರವಾಗಿ ಮೇಜರ್‌ ಪಾರ್ಟಿಯನ್ನೂ ಸೇರಿಸಿ ಇತರ ಧರ್ಮಗಳನ್ನು ಬಲವಾಗಿ ಟೀಕಿಸಿತು. ಅಂಥ ಧರ್ಮಗಳ ಕುರಿತು ಅವರು ಬರೆದುದು: “ಚಿಕ್ಕ ಮಕ್ಕಳಿಗೆ ತಮ್ಮದೇ ಆದ ಸ್ವಂತ ನಂಬಿಕೆ ಇಲ್ಲದಿರುವುದಾದರೂ ಅವರಿಗೆ ದೀಕ್ಷಾಸ್ನಾನ ಮಾಡಿಸಲೇಬೇಕು ಎಂದು ನೀವು ಕಲಿಸುತ್ತೀರಿ. ಮತ್ತು ಈ ರೀತಿಯಲ್ಲಿ ನೀವು ಡಯೊನೀಸಿಯಸ್‌ ಎಂದು ಕರೆಯಲ್ಪಟ್ಟ ಒಬ್ಬ ಬಿಷಪನು ಏನನ್ನು ಆರಂಭಿಸಿದನೋ ಅದನ್ನು ಅನುಸರಿಸುತ್ತೀರಿ; ಅವನು ಕೆಲವು ಅವಿವೇಕಿ ಜನರ ಚಿತಾವಣೆಯ ಮೇರೆಗೆ ಶಿಶು ದೀಕ್ಷಾಸ್ನಾನಕ್ಕೆ ಒತ್ತಾಸೆ ನೀಡಿದನು . . . ಬಹುಮಟ್ಟಿಗೆ ಎಲ್ಲಾ ಬೋಧಕರು ಹಾಗೂ ದೇವತಾಶಾಸ್ತ್ರಜ್ಞರು, ಲೂತರ್‌, ಮೆಲಾಂಕ್‌ಥಾನ್‌, ಬೂಸೆರಸ್‌, ಕಾರ್ವಿನ್‌, ಯಿಲೆಷ್‌, ಬುಲಿಂಗರ್‌ . . . ಮೇಜರ್‌ ಪಾರ್ಟಿಯವರು ಇದೇ ಬೋಧನೆಯನ್ನು ನಂಬುತ್ತಾರೆ, ಇವರೆಲ್ಲರೂ ಒಟ್ಟಿಗೆ ಸೆಳೆಯಲ್ಪಟ್ಟಿದ್ದಾರೆ.”

ಇದರಿಂದಾಗಿ ಮೈನರ್‌ ಪಾರ್ಟಿಯು ಹಿಂಸೆಗೊಳಗಾಯಿತು ಎಂಬುದರಲ್ಲಿ ಆಶ್ಚರ್ಯವೇನೂ ಇಲ್ಲ. 1524ರಲ್ಲಿ, ಅದರ ಮುಖಂಡರಲ್ಲಿ ಒಬ್ಬನಾಗಿದ್ದ ಯಾನ್‌ ಕಾಲಿನಿಟ್ಸ್‌ನನ್ನು ಚಾವಟಿಯಿಂದ ಥಳಿಸಿ ಸುಟ್ಟುಬಿಡಲಾಯಿತು. ತದನಂತರ ಮೈನರ್‌ ಪಾರ್ಟಿಯ ಮೂವರು ಸದಸ್ಯರನ್ನು ಕಂಬದ ಮೇಲೆ ಸುಡಲಾಯಿತು. 1550ರ ಸುಮಾರಿಗೆ ಮೈನರ್‌ ಪಾರ್ಟಿಯ ಕೊನೆಯ ನಾಯಕನು ಮರಣಹೊಂದಿದ ಬಳಿಕ, ಅದರ ಅಸ್ತಿತ್ವವು ಕೊನೆಗೊಂಡಂತೆ ತೋರುತ್ತದೆ.

ಹಾಗಿದ್ದರೂ, ಮೈನರ್‌ ಪಾರ್ಟಿಯ ವಿಶ್ವಾಸಿಗಳು ಮಧ್ಯಯುಗದ ಯೂರೋಪ್‌ನ ಧಾರ್ಮಿಕ ಭೂದೃಶ್ಯದ ಮೇಲೆ ತಮ್ಮ ಗುರುತನ್ನು ಬಿಟ್ಟುಹೋದರು. ಮೈನರ್‌ ಪಾರ್ಟಿಯ ದಿನಗಳಲ್ಲಿ “ನಿಜವಾದ ಜ್ಞಾನವು” ಇನ್ನೂ ಸಾಕಷ್ಟು ಲಭ್ಯವಿರಲಿಲ್ಲವಾದ್ದರಿಂದ, ದೀರ್ಘ ಕಾಲಾವಧಿಯಿಂದ ಇದ್ದ ಆತ್ಮಿಕ ಅಂಧಕಾರವನ್ನು ತೆಗೆದುಹಾಕುವುದರಲ್ಲಿ ಅವರು ಸಫಲರಾಗಲಿಲ್ಲ ಎಂಬುದಂತೂ ನಿಜ. (ದಾನಿಯೇಲ 12:​4, NW) ಆದರೂ, ಇಕ್ಕಟ್ಟಾದ ದಾರಿಯನ್ನು ಕಂಡುಹಿಡಿಯಲಿಕ್ಕಾಗಿ ಮತ್ತು ವಿರೋಧದ ಎದುರಿನಲ್ಲಿಯೂ ಅದನ್ನು ಅನುಸರಿಸಲಿಕ್ಕಾಗಿ ಅವರಿಗಿದ್ದ ಕಡುಬಯಕೆಯು, ಇಂದು ಕ್ರೈಸ್ತರು ಗಮನಿಸಬೇಕಾದ ಒಂದು ಸಂಗತಿಯಾಗಿದೆ.

[ಪುಟ 13ರಲ್ಲಿರುವ ಸಂಕ್ಷಿಪ್ತ ವಿವರಣೆ]

ಇಸವಿ 1500ರಿಂದ 1510ರ ತನಕ ಮುದ್ರಿಸಲ್ಪಟ್ಟ 60 ಬೊಹೀಮಿಯನ್‌ (ಚೆಕ್‌) ಪುಸ್ತಕಗಳಲ್ಲಿ 50 ಪುಸ್ತಕಗಳು ಯೂನಿಟಿ ಆಫ್‌ ಬ್ರೆದ್ರನ್‌ನ ಸದಸ್ಯರಿಂದ ಮುದ್ರಿಸಲ್ಪಟ್ಟಿವೆಯೆಂದು ಹೇಳಲಾಗುತ್ತದೆ

[ಪುಟ 11ರಲ್ಲಿರುವ ಚೌಕ]

ಮೇಜರ್‌ ಪಾರ್ಟಿಯ ಕುರಿತಾಗಿ ಏನು?

ಕಾಲಕ್ರಮೇಣ ಮೇಜರ್‌ ಪಾರ್ಟಿಗೆ ಏನು ಸಂಭವಿಸಿತು? ಮೈನರ್‌ ಪಾರ್ಟಿಯು ದೃಶ್ಯದಿಂದ ಕಣ್ಮರೆಯಾದ ಬಳಿಕ, ಒಂದು ಧಾರ್ಮಿಕ ಚಳವಳಿಯೋಪಾದಿ ಮೇಜರ್‌ ಪಾರ್ಟಿಯು ತನ್ನ ಅಸ್ತಿತ್ವವನ್ನು ಮುಂದುವರಿಸಿತು ಮತ್ತು ಆಗಲೂ ಇದು ಯೂನಿಟಿ ಆಫ್‌ ಬ್ರೆದ್ರನ್‌ ಪಂಗಡವಾಗಿಯೇ ಪ್ರಸಿದ್ಧವಾಗಿತ್ತು. ಸಕಾಲದಲ್ಲಿ ಈ ಗುಂಪು ತನ್ನ ಮೂಲ ನಂಬಿಕೆಗಳಲ್ಲಿ ಹೊಂದಾಣಿಕೆಗಳನ್ನು ಮಾಡಿತು. 16ನೇ ಶತಮಾನದ ಮುಕ್ತಾಯದಷ್ಟಕ್ಕೆ ಯೂನಿಟಿ ಆಫ್‌ ಬ್ರೆದ್ರನ್‌ ಪಂಗಡವು, ಮೂಲತಃ ಲೂತರ್‌ನ ಅನುಯಾಯಿಗಳಾಗಿದ್ದ ಚೆಕ್‌ ಉಟ್ರಾಕ್ವಿಸ್ಟ್‌ರೊಂದಿಗೆ * ಒಂದು ಶಾಶ್ವತ ಮೈತ್ರಿಯನ್ನು ಮಾಡಿಕೊಂಡಿತು. ಆದರೂ, ಬೈಬಲನ್ನು ಹಾಗೂ ಇತರ ಧಾರ್ಮಿಕ ಪುಸ್ತಕಗಳನ್ನು ಭಾಷಾಂತರಿಸುವುದರಲ್ಲಿ ಮತ್ತು ಪ್ರಕಾಶಿಸುವುದರಲ್ಲಿ ಬ್ರೆದ್ರನ್‌ ಪಂಗಡವು ಸಕ್ರಿಯವಾಗಿತ್ತು. ಆಸಕ್ತಿಕರ ಸಂಗತಿಯೇನೆಂದರೆ, ಅವರ ಆರಂಭದ ಪ್ರಕಾಶನಗಳ ಮುಖಪುಟಗಳು ದೇವರ ವೈಯಕ್ತಿಕ ಹೆಸರಿನ ನಾಲ್ಕು ಹೀಬ್ರು ಅಕ್ಷರಗಳೆಂದು ಪ್ರಸಿದ್ಧವಾಗಿರುವ ಚತುರಕ್ಷರಿ [ಟೆಟ್ರಗ್ರಮಾಟನ್‌]ಯನ್ನು ಹೊಂದಿದ್ದವು.

ಇಸವಿ 1620ರಲ್ಲಿ, ಚೆಕ್‌ ರಾಜ್ಯವು ಒತ್ತಾಯಪೂರ್ವಕವಾಗಿ ರೋಮನ್‌ ಕ್ಯಾಥೊಲಿಕ್‌ ಚರ್ಚಿನ ನಿಯಂತ್ರಣದ ಕೆಳಗೆ ತರಲ್ಪಟ್ಟಿತು. ಇದರ ಪರಿಣಾಮವಾಗಿ, ಮೇಜರ್‌ ಪಾರ್ಟಿಗೆ ಸೇರಿದ್ದ ಅನೇಕ ಮಂದಿ ದೇಶವನ್ನು ಬಿಟ್ಟುಹೋದರು ಮತ್ತು ಹೊರದೇಶಗಳಲ್ಲಿ ತಮ್ಮ ಚಟುವಟಿಕೆಗಳನ್ನು ಮುಂದುವರಿಸಿದರು. ಅಲ್ಲಿ, ಈ ಗುಂಪು ಕಾಲಕ್ರಮೇಣ ಮರೇವಿಯನ್‌ ಚರ್ಚ್‌ (ಮರೇವಿಯವು ಚೆಕ್‌ ದೇಶಗಳ ಭಾಗವಾಗಿರುವುದರಿಂದ) ಎಂದು ಪ್ರಸಿದ್ಧವಾಯಿತು ಮತ್ತು ಇದು ಈಗಲೂ ಅಸ್ತಿತ್ವದಲ್ಲಿದೆ.

[ಪಾದಟಿಪ್ಪಣಿ]

^ ಪ್ಯಾರ. 24 ಇದು “ಇಬ್ಬರಲ್ಲಿ ಒಬ್ಬೊಬ್ಬನು” ಎಂಬರ್ಥ ಕೊಡುವ ಉಟ್ರಾಕ್ವೀ ಎಂಬ ಲ್ಯಾಟಿನ್‌ ಪದದಿಂದ ಬಂದದ್ದಾಗಿದೆ. ಪ್ರಭು ಭೋಜನ ಸಂಸ್ಕಾರದ ಸಮಯದಲ್ಲಿ ಜನಸಾಮಾನ್ಯರಿಗೆ ದ್ರಾಕ್ಷಾಮದ್ಯವನ್ನು ಕೊಡುವುದನ್ನು ತಡೆಹಿಡಿದಿದ್ದಂಥ ರೋಮನ್‌ ಕ್ಯಾಥೊಲಿಕ್‌ ಪಾದ್ರಿಗಳಿಗೆ ಅಸದೃಶವಾಗಿ, ಈ ಉಟ್ರಾಕ್ವಿಸ್ಟ್‌ರು (ಹಸ್‌ ಪಂಥಿಗಳ ಬೇರೆ ಬೇರೆ ಗುಂಪುಗಳು) ಜನಸಾಮಾನ್ಯರಿಗೆ ರೊಟ್ಟಿ ಮತ್ತು ದ್ರಾಕ್ಷಾಮದ್ಯವನ್ನು ಕೊಡುತ್ತಿದ್ದರು.

[ಪುಟ 12ರಲ್ಲಿರುವ ಚೌಕ]

ಮೈನರ್‌ ಪಾರ್ಟಿಯ ಬ್ರೆದ್ರನ್‌ ಪಂಗಡವು ಏನನ್ನು ನಂಬುತ್ತಿತ್ತು?

ಹದಿನೈದು ಮತ್ತು ಹದಿನಾರನೇ ಶತಮಾನದ ಆಕ್ಟಾ ಯೂನೇಟಾಟಿಸ್‌ ಫ್ರಾಟ್ರುಮ್‌ನಿಂದ ತೆಗೆಯಲ್ಪಟ್ಟ ಈ ಮುಂದಿನ ಉಲ್ಲೇಖಗಳು, ಮೈನರ್‌ ಪಾರ್ಟಿಯು ಎತ್ತಿಹಿಡಿದಿದ್ದ ನಂಬಿಕೆಗಳಲ್ಲಿ ಕೆಲವನ್ನು ತೋರಿಸುತ್ತವೆ. ಮೈನರ್‌ ಪಾರ್ಟಿಯ ಮುಖಂಡರಿಂದ ಬರೆಯಲ್ಪಟ್ಟಿರುವ ಈ ಹೇಳಿಕೆಗಳು ಮೂಲತಃ ಮೇಜರ್‌ ಪಾರ್ಟಿಗೆ ನಿರ್ದೇಶಿಸಲ್ಪಟ್ಟವುಗಳಾಗಿವೆ.

ತ್ರಯೈಕ್ಯ: “ನೀವು ಇಡೀ ಬೈಬಲಿನಾದ್ಯಂತ ಕಣ್ಣಾಯಿಸುವಲ್ಲಿ, ಜನರು ಊಹಿಸಿಕೊಂಡಿರುವಂತೆ ದೇವರು ತ್ರಯೈಕ್ಯನಾಗಿ ವಿಭಾಗಗೊಂಡಿದ್ದಾನೆ ಅಂದರೆ ಬೇರೆ ಬೇರೆ ಹೆಸರುಗಳಿರುವ ಮೂವರು ವ್ಯಕ್ತಿಗಳಿಂದ ಕೂಡಿದ್ದಾನೆ ಎಂಬುದನ್ನು ಎಲ್ಲಿಯೂ ಕಂಡುಕೊಳ್ಳುವುದಿಲ್ಲ.”

ಪವಿತ್ರಾತ್ಮ: “ಪವಿತ್ರಾತ್ಮವು ದೇವರ ಬೆರಳು ಆಗಿದೆ ಮತ್ತು ದೇವರ ಕೊಡುಗೆಯಾಗಿದೆ ಅಥವಾ ಸಾಂತ್ವನದಾಯಕವಾಗಿದೆ ಇಲ್ಲವೆ ದೇವರ ಶಕ್ತಿಯಾಗಿದೆ; ಕ್ರಿಸ್ತನ ಯೋಗ್ಯತೆಯ ಆಧಾರದ ಮೇಲೆ ಇದನ್ನು ತಂದೆಯು ವಿಶ್ವಾಸಿಗಳಿಗೆ ದಯಪಾಲಿಸುತ್ತಾನೆ. ಪವಿತ್ರಾತ್ಮವನ್ನು ಒಬ್ಬ ದೇವರೆಂದು ಅಥವಾ ಒಬ್ಬ ವ್ಯಕ್ತಿಯೆಂದು ಕರೆಯಬೇಕು ಎಂಬುದನ್ನು ಪವಿತ್ರ ಶಾಸ್ತ್ರದಲ್ಲಿ ನಾವು ಎಲ್ಲಿಯೂ ಕಂಡುಕೊಳ್ಳುವುದಿಲ್ಲ; ಅಪೊಸ್ತಲರ ಬೋಧನೆಗಳು ಸಹ ಇದನ್ನು ತೋರಿಸುವುದಿಲ್ಲ.”

ಯಾಜಕವರ್ಗ: “ಅವರು ನಿಮಗೆ “ಯಾಜಕ” (ಪಾದ್ರಿ) ಎಂಬ ಬಿರುದನ್ನು ತಪ್ಪಾಗಿ ನೀಡುತ್ತಾರೆ; ನಿಮ್ಮ ಬೋಳು ತಲೆ ಮತ್ತು ಊಹಿತ ಅಂಜನವನ್ನು ಬಿಟ್ಟರೆ, ತೀರ ಜನಸಾಮಾನ್ಯ ವ್ಯಕ್ತಿಗಿಂತ ಹೆಚ್ಚಿನ ಸ್ಥಾನಮಾನವೇನೂ ನಿಮಗಿರುವುದಿಲ್ಲ. ಸಂತ ಪೇತ್ರನು ಎಲ್ಲಾ ಕ್ರೈಸ್ತರೂ ಯಾಜಕರಾಗಿರುವುದನ್ನು ಅಗತ್ಯಪಡಿಸುತ್ತಾ ಹೇಳುವುದು: ನೀವು ಆತ್ಮಿಕ ಯಜ್ಞಗಳನ್ನು ಸಮರ್ಪಿಸುವ ಪವಿತ್ರ ಯಾಜಕವರ್ಗವಾಗಿದ್ದೀರಿ. (1 ಪೇತ್ರ 2)”

ದೀಕ್ಷಾಸ್ನಾನ: “ಕರ್ತನಾದ ಕ್ರಿಸ್ತನು ತನ್ನ ಅಪೊಸ್ತಲರಿಗೆ ಹೇಳಿದ್ದು: ಲೋಕದಲ್ಲಿರುವ ಎಲ್ಲಾ ಜನರ ಬಳಿಗೆ ಹೋಗಿರಿ, ಸರ್ವ ಸೃಷ್ಟಿಗೆ ಅಂದರೆ ಯಾರು ನಂಬಿಕೆಯಿಡುತ್ತಾರೋ ಅವರಿಗೆ ಸುವಾರ್ತೆಯನ್ನು ಸಾರಿರಿ. (ಮಾರ್ಕ, ಅಧ್ಯಾಯ 16) ಈ ಮೇಲಿನ ವಿಷಯಗಳನ್ನು ಪೂರೈಸಿದ ಬಳಿಕ ಮಾತ್ರ: ಮತ್ತು ದೀಕ್ಷಾಸ್ನಾನ ಪಡೆದುಕೊಂಡಿರುವಲ್ಲಿ ಅವರು ರಕ್ಷಿಸಲ್ಪಡುವರು. ತಮ್ಮ ಸ್ವಂತ ನಂಬಿಕೆಯನ್ನು ಹೊಂದಿಲ್ಲದಿರುವಂಥ ಚಿಕ್ಕ ಮಕ್ಕಳಿಗೆ ದೀಕ್ಷಾಸ್ನಾನ ಮಾಡಿಸಿರಿ ಎಂದು ನೀವು ಕಲಿಸುತ್ತೀರಿ.”

ತಾಟಸ್ಥ್ಯ: “ನಿಮ್ಮ ಆರಂಭದ ಸಹೋದರರು ಯಾವುದನ್ನು ಕೆಟ್ಟದ್ದು ಅಥವಾ ಅಶುದ್ಧವಾದದ್ದು ಎಂದು ನಂಬಿದರೋ ಅದನ್ನು, ಅಂದರೆ ಸೈನ್ಯಕ್ಕೆ ಸೇರುವುದನ್ನು ಮತ್ತು ಕೊಲೆಮಾಡುವುದನ್ನು ಅಥವಾ ಶಸ್ತ್ರಾಸ್ತ್ರಗಳನ್ನು ಹೊತ್ತುಕೊಂಡು ರಸ್ತೆಗಳಲ್ಲಿ ನಡೆಯುವುದನ್ನು ನೀವು ಒಳ್ಳೇದೆಂದು ಪರಿಗಣಿಸುತ್ತೀರಿ . . . ಆದುದರಿಂದ ನೀವು ಹಾಗೂ ಇತರ ಬೋಧಕರು, ‘ಹೀಗೆ ಅವನು ಬಿಲ್ಲುಗಳ, ಗುರಾಣಿಗಳ ಮತ್ತು ಕತ್ತಿಯ ಹಾಗೂ ಯುದ್ಧದ ಶಕ್ತಿಯನ್ನು ಮುರಿದುಬಿಟ್ಟಿದ್ದಾನೆ’ ಎಂಬುದನ್ನು ಸೂಚಿಸುವಂಥ ಪ್ರವಾದನಾತ್ಮಕ ಮಾತುಗಳನ್ನು ಕೇವಲ ನಿಮ್ಮ ಎಡಗಣ್ಣಿನಿಂದ ನೋಡುತ್ತೀರಿ ಅಂದರೆ ಭಾಗಶಃ ಮಾತ್ರ ಅರ್ಥಮಾಡಿಕೊಳ್ಳುತ್ತೀರಿ ಎಂದು ನಮಗನಿಸುತ್ತದೆ. (ಕೀರ್ತನೆ 75) ಮತ್ತು ಬೈಬಲಿನ ಇನ್ನೊಂದು ಭಾಗವು ಹೀಗೆ ತಿಳಿಸುತ್ತದೆ: ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಅವರು ಕೇಡುಮಾಡುವುದಿಲ್ಲ ಅಥವಾ ಅದನ್ನು ಹಾಳುಮಾಡುವುದಿಲ್ಲ, ಏಕೆಂದರೆ ಕರ್ತನ ಭೂಮಿಯು ದೈವಿಕ ಜ್ಞಾನ ಹಾಗೂ ಇನ್ನಿತರ ವಿಷಯಗಳಿಂದ ತುಂಬಿರುವುದು. (ಯೆಶಾಯ, ಅಧ್ಯಾಯ 11).”

ಸಾರುವಿಕೆ: “ಆರಂಭದಲ್ಲಿ, ಎಲ್ಲಾ ಯಾಜಕರು ಹಾಗೂ ಒಬ್ಬ ಬಿಷಪನಿಗಿಂತಲೂ ಹೆಚ್ಚಾಗಿ ಸ್ತ್ರೀ ಸಮೂಹದವರು ಅನೇಕ ಜನರನ್ನು ಪಶ್ಚಾತ್ತಾಪದ ಮಾರ್ಗಕ್ಕೆ ನಡೆಸಿದ್ದಾರೆ ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ. ಮತ್ತು ಈಗ ಯಾಜಕರು ತಮ್ಮ ನಿವಾಸಗಳಲ್ಲಿ ಮತ್ತು ತಮಗೆ ಹಂಚಿಕೊಡಲ್ಪಟ್ಟಿರುವ ಆದಾಯದಲ್ಲಿ ಐಷಾರಾಮವಾಗಿ ಕಾಲಕಳೆಯುತ್ತಿದ್ದಾರೆ. ಇದೆಷ್ಟು ದೊಡ್ಡ ತಪ್ಪಾಗಿದೆ! ಸರ್ವ ಜನಾಂಗಗಳ ಬಳಿಗೆ ಹೋಗಿ. ಸರ್ವ ಸೃಷ್ಟಿಗೂ . . . ಸಾರಿರಿ.”

[ಪುಟ 10ರಲ್ಲಿರುವ ಭೂಪಟಗಳು]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಜರ್ಮನಿ

ಪೋಲೆಂಡ್‌

ಚೆಕ್‌ ರಿಪಬ್ಲಿಕ್‌

ಬೊಹೀಮಿಯ

ಎಲ್ಬ ನದಿ

ಪ್ರಾಗ್‌

ವಿಟವ ನದಿ

ಕ್ಲಾಟವೀ

ಕೆಲ್ಸೀಸಿ

ಕೂನ್‌ವಾಲ್ಟ್‌

ವಿಲೀಮಾವ್‌

ಮರೇವಿಯ

ಡಾನ್ಯೂಬ್‌ ನದಿ

[ಪುಟ 10, 11ರಲ್ಲಿರುವ ಚಿತ್ರಗಳು]

ಎಡಭಾಗದಲ್ಲಿ: ಪೀಟರ್‌ ಕೆಲ್‌ಸೀಡ್‌ಸ್ಕೀ; ಕೆಳಗೆ: “ನಂಬಿಕೆಯ ಜಾಲ”ದಿಂದ ತೆಗೆದ ಪುಟ

[ಪುಟ 11ರಲ್ಲಿರುವ ಚಿತ್ರ]

ಪ್ರಾಗ್‌ನ ಗ್ರೆಗರಿ

[ಪುಟ 13ರಲ್ಲಿರುವ ಚಿತ್ರ ಕೃಪೆ]

ಎಲ್ಲಾ ಚಿತ್ರಗಳು: S laskavým svolením knihovny Národního muzea v Praze, C̆esko